ಹಣಕಾಸು ಸಚಿವಾಲಯ
azadi ka amrit mahotsav

ಸಕ್ಷಮ್ ಅಂಗನವಾಡಿ ಮತ್ತು ಪೋಷಣ್ 2.0 ಕಾರ್ಯಕ್ರಮದ ಅಡಿ, ಹೆಚ್ಚಿನ ಪೌಷ್ಟಿಕಾಂಶ ಬೆಂಬಲ


ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲಿ ಡೇ ಕೇರ್ ಕ್ಯಾನ್ಸರ್ ಕೇಂದ್ರಗಳ ಸ್ಥಾಪನೆ; 2025-26ರಲ್ಲಿ 200 ಕೇಂದ್ರಗಳ ಸ್ಥಾಪನೆ

ಖಾಸಗಿ ವಲಯದ ಸಹಭಾಗಿತ್ವದಲ್ಲಿ ವೈದ್ಯಕೀಯ ಪ್ರವಾಸೋದ್ಯಮ ಮತ್ತು “ಭಾರತದಲ್ಲಿ ರೋಗ ನಿವಾರಣೆ(ಗುಣಪಡಿಸು)” ವಲಯಗಳನ್ನು ಉತ್ತೇಜಿಸಲಾಗುವುದು

36 ಜೀವರಕ್ಷಕ ಔಷಧಗಳು ಮತ್ತು ಮೂಲಿಕೆಗಳಿಗೆ ಮೂಲ ಸೀಮಾಸುಂಕದಿಂದ ಸಂಪೂರ್ಣ ವಿನಾಯಿತಿ ನೀಡಲಾಗಿದೆ

Posted On: 01 FEB 2025 1:07PM by PIB Bengaluru

ಹೂಡಿಕೆಯು ಅಭಿವೃದ್ಧಿಯ 3ನೇ ಎಂಜಿನ್ ಆಗಿದ್ದು, ಅದು ಜನರಲ್ಲಿ ಹೂಡಿಕೆ ಮಾಡುವುದನ್ನು, ಆರ್ಥಿಕತೆಯಲ್ಲಿ ಹೂಡಿಕೆ ಮಾಡುವುದನ್ನು ಮತ್ತು ನಾವೀನ್ಯತೆಯಲ್ಲಿ ಹೂಡಿಕೆ ಮಾಡುವುದನ್ನು ಒಳಗೊಂಡಿದೆ ಎಂದು ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿಂದು 2025-26ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸುತ್ತಾ ಹೇಳಿದರು.

ಜನರಲ್ಲಿ ಹೂಡಿಕೆ ಮಾಡುವ ವಿಷಯ ಪ್ರಸ್ತಾಪಿಸಿದ ಅವರು, 2025-26ರ ಕೇಂದ್ರ ಬಜೆಟ್, ಸಕ್ಷಮ್ ಅಂಗನವಾಡಿ ಮತ್ತು ಪೋಷಣ್ 2.0 ಕಾರ್ಯಕ್ರಮದ ಅಡಿ,  ಪೌಷ್ಠಿಕಾಂಶ ಬೆಂಬಲಿಸುವ ಸಲುವಾಗಿ, ವೆಚ್ಚ ನಿಯಾವಳಿ ಅಥವಾ ಮಾನದಂಡಗಳನ್ನು ಹೆಚ್ಚಿಸುವುದಾಗಿ ತಿಳಿಸಿದರು. ಈ ಕಾರ್ಯಕ್ರಮವು ದೇಶಾದ್ಯಂತ 8 ಕೋಟಿಗೂ ಹೆಚ್ಚು ಮಕ್ಕಳು, 1 ಕೋಟಿ ಗರ್ಭಿಣಿಯರು ಮತ್ತು ಬಾಣಂತಿಯರಿಗೆ ಮತ್ತು ಮಹತ್ವಾಕಾಂಕ್ಷೆಯ ಜಿಲ್ಲೆಗಳು ಮತ್ತು ಈಶಾನ್ಯ ಪ್ರದೇಶಗಳ ಸುಮಾರು 20 ಲಕ್ಷ ಹದಿಹರೆಯದ ಹುಡುಗಿಯರಿಗೆ ಪೌಷ್ಠಿಕಾಂಶ ಬೆಂಬಲ ಒದಗಿಸುತ್ತದೆ ಎಂದರು.

ಮುಂದಿನ 3 ವರ್ಷಗಳಲ್ಲಿ ದೇಶದ ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲಿ ಡೇ ಕೇರ್ ಕ್ಯಾನ್ಸರ್ ಕೇಂದ್ರಗಳನ್ನು ಸ್ಥಾಪಿಸಲಾಗುವುದು, 2025-26ರ ಸಾಲಿನಲ್ಲಿ 200 ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಕೇಂದ್ರ ಹಣಕಾಸು ಸಚಿವರು ಘೋಷಿಸಿದರು. ಮುಂದಿನ 5 ವರ್ಷಗಳಲ್ಲಿ 75,000 ವೈದ್ಯಕೀಯ ಸೀಟುಗಳನ್ನು ಸೇರಿಸುವ ಗುರಿಯೊಂದಿಗೆ, ಮುಂದಿನ ವರ್ಷ ವೈದ್ಯಕೀಯ ಕಾಲೇಜುಗಳು ಮತ್ತು ಆಸ್ಪತ್ರೆಗಳಲ್ಲಿ 10,000 ಹೆಚ್ಚುವರಿ ವೈದ್ಯ ಸೀಟುಗಳನ್ನು ಸೇರಿಸಲಾಗುವುದು ಎಂದು ತಿಳಿಸಿದರು.

ವೈದ್ಯಕೀಯ ಪ್ರವಾಸೋದ್ಯಮ ಮತ್ತು “ಭಾರತದಲ್ಲಿ ರೋಗ ನಿವಾರಣೆ” ವಲಯವನ್ನು ಖಾಸಗಿ ವಲಯದ ಸಹಭಾಗಿತ್ವದಲ್ಲಿ ಸಾಮರ್ಥ್ಯ ವೃದ್ಧಿ ಮತ್ತು ಸುಲಭ ವೀಸಾ ಮಾನದಂಡಗಳೊಂದಿಗೆ ಉತ್ತೇಜಿಸಲಾಗುವುದು ಎಂದು ಹಣಕಾಸು ಸಚಿವರು ಮಾಹಿತಿ ನೀಡಿದರು.

ಔಷಧಗಳು, ಮೂಲಿಕೆಗಳ ಆಮದಿಗೆ ಪರಿಹಾರ

ರೋಗಿಗಳಿಗೆ, ವಿಶೇಷವಾಗಿ ಕ್ಯಾನ್ಸರ್ ಸೇರಿದಂತೆ ಅಪರೂಪದ ಕಾಯಿಲೆಗಳು ಮತ್ತು ಇತರೆ ತೀವ್ರ ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಹಣಕಾಸು ಸಚಿವರು, 36 ಜೀವರಕ್ಷಕ ಔಷಧಗಳು ಮತ್ತು ಮೂಲಿಕೆಗಳನ್ನು ಮೂಲ ಸೀಮಾಸುಂಕ(ಬಿಸಿಡಿ)ದಿಂದ ಸಂಪೂರ್ಣ ವಿನಾಯಿತಿ ಪಡೆದ ಔಷಧಿಗಳ ಪಟ್ಟಿಗೆ ಸೇರಿಸುವುದಾಗಿ ಪ್ರಸ್ತಾಪಿಸಿದ್ದಾರೆ.

6 ಜೀವರಕ್ಷಕ ಔಷಧಗಳನ್ನು ಸೀಮಾಸುಂಕದಿಂದ 5% ರಿಯಾಯಿತಿ ಹೊಂದಿರುವ ಔಷಧಗಳ ಪಟ್ಟಿಗೆ ಸೇರಿಸುವುದಾಗಿ ಹಣಕಾಸು ಸಚಿವರು ಪ್ರಸ್ತಾಪಿಸಿದ್ದಾರೆ. ಮೇಲಿನ ಔಷಧಗಳ ಬೃಹತ್ ತಯಾರಿಕೆಗೂ ಸಂಪೂರ್ಣ ವಿನಾಯಿತಿ ಮತ್ತು ರಿಯಾಯಿತಿ ಸುಂಕ ದರ ಕ್ರಮವಾಗಿ ಅನ್ವಯಿಸುತ್ತದೆ ಎಂದರು.

ಔಷಧೀಯ ಕಂಪನಿಗಳು ನಡೆಸುವ “ರೋಗಿಗೆ ನೆರವು ಕಾರ್ಯಕ್ರಮ”ಗಳ ಅಡಿ, ಔಷಧಗಳು ಮತ್ತು ಮೂಲಿಕೆಗಳನ್ನು ರೋಗಿಗಳಿಗೆ ಉಚಿತವಾಗಿ ಸರಬರಾಜು ಮಾಡಿದರೆ, ಅವು ಬಿಸಿಡಿಯಿಂದ ಸಂಪೂರ್ಣವಾಗಿ ವಿನಾಯಿತಿ ಪಡೆಯುತ್ತವೆ. ಹೊಸದಾದ 13 “ರೋಗಿಗೆ ನೆರವು ಕಾರ್ಯಕ್ರಮ”ಗಳೊಂದಿಗೆ 37 ಹೆಚ್ಚುವರಿ ಔಷಧಗಳನ್ನು ತೆರಿಗೆ ವಿನಾಯಿತಿಗೆ ಸೇರಿಸಲು ಬಜೆಟ್ ಪ್ರಸ್ತಾಪಿಸಿದೆ.

ಆಹಾರ ಮತ್ತು ಪೌಷ್ಟಿಕಾಂಶ ಕಾರ್ಯಕ್ರಮಗಳ ಕುರಿತು ಸಂಬಂಧಿತ ಮಾಹಿತಿಗಾಗಿ, ಇಲ್ಲಿ ಕ್ಲಿಕ್ ಮಾಡಿ -

https://pib.gov.in/PressReleasePage.aspx?PRID=2098449

 

*****
 


(Release ID: 2098657) Visitor Counter : 18