ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಮಾಜಿ ಪ್ರಧಾನಮಂತ್ರಿ ಡಾ. ಮನಮೋಹನ್ ಸಿಂಗ್ ಅವರ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ


ಗಣ್ಯ ನಾಯಕರಲ್ಲೊಬ್ಬರಾದ ಡಾ. ಮನಮೋಹನ್ ಸಿಂಗ್ ಅವರ ನಿಧನ ಭಾರತಕ್ಕೆ ತುಂಬಲಾರದ ನಷ್ಟ: ಪ್ರಧಾನಮಂತ್ರಿ

ವಿವಿಧ ಸರ್ಕಾರಿ ಹುದ್ದೆಗಳಲ್ಲಿ ಸೇವೆ ಸಲ್ಲಿಕೆ; ಹಣಕಾಸು ಸಚಿವರಾಗಿ ಅವರ ಸೇವೆ, ವರ್ಷಾನುವರ್ಷಗಳಲ್ಲಿ ನಮ್ಮ ಆರ್ಥಿಕ ನೀತಿಯ ಮೇಲೆ ಅಚ್ಚಳಿಯದ ಗುರುತು: ಪ್ರಧಾನಮಂತ್ರಿ

ಜನರ ಜೀವನವನ್ನು ಸುಧಾರಿಸಲು ನಮ್ಮ ಪ್ರಧಾನಮಂತ್ರಿಯಾಗಿ ಅವರಿಂದ ವ್ಯಾಪಕ ಪ್ರಯತ್ನ : ಪ್ರಧಾನಮಂತ್ರಿ

Posted On: 26 DEC 2024 11:11PM by PIB Bengaluru

ಮಾಜಿ ಪ್ರಧಾನಮಂತ್ರಿ ಡಾ. ಮನಮೋಹನ್ ಸಿಂಗ್ ಅವರ ನಿಧನಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿದ್ದಾರೆ. "ಭಾರತವು ತನ್ನ ಗಣ್ಯ ನಾಯಕರಲ್ಲಿ ಒಬ್ಬರಾದ ಡಾ. ಮನಮೋಹನ್ ಸಿಂಗ್ ಅವರನ್ನು ಕಳೆದುಕೊಂಡು ದುಃಖಿಸುತ್ತಿದೆ" ಎಂದು ಶ್ರೀ ಮೋದಿ ಹೇಳಿದ್ದಾರೆ. ಡಾ. ಮನಮೋಹನ್ ಸಿಂಗ್ ಅವರು ಅಷ್ಟೇನೂ ಸಿರಿವಂತ ಕುಟುಂಬದಲ್ಲಿ ಜನಿಸಲಿಲ್ಲವಾದರೂ ಗೌರವಾನ್ವಿತ ಅರ್ಥಶಾಸ್ತ್ರಜ್ಞರ ಹಂತಕ್ಕೆ ತಲುಪಿದರು ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬಣ್ಣಿಸಿದ್ದಾರೆ. ನಮ್ಮ ಪ್ರಧಾನಮಂತ್ರಿಯಾಗಿ ಡಾ. ಮನಮೋಹನ್ ಸಿಂಗ್ ಅವರು ಜನರ ಜೀವನವನ್ನು ಸುಧಾರಿಸಲು ಅಪಾರವಾಗಿ ಶ್ರಮಿಸಿದ್ದರು.  

ಪ್ರಧಾನಮಂತ್ರಿಗಳ ಎಕ್ಸ್ ಪೋಸ್ಟ್ ಹೀಗಿದೆ:

ಗಣ್ಯ ನಾಯಕರಲ್ಲಿ ಒಬ್ಬರಾದ ಡಾ. ಮನಮೋಹನ್ ಸಿಂಗ್ ಅವರನ್ನು ಕಳೆದುಕೊಂಡಿರುವುದು  ಭಾರತಕ್ಕೆ ತುಂಬಲಾರದ ನಷ್ಟ. ಅಷ್ಟೇನೂ ಶ್ರೀಮಂತ ಕುಟುಂಬದಲ್ಲಿ ಜನಿಸದ ಅವರು ಗೌರವಾನ್ವಿತ ಅರ್ಥಶಾಸ್ತ್ರಜ್ಞರ ಮಟ್ಟಕ್ಕೆ ಏರಿದರು. ಅವರು ಹಣಕಾಸು ಸಚಿವ ಸ್ಥಾನ ಸೇರಿದಂತೆ ವಿವಿಧ ಸರ್ಕಾರಿ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದರು. ವರ್ಷಾವರ್ಷಗಳಲ್ಲಿ ನಮ್ಮ ಆರ್ಥಿಕ ನೀತಿಯ ಮೇಲೆ ಅಚ್ಚಳಿಯದ ಗುರುತು ಮೂಡಿಸಿದರು. ಸಂಸತ್ತಿನಲ್ಲಿ ಅವರ ಮಧ್ಯಸ್ಥಿಕೆಗಳು ಸಹ ಒಳನೋಟವುಳ್ಳವುಗಳಾಗಿವೆ. ನಮ್ಮ ಪ್ರಧಾನಿಯಾಗಿ, ಅವರು ಜನರ ಜೀವನವನ್ನು ಸುಧಾರಿಸಲು ಅಪಾರವಾಗಿ ಶ್ರಮಿಸಿದ್ದರು.

“ಡಾ. ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಮತ್ತು ನಾನು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ನಿಯಮಿತವಾಗಿ ಸಂವಹನ ನಡೆಸುತ್ತಿದ್ದೆವು. ಆಡಳಿತಕ್ಕೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ನಾವು ವ್ಯಾಪಕವಾದ ಚರ್ಚೆಗಳನ್ನು ನಡೆಸಿದ್ದೆವು. ಅವರ ಜಾಣ್ಮೆ ಮತ್ತು ನಮ್ರತೆ ಸದಾ ಗೋಚರಿಸುತ್ತದೆ.

ದುಃಖದ ಈ ಸಮಯದಲ್ಲಿ, ಡಾ. ಮನಮೋಹನ್ ಸಿಂಗ್ ಅವರ ಕುಟುಂಬಸ್ಥರು, ಅವರ ಸ್ನೇಹಿತರು ಮತ್ತು ಅಸಂಖ್ಯ ಅಭಿಮಾನಿಗಳಿಗೆ ಸಂತಾಪಗಳು. ಓಂ ಶಾಂತಿ.”

 

*****


(Release ID: 2088317) Visitor Counter : 9