ಪ್ರಧಾನ ಮಂತ್ರಿಯವರ ಕಛೇರಿ
ಗುಜರಾತ್ ನ ನವಸಾರಿಯಲ್ಲಿ ಲಖ್ಪತಿ ದೀದಿಗಳೊಂದಿಗೆ ಸಂವಾದ ನಡೆಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ
Posted On:
08 MAR 2025 10:32PM by PIB Bengaluru
ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಗುಜರಾತ್ ನ ನವಸಾರಿಯಲ್ಲಿ ಲಖ್ಪತಿ ದೀದಿಗಳೊಂದಿಗೆ ಹೃದಯಸ್ಪರ್ಶೀ ಸಂಭಾಷಣೆ ನಡೆಸಿದರು, ಮಹಿಳಾ ಸಬಲೀಕರಣದ ಮಹತ್ವ ಮತ್ತು ಸಮಾಜಕ್ಕೆ ಮಹಿಳೆಯರು ನೀಡಿದ ಕೊಡುಗೆಗಳನ್ನು ಪ್ರಮುಖವಾಗಿ ಪ್ರಸ್ತಾಪಿಸಿದರು.
ಜಗತ್ತು ಇಂದು ಮಹಿಳಾ ದಿನವನ್ನು ಆಚರಿಸುತ್ತಿದ್ದರೆ, ನಮ್ಮ ಸಂಪ್ರದಾಯಗಳು ಮತ್ತು ಸಂಸ್ಕೃತಿಯಲ್ಲಿ, 'ಮಾತೃ ದೇವೋ ಭವ' ಎಂದು ತಾಯಿಯ ಮೇಲಿನ ಪೂಜ್ಯ ಭಾವನೆಯಿಂದ ಗೌರವದಿಂದ ಅದರ ಪ್ರಾರಂಭವಾಗುತ್ತದೆ ಎಂದು ಪ್ರಧಾನಿ ಹೇಳಿದರು. ನಮಗೆ ವರ್ಷದ ಪ್ರತಿಯೊಂದು ದಿನವೂ 'ಮಾತೃ ದೇವೋ ಭವ' ಎಂದು ಅವರು ಹೇಳಿದರು.
ಶಿವಾನಿ ಮಹಿಳಾ ಮಂಡಲದೊಂದಿಗೆ ಕೆಲಸ ಮಾಡಿದ ಲಖ್ಪತಿ ದೀದಿಗಳಲ್ಲಿ ಒಬ್ಬರು ತಮ್ಮ ಅನುಭವವನ್ನು ಹಂಚಿಕೊಂಡರು, ಅವರು ಅಲ್ಲಿ ಸೌರಾಷ್ಟ್ರದ ಸಾಂಸ್ಕೃತಿಕ ಕರಕುಶಲಕಲೆಯಾದ “ಮಣಿ ಮುತ್ತುಗಳ ಕೆಲಸ”ದಲ್ಲಿ ತೊಡಗಿಸಿಕೊಂಡಿದ್ದಾರೆ. ಅಲ್ಲಿ 400 ಕ್ಕೂ ಹೆಚ್ಚು ಸಹೋದರಿಯರಿಗೆ ಮಣಿ ಕೆಲಸದಲ್ಲಿ ತರಬೇತಿ ನೀಡಲಾಗಿದೆ, ಇತರ ಸಹೋದರಿಯರು ಮಾರ್ಕೆಟಿಂಗ್ ಮತ್ತು ಅಕೌಂಟಿಂಗ್ ಕಾರ್ಯಗಳನ್ನು ನಿರ್ವಹಿಸುತ್ತಾರೆ ಎಂದು ಅವರು ಉಲ್ಲೇಖಿಸಿದರು. ಮಾರ್ಕೆಟಿಂಗ್ ತಂಡವು ರಾಜ್ಯದ ಹೊರಗೆ ಪ್ರಯಾಣಿಸುತ್ತದೆಯೇ ಎಂದು ಪ್ರಧಾನಿ ವಿಚಾರಿಸಿದರು, ಇದಕ್ಕೆ ಉತ್ತರಿಸಿದ ಅವರು ಭಾರತದ ಬಹುತೇಕ ಎಲ್ಲಾ ಪ್ರಮುಖ ನಗರಗಳಿಗೆ ಪ್ರಯಾಣಿಸಿದ್ದಾರೆ ಎಂದು ದೃಢಪಡಿಸಿದರು. 40,000 ರೂಪಾಯಿಗಳಿಗಿಂತ ಹೆಚ್ಚು ಸಂಪಾದಿಸುವ ಇನ್ನೊಬ್ಬ ಲಖ್ಪತಿ ದೀದಿ ಪಾರುಲ್ ಬೆಹೆನ್ ರ ಯಶಸ್ಸನ್ನು ಅವರು ಎತ್ತಿ ತೋರಿಸಿದರು ಮತ್ತು ಲಖ್ಪತಿ ದೀದಿಗಳ ಸಾಧನೆಯನ್ನು ವಿವರಿಸಿದರು. ಶ್ರೀ ಮೋದಿ ಅವರು ಮೂರು ಕೋಟಿ ಲಖ್ಪತಿ ದೀದಿಗಳನ್ನು ಸೃಷ್ಟಿಸುವ ತಮ್ಮ ಕನಸನ್ನು ವ್ಯಕ್ತಪಡಿಸಿದರು ಮತ್ತು ಆ ಸಂಖ್ಯೆ ಐದು ಕೋಟಿಯನ್ನು ತಲುಪಬಹುದು ಎಂಬ ನಂಬಿಕೆ ಇದೆ ಎಂದರು.
ಮತ್ತೊಬ್ಬ ಲಖ್ಪತಿ ದೀದಿ 65 ಮಹಿಳೆಯರೊಂದಿಗೆ ಮಿಶ್ರಿ (ಸಕ್ಕರೆ ಕ್ಯಾಂಡಿ) ಯಿಂದ ಸಿರಪ್ ಉತ್ಪಾದಿಸುವ ತಮ್ಮ ಪ್ರಯಾಣವನ್ನು ಹಂಚಿಕೊಂಡರು, ವಾರ್ಷಿಕ ವಹಿವಾಟು 25 ರಿಂದ 30 ಲಕ್ಷ ರೂ.ಗಳಷ್ಟಾಗುವುದನ್ನು ಅವರು ತಿಳಿಸಿದರು. ಸರ್ಕಾರವು ಒದಗಿಸಿದ ವೇದಿಕೆಯು ಅಸಹಾಯಕ ಮಹಿಳೆಯರನ್ನು ಬೆಂಬಲಿಸಲು ಮತ್ತು ಅವರ ಮಕ್ಕಳಿಗೆ ಶಿಕ್ಷಣ ನೀಡಲು ಅನುವು ಮಾಡಿಕೊಟ್ಟಿದೆ ಎಂದು ಅವರು ಉಲ್ಲೇಖಿಸಿದರು. ಅವರು ತಮ್ಮ ಪ್ರಯತ್ನಗಳ ಬಗ್ಗೆ ಮತ್ತಷ್ಟು ಮಾಹಿತಿ ನೀಡಿದರಲ್ಲದೆ ತಮ್ಮ ಮಾರ್ಕೆಟಿಂಗ್ ಚಟುವಟಿಕೆಗಳಿಗಾಗಿ ವಾಹನಗಳನ್ನು ಹೊಂದಿರುವುದಾಗಿಯೂ ತಿಳಿಸಿದರು. ಮುಖ್ಯಮಂತ್ರಿ ಅಥವಾ ಪ್ರಧಾನ ಮಂತ್ರಿ ಎಂಬ ಹಮ್ಮು ಬಿಮ್ಮು ಇಲ್ಲದೆ ಹೆಚ್ಚಿನ ಲಖ್ಪತಿ ದೀದಿಗಳ ಮಳಿಗೆಗಳಿಗೆ ಭೇಟಿ ನೀಡಿದ್ದೇನೆ ಮತ್ತು ಇದು ತಮಗೆ ಸಾಮಾನ್ಯ ಸಹಜ ಸಂಗತಿಯಾಗಿದೆ ಎಂದು ಶ್ರೀ ಮೋದಿ ಹೇಳಿದರು.
ತನ್ನ ಅನುಭವವನ್ನು ಹಂಚಿಕೊಂಡ ಮತ್ತೊಬ್ಬ ಲಖ್ಪತಿ ದೀದಿ, ಕಷ್ಟಪಟ್ಟು ಕೆಲಸ ಮಾಡುವ ಮೂಲಕ ಕೆಲವೇ ವರ್ಷಗಳಲ್ಲಿ ಕೋಟ್ಯಾಧಿಪತಿಯಾಗುತ್ತೇನೆ ಎಂದು ಭರವಸೆ ವ್ಯಕ್ತಪಡಿಸಿದರು. ಯಶಸ್ಸಿನ ಹಾದಿಯನ್ನು ತೋರಿಸಿದ್ದಕ್ಕಾಗಿ ಅವರು ಪ್ರಧಾನಮಂತ್ರಿಯವರಿಗೆ ಧನ್ಯವಾದ ಅರ್ಪಿಸಿದರು. ಡ್ರೋನ್ ದೀದಿ ತನ್ನ ಅನುಭವವನ್ನು ಹಂಚಿಕೊಳ್ಳುತ್ತ, ತಾವು ಸುಮಾರು 2 ಲಕ್ಷ ರೂ.ಗಳನ್ನು ಗಳಿಸುತ್ತಿರುವುದಾಗಿ ಹೇಳಿದರು. ಬೈಸಿಕಲ್ ಸವಾರಿ ಮಾಡಲು ಗೊತ್ತಿಲ್ಲದ ಆದರೆ ಡ್ರೋನ್ ಪೈಲಟ್ ಆಗಿರುವ ಮಹಿಳೆಯ ಅನುಭವದ ಬಗ್ಗೆ ಪ್ರಧಾನಿ ಪ್ರತಿಕ್ರಿಯಿಸಿದರು. ಮಹಾರಾಷ್ಟ್ರದ ಪುಣೆಯಲ್ಲಿ ತರಬೇತಿ ಪಡೆದ ಮಹಿಳೆ, ತನ್ನ ಸಂಬಂಧಿಕರು ಮತ್ತು ಸ್ನೇಹಿತರು ತನ್ನನ್ನು 'ಪೈಲಟ್' ಎಂದು ಕರೆಯುತ್ತಾರೆ ಎಂದು ಹೇಳಿದರು. ಡ್ರೋನ್ ದೀದಿ ಮತ್ತು ಜೊತೆಗೆ ಇಂದು ಲಖ್ಪತಿ ದೀದಿಯಾಗಲು ಅವಕಾಶ ನೀಡಿದ್ದಕ್ಕಾಗಿ ಅವರು ಪ್ರಧಾನಿಗೆ ಧನ್ಯವಾದ ಅರ್ಪಿಸಿದರು. ಡ್ರೋನ್ ದೀದಿಗಳು ಈಗ ಪ್ರತಿ ಹಳ್ಳಿಗೂ ಒಂದು ಗುರುತಿನಂತಾಗಿದ್ದಾರೆ ಎಂದು ಶ್ರೀ ಮೋದಿ ಹೇಳಿದರು.
ನಂತರ ಶ್ರೀ ಮೋದಿ ಅವರು ಸುಮಾರು 4 ರಿಂದ 5 ಲಕ್ಷ ರೂ.ಗಳ ಮಾಸಿಕ ವ್ಯವಹಾರ ನಡೆಸುವ ಬ್ಯಾಂಕ್ ಸಖಿಯರೊಂದಿಗೆ ಸಂವಾದ ನಡೆಸಿದರು. ತಾವು ಲಖ್ಪತಿ ದೀದಿಯಾದಂತೆ ಇತರ ಮಹಿಳೆಯರನ್ನು ಸಹ ಲಖ್ಪತಿ ದೀದಿಗಳಂತೆ ಮಾಡುವ ಬಯಕೆಯನ್ನು ಇನ್ನೋರ್ವ ಮಹಿಳೆ ವ್ಯಕ್ತಪಡಿಸಿದರು.
ಪ್ರಧಾನಮಂತ್ರಿಯವರು ಆನ್ ಲೈನ್ ವ್ಯವಹಾರ ಮಾದರಿಗಳನ್ನು ಪ್ರವೇಶಿಸುವ ಮಹತ್ವವನ್ನು ಒತ್ತಿ ಹೇಳಿದರು ಮತ್ತು ಅವರ ಉಪಕ್ರಮಗಳನ್ನು ನವೀಕರಿಸಲು/ಉನ್ನತೀಕರಿಸಲು ಸರ್ಕಾರದ ಬೆಂಬಲದ ಭರವಸೆ ನೀಡಿದರು. ಅನೇಕ ಮಹಿಳೆಯರು ತಳಮಟ್ಟದಲ್ಲಿ ಸಂಪಾದಿಸುತ್ತಿದ್ದಾರೆ ಮತ್ತು ಭಾರತೀಯ ಮಹಿಳೆಯರು ಕೇವಲ ಮನೆಕೆಲಸಕ್ಕೆ ಸೀಮಿತವಾಗಿಲ್ಲ ಬದಲು ಗಮನಾರ್ಹ ಆರ್ಥಿಕ ಶಕ್ತಿಯಾಗಿದ್ದಾರೆ ಎಂಬುದನ್ನು ಜಗತ್ತು ತಿಳಿದುಕೊಳ್ಳಬೇಕು ಎಂದು ಅವರು ಒತ್ತಿ ಹೇಳಿದರು. ಭಾರತದ ಆರ್ಥಿಕ ಶಕ್ತಿಯಲ್ಲಿ ಗ್ರಾಮೀಣ ಮಹಿಳೆಯರು ನಿರ್ಣಾಯಕ ಪಾತ್ರ ವಹಿಸುತ್ತಿದ್ದಾರೆ ಎಂದೂ ಶ್ರೀ ಮೋದಿ ಹೇಳಿದರು. ಮಹಿಳೆಯರು ತಂತ್ರಜ್ಞಾನಕ್ಕೆ ತ್ವರಿತವಾಗಿ ಹೊಂದಿಕೊಳ್ಳುತ್ತಾರೆ ಎಂಬುದರತ್ತ ಅವರು ಗಮನ ಸೆಳೆದರು, ಮೂರರಿಂದ ನಾಲ್ಕು ದಿನಗಳಲ್ಲಿ ಡ್ರೋನ್ಗಳನ್ನು ನಿರ್ವಹಿಸಲು ಕಲಿತ ಮತ್ತು ಪ್ರಾಮಾಣಿಕವಾಗಿ ಅಭ್ಯಾಸ ಮಾಡಿದ ಡ್ರೋನ್ ದೀದಿಗಳೊಂದಿಗೆ ತಮ್ಮ ಅನುಭವವನ್ನು ಹಂಚಿಕೊಂಡರು. ಹೋರಾಡಲು, ಸೃಷ್ಟಿಸಲು, ಪೋಷಿಸಲು ಮತ್ತು ಸಂಪತ್ತನ್ನು ಉತ್ಪಾದಿಸುವ ನಿಟ್ಟಿನಲ್ಲಿ ಭಾರತದ ಮಹಿಳೆಯರ ಅಂತರ್ಗತ ಶಕ್ತಿಯನ್ನು ಅವರು ಪ್ರಮುಖವಾಗಿ ಉಲ್ಲೇಖಿಸಿದರು. ಈ ಶಕ್ತಿಯು ದೇಶಕ್ಕೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.
*****
(Release ID: 2109874)
Visitor Counter : 15
Read this release in:
English
,
Urdu
,
Marathi
,
Hindi
,
Bengali
,
Assamese
,
Manipuri
,
Punjabi
,
Gujarati
,
Odia
,
Tamil
,
Malayalam