ಪ್ರಧಾನ ಮಂತ್ರಿಯವರ ಕಛೇರಿ
ಎನ್ಎಕ್ಸ್ ಟಿ ಸಮಾವೇಶ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ
Posted On:
01 MAR 2025 2:03PM by PIB Bengaluru
ನಮಸ್ಕಾರ,
ಐಟಿವಿ ನೆಟ್‌ವರ್ಕ್ ಸಂಸ್ಥಾಪಕ ಮತ್ತು ಸಂಸತ್ತಿನ ನನ್ನ ಸಹೋದ್ಯೋಗಿ ಕಾರ್ತಿಕೇಯ ಶರ್ಮಾ ಜಿ, ಇಲ್ಲಿರುವ ನೆಟ್‌ವರ್ಕ್‌ನ ಸಂಪೂರ್ಣ ತಂಡ, ಭಾರತ ಮತ್ತು ವಿದೇಶಗಳಿಂದ ಬಂದಿರುವ ಎಲ್ಲಾ ಅತಿಥಿಗಳೆ, ಇತರೆ ಗಣ್ಯರೆ, ಮಹಿಳೆಯರೆ ಮತ್ತು ಮಹನೀಯರೆ,
ನ್ಯೂಸ್ಎಕ್ಸ್ ವರ್ಲ್ಡ್‌ನ ಶುಭಾರಂಭಕ್ಕಾಗಿ ನಾನು ನಿಮ್ಮೆಲ್ಲರನ್ನು ಅಭಿನಂದಿಸುತ್ತೇನೆ, ನನ್ನ ಶುಭಾಶಯಗಳು. ಇಂದು ಹಿಂದಿ ಮತ್ತು ಇಂಗ್ಲಿಷ್ ಸೇರಿದಂತೆ ನಿಮ್ಮ ನೆಟ್‌ವರ್ಕ್‌ನ ಎಲ್ಲಾ ಪ್ರಾದೇಶಿಕ ವಾಹಿನಿಗಳು ಜಾಗತಿಕವಾಗಿ ಬೆಳೆಯುತ್ತಿವೆ, ಇಂದು ಅನೇಕ ಫೆಲೋಶಿಪ್‌ಗಳು ಮತ್ತು ವಿದ್ಯಾರ್ಥಿವೇತನಗಳನ್ನು ಸಹ ಪ್ರಾರಂಭಿಸಲಾಗಿದೆ. ಈ ಎಲ್ಲಾ ಕಾರ್ಯಕ್ರಮಗಳಿಗಾಗಿ ನಿಮ್ಮೆಲ್ಲರಿಗೂ ನಾನು ಶುಭ ಹಾರೈಸುತ್ತೇನೆ.
ಸ್ನೇಹಿತರೆ,
ನಾನು ಈ ಹಿಂದೆಯೂ ಇಂತಹ ಮಾಧ್ಯಮ ಕಾರ್ಯಕ್ರಮಗಳಿಗೆ ಹಾಜರಾಗಿದ್ದೇನೆ, ಆದರೆ ಇಂದು ನೀವು ಹೊಸ ಪ್ರವೃತ್ತಿಯನ್ನು ಸೃಷ್ಟಿಸಿದ್ದೀರಿ ಎಂದು ನನಗೆ ಅನಿಸುತ್ತಿದೆ, ಇದಕ್ಕಾಗಿ ನಾನು ನಿಮ್ಮನ್ನು ಅಭಿನಂದಿಸುತ್ತೇನೆ. ನಮ್ಮ ದೇಶದಲ್ಲಿ ಇಂತಹ ಮಾಧ್ಯಮ ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತವೆ, ಅದು ಮುಂದುವರಿಯುತ್ತಿರುವ ಸಂಪ್ರದಾಯವಾಗಿದೆ. ಅದರಲ್ಲಿ ಕೆಲವು ಆರ್ಥಿಕ ವಿಷಯಗಳಿವೆ, ಇದು ಎಲ್ಲರಿಗೂ ಪ್ರಯೋಜನಕಾರಿ ವಿಷಯವಾಗಿದೆ, ಆದರೆ ನಿಮ್ಮ ನೆಟ್‌ವರ್ಕ್ ಅದಕ್ಕೆ ಹೊಸ ಆಯಾಮ ನೀಡಿದೆ. ನೀವು ರೂಢಿಯಿಂದ ದೂರ ಸರಿದು ಹೊಸ ಮಾದರಿಯಲ್ಲಿ ಕೆಲಸ ಮಾಡಿದ್ದೀರಿ. ನನಗೆ ನೆನಪಿದೆ, ನಿನ್ನೆಯಿಂದ ನಾನು ಕೇಳುತ್ತಿರುವ ಹಿಂದಿನ ಶೃಂಗಸಭೆಗಳು ಮತ್ತು ವಿವಿಧ ಮಾಧ್ಯಮ ಸಂಸ್ಥೆಗಳು ಆಯೋಜಿಸಿರುವ ಹಿಂದಿನ ಶೃಂಗಸಭೆಗಳು ನಾಯಕ-ಕೇಂದ್ರಿತವಾಗಿವೆ, ಇದು ನೀತಿ-ಕೇಂದ್ರಿತವಾಗಿದೆ ಎಂಬುದರಿಂದ ನನಗೆ ಸಂತೋಷವಾಗಿದೆ, ನೀತಿಗಳನ್ನು ಇಲ್ಲಿ ಚರ್ಚಿಸಲಾಗುತ್ತಿದೆ. ನಡೆದ ಹೆಚ್ಚಿನ ಘಟನೆಗಳು ಭೂತಕಾಲದ ಆಧಾರದ ಮೇಲೆ ವರ್ತಮಾನವನ್ನು ಬದುಕುವ ಬಗ್ಗೆ. ನಿಮ್ಮ ಶೃಂಗಸಭೆ ಭವಿಷ್ಯಕ್ಕೆ ಮೀಸಲಾಗಿರುವುದನ್ನು ನಾನು ನೋಡುತ್ತೇನೆ. ನಾನು ದೂರದಿಂದ ನೋಡಿದ ಅಥವಾ ಸ್ವತಃ ಭಾಗವಹಿಸಿದ ಅಂತಹ ಎಲ್ಲಾ ಕಾರ್ಯಕ್ರಮಗಳಲ್ಲಿ, ವಿವಾದದ ಮಹತ್ವ ಹೆಚ್ಚಾಗಿತ್ತು, ಆದರೆ ಇಲ್ಲಿ ಸಂವಾದದ ಮಹತ್ವ ಹೆಚ್ಚಾಗಿದೆ. ನಾನು ಭಾಗವಹಿಸಿದ ಎಲ್ಲಾ ಕಾರ್ಯಕ್ರಮಗಳು ಒಂದು ಸಣ್ಣ ಕೋಣೆಯಲ್ಲಿ ನಡೆಯುತ್ತವೆ, ಅವುಗಳಲ್ಲಿ ಸ್ವಂತ ಜನರಿರುತ್ತಾರೆ ಎಂದು ನಾನು ದೃಢವಾಗಿ ನಂಬುತ್ತೇನೆ. ಇಲ್ಲಿ ಇಷ್ಟು ದೊಡ್ಡ ಕಾರ್ಯಕ್ರಮ ನೋಡುವುದು, ಅದರಲ್ಲಿಯೂ ಒಂದು ಮಾಧ್ಯಮ ಸಂಸ್ಥೆ ಮತ್ತು ಎಲ್ಲಾ ವರ್ಗದ ಜನರು ಇಲ್ಲಿ ಇರುವುದು ದೊಡ್ಡ ವಿಷಯ. ಇತರೆ ಮಾಧ್ಯಮದವರಿಗೆ ಇಲ್ಲಿಂದ ಯಾವುದೇ ಮಸಾಲೆ(ಸ್ಕೂಪ್) ಸಿಗದಿರಬಹುದು, ಆದರೆ ದೇಶವು ಬಹಳಷ್ಟು ಸ್ಫೂರ್ತಿ ಪಡೆಯುತ್ತದೆ, ಏಕೆಂದರೆ ಇಲ್ಲಿಗೆ ಬರುವ ಪ್ರತಿಯೊಬ್ಬ ವ್ಯಕ್ತಿಯ ಆಲೋಚನೆಗಳು ದೇಶವನ್ನು ಪ್ರೇರೇಪಿಸುವ ಆಲೋಚನೆಗಳಾಗಿರುತ್ತವೆ. ಮುಂಬರುವ ದಿನಗಳಲ್ಲಿ ಇತರ ಮಾಧ್ಯಮ ಸಂಸ್ಥೆಗಳು ಸಹ ಈ ಪ್ರವೃತ್ತಿಯನ್ನು, ಈ ಟೆಂಪ್ಲೇಟ್ ಅನ್ನು ತಮ್ಮದೇ ಆದ ರೀತಿಯಲ್ಲಿ ಅಳವಡಿಸಿಕೊಳ್ಳುತ್ತವೆ ಮತ್ತು ಅದನ್ನು ನವೀನಗೊಳಿಸುತ್ತವೆ ಮತ್ತು ಕನಿಷ್ಠ ಆ ಸಣ್ಣ ಕೋಣೆಯಿಂದ ಹೊರಬರುತ್ತವೆ ಎಂದು ನಾನು ಭಾವಿಸುತ್ತೇನೆ.
ಸ್ನೇಹಿತರೆ,
ಇಂದು ಇಡೀ ಜಗತ್ತು 21ನೇ ಶತಮಾನದ ಭಾರತವನ್ನು ನೋಡುತ್ತಿದೆ, ವಿಶ್ವಾದ್ಯಂತದ ಜನರು ಭಾರತಕ್ಕೆ ಬರಲು ಬಯಸುತ್ತಾರೆ, ಭಾರತವನ್ನು ತಿಳಿದುಕೊಳ್ಳಲು ಬಯಸುತ್ತಾರೆ. ಇಂದು ಭಾರತವು ನಿರಂತರವಾಗಿ ಸಕಾರಾತ್ಮಕ ಸುದ್ದಿಗಳನ್ನು ಸೃಷ್ಟಿಸುತ್ತಿರುವ ದೇಶವಾಗಿದೆ. ಸುದ್ದಿಗಳನ್ನು ತಯಾರಿಸುವ ಅಗತ್ಯವಿಲ್ಲ, ಪ್ರತಿದಿನ ಹೊಸ ದಾಖಲೆಗಳನ್ನು ಮಾಡಲಾಗುತ್ತಿದೆ, ಹೊಸದೇನಾದರೂ ನಡೆಯುತ್ತಿದೆ. ಫೆಬ್ರವರಿ 26ರಂದು ಪ್ರಯಾಗರಾಜ್‌ನಲ್ಲಿ ಏಕತೆಯ ಮಹಾಕುಂಭ ಮುಕ್ತಾಯವಾಯಿತು. ತಾತ್ಕಾಲಿಕ ನಗರದಲ್ಲಿ, ತಾತ್ಕಾಲಿಕ ವ್ಯವಸ್ಥೆಯಲ್ಲಿ, ಕೋಟ್ಯಂತರ ಜನರು ನದಿಯ ದಡಕ್ಕೆ ಹೇಗೆ ಬಂದರು, ನೂರಾರು ಕಿಲೋಮೀಟರ್ ಪ್ರಯಾಣಿಸಿದರು ಮತ್ತು ಪವಿತ್ರ ಸ್ನಾನ ಮಾಡಿದ ನಂತರ ಅಪಾರ ಭಾವನೆಗಳಿಂದ ತುಂಬಿದರು ಎಂಬುದನ್ನು ನೋಡಿ ಇಡೀ ಜಗತ್ತು ಆಶ್ಚರ್ಯಚಕಿತವಾಗಿದೆ. ಇಂದು ಜಗತ್ತು ಭಾರತದ ಸಂಘಟನಾ ಮತ್ತು ನವೀನ ಕೌಶಲ್ಯಗಳನ್ನು ನೋಡುತ್ತಿದೆ. ನಾವು ಸೆಮಿಕಂಡಕ್ಟರ್‌ಗಳಿಂದ ಹಿಡಿದು ವಿಮಾನ ವಾಹಕಗಳವರೆಗೆ ಎಲ್ಲವನ್ನೂ ಇಲ್ಲಿಯೇ ತಯಾರಿಸುತ್ತಿದ್ದೇವೆ. ಭಾರತದ ಈ ಯಶಸ್ಸಿನ ಬಗ್ಗೆ ಜಗತ್ತು ವಿವರವಾಗಿ ತಿಳಿದುಕೊಳ್ಳಲು ಬಯಸುತ್ತದೆ. ಈ ನ್ಯೂಸ್ಎಕ್ಸ್ ವರ್ಲ್ಡ್ ಸ್ವತಃ ಇದಕ್ಕೆ ಒಂದು ದೊಡ್ಡ ಅವಕಾಶ ಎಂದು ನಾನು ಭಾವಿಸುತ್ತೇನೆ.
ಸ್ನೇಹಿತರೆ,
ಕೆಲವೇ ತಿಂಗಳ ಹಿಂದೆ, ಭಾರತವು ವಿಶ್ವದ ಅತಿದೊಡ್ಡ ಚುನಾವಣೆಗಳನ್ನು ನಡೆಸಿತು. 60 ವರ್ಷಗಳ ನಂತರ, ಭಾರತದಲ್ಲಿ ಸರ್ಕಾರ ಸತತ 3ನೇ ಬಾರಿಗೆ ಅಧಿಕಾರಕ್ಕೆ ಬಂದಿದೆ. ಕಳೆದ 11 ವರ್ಷಗಳಲ್ಲಿ ಭಾರತದ ಅನೇಕ ಸಾಧನೆಗಳೇ ಈ ಸಾರ್ವಜನಿಕ ನಂಬಿಕೆಯ ಆಧಾರವಾಗಿದೆ. ನಿಮ್ಮ ಹೊಸ ಚಾನಲ್ ಭಾರತದ ನೈಜ ಕಥೆಗಳನ್ನು ಜಗತ್ತಿಗೆ ಕೊಂಡೊಯ್ಯುತ್ತದೆ ಎಂಬ ವಿಶ್ವಾಸ ನನಗಿದೆ. ಯಾವುದೇ ಬಣ್ಣವನ್ನು ಸೇರಿಸದೆ, ನಿಮ್ಮ ಜಾಗತಿಕ ಚಾನಲ್ ಭಾರತದ ವಾಸ್ತವ ಚಿತ್ರವನ್ನು ಹಾಗೆಯೇ ತೋರಿಸುತ್ತದೆ, ನಮಗೆ ಮೇಕಪ್ ಅಗತ್ಯವಿಲ್ಲ.
ಸ್ನೇಹಿತರೆ,
ಹಲವು ವರ್ಷಗಳ ಹಿಂದೆ, ನಾನು ವೋಕಲ್ ಫಾರ್ ಲೋಕಲ್ ಮತ್ತು ಲೋಕಲ್ ಫಾರ್ ಗ್ಲೋಬಲ್‌ನ ದೃಷ್ಟಿಕೋನವನ್ನು ದೇಶಕ್ಕೆ ಪ್ರಸ್ತುತಪಡಿಸಿದ್ದೆ. ಇಂದು ನಾವು ಈ ದೃಷ್ಟಿಕೋನವು ವಾಸ್ತವಕ್ಕೆ ತಿರುಗುತ್ತಿರುವುದನ್ನು ನೋಡುತ್ತಿದ್ದೇವೆ. ಇಂದು ನಮ್ಮ ಆಯುಷ್ ಉತ್ಪನ್ನಗಳು ಮತ್ತು ಯೋಗವು ಸ್ಥಳೀಯದಿಂದ ಜಾಗತಿಕ ಮಟ್ಟಕ್ಕೆ ಹೋಗಿದೆ. ಜಗತ್ತಿನ ಎಲ್ಲಿಗಾದರೂ ಹೋಗಿ, ಯೋಗ ತಿಳಿದಿರುವ ಯಾರನ್ನಾದರೂ ನೀವು ಕಾಣುತ್ತೀರಿ, ನನ್ನ ಸ್ನೇಹಿತ ಟೋನಿ ಇಲ್ಲಿ ಕುಳಿತಿದ್ದಾರೆ, ಅವರು ದೈನಂದಿನ ಯೋಗಾಭ್ಯಾಸ ಮಾಡುವವರು. ಇಂದು, ಭಾರತದ ಉತ್ಕೃಷ್ಟ ಆಹಾರ ನಮ್ಮ ತಾವರೆಬೀಜ(ಮಖಾನಾ), ಸ್ಥಳೀಯದಿಂದ ಜಾಗತಿಕ ಮಟ್ಟಕ್ಕೆ ಹೋಗುತ್ತಿದೆ. ಭಾರತದ ಧಾನ್ಯಗಳು – ಶ್ರೀಅನ್ನ(ಸಿರಿಧಾನ್ಯ) ಕೂಡ ಸ್ಥಳೀಯದಿಂದ ಜಾಗತಿಕ ಮಟ್ಟಕ್ಕೆ ಹೋಗುತ್ತಿವೆ. ನನ್ನ ಸ್ನೇಹಿತ ಟೋನಿ ಅಬಾಟ್ ದೆಹಲಿ ಹಾತ್‌ನಲ್ಲಿ ಭಾರತೀಯ ಸಿರಿಧಾನ್ಯಗಳ ನೇರ ಅನುಭವವನ್ನು ಹೊಂದಿದ್ದಾರೆ ಎಂಬುದು ನನಗೆ ತಿಳಿದುಬಂದಿದೆ, ಅವರು ಸಿರಿಧಾನ್ಯ ಭಕ್ಷ್ಯಗಳನ್ನು ತುಂಬಾ ಇಷ್ಟಪಟ್ಟಿದ್ದಾರೆ ಎಂಬುದನ್ನು ಕೇಳಿದಾಗ ನನಗೆ ತುಂಬಾ ಸಂತೋಷವಾಯಿತು.
ಸಿರಿಧಾನ್ಯಗಳು ಮಾತ್ರವಲ್ಲ, ಭಾರತದ ಅರಿಶಿನವು ಸ್ಥಳೀಯದಿಂದ ಜಾಗತಿಕಕ್ಕೆ ಹೋಗಿದೆ, ಭಾರತವು ವಿಶ್ವದ ಅರಿಶಿನದ 60 ಪ್ರತಿಶತಕ್ಕಿಂತ ಹೆಚ್ಚು ಪೂರೈಸುತ್ತದೆ. ಭಾರತದ ಕಾಫಿ ಸ್ಥಳೀಯದಿಂದ ಜಾಗತಿಕಕ್ಕೆ ಹೋಗಿದೆ, ಭಾರತವು ವಿಶ್ವದ 7ನೇ ಅತಿದೊಡ್ಡ ಕಾಫಿ ರಫ್ತುದಾರ ರಾಷ್ಟ್ರವಾಗಿದೆ. ಇಂದು ಭಾರತದ ಮೊಬೈಲ್‌ಗಳು, ಎಲೆಕ್ಟ್ರಾನಿಕ್ ಉತ್ಪನ್ನಗಳು, ಭಾರತದಲ್ಲಿ ತಯಾರಾದ ಔಷಧಿಗಳು ತಮ್ಮ ಜಾಗತಿಕ ಹೆಜ್ಜೆಗುರುತು ರೂಪಿಸುತ್ತಿವೆ. ಇದೆಲ್ಲದರ ಜತೆಗೆ, ಇನ್ನೂ ಒಂದು ವಿಷಯ ಸಂಭವಿಸಿದೆ. ಭಾರತವು ಅನೇಕ ಜಾಗತಿಕ ಉಪಕ್ರಮಗಳನ್ನು ಮುನ್ನಡೆಸುತ್ತಿದೆ. ಇತ್ತೀಚೆಗೆ ನನಗೆ ಫ್ರಾನ್ಸ್‌ನಲ್ಲಿ ನಡೆದ “ಎಐ ಆಕ್ಷನ್ ಶೃಂಗಸಭೆ”ಗೆ ಹೋಗಲು ಅವಕಾಶ ಸಿಕ್ಕಿತು. ಭಾರತವು ಈ ಶೃಂಗಸಭೆಯ ಸಹ-ಆತಿಥ್ಯ ವಹಿಸಿಕೊಂಡಿತ್ತು. ಇದು ಜಗತ್ತನ್ನು ಎಐ ಭವಿಷ್ಯದತ್ತ ಕೊಂಡೊಯ್ಯುತ್ತಿದೆ. ಈಗ ಭಾರತವು ಅದನ್ನು ಆಯೋಜಿಸುವ ಜವಾಬ್ದಾರಿ ಹೊಂದಿದೆ. ಭಾರತವು ತನ್ನ ಅಧ್ಯಕ್ಷತೆಯಲ್ಲಿ ಅಂತಹ ಅದ್ಭುತವಾದ ಜಿ-20 ಶೃಂಗಸಭೆಯನ್ನು ಆಯೋಜಿಸಿತು. ಈ ಶೃಂಗಸಭೆಯ ಸಮಯದಲ್ಲಿ, ನಾವು ಭಾರತ-ಮಧ್ಯಪ್ರಾಚ್ಯ-ಯುರೋಪ್ ಕಾರಿಡಾರ್ ರೂಪದಲ್ಲಿ ಜಗತ್ತಿಗೆ ಹೊಸ ಆರ್ಥಿಕ ಮಾರ್ಗ ನೀಡಿದ್ದೇವೆ. ಜಾಗತಿಕ ದಕ್ಷಿಣಕ್ಕೆ ಭಾರತವೂ ಬಲವಾದ ಧ್ವನಿಯನ್ನು ನೀಡಿತು, ದ್ವೀಪ ರಾಷ್ಟ್ರಗಳು ಮತ್ತು ಅವುಗಳ ಹಿತಾಸಕ್ತಿಗಳನ್ನು ನಾವು ನಮ್ಮ ಆದ್ಯತೆಗೆ ಸಂಪರ್ಕಿಸಿದ್ದೇವೆ. ಹವಾಮಾನ ಬಿಕ್ಕಟ್ಟು ಎದುರಿಸಲು ಭಾರತವು ಮಿಷನ್ ಲೈಫ್‌ನ ದೃಷ್ಟಿಕೋನವನ್ನು ಜಗತ್ತಿಗೆ ನೀಡಿದೆ. ಅದೇ ರೀತಿ, ಅಂತಾರಾಷ್ಟ್ರೀಯ ಸೌರ ಮೈತ್ರಿಕೂಟ, ವಿಪತ್ತು ನಿರ್ವಹಣೆಯ ಮೂಲಸೌಕರ್ಯ ಒಕ್ಕೂಟ, ಈ ರೀತಿ ಭಾರತವು ಜಾಗತಿಕವಾಗಿ ಮುನ್ನಡೆಸುತ್ತಿರುವ ಅನೇಕ ಉಪಕ್ರಮಗಳಿವೆ. ಇಂದು ಭಾರತದ ಅನೇಕ ಬ್ರ್ಯಾಂಡ್‌ಗಳು ಜಾಗತಿಕವಾಗಿ ಸಾಗುತ್ತಿರುವಾಗ, ಭಾರತದ ಮಾಧ್ಯಮವೂ ಜಾಗತಿಕವಾಗಿ ಸಾಗುತ್ತಿದೆ ಎಂಬುದರಿಂದ ನನಗೆ ಸಂತೋಷವಾಗಿದೆ. ಅದು ಈ ಜಾಗತಿಕ ಅವಕಾಶವನ್ನು ಅರ್ಥ ಮಾಡಿಕೊಳ್ಳುತ್ತಿದೆ.
ದಶಕಗಳಿಂದಲೂ, ಜಗತ್ತು ಭಾರತವನ್ನು ತನ್ನ ಬ್ಯಾಕ್ ಆಫೀಸ್ ಎಂದು ಕರೆಯುತ್ತಿತ್ತು. ಆದರೆ ಇಂದು, ಭಾರತವು ವಿಶ್ವದ ಹೊಸ ಕಾರ್ಖಾನೆಯಾಗುತ್ತಿದೆ. ನಾವು ಕೇವಲ ಕಾರ್ಯಪಡೆಯಲ್ಲ, ಬದಲಾಗಿ ವಿಶ್ವ ಶಕ್ತಿಯಾಗುತ್ತಿದ್ದೇವೆ! ಇಂದು ದೇಶವು ನಾವು ಒಮ್ಮೆ ಆಮದು ಮಾಡಿಕೊಳ್ಳುತ್ತಿದ್ದ ವಸ್ತುಗಳಿಗೆ ಉದಯೋನ್ಮುಖ ರಫ್ತು ಕೇಂದ್ರವಾಗುತ್ತಿದೆ. ಒಂದು ಕಾಲದಲ್ಲಿ ಸ್ಥಳೀಯ ಮಾರುಕಟ್ಟೆಗೆ ಸೀಮಿತವಾಗಿದ್ದ ರೈತ, ಇಂದು ಅವನ ಬೆಳೆ ಇಡೀ ಪ್ರಪಂಚದ ಮಾರುಕಟ್ಟೆಗಳನ್ನು ತಲುಪುತ್ತಿದೆ. ಪುಲ್ವಾಮಾದ ಸ್ನೋ ಪೀಸ್, ಮಹಾರಾಷ್ಟ್ರದ ಪುರಂದರ ಅಂಜೂರ ಮತ್ತು ಕಾಶ್ಮೀರದ ಕ್ರಿಕೆಟ್ ಬ್ಯಾಟ್‌ಗಳಿಗೆ ಈಗ ಜಗತ್ತಿನಲ್ಲಿ ಬೇಡಿಕೆ ಹೆಚ್ಚುತ್ತಿದೆ. ನಮ್ಮ ರಕ್ಷಣಾ ಉತ್ಪನ್ನಗಳು ಭಾರತೀಯ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಶಕ್ತಿಯನ್ನು ಜಗತ್ತಿಗೆ ತೋರಿಸುತ್ತಿವೆ. ಎಲೆಕ್ಟ್ರಾನಿಕ್ಸ್‌ನಿಂದ ಆಟೋಮೊಬೈಲ್ ವಲಯದವರೆಗೆ, ಜಗತ್ತು ನಮ್ಮ ಪ್ರಮಾಣ ಮತ್ತು ಸಾಮರ್ಥ್ಯವನ್ನು ನೋಡಿದೆ. ನಾವು ನಮ್ಮ ಉತ್ಪನ್ನಗಳನ್ನು ಜಗತ್ತಿಗೆ ಒದಗಿಸುವುದಲ್ಲದೆ, ಭಾರತವು ಜಾಗತಿಕ ಪೂರೈಕೆ ಸರಪಳಿಯಲ್ಲಿ ವಿಶ್ವಾಸಾರ್ಹ ಮತ್ತು ವಿಶ್ವಾಸಾರ್ಹ ಪಾಲುದಾರನಾಗುತ್ತಿದೆ.
ಸ್ನೇಹಿತರೆ,
ನಾವು ಇಂದು ಅನೇಕ ಕ್ಷೇತ್ರಗಳಲ್ಲಿ ನಾಯಕರಾಗಿದ್ದರೆ, ಅದು ಅನೇಕ ಕಠಿಣ ಪರಿಶ್ರಮದಿಂದಾಗಿ. ಇದು ವ್ಯವಸ್ಥಿತ ನೀತಿ ನಿರ್ಧಾರಗಳಿಂದ ಮಾತ್ರ ಸಾಧ್ಯವಾಗಿದೆ. ಅಪೂರ್ಣವಾಗಿದ್ದ ಸೇತುವೆಗಳು, ಅಧ್ವಾನದ ರಸ್ತೆಗಳಿದ್ದ 10 ವರ್ಷಗಳ ಪ್ರಯಾಣವನ್ನು ನೋಡಿ, ಇಂದು ಕನಸುಗಳು ಹೊಸ ವೇಗದಲ್ಲಿ ಮುನ್ನಡೆಯುತ್ತಿವೆ. ಉತ್ತಮ ರಸ್ತೆಗಳು, ಅತ್ಯುತ್ತಮ ಎಕ್ಸ್‌ಪ್ರೆಸ್‌ವೇಗಳೊಂದಿಗೆ, ಪ್ರಯಾಣದ ಸಮಯ ಮತ್ತು ವೆಚ್ಚ ಎರಡೂ ಕಡಿಮೆಯಾಗಿದೆ. ಇದು ಉದ್ಯಮಕ್ಕೆ ಸರಕು ಸಾಗಣೆಯ ಸಮಯ ಉಳಿಸಲು ಅವಕಾಶ ನೀಡಿದೆ. ನಮ್ಮ ಆಟೋಮೊಬೈಲ್ ವಲಯವು ಇದರಿಂದ ಭಾರಿ ಪ್ರಯೋಜನ ಪಡೆದುಕೊಂಡಿದೆ. ಇದು ವಾಹನಗಳ ಬೇಡಿಕೆಯನ್ನು ಹೆಚ್ಚಿಸಿದೆ, ನಾವು ವಾಹನಗಳು ಮತ್ತು ವಿದ್ಯುಚ್ಛಾಲಿತ ವಾಹನ(ಇವಿ)ಗಳ ಉತ್ಪಾದನೆ ಪ್ರೋತ್ಸಾಹಿಸಿದ್ದೇವೆ. ಇಂದು ನಾವು ವಿಶ್ವದ ಪ್ರಮುಖ ಆಟೋಮೊಬೈಲ್ ಉತ್ಪಾದಕ ಮತ್ತು ರಫ್ತುದಾರರಾಗಿ ಹೊರಹೊಮ್ಮಿದ್ದೇವೆ.
ಸ್ನೇಹಿತರೆ,
ಎಲೆಕ್ಟ್ರಾನಿಕ್ಸ್ ಉತ್ಪಾದನೆಯಲ್ಲಿ ಇದೇ ರೀತಿಯ ಬದಲಾವಣೆ ಕಂಡುಬಂದಿದೆ. ಕಳೆದ ದಶಕದಲ್ಲಿ, ಮೊದಲ ಬಾರಿಗೆ ವಿದ್ಯುತ್ 2.5 ಕೋಟಿಗೂ ಹೆಚ್ಚು ಮನೆಗಳನ್ನು ತಲುಪಿದೆ. ದೇಶದಲ್ಲಿ ವಿದ್ಯುತ್ ಬೇಡಿಕೆ ಹೆಚ್ಚಾಯಿತು, ಉತ್ಪಾದನೆಯೂ ಹೆಚ್ಚಾಯಿತು, ಇದು ಎಲೆಕ್ಟ್ರಾನಿಕ್ ಉಪಕರಣಗಳ ಬೇಡಿಕೆಯನ್ನು ಹೆಚ್ಚಿಸಿತು. ನಾವು ಡೇಟಾವನ್ನು ಅಗ್ಗವಾಗಿಸಿದಾಗ, ಮೊಬೈಲ್ ಫೋನ್‌ಗಳ ಬೇಡಿಕೆ ಹೆಚ್ಚಾಯಿತು. ಮೊಬೈಲ್ ಫೋನ್‌ಗಳಲ್ಲಿ ಹೆಚ್ಚು ಹೆಚ್ಚು ಸೇವೆಗಳನ್ನು ತಂದಂತೆ, ಡಿಜಿಟಲ್ ಸಾಧನಗಳ ಬಳಕೆ ಮತ್ತಷ್ಟು ಹೆಚ್ಚಾಯಿತು. ಈ ಬೇಡಿಕೆಯನ್ನು ಅವಕಾಶವನ್ನಾಗಿ ಪರಿವರ್ತಿಸುವ ಮೂಲಕ, ನಾವು ಉತ್ಪಾದನೆ ಸಂಪರ್ಕಿತ ಉತ್ತೇಜನಾ(ಪಿಎಲ್‌ಐ) ಯೋಜನೆಗಳಂತಹ ಕಾರ್ಯಕ್ರಮಗಳನ್ನು ಪ್ರಾರಂಭಿಸಿದ್ದೇವೆ. ಇವುಗಳಿಂದಾಗಿ, ಇಂದು ಭಾರತವು ಪ್ರಮುಖ ಎಲೆಕ್ಟ್ರಾನಿಕ್ಸ್ ರಫ್ತುದಾರನಾಗಿದೆ.
ಸ್ನೇಹಿತರೆ,
ಇಂದು ಭಾರತವು ಬಹಳ ದೊಡ್ಡ ಗುರಿಗಳನ್ನು ಹೊಂದಿಸಲು ಸಮರ್ಥವಾಗಿದೆ ಮತ್ತು ಅವುಗಳನ್ನು ಸಾಧಿಸುತ್ತಿದೆ. ಆದ್ದರಿಂದ ಇದರ ತಿರುಳಿನಲ್ಲಿ ಒಂದು ವಿಶೇಷ ಮಂತ್ರವಿದೆ. ಈ ಮಂತ್ರ - ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತ. ಇದು ದಕ್ಷ ಮತ್ತು ಪರಿಣಾಮಕಾರಿ ಆಡಳಿತದ ಮಂತ್ರ. ಅಂದರೆ ಸರ್ಕಾರದಿಂದ ಯಾವುದೇ ಹಸ್ತಕ್ಷೇಪವಿಲ್ಲ, ಸರ್ಕಾರದಿಂದ ಯಾವುದೇ ಒತ್ತಡವಿಲ್ಲ. ನಾನು ನಿಮಗೆ ಒಂದು ಆಸಕ್ತಿದಾಯಕ ಉದಾಹರಣೆ ನೀಡುತ್ತೇನೆ. ಕಳೆದ ದಶಕದಲ್ಲಿ, ನಾವು ತಮ್ಮ ಪ್ರಾಮುಖ್ಯತೆ ಕಳೆದುಕೊಂಡಿರುವ ಸುಮಾರು 1,500 ಕಾನೂನುಗಳನ್ನು ರದ್ದುಗೊಳಿಸಿದ್ದೇವೆ. 1,500 ಕಾನೂನುಗಳನ್ನು ರದ್ದುಗೊಳಿಸುವುದು ದೊಡ್ಡ ವಿಷಯವೇ ಸರಿ. ಈ ಕಾನೂನುಗಳಲ್ಲಿ ಹಲವು ಬ್ರಿಟಿಷ್ ಆಳ್ವಿಕೆಯಿದ್ದಾಗ ರೂಪಿತವಾದವು. ಈಗ ನಾನು ನಿಮಗೆ ಒಂದು ವಿಷಯ ಹೇಳುತ್ತೇನೆ, ನಾಟಕ ಪ್ರದರ್ಶನ ಕಾಯ್ದೆ ಎಂಬ ಕಾನೂನು ಇತ್ತು ಎಂದು ಕೇಳಿದರೆ ನೀವು ಆಶ್ಚರ್ಯಚಕಿತರಾಗುವಿರಿ, ಈ ಕಾನೂನನ್ನು 150 ವರ್ಷಗಳ ಹಿಂದೆ ಬ್ರಿಟಿಷರು ರಚಿಸಿದ್ದರು, ಆ ಸಮಯದಲ್ಲಿ ಬ್ರಿಟಿಷರು ಅಂದಿನ ಸರ್ಕಾರದ ವಿರುದ್ಧ ನಾಟಕ ಮತ್ತು ರಂಗಭೂಮಿಯನ್ನು ಬಳಸಬಾರದು ಎಂದು ಬಯಸಿದ್ದರು. ಈ ಕಾನೂನಿನಲ್ಲಿ 10 ಜನರು ಸಾರ್ವಜನಿಕ ಸ್ಥಳದಲ್ಲಿ ನೃತ್ಯ ಮಾಡುವುದು ಕಂಡುಬಂದರೆ, ಅವರನ್ನು ಬಂಧಿಸಬಹುದು ಎಂಬ ನಿಬಂಧನೆ ಇತ್ತು. ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಈ ಕಾನೂನು 75 ವರ್ಷಗಳ ಕಾಲ ಮುಂದುವರೆಯಿತು. ಅಂದರೆ, ಮದುವೆ ಮೆರವಣಿಗೆ ನಡೆದು 10 ಜನರು ನೃತ್ಯ ಮಾಡಿದರೆ, ಪೊಲೀಸರು ವರನನ್ನೂ ಒಳಗೊಂಡಂತೆ ಅವರನ್ನು ಬಂಧಿಸಬಹುದು. ಸ್ವಾತಂತ್ರ್ಯದ ನಂತರ 70-75 ವರ್ಷಗಳ ಕಾಲ ಈ ಕಾನೂನು ಜಾರಿಯಲ್ಲಿತ್ತು. ಈ ಕಾನೂನನ್ನು ನಮ್ಮ ಸರ್ಕಾರ ತೆಗೆದುಹಾಕಿತು. ಈಗ, ನಾವು ಈ ಕಾನೂನನ್ನು 70 ವರ್ಷಗಳ ಕಾಲ ಪಾಲಿಸಿದ್ದೇವೆ, ಅಂದಿನ ಸರ್ಕಾರಕ್ಕೆ ನಾನು ಹೇಳಲು ಏನೂ ಇಲ್ಲ, ಆ ನಾಯಕರು, ಅವರು ಇಲ್ಲಿಯೂ ಕುಳಿತಿದ್ದಾರೆ, ಆದರೆ ನನಗೆ ಹೆಚ್ಚು ಆಶ್ಚರ್ಯವಾಗಿರುವುದು ಈ ಬ್ರಿಟಿಷ್ ವಸಾಹತುಶಾಹಿ(ಲುಟಿಯೆನ್ಸ್)ಯ ಆಡಳಿತ ಅವಲಂಬಿಸಿದ್ದ ಗುಂಪಿನ ಮೇಲೆ, ಈ ಖಾನ್ ಮಾರ್ಕೆಟ್ ಗ್ಯಾಂಗ್. ಈ ಜನರು 75 ವರ್ಷಗಳ ಕಾಲ ಇಂತಹ ಕಾನೂನಿನ ಬಗ್ಗೆ ಏಕೆ ಮೌನವಾಗಿದ್ದರು? ಪ್ರತಿದಿನ ನ್ಯಾಯಾಲಯಕ್ಕೆ ಹೋಗುವವರು, ಪಿಐಎಲ್‌ನ ಗುತ್ತಿಗೆದಾರರಂತೆ ಸುತ್ತಾಡುವವರು, ಈ ಜನರು ಏಕೆ ಮೌನವಾಗಿದ್ದರು? ಆಗ ಅವರಿಗೆ ಸ್ವಾತಂತ್ರ್ಯ ನೆನಪಾಗಲಿಲ್ಲವೇ? ಮೋದಿ ಅಂತಹ ಕಾನೂನು ಮಾಡಿದ್ದರೆ ಏನಾಗುತ್ತಿತ್ತು? ಎಂದು ಇಂದು ಯಾರಾದರೂ ಯೋಚಿಸಿದರೆ, ಸಾಮಾಜಿಕ ಮಾಧ್ಯಮಗಳಲ್ಲಿ ಈ ಟ್ರೋಲರ್‌ಗಳು, ಅವರು ಕೂಡ ಮೋದಿ ಅಂತಹ ಕಾನೂನು ಮಾಡಲಿದ್ದಾರೆ ಎಂಬ ಸುಳ್ಳು ಸುದ್ದಿ ಹರಡಿದ್ದರೆ, ಈ ಜನರು ಕೋಲಾಹಲ ಸೃಷ್ಟಿಸುತ್ತಿದ್ದರು.
ಸ್ನೇಹಿತರೆ,
ಗುಲಾಮಗಿರಿಯ ಕಾಲದ ಈ ಕಾನೂನನ್ನು ನಮ್ಮ ಸರ್ಕಾರ ರದ್ದುಗೊಳಿಸಿದೆ. ನಾನು ಬಿದಿರಿನ ಇನ್ನೊಂದು ಉದಾಹರಣೆ ನೀಡುತ್ತೇನೆ, ಬಿದಿರು ನಮ್ಮ ಬುಡಕಟ್ಟು ಪ್ರದೇಶಗಳಿಗೆ, ವಿಶೇಷವಾಗಿ ಈಶಾನ್ಯಕ್ಕೆ ಜೀವಾಳ. ಆದರೆ ಮೊದಲು, ಬಿದಿರು ಕತ್ತರಿಸಿದ್ದಕ್ಕೂ ನಿಮ್ಮನ್ನು ಜೈಲಿಗೆ ಕಳುಹಿಸಲಾಗಿತ್ತು, ಆ ಕಾನೂನನ್ನು ಏಕೆ ಮಾಡಲಾಯಿತು? ಈಗ, ನಾನು ನಿಮ್ಮನ್ನು ಕೇಳಿದರೆ, ಬಿದಿರು ಮರವೇ? ಕೆಲವರು ಅದನ್ನು ಮರ ಎಂದು ನಂಬುತ್ತಾರೆ. ಸ್ವಾತಂತ್ರ್ಯದ 70 ವರ್ಷಗಳ ನಂತರವೂ ನನ್ನ ದೇಶದ ಸರ್ಕಾರವು ಬಿದಿರನ್ನು ಮರ ಎಂದು ನಂಬಿತ್ತು. ಆದ್ದರಿಂದ, ಮರ ಕಡಿಯುವುದನ್ನು ನಿಷೇಧಿಸಿದಂತೆಯೇ, ಬಿದಿರು ಕಡಿಯುವುದನ್ನು ಸಹ ನಿಷೇಧಿಸಲಾಗಿದೆ ಎಂದರೆ ನೀವು ಆಶ್ಚರ್ಯ ಪಡುತ್ತೀರಿ. ನಮ್ಮ ದೇಶದಲ್ಲಿ ಬಿದಿರನ್ನು ಮರವೆಂದು ಪರಿಗಣಿಸುವ ಕಾನೂನು ಇತ್ತು, ಮರಗಳಿಗೆ ಸಂಬಂಧಿಸಿದ ಎಲ್ಲಾ ಕಾನೂನುಗಳು ಅದಕ್ಕೆ ಅನ್ವಯಿಸುತ್ತವೆ, ಅದನ್ನು ಕಡಿಯುವುದು ಕಷ್ಟಕರವಾಗಿತ್ತು. ಬಿದಿರು ಮರವಲ್ಲ ಎಂಬುದು ನಮ್ಮ ಹಿಂದಿನ ಆಡಳಿತಗಾರರಿಗೆ ಅರ್ಥವಾಗಲಿಲ್ಲ. ಬ್ರಿಟಿಷರಿಗೆ ತಮ್ಮದೇ ಆದ ಹಿತಾಸಕ್ತಿಗಳಿರಬಹುದು, ಆದರೆ ನಾವು ಅದನ್ನು ಏಕೆ ಮಾಡಲಿಲ್ಲ? ಹಾಗಾಗಿ, ಬಿದಿರಿಗೆ ಸಂಬಂಧಿಸಿದ ದಶಕಗಳಷ್ಟು ಹಳೆಯ ಕಾನೂನನ್ನು ನಮ್ಮದೇ ಸರ್ಕಾರ ಬದಲಾಯಿಸಿತು.
ಸ್ನೇಹಿತರೆ,
10 ವರ್ಷಗಳ ಹಿಂದೆ ಸಾಮಾನ್ಯ ವ್ಯಕ್ತಿಯೊಬ್ಬರು ಐಟಿಆರ್ ಸಲ್ಲಿಸುವುದು ಎಷ್ಟು ಕಷ್ಟಕರವಾಗಿತ್ತು ಎಂಬುದನ್ನು ನೀವು ನೆನಪಿಟ್ಟುಕೊಳ್ಳಬೇಕು. ಇಂದು ನೀವು ಕೆಲವೇ ಕ್ಷಣಗಳಲ್ಲಿ ಐಟಿಆರ್ ಸಲ್ಲಿಸುತ್ತೀರಿ ಮತ್ತು ಮರುಪಾವತಿಯನ್ನು ಕೆಲವೇ ದಿನಗಳಲ್ಲಿ ನೇರವಾಗಿ ಖಾತೆಗೆ ಜಮಾ ಮಾಡಲಾಗುತ್ತದೆ. ಈಗ ಆದಾಯ ತೆರಿಗೆಗೆ ಸಂಬಂಧಿಸಿದ ಕಾನೂನನ್ನು ಇನ್ನಷ್ಟು ಸರಳಗೊಳಿಸುವ ಪ್ರಕ್ರಿಯೆಯು ಸಂಸತ್ತಿನಲ್ಲಿ ನಡೆಯುತ್ತಿದೆ. ನಾವು 12 ಲಕ್ಷ ರೂ.ಗಳವರೆಗಿನ ಆದಾಯವನ್ನು ತೆರಿಗೆ ಮುಕ್ತಗೊಳಿಸಿದ್ದೇವೆ, ಹೌದು ಇದಕ್ಕೆ ಈಗ ಚಪ್ಪಾಳೆ ಬರುತ್ತಿದೆ, ಆದರೆ ನೀವು ಬಿದಿರಿಗೆ ಚಪ್ಪಾಳೆ ತಟ್ಟಲಿಲ್ಲ, ಏಕೆಂದರೆ ಅದು ಬುಡಕಟ್ಟು ಜನಾಂಗಕ್ಕೆ ಸೇರಿದೆ. ಇದು ವಿಶೇಷವಾಗಿ ಮಾಧ್ಯಮ ವರ್ಗಕ್ಕೆ, ನಿಮ್ಮಂತಹ ಸಂಬಳ ಪಡೆಯುವ ವರ್ಗಕ್ಕೆ ಪ್ರಯೋಜನ ನೀಡುತ್ತದೆ. ತಮ್ಮ ಮೊದಲ ಮತ್ತು ಎರಡನೇ ಕೆಲಸಗಳನ್ನು ಮಾಡುತ್ತಿರುವ ಯುವಕರು, ಅವರ ಆಕಾಂಕ್ಷೆಗಳು ಸಹ ವಿಭಿನ್ನವಾಗಿವೆ, ಅವರ ವೆಚ್ಚಗಳು ಸಹ ವಿಭಿನ್ನವಾಗಿವೆ. ಅವರು ತಮ್ಮ ಆಕಾಂಕ್ಷೆಗಳನ್ನು ಪೂರೈಸಿಕೊಳ್ಳಬೇಕು, ಅವರ ಉಳಿತಾಯವು ಹೆಚ್ಚಾಗಬೇಕು, ಬಜೆಟ್ ಇದರಲ್ಲಿ ಬಹಳಷ್ಟು ಸಹಾಯ ಮಾಡಿದೆ. ದೇಶದ ಜನರಿಗೆ ಜೀವನ ಸುಲಭತೆ, ವ್ಯವಹಾರ ಸುಲಭಗೊಳಿಸುವುದು, ಅವರಿಗೆ ಹಾರಲು ಮುಕ್ತ ಆಕಾಶವನ್ನು ನೀಡುವುದು ನಮ್ಮ ಗುರಿಯಾಗಿದೆ. ಇಂದು ಎಷ್ಟೊಂದು ಸ್ಟಾರ್ಟಪ್‌ಗಳು ಜಿಯೋಸ್ಪೇಷಿಯಲ್ ಡೇಟಾವನ್ನು ಬಳಸಿಕೊಳ್ಳುತ್ತಿವೆ ಎಂಬುದನ್ನು ನೋಡಿ. ಮೊದಲು, ಯಾರಾದರೂ ನಕ್ಷೆಯನ್ನು ಮಾಡಬೇಕಾದರೆ, ಅವರು ಸರ್ಕಾರದಿಂದ ಅನುಮತಿ ಪಡೆಯಬೇಕಾಗಿತ್ತು. ನಾವು ಇದನ್ನು ಬದಲಾಯಿಸಿದ್ದೇವೆ, ಇಂದು ನಮ್ಮ ಸ್ಟಾರ್ಟಪ್‌ಗಳು ಮತ್ತು ಖಾಸಗಿ ಕಂಪನಿಗಳು ಈ ಡೇಟಾವನ್ನು ಅತ್ಯುತ್ತಮವಾಗಿ ಬಳಸುತ್ತಿವೆ.
ಸ್ನೇಹಿತರೆ,
ಜಗತ್ತಿಗೆ ಶೂನ್ಯದ ಪರಿಕಲ್ಪನೆಯನ್ನು ನೀಡಿದ ಭಾರತ, ಇಂದು ಅನಂತ ನಾವೀನ್ಯತೆಗಳ ನಾಡಾಗುತ್ತಿದೆ. ಇಂದು ಭಾರತವು ನಾವೀನ್ಯತೆಯನ್ನು ತರುವ ಜತೆಗೆ, ಭಾರತದಲ್ಲಿ ನಾವೀನ್ಯತೆಯನ್ನು ತಂತ್ರಜ್ಞಾನದೊಂದಿಗೆ ಸಂಯೋಜಿಸುತ್ತಿದೆ(ಇಂಡೋವೇಷನ್). ನಾನು ಇಂಡೋವೇಟ್ ಎಂದು ಹೇಳಿದಾಗ, ಅದರ ಅರ್ಥ - ಇನ್ನೋವೇಟಿಂಗ್ ದಿ ಇಂಡಿಯನ್ ವೇ. ಇಂಡೋವೇಟ್ ಮೂಲಕ, ನಾವು ಕೈಗೆಟುಕುವ, ಪ್ರವೇಶಿಸಬಹುದಾದ ಮತ್ತು ಹೊಂದಿಕೊಳ್ಳುವಂತಹ ಪರಿಹಾರಗಳನ್ನು ರಚಿಸುತ್ತಿದ್ದೇವೆ. ನಾವು ಈ ಪರಿಹಾರಗಳನ್ನು ನಿಯತ್ರಿಸುತ್ತಿಲ್ಲ ಅಥವಾ ಸೀಮಿತಿ ಮಾಡದೆ, ಅವುಗಳನ್ನು ಇಡೀ ಜಗತ್ತಿಗೆ ನೀಡಿದ್ದೇವೆ. ಜಗತ್ತು ಸುರಕ್ಷಿತ ಮತ್ತು ವೆಚ್ಚ-ಪರಿಣಾಮಕಾರಿ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಬಯಸಿದಾಗ, ನಾವು ಯುಪಿಐ ವ್ಯವಸ್ಥೆಯನ್ನು ರಚಿಸಿದ್ದೇವೆ. ನಾನು ಪ್ರೊಫೆಸರ್ ಕಾರ್ಲೋಸ್ ಮಾಂಟೆಸ್ ಅವರ ಮಾತುಗಳನ್ನು ಕೇಳುತ್ತಿದ್ದೆ, ಅವರು ಯುಪಿಐನಂತಹ ತಂತ್ರಜ್ಞಾನದ ಜನ-ಸ್ನೇಹಿ ಸ್ವಭಾವದಿಂದ ತುಂಬಾ ಪ್ರಭಾವಿತರಾದರು. ಇಂದು, ಫ್ರಾನ್ಸ್, ಯುಎಇ, ಸಿಂಗಾಪುರದಂತಹ ದೇಶಗಳು ತಮ್ಮ ಹಣಕಾಸು ಪರಿಸರ ವ್ಯವಸ್ಥೆಯಲ್ಲಿ ಯುಪಿಐ ಸಂಯೋಜಿಸುತ್ತಿವೆ. ಇಂದು, ಪ್ರಪಂಚದ ಅನೇಕ ದೇಶಗಳು ನಮ್ಮ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವಾದ ಇಂಡಿಯಾ ಸ್ಟಾಕ್‌ಗೆ ಸೇರಲು ಒಪ್ಪಂದಗಳನ್ನು ಮಾಡಿಕೊಳ್ಳುತ್ತಿವೆ. ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ, ನಮ್ಮ ಲಸಿಕೆ ಭಾರತದ ಗುಣಮಟ್ಟದ ಆರೋಗ್ಯ ಪರಿಹಾರಗಳ ಮಾದರಿಯನ್ನು ಜಗತ್ತಿಗೆ ತೋರಿಸಿದೆ. ಜಗತ್ತು ಅದರಿಂದ ಪ್ರಯೋಜನ ಪಡೆಯುವಂತೆ ನಾವು ಆರೋಗ್ಯ ಸೇತು ಅಪ್ಲಿಕೇಶನ್ ಅನ್ನು ಸಹ ತೆರೆದ-ಮೂಲ(ಓಪನ್-ಸೋರ್ಸ್) ಮಾಡಿದ್ದೇವೆ. ಭಾರತವು ಒಂದು ಪ್ರಮುಖ ಬಾಹ್ಯಾಕಾಶ ಶಕ್ತಿಯಾಗಿದೆ. ನಾವು ಇತರೆ ದೇಶಗಳು ತಮ್ಮ ಬಾಹ್ಯಾಕಾಶ ಆಕಾಂಕ್ಷೆಗಳನ್ನು ಸಾಧಿಸಲು ಸಹಾಯ ಮಾಡುತ್ತಿದ್ದೇವೆ. ಭಾರತವು ಸಾರ್ವಜನಿಕ ಒಳಿತಿಗಾಗಿ ಎಐ(ಕೃತಕ ಬುದ್ಧಿಮತ್ತೆ) ಮೇಲೆ ಕೆಲಸ ಮಾಡುತ್ತಿದೆ, ತನ್ನ ಅನುಭವ ಮತ್ತು ಪರಿಣತಿಯನ್ನು ಇಡೀ ವಿಶ್ವದೊಂದಿಗೆ ಹಂಚಿಕೊಳ್ಳುತ್ತಿದೆ.
ಸ್ನೇಹಿತರೆ,
ಐಟಿವಿ ನೆಟ್‌ವರ್ಕ್ ಇಂದು ಅನೇಕ ಫೆಲೋಶಿಪ್‌ಗಳನ್ನು ಪ್ರಾರಂಭಿಸಿದೆ. ಭಾರತದ ಯುವಕರು ಅಭಿವೃದ್ಧಿ ಹೊಂದಿದ ಭಾರತದ ಅತಿದೊಡ್ಡ ಫಲಾನುಭವಿ ಮತ್ತು ಅತಿದೊಡ್ಡ ಪಾಲುದಾರರು. ಆದ್ದರಿಂದ, ಭಾರತದ ಯುವಕರು ನಮಗೆ ಬಹಳ ದೊಡ್ಡ ಆದ್ಯತೆಯಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿಯು ಮಕ್ಕಳಿಗೆ ಪುಸ್ತಕಗಳನ್ನು ಮೀರಿ ಯೋಚಿಸಲು ಅವಕಾಶ ನೀಡಿದೆ. ಮಕ್ಕಳು ಮಧ್ಯಮಿಕ ಶಾಲೆಯಿಂದಲೇ ಕೋಡಿಂಗ್ ಕಲಿಯುವ ಮೂಲಕ ಎಐ ಮತ್ತು ಡೇಟಾ ಸೈನ್ಸ್ ಕ್ಷೇತ್ರಕ್ಕೆ ಸಿದ್ಧರಾಗುತ್ತಿದ್ದಾರೆ. ಅಟಲ್ ಟಿಂಕರಿಂಗ್ ಲ್ಯಾಬ್‌ಗಳು ಮಕ್ಕಳಿಗೆ ಉದಯೋನ್ಮುಖ ತಂತ್ರಜ್ಞಾನಗಳ ಪ್ರಾಯೋಗಿಕ ಅನುಭವ ನೀಡುತ್ತಿವೆ. ಆದ್ದರಿಂದ, ಈ ವರ್ಷದ ಬಜೆಟ್‌ನಲ್ಲಿ, ನಾವು 50 ಸಾವಿರ ಹೊಸ ಅಟಲ್ ಟಿಂಕರಿಂಗ್ ಲ್ಯಾಬ್‌ಗಳನ್ನು ಆರಂಭಿಸುವುದಾಗಿ ಘೋಷಿಸಿದ್ದೇವೆ.
ಸ್ನೇಹಿತರೆ,
ಸುದ್ದಿ ಜಗತ್ತಿನಲ್ಲಿ, ನೀವು ವಿವಿಧ ಏಜೆನ್ಸಿಗಳಿಂದ ಚಂದಾದಾರಿಕೆಗಳನ್ನು ತೆಗೆದುಕೊಳ್ಳುತ್ತೀರಿ, ಇದು ಉತ್ತಮ ಸುದ್ದಿಗಳನ್ನು ಪಡೆಯಲು ನಿಮಗೆ ಸಹಾಯ ಮಾಡುತ್ತದೆ. ಅದೇ ರೀತಿ, ಸಂಶೋಧನಾ ಕ್ಷೇತ್ರದಲ್ಲಿ, ವಿದ್ಯಾರ್ಥಿಗಳಿಗೆ ಹೆಚ್ಚು ಹೆಚ್ಚು ಮಾಹಿತಿ ಮೂಲಗಳು ಬೇಕಾಗುತ್ತವೆ. ಇದಕ್ಕಾಗಿ, ಮೊದಲು ಅವರು ವಿವಿಧ ಜರ್ನಲ್‌ಗಳ ಚಂದಾದಾರಿಕೆಗಳನ್ನು ದುಬಾರಿ ದರದಲ್ಲಿ ಖರೀದಿಸಬೇಕಾಗಿತ್ತು, ಅವರು ಸ್ವಂತ ಹಣ ಖರ್ಚು ಮಾಡಬೇಕಾಗಿತ್ತು. ನಮ್ಮ ಸರ್ಕಾರವು ಎಲ್ಲಾ ಸಂಶೋಧಕರನ್ನು ಈ ಚಿಂತೆಯಿಂದ ಮುಕ್ತಗೊಳಿಸಿದೆ. ನಾವು ಒಂದು ರಾಷ್ಟ್ರ - ಒಂದು ಚಂದಾದಾರಿಕೆ ತಂದಿದ್ದೇವೆ. ಇದರೊಂದಿಗೆ, ದೇಶದ ಪ್ರತಿಯೊಬ್ಬ ಸಂಶೋಧಕನು ವಿಶ್ವದ ಪ್ರಸಿದ್ಧ ಜರ್ನಲ್‌ಗಳಿಗೆ ಉಚಿತ ಪ್ರವೇಶ ಪಡೆಯುವುದು ಖಚಿತ. ಸರ್ಕಾರ ಇದಕ್ಕಾಗಿ 6 ಸಾವಿರ ಕೋಟಿ ರೂಪಾಯಿಗಳಿಗೂ ಹೆಚ್ಚು ಖರ್ಚು ಮಾಡಲಿದೆ. ಪ್ರತಿಯೊಬ್ಬ ವಿದ್ಯಾರ್ಥಿಗೂ ಅತ್ಯುತ್ತಮ ಸಂಶೋಧನಾ ಸೌಲಭ್ಯಗಳು ಸಿಗುವಂತೆ ನಾವು ಖಚಿತಪಡಿಸುತ್ತಿದ್ದೇವೆ. ಅದು ಬಾಹ್ಯಾಕಾಶ ಪರಿಶೋಧನೆಯಾಗಿರಲಿ, ಬಯೋಟೆಕ್ ಸಂಶೋಧನೆಯಾಗಿರಲಿ ಅಥವಾ ಕೃತಕ ಬುದ್ಧಿಮತ್ತೆಯಾಗಿರಲಿ, ನಮ್ಮ ಮಕ್ಕಳು ಭವಿಷ್ಯದ ನಾಯಕರಾಗಿ ಹೊರಹೊಮ್ಮುತ್ತಿದ್ದಾರೆ. ಡಾ. ಬ್ರಿಯಾನ್ ಗ್ರೀನ್ ಐಐಟಿ ವಿದ್ಯಾರ್ಥಿಗಳನ್ನು ಭೇಟಿ ಮಾಡಿದ್ದಾರೆ, ಗಗನಯಾತ್ರಿ ಮೈಕ್ ಮಾಸ್ಸಿಮಿನೊ ಸೆಂಟ್ರಲ್ ಶಾಲೆಯ ವಿದ್ಯಾರ್ಥಿಗಳನ್ನು ಭೇಟಿ ಮಾಡಲು ಹೋಗಿದ್ದಾರೆ. ಅವರು ಹೇಳಿದಂತೆ, ಅವರ ಅನುಭವ ನಿಜವಾಗಿಯೂ ಅದ್ಭುತವಾಗಿದೆ. ಭಾರತದ ಒಂದು ಸಣ್ಣ ಶಾಲೆಯಿಂದ ಭವಿಷ್ಯದ ದೊಡ್ಡ ಆವಿಷ್ಕಾರ ಹೊರಬರುವ ದಿನ ದೂರವಿಲ್ಲ.
ಸ್ನೇಹಿತರೆ,
ಪ್ರತಿಯೊಂದು ಜಾಗತಿಕ ವೇದಿಕೆಯಲ್ಲಿ ಭಾರತದ ಧ್ವಜ ಹಾರಾಡಲಿ, ಇದು ನಮ್ಮ ಆಕಾಂಕ್ಷೆ, ಇದು ನಮ್ಮ ನಿರ್ದೇಶನ.
ಸ್ನೇಹಿತರೆ,
ಸಣ್ಣದಾಗಿ ಯೋಚಿಸಿ ಸಣ್ಣ ಹೆಜ್ಜೆಗಳನ್ನು ಇಡುವ ಸಮಯ ಇದಲ್ಲ. ಮಾಧ್ಯಮ ಸಂಸ್ಥೆಯಾಗಿ, ನೀವು ಸಹ ಈ ಭಾವನೆಯನ್ನು ಅರ್ಥ ಮಾಡಿಕೊಂಡಿದ್ದೀರಿ ಎಂಬುದು ನನಗೆ ಸಂತೋಷವಾಗಿದೆ. ನೋಡಿ, 10 ವರ್ಷಗಳ ಹಿಂದಿನವರೆಗೆ ನೀವು ದೇಶದ ವಿವಿಧ ರಾಜ್ಯಗಳನ್ನು ಹೇಗೆ ತಲುಪುವುದು, ನಿಮ್ಮ ಮಾಧ್ಯಮ ಸಂಸ್ಥೆಯನ್ನು ಹೇಗೆ ತಲುಪುವುದು ಎಂಬುದರ ಬಗ್ಗೆ ಯೋಚಿಸುತ್ತಿದ್ದಿರಿ, ಇಂದು ನೀವು ಸಹ ಜಾಗತಿಕವಾಗಿ ಹೋಗಲು ಧೈರ್ಯವನ್ನು ಸಂಗ್ರಹಿಸಿದ್ದೀರಿ. ಈ ಸ್ಫೂರ್ತಿ, ಈ ಸಂಕಲ್ಪ, ಇಂದಿನ ಪ್ರತಿಯೊಬ್ಬ ನಾಗರಿಕನ, ಪ್ರತಿಯೊಬ್ಬ ಉದ್ಯಮಿಯದ್ದಾಗಿರಬೇಕು. ಪ್ರಪಂಚದ ಪ್ರತಿಯೊಂದು ಮಾರುಕಟ್ಟೆಯಲ್ಲೂ, ಪ್ರತಿ ಡ್ರಾಯಿಂಗ್ ರೂಮಿನಲ್ಲಿ, ಪ್ರತಿ ಊಟದ ಮೇಜಿನ ಮೇಲೆ ಕೆಲವು ಭಾರತೀಯ ಬ್ರ್ಯಾಂಡ್ ಇರಬೇಕು ಎಂಬುದು ನನ್ನ ಕನಸು. ಭಾರತದಲ್ಲಿ ತಯಾರಿಸಲಾಗಿದೆ ಎಂಬುದು ಪ್ರಪಂಚದ ಮಂತ್ರವಾಗಬೇಕು. ಯಾರಾದರೂ ಅನಾರೋಗ್ಯದಿಂದ ಬಳಲುತ್ತಿದ್ದರೆ, ಅವರು ಮೊದಲು ಯೋಚಿಸಬೇಕು - ಭಾರತದಲ್ಲಿ ಗುಣಮುಖರಾಗಿ ಎಂದು. ಯಾರಾದರೂ ಮದುವೆಯಾಗಲು ಬಯಸಿದರೆ, ಅವರು ಮೊದಲು ಯೋಚಿಸಬೇಕು - ಭಾರತದಲ್ಲಿ ವಿವಾಹ. ಯಾರಾದರೂ ಪ್ರಯಾಣಿಸಲು ಬಯಸಿದರೆ, ಅವರು ಭಾರತವನ್ನು ತಮ್ಮ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಇಡಬೇಕು. ಯಾರಾದರೂ ಸಮ್ಮೇಳನ ಅಥವಾ ಪ್ರದರ್ಶನವನ್ನು ನಡೆಸಲು ಬಯಸಿದರೆ, ಅವರು ಮೊದಲು ಭಾರತಕ್ಕೆ ಬರಬೇಕು. ಯಾರಾದರೂ ಸಂಗೀತ ಕಚೇರಿ ನಡೆಸಲು ಬಯಸಿದರೆ, ಅವರು ಮೊದಲು ಭಾರತವನ್ನು ಆರಿಸಿಕೊಳ್ಳಬೇಕು. ನಾವು ಈ ಶಕ್ತಿಯನ್ನು, ಈ ಸಕಾರಾತ್ಮಕ ಮನೋಭಾವವನ್ನು ನಮ್ಮಲ್ಲಿ ಬೆಳೆಸಿಕೊಳ್ಳಬೇಕು. ನಿಮ್ಮ ನೆಟ್‌ವರ್ಕ್ ಮತ್ತು ನಿಮ್ಮ ಚಾನೆಲ್ ಇದರಲ್ಲಿ ದೊಡ್ಡ ಪಾತ್ರ ವಹಿಸುತ್ತವೆ. ಸಾಧ್ಯತೆಗಳು ಅನಂತವಾಗಿವೆ, ಈಗ ನಾವು ನಮ್ಮ ಧೈರ್ಯ ಮತ್ತು ದೃಢನಿಶ್ಚಯದಿಂದ ಅವುಗಳನ್ನು ವಾಸ್ತವಕ್ಕೆ ತಿರುಗಿಸಬೇಕಾಗಿದೆ.
ಸ್ನೇಹಿತರೆ,
ಮುಂದಿನ 25 ವರ್ಷಗಳಲ್ಲಿ ಅಭಿವೃದ್ಧಿ ಹೊಂದಿದ ಭಾರತವಾಗುವ ಸಂಕಲ್ಪದೊಂದಿಗೆ ಭಾರತ ಮುಂದುವರಿಯುತ್ತಿದೆ. ನೀವು ಸಹ ಮಾಧ್ಯಮ ಸಂಸ್ಥೆಯಾಗಿ ವಿಶ್ವ ವೇದಿಕೆಯಲ್ಲಿ ನಿಮ್ಮನ್ನು ಪರಿಚಯಿಸಿಕೊಳ್ಳುವ ಸಂಕಲ್ಪದೊಂದಿಗೆ ಮುಂದುವರಿಯಬೇಕು. ನೀವು ಖಂಡಿತವಾಗಿಯೂ ಇದರಲ್ಲಿ ಯಶಸ್ವಿಯಾಗುತ್ತೀರಿ ಎಂದು ನಾನು ನಂಬುತ್ತೇನೆ. ನಾನು ಮತ್ತೊಮ್ಮೆ ಐಟಿವಿ ನೆಟ್‌ವರ್ಕ್‌ನ ಇಡೀ ತಂಡಕ್ಕೆ ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ. ದೇಶ ವಿವಿಧೆಡೆಯಿಂದ ಮತ್ತು ವಿಶ್ವಾದ್ಯಂತದಿಂದ ಬಂದಿರುವ ಪ್ರತಿನಿಧಿಗಳನ್ನು ನಾನು ಅಭಿನಂದಿಸುತ್ತೇನೆ, ಅವರ ಅಭಿಪ್ರಾಯಗಳು ಖಂಡಿತವಾಗಿಯೂ ಸಕಾರಾತ್ಮಕ ಚಿಂತನೆಯನ್ನು ಬಲಪಡಿಸಿವೆ, ಇದಕ್ಕಾಗಿ ನಾನು ಸಹ ಕೃತಜ್ಞನಾಗಿದ್ದೇನೆ, ಏಕೆಂದರೆ ಭಾರತದ ಹೆಮ್ಮೆ ಹೆಚ್ಚಾದಾಗ, ಪ್ರತಿಯೊಬ್ಬ ಭಾರತೀಯನು ಸಂತೋಷ ಮತ್ತು ಹೆಮ್ಮೆಪಡುತ್ತಾನೆ, ಇದಕ್ಕಾಗಿ ನಾನು ಅವರೆಲ್ಲರಿಗೂ ತುಂಬು ಧನ್ಯವಾದಗಳು ಮತ್ತು ನಮಸ್ಕಾರ ತಿಳಿಸುತ್ತೇನೆ.
ಹಕ್ಕು ನಿರಾಕರಣೆ: ಪ್ರಧಾನಮಂತ್ರಿ ಅವರ ಭಾಷಣದ ಅಂದಾಜು ಇಂಗ್ಲೀಷ್ ಅನುವಾದದ ಕನ್ನಡ ರೂಪಾಂತರ ಇದಾಗಿದೆ. ಅವರು ಮೂಲತಃ ಹಿಂದಿ ಭಾಷೆಯಲ್ಲಿ ಭಾಷಣ ಮಾಡಿದ್ದಾರೆ.
*****
(Release ID: 2107656)
Visitor Counter : 7