ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ನವದೆಹಲಿಯಲ್ಲಿ 'ಸೈಬರ್ ಭದ್ರತೆ ಮತ್ತು ಸೈಬರ್ ಅಪರಾಧ' ಕುರಿತು ಗೃಹ ಸಚಿವಾಲಯದ ಸಂಸದೀಯ ಸಲಹಾ ಸಮಿತಿಯ ಅಧ್ಯಕ್ಷತೆ ವಹಿಸಿದ್ದರು


ಮೋದಿಯವರ ನಾಯಕತ್ವದಲ್ಲಿ, ದೇಶವು 'ಡಿಜಿಟಲ್ ಕ್ರಾಂತಿ'ಗೆ ಸಾಕ್ಷಿಯಾಗುತ್ತಿದೆ, ಸೈಬರ್ ಭದ್ರತೆಯ ಸವಾಲುಗಳನ್ನು ಎದುರಿಸಲು ಅದರ ಗಾತ್ರ ಮತ್ತು ಪ್ರಮಾಣವನ್ನು ಅರ್ಥಮಾಡಿಕೊಳ್ಳಬೇಕು


ಮ್ಯೂಲ್ ಖಾತೆಗಳನ್ನು ಕಾರ್ಯಗತಗೊಳಿಸುವ ಮೊದಲೇ ಗುರುತಿಸಲು ಮತ್ತು ಮುಚ್ಚಲು ಎಐ ಅನ್ನು ಬಳಸಲಾಗುತ್ತದೆ


ಸೈಬರ್ ಅಪರಾಧವನ್ನು ತಡೆಗಟ್ಟಲು, ಮೋದಿಯವರ 'ಸ್ಟಾಪ್-ಥಿಂಕ್-ಟೇಕ್ ಆಕ್ಷನ್' ಮಂತ್ರದ ಬಗ್ಗೆ ಜಾಗೃತಿ ಮೂಡಿಸಲು ಗೃಹ ಸಚಿವರು ಒತ್ತು ನೀಡಿದ್ದಾರೆ


ಮೋದಿ ಸರ್ಕಾರವು ಸೈಬರ್ ಅಪರಾಧಗಳನ್ನು ನಿಭಾಯಿಸಲು ಸಂಯೋಜನೆ, ಸಮನ್ವಯ, ಸಂವಹನ ಮತ್ತು ಸಾಮರ್ಥ್ಯ ಎಂಬ ನಾಲ್ಕು ಅಂಶಗಳ ಕಾರ್ಯತಂತ್ರದೊಂದಿಗೆ ಮುಂದುವರಿಯುತ್ತಿದೆ


ಸೈಬರ್ ಅಪರಾಧಗಳನ್ನು ತಡೆಗಟ್ಟಲು, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮತ್ತು ಸೈಬರ್ ಸಹಾಯವಾಣಿ '1930' ಅನ್ನು ಉತ್ತೇಜಿಸಲು ಹೆಚ್ಚಿನ ಗಮನಹರಿಸಬೇಕು ಎಂದು ಕೇಂದ್ರ ಗೃಹ ಸಚಿವರು ಹೇಳಿದರು


ಸೈಬರ್‌ ಸ್ಪೇಸ್‌ ನ ಮೂರು ಮೂಲಭೂತ ಅಂಶಗಳಾದ ಸಾಫ್ಟ್‌ವೇರ್, ಸೇವೆಗಳು ಮತ್ತು ಬಳಕೆದಾರರು ಸೈಬರ್ ವಂಚನೆಗಳನ್ನು ನಿಭಾಯಿಸುವಲ್ಲಿ ಪ್ರಮುಖವಾಗಿವೆ


ಸದಸ್ಯರು 'ಸೈಬರ್ ಭದ್ರತೆ ಮತ್ತು ಸೈಬರ್ ಅಪರಾಧ' ವಿಷಯಗಳ ಕುರಿತು ಸಲಹೆಗಳನ್ನು ನೀಡಿದರು ಮತ್ತು ಸರ್ಕಾರದ ಕ್ರಮಗಳನ್ನು ಶ್ಲಾಘಿಸಿದರು

Posted On: 11 FEB 2025 11:41AM by PIB Bengaluru

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ನವದೆಹಲಿಯಲ್ಲಿ 'ಸೈಬರ್ ಭದ್ರತೆ ಮತ್ತು ಸೈಬರ್ ಅಪರಾಧ' ವಿಷಯದ ಕುರಿತು ಗೃಹ ಸಚಿವಾಲಯದ ಸಂಸದೀಯ ಸಲಹಾ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಶ್ರೀ ನಿತ್ಯಾನಂದ ರೈ, ಶ್ರೀ ಬಂಡಿ ಸಂಜಯ್ ಕುಮಾರ್, ಸಮಿತಿಯ ಸದಸ್ಯರು, ಕೇಂದ್ರ ಗೃಹ ಕಾರ್ಯದರ್ಶಿ ಮತ್ತು ಗೃಹ ಸಚಿವಾಲಯದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಸಭೆಯಲ್ಲಿ ಸಮಿತಿಯು 'ಸೈಬರ್ ಭದ್ರತೆ ಮತ್ತು ಸೈಬರ್ ಅಪರಾಧ'ಕ್ಕೆ ಸಂಬಂಧಿಸಿದ ವಿವಿಧ ವಿಷಯಗಳನ್ನು ಚರ್ಚಿಸಿತು.

ಸಭೆಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಅವರು, ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ಡಿಜಿಟಲ್ ಮೂಲಸೌಕರ್ಯವು ವಿಸ್ತಾರಗೊಂಡಿದೆ, ಇದು ಸ್ವಾಭಾವಿಕವಾಗಿ ಸೈಬರ್ ದಾಳಿಗಳ ಸಂಖ್ಯೆಯಲ್ಲಿ ಹೆಚ್ಚಳಕ್ಕೆ ಕಾರಣವಾಗಿದೆ. ನಾವು ಸೈಬರ್‌ ಸ್ಪೇಸ್ ಅನ್ನು ವಿಭಿನ್ನ ದೃಷ್ಟಿಕೋನದಿಂದ ನೋಡಿದಾಗ, ಅದು 'ಸಾಫ್ಟ್‌ವೇರ್', 'ಸೇವೆಗಳು' ಮತ್ತು 'ಬಳಕೆದಾರರ' ಸಂಕೀರ್ಣ ಜಾಲವನ್ನು ರೂಪಿಸುತ್ತದೆ ಎಂದು ಅವರು ಹೇಳಿದರು. 'ಸಾಫ್ಟ್‌ವೇರ್', 'ಸೇವೆಗಳು' ಮತ್ತು 'ಬಳಕೆದಾರರ' ಮೂಲಕ ಸೈಬರ್ ವಂಚನೆಯನ್ನು ನಿಯಂತ್ರಿಸುವುದನ್ನು ನಾವು ಪರಿಗಣಿಸದ ಹೊರತು, ಸೈಬರ್‌ ಸ್ಪೇಸ್ ಸಮಸ್ಯೆಗಳನ್ನು ಪರಿಹರಿಸುವುದು ಅಸಾಧ್ಯ ಎಂದು ಅವರು ಒತ್ತಿ ಹೇಳಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಗೃಹ ಸಚಿವಾಲಯವು ಭಾರತವನ್ನು ಸೈಬರ್-ಸುರಕ್ಷಿತ ರಾಷ್ಟ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಹಲವು ಪ್ರಮುಖ ಕ್ರಮಗಳನ್ನು ಕೈಗೊಂಡಿದೆ ಎಂದು ಶ್ರೀ ಶಾ ತಿಳಿಸಿದರು.

ಸೈಬರ್ ಅಪರಾಧವು ಎಲ್ಲಾ ಭೌಗೋಳಿಕ ಗಡಿಗಳನ್ನು ಅಳಿಸಿಹಾಕಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಇದು ಯಾವುದೇ ಮಿತಿ ಅಥವಾ ನಿರ್ದಿಷ್ಟ ರೂಪವನ್ನು ಹೊಂದಿರದ ಕಾರಣ ಇದು 'ಗಡಿರಹಿತ' ಮತ್ತು 'ನಿರಾಕಾರ' ಅಪರಾಧವಾಗಿದೆ ಎಂದು ಅವರು ಹೇಳಿದರು. ಕಳೆದ ದಶಕದಲ್ಲಿ ಭಾರತವು 'ಡಿಜಿಟಲ್ ಕ್ರಾಂತಿ'ಗೆ ಸಾಕ್ಷಿಯಾಗಿದೆ. 'ಡಿಜಿಟಲ್ ಕ್ರಾಂತಿ'ಯ ಗಾತ್ರ ಮತ್ತು ಪ್ರಮಾಣವನ್ನು ಅರ್ಥಮಾಡಿಕೊಳ್ಳದೆ, ನಾವು ಸೈಬರ್ ಕ್ಷೇತ್ರದ ಸವಾಲುಗಳನ್ನು ಎದುರಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

ಇಂದು ದೇಶದ ಶೇಕಡಾ 95 ರಷ್ಟು ಹಳ್ಳಿಗಳು ಡಿಜಿಟಲ್ ಸಂಪರ್ಕವನ್ನು ಪಡೆದಿವೆ ಮತ್ತು ಒಂದು ಲಕ್ಷ ಗ್ರಾಮ ಪಂಚಾಯತಿಗಳಲ್ಲಿ ವೈ-ಫೈ ಹಾಟ್‌ ಸ್ಪಾಟ್‌ ಗಳನ್ನು ಸ್ಥಾಪಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಕಳೆದ ಹತ್ತು ವರ್ಷಗಳಲ್ಲಿ ಅಂತರ್ಜಾಲ ಬಳಕೆದಾರರ ಸಂಖ್ಯೆ 4.5 ಪಟ್ಟು ಹೆಚ್ಚಾಗಿದೆ. 2024 ರಲ್ಲಿ ಯುಪಿಐ ಮೂಲಕ 17.221 ಲಕ್ಷ ಕೋಟಿ ರೂ. ಮೌಲ್ಯದ ಒಟ್ಟು 246 ಟ್ರಿಲಿಯನ್ ವಹಿವಾಟುಗಳು ನಡೆದಿವೆ ಎಂದು ಹೇಳಿದರು. 2024 ರಲ್ಲಿ ಜಾಗತಿಕ ಡಿಜಿಟಲ್ ವಹಿವಾಟಿನ ಶೇಕಡಾ 48 ರಷ್ಟು ಭಾರತದಲ್ಲಿ ನಡೆಯಿತು. ಸ್ಟಾರ್ಟಪ್ ಪೂರಕ ವ್ಯವಸ್ಥೆಯಲ್ಲಿ ಭಾರತವು ವಿಶ್ವದ ಮೂರನೇ ಅತಿದೊಡ್ಡ ರಾಷ್ಟ್ರವಾಗಿದೆ ಎಂದು ಅವರು ಹೇಳಿದರು. 2023 ರಲ್ಲಿ ಒಟ್ಟು ದೇಶೀಯ ಉತ್ಪನ್ನಕ್ಕೆ (ಜಿಡಿಪಿ) ಡಿಜಿಟಲ್ ಆರ್ಥಿಕತೆಯ ಕೊಡುಗೆಯು ಸುಮಾರು 32 ಲಕ್ಷ ಕೋಟಿ ರೂ.ಗಳಾಗಿದ್ದು, ಇದು 12 ಪ್ರತಿಶತವಾಗಿದೆ ಮತ್ತು ಸುಮಾರು 15 ಮಿಲಿಯನ್ ಉದ್ಯೋಗಗಳನ್ನು ಸೃಷ್ಟಿಸಿದೆ ಎಂದು ಅವರು ಹೇಳಿದರು.

ಇಂದು ಭಾರತವು ಡಿಜಿಟಲ್ ವಿಷಯದಲ್ಲಿ ವಿಶ್ವದ ಮೂರನೇ ಅತಿದೊಡ್ಡ ದೇಶವಾಗಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಡಿಜಿಟಲ್ ಆರ್ಥಿಕತೆಯು ಭಾರತದ ಒಟ್ಟು ಆರ್ಥಿಕತೆಗೆ ಶೇಕಡಾ 20 ರಷ್ಟು ಕೊಡುಗೆ ನೀಡುತ್ತದೆ. ಸೈಬರ್ ಅಪರಾಧ ಪ್ರಕರಣಗಳು ಮತ್ತು ಅವುಗಳ ಎಫ್‌ ಐ ಆರ್‌ ಗಳನ್ನು ಶೂನ್ಯಕ್ಕೆ ಇಳಿಸುವ ಗುರಿಯನ್ನು ಗೃಹ ಸಚಿವಾಲಯ ಹೊಂದಿದೆ ಎಂದು ಅವರು ಮಾಹಿತಿ ನೀಡಿದರು.

ಸೈಬರ್ ಅಪರಾಧವನ್ನು ನಿಭಾಯಿಸಲು ನಾವು ಸಂಯೋಜನೆ, ಸಮನ್ವಯ, ಸಂವಹನ ಮತ್ತು ಸಾಮರ್ಥ್ಯವನ್ನು ಒಳಗೊಂಡಿರುವ ನಾಲ್ಕು ರೀತಿಯ ತಂತ್ರಗಳನ್ನು ಅಳವಡಿಸಿಕೊಂಡಿದ್ದೇವೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಇವೆಲ್ಲವನ್ನೂ ಸ್ಪಷ್ಟ ಉದ್ದೇಶಗಳು ಮತ್ತು ಕಾರ್ಯತಂತ್ರದ ದೃಷ್ಟಿಯೊಂದಿಗೆ ಕಾರ್ಯಗತಗೊಳಿಸಲಾಗುತ್ತಿದೆ. ಗೃಹ ಸಚಿವಾಲಯದೊಳಗೆ ಅಂತರ ಸಚಿವಾಲಯ ಮತ್ತು ಅಂತರ-ಇಲಾಖೆಯ ಸಮನ್ವಯವನ್ನು ಬಲಪಡಿಸಲಾಗಿದೆ, ಇದರಿಂದಾಗಿ ತಡೆರಹಿತ ಸಂವಹನ ಮತ್ತು ಮಾಹಿತಿಯ ಸುಗಮ ಹರಿವನ್ನು ಖಾತ್ರಿಪಡಿಸಲಾಗಿದೆ ಎಂದು ಅವರು ಹೇಳಿದರು.

ಗೃಹ ಸಚಿವಾಲಯ, ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ, CERT-IN, ಐ4ಸಿ ಮತ್ತು ಟೆಲಿಕಾಂ ಮತ್ತು ಬ್ಯಾಂಕಿಂಗ್‌ ನಂತಹ ಇಲಾಖೆಗಳ ನಡುವೆ ಮಾಹಿತಿ ವಿನಿಮಯದ ಆರೋಗ್ಯಕರ ಸಂಪ್ರದಾಯವು ಅನೇಕ ಸೈಬರ್ ಅಪರಾಧ ಪ್ರಕರಣಗಳನ್ನು ಯಶಸ್ವಿಯಾಗಿ ನಿಭಾಯಿಸಲು ಸಹಾಯ ಮಾಡಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು.

ಸೈಬರ್ ಅಪರಾಧವನ್ನು ತಡೆಗಟ್ಟಲು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಮಹತ್ವವನ್ನು ಕೇಂದ್ರ ಗೃಹ ಸಚಿವರು ಒತ್ತಿ ಹೇಳಿದರು ಮತ್ತು ಸಮಿತಿಯ ಎಲ್ಲಾ ಸದಸ್ಯರು ಐ4ಸಿ ಸಹಾಯವಾಣಿ ಸಂಖ್ಯೆ 1930 ಅನ್ನು ಪ್ರಚಾರ ಮಾಡಲು ವಿನಂತಿಸಿದರು. ಸೈಬರ್ ಹಣಕಾಸು ವಂಚನೆಗಳನ್ನು ಗಮನದಲ್ಲಿಟ್ಟುಕೊಂಡು '1930' ಸಹಾಯವಾಣಿ ಕಾರ್ಡ್ ಬ್ಲಾಕಿಂಗ್‌ ನಂತಹ ವಿವಿಧ ಸೇವೆಗಳನ್ನು ನೀಡುವ ಮೂಲಕ ಒನ್-ಪಾಯಿಂಟ್ ಪರಿಹಾರವನ್ನು ಒದಗಿಸುತ್ತದೆ ಎಂದು ಅವರು ಹೇಳಿದರು.‌

ಕೃತಕಬುದ್ಧಿಮತ್ತೆಯನ್ನು ಬಳಸಿಕೊಂಡು ರಿಸರ್ವ್ ಬ್ಯಾಂಕ್ ಮತ್ತು ಎಲ್ಲಾ ಬ್ಯಾಂಕ್‌ಗಳ ಸಮನ್ವಯದಲ್ಲಿ ಮ್ಯೂಲ್ ಖಾತೆಗಳನ್ನು (ಕಾನೂನುಬಾಹಿರ ಹಣ ವರ್ಗಾವಣೆಗೆ ಬಳಸುವ ಖಾತೆಗಳು) ಗುರುತಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು, ಇದರಿಂದ ಅವುಗಳನ್ನು ಪತ್ತೆಹಚ್ಚಲು ವ್ಯವಸ್ಥೆಯನ್ನು ಸ್ಥಾಪಿಸಬಹುದು. ಮ್ಯೂಲ್ ಖಾತೆಗಳು ಕಾರ್ಯಾರಂಭ ಮಾಡುವ ಮುನ್ನವೇ ಮುಚ್ಚುವುದನ್ನು ನಾವು ಖಚಿತಪಡಿಸಿಕೊಳ್ಳುತ್ತೇವೆ ಎಂದು ಅವರು ಹೇಳಿದರು. ಜನರು ಸೈಬರ್ ಅಪರಾಧಗಳ ವಿರುದ್ಧ ಹೆಚ್ಚು ಜಾಗರೂಕರಾಗಿರುವಂತೆ ಮಾಡಲು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ 'ಸ್ಟಾಪ್-ಥಿಂಕ್-ಟೇಕ್‌ ಆಕ್ಷನ್‌ʼ' ಎಂಬ ಮಂತ್ರದ ಬಗ್ಗೆ ಅವರಿಗೆ ಅರಿವು ಮೂಡಿಸಲಾಗುತ್ತಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು.

ಐ4ಸಿ ಪೋರ್ಟಲ್ ನಲ್ಲಿ ಒಟ್ಟು 1 ಲಕ್ಷದ 43 ಸಾವಿರ ಎಫ್ ಐ ಆರ್ ಗಳು ದಾಖಲಾಗಿದ್ದು, 19 ಕೋಟಿಗೂ ಹೆಚ್ಚು ಮಂದಿ ಈ ಪೋರ್ಟಲ್ ಬಳಸಿದ್ದಾರೆ ಎಂದು ಕೇಂದ್ರ ಗೃಹ ಸಚಿವರು ತಿಳಿಸಿದರು. ರಾಷ್ಟ್ರೀಯ ಭದ್ರತಾ ಕಾರಣಗಳಿಗಾಗಿ, ಐ4ಸಿ ಯ ಶಿಫಾರಸುಗಳ ಆಧಾರದ ಮೇಲೆ 805 ಅಪ್ಲಿಕೇಶನ್‌ ಗಳು ಮತ್ತು 3,266 ವೆಬ್‌ಸೈಟ್ ಲಿಂಕ್‌ ಗಳನ್ನು ನಿರ್ಬಂಧಿಸಲಾಗಿದೆ ಎಂದು ಅವರು ಹೇಳಿದರು. ಇದಲ್ಲದೇ 399 ಬ್ಯಾಂಕುಗಳು ಮತ್ತು ಹಣಕಾಸು ಮಧ್ಯವರ್ತಿಗಳೂ ಸೇರಿಕೊಂಡಿದ್ದಾರೆ. 6 ಲಕ್ಷಕ್ಕೂ ಹೆಚ್ಚು ಅನುಮಾನಾಸ್ಪದ ಡೇಟಾ ಪಾಯಿಂಟ್‌ ಗಳನ್ನು ಹಂಚಿಕೊಳ್ಳಲಾಗಿದೆ, 19 ಲಕ್ಷಕ್ಕೂ ಹೆಚ್ಚು ಅನುಮಾನಾಸ್ಪದ ಖಾತೆಗಳನ್ನು ಪತ್ತೆಹಚ್ಚಲಾಗಿದೆ ಮತ್ತು 2,038 ಕೋಟಿ ರೂ. ಮೌಲ್ಯದ ಅನುಮಾನಾಸ್ಪದ ವಹಿವಾಟುಗಳನ್ನು ನಿಲ್ಲಿಸಲಾಗಿದೆ ಎಂದು ಅವರು ಹೇಳಿದರು.

33 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸೈಬರ್ ಅಪರಾಧ ವಿಧಿವಿಜ್ಞಾನ ತರಬೇತಿ ಪ್ರಯೋಗಾಲಯಗಳನ್ನು ಸ್ಥಾಪಿಸಲಾಗಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. "ಮ್ಯಾಸಿವ್ ಓಪನ್ ಆನ್‌ಲೈನ್ ಕೋರ್ಸ್ (ಎಂಒಒಸಿ)" ವೇದಿಕೆಯಾದ 'CyTrain ಪ್ಲಾಟ್‌ಫಾರ್ಮ್‌ನಲ್ಲಿ, 101,561 ಪೊಲೀಸ್ ಅಧಿಕಾರಿಗಳು ನೋಂದಾಯಿಸಿಕೊಂಡಿದ್ದಾರೆ ಮತ್ತು 78,000 ಕ್ಕೂ ಹೆಚ್ಚು ಪ್ರಮಾಣಪತ್ರಗಳನ್ನು ನೀಡಲಾಗಿದೆ ಎಂದು ಅವರು ಹೇಳಿದರು.

ಸಮಿತಿಯ ಸದಸ್ಯರು 'ಸೈಬರ್ ಭದ್ರತೆ ಮತ್ತು ಸೈಬರ್ ಅಪರಾಧ'ಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ತಮ್ಮ ಸಲಹೆಗಳನ್ನು ನೀಡಿದರು ಮತ್ತು ಸೈಬರ್ ಭದ್ರತೆಯನ್ನು ಹೆಚ್ಚಿಸಲು ಸರ್ಕಾರ ಕೈಗೊಂಡ ಪ್ರಮುಖ ಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

 

*****

 


(Release ID: 2101654) Visitor Counter : 12