ರಕ್ಷಣಾ ಸಚಿವಾಲಯ
azadi ka amrit mahotsav

ಏರೋ ಇಂಡಿಯಾ 2025 ಹಾರಾಟ ಆರಂಭ; ಬೆಂಗಳೂರಿನಲ್ಲಿ ಏಷ್ಯಾದ ಅತಿದೊಡ್ಡ ಬಾಹ್ಯಾಕಾಶ ಮತ್ತು ರಕ್ಷಣಾ ಪ್ರದರ್ಶನದ 15ನೇ ಆವೃತ್ತಿಗೆ ರಕ್ಷಣಾ ಸಚಿವರಿಂದ ಚಾಲನೆ


ಇಂದಿನ ಅನಿಶ್ಚಿತತೆಗಳನ್ನು ಎದುರಿಸಲು ಏರೋ ಇಂಡಿಯಾ 2025 ಸಮಾನ ಮನಸ್ಕ ದೇಶಗಳ ನಡುವಿನ ಸಂಬಂಧ ಮತ್ತಷ್ಟು ಬಲವರ್ಧನೆ: ಶ್ರೀ ರಾಜನಾಥ್ ಸಿಂಗ್


"ಭಾರತೀಯ ಭದ್ರತೆ ಅಥವಾ ಭಾರತೀಯ ಶಾಂತಿ ಬದಿಗೊತ್ತಿಲ್ಲ; ಭದ್ರತೆ, ಸ್ಥಿರತೆ ಮತ್ತು ಶಾಂತಿ ರಾಷ್ಟ್ರೀಯ ಗಡಿಗಳನ್ನು ಮೀರಿದ ಸಮಾನ ವಿಷಯಗಳಾಗಿವೆ"


ರಕ್ಷಣಾ ವಲಯವು ಇಂದು ಭಾರತೀಯ ಆರ್ಥಿಕತೆಯ ಬೆಳವಣಿಗೆಯ ಎಂಜಿನ್‌ಗೆ ಶಕ್ತಿ ತುಂಬುವ ಒಂದು ಎಂಜಿನ್ ಆಗಿ ಮಾರ್ಪಟ್ಟಿದೆ - ರಕ್ಷಣಾ ಸಚಿವರ ಹೇಳಿಕೆ

Posted On: 10 FEB 2025 11:57AM by PIB Bengaluru

“ಏರೋ ಇಂಡಿಯಾ 2025 ನಿರ್ಣಾಯಕ ಮತ್ತು ಮುಂಚೂಣಿ ತಂತ್ರಜ್ಞಾನಗಳ ಸಂಗಮವಾಗಿದ್ದು, ಇಂದಿನ ಅನಿಶ್ಚಿತ ಪರಿಸ್ಥಿತಿಗಳನ್ನು ನಿಭಾಯಿಸಲು ಪರಸ್ಪರ ಗೌರವ, ಪರಸ್ಪರ ಆಸಕ್ತಿ ಮತ್ತು ಪರಸ್ಪರ ಲಾಭದ ಆಧಾರದ ಮೇಲೆ ಸಮಾನ ಮನಸ್ಕ ದೇಶಗಳ ನಡುವಿನ ಸಂಬಂಧವನ್ನು ಮತ್ತಷ್ಟು ಬಲವರ್ಧನೆಗೊಳಿಸಲು ವೇದಿಕೆ ಒದಗಿಸುತ್ತದೆ" ಎಂದು ರಕ್ಷಣಾ ಸಚಿವರಾದ ಶ್ರೀ ರಾಜನಾಥ್ ಸಿಂಗ್ ಹೇಳಿದರು. ಅವರು 2025ರ ಫೆಬ್ರವರಿ 10 ರಂದು ಕರ್ನಾಟಕದ ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ 15ನೇ ಆವೃತ್ತಿಯ ಏರೋ ಇಂಡಿಯಾ ಉದ್ಘಾಟಿಸಿ ಮಾತನಾಡಿದರು.  ಏರೋ ಇಂಡಿಯಾ 2025 ದೇಶದ ಕೈಗಾರಿಕಾ ಸಾಮರ್ಥ್ಯ ಮತ್ತು ತಾಂತ್ರಿಕ ಪ್ರಗತಿಯನ್ನು ಇಡೀ ವಿಶ್ವಕ್ಕೆ ಪ್ರದರ್ಶಿಸುತ್ತದೆ ಮತ್ತು ಮಿತ್ರ ರಾಷ್ಟ್ರಗಳೊಂದಿಗೆ ಸಹಜೀವನದ ಸಂಬಂಧಗಳನ್ನು ಮತ್ತಷ್ಟು ಬಲವರ್ಧನೆಗೊಳಿಸುತ್ತದೆ ಎಂದು ಅವರು ಒತ್ತಿ ಹೇಳಿದರು. ರಾಷ್ಟ್ರಗಳು ಒಗ್ಗೂಡಿ ಶಕ್ತಿಶಾಲಿಯಾಗಿ ಉತ್ತಮ ವಿಶ್ವ ವ್ಯವಸ್ಥೆಗಾಗಿ ಕಾರ್ಯನಿರ್ವಹಿಸಿದರೆ ಮಾತ್ರ ಶಾಶ್ವತ ಶಾಂತಿಯನ್ನು ನೆಲೆಸುವಂತೆ ಮಾಡಬಹುದಾಗಿದೆ ಎಂದರು.

ಐದು ದಿನಗಳ ಈ ಏರ್ ಶೋದಲ್ಲಿ ಸರ್ಕಾರಿ ಪ್ರತಿನಿಧಿಗಳು, ಕೈಗಾರಿಕೆಗಳ ನಾಯಕರು, ವಾಯುಪಡೆಯ ಅಧಿಕಾರಿಗಳು, ವಿಜ್ಞಾನಿಗಳು, ರಕ್ಷಣಾ ವಲಯದ ತಜ್ಞರು, ನವೋದ್ಯಮಗಳು, ಶೈಕ್ಷಣಿಕ ಸಂಸ್ಥೆಗಳು ಮತ್ತು ಜಗತ್ತಿನಾದ್ಯಂತದ ಇತರ ಪಾಲುದಾರರು ಭಾಗವಹಿಸಲಿದ್ದಾರೆ ಮತ್ತು ಈ ಸಂಗಮವು ಭಾರತದ ಪಾಲುದಾರರು ಪರಸ್ಪರ ಎಲ್ಲರಿಗೂ ಪ್ರಯೋಜನವಾಗುವಂತೆ ಮಾಡುತ್ತದೆ ಎಂದು ರಕ್ಷಣಾ ಸಚಿವರು ಹೇಳಿದರು.

ನಾವು ಆಗಾಗ್ಗೆ ಖರೀದಿದಾರರು ಮತ್ತು ಮಾರಾಟಗಾರರಾಗಿ ಸಂವಹನ ನಡೆಸುತ್ತೇವೆ, ಅಲ್ಲಿ ನಮ್ಮ ಸಂಬಂಧಗಳು ವಹಿವಾಟಿನ ಮಟ್ಟದಲ್ಲಿರುತ್ತವೆ. ಆದರೂ ಮತ್ತೊಂದು ಹಂತದಲ್ಲಿ ಖರೀದಿದಾರ-ಮಾರಾಟಗಾರರ ಸಂಬಂಧವನ್ನು ಮೀರಿ ಕೈಗಾರಿಕಾ ಸಹಯೋಗದ ಮಟ್ಟಕ್ಕೆ ನಾವು ನಮ್ಮ ಪಾಲುದಾರಿಕೆಯನ್ನು ರೂಪಿಸುತ್ತೇವೆ. ಸಮಾನ ಮನಸ್ಕ ದೇಶಗಳೊಂದಿಗೆ ಸಹ-ಉತ್ಪಾದನೆ ಮತ್ತು ಸಹ-ಅಭಿವೃದ್ಧಿಯ ಅನೇಕ ಯಶಸ್ವಿ ಉದಾಹರಣೆಗಳನ್ನು ನಾವು ಹೊಂದಿದ್ದೇವೆ. ನಾವು ಭಾರತೀಯ ಭದ್ರತೆ ಅಥವಾ ಭಾರತೀಯ ಶಾಂತಿಯನ್ನು ಬದಿಗೊತ್ತುವುದಿಲ್ಲ, ಭದ್ರತೆ, ಸ್ಥಿರತೆ ಮತ್ತು ಶಾಂತಿ ರಾಷ್ಟ್ರೀಯ ಗಡಿಗಳನ್ನು ಮೀರಿದ ಹಂಚಿಕೆಯ ವಿಷಯಗಳಾಗಿವೆ. ನಮ್ಮ ವಿದೇಶಿ ಮಿತ್ರರ ಉಪಸ್ಥಿತಿಯು ನಮ್ಮ ಪಾಲುದಾರರು ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯದ ನಮ್ಮ ದೂರದೃಷ್ಟಿಯನ್ನು ಹಂಚಿಕೊಳ್ಳುತ್ತಾರೆ ಎಂಬುದಕ್ಕೆ ಸಾಕ್ಷಿಯಾಗಿದೆ’’ ಎಂದು ಶ್ರೀ ರಾಜನಾಥ್ ಸಿಂಗ್ ಹೇಳಿದರು.

ಜಾಗತಿಕ ಅನಿಶ್ಚಿತತೆಯ ಸದ್ಯದ ವಾತಾವರಣದಲ್ಲಿ, ಭಾರತವು ಶಾಂತಿ ಮತ್ತು ಸಮೃದ್ಧಿಗೆ ಸಾಕ್ಷಿಯಾಗುತ್ತಿರುವ ಒಂದು ದೊಡ್ಡ ದೇಶವಾಗಿದೆ ಎಂದು ರಕ್ಷಣಾ ಸಚಿವರು ಉಲ್ಲೇಖಿಸಿದರು. “ಭಾರತವು ಯಾವುದೇ ದೇಶದ ಮೇಲೆ ಎಂದಿಗೂ ದಾಳಿ ಮಾಡಿಲ್ಲ ಅಥವಾ ಯಾವುದೇ ಮಹಾನ್ ಶಕ್ತಿ ಪೈಪೋಟಿಯಲ್ಲಿ ಭಾಗಿಯಾಗಿಲ್ಲ. ನಾವು ಸದಾ ಶಾಂತಿ ಮತ್ತು ಸ್ಥಿರತೆಯ ಪ್ರತಿಪಾದಕರಾಗಿದ್ದೇವೆ. ಅದು ನಮ್ಮ ಮೂಲಭೂತ ಆದರ್ಶಗಳ ಭಾಗವಾಗಿದೆ" ಎಂದು ಅವರು ಹೇಳಿದರು. ಜಾಗತಿಕ ಶಾಂತಿ, ಸಮೃದ್ಧಿ ಮತ್ತು ಸ್ಥಿರತೆಗೆ ಭಾರತದೊಂದಿಗಿನ ಸಹಕಾರವು ನಿರ್ಣಾಯಕವಾಗಿದೆ ಎಂದು ಈ ಸಂದರ್ಭದಲ್ಲಿ ಹಾಜರಿದ್ದ ರಕ್ಷಣಾ ಸಚಿವರು, ಹಿರಿಯ ಅಧಿಕಾರಿಗಳು ಮತ್ತು ವಿದೇಶಿ ಮೂಲ ಸಲಕರಣೆ ತಯಾರಕರ ಪ್ರತಿನಿಧಿಗಳಿಗೆ ಶ್ರೀ ರಾಜನಾಥ್ ಸಿಂಗ್ ಅವರು ತಿಳಿಸಿದರು.

ಭಾರತವು ಪರಿವರ್ತನೆಯ ಹಾದಿಯಲ್ಲಿ ಸಾಗುತ್ತಿದೆ, ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರದಿಂದ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಅತ್ಯಂತ ವೇಗವಾಗಿ ಬದಲಾಗುತ್ತಿದೆ ಎಂದು ಶ್ರೀ ರಾಜನಾಥ್ ಸಿಂಗ್ ಪ್ರತಿಪಾದಿಸಿದರು. ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಸರ್ಕಾರವು ಸಂಘಟಿತ, ಸುಸ್ಥಿರ ಮತ್ತು ಉತ್ತಮ ನೀಲನಕ್ಷೆಯಿಂದಾಗಿ ದೇಶದಲ್ಲಿ ಕ್ರಿಯಾಶೀಲ ಮತ್ತು ಅಭಿವೃದ್ಧಿ ಹೊಂದುತ್ತಿರುವ ರಕ್ಷಣಾ ಉದ್ಯಮ ಪೂರಕ ವ್ಯವಸ್ಥೆಯನ್ನು ಸೃಷ್ಟಿಸಲಾಗಿದೆ ಎಂದು ಅವರು ಹೇಳಿದರು. ಈ ಹಿಂದೆ ರಾಷ್ಟ್ರೀಯ ಆರ್ಥಿಕತೆಯ ಒಂದು ಅಂಶವಾಗಿ ನೋಡಲಾಗದ ರಕ್ಷಣಾ ಕೈಗಾರಿಕಾ ವಲಯವನ್ನು ಇಂದು ಒಟ್ಟಾರೆ ಆರ್ಥಿಕತೆಯೊಂದಿಗೆ ಸಂಪೂರ್ಣವಾಗಿ ಸಂಯೋಜಿಸಲಾಗಿದೆ ಎಂದು ಅವರು ಬಲವಾಗಿ ಪ್ರತಿಪಾದಿಸಿದರು. ಈ ವಲಯವು ಈಗ ಒಂದು ಮೋಟರ್ ಆಗಿದ್ದು, ಅದು ಭಾರತೀಯ ಆರ್ಥಿಕತೆಯ ಬೆಳವಣಿಗೆಯ ಎಂಜಿನ್‌ಗೆ ಶಕ್ತಿ ತುಂಬುತ್ತಿದೆ ಎಂದು ಅವರು ಹೇಳಿದರು.

2025-26ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ರಕ್ಷಣಾ ಸಚಿವಾಲಯಕ್ಕೆ ದಾಖಲೆಯ 6.81 ಲಕ್ಷ ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿದ್ದು, ಅದರಲ್ಲಿ ಬಂಡವಾಳ ಹೂಡಿಕೆಗೆ  1.80 ಲಕ್ಷ ಕೋಟಿ ರೂ. ಸೇರಿದಂತೆ ಸರ್ಕಾರವು ರಕ್ಷಣೆಯನ್ನು ಅತ್ಯಂತ ಆದ್ಯತೆಯ ವಲಯವೆಂದು ಪರಿಗಣಿಸುತ್ತದೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ರಕ್ಷಣಾ ಸಚಿವರು ಹೇಳಿದ್ದಾರೆ. ಹಿಂದಿನ ಬಜೆಟ್‌ನಂತೆ ಆಧುನೀಕರಣ ಬಜೆಟ್‌ನ ಶೇ.75 ರಷ್ಟು ಹಣವನ್ನು ದೇಶೀಯ ಮೂಲಗಳ ಮೂಲಕ ಖರೀದಿಗೆ ಮೀಸಲಿಡಲಾಗಿದೆ ಮತ್ತು ಭಾರತದ ರಕ್ಷಣಾ ಕೈಗಾರಿಕಾ ಸಂಕೀರ್ಣದ ಸಾಮರ್ಥ್ಯಗಳನ್ನು ವಿಸ್ತರಿಸುವ ಮತ್ತು ಗಾಢಗೊಳಿಸುವ ಗುರಿಯನ್ನು ಹೊಂದಿದೆ ಎಂದು ಅವರು ಹೇಳಿದರು.

ಈ ಒಟ್ಟಾರೆ ಯಶೋಗಾಥೆಯಲ್ಲಿ ಖಾಸಗಿ ಪಾಲುದಾರರನ್ನು ತೊಡಗಿಸಿಕೊಳ್ಳುವ ಪ್ರಮಾಣವನ್ನು ವೃದ್ಧಿಸುವ ಬಗ್ಗೆ ಸರ್ಕಾರದ ಬದ್ಧತೆಯನ್ನು ಶ್ರೀ ರಾಜನಾಥ್ ಸಿಂಗ್ ಪುನರುಚ್ಚರಿಸಿದರು. "ಖಾಸಗಿ ವಲಯವು ಆರ್ಥಿಕ ಮುಖ್ಯವಾಹಿನಿಗೆ ತರುವಲ್ಲಿ ದೊಡ್ಡ ಪಾತ್ರವನ್ನು ವಹಿಸಲಿದೆ. ಅದರ  ಮುಂದಾಳತ್ವ, ಸ್ಥಿತಿಸ್ಥಾಪಕತ್ವ ಮತ್ತು ಉದ್ಯಮಶೀಲತೆಯಿಂದಾಗಿ ಈ ವಲಯವು ದೇಶದಲ್ಲಿ ಹೊಸ ಸಮೃದ್ಧಿಯನ್ನು ತರುವ ಸಾಮರ್ಥ್ಯವನ್ನು ಹೊಂದಿದೆ. ಅನೇಕ ಮುಂದುವರಿದ ದೇಶಗಳಲ್ಲಿ ಖಾಸಗಿ ಉದ್ಯಮವು ರಕ್ಷಣಾ ಉತ್ಪಾದನೆಯನ್ನು ಮುನ್ನಡೆಸಿದೆ. ಇಲ್ಲಿಯೂ ಸಹ ಆ ವಲಯವು ರಕ್ಷಣಾ ಉದ್ಯಮದಲ್ಲಿ ಸಮಾನ ಪಾಲುದಾರರಾಗಲು ಇದು ಸಕಾಲ" ಎಂದು ಅವರು ಹೇಳಿದರು.

ರಕ್ಷಣಾ ಸಾಧನಗಳ ತಯಾರಕರು ರಕ್ಷಣಾ ವಲಯವನ್ನು ಬಲಪಡಿಸಲು ಸಹಯೋಗದ ವಿಧಾನಗಳ ಮೂಲಕ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ರಕ್ಷಣಾ ಸಚಿವರು ಹೇಳಿದರು. ಗುಜರಾತ್‌ನಲ್ಲಿ ಸಿ-295 ಸಾರಿಗೆ ವಿಮಾನಗಳ ಉತ್ಪಾದನೆಗಾಗಿ ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್ ಮತ್ತು ಏರ್‌ಬಸ್ ನಡುವಿನ ಜಂಟಿ ಉದ್ಯಮ ಈ ಸಹಕಾರದ ಉಜ್ವಲ ಉದಾಹರಣೆ ಎಂದು ಬಣ್ಣಿಸಿದರು. ಇಂದು ಭಾರತವು  ವೈಮಾನಿಕ ಬಿಡಿಭಾಗಗಳು ಮತ್ತು ಕಾಂಪ್ಲೆಕ್ಸ್ ಸಿಸ್ಟಮ್ ಅಸೆಂಬ್ಲಿಗೆ ಜಾಗತಿಕವಾಗಿ ಆದ್ಯತೆಯ ತಾಣವಾಗಿದೆ ಮತ್ತು ಸಾರ್ವಜನಿಕ ವಲಯ ಮತ್ತು ಖಾಸಗಿ ಕೈಗಾರಿಕೆಗಳು ಈ ಪರಿವರ್ತನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ ಎಂದು ಅವರು ಹೇಳಿದರು.

ಕಳೆದ ಏರೋ ಇಂಡಿಯಾದಲ್ಲಿ ಮಾಡಿದ ಸಾಧನೆಗಳ ಮೇಲೆ ಬೆಳಕು ಚೆಲ್ಲಿದ ಶ್ರೀ ರಾಜನಾಥ್ ಸಿಂಗ್ ಅವರು ಅಸ್ತ್ರ ಕ್ಷಿಪಣಿ, ಹೊಸ ತಲೆಮಾರಿನ ಆಕಾಶ್ ಕ್ಷಿಪಣಿ, ಸ್ವಾಯತ್ತ ನೀರೊಳಗಿನ ವಾಹನ, ಮಾನವರಹಿತ ಮೇಲ್ಮೈ ಹಡಗು, ಪಿನಾಕಾ ಮಾರ್ಗದರ್ಶಿ ರಾಕೆಟ್‌ನಂತಹ ಹಲವು ಅತ್ಯಾಧುನಿಕ ಉತ್ಪನ್ನಗಳನ್ನು ದೇಶದಲ್ಲಿಯೇ ತಯಾರಿಸಲಾಗುತ್ತಿದೆ ಎಂದು ಹೇಳಿದರು. ಮುಂಬರುವ ದಿನಗಳಲ್ಲಿ 1.27 ಲಕ್ಷ ಕೋಟಿ ರೂ, ಮೌಲ್ಯದ ರಕ್ಷಣಾ ಉತ್ಪಾದನೆ ಮತ್ತು 21,000 ಕೋಟಿ ರೂ. ರಕ್ಷಣಾ ಸಾಧನಗಳ ರಫ್ತು ಅಂಕಿ ಅಂಶಗಳನ್ನು ದಾಟುವ ಮತ್ತು ರಕ್ಷಣಾ ವಲಯವು ಅಭೂತಪೂರ್ವ ವೇಗದಲ್ಲಿ ಮುಂದುವರಿಯುವಂತೆ ನೋಡಿಕೊಳ್ಳುವ ಸರ್ಕಾರದ ಅಚಲ ಸಂಕಲ್ಪವನ್ನು ಮತ್ತೊಮ್ಮೆ ಪುನರುಚ್ಚರಿಸಿದರು. ನಿನ್ನೆ ಸಂಜೆ ಏರೋ ಇಂಡಿಯಾ 2025 ರ ಪೂರ್ವಭಾವಿ ಪತ್ರಿಕಾಗೋಷ್ಠಿಯಲ್ಲಿ, ರಕ್ಷಣಾ ಉತ್ಪಾದನೆ 1.60 ಲಕ್ಷ ಕೋಟಿ ರೂ. ಗುರಿ ದಾಟುತ್ತದೆ ಮತ್ತು ರಕ್ಷಣಾ ರಫ್ತು 30,000 ಕೋಟಿ ರೂ.  ಮೀರುತ್ತದೆ ಎಂದು ರಕ್ಷಣಾ ಸಚಿವರು ವಿಶ್ವಾಸ ವ್ಯಕ್ತಪಡಿಸಿದ್ದನ್ನು ಇಲ್ಲಿ ಮತ್ತೆ ನೆನಪಿಸಿಕೊಳ್ಳಬಹುದಾಗಿದೆ.

ರಕ್ಷಣಾ ಸಚಿವಾಲಯದಲ್ಲಿ 2025 ಅನ್ನು 'ಸುಧಾರಣೆಗಳ ವರ್ಷ' ಎಂದು ಘೋಷಿಸಿದಾಗ ರಕ್ಷಣಾ ಸಚಿವರು ಇದು ಕೇವಲ ಸರ್ಕಾರಿ ಘೋಷಣೆಯಲ್ಲ, ಆದರೆ ಸುಧಾರಣೆಗಳ ಕಡೆಗೆ ಸರ್ಕಾರದ ಬದ್ಧತೆ ಎಂದು ಬಣ್ಣಿಸಿದರು. ಸುಧಾರಣೆಗಳ ನಿರ್ಧಾರಗಳನ್ನು ಸಚಿವಾಲಯ ಮಟ್ಟದಲ್ಲಿ ಮಾತ್ರ ತೆಗೆದುಕೊಳ್ಳಲಾಗುತ್ತಿಲ್ಲ, ಬದಲಾಗಿ ಸಶಸ್ತ್ರ ಪಡೆಗಳು ಮತ್ತು ಡಿಪಿಎಸ್‌ಯುಗಳು ಸಹ ಈ ಪ್ರಯತ್ನದಲ್ಲಿ ಭಾಗವಹಿಸುತ್ತಿವೆ ಎಂದು ಅವರು ಹೇಳಿದರು. "ಸುಧಾರಣೆಗಳ ಈ ಅಭಿಯಾನವನ್ನು ಹೆಚ್ಚು ವೇಗವಾಗಿ ಮುಂದೆ ಕೊಂಡೊಯ್ಯಲು, ರಕ್ಷಣಾ ವಲಯದ ಎಲ್ಲಾ ಪಾಲುದಾರರ ಭಾಗವಹಿಸುವಿಕೆ ಇರಬೇಕು. ಸಚಿವಾಲಯದೊಂದಿಗೆ ಸಂಬಂಧಿಸಿದ ಎಲ್ಲಾ ಪಾಲುದಾರರಿಂದ ಸಲಹೆಗಳು ಸ್ವಾಗತಾರ್ಹ" ಎಂದು ಅವರು ಹೇಳಿದರು

ಇದಕ್ಕೂ ಮುನ್ನ ಸಚಿವರಾದ ಶ್ರೀ ರಾಜನಾಥ್ ಸಿಂಗ್ ಅವರು ವಿಶ್ವದಾದ್ಯಂತ ಆಗಮಿಸಿರುವ ಗಣ್ಯ ಅತಿಥಿಗಳನ್ನು ಸ್ವಾಗತಿಸಿದರು. ಭಾರತೀಯ ಸಂಪ್ರದಾಯವಾದ ಅತಿಥಿ ದೇವೋ ಭವದ ಬಗ್ಗೆ ಅವರಿಗೆ ಅರಿವು ಮೂಡಿಸಿದರು. ಅಂದರೆ 'ಅತಿಥಿ ದೇವರಿಗೆ ಸಮಾನ' ಎಂದರ್ಥ, ಇದನ್ನು ಪವಿತ್ರ ನಗರವಾದ ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭದಲ್ಲಿ ಸ್ಪಷ್ಟವಾಗಿ ಕಾಣಬಹುದಾಗಿದೆ ಎಂದು ಅವರು ಹೇಳಿದರು. "ಮಹಾಕುಂಭವು ಆತ್ಮಾವಲೋಕನದ ಕುಂಭವಾಗಿದ್ದರೆ, ಏರೋ ಇಂಡಿಯಾ ಸಂಶೋಧನೆಯ ಕುಂಭವಾಗಿದೆ. ಮಹಾಕುಂಭವು ಆಂತರಿಕ ಶಕ್ತಿಯ ಮೇಲೆ ಕೇಂದ್ರೀಕರಿಸಿದರೆ, ಏರೋ ಇಂಡಿಯಾ ಬಾಹ್ಯ ಶಕ್ತಿಯ ಮೇಲೆ ಕೇಂದ್ರೀಕರಿಸುತ್ತದೆ. ಮಹಾಕುಂಭವು ಭಾರತದ ಸಂಸ್ಕೃತಿಯನ್ನು ಪ್ರದರ್ಶಿಸಿದರೆ, ಏರೋ ಇಂಡಿಯಾ ಭಾರತದ ಶಕ್ತಿಯನ್ನು ಪ್ರದರ್ಶಿಸುತ್ತದೆ" ಎಂದು ಅವರು ಹೇಳಿದರು.

ರಕ್ಷಣಾ ಸಚಿವರು ಉದ್ಘಾಟಿಸಿದ ಏಷ್ಯಾದ ಅತಿದೊಡ್ಡ ವೈಮಾನಿಕ ಮತ್ತು ರಕ್ಷಣಾ ಪ್ರದರ್ಶನದ 15ನೇ ಆವೃತ್ತಿಯು ಮುಂದಿನ ಐದು ದಿನಗಳಲ್ಲಿ, ಜಾಗತಿಕ ವೈಮಾನಿಕ ಕಂಪನಿಗಳ ಅತ್ಯಾಧುನಿಕ ಉತ್ಪನ್ನಗಳ ಜೊತೆಗೆ ಭಾರತದ ವೈಮಾನಿಕ ಪರಾಕ್ರಮ ಮತ್ತು ಸ್ಥಳೀಯ ಅತ್ಯಾಧುನಿಕ ನಾವೀನ್ಯತೆಗಳನ್ನು ಪ್ರದರ್ಶಿಸಲಿದೆ. 'ಆತ್ಮನಿರ್ಭರ ಭಾರತ' ಮತ್ತು 'ಮೇಕ್ ಇನ್ ಇಂಡಿಯಾ, ಮೇಕ್ ಫಾರ್ ದಿ ವರ್ಲ್ಡ್' ದೂರದೃಷ್ಟಿಗೆ ಅನುಗುಣವಾಗಿ ಈ ಕಾರ್ಯಕ್ರಮವು ದೇಶೀಕರಣ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಅಂತಾರಾಷ್ಟ್ರೀಯ ಸಹಯೋಗಗಳನ್ನು ರೂಪಿಸಲು ಒಂದು ವೇದಿಕೆಯನ್ನು ಒದಗಿಸುತ್ತದೆ. ಇದು 2047ರ ವೇಳೆಗೆ ದೇಶವನ್ನು ವಿಕಸಿತ ಭಾರತವನ್ನಾಗಿ ಮಾಡುವ ಪ್ರಧಾನಿ ಶ್ರೀ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಸಂಕಲ್ಪಕ್ಕೆ ಒತ್ತು ನೀಡುತ್ತದೆ.

ಫೆಬ್ರವರಿ 10 ರಿಂದ 12 ರವರೆಗೆ ವ್ಯಾಪಾರ-ವಹಿವಾಟಿನ ದಿನಗಳನ್ನಾಗಿ ಕಾಯ್ದಿರಿಸಲಾಗಿದೆ. 13 ಮತ್ತು 14 ನೇ ತಾರೀಖು ಸಾರ್ವಜನಿಕ ದಿನಗಳಾಗಿ ಪ್ರದರ್ಶನವನ್ನು ವೀಕ್ಷಿಸಲು ಜನರಿಗೆ ಅವಕಾಶ ಕಲ್ಪಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವರ ಸಮಾವೇಶ; ಸಿಇಒಗಳ ದುಂಡುಮೇಜಿನ ಸಭೆ; ಭಾರತ ಮತ್ತು ಐಡಿಇಎಕ್ಸ್ ಮಳಿಗೆಗಳ ಉದ್ಘಾಟನೆ; ಮಂಥನ ಐಡಿಇಎಕ್ಸ್ ಕಾರ್ಯಕ್ರಮ; ಸಮರ್ಥ್ಯ ದೇಶೀಕರಣ ಕಾರ್ಯಕ್ರಮ; ಸಮಾರೋಪ ಸಮಾರಂಭ; ವಿಚಾರ ಸಂಕಿರಣಗಳು; ಮೈನವಿರೇಳಿಸುವ ವೈಮಾನಿಕ ಪ್ರದರ್ಶನಗಳು ಮತ್ತು ಏರೋಸ್ಪೇಸ್ ಕಂಪನಿಗಳ ಪ್ರದರ್ಶನ ಸೇರಿವೆ.

ರಕ್ಷಣಾ ಖಾತೆ ರಾಜ್ಯ ಸಚಿವರಾದ ಶ್ರೀ ಸಂಜಯ್ ಸೇಠ್, ನಾಗಾಲ್ಯಾಂಡ್ ಮುಖ್ಯಮಂತ್ರಿ ಶ್ರೀ ನೀಫಿಯು ರಿಯೊ, ಕರ್ನಾಟಕದ ಉಪಮುಖ್ಯಮಂತ್ರಿ ಶ್ರೀ ಡಿ.ಕೆ. ಶಿವಕುಮಾರ್, ರಕ್ಷಣಾ ಪಡೆ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್, ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ದಿನೇಶ್ ಕೆ ತ್ರಿಪಾಠಿ, ಸೇನಾಪಡೆ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ, ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ರಕ್ಷಣಾ ಕಾರ್ಯದರ್ಶಿ ಶ್ರೀ ರಾಜೇಶ್ ಕುಮಾರ್ ಸಿಂಗ್, ಕಾರ್ಯದರ್ಶಿ (ರಕ್ಷಣಾ ಉತ್ಪಾದನೆ) ಶ್ರೀ ಸಂಜೀವ್ ಕುಮಾರ್ ಮತ್ತು ವಾಯುಪಡೆಯ ಉಪ ಮುಖ್ಯಸ್ಥ ಏರ್ ಮಾರ್ಷಲ್ ಎಸ್‌ಪಿ ಧಾರ್ಖರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 

*****


(Release ID: 2101287) Visitor Counter : 35