ಪ್ರಧಾನ ಮಂತ್ರಿಯವರ ಕಛೇರಿ
ಮಹಾ ಕುಂಭ ಮೇಳ ಯಶಸ್ವಿಯಾಗಿ ಸಂಪನ್ನಗೊಂಡ ಹಿನ್ನೆಲೆಯಲ್ಲಿ ಲೋಕಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ
ಮಹಾಕುಂಭದ ಯಶಸ್ವಿ ಸಂಘಟನೆಗೆ ಕಾರಣರಾದ ನಾಗರಿಕರಿಗೆ ನಾನು ನಮಿಸುತ್ತೇನೆ: ಪ್ರಧಾನಮಂತ್ರಿ
ಮಹಾಕುಂಭದ ಯಶಸ್ಸಿಗೆ ಅನೇಕ ಜನರು ಕೊಡುಗೆ ನೀಡಿದ್ದಾರೆ, ಸರ್ಕಾರ ಮತ್ತು ಸಮಾಜದ ಎಲ್ಲಾ ಕರ್ಮಯೋಗಿಗಳನ್ನು ನಾನು ಅಭಿನಂದಿಸುತ್ತೇನೆ: ಪ್ರಧಾನಮಂತ್ರಿ
ಮಹಾ ಕುಂಭದ ಸಂಘಟನೆಯಲ್ಲಿ ನಾವು 'ಮಹಾ ಪ್ರಯಾಸ'ವನ್ನು ಕಂಡಿದ್ದೇವೆ: ಪ್ರಧಾನಮಂತ್ರಿ
ಈ ಮಹಾ ಕುಂಭವು ಜನರ ದೃಢಸಂಕಲ್ಪ ಮತ್ತು ಅಚಲ ಭಕ್ತಿಯಿಂದ ಪ್ರೇರಿತವಾಗಿ ಮುನ್ನಡೆಯಿತು: ಪ್ರಧಾನಮಂತ್ರಿ
ಪ್ರಯಾಗರಾಜ್ ಮಹಾ ಕುಂಭವು ಜಾಗೃತ ರಾಷ್ಟ್ರದ ಚೈತನ್ಯವನ್ನು ಪ್ರತಿಬಿಂಬಿಸುವ ಮಹತ್ವದ ಮೈಲಿಗಲ್ಲು: ಪ್ರಧಾನಮಂತ್ರಿ
ಮಹಾ ಕುಂಭವು ಏಕತೆಯ ಚೈತನ್ಯವನ್ನು ಬಲಪಡಿಸಿದೆ: ಪ್ರಧಾನಮಂತ್ರಿ
ಮಹಾ ಕುಂಭದಲ್ಲಿ, ಎಲ್ಲಾ ಸಮಸ್ಯೆಗಳು ಮರೆಯಾಯಿತು; ಇದು ಭಾರತದ ಮಹಾನ್ ಶಕ್ತಿ, ಏಕತೆಯ ಚೈತನ್ಯವು ನಮ್ಮಲ್ಲಿ ಆಳವಾಗಿ ಬೇರೂರಿದೆ ಎಂಬುದನ್ನು ಸಾಬೀತುಪಡಿಸಿದೆ: ಪ್ರಧಾನಮಂತ್ರಿ
ನಂಬಿಕೆ ಮತ್ತು ಪರಂಪರೆಯೊಂದಿಗೆ ಸಂಪರ್ಕ ಸಾಧಿಸುವ ಮನೋಭಾವವು ಇಂದಿನ ಭಾರತದ ದೊಡ್ಡ ಆಸ್ತಿಯಾಗಿದೆ: ಪ್ರಧಾನಮಂತ್ರಿ
Posted On:
18 MAR 2025 1:21PM by PIB Bengaluru
ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆದ ಮಹಾಕುಂಭ ಯಶಸ್ವಿಯಾಗಿ ಸಮಾರೋಪಗೊಂಡ ಹಿನ್ನೆಲೆಯಲ್ಲಿ ಇಂದು ಲೋಕಸಭೆಯನ್ನುದ್ದೇಶಿಸಿ ಪ್ರಧಾನಿ ಶ್ರೀ ನರೇಂದ್ರ ಮೋದಿ ಮಾತನಾಡಿದರು. ಮಹಾಕುಂಭದ ಅದ್ಧೂರಿ ಯಶಸ್ಸಿಗೆ ಕಾರಣರಾದ ದೇಶದ ಅಸಂಖ್ಯಾತ ನಾಗರಿಕರಿಗೆ ಪ್ರಧಾನಿ ತಮ್ಮ ಹೃತ್ಪೂರ್ವಕ ವಂದನೆಗಳನ್ನು ಸಲ್ಲಿಸಿದರು. ಮಹಾಕುಂಭವನ್ನು ಯಶಸ್ವಿಗೊಳಿಸುವಲ್ಲಿ ವಿವಿಧ ವ್ಯಕ್ತಿಗಳು ಮತ್ತು ಗುಂಪುಗಳ ಸಾಮೂಹಿಕ ಕೊಡುಗೆಗಳು ಮಹತ್ತರವಾಗಿವೆ. ಸರ್ಕಾರ, ಸಮಾಜ ಮತ್ತು ಎಲ್ಲಾ ಸಮರ್ಪಿತ ಕಾರ್ಮಿಕರ ಪ್ರಯತ್ನಗಳನ್ನು ಅವರು ಗುರುತಿಸಿದರು ಮತ್ತು ಶ್ಲಾಘಿಸಿದರು. ದೇಶಾದ್ಯಂತದ ಭಕ್ತರಿಗೆ, ಉತ್ತರ ಪ್ರದೇಶದ ಜನರು ಮತ್ತು ವಿಶೇಷವಾಗಿ ಪ್ರಯಾಗ್‌ರಾಜ್ ನಾಗರಿಕರ ಅಮೂಲ್ಯ ಬೆಂಬಲ ಮತ್ತು ಪರಿಶ್ರಮಕ್ಕಾಗಿ ಶ್ರೀ ಮೋದಿ ಅವರು ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದರು.
ಮಹಾಕುಂಭದ ಭವ್ಯ ಸಂಘಟನೆಗೆ ಅಗತ್ಯವಿದ್ದ ಅಪಾರ ಪ್ರಯತ್ನಗಳ ಬಗ್ಗೆ ವಿವರಿಸಿದ ಪ್ರಧಾನಮಂತ್ರಿಗಳು, ಗಂಗೆಯನ್ನು ಭೂಮಿಗೆ ತರುವ ಭಗೀರಥನ ಪ್ರಯತ್ನಕ್ಕೆ ಹೋಲಿಸಿದರು. ಕೆಂಪು ಕೋಟೆಯಿಂದ ಮಾಡಿದ ಭಾಷಣದಲ್ಲಿ "ಸಬ್ಕಾ ಪ್ರಯಾಸ್" ನ ಮಹತ್ವದ ಬಗ್ಗೆ ಹೆಚ್ಚು ಒತ್ತು ನೀಡಿರುವುದನ್ನು ಉಲ್ಲೇಖಿಸಿದರು. ಮಹಾಕುಂಭವು ಭಾರತದ ಹಿರಿಮೆಯನ್ನು ಜಗತ್ತಿಗೆ ಪ್ರದರ್ಶಿಸಿತು. "ಮಹಾಕುಂಭವು ಜನರ ಅಚಲ ನಂಬಿಕೆಯಿಂದ ಪ್ರೇರಿತವಾದ ಸಾಮೂಹಿಕ ಸಂಕಲ್ಪ, ಭಕ್ತಿ ಮತ್ತು ಸಮರ್ಪಣೆಯ ಅಭಿವ್ಯಕ್ತಿಯಾಗಿದೆ" ಎಂದು ಅವರು ಹೇಳಿದರು.
ಮಹಾಕುಂಭದ ಸಮಯದಲ್ಲಿ ಕಂಡುಬಂದ ರಾಷ್ಟ್ರೀಯ ಪ್ರಜ್ಞೆಯ ಆಳವಾದ ಜಾಗೃತಿಯ ಬಗ್ಗೆ ಪ್ರಧಾನಿಯವರು ಮಾತನಾಡಿದರು. ಇದು ರಾಷ್ಟ್ರವನ್ನು ಹೊಸ ನಿರ್ಣಯಗಳತ್ತ ಹೇಗೆ ಪ್ರೇರೇಪಿಸುತ್ತದೆ ಮತ್ತು ಅವುಗಳ ನೆರವೇರಿಕೆಗೆ ಪ್ರೇರಣೆ ನೀಡುತ್ತದೆ ಎಂಬುದನ್ನು ವಿವರಿಸಿದರು. ರಾಷ್ಟ್ರದ ಸಾಮರ್ಥ್ಯಗಳ ಬಗ್ಗೆ ಕೆಲವರು ಹೊಂದಿರುವ ಅನುಮಾನಗಳು ಮತ್ತು ಆತಂಕಗಳನ್ನು ಮಹಾಕುಂಭವು ಪರಿಣಾಮಕಾರಿಯಾಗಿ ಪರಿಹರಿಸಿದೆ ಎಂದು ತಿಳಿಸಿದರು.
ಕಳೆದ ವರ್ಷ ಅಯೋಧ್ಯೆಯಲ್ಲಿ ನಡೆದ ರಾಮ ಮಂದಿರ ಪ್ರಾಣ ಪ್ರತಿಷ್ಠಾನ ಸಮಾರಂಭ ಮತ್ತು ಈ ವರ್ಷದ ಮಹಾಕುಂಭದ ನಡುವಿನ ಹೋಲಿಕೆಯನ್ನು ಚಿತ್ರಿಸುತ್ತಾ, ದೇಶದ ಪರಿವರ್ತನಾ ಪಯಣವನ್ನು ಶ್ರೀ ಮೋದಿ ಮನವರಿಕೆ ಮಾಡಿಕೊಟ್ಟರು. ಈ ಘಟನೆಗಳು ಮುಂದಿನ ಸಹಸ್ರಮಾನಕ್ಕೆ ದೇಶದ ಸನ್ನದ್ಧತೆಯನ್ನು ಬಲಪಡಿಸುತ್ತವೆ. ರಾಷ್ಟ್ರದ ಸಾಮೂಹಿಕ ಪ್ರಜ್ಞೆಯು ಅದರ ಅಗಾಧ ಸಾಮರ್ಥ್ಯವನ್ನು ಪ್ರತಿಬಿಂಬಿಸುತ್ತದೆ. ಮಾನವ ಇತಿಹಾಸದಂತೆಯೇ, ರಾಷ್ಟ್ರದ ಇತಿಹಾಸದಲ್ಲಿನ ಪ್ರಮುಖ ಕ್ಷಣಗಳು ಮುಂದಿನ ಪೀಳಿಗೆಗೆ ಉದಾಹರಣೆಗಳಾಗಿ ಕಾರ್ಯನಿರ್ವಹಿಸುತ್ತವೆ ಎಂದು ಅವರು ತಿಳಿಸಿದರು.
ಸ್ವದೇಶಿ ಚಳವಳಿಯ ಸಮಯದಲ್ಲಿ ಆಧ್ಯಾತ್ಮಿಕ ಪುನರುಜ್ಜೀವನ, ಷಿಕಾಗೋದಲ್ಲಿ ಸ್ವಾಮಿ ವಿವೇಕಾನಂದರ ಐತಿಹಾಸಿಕ ಭಾಷಣ ಮತ್ತು 1857 ರ ದಂಗೆ, ಭಗತ್ ಸಿಂಗ್ ಹುತಾತ್ಮರಾದ ಘಟನೆ, ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ "ದೆಹಲಿ ಚಲೋ" ಕರೆ ಮತ್ತು ಮಹಾತ್ಮ ಗಾಂಧಿಯವರ ದಂಡಿ ಮೆರವಣಿಗೆಯಂತಹ ಭಾರತದ ಸ್ವಾತಂತ್ರ್ಯ ಹೋರಾಟದ ಪ್ರಮುಖ ಘಟನೆಗಳನ್ನು ಉಲ್ಲೇಖಿಸಿ, ಇವುಗಳು ರಾಷ್ಟ್ರವನ್ನು ಜಾಗೃತಗೊಳಿಸಿವೆ. ಈಗ ಹೊಸ ದಿಕ್ಕನ್ನು ಒದಗಿಸಿದ ಭಾರತದ ಐತಿಹಾಸಿಕ ಮೈಲಿಗಲ್ಲುಗಳ ಬಗ್ಗೆ ಶ್ರೀ ಮೋದಿ ಬೆಳಕು ಚೆಲ್ಲಿದರು.
"ಪ್ರಯಾಗರಾಜ್ ಮಹಾಕುಂಭವು ಇದೇ ರೀತಿಯ ಮಹತ್ವದ ಮೈಲಿಗಲ್ಲು, ಇದು ರಾಷ್ಟ್ರದ ಜಾಗೃತ ಚೈತನ್ಯವನ್ನು ಸಂಕೇತಿಸುತ್ತದೆ" ಎಂದು ಅವರು ಹೇಳಿದರು. ಭಾರತದಲ್ಲಿ ಸುಮಾರು ಒಂದೂವರೆ ತಿಂಗಳ ಕಾಲ ನಡೆದ ಮಹಾಕುಂಭದಲ್ಲಿ ಕಂಡುಬಂದ ಉತ್ಸಾಹದ ಬಗ್ಗೆ ಪ್ರಧಾನಿ ಗಮನ ಸೆಳೆದರು. ಅನುಕೂಲತೆ ಅಥವಾ ಅನಾನುಕೂಲತೆಯ ಚಿಂತೆಗಳನ್ನು ಮೀರಿ ಕೋಟ್ಯಂತರ ಭಕ್ತರು ಅಚಲ ನಂಬಿಕೆಯಿಂದ ಭಾಗವಹಿಸಿ, ದೇಶದ ಅಗಾಧ ಶಕ್ತಿಯನ್ನು ಪ್ರದರ್ಶಿಸಿದರು ಎಂದು ವಿವರಿಸಿದರು.
ಇತ್ತೀಚೆಗೆ ಮಾರಿಷಸ್‌ಗೆ ಭೇಟಿ ನೀಡಿದ್ದ ವೇಳೆ ಮಹಾಕುಂಭದ ಸಮಯದಲ್ಲಿ ಸಂಗ್ರಹಿಸಲಾದ ತ್ರಿವೇಣಿ ಸಂಗಮದ, ಪವಿತ್ರ ನೀರನ್ನು ಕೊಂಡೊಯ್ದ ಬಗ್ಗೆ ಉಲ್ಲೇಖಿಸಿದರು. ಮಾರಿಷಸ್‌ನ ಗಂಗಾ ತಲಾವ್‌ನಲ್ಲಿ ಪವಿತ್ರ ನೀರನ್ನು ಅರ್ಪಿಸಿದಾಗ ಭಕ್ತಿ ಮತ್ತು ಆಚರಣೆಯ ಮಹತ್ವವನ್ನು ಉಲ್ಲೇಖಿಸಿದರು. ಇದು ಭಾರತದ ಸಂಪ್ರದಾಯಗಳು, ಸಂಸ್ಕೃತಿ ಮತ್ತು ಮೌಲ್ಯಗಳನ್ನು ಅಳವಡಿಸಿಕೊಳ್ಳುವ, ಆಚರಿಸುವ ಮತ್ತು ಸಂರಕ್ಷಿಸುವ ಬೆಳೆಯುತ್ತಿರುವ ಮನೋಭಾವವನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಒತ್ತಿ ಹೇಳಿದರು.
ಭಾರತದ ಯುವಕರು ಮಹಾಕುಂಭ ಮೇಳ ಮತ್ತು ಇತರ ಉತ್ಸವಗಳಲ್ಲಿ ಆಳವಾದ ಭಕ್ತಿಯಿಂದ ಹೇಗೆ ಸಕ್ರಿಯವಾಗಿ ಭಾಗವಹಿಸಿದ್ದಾರೆ ಎಂಬುದನ್ನು ಎತ್ತಿ ತೋರಿಸುತ್ತದೆ. ಪೀಳಿಗೆಯಿಂದ ಪೀಳಿಗೆಗೆ ಸಂಪ್ರದಾಯಗಳು ಸರಾಗವಾಗಿ ಮುಂದುವರಿಯುತ್ತಿದೆ. ಇಂದಿನ ಯುವಕರು ತಮ್ಮ ಸಂಪ್ರದಾಯಗಳು, ನಂಬಿಕೆ ಮತ್ತು ನಂಬಿಕೆಗಳನ್ನು ಹೆಮ್ಮೆಯಿಂದ ಅಳವಡಿಸಿಕೊಳ್ಳುತ್ತಿದ್ದಾರೆ, ಇದು ಭಾರತದ ಸಾಂಸ್ಕೃತಿಕ ಪರಂಪರೆಯೊಂದಿಗೆ ಬಲವಾದ ಸಂಪರ್ಕವನ್ನು ಪ್ರತಿಬಿಂಬಿಸುತ್ತದೆ ಎಂದು ಪ್ರಧಾನಿ ಹೇಳಿದರು.
"ಒಂದು ಸಮಾಜವು ತನ್ನ ಪರಂಪರೆಯ ಬಗ್ಗೆ ಹೆಮ್ಮೆಪಡುವಾಗ, ಅದು ಮಹಾಕುಂಭದ ಸಮಯದಲ್ಲಿ ಸಾಕ್ಷಿಯಾಗಿರುವಂತೆ ಭವ್ಯ ಮತ್ತು ಸ್ಪೂರ್ತಿದಾಯಕ ಕ್ಷಣಗಳನ್ನು ಸೃಷ್ಟಿಸುತ್ತದೆ". ಅಂತಹ ಹೆಮ್ಮೆಯು ಏಕತೆಯನ್ನು ಬೆಳೆಸುತ್ತದೆ ಮತ್ತು ಮಹತ್ವದ ರಾಷ್ಟ್ರೀಯ ಗುರಿಗಳನ್ನು ಸಾಧಿಸುವ ಆತ್ಮವಿಶ್ವಾಸವನ್ನು ಬಲಪಡಿಸುತ್ತದೆ. ಸಂಪ್ರದಾಯಗಳು, ನಂಬಿಕೆ ಮತ್ತು ಪರಂಪರೆಯೊಂದಿಗಿನ ಸಂಪರ್ಕವು ಸಮಕಾಲೀನ ಭಾರತಕ್ಕೆ ಅಮೂಲ್ಯವಾದ ಆಸ್ತಿಯಾಗಿದೆ, ಇದು ರಾಷ್ಟ್ರದ ಸಾಮೂಹಿಕ ಶಕ್ತಿ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಹೆಚ್ಚಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಮಹಾಕುಂಭವು ಅನೇಕ ಅಮೂಲ್ಯ ಫಲಿತಾಂಶಗಳನ್ನು ನೀಡಿದೆ, ಏಕತೆಯ ಮನೋಭಾವವು ಅದರ ಅತ್ಯಂತ ಪವಿತ್ರ ಕೊಡುಗೆಯಾಗಿದೆ. ದೇಶದ ಪ್ರತಿಯೊಂದು ಪ್ರದೇಶ ಮತ್ತು ಮೂಲೆಯ ಜನರು ಪ್ರಯಾಗ್‌ರಾಜ್‌ನಲ್ಲಿ ವೈಯಕ್ತಿಕ ಅಹಂಕಾರವನ್ನು ಬದಿಗಿಟ್ಟು "ನಾನು" ಎನ್ನುವುದಕ್ಕಿಂತ "ನಾವು" ಎಂಬ ಸಾಮೂಹಿಕ ಮನೋಭಾವವನ್ನು ಅಳವಡಿಸಿಕೊಂಡರು. ವಿವಿಧ ರಾಜ್ಯಗಳ ವ್ಯಕ್ತಿಗಳು ಪವಿತ್ರ ತ್ರಿವೇಣಿ ಸಂಗಮದ ಭಾಗವಾದರು, ರಾಷ್ಟ್ರೀಯತೆ ಮತ್ತು ಏಕತೆಯ ಪ್ರಜ್ಞೆಯನ್ನು ಬಲಪಡಿಸಿದರು. ಸಂಗಮದಲ್ಲಿ ವಿವಿಧ ಭಾಷೆಗಳು ಮತ್ತು ಉಪಭಾಷೆಗಳನ್ನು ಮಾತನಾಡುವ ಜನರು "ಹರ ಹರ ಗಂಗೆ" ಎಂದು ಜಪಿಸಿದಾಗ, ಅದು "ಏಕ್ ಭಾರತ್, ಶ್ರೇಷ್ಠ ಭಾರತ್" ನ ಸಾರವನ್ನು ಪ್ರತಿಬಿಂಬಿಸಿತು ಮತ್ತು ಏಕತೆಯ ಮನೋಭಾವವನ್ನು ಹೆಚ್ಚಿಸಿತು. ಮಹಾಕುಂಭವು ಸಣ್ಣ ಮತ್ತು ದೊಡ್ಡವರ ನಡುವಿನ ತಾರತಮ್ಯ ತೊಡೆದುಹಾಕಿತು. ಇದು ಭಾರತದ ಅಗಾಧ ಶಕ್ತಿಯನ್ನು ಪ್ರದರ್ಶಿಸುತ್ತದೆ ಎಂದು ಶ್ರೀ ಮೋದಿ ಗಮನಿಸಿದರು.
ರಾಷ್ಟ್ರದೊಳಗಿನ ಅಂತರ್ಗತ ಏಕತೆ ಎಷ್ಟು ಆಳವಾಗಿದೆಯೆಂದರೆ ಅದು ಎಲ್ಲಾ ವಿಭಜಕ ಪ್ರಯತ್ನಗಳನ್ನು ಮೀರಿಸುತ್ತದೆ. ಈ ಏಕತೆ ಭಾರತೀಯರಿಗೆ ಒಂದು ದೊಡ್ಡ ಅದೃಷ್ಟ ಮತ್ತು ವಿಘಟನೆಯನ್ನು ಎದುರಿಸುತ್ತಿರುವ ಜಗತ್ತಿನಲ್ಲಿ ಗಮನಾರ್ಹ ಶಕ್ತಿಯಾಗಿದೆ. "ವೈವಿಧ್ಯತೆಯಲ್ಲಿ ಏಕತೆ" ಭಾರತದ ವಿಶಿಷ್ಟ ಲಕ್ಷಣವಾಗಿದೆ ಎಂದು ಅವರು ಪುನರುಚ್ಚರಿಸಿದರು.
ಪ್ರಯಾಗರಾಜ್ ಮಹಾಕುಂಭದ ಭವ್ಯತೆಯಿಂದ ಇದು ಸ್ಪಷ್ಟವಾಗಿ ಕಂಡುಬರುತ್ತದೆ. ವಿವಿಧತೆಯಲ್ಲಿ ಏಕತೆಯ ಈ ವಿಶಿಷ್ಟ ಲಕ್ಷಣವನ್ನು ಶ್ರೀಮಂತಗೊಳಿಸುವುದನ್ನು ನಾವೆಲ್ಲರೂ ಮುಂದುವರಿಸಬೇಕೆಂದು ಒತ್ತಾಯಿಸಿದರು. ಮಹಾಕುಂಭದಿಂದ ಪಡೆದ ಹಲವಾರು ಸ್ಫೂರ್ತಿಗಳು ನಮ್ಮಲ್ಲಿ ವಿಶ್ವಾಸ ಹೆಚ್ಚಿಸಿದೆ. ದೇಶದಲ್ಲಿನ ನದಿಗಳ ವಿಶಾಲ ಜಾಲ ಹಾಗೂ ಅವುಗಳು ಹಲವು ಸವಾಲುಗಳನ್ನು ಎದುರಿಸುತ್ತಿವೆ. ಮಹಾಕುಂಭದಿಂದ ಪ್ರೇರಿತರಾಗಿ ನದಿ ಉತ್ಸವಗಳ ಸಂಪ್ರದಾಯವನ್ನು ವಿಸ್ತರಿಸುವ ಅಗತ್ಯದ ಬಗ್ಗೆ ಪ್ರಧಾನಿ ತಿಳಿಸಿದರು. ಅಂತಹ ಉಪಕ್ರಮಗಳು ಪ್ರಸ್ತುತ ಪೀಳಿಗೆಗೆ ನೀರಿನ ಮಹತ್ವವನ್ನು ಅರ್ಥಮಾಡಿಕೊಳ್ಳಲು, ನದಿಗಳ ಸ್ವಚ್ಛತೆಯನ್ನು ಉತ್ತೇಜಿಸಲು ಮತ್ತು ನದಿಗಳ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಹೇಳಿದರು.
ಮಹಾಕುಂಭದಿಂದ ಪಡೆದ ಸ್ಫೂರ್ತಿಗಳು ರಾಷ್ಟ್ರದ ನಿರ್ಣಯಗಳನ್ನು ಸಾಧಿಸಲು ಬಲವಾದ ಮಾಧ್ಯಮವಾಗಿ ಕಾರ್ಯನಿರ್ವಹಿಸುತ್ತವೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸುವ ಮೂಲಕ ಪ್ರಧಾನಿಯವರು ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು. ಮಹಾಕುಂಭವನ್ನು ಆಯೋಜಿಸುವಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬ ವ್ಯಕ್ತಿಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಶ್ಲಾಘಿಸಿದರು ಮತ್ತು ದೇಶಾದ್ಯಂತದ ಎಲ್ಲಾ ಭಕ್ತರಿಗೆ ತಮ್ಮ ನಮನಗಳನ್ನು ಸಲ್ಲಿಸಿದರು ಮತ್ತು ಸದನದ ಪರವಾಗಿ ತಮ್ಮ ಶುಭಾಶಯಗಳನ್ನು ತಿಳಿಸಿದರು.
*****
(Release ID: 2112291)
Visitor Counter : 14
Read this release in:
English
,
Urdu
,
Hindi
,
Marathi
,
Bengali
,
Assamese
,
Manipuri
,
Punjabi
,
Gujarati
,
Odia
,
Tamil
,
Malayalam