ಗೃಹ ವ್ಯವಹಾರಗಳ ಸಚಿವಾಲಯ
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ತಮಿಳುನಾಡಿನ ಥಕ್ಕೋಲಂನಲ್ಲಿ ನಡೆದ ಸಿಐಎಸ್‌ಎಫ್ ಸಂಸ್ಥಾಪನಾ ದಿನದ ಮೆರವಣಿಗೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದರು
ಸಿಐಎಸ್‌ಎಫ್ ದೇಶದ ಅಭಿವೃದ್ಧಿ, ಪ್ರಗತಿ ಮತ್ತು ಚಲನೆಯನ್ನು ಭದ್ರಪಡಿಸಿದೆ ಮಾತ್ರವಲ್ಲದೆ, ಅವುಗಳ ಸುಗಮ ಕಾರ್ಯಾಚರಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ
ತಮಿಳು ಭಾಷೆ, ಸಂಸ್ಕೃತಿ ಮತ್ತು ಸಂಪ್ರದಾಯಗಳು ಭಾರತದ ಸಂಸ್ಕೃತಿಯ ಅಮೂಲ್ಯ ಆಭರಣಗಳಾಗಿವೆ
ಥಕ್ಕೋಲಂನಲ್ಲಿರುವ ಸಿಐಎಸ್‌ಎಫ್ ಪ್ರಾದೇಶಿಕ ತರಬೇತಿ ಕೇಂದ್ರಕ್ಕೆ ಚೋಳ ರಾಜವಂಶದ ಮಹಾನ್ ಯೋಧ ರಾಜಾದಿತ್ಯ ಚೋಳನ ಹೆಸರನ್ನು ಇಡುವುದು ಹೆಮ್ಮೆಯ ವಿಷಯವಾಗಿದೆ
ಈಗ, ಯುವಕರು ಸಿಎಪಿಎಫ್ ನೇಮಕಾತಿ ಪರೀಕ್ಷೆಗಳನ್ನು ತಮಿಳು ಮತ್ತು ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ಸೇರಿಸಲಾದ ಎಲ್ಲಾ ಭಾಷೆಗಳಲ್ಲಿ ತೆಗೆದುಕೊಳ್ಳಬಹುದು
ಇತರ ರಾಜ್ಯಗಳ ಮುಖ್ಯಮಂತ್ರಿಗಳಂತೆ, ತಮಿಳುನಾಡಿನ ಮುಖ್ಯಮಂತ್ರಿ ಕೂಡ ಆದಷ್ಟು ಬೇಗ ತಮಿಳು ಭಾಷೆಯಲ್ಲಿವೈದ್ಯಕೀಯ ಮತ್ತು ಎಂಜಿನಿಯರಿಂಗ್ ಕೋರ್ಸ್‌ಗಳನ್ನು ಪ್ರಾರಂಭಿಸಬೇಕು, ಇದು ತಮಿಳು ಮಾಧ್ಯಮದ ವಿದ್ಯಾರ್ಥಿಗಳಿಗೆ ಪ್ರಯೋಜನವನ್ನು ನೀಡುತ್ತದೆ
ಬಂದರುಗಳು, ವಿಮಾನ ನಿಲ್ದಾಣಗಳು ಮತ್ತು ಪ್ರಮುಖ ವಾಣಿಜ್ಯ, ಪ್ರವಾಸೋದ್ಯಮ ಮತ್ತು ಸಂಶೋಧನಾ ಸಂಸ್ಥೆಗಳು ಮತ್ತು ದೇಶದ ಕೈಗಾರಿಕಾ ಅಭಿವೃದ್ಧಿಗೆ ಸಂಬಂಧಿಸಿದ ಪ್ರಮುಖ ಸಂಸ್ಥೆಗಳ ಭದ್ರತೆಯನ್ನು ಸಿಐಎಸ್‌ಎಫ್ ಇಲ್ಲದೆ ಊಹಿಸಲು ಸಾಧ್ಯವಿಲ್ಲ
Posted On:
07 MAR 2025 3:30PM by PIB Bengaluru
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಇಂದು ತಮಿಳುನಾಡಿನ ಥಕ್ಕೋಲಂನಲ್ಲಿ ನಡೆದ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) 56ನೇ ಸಂಸ್ಥಾಪನಾ ದಿನದ ಮೆರವಣಿಗೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಕೇಂದ್ರ ಸಚಿವರಾದ ಡಾ.ಎಲ್. ಮುರುಗನ್ ಮತ್ತು ಸಿಐಎಸ್‌ಎಫ್ ಮಹಾನಿರ್ದೇಶಕ ಶ್ರೀ ರಾಜ್ವಿಂದರ್ ಸಿಂಗ್ ಭಟ್ಟಿ ಉಪಸ್ಥಿತರಿದ್ದರು.

ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರು ತಮ್ಮ ಭಾಷಣದಲ್ಲಿ, ಕಳೆದ 56 ವರ್ಷಗಳಲ್ಲಿ, ಸಿಐಎಸ್‌ಎಫ್ ದೇಶದ ಅಭಿವೃದ್ಧಿ, ಪ್ರಗತಿ ಮತ್ತು ಚಲನಶೀಲತೆಯನ್ನು ಖಾತ್ರಿಪಡಿಸಿದೆ. ಆದರೆ ಅವುಗಳ ಸುಗಮ ಕಾರ್ಯನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಹೇಳಿದರು. ಬಂದರುಗಳು, ವಿಮಾನ ನಿಲ್ದಾಣಗಳು, ಪ್ರಮುಖ ವ್ಯಾಪಾರ, ಪ್ರವಾಸೋದ್ಯಮ ಮತ್ತು ಸಂಶೋಧನಾ ಸಂಸ್ಥೆಗಳು ಸೇರಿದಂತೆ ದೇಶದ ಕೈಗಾರಿಕಾ ಅಭಿವೃದ್ಧಿಗೆ ಸಂಬಂಧಿಸಿದ ಪ್ರಮುಖ ಸ್ಥಾಪನೆಗಳ ಸುರಕ್ಷತೆಯನ್ನು ಸಿಐಎಸ್‌ಎಫ್ ಇಲ್ಲದೆ ಊಹಿಸಲು ಸಾಧ್ಯವಿಲ್ಲಎಂದು ಅವರು ಹೇಳಿದರು. ಸಿಐಎಸ್‌ಎಫ್ ಸಿಬ್ಬಂದಿಯ ಅಚಲ ನಿಷ್ಠೆ, ಕಠಿಣ ಪರಿಶ್ರಮ ಮತ್ತು ಸಮರ್ಪಣೆಯಿಂದಾಗಿ ದೇಶವು ಕೈಗಾರಿಕಾ ಅಭಿವೃದ್ಧಿ ಕ್ಷೇತ್ರದಲ್ಲಿ ಸುರಕ್ಷಿತವಾಗಿ ಮುಂದುವರಿಯುತ್ತಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಸಿಐಎಸ್‌ಎಫ್ ಸಿಬ್ಬಂದಿ ಕೂಡ ಹಲವಾರು ಸಾಮಾಜಿಕ ಚಟುವಟಿಕೆಗಳಲ್ಲಿಆಸಕ್ತಿ ವಹಿಸಿ ಅದನ್ನು ಮುಂದೆ ತೆಗೆದುಕೊಂಡು ಹೋಗಿದ್ದಾರೆ ಎಂದು ಅವರು ಹೇಳಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2027ರ ವೇಳೆಗೆ ಭಾರತವನ್ನು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯನ್ನಾಗಿ ಮಾಡುವ ಸಂಕಲ್ಪವನ್ನು ಹೊಂದಿದ್ದಾರೆ ಮತ್ತು 2047ರ ವೇಳೆಗೆ ಭಾರತವನ್ನು ಪ್ರತಿಯೊಂದು ಕ್ಷೇತ್ರದಲ್ಲೂ ನಾಯಕನನ್ನಾಗಿ ಮಾಡುವ ಸಂಕಲ್ಪವನ್ನು ದೇಶದ 140 ಕೋಟಿ ಜನರ ಮುಂದೆ ಇಟ್ಟಿದ್ದಾರೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಈ ಗುರಿಗಳನ್ನು ಸಾಧಿಸುವಲ್ಲಿ ಸಿಐಎಸ್‌ಎಫ್ ಕೊಡುಗೆ ಬಹಳ ಮುಖ್ಯವಾಗಿದೆ ಎಂದು ಅವರು ಒತ್ತಿ ಹೇಳಿದರು. ಸಿಐಎಸ್‌ಎಫ್ ಸಂಸ್ಥಾಪನಾ ದಿನವನ್ನು ದೆಹಲಿಯಲ್ಲಿಆಚರಿಸುವ ಬದಲು, ದೇಶದ ವಿವಿಧ ಭಾಗಗಳಲ್ಲಿಆಚರಿಸಲು 2019ರಲ್ಲಿ ನಿರ್ಧರಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಅದರಂತೆ ಇಂದು ತಮಿಳುನಾಡಿನ ಥಕ್ಕೋಲಂನಲ್ಲಿರುವ ಪ್ರಾದೇಶಿಕ ತರಬೇತಿ ಕೇಂದ್ರದಲ್ಲಿ ಸಿಐಎಸ್‌ಎಫ್ ಸಂಸ್ಥಾಪನಾ ದಿನದ ಕಾರ್ಯಕ್ರಮ ನಡೆಯಿತು.
ಭಾರತದ ಸಂಸ್ಕೃತಿಯನ್ನು ಅನೇಕ ರೀತಿಯಲ್ಲಿಬಲಪಡಿಸುವಲ್ಲಿ ತಮಿಳುನಾಡಿನ ಸಂಸ್ಕೃತಿ ಮಹತ್ವದ ಪಾತ್ರ ವಹಿಸಿದೆ ಎಂದು ಕೇಂದ್ರ ಗೃಹ ಸಚಿವರು ಮತ್ತು ಸಹಕಾರ ಸಚಿವರು ಹೇಳಿದರು. ಆಡಳಿತಾತ್ಮಕ ಸುಧಾರಣೆಗಳು, ಆಧ್ಯಾತ್ಮಿಕ ಎತ್ತರವನ್ನು ಸಾಧಿಸುವುದು, ಶೈಕ್ಷಣಿಕ ಮಾನದಂಡಗಳನ್ನು ನಿಗದಿಪಡಿಸುವುದು ಅಥವಾ ದೇಶದ ಏಕತೆ ಮತ್ತು ಸಮಗ್ರತೆಯ ಸಂದೇಶವನ್ನು ಉತ್ತೇಜಿಸುವುದು, ತಮಿಳುನಾಡು ಪ್ರತಿಯೊಂದು ಕ್ಷೇತ್ರದಲ್ಲೂ ಭಾರತೀಯ ಸಂಸ್ಕೃತಿಯನ್ನು ಬಹಳವಾಗಿ ಬಲಪಡಿಸಿದೆ. ತಮಿಳು ಭಾಷೆ, ಸಂಸ್ಕೃತಿ ಮತ್ತು ಸಂಪ್ರದಾಯಗಳು ಭಾರತದ ಸಂಸ್ಕೃತಿಯ ಅಮೂಲ್ಯ ಆಭರಣಗಳಾಗಿವೆ ಮತ್ತು ಇಡೀ ದೇಶ ಇದನ್ನು ಗುರುತಿಸುತ್ತದೆ ಎಂದು ಅವರು ಹೇಳಿದರು. ಇದಕ್ಕೆ ಅನುಗುಣವಾಗಿ, ಥಕ್ಕೋಲಂನಲ್ಲಿರುವ ಸಿಐಎಸ್‌ಎಫ್ ಪ್ರಾದೇಶಿಕ ತರಬೇತಿ ಕೇಂದ್ರಕ್ಕೆ ಚೋಳ ರಾಜವಂಶದ ಮಹಾನ್ ಯೋಧ ರಾಜಾದಿತ್ಯ ಚೋಳನ ಹೆಸರನ್ನು ಇಡಲು ನಿರ್ಧರಿಸಲಾಗಿದೆ ಎಂದು ಶ್ರೀ ಅಮಿತ್ ಶಾ ಉಲ್ಲೇಖಿಸಿದರು. ಇದು ಹೆಮ್ಮೆಯ ವಿಷಯವಾಗಿದೆ. ರಾಜಾದಿತ್ಯ ಚೋಳನು ಈ ಭೂಮಿಯಲ್ಲಿ ಶೌರ್ಯ ಮತ್ತು ತ್ಯಾಗದ ಹಲವಾರು ಕಥೆಗಳನ್ನು ರಚಿಸಿ, ಹುತಾತ್ಮನಾದನು ಮತ್ತು ಚೋಳ ಸಾಮ್ರಾಜ್ಯದ ಭವ್ಯ ಸಂಪ್ರದಾಯಗಳನ್ನು ಮುನ್ನಡೆಸಿದನು ಎಂದು ಅವರು ಹೇಳಿದರು.

ಕಳೆದ ವರ್ಷ ಸಿಐಎಸ್‌ಎಫ್‌ನಲ್ಲಿ14,000 ಕ್ಕೂ ಹೆಚ್ಚು ಹುದ್ದೆಗಳನ್ನು ಭರ್ತಿ ಮಾಡಲಾಗಿದೆ ಎಂದು ಕೇಂದ್ರ ಗೃಹ ಸಚಿವರು ಮಾಹಿತಿ ನೀಡಿದರು. ನಾವು ಎಲ್ಲಾ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳನ್ನು (ಸಿಎಪಿಎಫ್) ಪರಿಗಣಿಸಿದರೆ, ಒಂದು ಲಕ್ಷಕ್ಕೂ ಹೆಚ್ಚು ಯುವಕರಿಗೆ ಉದ್ಯೋಗ ನೀಡಲಾಗಿದೆ ಮತ್ತು ಇನ್ನೂ 50,000 ಯುವಕರಿಗೆ ನೇಮಕಾತಿ ಪ್ರಕ್ರಿಯೆ ಪ್ರಸ್ತುತ ನಡೆಯುತ್ತಿದೆ ಎಂದು ಅವರು ತಿಳಿಸಿದರು.
ಇಲ್ಲಿಯವರೆಗೆ, ಸಿಎಪಿಎಫ್ ನೇಮಕಾತಿ ಪರೀಕ್ಷೆಗಳನ್ನು ಪ್ರಾದೇಶಿಕ ಭಾಷೆಗಳಲ್ಲಿನಡೆಸಲು ಅವಕಾಶವಿರಲಿಲ್ಲಎಂದು ಶ್ರೀ ಅಮಿತ್ ಶಾ ಹೇಳಿದರು. ಆದಾಗ್ಯೂ, ನರೇಂದ್ರ ಮೋದಿ ಸರ್ಕಾರದ ನಿರ್ಧಾರದ ಪ್ರಕಾರ, ಹಿಂದಿ ಮತ್ತು ಇಂಗ್ಲಿಷ್ ಜತೆಗೆ, ಈಗ ಯುವಕರು ಸಿಎಪಿಎಫ್ ನೇಮಕಾತಿ ಪರೀಕ್ಷೆಗಳನ್ನು ತಮಿಳು ಮತ್ತು ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ಸೇರಿಸಲಾದ ಇತರ ಭಾಷೆಗಳಲ್ಲಿ ತೆಗೆದುಕೊಳ್ಳಬಹುದು. ಇತರ ರಾಜ್ಯಗಳ ಮುಖ್ಯಮಂತ್ರಿಗಳಂತೆ ತಮಿಳುನಾಡಿನ ಮುಖ್ಯಮಂತ್ರಿಯೂ ಶೀಘ್ರದಲ್ಲೇ ತಮಿಳು ಭಾಷೆಯಲ್ಲಿ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಕೋರ್ಸ್‌ಗಳನ್ನು ಪ್ರಾರಂಭಿಸಬೇಕು ಎಂದು ಅವರು ವಿನಂತಿಸಿದರು. ಇದು ತಮಿಳನ್ನು ಮಾತೃಭಾಷೆಯಾಗಿ ಬಲಪಡಿಸುವುದಲ್ಲದೆ, ತಮಿಳು ಮಾಧ್ಯಮದಲ್ಲಿಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಪ್ರಯೋಜನವನ್ನು ನೀಡುತ್ತದೆ. ಇದು ಮಾತೃಭಾಷೆಯನ್ನು ಸಬಲೀಕರಣಗೊಳಿಸುವುದಲ್ಲದೆ, ತಮಿಳು ಮಾಧ್ಯಮದಲ್ಲಿ ಶಿಕ್ಷಣ ಪಡೆದ ಮಕ್ಕಳಿಗೆ ಸಮಾನ ಅವಕಾಶಗಳನ್ನು ಒದಗಿಸುತ್ತದೆ ಎಂದು ಹೇಳಿದರು.

ಸಿಐಎಸ್‌ಎಫ್ ಯಾವಾಗಲೂ ಭದ್ರತೆಗೆ ಆದ್ಯತೆ ನೀಡಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಹೇಳಿದರು. ಕಳೆದ 56 ವರ್ಷಗಳಲ್ಲಿ, ಸಿಐಎಸ್‌ಎಫ್ ದೇಶದ ಪ್ರತಿಯೊಂದು ವಲಯದಲ್ಲೂ ರಾಷ್ಟ್ರೀಯ ಭದ್ರತೆಯಲ್ಲಿ ಸುವರ್ಣ ಮಾನದಂಡಗಳನ್ನು ನಿಗದಿಪಡಿಸಿದೆ. ಬಂದರುಗಳು, ವಿಮಾನ ನಿಲ್ದಾಣಗಳು ಮತ್ತು ಮೆಟ್ರೋಗಳು ಸೇರಿದಂತೆ ವಿವಿಧ ಸ್ಥಳಗಳಲ್ಲಿಸುಮಾರು ಒಂದು ಕೋಟಿ ಜನರ ಚಲನೆಯನ್ನು ರಕ್ಷಿಸಲು ಸಿಐಎಸ್‌ಎಫ್ ಸಿಬ್ಬಂದಿ ಕೆಲಸ ಮಾಡುತ್ತಾರೆ, ಎಲ್ಲಾ ಬೆದರಿಕೆಗಳಿಂದ ಅವರ ಸುರಕ್ಷ ತೆಯನ್ನು ಖಚಿತಪಡಿಸಿಕೊಳ್ಳುತ್ತಾರೆ ಎಂದು ಅವರು ಉಲ್ಲೇಖಿಸಿದರು. ದೇಶದ ಕೈಗಾರಿಕಾ ಮತ್ತು ಶೈಕ್ಷ ಣಿಕ ಅಭಿವೃದ್ಧಿಗೆ ಮತ್ತು ರಾಷ್ಟ್ರದ ಸುಗಮ ಕಾರ್ಯನಿರ್ವಹಣೆಗೆ ಸಿಐಎಸ್‌ಎಫ್ ಸಿಬ್ಬಂದಿಯ ಕೊಡುಗೆ ನಿರ್ಣಾಯಕವಾಗಿದೆ. ಅವರ ಕಣ್ಗಾವಲಿನಲ್ಲಿ, ಬಂದರುಗಳು, ವಿಮಾನ ನಿಲ್ದಾಣಗಳು ಮತ್ತು ಮೆಟ್ರೋಗಳು ಸೇರಿದಂತೆ ಎಲ್ಲಾ ಸಂಸ್ಥೆಗಳು ಸುರಕ್ಷಿತವಾಗಿವೆ. ಹೊಸ ಸಂಸತ್ ಕಟ್ಟಡದ ಭದ್ರತೆಯನ್ನು ಸಿಐಎಸ್‌ಎಫ್ ಸಿಬ್ಬಂದಿಗೆ ವಹಿಸಲಾಗಿದೆ ಎಂಬುದು ಹೆಮ್ಮೆಯ ವಿಷಯವಾಗಿದೆ. ಸಿಐಎಸ್‌ಎಫ್ ಸಿಬ್ಬಂದಿ ದೆಹಲಿ ಮೆಟ್ರೋದಲ್ಲಿ ಪ್ರತಿದಿನ 70 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರ ಸುರಕ್ಷಿತ ಚಲನೆಯನ್ನು ಶಿಸ್ತು ಮತ್ತು ತಾಳ್ಮೆಯಿಂದ ಯಾವುದೇ ಲೋಪಗಳಿಲ್ಲದೆ ಖಚಿತಪಡಿಸಿಕೊಳ್ಳುತ್ತಾರೆ ಎಂದು ಶ್ರೀ ಅಮಿತ್ ಶಾ ಉಲ್ಲೇಖಿಸಿದರು. ಹೆಚ್ಚುವರಿಯಾಗಿ, ಅವರು 250 ಬಂದರುಗಳ ಭದ್ರತೆಯ ಜವಾಬ್ದಾರಿಯನ್ನು ಹೊಂದಿದ್ದಾರೆ. ಬಂದರು ಭದ್ರತೆಗಾಗಿ ಸಿಐಎಸ್‌ಎಫ್‌ನ ಜವಾಬ್ದಾರಿಗಳು ಭವಿಷ್ಯದಲ್ಲಿ ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಅವರು ಹೇಳಿದ್ದಾರೆ.
ಸರ್ಕಾರವು ಸಿಐಎಸ್‌ಎಫ್‌ಅನ್ನು ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಸಜ್ಜುಗೊಳಿಸಿದೆ ಮತ್ತು ಇತ್ತೀಚಿನ ತಾಂತ್ರಿಕ ಪ್ರಗತಿಯೊಂದಿಗೆ ಪಡೆಗೆ ನಿರಂತರವಾಗಿ ಒದಗಿಸುತ್ತಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಅನೇಕ ವಿಮಾನ ನಿಲ್ದಾಣಗಳಲ್ಲಿ‘ಡಿಜಿ ಯಾತ್ರಾ’ ಅನ್ನು ಜಾರಿಗೆ ತರಲಾಗಿದೆ, ಇದು ಭದ್ರತಾ ತಪಾಸಣೆಗೆ ಅಗತ್ಯವಿರುವ ಸಮಯವನ್ನು ಗಮನಾರ್ಹವಾಗಿ ಕಡಿಮೆ ಮಾಡಿದೆ ಎಂದು ಅವರು ಉಲ್ಲೇಖಿಸಿದರು. ಸಿಐಎಸ್‌ಎಫ್ ವಿಮಾನ ನಿಲ್ದಾಣ ಭದ್ರತೆಯಲ್ಲಿಅಂತಾರಾಷ್ಟ್ರೀಯ ಮಾನದಂಡಗಳನ್ನು ಅಳವಡಿಸಿಕೊಂಡಿದೆ ಮಾತ್ರವಲ್ಲದೆ, ಈ ನಿಟ್ಟಿನಲ್ಲಿ ದಾಖಲೆಗಳನ್ನು ಸ್ಥಾಪಿಸಲು ಬಹಳ ಹತ್ತಿರದಲ್ಲಿದೆ. ಆಂತರಿಕ ಗುಣಮಟ್ಟ ನಿಯಂತ್ರಣ ಘಟಕವನ್ನು ಸಹ ಸ್ಥಾಪಿಸಲಾಗಿದೆ, ಅದರ ಮೂಲಕ ನಿರಂತರ ತರಬೇತಿಯು ಉನ್ನತ ಭದ್ರತಾ ಮಾನದಂಡಗಳ ನಿರ್ವಹಣೆಯನ್ನು ಖಚಿತಪಡಿಸುತ್ತದೆ ಎಂದು ಅವರು ಉಲ್ಲೇಖಿಸಿದರು. ಸಿಐಎಸ್‌ಎಫ್ ಡ್ರೋನ್ ವಿರೋಧ ಸಾಮರ್ಥ್ಯಗಳಿಗಾಗಿ ವಿಶೇಷ ತರಬೇತಿ ಕೇಂದ್ರವನ್ನು ಸ್ಥಾಪಿಸಿದೆ. ಉತ್ತರ ಪ್ರದೇಶದ ಜೇವರ್ ವಿಮಾನ ನಿಲ್ದಾಣ ಮತ್ತು ಮಹಾರಾಷ್ಟ್ರದ ನವೀ ಮುಂಬೈ ವಿಮಾನ ನಿಲ್ದಾಣವನ್ನು ಶೀಘ್ರದಲ್ಲೇ ಸಿಐಎಸ್‌ಎಫ್ ಭದ್ರತೆಯಡಿ ಸೇರಿಸಲಾಗುವುದು ಎಂದು ಶ್ರೀ ಅಮಿತ್ ಶಾ ಉಲ್ಲೇಖಿಸಿದರು. ಇದಕ್ಕಾಗಿ, ಗೃಹ ಸಚಿವಾಲಯವು ಕಳೆದ ವರ್ಷ ಮೂರು ಹೊಸ ಬೆಟಾಲಿಯನ್‌ಗಳ ಸ್ಥಾಪನೆಗೆ ಅನುಮೋದನೆ ನೀಡಿತು, ಅವುಗಳಲ್ಲಿಒಂದು ಸಂಪೂರ್ಣವಾಗಿ ಮಹಿಳಾ ಬೆಟಾಲಿಯನ್ ಆಗಿರುತ್ತದೆ.
ದೇಶವನ್ನು ರಕ್ಷಿಸುವಲ್ಲಿಸರ್ವೋಚ್ಚ ತ್ಯಾಗ ಮಾಡಿದ 127 ಸಿಐಎಸ್‌ಎಫ್ ಸಿಬ್ಬಂದಿಗೆ ಗೌರವ ಸಲ್ಲಿಸಿದ ಗೃಹ ಸಚಿವರು, ಈ 127 ಸಿಬ್ಬಂದಿ ವಿವಿಧ ಭಾಗಗಳಲ್ಲಿ ಭದ್ರತೆಯ ಜವಾಬ್ದಾರಿಯನ್ನು ನಿರ್ವಹಿಸುವಾಗ ತಮ್ಮ ಸರ್ವೋಚ್ಚ ತ್ಯಾಗ ಮಾಡಿದ್ದಾರೆ ಎಂದು ಹೇಳಿದರು. ಈ ಯೋಧರ ಕುಟುಂಬ ಸದಸ್ಯರಿಗೆ ಅವರ ಕುಟುಂಬ ಸದಸ್ಯರ ತ್ಯಾಗದಿಂದಾಗಿಯೇ ದೇಶವು ಇಂದು ಉನ್ನತ ಮಟ್ಟದೊಂದಿಗೆ ವಿಶ್ವದ ಮುಂದೆ ನಿಂತಿದೆ ಎಂದು ಅವರು ಹೇಳಿದರು.

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಸಿಐಎಸ್‌ಎಫ್‌ನ ವಾರ್ಷಿಕ ನಿಯತಕಾಲಿಕ ಸೆಂಟಿನೆಲ್‌ಗೆ ಚಾಲನೆ ನೀಡಿದರು. 10 ಸಿಬ್ಬಂದಿಗೆ ರಾಷ್ಟ್ರಪತಿಗಳ ಪೊಲೀಸ್ ಪದಕ, ಇಬ್ಬರು ಸಿಬ್ಬಂದಿಗೆ ಜೀವನ್ ರಕ್ಷಾ ಪದಕ ಮತ್ತು 10 ಸಿಬ್ಬಂದಿಗೆ ಶೌರ್ಯ ಪದಕ ನೀಡಿ ಗೌರವಿಸಲಾಯಿತು. ಈ ಎಲ್ಲಸಿಬ್ಬಂದಿ ಸಿಐಎಸ್‌ಎಫ್‌ನ ಅತ್ಯುತ್ತಮ ಸಂಪ್ರದಾಯಗಳನ್ನು ಮುನ್ನಡೆಸಿದ್ದಾರೆ ಎಂದು ಶ್ರೀ ಅಮಿತ್ ಶಾ ಹೇಳಿದ್ದಾರೆ. ಸಿಐಎಸ್‌ಎಫ್ ಸಿಬ್ಬಂದಿಯ ಆರೋಗ್ಯ, ಸುಗಮ ಕರ್ತವ್ಯ ಕಾರ್ಯಕ್ಷಮತೆ ಮತ್ತು ಸೌಲಭ್ಯಗಳನ್ನು ಸುಧಾರಿಸಲು 88 ಕೋಟಿ ರೂ.ಗಳ ಆರು ವಿಭಿನ್ನ ಮೂಲಸೌಕರ್ಯ ಮತ್ತು ಅಭಿವೃದ್ಧಿ ಯೋಜನೆಗಳಿಗೆ ಕೇಂದ್ರ ಗೃಹ ಸಚಿವರು ಶಂಕುಸ್ಥಾಪನೆ ನೆರವೇರಿಸಿದರು. ಎಸ್.ಎಸ್.ಜಿ. ನೋಯ್ಡಾದಲ್ಲಿ ಹೊಸದಾಗಿ ನಿರ್ಮಿಸಲಾದ ಜಿಮ್ ಮತ್ತು ಪಪ್ ಹಾಲ್‌ಅನ್ನು ಅವರು ಉದ್ಘಾಟಿಸಿದರು.
ಕೇಂದ್ರ ಗೃಹ ಸಚಿವರು ಸಿಐಎಸ್‌ಎಫ್ ಸೈಕ್ಲೋಥಾನ್ 2025ಕ್ಕೆ ವರ್ಚುವಲ್ ಮೂಲಕ ಚಾಲನೆ ನೀಡಿದರು. ಈ ಸೈಕಲ್ ಜಾಥಾ ದೇಶದ ಕರಾವಳಿಯ ಪ್ರತಿಯೊಂದು ಗ್ರಾಮವನ್ನು ಒಳಗೊಂಡು ಕನ್ಯಾಕುಮಾರಿಯ ವಿವೇಕಾನಂದ ರಾಕ್ ಮೆಮೋರಿಯಲ್ ತಲುಪಲಿದೆ ಎಂದು ಅವರು ಹೇಳಿದರು. ಈ ಪ್ರಯಾಣದಲ್ಲಿ, ನಮ್ಮ ಸಿಬ್ಬಂದಿ ಕರಾವಳಿ ಹಳ್ಳಿಗಳಲ್ಲಿಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸುವುದಲ್ಲದೆ, ಗ್ರಾಮಸ್ಥರಿಗೆ ಅಭಿವೃದ್ಧಿಯ ಬಗ್ಗೆ ಮಾಹಿತಿ ನೀಡುತ್ತಾರೆ. ಹೆಚ್ಚುವರಿಯಾಗಿ, ಸಿಐಎಸ್‌ಎಫ್ ಸಿಬ್ಬಂದಿ ಭದ್ರತೆ ಮತ್ತು ಗ್ರಾಮ ಅಭಿವೃದ್ಧಿಗೆ ಸಂಬಂಧಿಸಿದ ಸಲಹೆಗಳನ್ನು ಸಂಗ್ರಹಿಸುತ್ತಾರೆ. ಸಿಬ್ಬಂದಿ ಒದಗಿಸುವ ‘ಗ್ರೌಂಡ್ ಝೀರೋ ಇನ್ಪುಟ್’ ಈ ಕರಾವಳಿ ಹಳ್ಳಿಗಳಲ್ಲಿಉತ್ತಮ ಸೌಲಭ್ಯಗಳು ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಕೇಂದ್ರ ಗೃಹ ಸಚಿವರು ಒತ್ತಿ ಹೇಳಿದರು.

ಕಳೆದ ಐದು ವರ್ಷಗಳಲ್ಲಿಸಿಐಎಸ್‌ಎಫ್ ಐದು ಲಕ್ಷಕ್ಕೂ ಹೆಚ್ಚು ಸಸಿಗಳನ್ನು ನೆಟ್ಟಿದೆ ಮತ್ತು ಮುಂದಿನ ವರ್ಷಕ್ಕೆ ಮೂರು ಲಕ್ಷಕ್ಕೂ ಹೆಚ್ಚು ಸಸಿಗಳನ್ನು ನೆಡುವ ಗುರಿಯನ್ನು ನಿಗದಿಪಡಿಸಲಾಗಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪ್ರಾರಂಭಿಸಿದ ‘ಏಕ್ ಪೆಡ್ ಮಾ ಕೆ ನಾಮ್’ ಅಭಿಯಾನದ ಅಡಿಯಲ್ಲಿ, ಪ್ರತಿಯೊಬ್ಬ ಸಿಐಎಸ್‌ಎಫ್ ಸಿಬ್ಬಂದಿ ತಮ್ಮ ತಾಯಂದಿರಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಲು ಒಂದು ಸಸಿಯನ್ನು ನೆಡಲಿದ್ದಾರೆ ಎಂದು ಅವರು ಉಲ್ಲೇಖಿಸಿದರು. ಎಲ್ಲಾ ಸಿಐಎಸ್‌ಎಫ್ ಸಿಬ್ಬಂದಿಗೆ ತಮ್ಮ ದೈನಂದಿನ ದಿನಚರಿಯಲ್ಲಿ ಯೋಗಾಭ್ಯಾಸವನ್ನು ಸೇರಿಸುವಂತೆ ಶ್ರೀ ಅಮಿತ್ ಶಾ ಮನವಿ ಮಾಡಿದರು. ಆಯುಷ್ಮಾನ್ ಸಿಎಪಿಎಫ್ ಯೋಜನೆಯಡಿ 31 ಲಕ್ಷಕ್ಕೂ ಹೆಚ್ಚು ಕಾರ್ಡ್‌ಗಳ ವಿತರಣೆ ಸೇರಿದಂತೆ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (ಸಿಎಪಿಎಫ್) ಸಿಬ್ಬಂದಿಯ ಕಲ್ಯಾಣಕ್ಕಾಗಿ ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಅವರು ಉಲ್ಲೇಖಿಸಿದರು. ಹೆಚ್ಚುವರಿಯಾಗಿ, 13,000 ಮನೆಗಳು ಮತ್ತು 113 ಬ್ಯಾರಕ್‌ಗಳನ್ನು ನಿರ್ಮಿಸಲಾಗಿದೆ ಮತ್ತು ಇ-ಹೌಸಿಂಗ್ ಪೋರ್ಟಲ್ ಅಡಿಯಲ್ಲಿ, ಯಾವುದೇ ವಸತಿ ಖಾಲಿ ಉಳಿದಿಲ್ಲ ಎಂದು ಖಚಿತಪಡಿಸಲಾಗಿದೆ. ಮಹಿಳಾ ಸಿಬ್ಬಂದಿಗಾಗಿ ವಿಶೇಷ ಬ್ಯಾರಕ್‌ಗಳನ್ನು ರಚಿಸಲಾಗಿದೆ ಮತ್ತು ಪರಿಹಾರ ಮೊತ್ತವನ್ನು ಸಹ ಹೆಚ್ಚಿಸಲಾಗಿದೆ ಎಂದು ಶ್ರೀ ಅಮಿತ್ ಶಾ ಹೇಳಿದ್ದಾರೆ. ಕೇಂದ್ರ ಪೊಲೀಸ್ ಕಲ್ಯಾಣ ಮಳಿಗೆಗಳಲ್ಲಿದೇಶೀಯ ಉತ್ಪನ್ನಗಳ ಮಾರಾಟವನ್ನು ಉತ್ತೇಜಿಸಲಾಗುತ್ತಿದೆ ಮತ್ತು 2024 ರ ಏಪ್ರಿಲ್ 1, ರಿಂದ ಜಿಎಸ್‌ಟಿಯಲ್ಲಿ ಶೇಕಡಾ 50 ರಷ್ಟು ರಿಯಾಯಿತಿ ನೀಡಲಾಗುತ್ತಿದೆ ಎಂದು ಅವರು ಹೇಳಿದರು.
*****
(Release ID: 2109188)
Visitor Counter : 20