ರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ರಾಷ್ಟ್ರೀಯ ಬುಡಕಟ್ಟು ಉತ್ಸವವಾದ ‘ಆದಿ ಮಹೋತ್ಸವ’ ಭಾರತದ ರಾಷ್ಟ್ರಪತಿಗಳಿಂದ ಉದ್ಘಾಟನೆ

Posted On: 16 FEB 2025 6:21PM by PIB Bengaluru

ರಾಷ್ಟ್ರೀಯ ಬುಡಕಟ್ಟು ಉತ್ಸವವಾದ 'ಆದಿ ಮಹೋತ್ಸವ'ವನ್ನು ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ನವದೆಹಲಿಯಲ್ಲಿ ಇಂದು (ಫೆಬ್ರವರಿ 16, 2025) ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ರಾಷ್ಟ್ರಪತಿಗಳು, ಬುಡಕಟ್ಟು ಪರಂಪರೆಯ ಬಗ್ಗೆ ತಿಳಿಸಲು ಮತ್ತು ಉತ್ತೇಜಿಸಲು ಆದಿ ಮಹೋತ್ಸವವು ಪ್ರಮುಖ ಕಾರ್ಯಕ್ರಮವಾಗಿದೆ. ಇಂತಹ ಉತ್ಸವಗಳು ಬುಡಕಟ್ಟು ಸಮಾಜದ ಉದ್ಯಮಿಗಳು, ಕುಶಲಕರ್ಮಿಗಳು ಮತ್ತು ಕಲಾವಿದರಿಗೆ ಮಾರುಕಟ್ಟೆಯೊಂದಿಗೆ ಸಂಪರ್ಕ ಸಾಧಿಸಲು ಉತ್ತಮ ಅವಕಾಶವನ್ನು ಒದಗಿಸುತ್ತವೆ ಎಂದರು. 

ಬುಡಕಟ್ಟು ಸಮಾಜದ ಕರಕುಶಲ ವಸ್ತುಗಳು, ಆಹಾರ, ಉಡುಪು ಮತ್ತು ಆಭರಣಗಳು, ವೈದ್ಯಕೀಯ ಪದ್ಧತಿಗಳು, ಗೃಹೋಪಯೋಗಿ ಉಪಕರಣಗಳು ಮತ್ತು ಕ್ರೀಡೆಗಳು ನಮ್ಮ ದೇಶದ ಅಮೂಲ್ಯ ಪರಂಪರೆಯಾಗಿದೆ. ಅದೇ ಸಮಯದಲ್ಲಿ, ಅವು ಆಧುನಿಕ ಮತ್ತು ವೈಜ್ಞಾನಿಕವೂ ಆಗಿದೆ, ಏಕೆಂದರೆ ಅವು ಪ್ರಕೃತಿಯೊಂದಿಗೆ ಸಹಜ ಸಾಮರಸ್ಯ ಮತ್ತು ಸುಸ್ಥಿರ ಜೀವನಶೈಲಿಯ ಆದರ್ಶಗಳನ್ನು ಪ್ರದರ್ಶಿಸಿವೆ ಎಂದು ರಾಷ್ಟ್ರಪತಿ ಹೇಳಿದ್ದಾರೆ.

ಬುಡಕಟ್ಟು ಸಮುದಾಯದ ಒಟ್ಟಾರೆ ಅಭಿವೃದ್ಧಿಗೆ ಕಳೆದ 10 ವರ್ಷಗಳಲ್ಲಿ ಹಲವು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಬುಡಕಟ್ಟು ಅಭಿವೃದ್ಧಿ ಬಜೆಟ್ ಅನ್ನು ಸುಮಾರು ಐದು ಪಟ್ಟು ಅಂದರೆ ಒಂದು ಲಕ್ಷ ಇಪ್ಪತ್ತೈದು ಸಾವಿರ ಕೋಟಿ ರೂಪಾಯಿಗಳಿಗೆ ಹೆಚ್ಚಿಸಲಾಗಿದೆ. ಇದಲ್ಲದೆ, ಬುಡಕಟ್ಟು ಕಲ್ಯಾಣ ಬಜೆಟ್ ಹಂಚಿಕೆ ಮೂರು ಪಟ್ಟು ಹೆಚ್ಚಾಗಿದ್ದು ಸುಮಾರು 15 ಸಾವಿರ ಕೋಟಿ ರೂಪಾಯಿಗಳಿಗೆ ತಲುಪಿದೆ ಎಂದು ರಾಷ್ಟ್ರಪತಿಗಳು ಅಂಕಿಅಂಶ ನೀಡಿದ್ದಾರೆ. ಬುಡಕಟ್ಟು ಸಮಾಜವು ಪ್ರಗತಿ ಸಾಧಿಸಿದಾಗ ಮಾತ್ರ ನಮ್ಮ ದೇಶವು ನಿಜವಾದ ಅರ್ಥದಲ್ಲಿ ಪ್ರಗತಿ ಸಾಧಿಸಲಿದೆ ಎಂಬ ಆಲೋಚನೆಯೊಂದಿಗೆ ಬುಡಕಟ್ಟು ಸಮಾಜದ ಅಭಿವೃದ್ಧಿಗೆ ವಿಶೇಷ ಗಮನ ನೀಡಲಾಗಿದೆ. ಅದಕ್ಕಾಗಿಯೇ, ಬುಡಕಟ್ಟು ಗುರುತಿನ ಬಗ್ಗೆ ಹೆಮ್ಮೆಯ ಭಾವ ಮೂಡಿಸುವುದರ ಜೊತೆಗೆ, ಬುಡಕಟ್ಟು ಸಮಾಜವನ್ನು ವೇಗವಾಗಿ ಅಭಿವೃದ್ಧಿಪಡಿಸಲು ಬಹು ಆಯಾಮದ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. 

ಬುಡಕಟ್ಟು ಸಮಾಜದ ಆರ್ಥಿಕ ಸಬಲೀಕರಣ ಮತ್ತು ಉದ್ಯೋಗದ ನಿಟ್ಟಿನಲ್ಲಿ ಸಾಕಷ್ಟು ಪ್ರಗತಿ ಸಾಧಿಸಲಾಗುತ್ತಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದ್ದಾರೆ.  ಯಾವುದೇ ಸಮಾಜದ ಅಭಿವೃದ್ಧಿಯಲ್ಲಿ ಶಿಕ್ಷಣವು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಒತ್ತಿ ಹೇಳಿದ ರಾಷ್ಟ್ರಪತಿಗಳು, ದೇಶಾದ್ಯಂತ 470 ಕ್ಕೂ ಹೆಚ್ಚು ಏಕಲವ್ಯ ಮಾದರಿ ವಸತಿ ಶಾಲೆಗಳ ಮೂಲಕ ಸುಮಾರು 1.25 ಲಕ್ಷ ಬುಡಕಟ್ಟು ಮಕ್ಕಳು ಶಾಲಾ ಶಿಕ್ಷಣವನ್ನು ಪಡೆಯುತ್ತಿರುವುದು ಸಂತಸದ ಸಂಗತಿ ಎಂದರು. ಕಳೆದ 10 ವರ್ಷಗಳಲ್ಲಿ, ಬುಡಕಟ್ಟು ಜನಾಂಗದ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ 30 ಹೊಸ ವೈದ್ಯಕೀಯ ಕಾಲೇಜುಗಳನ್ನು ಪ್ರಾರಂಭಿಸಲಾಗಿದೆ. ಬುಡಕಟ್ಟು ಸಮಾಜದ ಆರೋಗ್ಯಕ್ಕೆ ಸಂಬಂಧಿಸಿದ ನಿರ್ದಿಷ್ಟ ಸಮಸ್ಯೆಯನ್ನು ಪರಿಹರಿಸಲು ರಾಷ್ಟ್ರೀಯ ಮಿಷನ್ ಅನ್ನು ಪ್ರಾರಂಭಿಸಲಾಗಿದೆ. ಈ ಮಿಷನ್ ಅಡಿಯಲ್ಲಿ, 2047 ರ ವೇಳೆಗೆ ಕುಡಗೋಲು ಕಣ ರಕ್ತಹೀನತೆ (ಸಿಕಲ್‌ ಸೆಲ್‌ ಅನಿಮಿಯಾ) ನಿರ್ಮೂಲನೆ ಮಾಡುವ ಗುರಿ ಹೊಂದಲಾಗಿದೆ ಎಂದು ಅವರು ಹೇಳಿದರು.

ಬುಡಕಟ್ಟು ವ್ಯವಹಾರಗಳ ಸಚಿವಾಲಯವು 2025ರ ಫೆಬ್ರವರಿ 16 ರಿಂದ 24 ರವರೆಗೆ ನವದೆಹಲಿಯ ಮೇಜರ್ ಧ್ಯಾನ್ ಚಂದ್ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆದಿ ಮಹೋತ್ಸವವನ್ನು ಆಯೋಜಿಸಿದೆ. ಈ ಉತ್ಸವವು ನಮ್ಮ ದೇಶದ ಬುಡಕಟ್ಟು ಸಮುದಾಯಗಳ ಶ್ರೀಮಂತ ಮತ್ತು ವೈವಿಧ್ಯಮಯ ಸಾಂಪ್ರದಾಯಿಕ ಸಂಸ್ಕೃತಿಯ ಕಿರು ನೋಟವನ್ನು ಒದಗಿಸುವ ಗುರಿಯನ್ನು ಹೊಂದಿದೆ.

ರಾಷ್ಟ್ರಪತಿಗಳ ಭಾಷಣ ನೋಡಲು ಇಲ್ಲಿ ಕ್ಲಿಕ್ ಮಾಡಿ.

 

*****


(Release ID: 2103887) Visitor Counter : 34