ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ
111ನೇ ಇಪಿಎಫ್ ಕಾರ್ಯಕಾರಿ ಸಮಿತಿ ಸಭೆಯು ಸದಸ್ಯರಿಗೆ ಸುಧಾರಿತ ಸೇವೆ ಹಾಗೂ ಹೆಚ್ಚುವರಿ ಸೌಲಭ್ಯ ಕಲ್ಪಿಸುವತ್ತ ಗಮನ ಕೇಂದ್ರೀಕರಿಸಿದೆ
ಪಿಂಚಣಿ ಪ್ರಕ್ರಿಯೆಗಳು, ಪರ್ಯಾಯ ವಿವಾದ ಪರಿಹಾರ ಕಾರ್ಯವಿಧಾನಗಳು ಮತ್ತು ಕುಂದುಕೊರತೆ ಪರಿಹಾರ ಉಪಕ್ರಮಗಳ ಪ್ರಗತಿ ಕುರಿತು ಮಹತ್ವದ ನಿರ್ಧಾರ
Posted On:
19 JAN 2025 1:13PM by PIB Bengaluru
ನವದೆಹಲಿಯಲ್ಲಿನ ಇಪಿಎಫ್‌ಒ ಪ್ರಧಾನ ಕಚೇರಿಯಲ್ಲಿ 2025ರ ಜನವರಿ 18ರಂದು ನಡೆದ ಇಪಿಎಫ್ ಕೇಂದ್ರೀಯ ಟ್ರಸ್ಟಿಗಳ ಮಂಡಳಿಯ ಕಾರ್ಯಕಾರಿ ಸಮಿತಿಯ (ಇಸಿ) 111ನೇ ಸಭೆಯ ಅಧ್ಯಕ್ಷತೆಯನ್ನು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಕಾರ್ಯದರ್ಶಿಗಳಾದ ಶ್ರೀಮತಿ ಸುಮಿತಾ ದಾವ್ರಾ ವಹಿಸಿದ್ದರು. ಇಪಿಎಫ್‌ಒದ ಸಿಪಿಎಫ್‌ಸಿ ಶ್ರೀ ರಮೇಶ್ ಕೃಷ್ಣಮೂರ್ತಿ, ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಹಿರಿಯ ಅಧಿಕಾರಿಗಳು, ಉದ್ಯಮಿಗಳು ಹಾಗೂ ನೌಕರರ ಪ್ರತಿನಿಧಿಗಳು ಸಹ ಸಭೆಯಲ್ಲಿ ಪಾಲ್ಗೊಂಡಿದ್ದರು.
(i) ಕೇಂದ್ರೀಕೃತ ಐಟಿ ಸೌಲಭ್ಯಯುಕ್ತ ವ್ಯವಸ್ಥೆ (ಸಿಐಟಿಇಎಸ್) 2.01ರ ಅನುಷ್ಠಾನ, (ii) ಹೆಚ್ಚಿನ ವೇತನದ ಮೇಲೆ ಪಿಂಚಣಿಯ ಸ್ಥಿತಿಗತಿ, (iii) ಪರ್ಯಾಯ ವಿವಾದ ಪರಿಹಾರ (ಎಡಿಆರ್) ಕಾರ್ಯವಿಧಾನದ ಪ್ರಸ್ತಾವನೆ, (iv) ಇಪಿಎಫ್‌ಒನ ಕ್ಷೇತ್ರ ಕಾರ್ಯಾಲಯಗಳಿಗೆ ಆಡಳಿತಾತ್ಮಕ ಮತ್ತು ಆರ್ಥಿಕ ಅಧಿಕಾರಗಳ ಪ್ರತ್ಯಾಯೋಜನೆ, (v) ಕುಂದುಕೊರತೆ ಪರಿಹಾರ ಕಾರ್ಯವಿಧಾನಗಳ ಪರಿಶೀಲನೆ, (vi) ಆಯುಕ್ತರ ಕೇಡರ್‌ನೊಳಗಿನ ಹುದ್ದೆಗಳ ಪುನರ್ ಹಂಚಿಕೆ ಮತ್ತು (vii) ಇತರ ಮಾನವ ಸಂಪನ್ಮೂಲ ಸಂಬಂಧಿ ವಿಷಯಗಳ ಪ್ರಗತಿ ಪರಿಶೀಲನೆ ಸೇರಿದಂತೆ ಹಲವು ಮಹತ್ವದ ಕಾರ್ಯಸೂಚಿ ವಿಷಯಗಳ ಕುರಿತು ಸಭೆ ಚರ್ಚಿಸಿತು.
- ಸಿಐಟಿಇಎಸ್ 2.01 ಅನುಷ್ಠಾನ: ಸಿಐಟಿಇಎಸ್ 2.01ರ ಅನುಷ್ಠಾನದಲ್ಲಿನ ಪ್ರಗತಿಯನ್ನು ಸಮಿತಿಯು ಪರಿಶೀಲಿಸಿತು. ಮುಖ್ಯವಾಗಿ ಪ್ರಸ್ತುತ ಡೇಟಾಬೇಸ್‌ಗಳ ಮಾಹಿತಿಯನ್ನು ಕ್ರೋಡೀಕರಿಸುವ, ಎಲ್ಲಾ ಸದಸ್ಯರ ಖಾತೆಗಳಿಗೆ ಯುಎಎನ್-ಆಧಾರಿತ ಲೆಡ್ಜರ್ ಅನ್ನು ಸುಗಮಗೊಳಿಸುವ ಮತ್ತು ಕಾರ್ಮಿಕರ ಭವಿಷ್ಯ ನಿಧಿ ಹಾಗೂ ಕ್ಲೇಮ್‌ಗಳ ಪ್ರಕ್ರಿಯೆಗಳಿಗೆ ತ್ವರಿತ ಪ್ರವೇಶ, ಸಂಪರ್ಕ ಅನುವು ಮಾಡಿಕೊಡುವ ಬೃಹತ್ ಡೇಟಾ ಕ್ರೋಡೀಕರಣ ಪ್ರಕ್ರಿಯೆಗಳ ಬಗ್ಗೆಯೂ ಸಭೆ ಪರಿಶೀಲಿಸಿತು. ಪಿಂಚಣಿ ಪ್ರಕ್ರಿಯೆಗಳನ್ನು ಸುಗಮಗೊಳಿಸುವ, ಪಿಂಚಣಿದಾರರಿಗೆ ಸಕಾಲಿಕ ಮತ್ತು ನಿಖರವಾದ ಪಿಂಚಣಿಯ ವಿತರಣೆಯನ್ನು ಖಾತರಿಪಡಿಸಿಕೊಳ್ಳುವ 68 ಲಕ್ಷ ಪಿಂಚಣಿದಾರರಿಗೆ ಪ್ರಯೋಜನವನ್ನು ನೀಡುವ ಗುರಿಯನ್ನು ಹೊಂದಿರುವ ಸಿಪಿಪಿಎಸ್ (ಕೇಂದ್ರೀಕೃತ ಪಿಂಚಣಿ ಪಾವತಿ ವ್ಯವಸ್ಥೆ)ಯ ಯಶಸ್ವಿ ಅನುಷ್ಠಾನ ಕುರಿತಂತೆ ಪರಿಶೀಲಿಸಿತು.
- ಪರ್ಯಾಯ ವಿವಾದ ಪರಿಹಾರ (ಎಡಿಆರ್): ವಿವಾದಗಳಿಗೆ ಸಂಬಂಧಪಟ್ಟ ಮೊಕದ್ದಮೆ ನಿರ್ವಹಣೆಯ ಆರ್ಥಿಕ ಹೊರೆ ಮತ್ತು ಸಂಬಂಧಿತ ವಿಳಂಬಗಳನ್ನು ಗಮನಾರ್ಹವಾಗಿ ತಗ್ಗಿಸುವ, ವಿಶೇಷವಾಗಿ ಕೈಗಾರಿಕಾ ನ್ಯಾಯಾಧೀಕರಣಗಳು, ವಿಶೇಷವಾಗಿ ಇಪಿಎಫ್ ಹಾಗೂ ಎಂಪಿ ಕಾಯ್ದೆ 1952ರಡಿ ಹಾನಿಗಳಿಗೆ ಸಂಬಂಧ ಪ್ರಕರಣಗಳನ್ನೂ ಒಳಗೊಂಡಂತೆ ಬಹು ಹಂತಗಳಲ್ಲಿ ಬಾಕಿ ಇರುವ ವಿವಾದಗಳ ತ್ವರಿತ ಹಾಗೂ ಸಾಧ್ಯವಾದಷ್ಟು ಸೌಹಾರ್ದಯುತವಾಗಿ ಇತ್ಯರ್ಥಪಡಿಸುವ ಗುರಿ ಹೊಂದಿರುವ ಉದ್ದೇಶಿತ ಎಡಿಆರ್ ಕಾರ್ಯವಿಧಾನಗಳ ಅಳವಡಿಕೆ ಕುರಿತಂತೆಯೂ ಸಮಿತಿ ಚರ್ಚಿಸಿತು. ಈ ವಿಧಾನವು ವಿವಾದ ಇತ್ಯರ್ಥ ನಿರೀಕ್ಷೆಯಲ್ಲಿರುವವರಿಗೆ ತ್ವರಿತ ಸಾಮಾಜಿಕ ಭದ್ರತೆಯನ್ನು ಕಲ್ಪಿಸುವ ಜತೆಗೆ ಸಂಪನ್ಮೂಲಗಳನ್ನು ಉಳಿಸಿ, ಪಾಲುದಾರರಲ್ಲಿ ವಿಶ್ವಾಸವನ್ನು ಹೆಚ್ಚಿಸುತ್ತದೆ ಎಂಬ ಅಭಿಪ್ರಾಯಕ್ಕೆ ಬರಲಾಯಿತು.
- ಹೆಚ್ಚಿನ ವೇತನದ ಮೇಲಿನ ಪಿಂಚಣಿ: ಕಳೆದ ಒಂದು ತಿಂಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಬಾಕಿ ಪ್ರಕರಣಗಳ ಅರ್ಜಿಗಳನ್ನು ತ್ವರಿತವಾಗಿ ಪರಿಶೀಲಿಸಿದ ಬಗ್ಗೆ ಮತ್ತು ಕ್ಷೇತ್ರ ಕಚೇರಿಗಳ ನಿಯಮಿತ ಮೇಲ್ವಿಚಾರಣೆ ಮತ್ತು ಸ್ಪಷ್ಟೀಕರಣಗಳನ್ನುನೀಡುವ ಮೂಲಕ 21,000 ಬೇಡಿಕೆ ಪತ್ರಗಳನ್ನು ರವಾನಿಸಿರುವ ಬಗ್ಗೆ ಸಮಿತಿಗೆ ಮಾಹಿತಿ ನೀಡಲಾಯಿತು. ಆ ಮೂಲಕ ಪ್ರಕರಣಗಳ ವಿಲೇವಾರಿ ಪ್ರಮಾಣ 58,000ದಷ್ಟು ಹೆಚ್ಚಾಗಿದೆ. ವಾಪಾಸ್ ಕಳುಹಿಸಲಾದ ಪ್ರಕರಣಗಳಲ್ಲಿ ತಿದ್ದುಪಡಿ ಪ್ರಕ್ರಿಯೆಗೆ ವೇಗ ನೀಡಲು ಹಾಗೂ ಜಂಟಿ ಆಯ್ಕೆಗಳನ್ನು ಸಲ್ಲಿಸಲು 2025ರ ಜನವರಿ 31 ಕಡೆಯ ದಿನವಾಗಿರುವ ಹಿನ್ನೆಲೆಯಲ್ಲಿ ಉದ್ಯಮಿಗಳೊಂದಿಗೆ ನಿಯಮಿತವಾಗಿ ವಿಡಿಯೋ ಸಂವಾದಗಳನ್ನು ನಡೆಸುವಂತೆಯೂ ಸಮಿತಿ ಶಿಫಾರಸು ಮಾಡಿತು. ಪ್ರಸಕ್ತ ಹಣಕಾಸು ವರ್ಷದ ಅಂತ್ಯದ ವೇಳೆಗೆ ಅಂಗೀಕೃತ ಚೌಕಟ್ಟಿನೊಳಗೆ ಗರಿಷ್ಠ ಕೆಲಸವನ್ನು ಪೂರ್ಣಗೊಳಿಸಲು ನಿರ್ದೇಶನ ನೀಡಲಾಯಿತು. ಪಿಎಸ್‌ಯುಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಮೊತ್ತವನ್ನು ಒಳಗೊಂಡಿರುವ ಪ್ರಕರಣಗಳ ಕುರಿತಂತೆಯೂ ತ್ವರಿತವಾಗಿ ಕ್ರಮ ಕೈಗೊಳ್ಳಲು ನಿರ್ದೇಶಿಸಲಾಯಿತು.
- ಕುಂದುಕೊರತೆ ಪರಿಹಾರ: ಸೇವಾ ವಿತರಣೆ- ಸೌಲಭ್ಯ ಹೆಚ್ಚಿಸಲು, ಕಾರ್ಯವಿಧಾನಗಳನ್ನು ಸುಗಮಗೊಳಿಸಲು ಮತ್ತು ಸದಸ್ಯರ ತೊಂದರೆಗಳನ್ನು ತಗ್ಗಿಸಲು ಕುಂದುಕೊರತೆ ಪರಿಹಾರ ಪ್ರಕ್ರಿಯೆಯ ಸುಧಾರಣೆಗಾಗಿ ರೂಪಿಸಿರುವ ಯೋಜನೆಗಳ ಬಗ್ಗೆ ಕಾರ್ಯಕಾರಿ ಸಮಿತಿಯು ಪರಿಶೀಲಿಸಿತು. ಇಪಿಎಫ್‌ಒನಲ್ಲಿ ಆಗಾಗ್ಗೆ ಎದುರಾಗುವ ಕುಂದುಕೊರತೆಗಳನ್ನು ವಿಶ್ಲೇಷಿಸುವ ಜತೆಗೆ ಸಾಮಾನ್ಯ ಸಮಸ್ಯೆಗಳನ್ನು ಗುರುತಿಸಲು ಮತ್ತು ವರ್ಗೀಕರಿಸಲು ಸಹ ಕಾರಣವಾಗಿದೆ. ಈ ಸಮಸ್ಯೆಗಳ ಮೂಲವನ್ನು ಗುರುತಿಸಿ ಪರಿಹರಿಸುವ ಮತ್ತು ವ್ಯವಸ್ಥಿತ ಸುಧಾರಣೆಗಳ ಮೂಲಕ ಈ ಸಮಸ್ಯೆಗಳನ್ನು ನಿವಾರಿಸುವ ಗುರಿಯನ್ನು ಸುಧಾರಣಾ ಪ್ರಕ್ರಿಯೆಯು ಒಳಗೊಂಡಿದೆ. ಆ ನಿಟ್ಟಿನಲ್ಲಿ ಇಪಿಎಫ್‌ಒ ವಾರದ ಆರಂಭದಲ್ಲೇ ಎರಡು ನಿರ್ದೇಶನಗಳನ್ನು ನೀಡಿದೆ. (i) ಸದಸ್ಯರ ಸ್ವವಿವರ (ಪ್ರೊಫೈಲ್) ಪರಿಷ್ಕರಣೆಗೆ ಆನ್‌ಲೈನ್ ಪ್ರಕ್ರಿಯೆಯನ್ನು ಸರಳಗೊಳಿಸುವುದು ಮತ್ತು (ii) ಪಿಎಫ್ ವರ್ಗಾವಣೆ ಪ್ರಕ್ರಿಯೆಯನ್ನು ಸರಳಗೊಳಿಸಬೇಕೆಂಬ ನಿರ್ದೇಶನಗಳನ್ನು ನೀಡಿದೆ.
ಕಾರ್ಯಕಾರಿ ಸಮಿತಿಯಲ್ಲಿ ನಡೆದ ಚರ್ಚೆಗಳು ಮತ್ತು ನಿರ್ಧಾರಗಳು ಇಪಿಎಫ್‌ಒ ವ್ಯವಸ್ಥೆಗಳ ಮೇಲೆ ಪರಿವರ್ತನಾತ್ಮಕ ಪರಿಣಾಮವನ್ನು ಪ್ರತಿಬಿಂಬಿಸುವ ಜತೆಗೆ ದಕ್ಷತೆಯನ್ನು ಹೆಚ್ಚಿಸುತ್ತವೆ, ವಿಳಂಬವನ್ನು ತಗ್ಗಿಸುತ್ತದೆ ಮತ್ತು ಸದಸ್ಯರು ಹಾಗೂ ಪಿಂಚಣಿದಾರರಿಗೆ ಹೆಚ್ಚಿನ ತೃಪ್ತಿಯನ್ನು ನೀಡಿದಂತಿವೆ.
*****
(Release ID: 2094274)
Visitor Counter : 32