ಹಣಕಾಸು ಸಚಿವಾಲಯ
ಕಳೆದ ಕೆಲವು ವರ್ಷಗಳಲ್ಲಿ ಗಣನೀಯ ಸುಧಾರಣೆ ಕಾರ್ಮಿಕ ಮಾರುಕಟ್ಟೆ ಸೂಚಕಗಳಲ್ಲಿ ಪ್ರತಿಫಲಿತ: ಆರ್ಥಿಕ ಸಮೀಕ್ಷೆ 2024-25
ನಿರುದ್ಯೋಗ ದರ 2017-18ರಲ್ಲಿ ಶೇ 6 ರಷ್ಟಿದ್ದು 2023-24 ರಲ್ಲಿ ಶೇ 3.2 ಕ್ಕೆ ಇಳಿಕೆ
ಮಹಿಳಾ ಕಾರ್ಮಿಕರ ಪ್ರಮಾಣ 2017-18 ರಲ್ಲಿ ಶೇ. 23.3 ರಷ್ಟಿದ್ದು 2023-24 ರಲ್ಲಿ ಶೇ. 41.7 ಕ್ಕೆ ಏರಿಕೆ
ಇ-ಶ್ರಮ್ ಪೋರ್ಟಲ್ನಲ್ಲಿ 30.51 ಕೋಟಿಗೂ ಹೆಚ್ಚು ಅಸಂಘಟಿತ ಕಾರ್ಮಿಕರ ನೋಂದಣಿ; ಇ-ಶ್ರಮ್ನೊಂದಿಗೆ 12 ಯೋಜನೆಗಳ ಸಂಯೋಜನೆ /ಮ್ಯಾಪಿಂಗ್
ವ್ಯಾಪಾರ ಪ್ರಗತಿಗೆ ಬೆಂಬಲ ನೀಡಲು, ಉದ್ಯೋಗ ಸೃಷ್ಟಿಸಲು ಮತ್ತು ಆರ್ಥಿಕ ಅಭಿವೃದ್ಧಿ ಉತ್ತೇಜಿಸಲು ಕಾರ್ಮಿಕ ನಿಯಮಗಳ ಪರಿಸರ ಒದಗಿಸಲು ಆರ್ಥಿಕ ಸಮೀಕ್ಷೆ ಪ್ರತಿಪಾದನೆ
ಮಹಿಳಾ ಉದ್ಯಮಶೀಲತೆಯನ್ನು ಉತ್ತೇಜಿಸಲು ಆರ್ಥಿಕ ಬೆಂಬಲ, ತರಬೇತಿ ಮತ್ತು ಮಾರ್ಗದರ್ಶನ
ಡಿಜಿಟಲ್ ಆರ್ಥಿಕತೆ ಮತ್ತು ನವೀಕರಣ ಇಂಧನ ವಲಯದಿಂದ ಉದ್ಯೋಗ ಸೃಷ್ಟಿ ಅವಕಾಶ ವರ್ಧನೆ
ಸರ್ಕಾರದಿಂದ ಪರಿಹಾರಾತ್ಮಕ ಮತ್ತು ಪ್ರತಿಕ್ರಿಯಾ ಕೌಶಲ್ಯಪೂರ್ಣ ಪರಿಸರ ವ್ಯವಸ್ಥೆ ಸ್ಥಾಪನೆ
Posted On:
31 JAN 2025 2:00PM by PIB Bengaluru
ಭಾರತದಲ್ಲಿ ಸಾಂಕ್ರಾಮಿಕ ನಂತರದ ಸದೃಢ ಚೇತರಿಕೆ ಮತ್ತು ಹೆಚ್ಚಿದ ಔಪಚಾರಿಕೀಕರಣದಿಂದಾಗಿ, ಕಾರ್ಮಿಕ ಮಾರುಕಟ್ಟೆ ಸೂಚಕಗಳು ಕಳೆದ ಕೆಲವು ವರ್ಷಗಳಲ್ಲಿ ಗಣನೀಯವಾಗಿ ಸುಧಾರಿಸಿವೆ. ಆವರ್ತಕ ಕಾರ್ಮಿಕ ಪಡೆ ಸಮೀಕ್ಷೆ (PLFS) ಪ್ರಕಾರ, ಭಾರತದಲ್ಲಿ ನಿರುದ್ಯೋಗ ದರ ಗಣನೀಯವಾಗಿ ಇಳಿಕೆಯಾಗಿದೆ ಹಾಗೂ ಕಾರ್ಮಿಕ ಪಡೆ ಭಾಗವಹಿಸುವಿಕೆ ಮತ್ತು ಕಾರ್ಮಿಕರ ಜನಸಂಖ್ಯಾ ಅನುಪಾತದಲ್ಲಿ ಗಣನೀಯ ಸುಧಾರಣೆ ಕಂಡುಬಂದಿದೆ. ಅಲ್ಲದೇ, ಡಿಜಿಟಲ್ ಆರ್ಥಿಕತೆ ಮತ್ತು ನವೀಕರಿಸಬಹುದಾದ ಇಂಧನದಂತಹ ವಲಯಗಳು ಉತ್ತಮ ಗುಣಮಟ್ಟದ ಉದ್ಯೋಗ ಸೃಷ್ಟಿಸುವಲ್ಲಿ ಅಪಾರ ಸಾಮರ್ಥ್ಯ ಹೊಂದಿದ್ದು, ಇದು ವಿಕಸಿತ ಭಾರತದ ಮುನ್ನೋಟವನ್ನು ಸಾಕಾರಗೊಳಿಸಲು ಅವಶ್ಯಕವಾಗಿದೆ. ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಇಂದು ಸಂಸತ್ತಿನಲ್ಲಿ ಮಂಡಿಸಿದ 2024-25ರ ಆರ್ಥಿಕ ಸಮೀಕ್ಷೆಯಲ್ಲಿ ಇದನ್ನು ತಿಳಿಸಲಾಗಿದೆ.
ಕಾರ್ಮಿಕ ಮಾರುಕಟ್ಟೆಯ ಪ್ರಮುಖ ಸೂಚಕಗಳು:
- 15 ವರ್ಷ ಮತ್ತು ಮೇಲ್ಪಟ್ಟ ವಯಸ್ಸಿನ ವ್ಯಕ್ತಿಗಳಲ್ಲಿ ನಿರುದ್ಯೋಗ ದರವು (UR), 2017-18 ರಲ್ಲಿ ಶೇಕಡ 6 ರಷ್ಟಿದ್ದು 2023-24 ರಲ್ಲಿ ಶೇಕಡ 3.2ಕ್ಕೆ ಸ್ಥಿರವಾಗಿ ಇಳಿಕೆ ಕಂಡಿದೆ.
- ಇಪಿಎಫ್ಒ ಚಂದಾದಾರಿಕೆಗಳಿಗೆ ನಿವ್ವಳ ಸೇರ್ಪಡೆ ದ್ವಿಗುಣಗೊಂಡಿದೆ, ಹಣಕಾಸು ವರ್ಷ 19 ರಲ್ಲಿ 61 ಲಕ್ಷದಷ್ಟಿದ್ದ ಚಂದಾದಾರರ ಸಂಖ್ಯೆ ಹಣಕಾಸು ವರ್ಷ 24ರಲ್ಲಿ 131 ಲಕ್ಷಕ್ಕೆ ಏರಿಕೆಯಾಗಿದ್ದು, ಇದು ಉದ್ಯೋಗ ಮಾರುಕಟ್ಟೆಯ ಸಂಘಟನೆಯ ಸೂಚಕವಾಗಿದೆ.
- ಇಪಿಎಫ್ಒ ಅಡಿಯಲ್ಲಿ ಸೇರ್ಪಡೆಯ ಸುಮಾರು ಶೇಕಡ 61 ರಷ್ಟು 29 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಂದಾಗಿದ್ದು, ಸಂಘಟಿತ ವಲಯದ ಹೊಸ ಉದ್ಯೋಗಗಳಲ್ಲಿ ಯುವಜನರ ಸಂಖ್ಯೆ ಹೆಚ್ಚಿದೆ ಎಂಬುದನ್ನು ಸೂಚಿಸುತ್ತದೆ.
- ಕಾರ್ಯಪಡೆಯಲ್ಲಿ ಸ್ವ-ಉದ್ಯೋಗಿ ಕಾರ್ಮಿಕರ ಪ್ರಮಾಣ 2017-18 ರಲ್ಲಿ ಶೇಕಡ 52.2 ರಷ್ಟಿದ್ದು 2023-24 ರಲ್ಲಿ ಶೇಕಡ 58.4 ಕ್ಕೆ ಏರಿಕೆಯಾಗಿದ್ದು, ಇದು ಬೆಳೆಯುತ್ತಿರುವ ಉದ್ಯಮಶೀಲ ಚಟುವಟಿಕೆ ಮತ್ತು ಕೆಲಸದ ಹೊಂದಾಣಿಕಾ ವ್ಯವಸ್ಥೆ ಆದ್ಯತೆಯನ್ನು ಪ್ರತಿಬಿಂಬಿಸುತ್ತದೆ.
- ಹಂಗಾಮಿ ಕಾರ್ಮಿಕರ ಪ್ರಮಾಣ ಶೇಕಡ 24.9 ರಿಂದ ಶೇಕಡ 19.8 ಕ್ಕೆ ಇಳಿಕೆಯಾಗಿದ್ದು, ಇದು ಹೆಚ್ಚು ರಚನಾತ್ಮಕ ಸ್ವ-ಉದ್ಯೋಗದತ್ತ ಪರಿವರ್ತನೆಯ ಸಂಕೇತವಾಗಿದೆ.ಹಣಕಾಸು ವರ್ಷ 2023ರ ವಾರ್ಷಿಕ ಕೈಗಾರಿಕೆಗಳ ಸಮೀಕ್ಷೆಯ (ASI) ಫಲಿತಾಂಶಗಳಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಉದ್ಯೋಗದಲ್ಲಿ ಶೇಕಡ 7 ಕ್ಕಿಂತ ಹೆಚ್ಚಿನ ಏರಿಕೆಯನ್ನು ಕಂಡುಬಂದಿದೆ.
- ಹಣಕಾಸು ವರ್ಷ 23 ರಲ್ಲಿ 22 ಲಕ್ಷಕ್ಕೂ ಹೆಚ್ಚು ಉದ್ಯೋಗಗಳ ಸೇರ್ಪಡೆಯಾಗಿದ್ದು ಇದು ಹಣಕಾಸು ವರ್ಷ 19 (ಸಾಂಕ್ರಾಮಿಕ ಪೂರ್ವ ವರ್ಷ)ದ ಮಟ್ಟಕ್ಕಿಂತ ಹೆಚ್ಚಾಗಿದೆ.
- ಮಹಿಳಾ ಕಾರ್ಮಿಕ ಪಡೆಯ ಭಾಗವಹಿಸುವಿಕೆ ದರ (FLFPR) 2017-18 ರಲ್ಲಿ ಶೇ. 23.3 ರಷ್ಟಿದ್ದು 2023-24 ರಲ್ಲಿ ಶೇ. 41.7 ಕ್ಕೆ ಏರಿಕೆಯಾಗಿದೆ. ಇದು ಗ್ರಾಮೀಣ ಮತ್ತು ನಗರ ಪ್ರದೇಶ ಸೇರಿದಂತೆ ವಿವಿಧ ವರ್ಗಗಳಲ್ಲಿ ಆರ್ಥಿಕ ಚಟುವಟಿಕೆಗಳಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚಾಗಿರುವುದನ್ನು ತೋರಿಸುತ್ತದೆ.
ಮುದ್ರಾ ಯೋಜನೆ, ಕೌಶಲ್ಯ ಭಾರತ, ಸ್ಟಾರ್ಟ್-ಅಪ್ ಇಂಡಿಯಾ ಮತ್ತು ಸ್ಟ್ಯಾಂಡ್-ಅಪ್ ಇಂಡಿಯಾದಂತಹ ಉಪಕ್ರಮಗಳು ಉದ್ಯಮಶೀಲತೆಯನ್ನು ಪೋಷಿಸುವಲ್ಲಿ, ಕೌಶಲ್ಯ ತರಬೇತಿಯನ್ನು ನೀಡುವಲ್ಲಿ ಹಾಗೂ ಸ್ವಾವಲಂಬಿ ಮತ್ತು ಸುಸ್ಥಿರ ಜೀವನೋಪಾಯವನ್ನು ರೂಪಿಸಲು ಬೆಂಬಲ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿವೆ.
ಆರ್ಥಿಕ ಬೆಳವಣಿಗೆಗಾಗಿ ಮಹಿಳಾ ಉದ್ಯಮಿಗಳ ಉತ್ತೇಜನ:
ಉದ್ಯಮಶೀಲತೆಯಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಯ ಹೆಚ್ಚಳದಿಂದಾಗಿ ಅವರ ಸುಪ್ತ ಸಾಮರ್ಥ್ಯದ ಬಳಕೆಯ ಮೂಲಕ ಆರ್ಥಿಕ ಚಟುವಟಿಕೆಗಳಿಗೆ ಕೊಡುಗೆ ನೀಡುತ್ತಾ ದೇಶವನ್ನು ಉನ್ನತ ಮಟ್ಟದ ಅಭಿವೃದ್ಧಿಯತ್ತ ಮುನ್ನಡೆಸಬಹುದಾಗಿದೆ ಎಂದು ಆರ್ಥಿಕ ಸಮೀಕ್ಷೆ ಉಲ್ಲೇಖಿಸುತ್ತದೆ. ಮಹಿಳಾ ಉದ್ಯಮಶೀಲತೆಗೆ ಉತ್ತೇಜನ ನೀಡಲು, ಸರ್ಕಾರವು ಸುಲಭ ಸಾಲ ಲಭ್ಯತೆ, ಮಾರುಕಟ್ಟೆ ಬೆಂಬಲ, ಕೌಶಲ್ಯಾಭಿವೃದ್ಧಿ, ಮಹಿಳಾ ನವೋದ್ಯಮಗಳಿಗೆ ಬೆಂಬಲ ಇತ್ಯಾದಿ ಹಲವಾರು ಉಪಕ್ರಮಗಳನ್ನು ಜಾರಿಗೆ ತಂದಿದೆ. ಪ್ರಧಾನಮಂತ್ರಿ ಉದ್ಯೋಗ ಖಾತರಿ ಕಾರ್ಯಕ್ರಮ, ಸಂಕಲ್ಪ, ಪ್ರಧಾನಮಂತ್ರಿ ಅತಿಸೂಕ್ಷ್ಮ ಆಹಾರ ಸಂಸ್ಕರಣಾ ಯೋಜನೆ, ಆದಿವಾಸಿ ಮಹಿಳಾ ಸಶಕ್ತೀಕರಣ ಯೋಜನೆ, ಸ್ವಯಂ ಶಕ್ತಿ ಸಹಕಾರ ಯೋಜನೆ, ಡೇ-ಎನ್ ಆರ್ ಎಲ್ ಎಂ ಮುಂತಾದ ಯೋಜನೆಗಳು ಮತ್ತು ಉಪಕ್ರಮಗಳು ಮಹಿಳಾ ಉದ್ಯಮಿಗಳಿಗೆ ಆರ್ಥಿಕ ಬೆಂಬಲ, ತರಬೇತಿ ಮತ್ತು ಮಾರ್ಗದರ್ಶನವನ್ನು ನೀಡುವ ಮೂಲಕ ಮಹಿಳಾ ನೇತೃತ್ವದ ಉದ್ಯಮಗಳನ್ನು ಉತ್ತೇಜಿಸುತ್ತಿವೆ, ಅವರ ವ್ಯಾಪಾರ ಆರಂಭಿಸಲು ಮತ್ತು ವಿಸ್ತರಿಸಲು ಅವರನ್ನು ಸಬಲಗೊಳಿಸುತ್ತಿವೆ.
ಲಾಭ ಮತ್ತು ವೇತನ ಬೆಳವಣಿಗೆ ಸಮತೋಲನ:
ಆರ್ಥಿಕ ಸಮೀಕ್ಷೆಯ ಪ್ರಕಾರ, ಕಾರ್ಪೊರೇಟ್ ಲಾಭದಾಯಕತೆಯು ಹಣಕಾಸು ವರ್ಷ 24 ರಲ್ಲಿ 15 ವರ್ಷಗಳ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದ್ದರೂ, ವೇತನ ಪ್ರಮಾಣ ಅಷ್ಟೇನೂ ಹೆಚ್ಚಾಗಿಲ್ಲ.
ದೊಡ್ಡ ಸಂಸ್ಥೆಗಳಲ್ಲಿ ಕಾರ್ಪೊರೇಟ್ ಲಾಭದಲ್ಲಿನ ಅಸಮಾನ ಏರಿಕೆಯು ಆದಾಯ ಅಸಮಾನತೆಯ ಬಗ್ಗೆ ಕಳವಳವನ್ನು ಹುಟ್ಟುಹಾಕುತ್ತದೆ ಎಂದು ಆರ್ಥಿಕ ಸಮೀಕ್ಷೆ ಆತಂಕ ವ್ಯಕ್ತಪಡಿಸಿದೆ. ನಿರಂತರ ಆರ್ಥಿಕ ಬೆಳವಣಿಗೆಯು ಉದ್ಯೋಗ ಆದಾಯವನ್ನು ಹೆಚ್ಚಿಸುವುದರ ಮೇಲೆ ಅವಲಂಬಿತವಾಗಿದ್ದು, ಇದು ಗ್ರಾಹಕರ ಖರ್ಚ ಮಾಡುವ ಪ್ರವೃತ್ತಿಗೆ ನೇರವಾಗಿ ಉತ್ತೇಜನ ನೀಡುತ್ತದೆ ಮತ್ತು ಉತ್ಪಾದನಾ ಸಾಮರ್ಥ್ಯದಲ್ಲಿ ಹೂಡಿಕೆಯನ್ನು ಆಕರ್ಷಿಸಲಿದೆ.
ದೀರ್ಘಾವಧಿಯ ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು, ಬಂಡವಾಳ ಮತ್ತು ಕಾರ್ಮಿಕರ ನಡುವೆ ಆದಾಯದ ನ್ಯಾಯಯುತ ಮತ್ತು ಸಮಂಜಸವಾದ ವಿತರಣೆ ಅತ್ಯಗತ್ಯ ಎಂದು ಸಮೀಕ್ಷೆ ಒತ್ತಿ ಹೇಳಿದೆ. ಮಧ್ಯಮಾವಧಿಯಿಂದ ದೀರ್ಘಾವಧಿಯಲ್ಲಿ ಬೇಡಿಕೆಯನ್ನು ಪೂರೈಸಲು ಮತ್ತು ಕಾರ್ಪೊರೇಟ್ ಆದಾಯ ಮತ್ತು ಲಾಭದಾಯಕತೆಯ ಬೆಳವಣಿಗೆಗೆ ಬೆಂಬಲ ಅತ್ಯಗತ್ಯ.
ಅಸಂಘಟಿತ ಕಾರ್ಮಿಕರ ಕಲ್ಯಾಣ:
ಅಸಂಘಟಿತ ಕಾರ್ಮಿಕರ ನೋಂದಣಿ ಮೂಲಕ ಅಸಂಘಟಿತ ಕಾರ್ಮಿಕರ ಸಮಗ್ರ ರಾಷ್ಟ್ರೀಯ ದತ್ತಾಂಶ (NDUW) ರಚನೆಗಾಗಿ ಮತ್ತು ಅಸಂಘಟಿತ ಕಾರ್ಮಿಕರಿಗೆ ಬೆಂಬಲ ನೀಡಲು ಅವರಿಗೆ ಸಾರ್ವತ್ರಿಕ ಖಾತೆ ಸಂಖ್ಯೆ (UAN) ಒದಗಿಸಲು ಇಶ್ರಮ್ ಪೋರ್ಟಲ್ ಅನ್ನು 26 ಆಗಸ್ಟ್ 2021 ರಂದು ಪ್ರಾರಂಭಿಸಲಾಯಿತು. 2024 ರ ಡಿಸೆಂಬರ್ 31 ರ ವೇಳೆಗೆ, 30.51 ಕೋಟಿಗೂ ಹೆಚ್ಚು ಅಸಂಘಟಿತ ಕಾರ್ಮಿಕರು ಇಶ್ರಮ್ ಪೋರ್ಟಲ್ನಲ್ಲಿ ನೋಂದಾಯಿಸಿಕೊಂಡಿದ್ದಾರೆ.
ಏಕ ಪರಿಹಾರ ವೇದಿಕೆಯಾಗಿ ಇ-ಶ್ರಮ್ - "ಒನ್-ಸ್ಟಾಪ್-ಸೊಲ್ಯೂಷನ್" ಅನ್ನು 2024ರ ಅಕ್ಟೋಬರ್ 21 ರಂದು ಪ್ರಾರಂಭಿಸಲಾಯಿತು, ಇದು ವಿವಿಧ ಸಾಮಾಜಿಕ ಭದ್ರತಾ/ಕಲ್ಯಾಣ ಯೋಜನೆಗಳನ್ನು ಒಂದೇ ಪೋರ್ಟಲ್ನಲ್ಲಿ, ಅಂದರೆ, ಇ-ಶ್ರಮ್ನಲ್ಲಿ ಸಂಯೋಜಿಸುತ್ತದೆ. ಇದು ಇ-ಶ್ರಮ್ನಲ್ಲಿ ನೋಂದಾಯಿಸಿಕೊಂಡಿರುವ ಅಸಂಘಟಿತ ಕಾರ್ಮಿಕರು ಸಾಮಾಜಿಕ ಭದ್ರತಾ ಯೋಜನೆಗಳನ್ನು ಪಡೆಯಲು ಮತ್ತು ಇ-ಶ್ರಮ್ ಮೂಲಕ ಅವರು ಇಲ್ಲಿಯವರೆಗೆ ಪಡೆದ ಪ್ರಯೋಜನಗಳನ್ನು ತಿಳಿಯಲು ಅನುವು ಮಾಡಿಕೊಡುತ್ತದೆ. ಇಲ್ಲಿಯವರೆಗೆ, ವಿವಿಧ ಕೇಂದ್ರ ಸಚಿವಾಲಯಗಳು/ಇಲಾಖೆಗಳ 12 ಯೋಜನೆಗಳನ್ನು ಇ-ಶ್ರಮ್ನೊಂದಿಗೆ ಸಂಯೋಜಿಸಲಾಗಿದೆ/ಮ್ಯಾಪ್ ಮಾಡಲಾಗಿದೆ.
ಉದ್ಯೋಗ ಬೆಳವಣಿಗೆಗೆ ಸುಲಲಿತ ಕಾರ್ಮಿಕ ನಿಯಮಗಳು:
ಉದ್ಯಮ ಬೆಳವಣಿಗೆಯನ್ನು ಬೆಂಬಲಿಸುವ, ಉದ್ಯೋಗ ಸೃಜಿಸುವ ಮತ್ತು ಆರ್ಥಿಕ ಅಭಿವೃದ್ಧಿಯನ್ನು ಉತ್ತೇಜಿಸುವ ಕಾರ್ಯಸಾಧ್ಯ ಕಾರ್ಮಿಕ ನಿಯಂತ್ರಣ ವಾತಾವರಣವನ್ನು ಪೋಷಿಸಬೇಕು ಎಂದು ಆರ್ಥಿಕ ಸಮೀಕ್ಷೆಯು ಪ್ರತಿಪಾದಿಸುತ್ತದೆ. ಕೆಲಸದ ಸಮಯದಲ್ಲಿ ಸಡಿಲಿಕೆ ಮತ್ತು ಕಾರ್ಮಿಕರು ನಿರ್ವಹಿಸಬಹುದಾದ ಅಧಿಕಾವಧಿ ಗಂಟೆಗಳ ಸಂಖ್ಯೆ ಮತ್ತು ಅವರು ಗಳಿಸಬಹುದಾದ ಅಧಿಕಾವಧಿ ವೇತನದ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕಿದಲ್ಲಿ ಅದು ಸಂಸ್ಥೆಯ ಬೆಳವಣಿಗೆಗೆ ಪೂರಕವಾಗಲಿದ್ದು, ಹೆಚ್ಚಿನ ಉದ್ಯೋಗಾವಕಾಶಗಳ ಸೃಜನೆ ಸಾಧ್ಯವಾಗಲಿದೆ ಎಂದು ಸಮೀಕ್ಷೆ ಹೇಳುತ್ತದೆ. ಇದು ಕಾರ್ಮಿಕ ಹಕ್ಕುಗಳನ್ನು ರಕ್ಷಿಸುತ್ತದೆ ಮತ್ತು ಕಾರ್ಮಿಕರು ತಮ್ಮ ಗಳಿಕೆಯನ್ನು ವೃದ್ಧಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ.
ಉದ್ಯೋಗ ಸೃಷ್ಟಿಗೆ ಸಂಭಾವ್ಯ ವಲಯಗಳು:
ಬೆಳೆಯುತ್ತಿರುವ ಡಿಜಿಟಲ್ ಆರ್ಥಿಕತೆ ಮತ್ತು ನವೀಕರಿಸಬಹುದಾದ ಇಂಧನ ವಲಯವು ಉದ್ಯೋಗ ಸೃಷ್ಟಿಗೆ ಹೆಚ್ಚಿನ ಅವಕಾಶಗಳನ್ನು ಒದಗಿಸುತ್ತಿದೆ ಎಂದು ಆರ್ಥಿಕ ಸಮೀಕ್ಷೆ ತಿಳಿಸಿದೆ. ಈ ಎರಡೂ ವಲಯಗಳು ಉದ್ಯೋಗಾವಕಾಶ ಹೆಚ್ಚಿಸಲು ಅಪಾರ ಸಾಮರ್ಥ್ಯವನ್ನು ಹೊಂದಿದ್ದು, ವಿಶೇಷವಾಗಿ ಮಹಿಳೆಯರಿಗೆ ಅವಕಾಶಗಳನ್ನು ತೆರೆದು ಆ ಮೂಲಕ ಅವರ ಆರ್ಥಿಕ ಸ್ವಾತಂತ್ರ್ಯ ಮತ್ತು ಸಬಲೀಕರಣಕ್ಕೆ ಪೂರಕವಾಗಲಿದೆ.’
ಕೌಶಲ್ಯಾಭಿವೃದ್ಧಿ: ಕೌಶಲ್ಯ ಉನ್ನತೀಕರ, ಕೌಶಲ್ಯ ಮರು ರೂಪಿಸಿಕೊಳ್ಳುವಿಕೆ ಮತ್ತು ಹೊಸ ಕೌಶಲ್ಯ
ಸರ್ಕಾರವು ಯಾಂತ್ರೀಕೃತಗೊಂಡ, ಉತ್ಪಾದಕ ಕೃತಕ ಬುದ್ಧಿಮತ್ತೆ (AI), ಡಿಜಿಟಲೀಕರಣ ಮತ್ತು ಹವಾಮಾನ ಬದಲಾವಣೆಯಂತಹ ಉದಯೋನ್ಮುಖ ಜಾಗತಿಕ ಪ್ರವೃತ್ತಿಗಳಿಗೆ ಅನುಗುಣವಾಗಿ ಪರಿಹಾರಾತ್ಮಕ ಮತ್ತು ಸ್ಪಂದಿಸುವ ಕೌಶಲ್ಯಪೂರ್ಣ ಪರಿಸರ ವ್ಯವಸ್ಥೆಯನ್ನು ಸ್ಥಾಪಿಸುತ್ತಿದೆ ಎಂದು ಆರ್ಥಿಕ ಸಮೀಕ್ಷೆ ಹೇಳಿದೆ.
ನಿಯಮಿತ ಕಾರ್ಮಿಕ ಪಡೆ ಸಮೀಕ್ಷೆ (ಪಿಎಲ್ಎಫ್ಎಸ್) ದತ್ತಾಂಶದ ಪ್ರಕಾರ, ಶೈಕ್ಷಣಿಕ ಸಾಧನೆ, ವೃತ್ತಿಪರ ಹುದ್ದೆಗಳು ಮತ್ತು ಆದಾಯದ ಮಟ್ಟಗಳ ನಡುವೆ ಬಲವಾದ ನಂಟಿದೆ. ವಿವಿಧ ಉಪಕ್ರಮಗಳ ಮೂಲಕ ಸರ್ಕಾರದ ನಿರಂತರ ಪ್ರಯತ್ನಗಳ ಫಲವಾಗಿ, 2018-19 ರಿಂದ 2023-24 ರವರೆಗೆ ಎಲ್ಲಾ ಸಾಮಾಜಿಕ-ಆರ್ಥಿಕ ವರ್ಗೀಕರಣಗಳಲ್ಲಿ ಕೌಶಲ್ಯಯುತ ಜನರ ಅನುಪಾತದಲ್ಲಿ ಗಮನಾರ್ಹ ಸುಧಾರಣೆ ಕಂಡುಬಂದಿದೆ.
ಕೆಲವು ಪ್ರಮುಖ ಉಪಕ್ರಮಗಳು ಇಂತಿವೆ:
- ಪ್ರಧಾನ ಮಂತ್ರಿ ಕೌಶಲ ವಿಕಾಸ ಯೋಜನೆಯ (PMKVY) ವಿವಿಧ ಘಟಕಗಳ ಅಡಿಯಲ್ಲಿ 1.57 ಕೋಟಿಗೂ ಹೆಚ್ಚು ಜನರಿಗೆ ತರಬೇತಿ ನೀಡಲಾಗಿದೆ ಮತ್ತು 1.21 ಕೋಟಿಗೂ ಹೆಚ್ಚು ಜನರು ಪ್ರಮಾಣೀಕೃತರಾಗಿದ್ದಾರೆ
- ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ (ಐಟಿಐ) ಕುಶಲಕರ್ಮಿ ತರಬೇತಿ ಯೋಜನೆಯಡಿಯಲ್ಲಿ 1.24 ಕೋಟಿಗೂ ಹೆಚ್ಚು ಜನರು ದಾಖಲಾಗಿದ್ದಾರೆ.
- 27 ಲಕ್ಷಕ್ಕೂ ಹೆಚ್ಚು ಜನರಿಗೆ ತರಬೇತಿ ನೀಡಲಾಗಿದೆ, ಮತ್ತು 26 ಲಕ್ಷಕ್ಕೂ ಹೆಚ್ಚು ಜನರು ಜನ್ ಶಿಕ್ಷಣ ಸಂಸ್ಥಾನ (ಜೆಎಸ್ಎಸ್) ಅಡಿಯಲ್ಲಿ ಪ್ರಮಾಣೀಕೃತರಾಗಿದ್ದಾರೆ.
- ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯಡಿಯಲ್ಲಿ 559 ಜಿಲ್ಲೆಗಳಲ್ಲಿ 3,145 ಕೌಶಲ್ಯ ಕೇಂದ್ರಗಳ ಮೂಲಕ 11.79 ಲಕ್ಷ ಕುಶಲಕರ್ಮಿಗಳಿಗೆ ಮೂಲಭೂತ ಕೌಶಲ್ಯ ತರಬೇತಿ ನೀಡಲಾಗಿದೆ.
- 2016-17 ರಿಂದ 2024-25 ರವರೆಗೆ (31 ಅಕ್ಟೋಬರ್ 2024 ರವರೆಗೆ) ಒಟ್ಟು 37.94 ಲಕ್ಷ ಅಪ್ರೆಂಟಿಸ್ಗಳನ್ನು ನೇಮಕ ಮಾಡಿಕೊಳ್ಳಲಾಗಿದೆ.
- ಐದು ವರ್ಷಗಳ ಅವಧಿಯಲ್ಲಿ 20 ಲಕ್ಷ ಯುವಕರಿಗೆ ಕೌಶಲ್ಯ ನೀಡಲಾಗುವುದು ಮತ್ತು 1,000 ಐಟಿಐ ಗಳಿಗೆ ಕೇಂದ್ರ ಬಜೆಟ್ 2024ರಲ್ಲಿ ಘೋಷಿಸಲಾದ ಹೊಸ ಐಟಿಐ ಮೇಲ್ದರ್ಜೆ ಯೋಜನೆಯಡಿಯಲ್ಲಿ ಹಬ್ ಮತ್ತು ಸ್ಪೋಕ್ ವ್ಯವಸ್ಥೆಯಲ್ಲಿ ಮೇಲ್ದರ್ಜೆಗೇರಿಸಲಾಗುವುದು.
ಉದ್ಯಮದ ವಿವಿಧ ಬಗೆಯ ಬೇಡಿಕೆಗಳು ಮತ್ತು ಕಾರ್ಯಪಡೆಯ ಅಗತ್ಯಗಳನ್ನು ಪರಿಣಾಮಕಾರಿಯಾಗಿ ಪರಿಹರಿಸಲು ಕೌಶಲ್ಯ ತಂತ್ರಗಾರಿಕೆಯು ಹಂತ ಹಂತದ ವಿಧಾನವನ್ನು ಅಳವಡಿಸಿಕೊಳ್ಳಬೇಕಾಗಿದೆ. ಈ ಹೊಸ ವಿಧಾನವು ಆಯ್ದ ಕಾರ್ಮಿಕರ ಗುಂಪುಗಳಿಗೆ ನಿರ್ದಿಷ್ಟ ಕಾರ್ಯಗಳು ಅಥವಾ ಕೆಲಸದ ಅಗತ್ಯಗಳಿಗೆ ಅನುಗುಣವಾಗಿ ವಿನ್ಯಾಸಗೊಳಿಸಲಾದ ಕೌಶಲ್ಯಗಳನ್ನು ಮತ್ತು ಎಲ್ಲರಿಗೂ ಮತ್ತು ಎಲ್ಲಾ ವಲಯಗಳಲ್ಲಿ ಸಾರ್ವತ್ರಿಕವಾಗಿ ಒದಗಿಸಲಾಗುವ ಮೂಲಭೂತ ಎಐ ಕೌಶಲ್ಯಗಳನ್ನು ಒಳಗೊಂಡಿರಬಹುದು. ಈ ಕೌಶಲ್ಯ ಶ್ರೇಣಿಗಳನ್ನು ಕಾರ್ಮಿಕರ ಆಕಾಂಕ್ಷೆಗಳು ಮತ್ತು ಅಗತ್ಯಗಳೊಂದಿಗೆ ಹೊಂದಿಸುವ ಮೂಲಕ, ಬದಲಾಗುತ್ತಿರುವ ಬೇಡಿಕೆಗಳಿಗೆ ಅನುಗುಣವಾಗಿ ಕ್ರಿಯಾತ್ಮಕ ಕಾರ್ಯಪಡೆಯನ್ನು ಉತ್ತಮವಾಗಿ ಸಿದ್ಧಪಡಿಸಬಹುದು. ಹಂತ ಹಂತದ ವಿಧಾನವು ವೆಚ್ಚ-ಪರಿಣಾಮಕಾರಿಯಾಗಿ ತರಬೇತಿ ನೀಡಲು ಅನುವು ಮಾಡಿಕೊಡುತ್ತದೆ.
ಉದ್ಯಮ ಸಿದ್ಧ ಕಾರ್ಯಪಡೆಯನ್ನು ರೂಪಿಸಲು, ಕಂಪನಿಗಳಲ್ಲಿ ತರಬೇತಿ (ಪಿಎಂ ಇಂಟರ್ನ್ಶಿಪ್ ಯೋಜನೆ) ಹಾಗೂ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಕೌಶಲ್ಯ ಅಭಿವೃದ್ಧಿ ಮತ್ತು ವೃತ್ತಿಪರ ತರಬೇತಿ ಉಪಕ್ರಮಗಳು ಪರಿಣಾಮಕಾರಿಯಾಗಿರಲಿವೆ ಎಂದು ಆರ್ಥಿಕ ಸಮೀಕ್ಷೆ ಉಲ್ಲೇಖಿಸುತ್ತದೆ. ಹೆಚ್ಚುವರಿಯಾಗಿ, ಉತ್ತಮ ಗುಣಮಟ್ಟದ, ಜಾಗತಿಕವಾಗಿ ಸ್ಪರ್ಧಾತ್ಮಕ ಕಾರ್ಯಪಡೆಯೊಂದಿಗೆ ಕೌಶಲ್ಯ ಪರಿಸರ ವ್ಯವಸ್ಥೆಯನ್ನು ರಚಿಸುವ ಮೂಲಕ, ಭಾರತ ಜಾಗತಿಕ ಉದ್ಯೋಗ ಮಾರುಕಟ್ಟೆಗಳಲ್ಲಿ ಯುವಕರಿಗೆ ಉದ್ಯೋಗಾವಕಾಶವನ್ನು ವರ್ಧಿಸಬಲ್ಲದಾಗಿದೆ.
*****
(Release ID: 2098309)
Visitor Counter : 10