ವಾರ್ತಾ ಮತ್ತು ಪ್ರಸಾರ ಸಚಿವಾಲಯ
'ಸ್ನೋ ಫ್ಲವರ್': ಎರಡು ದೇಶಗಳ ನಡುವಿನ ಸಂಸ್ಕೃತಿ, ಕುಟುಂಬ ಮತ್ತು ಐಡೆಂಟಿಟಿಯ ಕಥೆ
ಸಮಶೀತೋಷ್ಣ ಮತ್ತು ಉಷ್ಣವಲಯದಾದ್ಯಂತ ಅರಳುವ ಕಥೆಯಾದ 'ಸ್ನೋ ಫ್ಲವರ್' ಕುಟುಂಬ, ಪ್ರೀತಿ ಮತ್ತು ಸಂಬಂಧದ ವಿಷಯಗಳನ್ನು ಹೇಳುತ್ತದೆ
55ನೇ ಅಂತಾರಾಷ್ಟ್ರೀಯ ಭಾರತೀಯ ಚಲನಚಿತ್ರೋತ್ಸವದಲ್ಲಿ 'ಸ್ನೋ ಫ್ಲವರ್' ಚಿತ್ರವು ಗಾಲಾ ಪ್ರೀಮಿಯರ್ ನ ಭಾಗವಾಗಿ ತನ್ನ ಛಾಪನ್ನು ಮೂಡಿಸಿತು. ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಗಜೇಂದ್ರ ವಿಠ್ಠಲ್ ಅಹಿರೆ, ಛಾಯಾ ಕದಮ್, ವೈಭವ್ ಮಾಂಗ್ಲೆ ಮತ್ತು ಸರ್ಫರಾಜ್ ಆಲಂ ಸಫು ಸೇರಿದಂತೆ ಚಿತ್ರದ ಪಾತ್ರವರ್ಗ ಮತ್ತು ಸಿಬ್ಬಂದಿಗಳು ನಿನ್ನೆ ಗೋವಾದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು.
ಈ ಮರಾಠಿ ಭಾಷೆಯ ಚಿತ್ರವು ರಷ್ಯಾ ಮತ್ತು ಕೊಂಕಣ - ಎರಡು ಭಿನ್ನ ಸಂಸ್ಕೃತಿಗಳ ನಡುವಿನ ಸೇತುವೆಯಾಗಿ ಹೃದಯಸ್ಪರ್ಶಿ, ದೇಶಾಂತರ ಕಥೆಯೊಂದನ್ನು ಹೇಳುತ್ತದೆ. ಹಿಮಾವೃತ ಸೈಬೀರಿಯಾ ಮತ್ತು ಸೊಂಪಾದ ಹಸಿರು ಕೊಂಕಣದ ವೈರುಧ್ಯಮಯ ಹಿನ್ನೆಲೆಯಲ್ಲಿ ಹೆಣೆದ ಈ ಚಿತ್ರವು ಭಾರತದಲ್ಲಿ ವಾಸಿಸುವ ಅಜ್ಜಿ ಮತ್ತು ರಷ್ಯಾದಲ್ಲಿ ವಾಸಿಸುವ ಮೊಮ್ಮಗಳ ನಡುವಿನ 'ಅಂತರ'ವನ್ನು ಅನ್ವೇಷಿಸುತ್ತದೆ.
ನಿರ್ದೇಶಕ ಗಜೇಂದ್ರ ವಿಠ್ಠಲ್ ಅಹಿರೆ, 'ಸ್ನೋ ಫ್ಲವರ್' ಚಿತ್ರದ ಸೃಜನಾತ್ಮಕ ಪ್ರಕ್ರಿಯೆಯ ವಿವರಗಳನ್ನು ಹಂಚಿಕೊಂಡರು. ಅಂತಹ ತೀವ್ರ ಪರಿಸ್ಥಿತಿಗಳಲ್ಲಿ ಚಿತ್ರೀಕರಣ ಮಾಡುವಲ್ಲಿನ ಸವಾಲುಗಳನ್ನೂ ಅವರು ಎತ್ತಿ ತೋರಿಸಿದರು. ಸೈಬೀರಿಯಾದ ಖಾಂಟಿ-ಮಾನ್ಸಿಯಸ್ಕ್ ನಲ್ಲಿ ತಾಪಮಾನವು -14°C ವರೆಗೆ ಇಳಿಯುವ ಚಳಿಯಲ್ಲಿ, ಚಿಕ್ಕ ತಂಡವು ಕಷ್ಟಕರ ಸನ್ನಿವೇಶಗಳಲ್ಲಿ ಕೆಲಸ ಮಾಡಬೇಕಾಯಿತು. ಈ ಸವಾಲುಗಳ ಹೊರತಾಗಿಯೂ, ತಂಡದ ಬದ್ಧತೆ ಮತ್ತು ಬಲವಾದ ಒಗ್ಗಟ್ಟಿನ ಕೆಲಸದಿಂದಾಗಿ ಕಥೆಯ ಭಾವನಾತ್ಮಕ ಆಳವನ್ನು ಸೆರೆಹಿಡಿಯುವ ಚಿತ್ರವನ್ನು ನಿರ್ಮಿಸಲು ಸಾಧ್ಯವಾಯಿತು ಎಂದು ಅವರು ಹೇಳಿದರು.
"ನಾವು ರಷ್ಯಾ ತಲುಪಿದಾಗ, ಮೈನಸ್ 14 ಡಿಗ್ರಿ ಶೀತವಿತ್ತು" ಎಂದು ಅಹಿರೆ ಹೇಳಿದರು. "ಅವರು ನಮ್ಮನ್ನು ಚೆನ್ನಾಗಿ ನೋಡಿಕೊಂಡರು - ಶೂಗಳು, ಬಟ್ಟೆಗಳು, ಜಾಕೆಟ್ ಗಳು, ಸೋಪು ಮತ್ತು ಶಾಂಪೂ ಕೂಡ ಒದಗಿಸಿದರು. ಅವರ ಬೆಂಬಲದಿಂದ, ನಾವು ಚೆನ್ನಾಗಿ ಕೆಲಸ ಮಾಡಿ ಕಥೆಗೆ ನ್ಯಾಯ ಒದಗಿಸಲು ಸಾಧ್ಯವಾಯಿತು." ಭಾಷೆಯ ಅಡೆತಡೆಗಳಿದ್ದರೂ - ತಂಡದ ಯಾರಿಗೂ ಇಂಗ್ಲಿಷ್ ಬರುತ್ತಿರಲಿಲ್ಲ, ಮತ್ತು ರಷ್ಯನ್ ತಂಡಕ್ಕೆ ಹಿಂದಿ ಗೊತ್ತಿರಲಿಲ್ಲ - ಚಲನಚಿತ್ರ ನಿರ್ಮಾಣದ ಸಾರ್ವತ್ರಿಕ ಭಾಷೆ ಮತ್ತು ಪರಸ್ಪರ ಗೌರವವನ್ನು ಅವಲಂಬಿಸಿ ತಂಡವು ಪರಿಣಾಮಕಾರಿಯಾಗಿ ಸಂವಹನ ನಡೆಸಲು ಸಾಧ್ಯವಾಯಿತು ಎಂದು ಅವರು ಹೇಳಿದರು. "ನಮ್ಮ ಸಂಸ್ಕೃತಿಯ ಭಾಗವಾಗಿ ನಾವು ಪ್ರತಿ ಬೆಳಗ್ಗೆ ಮೊದಲ ಶಾಟ್ ಗೆ ಮುನ್ನ ಗಣಪತಿ ಆರತಿ ಮಾಡುತ್ತೇವೆ. ರಷ್ಯಾದ ತಂಡವು ಮೊದಲ ಎರಡು ದಿನಗಳ ಕಾಲ ಇದನ್ನು ಗಮನಿಸಿತು ಮತ್ತು ನಿಮಗೆ ನಂಬಲಾಗದೇ ಇರಬಹುದು, ಮೂರನೇ ದಿನದಿಂದ ಅವರೂ ಆರತಿ ಮಾಡಲು ಆರಂಭಿಸಿದರು. 'ನಮಗೆ ಅರ್ಥವಾಗುತ್ತಿಲ್ಲ ಆದರೆ ಮಾಡಲು ಒಳ್ಳೆಯ ಅನುಭವವಾಗುತ್ತಿದೆ' ಎಂದು ಅವರು ಹೇಳಿದರು," ಎಂದು ಅವರು ನಗುತ್ತಾ ಹೇಳಿದರು.
ರಷ್ಯಾವನ್ನು ಲೊಕೇಷನ್ ಆಗಿ ಆಯ್ಕೆ ಮಾಡಿದ್ದು ಉದ್ದೇಶಪೂರ್ವಕವಾಗಿತ್ತು. ಅದರ ಅದ್ಭುತವಾದ ಭೌಗೋಳಿಕತೆಯ ಜೊತೆಗೆ, ಕೊಂಕಣದ ಸಂಸ್ಕೃತಿಯಿಂದ ಇದು ತೀವ್ರವಾಗಿ ಭಿನ್ನವಾಗಿದೆ. ಸೈಬೀರಿಯಾದ ಹಿಮಾವೃತ ಭೂದೃಶ್ಯಗಳು ಕಥೆಯ ಭಾವನಾತ್ಮಕ ಮತ್ತು ಭೌಗೋಳಿಕ ವಿಭಜನೆಗೆ ಸೂಕ್ತವಾದ ಹಿನ್ನೆಲೆಯನ್ನು ಒದಗಿಸಿತು. ಇದು ಹಸಿರು, ಉಷ್ಣವಲಯದ ಕೊಂಕಣ ಪ್ರದೇಶದ ವಿರುದ್ಧವಾದ ಥೀಮ್ಗಳನ್ನು ಪ್ರತಿಬಿಂಬಿಸುತ್ತದೆ ಎಂದು ವೈಭವ್ ಮಾಂಗ್ಲೆ ವಿವರಿಸಿದರು.
ಚಿತ್ರದ ಪ್ರಮುಖ ನಟಿಯಾದ ಛಾಯಾ ಕದಮ್, ಎರಡು ದೇಶಗಳ ನಡುವಿನ ವೈರುಧ್ಯಗಳನ್ನು ಚಿತ್ರಿಸುವ ತನ್ನ ಅನುಭವವನ್ನು ಹಂಚಿಕೊಂಡರು. "ನಾನು ಗಜೇಂದ್ರ ಅವರ ದೊಡ್ಡ ಅಭಿಮಾನಿಯಾಗಿದ್ದೇನೆ, ಅವರೊಂದಿಗೆ ಕೆಲಸ ಮಾಡುವುದು ರಷ್ಯಾ ಮತ್ತು ಭಾರತದ ನಡುವಿನ ಸ್ಪಷ್ಟ ಸಾಂಸ್ಕೃತಿಕ ವ್ಯತ್ಯಾಸಗಳನ್ನು ಚಿತ್ರಿಸುವ ಅವಕಾಶವನ್ನು ನನಗೆ ನೀಡಿತು" ಎಂದು ಅವರು ವಿವರಿಸಿದರು.
ಚಿತ್ರದ ನಾಯಕ ನಟ ಸರ್ಫರಾಜ್ ಆಲಂ ಸಫು ಅವರು ಸೆಟ್ನಲ್ಲಿ ಅನುಭವಿಸಿದ ಸಹಯೋಗದ ಮನೋಭಾವವನ್ನು ಮತ್ತಷ್ಟು ಒತ್ತಿಹೇಳಿದರು. ಮಾಸ್ಕೋದಲ್ಲಿ ವಾಸಿಸುವ ಸಫು, ಕನಿಷ್ಠ ಉಪಕರಣಗಳು ಮತ್ತು ಮೂಲಸೌಕರ್ಯಗಳೊಂದಿಗೆ ಕೆಲಸ ಮಾಡುವ ಸಣ್ಣ ಸಿಬ್ಬಂದಿಯ ಸಾಮರ್ಥ್ಯವನ್ನು ಶ್ಲಾಘಿಸಿದರು. "ಸೀಮಿತ ಸಂಪನ್ಮೂಲಗಳಿದ್ದರೂ, ನಾವು ಚಿತ್ರೀಕರಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದೇವೆ. ನಿರ್ದೇಶಕ ಗಜೇಂದ್ರ ನನಗೆ ನನ್ನ ಅಭಿವ್ಯಕ್ತಿಗೆ ಅವಕಾಶ ನೀಡಿದರು ಮತ್ತು ನಾನು ಚಿತ್ರತಂಡ ಮತ್ತು ಸಿಬ್ಬಂದಿಯಿಂದ ಸಾಕಷ್ಟು ಕಲಿತಿದ್ದೇನೆ" ಎಂದು ಸಫು ಹೇಳಿದರು. ಅವರು ಪ್ರೇಕ್ಷಕರ ಮೇಲೆ ಚಲನಚಿತ್ರದ ಭಾವನಾತ್ಮಕ ಪ್ರಭಾವವನ್ನು ಎತ್ತಿ ತೋರಿಸಿದರು, ಅನೇಕ ರಷ್ಯನ್ ಪ್ರೇಕ್ಷಕರು, IFFI ಪ್ರತಿನಿಧಿಗಳಾಗಿ ಇಲ್ಲಿದ್ದರು, ಪ್ರದರ್ಶನದ ಸಮಯದಲ್ಲಿ ಭಾವುಕರಾದರು. ಉಭಯ ದೇಶಗಳ ನಡುವಿನ ಬಾಂಧವ್ಯ ವೃದ್ಧಿಯಾಗುತ್ತಿದೆ ಎಂದರು. ಸಫೂ, "ಈ ಚಿತ್ರವು ರಷ್ಯಾದ ಮತ್ತು ಭಾರತೀಯ ಚಲನಚಿತ್ರ ನಿರ್ಮಾಪಕರ ನಡುವೆ ಹೆಚ್ಚಿನ ಸಹಯೋಗವನ್ನು ಪ್ರೇರೇಪಿಸುತ್ತದೆ ಎಂದು ನಾನು ಭಾವಿಸುತ್ತೇನೆ" ಎಂದು ಹೇಳಿದರು.
ಕೊಂಕಣದ ಬೆರಗುಗೊಳಿಸುವ ಕಡಲತೀರಗಳಿಂದ ಹಿಡಿದು ಸೈಬೀರಿಯಾದ ಶೀತ, ಹಿಮದಿಂದ ಆವೃತವಾದ ಭೂದೃಶ್ಯಗಳವರೆಗೆ, ಚಲನಚಿತ್ರವು ಪಾತ್ರಗಳ ಭಾವನಾತ್ಮಕ ಪ್ರಕ್ಷುಬ್ಧತೆಯನ್ನು ಪ್ರತಿಬಿಂಬಿಸುವ ವ್ಯತಿರಿಕ್ತ ದೃಶ್ಯವನ್ನು ಪ್ರಸ್ತುತಪಡಿಸುತ್ತದೆ.
ಪತ್ರಿಕಾಗೋಷ್ಠಿಯಲ್ಲಿ, ಚಲನಚಿತ್ರ ನಿರ್ಮಾಪಕರು ಪ್ರಾದೇಶಿಕ ಸಿನಿಮಾವನ್ನು ಬೆಂಬಲಿಸುವಂತೆ ಮಾಧ್ಯಮಗಳು ಮತ್ತು ಪ್ರೇಕ್ಷಕರನ್ನು ಒತ್ತಾಯಿಸಿದರು. ಪ್ರತಿಯೊಬ್ಬ ಭಾರತೀಯನೂ ನೋಡಲೇಬೇಕಾದ ಪ್ರಾದೇಶಿಕ ಚಿತ್ರ ಇದಾಗಿದೆ’ ಎಂದು ಅಹಿರೆ ಹೇಳಿದ್ದಾರೆ. "ಇದು ಕೇವಲ ಎರಡು ಸಂಸ್ಕೃತಿಗಳ ನಡುವೆ ಸಿಲುಕಿರುವ ಹುಡುಗಿಯ ಕಥೆಯಲ್ಲ, ಇದು ಕುಟುಂಬ, ಪ್ರೀತಿ ಮತ್ತು ಸಂಬಂಧದ ಸಾರ್ವತ್ರಿಕ ವಿಷಯಗಳ ಬಗ್ಗೆ" ಎಂದು ಅವರು ಹೇಳಿದರು.
ನೀವು ಪತ್ರಿಕಾಗೋಷ್ಠಿಯನ್ನು ಇಲ್ಲಿ ವೀಕ್ಷಿಸಬಹುದು:
ಚಿತ್ರದ ಬಗ್ಗೆ
'ಸ್ನೋ ಫ್ಲವರ್' ನವೆಂಬರ್ 2024 ರಲ್ಲಿ ಭಾರತದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಈ ಚಿತ್ರದ ಮುಖ್ಯ ಕಥಾಹಂದರವೆಂದರೆ ಎರಡು ವಿಭಿನ್ನ ಲೋಕಗಳ ನಡುವೆ ಸಿಲುಕಿಕೊಂಡ ಯುವತಿ ಪರಿಯ ಭಾವನಾತ್ಮಕ ಪ್ರಯಾಣ. ಕಥೆ ಎರಡು ದೇಶಗಳಾದ ಭಾರತ ಮತ್ತು ರಷ್ಯಾದಲ್ಲಿ ನಡೆಯುತ್ತದೆ. ಭಾರತದ ಕೊಂಕಣದಲ್ಲಿ, ಯುವ ಕನಸುಗಾರ ಬಬ್ಲ್ಯಾ ರಷ್ಯಾಕ್ಕೆ ಪ್ರಯಾಣಿಸುವ ದಶಾವತಾರ ರಂಗ ತಂಡವನ್ನು ಸೇರಲು ಬಯಸುತ್ತಾನೆ. ಇದು ಅವನ ಹೆತ್ತವರಾದ ದಿಗ್ಯ ಮತ್ತು ನಂದಾ ಅವರೊಂದಿಗಿನ ಸಂಬಂಧವನ್ನು ಹದಗೆಡಿಸುತ್ತದೆ. ರಷ್ಯಾದಲ್ಲಿ, ಬಬ್ಲ್ಯಾ ಜೀವನವನ್ನು ಕಟ್ಟಿಕೊಳ್ಳುತ್ತಾನೆ, ಮದುವೆಯಾಗುತ್ತಾನೆ ಮತ್ತು ಪರಿ ಎಂಬ ಮಗಳನ್ನು ಪಡೆಯುತ್ತಾನೆ. ಆದರೆ, ಬಬ್ಲ್ಯಾ ಪಬ್ ನಲ್ಲಿನ ಜಗಳದಲ್ಲಿ ಮೃತಪಟ್ಟಾಗ ದುರಂತ ಸಂಭವಿಸುತ್ತದೆ. ಅವನ ಹೆತ್ತವರು ಅನಾಥಳಾದ ಪರಿಯನ್ನು ಕೊಂಕಣಕ್ಕೆ ಕರೆತರಲು ರಷ್ಯಾಕ್ಕೆ ಪ್ರಯಾಣಿಸುತ್ತಾರೆ. ಅವಳನ್ನು ಪ್ರೀತಿಯಿಂದ ಬೆಳೆಸುವ ಪ್ರಯತ್ನ ಮಾಡಿದರೂ, ಪರಿಯ ನಿಜವಾದ ಸ್ಥಾನ ರಷ್ಯಾದಲ್ಲಿದೆ, ಅಲ್ಲಿ ಅವಳು ತೃಪ್ತಿ ಮತ್ತು ಸಂತೋಷವನ್ನು ಕಂಡುಕೊಳ್ಳಬಹುದು ಎಂದು ಅವರು ಶೀಘ್ರದಲ್ಲೇ ಅರಿತುಕೊಳ್ಳುತ್ತಾರೆ. ನೋವಿನ ನಿರ್ಧಾರ ತೆಗೆದುಕೊಂಡ ನಂದಾ ಪಾರಿಯನ್ನು ರಷ್ಯಾಕ್ಕೆ ಮರಳಿ ಕಳುಹಿಸುತ್ತಾರೆ. ಇದು ಹುಡುಗಿ ಮತ್ತು ಅವಳ ತಾಯ್ನಾಡಿನ ನಡುವಿನ ಆಳವಾದ ಸಂಬಂಧವನ್ನು ತೋರಿಸುತ್ತದೆ.
*****
(Release ID: 2076558)
Visitor Counter : 32