ರಾಷ್ಟ್ರಪತಿಗಳ ಕಾರ್ಯಾಲಯ
ಭಾರತೀಯ ವೈಮಾನಿಕ ವಲಯದ ಮಹಿಳಾ ಸಾಧಕರೊಂದಿಗೆ ಸಂವಾದ ನಡೆಸಿದ ಭಾರತದ ರಾಷ್ಟ್ರಪತಿ
Posted On:
04 NOV 2024 1:36PM by PIB Bengaluru
ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಇಂದು (ನವೆಂಬರ್ 4,2024) ರಾಷ್ಟ್ರಪತಿ ಭವನದಲ್ಲಿ ಭಾರತೀಯ ವೈಮಾನಿಕ ವಲಯದ ಮಹಿಳಾ ಸಾಧಕರ ಗುಂಪಿನ ಜತೆ ಸಂವಾದ ನಡೆಸಿದರು. “ಜನರೊಂದಿಗೆ ರಾಷ್ಟ್ರಪತಿ’’ ಉಪಕ್ರಮದಡಿ ಈ ಭೇಟಿ ನಡೆಯಿತು, ಅದರ ಉದ್ದೇಶ ಜನರೊಂದಿಗೆ ಆಳವಾದ ಸಂಪರ್ಕ ಹೊಂದುವುದು ಮತ್ತು ಅವರ ಕೊಡುಗೆಗಳನ್ನು ಗುರುತಿಸುವುದಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ರಾಷ್ಟ್ರಪತಿ ಅವರು, ಭಾರತೀಯ ವೈಮಾನಿಕ ವಲಯದ ತಾಂತ್ರಿಕ ಹಾಗೂ ಕಾರ್ಯಾಚರಣೆ ಕ್ಷೇತ್ರಗಳಲ್ಲಿ ಮಹಿಳೆಯರು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂದರು. ವಾಯು ಸಂಚಾರ ನಿಯಂತ್ರಕ (ಏರ್ ಟ್ರಾಫಿಕ್ ಕಂಟ್ರೋಲರ್ ಗಳ) ರಲ್ಲಿ ಶೇ.15 ರಷ್ಟು ಮಹಿಳೆಯರು, ಶೇ.11 ರಷ್ಟು ವಿಮಾನ ರವಾನೆದಾರರು ಮಹಿಳೆಯರು ಮತ್ತು ಶೇ.9 ರಷ್ಟು ಏರೋಸ್ಪೇಸ್ ಎಂಜಿನಿಯರ್ ಗಳು ಮಹಿಳೆಯರು ಎಂದು ಅವರು ಉಲ್ಲೇಖಿಸಿದರು. ಕಳೆದ ವರ್ಷ ವಾಣಿಜ್ಯ ಪರವಾನಗಿ ಪಡೆದ ಶೇ.18ರಷ್ಟು ಪೈಲಟ್ ಗಳು ಮಹಿಳೆಯರು ಎಂದು ಅವರು ಉಲ್ಲೇಖಿಸಿದರು. ನವೀನವಾಗಿ ಯೋಚಿಸುವ ಮತ್ತು ಹೊಸ ಹಾದಿಯಲ್ಲಿ ಸಾಗುವ ಧೈರ್ಯವನ್ನು ತೋರುತ್ತಿರುವ ಎಲ್ಲಾ ಮಹಿಳಾ ಸಾಧಕರನ್ನು ರಾಷ್ಟ್ರಪತಿಗಳು ಶ್ಲಾಘಿಸಿದರು.
ಭಾರತ ಸರ್ಕಾರದ ಎಲ್ಲರನ್ನೂ ಒಳಗೊಳ್ಳುವ ಪ್ರಯತ್ನಗಳು ನಾಗರಿಕ ವಿಮಾನಯಾನ ಕ್ಷೇತ್ರದಲ್ಲಿ ಮಹಿಳೆಯರ ಪ್ರಗತಿಗೆ ಹೆಚ್ಚಿನ ಉತ್ತೇಜನ ನೀಡಿದೆ ಎಂದು ರಾಷ್ಟ್ರಪತಿ ಹೇಳಿದರು. ಇದೀಗ ಹೆಚ್ಚು ಹೆಚ್ಚು ಮಹಿಳೆಯರು ವೈಮಾನಿಕ ಕ್ಷೇತ್ರವನ್ನು ತಮ್ಮ ವೃತ್ತಿಯನ್ನಾಗಿ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ವಿಮಾನಯಾನ ಉದ್ಯಮದಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಹೆಚ್ಚಿಸುವುದರೊಂದಿಗೆ, ಈ ಕ್ಷೇತ್ರದಲ್ಲಿ ಮುಂದುವರಿಯುವ ಸಮಾನ ಅವಕಾಶಗಳು ಸಹ ಅಗತ್ಯ ಎಂದು ಅವರು ಬಲವಾಗಿ ಪ್ರತಿಪಾದಿಸಿದರು.
ಮಹಿಳೆಯರಿಗೆ ಶಿಕ್ಷಣ ಮತ್ತು ಸೂಕ್ತ ತರಬೇತಿ ಜತೆಗೆ ಕುಟುಂಬದ ಬೆಂಬಲವೂ ಕೂಡ ಅಷ್ಟೇ ಮುಖ್ಯ ಎಂದು ರಾಷ್ಟ್ರಪತಿ ಹೇಳಿದರು. ಕುಟುಂಬದ ನೆರವು ಇಲ್ಲದೆ ಎಷ್ಟೋ ಮಂದಿ ಮಹಿಳೆಯರು ಉನ್ನತ ಶಿಕ್ಷಣ ಪಡೆದರೂ ಸಹ ತಮ್ಮ ಕನಸುಗಳನ್ನು ಸಾಕಾರ ಮಾಡಿಕೊಳ್ಳಲಾಗದಿರುವುದನ್ನು ನಾವು ಅಗ್ಗಾಗ್ಗೆ ಕಾಣುತ್ತಿದ್ದೇವೆ. ಮಹಿಳಾ ಸಾಧಕರು ಇತರೆ ಮಹಿಳೆಯರಿಗೆ ತಮ್ಮ ಕನಸುಗಳನ್ನು ನನಸು ಮಾಡಿಕೊಳ್ಳಲು ಮಾರ್ಗದರ್ಶನ ನೀಡಬೇಕು ಮತ್ತು ತಮ್ಮ ವೃತ್ತಿಯನ್ನು ಅಯ್ಕೆ ಮಾಡಿಕೊಳ್ಳಲು ಉತ್ತೇಜನ ನೀಡಬೇಕು ಎಂದು ಅವರು ಕರೆ ನೀಡಿದರು.
*****
(Release ID: 2070600)
Visitor Counter : 39