ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಇಂದು ಒಡಿಶಾದ ಭುವನೇಶ್ವರದಲ್ಲಿ 59 ನೇ ಡಿಜಿಪಿ/ ಐಜಿಪಿ ಸಮ್ಮೇಳನ 2024 ಅನ್ನು ಉದ್ಘಾಟಿಸಿದರು


ಪೂರ್ವ ಗಡಿಯಲ್ಲಿ ಉದ್ಭವಿಸುತ್ತಿರುವ ಭದ್ರತಾ ಸವಾಲುಗಳು, ವಲಸೆ ಮತ್ತು ನಗರ ಪೊಲೀಸ್ ವ್ಯವಸ್ಥೆಯ ಪ್ರವೃತ್ತಿಗಳ ಬಗ್ಗೆ ಗಮನ ಹರಿಸಬೇಕು ಎಂದು ಗೃಹ ಸಚಿವರು ಹೇಳಿದರು

ಶೂನ್ಯ ಸಹಿಷ್ಣುತೆ ನೀತಿಯನ್ನು ಜಾರಿಗೆ ತರಲು ಶೂನ್ಯ ಸಹಿಷ್ಣುತೆ ಕಾರ್ಯತಂತ್ರ ಮತ್ತು ಶೂನ್ಯ ಸಹಿಷ್ಣುತೆ ಕ್ರಮದತ್ತ ಉಪಕ್ರಮ ಕೈಗೊಳ್ಳುವಂತೆ ಶ್ರೀ ಅಮಿತ್ ಶಾ ಕರೆ ನೀಡಿದರು

Posted On: 29 NOV 2024 9:18PM by PIB Bengaluru

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಇಂದು ಒಡಿಶಾದ ಭುವನೇಶ್ವರದಲ್ಲಿ 59 ನೇ ಡಿಜಿಪಿ/ ಐಜಿಪಿ ಸಮ್ಮೇಳನ 2024 ಅನ್ನು ಉದ್ಘಾಟಿಸಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಮ್ಮೇಳನದ 2 ಮತ್ತು 3ನೇ ದಿನದ ಕಲಾಪಗಳ ಅಧ್ಯಕ್ಷತೆ ವಹಿಸಲಿದ್ದಾರೆ. ಹೈಬ್ರಿಡ್ ಸ್ವರೂಪದಲ್ಲಿ ನಡೆಯುತ್ತಿರುವ ಈ ಸಮ್ಮೇಳನದಲ್ಲಿ ಎಲ್ಲಾ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳ ಡಿಜಿಪಿಗಳು / ಐಜಿಪಿಗಳು ಮತ್ತು ಸಿಎಪಿಎಫ್ / ಸಿಪಿಒಗಳ ಮುಖ್ಯಸ್ಥರು ಭೌತಿಕವಾಗಿ ಮತ್ತು ಎಲ್ಲಾ ರಾಜ್ಯಗಳ ವಿವಿಧ ಶ್ರೇಣಿಯ ಅಧಿಕಾರಿಗಳು ಭಾಗವಹಿಸುತ್ತಾರೆ. ರಾಷ್ಟ್ರೀಯ ಭದ್ರತಾ ಸಲಹೆಗಾರರು, ಗೃಹ ಖಾತೆ ರಾಜ್ಯ ಸಚಿವರು, ಕೇಂದ್ರ ಗೃಹ ಕಾರ್ಯದರ್ಶಿ ಕೂಡ ಚರ್ಚೆಯಲ್ಲಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ, ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರು ಗುಪ್ತಚರ ಬ್ಯೂರೋದ ಅಧಿಕಾರಿಗಳಿಗೆ ಶ್ಲಾಘನೀಯ ಸೇವೆಗಾಗಿ ಪೊಲೀಸ್ ಪದಕಗಳನ್ನು ಪ್ರದಾನ ಮಾಡಿದರು ಮತ್ತು ಗೃಹ ಸಚಿವಾಲಯದ 'ಪೊಲೀಸ್ ಠಾಣೆಗಳ ಶ್ರೇಯಾಂಕ 2024' ಪುಸ್ತಕವನ್ನು ಬಿಡುಗಡೆ ಮಾಡಿದರು. ಶ್ರೀ ಅಮಿತ್ ಶಾ ಅವರು ಮೂರು ಅತ್ಯುತ್ತಮ ಪೊಲೀಸ್ ಠಾಣೆಗಳಿಗೆ ಟ್ರೋಫಿಗಳನ್ನು ಪ್ರದಾನ ಮಾಡಿದರು.

ಶ್ರೀ ಅಮಿತ್ ಶಾ ಅವರು ತಮ್ಮ ಉದ್ಘಾಟನಾ ಭಾಷಣದಲ್ಲಿ, ಸಾರ್ವತ್ರಿಕ ಚುನಾವಣೆಗಳು -2024 ಅನ್ನು ಸುಗಮವಾಗಿ ನಡೆಸಿದ್ದಕ್ಕಾಗಿ ಮತ್ತು 3 ಹೊಸ ಕ್ರಿಮಿನಲ್ ಕಾನೂನುಗಳನ್ನು ತಡೆರಹಿತವಾಗಿ ಜಾರಿಗೊಳಿಸಿದ್ದಕ್ಕಾಗಿ ಪೊಲೀಸ್ ನಾಯಕತ್ವವನ್ನು ಅಭಿನಂದಿಸಿದರು.

ಜಮ್ಮು ಮತ್ತು ಕಾಶ್ಮೀರ, ಈಶಾನ್ಯ ಮತ್ತು ಎಡಪಂಥೀಯ ಉಗ್ರವಾದ ಪೀಡಿತ ರಾಜ್ಯಗಳಲ್ಲಿ ಭದ್ರತಾ ಪರಿಸ್ಥಿತಿಯಲ್ಲಿ ಸುಧಾರಣೆಗೆ ಕಾರಣವಾದ ಮಹತ್ವದ ಸಾಧನೆಗಳ ಬಗ್ಗೆ ಕೇಂದ್ರ ಗೃಹ ಸಚಿವರು ಮತ್ತು ಸಹಕಾರ ಸಚಿವರು ತೃಪ್ತಿ ವ್ಯಕ್ತಪಡಿಸಿದರು.

3 ಹೊಸ ಕ್ರಿಮಿನಲ್ ಕಾನೂನುಗಳು ದೇಶದ ಕ್ರಿಮಿನಲ್ ನ್ಯಾಯ ವ್ಯವಸ್ಥೆಯ ನೀತಿಯನ್ನು ಶಿಕ್ಷೆ ಆಧಾರಿತದಿಂದ ನ್ಯಾಯ ಆಧಾರಿತವಾಗಿ ಪರಿವರ್ತಿಸಿವೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಹೊಸ ಕಾನೂನುಗಳ ಸ್ಫೂರ್ತಿ ಭಾರತೀಯ ಸಂಪ್ರದಾಯದಲ್ಲಿ ಬೇರೂರಿದೆ ಎಂದು ಅವರು ಒತ್ತಿ ಹೇಳಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ 'ವಿಕಸಿತ ಭಾರತ್' ದೃಷ್ಟಿಕೋನವನ್ನು 2047ರ ವೇಳೆಗೆ ಸಾಧಿಸುವಲ್ಲಿ ಮತ್ತು 2027ರ ವೇಳೆಗೆ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವಲ್ಲಿ ಭದ್ರತಾ ವ್ಯವಸ್ಥೆಯ ಪಾತ್ರವನ್ನು ಕೇಂದ್ರ ಗೃಹ ಸಚಿವರು ಒತ್ತಿ ಹೇಳಿದರು. ಪೂರ್ವ ಗಡಿಯುದ್ದಕ್ಕೂ ಹೊರಹೊಮ್ಮುತ್ತಿರುವ ಭದ್ರತಾ ಸವಾಲುಗಳು, ವಲಸೆ ಮತ್ತು ನಗರ ಪೊಲೀಸ್ ವ್ಯವಸ್ಥೆಯ ಪ್ರವೃತ್ತಿಗಳ ಬಗ್ಗೆ ಗಮನ ಹರಿಸಬೇಕು ಎಂದು ಗೃಹ ಸಚಿವರು ಹೇಳಿದರು. ಶೂನ್ಯ ಸಹಿಷ್ಣುತೆ ನೀತಿಯನ್ನು ಜಾರಿಗೆ ತರಲು ಶೂನ್ಯ ಸಹಿಷ್ಣುತೆ ಕಾರ್ಯತಂತ್ರ ಯೋಜನೆ ಮತ್ತು ಶೂನ್ಯ ಸಹಿಷ್ಣುತೆ ಕ್ರಮದತ್ತ ಉಪಕ್ರಮ ಕೈಗೊಳ್ಳುವಂತೆ ಶ್ರೀ ಅಮಿತ್ ಶಾ ಕರೆ ನೀಡಿದರು.

ಸಮ್ಮೇಳನದ ಮುಂದಿನ ಎರಡು ದಿನಗಳಲ್ಲಿ, ದೇಶದ ಪೊಲೀಸ್ ನಾಯಕತ್ವದ ಉನ್ನತ ಅಧಿಕಾರಿಗಳು ಎಲ್ ಡಬ್ಲ್ಯು ಇ, ಕರಾವಳಿ ಭದ್ರತೆ, ಮಾದಕವಸ್ತುಗಳು, ಸೈಬರ್ ಅಪರಾಧ ಮತ್ತು ಆರ್ಥಿಕ ಭದ್ರತೆ ಸೇರಿದಂತೆ ಅಸ್ತಿತ್ವದಲ್ಲಿರುವ ಮತ್ತು ಉದಯೋನ್ಮುಖ ರಾಷ್ಟ್ರೀಯ ಭದ್ರತಾ ಸವಾಲುಗಳನ್ನು ಎದುರಿಸಲು ಮಾರ್ಗಸೂಚಿಯನ್ನು ರೂಪಿಸಲಿದ್ದಾರೆ. ಹೊಸ ಅಪರಾಧ ಕಾನೂನುಗಳ ಅನುಷ್ಠಾನದಲ್ಲಿನ ಪ್ರಗತಿ ಮತ್ತು ಪೊಲೀಸ್ ವ್ಯವಸ್ಥೆಯಲ್ಲಿನ ಉಪಕ್ರಮಗಳು ಮತ್ತು ಉತ್ತಮ ಅಭ್ಯಾಸಗಳನ್ನು ಮುಂದಿನ ಎರಡು ದಿನಗಳಲ್ಲಿ ಪರಿಶೀಲಿಸಲಾಗುವುದು.

 

*****


(Release ID: 2079324) Visitor Counter : 19