ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ
2025ರ ಗಣರಾಜ್ಯೋತ್ಸವ ಪರೇಡ್‌ಗೆ ಸಾಕ್ಷಿಯಾಗಲು 800 ವಿಶೇಷ ಅತಿಥಿಗಳಿಗೆ ಆಹ್ವಾನ ನೀಡಿದ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ
ಕೇಂದ್ರ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಅವರನ್ನು ಭೇಟಿ ಮಾಡಲಿರುವ ವಿಶೇಷ ಅತಿಥಿಗಳು
Posted On:
23 JAN 2025 12:00PM by PIB Bengaluru
ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ(ಎಂ ಎನ್ ಆರ್ ಇ)ವು ನವದೆಹಲಿಯಲ್ಲಿ ಜನವರಿ 26ರಂದು ನಡೆಯಲಿರುವ ಗಣರಾಜ್ಯೋತ್ಸವದ ಪಥಸಂಚಲನ(ಪರೇಡ್) ವೀಕ್ಷಿಸಲು ದೇಶಾದ್ಯಂತ 800 ವಿಶೇಷ ಅತಿಥಿಗಳಿಗೆ ಆತಿಥ್ಯ ವಹಿಸಲಿದೆ. ಎಂ ಎನ್ ಆರ್ ಇ ಸಚಿವಾಲಯದ ಪ್ರಮುಖ ನವೀಕರಿಸಬಹುದಾದ ಇಂಧನ ಯೋಜನೆಗಳೊಂದಿಗೆ ಸಂಬಂಧ ಹೊಂದಿರುವ ಗಣ್ಯರು ಮತ್ತು ಗುಂಪುಗಳ ಸಾಧನೆಗಳನ್ನು ಮತ್ತು ಭಾರತದ ಸುಸ್ಥಿರ ಇಂಧನ ಪರಿವರ್ತನೆಗೆ ಅವರ ಕೊಡುಗೆಗಳನ್ನು ಆಚರಿಸಲು ಈ ಉಪಕ್ರಮ ಕೈಗೊಳ್ಳಲಾಗಿದೆ.
ಆಹ್ವಾನಿತರಲ್ಲಿ ಪ್ರಧಾನ ಮಂತ್ರಿ ಸೂರ್ಯ ಘರ್ ಯೋಜನೆಯ ಫಲಾನುಭವಿಗಳು, ನವೀಕರಿಸಬಹುದಾದ ಇಂಧನ ಕಾರ್ಮಿಕರು ಮತ್ತು ಪ್ರಧಾನ ಮಂತ್ರಿ ಕುಸುಮ್ ಯೋಜನೆಯ ಪ್ರತಿನಿಧಿಗಳು ಸೇರಿದ್ದಾರೆ. ನಾಗರಿಕರನ್ನು ಸಬಲೀಕರಣಗೊಳಿಸಲು ಮತ್ತು ದೇಶಾದ್ಯಂತ ಸ್ವಚ್ಛ ಇಂಧನ ಪರಿಹಾರಗಳನ್ನು ಉತ್ತೇಜಿಸಲು ಸಚಿವಾಲಯ ನಡೆಸುತ್ತಿರುವ ನಿರಂತರ ಪ್ರಯತ್ನಗಳಿಗೆ ಅವರ ಉಪಸ್ಥಿತಿಯು ಬೆಳಕು ಚೆಲ್ಲಲಿದೆ.
ವಿಶೇಷ ಅತಿಥಿಗಳು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಮತ್ತು ಸಚಿವಾಲಯ ಕಾರ್ಯದರ್ಶಿ ಶ್ರೀಮತಿ ನಿಧಿ ಖರೆ ಮತ್ತು ಎಂ ಎನ್ ಆರ್ ಇಯ ಇತರೆ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಲಿದ್ದಾರೆ. ಎಂ ಎನ್ ಆರ್ ಇ ಸಚಿವಾಲಯವು ವಿಶೇಷ ಅತಿಥಿಗಳಿಗೆ ಪ್ರಧಾನ ಮಂತ್ರಿಗಳ ಸಂಗ್ರಹಾಲಯ ಮತ್ತು ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೂ ಭೇಟಿ ನೀಡಲು ವ್ಯವಸ್ಥೆ ಮಾಡಿದೆ.
ಪ್ರತಿಯೊಬ್ಬ ಅತಿಥಿಯೂ ಎಂ ಎನ್ ಆರ್ ಇಯ ನವೀಕರಿಸಬಹುದಾದ ಇಂಧನ ಉಪಕ್ರಮಗಳಿಂದ ನಡೆಸಲ್ಪಡುವ ಸಬಲೀಕರಣ ಮತ್ತು ಸುಸ್ಥಿರ ಅಭಿವೃದ್ಧಿಯ ಯಶೋಗಾಥೆಯನ್ನು ಪ್ರತಿನಿಧಿಸುತ್ತಾರೆ. ಈ ಅತಿಥಿಗಳಿಗೆ ಸ್ಮರಣೀಯ ಮತ್ತು ಆರಾಮದಾಯಕ ಅನುಭವ ಖಚಿತಪಡಿಸಿಕೊಳ್ಳಲು ಸಚಿವಾಲಯವು ವಸತಿ ಮತ್ತು ಸರಕು ಸಾಗಣೆ ಬೆಂಬಲವನ್ನು ಸಹ ನೀಡಲಿದೆ.
ಗಣರಾಜ್ಯೋತ್ಸವ ಪರೇಡ್ ವೀಕ್ಷಿಸಲು ಈ ಅತಿಥಿಗಳನ್ನು ಆಹ್ವಾನಿಸುವ ಮೂಲಕ, ಹಸಿರು ಮತ್ತು ಸುಸ್ಥಿರ ಭವಿಷ್ಯದತ್ತ ಭಾರತದ ಪ್ರಯಾಣಕ್ಕೆ ಅವಿಭಾಜ್ಯ ಅಂಗವಾಗಿರುವ ನಾಗರಿಕರ ಸಾಧನೆಗಳನ್ನು ಗುರುತಿಸುವ ತನ್ನ ಬದ್ಧತೆಯನ್ನು ಎಂಎನ್ಆರ್ ಇ ಸಚಿವಾಲಯ ಪುನರುಚ್ಚರಿಸುತ್ತಿದೆ.
*****
(Release ID: 2095431)
Visitor Counter : 12