ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ)
azadi ka amrit mahotsav

ಅರುಣಾಚಲ ಪ್ರದೇಶದ ಶಿ ಯೋಮಿ ಜಿಲ್ಲೆಯಲ್ಲಿ 1939 ಕೋಟಿ ರೂ.ಗಳ ವೆಚ್ಚದಲ್ಲಿ 240 ಮೆಗಾವ್ಯಾಟ್ ಸಾಮರ್ಥ್ಯದ ಹೀಯೋ ಜಲವಿದ್ಯುತ್ ಯೋಜನೆಯ ನಿರ್ಮಾಣ, ಅದನ್ನು 50 ತಿಂಗಳಲ್ಲಿ ಪೂರ್ಣಗೊಳಿಸುವ ಯೋಜನೆಯ ಪ್ರಸ್ತಾಪಕ್ಕೆ ಸಂಪುಟದ ಅನುಮೋದನೆ

Posted On: 25 NOV 2024 8:49PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಭೆಯು, ಅರುಣಾಚಲ ಪ್ರದೇಶದ ಶಿ ಯೋಮಿ ಜಿಲ್ಲೆಯಲ್ಲಿ ಹಿಯೋ ಜಲವಿದ್ಯುತ್ ಯೋಜನೆ (ಎಚ್ ಇಪಿ) ನಿರ್ಮಾಣಕ್ಕಾಗಿ 1939 ಕೋಟಿ ರೂ.ಗಳ ಹೂಡಿಕೆಗೆ ತನ್ನ ಅನುಮೋದನೆ ನೀಡಿದೆ. ಈ ಯೋಜನೆಯನ್ನು ಅಂದಾಜು 50 ತಿಂಗಳುಗಳಲ್ಲಿ ಪೂರ್ಣಗೊಳಿಸುವ ಪ್ರಸ್ಥಾಪವನ್ನು ಇದು ಹೊಂದಿದೆ.

240 ಮೆಗಾವ್ಯಾಟ್ (3 x 80 ಮೆಗಾವ್ಯಾಟ್) ಸ್ಥಾಪಿತ ಸಾಮರ್ಥ್ಯದ ಈ ಯೋಜನೆಯು 1000 ಮಿಲಿಯನ್ ಯೂನಿಟ್ (ಎಂಯು) ವಿದ್ಯುತ್ ಶಕ್ತಿಯನ್ನು ಉತ್ಪಾದಿಸುತ್ತದೆ. ಈ ಯೋಜನೆಯಿಂದ ಉತ್ಪತ್ತಿಯಾಗುವ ವಿದ್ಯುತ್ ಅರುಣಾಚಲ ಪ್ರದೇಶ ರಾಜ್ಯದಲ್ಲಿ ವಿದ್ಯುತ್ ಸರಬರಾಜು ಸ್ಥಿತಿಯನ್ನು ಸುಧಾರಿಸಲು ಸಹಾಯ ಮಾಡಲಿದೆ. ಇದು ರಾಷ್ಟ್ರೀಯ ಗ್ರಿಡ್ ಅನ್ನು ಸಮತೋಲನಗೊಳಿಸಲು ಸಹಾಯ ಮಾಡುವ ಸಾಧ್ಯತೆ ಇದೆ.

ನಾರ್ತ್ ಈಸ್ಟರ್ನ್ ಎಲೆಕ್ಟ್ರಿಕ್ ಪವರ್ ಕಾರ್ಪೊರೇಷನ್ ಲಿಮಿಟೆಡ್ (ನೀಪ್ಕೊ) ಮತ್ತು ಅರುಣಾಚಲ ಪ್ರದೇಶ ಸರ್ಕಾರದ ನಡುವಿನ ಜಂಟಿ ಉದ್ಯಮ ಕಂಪನಿಯ ಮೂಲಕ ಈ ಯೋಜನೆಯನ್ನು ಜಾರಿಗೆ ತರಲಾಗುವುದು. ಭಾರತ ಸರ್ಕಾರವು ರಸ್ತೆ, ಸೇತುವೆಗಳು ಮತ್ತು ಸಂಬಂಧಿತ ಪ್ರಸರಣ ಮಾರ್ಗಗಳ ನಿರ್ಮಾಣಕ್ಕಾಗಿ ಆಯವ್ಯಯ ಬೆಂಬಲವಾಗಿ 127.28 ಕೋಟಿ ರೂ.ಗಳ ಬೆಂಬಲವನ್ನು ಒದಗಿಸಲಿದ್ದು, ರಾಜ್ಯದ ಈಕ್ವಿಟಿ ಪಾಲಿಗಾಗಿ 130.43 ಕೋಟಿ ರೂ.ಗಳ ಕೇಂದ್ರ ಹಣಕಾಸು ನೆರವನ್ನು ಕೂಡಾ ಒದಗಿಸಲಿದೆ.

ಈ ಪ್ರದೇಶದ ಗಮನಾರ್ಹ ಮೂಲಸೌಕರ್ಯ ಸುಧಾರಣೆ ಮತ್ತು ಸಾಮಾಜಿಕ-ಆರ್ಥಿಕ ಅಭಿವೃದ್ಧಿಯ ಜೊತೆಗೆ 12% ಉಚಿತ ವಿದ್ಯುತ್ ಮತ್ತು 1% ಸ್ಥಳೀಯ ಪ್ರದೇಶ ಅಭಿವೃದ್ಧಿ ನಿಧಿಯಿಂದ (ಎಲ್ಎಡಿಎಫ್) ರಾಜ್ಯಕ್ಕೆ ಪ್ರಯೋಜನವಾಗಲಿದೆ.

ಆತ್ಮನಿರ್ಭರ ಭಾರತ ಅಭಿಯಾನದ ಉದ್ದೇಶಗಳಿಗೆ ಅನುಗುಣವಾಗಿ ಈ ಯೋಜನೆಯು ಸ್ಥಳೀಯ ಪೂರೈಕೆದಾರರು / ಉದ್ಯಮಗಳು / ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ವಿವಿಧ ಪ್ರಯೋಜನಗಳನ್ನು ಒದಗಿಸುತ್ತದೆ. ಈ ಯೋಜನೆಯ ನಿರ್ಮಾಣ ಹಂತದಲ್ಲಿ, ನೀಪ್ಕೊದಿಂದ ಸುಮಾರು 200 ಸಿಬ್ಬಂದಿ ಮತ್ತು ಗುತ್ತಿಗೆದಾರರಿಂದ ಸುಮಾರು 400 ಕಾರ್ಮಿಕರು ಬೇಕಾಗುತ್ತಾರೆ. ಇದಲ್ಲದೆ, ಈ ಯೋಜನೆಯು ಅದರ ಅನುಷ್ಠಾನದ ಸಮಯದಲ್ಲಿ ವಿವಿಧ ಸಣ್ಣ ಒಪ್ಪಂದಗಳು ಮತ್ತು ಸೇವೆಗಳ ಮೂಲಕ ಸ್ಥಳೀಯ ಸಮುದಾಯಕ್ಕೆ ಗಮನಾರ್ಹ ಪರೋಕ್ಷ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ. ಈ ಯೋಜನೆಯು ಕಾರ್ಯಾಚರಣೆ ಮತ್ತು ನಿರ್ವಹಣೆಯ ಸಮಯದಲ್ಲಿ ಕೂಡಾ ಉದ್ಯೋಗವನ್ನು ಒದಗಿಸುತ್ತದೆ. ಇದಲ್ಲದೆ, ಇದರ ಅಭಿವೃದ್ಧಿಯು ಸಾರಿಗೆ, ಪ್ರವಾಸೋದ್ಯಮ, ಸಣ್ಣ ಪ್ರಮಾಣದ ವ್ಯವಹಾರಗಳಂತಹ ಕ್ಷೇತ್ರಗಳಲ್ಲಿ ಉದ್ಯೋಗವನ್ನು ಸೃಷ್ಟಿಸುವ ಸಾದ್ಯತೆಗಳಿವೆ.

 

*****


(Release ID: 2077198) Visitor Counter : 6