ಪ್ರಧಾನ ಮಂತ್ರಿಯವರ ಕಛೇರಿ
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದ ಯುಎಇ ಉಪಪ್ರಧಾನಿ ಮತ್ತು ವಿದೇಶಾಂಗ ಸಚಿವರ ಸ್ವಾಗತ
ಐಎಂಇಇಸಿ ಕಾರಿಡಾರ್ ಸೇರಿದಂತೆ ಭಾರತ-ಯುಎಇ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆ ಮತ್ತಷ್ಟು ಬಲವರ್ಧನೆಗೆ ವಿವಿಧ ಉಪಕ್ರಮಗಳ ಬಗ್ಗೆ ಚರ್ಚೆ
ಪಶ್ಚಿಮ ಏಷ್ಯಾ ಮತ್ತು ವಿಸ್ತೃತ ಪ್ರದೇಶಗಳಲ್ಲಿ ದೀರ್ಘಾವಧಿ ಶಾಂತಿ, ಸ್ಥಿರತೆ ಮತ್ತು ಭದ್ರತೆಗೆ ಬೆಂಬಲ ನೀಡುವ ಭಾರತದ ಬದ್ಧತೆ ಪ್ರಧಾನಿ ಅವರಿಂದ ಪುನರುಚ್ಚಾರ
ಭಾರತೀಯ ಸಮುದಾಯದ ಕಲ್ಯಾಣ ಖಾತರಿಪಡಿಸಿದ ಯುಎಇ ನಾಯಕತ್ವಕ್ಕೆ ಪ್ರಧಾನಮಂತ್ರಿ ಕೃತಜ್ಞತೆ ಸಲ್ಲಿಕೆ
Posted On:
12 DEC 2024 8:43PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಯುನೈಟೆಡ್ ಅರಬ್ ಎಮಿರೇಟ್ಸ್ - ಯುಎಇ ಯ ಉಪಪ್ರಧಾನಿ ಮತ್ತು ವಿದೇಶಾಂಗ ಸಚಿವರಾದ ಶೇಖ್ ಅಬ್ದುಲ್ಲಾ ಬಿನ್ ಝಾ಼ಯೆದ್ ಅಲ್ ನಹ್ಯಾನ್ ಅವರನ್ನು ಬರಮಾಡಿಕೊಂಡರು.
ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ ಅವರಿಗೆ ಪ್ರಧಾನಮಂತ್ರಿಯವರು ತಮ್ಮ ಹಾರ್ದಿಕ ಶುಭ ಹಾರೈಕೆಗಳನ್ನು ತಿಳಿಸಿದರು. ದ್ವಿಪಕ್ಷೀಯ ಬಾಂಧವ್ಯಗಳಲ್ಲಿ ಮುಂದಿನ ಪೀಳಿಗೆಯ ನಿರಂತರತೆಯನ್ನು ಗುರುತಿಸಿದ ಸೆಪ್ಟೆಂಬರ್ 2024 ರ ಅಬುಧಾಬಿಯ ಯುವರಾಜ ಶೇಖ್ ಖಲೀದ್ ಬಿನ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರ ಭಾರತ ಭೇಟಿ ಸೇರಿದಂತೆ ಅನೇಕ ಉನ್ನತ ಮಟ್ಟದ ಭೇಟಿಗಳು ಮತ್ತು ವಿನಿಮಯಗಳ ಬಗ್ಗೆ ಅವರು ತೃಪ್ತಿ ವ್ಯಕ್ತಪಡಿಸಿದರು.
ತಂತ್ರಜ್ಞಾನ, ಇಂಧನ ಮತ್ತು ಜನರ ನಡುವಿನ ಸಂಬಂಧಗಳು ಸೇರಿದಂತೆ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯನ್ನು ಬಲಪಡಿಸುವ ಬಗ್ಗೆ ಉಭಯ ನಾಯಕರು ಒತ್ತಿ ಹೇಳಿದರು.
ಪ್ರಾದೇಶಿಕ ಸಂಪರ್ಕ ಮತ್ತು ಸಮೃದ್ಧಿಯನ್ನು ಉತ್ತೇಜಿಸುವ ಐತಿಹಾಸಿಕ ಉಪಕ್ರಮವಾದ ಭಾರತ-ಮಧ್ಯಪ್ರಾಚ್ಯ-ಯುರೋಪ್ ಕಾರಿಡಾರ್ (IMEEC) ಅನುಷ್ಠಾನಕ್ಕೆ ಪ್ರಧಾನಮಂತ್ರಿಯವರು ವಿಶೇಷ ಒತ್ತು ನೀಡಿದರು.
ಪಶ್ಚಿಮ ಏಷ್ಯಾದಲ್ಲಿನ ಪ್ರಸ್ತುತದ ಪರಿಸ್ಥಿತಿಯ ಬಗ್ಗೆ ಶೇಖ್ ಅಬ್ದುಲ್ಲಾ ಬಿನ್ ಝಾ಼ಯೆದ್ ಅಲ್ ನಹ್ಯಾನ್ ಅವರು ತಮ್ಮ ದೃಷ್ಟಿಕೋನವನ್ನು ಹಂಚಿಕೊಂಡರು. ದೀರ್ಘಾವಧಿಯ ಶಾಂತಿ, ಸ್ಥಿರತೆ ಮತ್ತು ಪ್ರದೇಶದ ಭದ್ರತೆಯನ್ನು ಬೆಂಬಲಿಸುವ ಭಾರತದ ಬದ್ಧತೆಯನ್ನು ಪ್ರಧಾನಮಂತ್ರಿ ಪುನರುಚ್ಚರಿಸಿದರು.
ಯುಎಇಯಲ್ಲಿರುವ ಬೃಹತ್ ಮತ್ತು ಉತ್ಸಾಹಿ ಭಾರತೀಯ ಸಮುದಾಯದ ಕಲ್ಯಾಣವನ್ನು ಖಾತರಿಪಡಿಸಿದ್ದಕ್ಕಾಗಿ ಯುಎಇಯ ನಾಯಕತ್ವಕ್ಕೆ ಪ್ರಧಾನಮಂತ್ರಿ ಧನ್ಯವಾದ ಅರ್ಪಿಸಿದರು.
*****
(Release ID: 2084110)
Visitor Counter : 15
Read this release in:
English
,
Urdu
,
Marathi
,
Hindi
,
Assamese
,
Manipuri
,
Bengali
,
Punjabi
,
Gujarati
,
Odia
,
Tamil
,
Telugu
,
Malayalam