ಪ್ರಧಾನ ಮಂತ್ರಿಯವರ ಕಛೇರಿ
ಅಖಿಲ ಭಾರತ ಆಯುರ್ವೇದ ಸಂಸ್ಥೆ(ಎಐಐಎ)ಯಲ್ಲಿ ಬಹುಯೋಜನೆಗಳ ಶಂಕುಸ್ಥಾಪನೆ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ
Posted On:
29 OCT 2024 5:28PM by PIB Bengaluru
ಈ ಅರ್ಥಪೂರ್ಣ ಸಮಾರಂಭದಲ್ಲಿ ಉಪಸ್ಥಿತರಿರುವ ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿಗಳಾದ ಶ್ರೀ ಜಗತ್ ಪ್ರಕಾಶ್ ನಡ್ಡಾ ಜಿ, ಮನ್ಸುಖ್ ಮಾಂಡವಿಯಾ ಜಿ, ಪ್ರತಾಪ್ ರಾವ್ ಜಾಧವ್ ಜಿ, ಶ್ರೀಮತಿ. ಅನುಪ್ರಿಯಾ ಪಟೇಲ್ ಜಿ, ಮತ್ತು ಶೋಭಾ ಕರಂದ್ಲಾಜೆ ಜಿ, ಈ ಭಾಗದ ನನ್ನ ಸಂಸದ, ಶ್ರೀ ರಾಮ್‌ವೀರ್ ಸಿಂಗ್ ಬಿಧುರಿ ಜಿ, ವಿವಿಧ ರಾಜ್ಯಗಳಿಂದ ವಾಸ್ತವಿಕ(ವರ್ಚುವಲ್) ಸಂಪರ್ಕ ಹೊಂದಿರುವ ಗೌರವಾನ್ವಿತ ರಾಜ್ಯಪಾಲರು, ಮಾನ್ಯ ಮುಖ್ಯಮಂತ್ರಿಗಳು, ಸಂಸದರು, ಶಾಸಕರು, ಇತರೆ ಎಲ್ಲ ಗೌರವಾನ್ವಿತ ಪ್ರತಿನಿಧಿಗಳು, ವೈದ್ಯರು, ಆಯುರ್ವೇದ ವೈದ್ಯರು ಮತ್ತು ದೇಶದ ವಿವಿಧ ಭಾಗಗಳಿಂದ ಆರೋಗ್ಯ ಸಂಸ್ಥೆಗಳಿಗೆ ಸಂಬಂಧಿಸಿದ ಆಯುಷ್ ಮತ್ತು ಆರೋಗ್ಯ ವೃತ್ತಿಪರರು, ಆರೋಗ್ಯ ವ್ಯವಸ್ಥೆಯಲ್ಲಿ ತೊಡಗಿರುವ ಸಹೋದರ ಸಹೋದರಿಯರೆ, ಅಖಿಲ ಭಾರತ ಆಯುರ್ವೇದ ಸಂಸ್ಥೆಯ ಎಲ್ಲಾ ವೈದ್ಯರು ಮತ್ತು ಸಿಬ್ಬಂದಿ, ಮಹಿಳೆಯರು ಮತ್ತು ಮಹನೀಯರೆ!
ಇಂದು ಇಡೀ ರಾಷ್ಟ್ರವೇ ಧನ ತ್ರಯೋದಶಿ ಮತ್ತು ಭಗವಾನ್ ಧನ್ವಂತರಿಯ ಜನ್ಮ ವಾರ್ಷಿಕೋತ್ಸವ ಆಚರಿಸುತ್ತಿದೆ. ನಿಮ್ಮೆಲ್ಲರಿಗೂ ಧನ ತ್ರಯೋದಶಿ ಮತ್ತು ಧನ್ವಂತರಿ ಜಯಂತಿಯ ಶುಭಾಶಯಗಳನ್ನು ತಿಳಿಸುತ್ತೇನೆ. ಈ ದಿನದಂದು, ದೇಶಾದ್ಯಂತ ಹೆಚ್ಚಿನ ಸಂಖ್ಯೆಯ ಜನರು ತಮ್ಮ ಮನೆಗಳಿಗೆ ಹೊಸದನ್ನು ಖರೀದಿಸುತ್ತಾರೆ. ನಾನು ವಿಶೇಷವಾಗಿ ನಮ್ಮ ವ್ಯಾಪಾರ ಸಮುದಾಯಕ್ಕೆ ಶುಭ ಹಾರೈಸುತ್ತೇನೆ. ನಾನು ನಿಮ್ಮೆಲ್ಲರಿಗೂ ದೀಪಾವಳಿಯ ಶುಭಾಶಯಗಳನ್ನು ಸಹ ಸಲ್ಲಿಸುತ್ತೇನೆ. ನಮ್ಮಲ್ಲಿ ಹಲವರು ಅನೇಕ ದೀಪಾವಳಿಗಳನ್ನು ನೋಡಿದ್ದೇವೆ, ಆದರೆ ನಾವು ಹಲವಾರು ಬಾರಿ ನೋಡಿದ್ದರೂ ಸಹ, ಈ ದೀಪಾವಳಿ ಮಾತ್ರ ಐತಿಹಾಸಿಕವಾಗಿದೆ. ಇಷ್ಟು ದೀಪಾವಳಿಗಳನ್ನು ನೋಡಿದ ಮೇಲೆ ನಮ್ಮ ಕೂದಲು ಬೆಳ್ಳಗಾಗಿದೆ ಎಂದು ನಿಮಗೆ ಅನಿಸಬಹುದು, ಮೋದಿಜಿ ಈ ಐತಿಹಾಸಿಕ ದೀಪಾವಳಿಯನ್ನು ಎಲ್ಲಿಂದ ತಂದಿದ್ದಾರೆ ಎಂದು ನೀವು ಆಶ್ಚರ್ಯಪಡಬಹುದು. 500 ವರ್ಷಗಳ ನಂತರ ಇಂಥದ್ದೊಂದು ಅವಕಾಶ ಒದಗಿಬಂದಿದೆ. ಅಯೋಧ್ಯೆಯ ರಾಮಲಲ್ಲಾ ಜನ್ಮಸ್ಥಳದಲ್ಲೇ ನಿರ್ಮಿಸಿರುವ ಶ್ರೀರಾಮಮಂದಿರದಲ್ಲಿ ಸಾವಿರಾರು ದೀಪಗಳನ್ನು ಬೆಳಗಿಸಿ, ಅದ್ಭುತವಾದ ಹಬ್ಬವನ್ನು ಸೃಷ್ಟಿಸಲಿದೆ. ನಮ್ಮ ಶ್ರೀರಾಮ ಮತ್ತೊಮ್ಮೆ ಮನೆಗೆ ಮರಳಿದಾಗ ಬಂದಿರುವ ದೀಪಾವಳಿ ಇದಾಗಿದೆ. ಈ ಸಂಭ್ರಮ ನಮಗೆ 14 ವರ್ಷಗಳ ನಂತರ ಬಂದಿಲ್ಲ, 500 ವರ್ಷಗಳ ಸುದೀರ್ಘ ಕಾಲದ ನಂತರ ಬಂದಿರುವ ದೀಪಾವಳಿ ನಮ್ಮೆಲ್ಲರದಾಗಿದೆ.
ಸ್ನೇಹಿತರೆ,
ಧನ ತ್ರಯೋದಶಿಯಲ್ಲಿ ಅದೃಷ್ಟ ಮತ್ತು ಆರೋಗ್ಯದ ಆಚರಣೆಯು ಕೇವಲ ಕಾಕತಾಳೀಯವಲ್ಲ. ಇದು ಭಾರತೀಯ ಸಂಸ್ಕೃತಿಯಲ್ಲಿ ಜೀವನದ ತತ್ವಶಾಸ್ತ್ರವನ್ನು ಸಂಕೇತಿಸುತ್ತದೆ. ನಮ್ಮ ಋಷಿಗಳು ಹೇಳಿದ್ದಾರೆ - ಆರೋಗ್ಯಮ್ ಪರಮಮ್ ಭಾಗ್ಯಮ್! ಅರ್ಥ, ಆರೋಗ್ಯವೇ ಮಹಾಭಾಗ್ಯ, ಶ್ರೇಷ್ಠ ಸಂಪತ್ತು. ಆರೋಗ್ಯವೇ ಸಂಪತ್ತು ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ಈ ಪ್ರಾಚೀನ ಚಿಂತನೆಯು ಈಗ ಆಯುರ್ವೇದ ದಿನವಾಗಿ ಜಾಗತಿಕವಾಗಿ ಚಾಲ್ತಿಯಲ್ಲಿದೆ. ಇಂದು 150ಕ್ಕೂ ಹೆಚ್ಚು ದೇಶಗಳಲ್ಲಿ ಆಯುರ್ವೇದ ದಿನವನ್ನು ಆಚರಿಸುತ್ತಿರುವುದು ನಮಗೆಲ್ಲ ಸಂತಸದ ವಿಷಯ. ಆಯುರ್ವೇದದೆಡೆಗೆ ಹೆಚ್ಚುತ್ತಿರುವ ಜಾಗತಿಕ ಆಕರ್ಷಣೆಗೆ ಇದು ಸಾಕ್ಷಿಯಾಗಿದೆ! ಹೊಸ ಭಾರತವು ತನ್ನ ಪ್ರಾಚೀನ ಅನುಭವಗಳೊಂದಿಗೆ ಜಗತ್ತಿಗೆ ಹೇಗೆ ಗಮನಾರ್ಹವಾಗಿ ಕೊಡುಗೆ ನೀಡಬಹುದು ಎಂಬುದನ್ನು ಇದು ತೋರಿಸುತ್ತದೆ.
ಸ್ನೇಹಿತರೆ,
ಕಳೆದ 10 ವರ್ಷಗಳಲ್ಲಿ, ದೇಶವು ಆಯುರ್ವೇದದ ಜ್ಞಾನವನ್ನು ಆಧುನಿಕ ಔಷಧಿಗಳೊಂದಿಗೆ ಸಂಯೋಜಿಸುವ ಮೂಲಕ ಆರೋಗ್ಯ ಕ್ಷೇತ್ರದಲ್ಲಿ ಹೊಸ ಅಧ್ಯಾಯವನ್ನು ಸೇರಿಸಿದೆ. ಆಲ್ ಇಂಡಿಯಾ ಇನ್ ಸ್ಟಿಟ್ಯೂಟ್ ಆಫ್ ಆಯುರ್ವೇದ ಇದಕ್ಕೆ ಪ್ರಮುಖ ಕೇಂದ್ರವಾಗಿದೆ. 7 ವರ್ಷಗಳ ಹಿಂದೆ, ಇದೇ ದಿನ, ಈ ಸಂಸ್ಥೆಯ ಮೊದಲ ಹಂತವನ್ನು ಲೋಕಾರ್ಪಣೆ ಮಾಡುವ ಗೌರವ ನನಗೆ ಸಿಕ್ಕಿತ್ತು. ಇಂದು, ಭಗವಂತ ಧನ್ವಂತರಿ ಜಯಂತಿಯಂದು, ಅದರ 2ನೇ ಹಂತವನ್ನು ಉದ್ಘಾಟಿಸುವ ಸೌಭಾಗ್ಯವೂ ನನ್ನದಾಗಿದೆ. ಇಲ್ಲಿ, ಆಧುನಿಕ ತಂತ್ರಜ್ಞಾನದೊಂದಿಗೆ ಪಂಚಕರ್ಮದಂತಹ ಪ್ರಾಚೀನ ಆಚರಣೆಗಳ ಸಮ್ಮಿಳನವನ್ನು ನಾವು ವೀಕ್ಷಿಸುತ್ತೇವೆ. ಆಯುರ್ವೇದ ಮತ್ತು ವೈದ್ಯಕೀಯ ವಿಜ್ಞಾನ ಕ್ಷೇತ್ರಗಳಲ್ಲಿಯೂ ಮುಂದುವರಿದ ಸಂಶೋಧನೆಗಳು ನಡೆಯಲಿವೆ. ಇದಕ್ಕಾಗಿ ನಾನು ದೇಶದ ಎಲ್ಲ ನಾಗರಿಕರನ್ನು ಅಭಿನಂದಿಸುತ್ತೇನೆ.
ಸ್ನೇಹಿತರೆ,
ದೇಶದ ನಾಗರಿಕರು ಆರೋಗ್ಯವಂತರಾಗಿರುವಷ್ಟು ಕಾಲ ಅದರ ಪ್ರಗತಿಯ ವೇಗವೂ ಹೆಚ್ಚುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು, ಕೇಂದ್ರ ಸರ್ಕಾರವು ಆರೋಗ್ಯ ನೀತಿಯ 5 ಆಧಾರಸ್ತಂಭಗಳನ್ನು ವ್ಯಾಖ್ಯಾನಿಸುವ ಮೂಲಕ ತನ್ನ ನಾಗರಿಕರ ಆರೋಗ್ಯಕ್ಕೆ ಆದ್ಯತೆ ನೀಡಿದೆ. ಮೊದಲನೆಯದು ತಡೆಗಟ್ಟಬಹುದಾದ ಆರೋಗ್ಯ ಸಂರಕ್ಷಣೆ(ಪ್ರಿವೆಂಟಿವ್ ಹೆಲ್ತ್‌ಕೇರ್). ಅಂದರೆ, ಕಾಯಿಲೆ ಹರಡುವ ಮುನ್ನವೇ ತಡೆಗಟ್ಟುವುದು. ಎರಡನೆಯದು ಸಕಾಲಿಕ ರೋಗ ಪತ್ತೆ. ಮೂರನೆಯದು ಉಚಿತ ಮತ್ತು ಕೈಗೆಟುಕುವ ಚಿಕಿತ್ಸೆ, ಕೈಗೆಟುಕುವ ಔಷಧಿಗಳು. ನಾಲ್ಕನೆಯದು ಸಣ್ಣ ಪಟ್ಟಣಗಳಲ್ಲಿ ಉತ್ತಮ ಚಿಕಿತ್ಸೆ, ವೈದ್ಯರ ಕೊರತೆಯನ್ನು ನಿವಾರಿಸುವುದು ಮತ್ತು ಐದನೆಯದು ಆರೋಗ್ಯ ಸೇವೆಗಳಲ್ಲಿ ತಂತ್ರಜ್ಞಾನದ ವಿಸ್ತರಣೆ. ಭಾರತ ಈಗ ಆರೋಗ್ಯ ಕ್ಷೇತ್ರವನ್ನು ಸಮಗ್ರ ಆರೋಗ್ಯ ರಕ್ಷಣೆಯ ದೃಷ್ಟಿಕೋನದಿಂದ ನೋಡುತ್ತಿದೆ. ಇಂದು ಈ ಕಾರ್ಯಕ್ರಮವು ಈ ಎಲ್ಲಾ 5 ಆಧಾರಸ್ತಂಭಗಳ ಬಲವಾದ ನೋಟವನ್ನು ತೋರಿಸುತ್ತದೆ. ಇಲ್ಲಿ ಅಂದಾಜು 13,000 ಕೋಟಿ ರೂಪಾಯಿ ಮೌಲ್ಯದ ಯೋಜನೆಗಳಿಗೆ ಉದ್ಘಾಟನೆ ಅಥವಾ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಆಯುರ್ ಸ್ವಾಸ್ತ್ಯ ಯೋಜನೆಯಡಿ 4 ಶ್ರೇಷ್ಠತಾ ಕೇಂದ್ರಗಳು, ಡ್ರೋನ್‌ಗಳ ಮೂಲಕ ಆರೋಗ್ಯ ಸೇವೆಗಳ ವಿಸ್ತರಣೆ, ಎಐಐಎಂಎಸ್(ಏಮ್ಸ್) ಋಷಿಕೇಶದಲ್ಲಿ ಹೆಲಿಕಾಪ್ಟರ್ ಸೇವೆಗಳು, ಏಮ್ಸ್ ದೆಹಲಿ ಮತ್ತು ಏಮ್ಸ್ ಬಿಲಾಸ್‌ಪುರದಲ್ಲಿ ಹೊಸ ಮೂಲಸೌಕರ್ಯ, ಇತರೆ 5 ಏಮ್ಸ್‌ಗಳಲ್ಲಿ ಸೇವೆಗಳ ವಿಸ್ತರಣೆ, ವೈದ್ಯಕೀಯ ಕಾಲೇಜುಗಳ ಸ್ಥಾಪನೆ, ನರ್ಸಿಂಗ್ ಕಾಲೇಜುಗಳಿಗೆ ಶಂಕುಸ್ಥಾಪನೆ ಸೇರಿದಂತೆ ದೇಶದಲ್ಲಿ ಆರೋಗ್ಯ ಸೇವೆಗಳ ಪರಿವರ್ತನೆಗೆ ಸಂಬಂಧಿಸಿದ ಹಲವಾರು ಉಪಕ್ರಮಗಳನ್ನು ಇಂದು ಕೈಗೊಳ್ಳಲಾಗಿದೆ. ಇಂತಹ ಹಲವು ಆಸ್ಪತ್ರೆಗಳನ್ನು ನಮ್ಮ ಕಾರ್ಮಿಕ ಸಹೋದರ ಸಹೋದರಿಯರ ಚಿಕಿತ್ಸೆಗಾಗಿ ನಿರ್ಮಿಸಿರುವುದು ನನಗೆ ಸಂತಸ ತಂದಿದೆ. ಈ ಆಸ್ಪತ್ರೆಗಳು ನಮ್ಮ ಕಾರ್ಮಿಕ ವರ್ಗದ ಕೇಂದ್ರಗಳಾಗಿ ಕಾರ್ಯ ನಿರ್ವಹಿಸುತ್ತವೆ. ಇಂದು, ಉದ್ಘಾಟನೆಗೊಂಡಿರುವ ಫಾರ್ಮಾ ಘಟಕಗಳು ದೇಶದೊಳಗೆ ಸುಧಾರಿತ ಔಷಧಗಳು, ಉತ್ತಮ ಗುಣಮಟ್ಟದ ಸ್ಟೆಂಟ್‌ಗಳು ಮತ್ತು ಇಂಪ್ಲಾಂಟ್‌ಗಳನ್ನು ಉತ್ಪಾದಿಸುತ್ತವೆ. ಈ ಘಟಕಗಳು ಭಾರತದ ಔಷಧ ಕ್ಷೇತ್ರದ ಬೆಳವಣಿಗೆಯನ್ನು ಮತ್ತಷ್ಟು ಹೆಚ್ಚಿಸಲಿವೆ.
ಸ್ನೇಹಿತರೆ,
ನಮ್ಮಲ್ಲಿ ಹೆಚ್ಚಿನವರ ಅನಾರೋಗ್ಯವು ಇಡೀ ಕುಟುಂಬಕ್ಕೆ ವ್ಯಾಪಿಸುವಂತೆ ಭಾಸವಾಗುತ್ತದೆ. ಬಡ ಕುಟುಂಬದಲ್ಲಿ ಯಾರಾದರೂ ತೀವ್ರ ಅನಾರೋಗ್ಯಕ್ಕೆ ಒಳಗಾದಾಗ, ಅದು ಕುಟುಂಬದ ಪ್ರತಿಯೊಬ್ಬ ಸದಸ್ಯರ ಮೇಲೆ ಪರಿಣಾಮ ಬೀರುತ್ತದೆ. ಚಿಕಿತ್ಸೆಗಾಗಿ ಕುಟುಂಬಗಳು ತಮ್ಮ ಮನೆ, ಜಮೀನು ಮತ್ತು ಆಭರಣಗಳನ್ನು ಮಾರಾಟ ಮಾಡಬೇಕಾದ ಸಮಯವಿತ್ತು. ಗಂಭೀರ ಕಾಯಿಲೆಗಳ ಚಿಕಿತ್ಸೆಗೆ ತಗಲುವ ವೆಚ್ಚ ಕೇಳಿದರೆ ಬಡವರ ಆತ್ಮ ಕಂಪಿಸುತ್ತದೆ. ವಯಸ್ಸಾದ ತಾಯಂದಿರು ತಮ್ಮ ಚಿಕಿತ್ಸೆಗಾಗಿ ಅಥವಾ ಮೊಮ್ಮಕ್ಕಳ ಶಿಕ್ಷಣಕ್ಕಾಗಿ ಖರ್ಚು ಮಾಡಬೇಕೇ ಎಂದು ಯೋಚಿಸುತ್ತಾರೆ, ಆದರೆ ವಯಸ್ಸಾದ ತಂದೆ ತಮ್ಮ ಆರೋಗ್ಯಕ್ಕಾಗಿ ಖರ್ಚು ಮಾಡಬೇಕೇ ಅಥವಾ ಮನೆಯ ಖರ್ಚುಗಳನ್ನು ನಿರ್ವಹಿಸಬೇಕೇ ಎಂದು ಯೋಚಿಸುತ್ತಾರೆ. ಪರಿಣಾಮವಾಗಿ, ಬಡ ಕುಟುಂಬಗಳಲ್ಲಿನ ಹಿರಿಯರು ಸಾಮಾನ್ಯವಾಗಿ ಒಂದೇ ಒಂದು ಮಾರ್ಗ ಆರಿಸಿಕೊಳ್ಳುತ್ತಾರೆ: ತಮ್ಮ ದುಃಖವನ್ನೇ ಮೌನವಾಗಿ ಸಹಿಸಿಕೊಳ್ಳುವುದು, ನೋವನ್ನು ಸಹಿಸಿಕೊಳ್ಳುವುದು ಮತ್ತು ಕೊನೆಯದಾಗಿ ಸಾವಿಗೆ ಶಾಂತವಾಗಿ ಕಾಯುವುದು. ಹಣದ ಕೊರತೆಯಿಂದ ಚಿಕಿತ್ಸೆ ಕೊಡಿಸಲಾಗದ ಅಸಹಾಯಕತೆ ಬಡವರನ್ನು ಹಿಂಡಿ ಹಿಪ್ಪೆ ಮಾಡುತ್ತಿತ್ತು.
ನನ್ನ ಬಡ ಸಹೋದರ ಸಹೋದರಿಯರ ಈ ಅಸಹಾಯಕತೆಯನ್ನು ನೋಡಿ ನನಗೆ ಸಹಿಸಲಾಗಲಿಲ್ಲ. ಹೀಗಾಗಿ, ಆ ಸಹಾನುಭೂತಿಯಿಂದ, ಆ ನೋವಿನಿಂದ ಮತ್ತು ಆ ಸಂಕಟದಿಂದ ನನ್ನ ದೇಶವಾಸಿಗಳಿಗೆ ಸಂಪೂರ್ಣ ಸಮರ್ಪಣೆಯಿಂದ ಆಯುಷ್ಮಾನ್ ಭಾರತ್ ಯೋಜನೆ ಹುಟ್ಟಿದೆ. ಬಡವರ ಆಸ್ಪತ್ರೆ ವೆಚ್ಚವನ್ನು, ಚಿಕಿತ್ಸೆಗಾಗಿ 5 ಲಕ್ಷ ರೂಪಾಯಿ ತನಕ ಭರಿಸಲು ಸರ್ಕಾರ ನಿರ್ಧರಿಸಿದೆ. ಇಂದು, ದೇಶದ ಸುಮಾರು 4 ಕೋಟಿ ಬಡವರು ಆಯುಷ್ಮಾನ್ ಯೋಜನೆಯಿಂದ ಪ್ರಯೋಜನ ಪಡೆದಿದ್ದಾರೆ ಎಂಬ ತೃಪ್ತಿ ನನಗಿದೆ. ಈ 4 ಕೋಟಿ ಬಡವರು ಆಸ್ಪತ್ರೆಗೆ ದಾಖಲಾದರು, ಅವರಲ್ಲಿ ಕೆಲವರು ವಿವಿಧ ಕಾಯಿಲೆಗಳಿಗೆ ಹಲವಾರು ಬಾರಿ 1 ರೂಪಾಯಿ ಖರ್ಚು ಮಾಡದೆ ಚಿಕಿತ್ಸೆ ಪಡೆದರು. ಆಯುಷ್ಮಾನ್ ಯೋಜನೆ ಅಸ್ತಿತ್ವದಲ್ಲಿಲ್ಲದಿದ್ದರೆ, ಈ ಬಡವರು ತಮ್ಮ ಜೇಬಿನಿಂದ ಸುಮಾರು 1.25 ಲಕ್ಷ ಕೋಟಿ ರೂಪಾಯಿ ಪಾವತಿಸಬೇಕಾಗಿತ್ತು. ದೇಶದ ವಿವಿಧ ರಾಜ್ಯಗಳಲ್ಲಿ ಆಯುಷ್ಮಾನ್ ಯೋಜನೆಯ ಫಲಾನುಭವಿಗಳನ್ನು ನಾನು ಆಗಾಗ್ಗೆ ಭೇಟಿಯಾಗುತ್ತೇನೆ, ಅವರ ಸುಖ-ದುಃಖ ಆಲಿಸುತ್ತೇನೆ, ಅವರ ಅನುಭವಗಳನ್ನು ಕೇಳುತ್ತೇನೆ, ಮಾತನಾಡುವಾಗ ಅವರ ಕಣ್ಣಲ್ಲಿ ಉಕ್ಕುವ ಆನಂದ ಭಾಷ್ಪವು ಪ್ರತಿಯೊಬ್ಬರಿಗೂ ಆಶೀರ್ವಾದಕ್ಕಿಂತ ಕಡಿಮೆಯಿಲ್ಲ. ಆಯುಷ್ಮಾನ್ ಯೋಜನೆ, ಪ್ರತಿಯೊಬ್ಬ ವೈದ್ಯರು ಮತ್ತು ಪ್ರತಿ ಅರೆವೈದ್ಯಕೀಯ ಸಿಬ್ಬಂದಿಗೆ ಇದಕ್ಕಿಂತ ದೊಡ್ಡ ಆಶೀರ್ವಾದ ಬೇರೊಂದಿಲ್ಲ.
ನೀವು ನನ್ನನ್ನು ನಂಬಬಹುದು; ಇಂತಹ ಬಿಕ್ಕಟ್ಟಿನಿಂದ ಜನರನ್ನು ರಕ್ಷಿಸುವ ಯೋಜನೆ ಹಿಂದೆಂದೂ ಜಾರಿಯಾಗಿಲ್ಲ. ಇಂದು ಆಯುಷ್ಮಾನ್ ಯೋಜನೆ ವಿಸ್ತರಣೆ ಆಗುತ್ತಿರುವುದಕ್ಕೆ ನಾನು ತುಂಬಾ ತೃಪ್ತಿ ಹೊಂದಿದ್ದೇನೆ. ದೇಶದ ಪ್ರತಿಯೊಬ್ಬ ವೃದ್ಧರೂ ಈ ಕಾರ್ಯಕ್ರಮ ನೋಡುತ್ತಿದ್ದಾರೆ. ನನ್ನ 3ನೇ ಅವಧಿಯಲ್ಲಿ 70 ವರ್ಷ ಮೇಲ್ಪಟ್ಟ ಎಲ್ಲ ವೃದ್ಧರನ್ನು ಆಯುಷ್ಮಾನ್ ಯೋಜನೆಗೆ ಸೇರಿಸಲಾಗುವುದು ಎಂದು ಚುನಾವಣೆಯ ಸಂದರ್ಭದಲ್ಲಿ ಭರವಸೆ ನೀಡಿದ್ದೆ. ಇಂದು ಧನ್ವಂತರಿ ಜಯಂತಿಯಂದು ಈ ಭರವಸೆ ಈಡೇರುತ್ತಿದೆ. ಈಗ ದೇಶದ 70 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ವೃದ್ಧರಿಗೂ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ದೊರೆಯಲಿದೆ. ಈ ಹಿರಿಯ ವ್ಯಕ್ತಿಗಳಿಗೆ ಆಯುಷ್ಮಾನ್ ವಯ ವಂದನಾ ಕಾರ್ಡ್ ನೀಡಲಾಗುವುದು. 70 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ವೃದ್ಧರಿಗೂ ಆಯುಷ್ಮಾನ್ ವಯ ವಂದನಾ ಕಾರ್ಡ್ ಆದಷ್ಟು ಬೇಗ ಸಿಗುವಂತೆ ಮಾಡುವುದು ಸರ್ಕಾರದ ಪ್ರಯತ್ನವಾಗಿದೆ. ಇದು ಯಾವುದೇ ಆದಾಯದ ನಿರ್ಬಂಧಗಳಿಲ್ಲದ ಯೋಜನೆಯಾಗಿದೆ. ಬಡವರಾಗಿರಲಿ, ಮಧ್ಯಮ ವರ್ಗದವರಾಗಿರಲಿ ಅಥವಾ ಶ್ರೀಮಂತರಾಗಿರಲಿ, ಪ್ರತಿಯೊಬ್ಬರೂ ಇದರ ಪ್ರಯೋಜನ ಪಡೆಯಬಹುದು. ಈ ದೇಶದ ಯಾವುದೇ ನಾಗರಿಕರು 70 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದರೂ, ಈ ಯೋಜನೆಯ ಪ್ರಯೋಜನ ಪಡೆಯಬಹುದು.
ಪ್ರತಿಯೊಬ್ಬ ವಯೋವೃದ್ಧರು ಚಿಂತೆಯಿಂದ ಮುಕ್ತರಾಗಿ ಘನತೆಯಿಂದ ಆರೋಗ್ಯಕರ ಜೀವನ ನಡೆಸಬೇಕು. ಅದನ್ನು ಸಾಧಿಸುವಲ್ಲಿ ಈ ಯೋಜನೆಯು ಒಂದು ಮೈಲಿಗಲ್ಲು ಎಂದು ಸಾಬೀತುಪಡಿಸುತ್ತದೆ. ಆಯುಷ್ಮಾನ್ ವಯ ವಂದನಾ ಕಾರ್ಡ್‌ನಿಂದ ಮನೆಯ ಖರ್ಚು ಕೂಡ ಕಡಿಮೆಯಾಗುತ್ತದೆ, ಅವರ ಚಿಂತೆಯೂ ಕಡಿಮೆಯಾಗುತ್ತದೆ. ಈ ಯೋಜನೆಗಾಗಿ ನಾನು ಎಲ್ಲಾ ನಾಗರಿಕರನ್ನು ಅಭಿನಂದಿಸುತ್ತೇನೆ. ಇಲ್ಲಿಂದ 70 ವರ್ಷ ಮೇಲ್ಪಟ್ಟ ಎಲ್ಲಾ ಹಿರಿಯರಿಗೆ ನನ್ನ ಗೌರವ ಸಲ್ಲಿಸುತ್ತೇನೆ. ಹೇಗಾದರೂ, ನಾನು ದೆಹಲಿ ಮತ್ತು ಪಶ್ಚಿಮ ಬಂಗಾಳದ 70 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯರಿಂದ ಕ್ಷಮೆ ಕೇಳುತ್ತೇನೆ, ಏಕೆಂದರೆ ನಾನು ನಿಮ್ಮ ಸೇವೆ ಮಾಡಲು ಸಾಧ್ಯವಾಗುವುದಿಲ್ಲ. ನಿಮಗೆ ಸಹಾಯ ಮಾಡಲು ಸಾಧ್ಯವಾಗದಿದ್ದಕ್ಕಾಗಿ ನಾನು ಕ್ಷಮೆ ಯಾಚಿಸುತ್ತೇನೆ. ನಿಮ್ಮ ನೋವನ್ನು ನಾನು ತಿಳಿದುಕೊಳ್ಳುತ್ತೇನೆ, ಆದರೆ ನಾನು ನಿಮಗೆ ಸಹಾಯ ಮಾಡಲು ಸಾಧ್ಯವಾಗುತ್ತಿಲ್ಲ. ಏಕೆಂದರೆ, ದೆಹಲಿ ಮತ್ತು ಪಶ್ಚಿಮ ಬಂಗಾಳ ಸರ್ಕಾರಗಳು ತಮ್ಮ ರಾಜಕೀಯ ಹಿತಾಸಕ್ತಿಗಳಿಂದಾಗಿ ಈ ಆಯುಷ್ಮಾನ್ ಯೋಜನೆಯನ್ನು ಜಾರಿ ಮಾಡುತ್ತಿಲ್ಲ. ಅವರ ಸ್ವಂತ ರಾಜ್ಯಗಳಲ್ಲಿ ರೋಗಿಗಳಿಗೆ ನೋವುಂಟುಮಾಡುವ ಈ ವರ್ತನೆ ಮಾನವೀಯ ದೃಷ್ಟಿಕೋನದಿಂದ ಸ್ವೀಕಾರಾರ್ಹವಲ್ಲ. ಆದ್ದರಿಂದ, ನಾನು ಪಶ್ಚಿಮ ಬಂಗಾಳ ಮತ್ತು ದೆಹಲಿಯ ಹಿರಿಯರಲ್ಲಿ ಕ್ಷಮೆ ಯಾಚಿಸುತ್ತೇನೆ. ನಾನು ನನ್ನ ದೇಶವಾಸಿಗಳಿಗೆ ಸೇವೆ ಸಲ್ಲಿಸಲು ಸಮರ್ಥನಾಗಿದ್ದೇನೆ, ಆದರೆ ರಾಜಕೀಯ ಹಿತಾಸಕ್ತಿಗಳ ಗೋಡೆಗಳು ದೆಹಲಿ ಮತ್ತು ಪಶ್ಚಿಮ ಬಂಗಾಳದ ಹಿರಿಯರಿಗೆ ಸೇವೆ ಮಾಡುವುದನ್ನು ತಡೆಯುತ್ತಿವೆ. ನನಗೆ ಇದು ಕೇವಲ ರಾಜಕೀಯ ವಿಷಯವಲ್ಲ; ನಾನು ಮಾತನಾಡುತ್ತಿರುವ ದೆಹಲಿಯ ಹಿರಿಯರೂ ನನ್ನ ಮಾತನ್ನು ಕೇಳುತ್ತಿರುವುದು ನನಗೆ ಅತೀವ ನೋವು ತಂದಿದೆ. ನನ್ನ ದುಃಖದ ಆಳವನ್ನು ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಿಲ್ಲ.
ಸ್ನೇಹಿತರೆ,
ಬಡವರಿರಲಿ ಅಥವಾ ಮಧ್ಯಮ ವರ್ಗದವರಿರಲಿ, ಪ್ರತಿಯೊಬ್ಬರಿಗೂ ಚಿಕಿತ್ಸೆಯ ವೆಚ್ಚ ಕಡಿಮೆ ಮಾಡುವುದು ನಮ್ಮ ಸರ್ಕಾರದ ಆದ್ಯತೆಯಾಗಿದೆ. ಇಂದು, ದೇಶದಾದ್ಯಂತ 14,000ಕ್ಕೂ ಹೆಚ್ಚು ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳನ್ನು ನಮ್ಮ ಸರ್ಕಾರವು ಎಷ್ಟು ಸೂಕ್ಷ್ಮವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಈ ಕೇಂದ್ರಗಳಲ್ಲಿ ಔಷಧಗಳು ಶೇ.80ರಷ್ಟು ರಿಯಾಯಿತಿ ದರದಲ್ಲಿ ದೊರೆಯುತ್ತಿವೆ. ಈ ಜನೌಷಧಿ ಕೇಂದ್ರಗಳು ಅಸ್ತಿತ್ವದಲ್ಲಿಲ್ಲದಿದ್ದರೆ ಬಡವರು ಮತ್ತು ಮಧ್ಯಮ ವರ್ಗದವರು ಔಷಧಿಗಳಿಗೆ ಹೆಚ್ಚುವರಿಯಾಗಿ 30,000 ಕೋಟಿ ರೂಪಾಯಿ ಖರ್ಚು ಮಾಡಬೇಕಿತ್ತು. ಅವರು ಈ ಕೇಂದ್ರಗಳಿಂದ ಶೇ.80ರಷ್ಟು ರಿಯಾಯಿತಿಯಲ್ಲಿ ಔಷಧಗಳನ್ನು ಪಡೆದ ಕಾರಣ ಅವರು ಹಣ ಉಳಿಸಿದ್ದಾರೆ.
ನಾವು ಸ್ಟೆಂಟ್ ಮತ್ತು ಮೊಣಕಾಲು ಅಳವಡಿಕೆಗಳನ್ನು ಅಗ್ಗವಾಗಿ ಮಾಡಿದ್ದೇವೆ ಎಂಬುದು ನಿಮಗೆ ತಿಳಿದಿದೆ. ನಾವು ಈ ನಿರ್ಧಾರಗಳನ್ನು ತೆಗೆದುಕೊಳ್ಳದಿದ್ದರೆ, ಈ ಆಪರೇಷನ್ ಗಳಿಗೆ ಒಳಗಾದವರು ಹೆಚ್ಚುವರಿ 80,000 ಕೋಟಿ ರೂಪಾಯಿ ಖರ್ಚು ಮಾಡಬೇಕಾಗಿತ್ತು. ಇದು ನಮ್ಮ ಪ್ರಯತ್ನದ ಫಲವಾಗಿ ಅವರು 80,000 ಕೋಟಿ ರೂಪಾಯಿ ಉಳಿಸಿದ್ದಾರೆ. ಉಚಿತ ಡಯಾಲಿಸಿಸ್ ಯೋಜನೆಯಿಂದ ಲಕ್ಷಾಂತರ ರೋಗಿಗಳಿಗೆ ಸಾವಿರಾರು ಕೋಟಿ ರೂಪಾಯಿ ಉಳಿತಾಯವಾಗಿದೆ. ಮಾರಣಾಂತಿಕ ರೋಗಗಳನ್ನು ತಡೆಗಟ್ಟಲು ನಮ್ಮ ಸರ್ಕಾರ ಮಿಷನ್ ಇಂದ್ರಧನುಷ್ ಅಭಿಯಾನ ನಡೆಸುತ್ತಿದೆ. ಇದು ಗರ್ಭಿಣಿಯರು ಮತ್ತು ನವಜಾತ ಶಿಶುಗಳ ಜೀವ ಉಳಿಸುವುದಲ್ಲದೆ, ಗಂಭೀರ ಕಾಯಿಲೆಗಳಿಂದ ಅವರನ್ನು ರಕ್ಷಿಸುತ್ತದೆ. ನನ್ನ ದೇಶದ ಬಡವರು ಮತ್ತು ಮಧ್ಯಮ ವರ್ಗದವರು ದುಬಾರಿ ಚಿಕಿತ್ಸೆಗಳ ಹೊರೆಯಿಂದ ಮುಕ್ತರಾಗುವುದನ್ನು ನಾನು ಖಚಿತಪಡಿಸುತ್ತೇನೆ, ದೇಶವು ಈ ದಿಕ್ಕಿನಲ್ಲಿ ಮುನ್ನಡೆಯುತ್ತಿದೆ.
ಸ್ನೇಹಿತರೆ,
ಅನಾರೋಗ್ಯದಿಂದ ಉಂಟಾಗುವ ತೊಂದರೆಗಳು ಮತ್ತು ಅಪಾಯಗಳನ್ನು ಕಡಿಮೆ ಮಾಡಲು ಸಕಾಲಿಕ ರೋಗ ಪತ್ತೆ(ನಿರ್ಣಯ) ಅತ್ಯಗತ್ಯ ಎಂದು ನಿಮಗೆ ತಿಳಿದಿದೆ. ಯಾರಾದರೂ ಅನಾರೋಗ್ಯಕ್ಕೆ ಒಳಗಾಗಿದ್ದರೆ, ಅವರು ತ್ವರಿತ ಪರೀಕ್ಷೆ ಮತ್ತು ತ್ವರಿತ ಚಿಕಿತ್ಸೆಗೆ ಪ್ರವೇಶ ಹೊಂದಿರಬೇಕು. ಇದನ್ನು ಸುಲಭಗೊಳಿಸಲು, ದೇಶಾದ್ಯಂತ 200,000 ಆಯುಷ್ಮಾನ್ ಆರೋಗ್ಯ ಮಂದಿರಗಳನ್ನು ತೆರೆಯಲಾಗಿದೆ. ಇಂದು, ಈ ಆರೋಗ್ಯ ಮಂದಿರಗಳಲ್ಲಿ ಕೋಟಿಗಟ್ಟಲೆ ಜನರು ಕ್ಯಾನ್ಸರ್, ರಕ್ತದೊತ್ತಡ ಮತ್ತು ಮಧುಮೇಹದಂತಹ ಕಾಯಿಲೆಗಳಿಗೆ ಸುಲಭವಾಗಿ ತಪಾಸಣೆಗೆ ಒಳಗಾಗುತ್ತಿದ್ದಾರೆ. ಈ ಪರೀಕ್ಷೆಯ ಸುಲಭತೆಯು ಸಕಾಲದಲ್ಲಿ ಚಿಕಿತ್ಸೆ ಪ್ರಾರಂಭಿಸಲು ಅನುವು ಮಾಡಿಕೊಡುತ್ತದೆ, ಜತೆಗೆ ಜನರ ಹಣವನ್ನು ಉಳಿಸುತ್ತದೆ.
ನಮ್ಮ ಸರ್ಕಾರವು ಆರೋಗ್ಯ ಕ್ಷೇತ್ರದಲ್ಲಿ ತಂತ್ರಜ್ಞಾನದ ಬಳಕೆಯನ್ನು ಗರಿಷ್ಠಗೊಳಿಸುವ ಮೂಲಕ ನಾಗರಿಕರ ಹಣ ಉಳಿಸುತ್ತಿದೆ. ಇ-ಸಂಜೀವನಿ ಯೋಜನೆಯಡಿ, 30 ಕೋಟಿ ಜನರು - ಇದು ಸಣ್ಣ ಸಂಖ್ಯೆಯೇನಲ್ಲ - ಗೌರವಾನ್ವಿತ ವೈದ್ಯರಿಂದ ಆನ್‌ಲೈನ್ ಸಮಾಲೋಚನೆಗಳನ್ನು ಸ್ವೀಕರಿಸಿದ್ದಾರೆ. ವೈದ್ಯರಿಂದ ಉಚಿತ ಮತ್ತು ನಿಖರವಾದ ಸಮಾಲೋಚನೆಗಳು ಅವರಿಗೆ ಬಹಳಷ್ಟು ಹಣವನ್ನು ಉಳಿಸಿವೆ. ಇಂದು, ನಾವು ಯು-ವಿನ್ ಪ್ಲಾಟ್‌ಫಾರ್ಮ್ ಅನ್ನು ಸಹ ಪ್ರಾರಂಭಿಸಿದ್ದೇವೆ. ಈ ವೇದಿಕೆಯೊಂದಿಗೆ, ಭಾರತವು ತನ್ನದೇ ಆದ ತಾಂತ್ರಿಕವಾಗಿ ಮುಂದುವರಿದ ಇಂಟರ್ಫೇಸ್ ಹೊಂದಿದೆ. ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ನಮ್ಮ ಕೊ-ವಿನ್ ಪ್ಲಾಟ್‌ಫಾರ್ಮ್‌ನ ಯಶಸ್ಸು ಜಾಗತಿಕವಾಗಿ ಸಾಕ್ಷಿಯಾಗಿದೆ. ಯುಪಿಐ ಪಾವತಿ ವ್ಯವಸ್ಥೆಯ ಯಶಸ್ಸು ಕೂಡ ಜಾಗತಿಕ ಯಶೋಗಾಥೆಯಾಗಿದೆ. ಭಾರತ ಈಗ ಡಿಜಿಟಲ್ ಪಬ್ಲಿಕ್ ಇನ್ಫ್ರಾಸ್ಟ್ರಕ್ಚರ್(ಡಿಪಿಐ) ಮೂಲಕ ಆರೋಗ್ಯ ಕ್ಷೇತ್ರದಲ್ಲಿ ಆ ಯಶಸ್ಸನ್ನು ಪುನರಾವರ್ತಿಸುತ್ತಿದೆ.
ಸ್ನೇಹಿತರೆ,
ಸ್ವಾತಂತ್ರ್ಯ ಬಂದ 6-7 ದಶಕಗಳಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಆಗದ ಕೆಲಸಗಳನ್ನು ಕಳೆದ 10 ವರ್ಷಗಳಲ್ಲಿ ಸಾಧಿಸಲಾಗಿದೆ. ಕಳೆದ ದಶಕದಲ್ಲಿ, ದೇಶದಲ್ಲಿ ದಾಖಲೆ ಸಂಖ್ಯೆಯ ಹೊಸ ಏಮ್ಸ್ ಮತ್ತು ವೈದ್ಯಕೀಯ ಕಾಲೇಜುಗಳನ್ನು ತೆರೆಯಲಾಗಿದೆ. ಇಂದು ಇದೇ ಕಾರ್ಯಕ್ರಮದಲ್ಲಿ ಕರ್ನಾಟಕ, ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಇತರ ರಾಜ್ಯಗಳಲ್ಲಿ ಹಲವಾರು ಆಸ್ಪತ್ರೆಗಳನ್ನು ಉದ್ಘಾಟಿಸಲಾಗಿದೆ. ಕರ್ನಾಟಕದ ನರಸಾಪುರ ಮತ್ತು ಬೊಮ್ಮಸಂದ್ರ, ಮಧ್ಯಪ್ರದೇಶದ ಪಿತಂಪುರ, ಆಂಧ್ರಪ್ರದೇಶದ ಅಚ್ಯುತಪುರಂ ಮತ್ತು ಹರಿಯಾಣದ ಫರಿದಾಬಾದ್‌ನಲ್ಲಿ ಹೊಸ ವೈದ್ಯಕೀಯ ಕಾಲೇಜುಗಳನ್ನು ಉದ್ಘಾಟಿಸಲಾಗಿದೆ. ಉತ್ತರ ಪ್ರದೇಶದ ಮೀರತ್‌ನಲ್ಲಿ ಹೊಸ ಇಎಸ್‌ಐಸಿ ಆಸ್ಪತ್ರೆಯ ನಿರ್ಮಾಣವೂ ಪ್ರಾರಂಭವಾಗಿದೆ. ಇಂದೋರ್‌ನಲ್ಲೂ ಆಸ್ಪತ್ರೆ ಉದ್ಘಾಟನೆಯಾಗಿದೆ. ಹೆಚ್ಚುತ್ತಿರುವ ಆಸ್ಪತ್ರೆಗಳ ಸಂಖ್ಯೆಯು ವೈದ್ಯಕೀಯ ಸೀಟುಗಳ ಸಂಖ್ಯೆಯೂ ವೇಗವಾಗಿ ಏರುತ್ತಿರುವುದನ್ನು ಸೂಚಿಸುತ್ತದೆ. ವೈದ್ಯನಾಗುವ ಕನಸು ಕಾಣುವ ಯಾವ ಬಡ ಮಗುವೂ ಆ ಕನಸು ಭಗ್ನಗೊಳ್ಳುವುದನ್ನು ನಾನು ಬಯಸುವುದಿಲ್ಲ. ಯಾವುದೇ ಯುವಕರ ಕನಸು ನುಚ್ಚುನೂರಾಗದಂತೆ ನೋಡಿಕೊಳ್ಳುವುದರಲ್ಲಿ ಸರ್ಕಾರದ ಯಶಸ್ಸು ಅಡಗಿದೆ ಎಂದು ನಾನು ನಂಬುತ್ತೇನೆ. ಕನಸುಗಳು ತಮ್ಮದೇ ಆದ ಶಕ್ತಿ ಹೊಂದಿವೆ, ಅವು ಕೆಲವೊಮ್ಮೆ ಸ್ಫೂರ್ತಿಯ ಸೆಲೆಯಾಗಬಹುದು. ಯಾವುದೇ ಮಧ್ಯಮ ವರ್ಗದ ಮಗು ಹಣಕಾಸಿನ ಅಡಚಣೆಗಳಿಂದ ವೈದ್ಯಕೀಯ ಅಧ್ಯಯನಕ್ಕಾಗಿ ವಿದೇಶಕ್ಕೆ ಹೋಗಬಾರದು ಎಂದು ನಾನು ಬಯಸುತ್ತೇನೆ. ಅದಕ್ಕಾಗಿಯೇ ಕಳೆದ 10 ವರ್ಷಗಳಿಂದ ಭಾರತದಲ್ಲಿ ವೈದ್ಯಕೀಯ ಸೀಟುಗಳನ್ನು ಹೆಚ್ಚಿಸುವ ಅಭಿಯಾನ ನಡೆಯುತ್ತಿದೆ. ಕಳೆದ ದಶಕದಲ್ಲಿ, ಸುಮಾರು 100,000 ಹೊಸ ಎಂಬಿಬಿಎಸ್ ಮತ್ತು ಎಂಡಿ ಸೀಟುಗಳನ್ನು ಸೇರಿಸಲಾಗಿದೆ. ಈ ವರ್ಷ, ಮುಂದಿನ 5 ವರ್ಷಗಳಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಇನ್ನೂ 75,000 ಹೊಸ ಸೀಟುಗಳನ್ನು ಸೇರಿಸುತ್ತೇವೆ ಎಂದು ನಾನು ಕೆಂಪುಕೋಟೆಯಿಂದ ಘೋಷಿಸಿದ್ದೇನೆ, ಇದರಿಂದ ಹಳ್ಳಿಗಳಲ್ಲಿ ವೈದ್ಯರ ಪ್ರವೇಶ ಎಷ್ಟು ಹೆಚ್ಚಾಗುತ್ತದೆ ಎಂಬುದನ್ನು ನೀವೇ ಊಹಿಸಿ.
ಸ್ನೇಹಿತರೆ,
ಇಂದು ನಮ್ಮ ದೇಶದಲ್ಲಿ 7,50,000ಕ್ಕೂ ಹೆಚ್ಚು ನೋಂದಾಯಿತ ಆಯುಷ್ ವೈದ್ಯರು ಇದ್ದಾರೆ. ನಾವು ಈ ಸಂಖ್ಯೆಯನ್ನು ಇನ್ನಷ್ಟು ಹೆಚ್ಚಿಸಬೇಕಾಗಿದೆ. ಈ ನಿಟ್ಟಿನಲ್ಲಿ ಕೆಲಸ ನಡೆಯುತ್ತಿದೆ. ಜಗತ್ತು ಈಗ ಭಾರತವನ್ನು ವೈದ್ಯಕೀಯ ಮತ್ತು ಯೋಗಕ್ಷೇಮ ಪ್ರವಾಸೋದ್ಯಮದ ಪ್ರಮುಖ ಕೇಂದ್ರವಾಗಿ ನೋಡುತ್ತಿದೆ. ವಿಶ್ವಾದ್ಯಂತದ ಜನರು ಯೋಗ, ಪಂಚಕರ್ಮ ಮತ್ತು ಧ್ಯಾನಕ್ಕಾಗಿ ಭಾರತಕ್ಕೆ ಬರುತ್ತಾರೆ. ಮುಂದಿನ ದಿನಗಳಲ್ಲಿ ಈ ಸಂಖ್ಯೆ ವೇಗವಾಗಿ ಬೆಳೆಯಲಿದೆ. ನಮ್ಮ ಯುವಕರು ಮತ್ತು ನಮ್ಮ ಆಯುಷ್ ವೈದ್ಯರು ಇದಕ್ಕೆ ಸಿದ್ಧರಾಗಬೇಕು. ಪ್ರಿವೆಂಟಿವ್ ಕಾರ್ಡಿಯಾಲಜಿ, ಆಯುರ್ವೇದಿಕ್ ಮೂಳೆಚಿಕಿತ್ಸೆ, ಆಯುರ್ವೇದ ಕ್ರೀಡಾ ಔಷಧ ಮತ್ತು ಆಯುರ್ವೇದ ಪುನರ್ವಸತಿ ಕೇಂದ್ರಗಳು-ಭಾರತದಲ್ಲಿ ಮಾತ್ರವಲ್ಲದೆ, ವಿವಿಧ ದೇಶಗಳಲ್ಲಿಯೂ ಆಯುಷ್ ವೈದ್ಯರಿಗೆ ಅಪಾರ ಅವಕಾಶಗಳಿರುವ ಹಲವಾರು ಕ್ಷೇತ್ರಗಳಿವೆ. ನಮ್ಮ ಯುವಕರು ಈ ಅವಕಾಶಗಳ ಮೂಲಕ ಮುನ್ನಡೆಯುವುದು ಮಾತ್ರವಲ್ಲದೆ, ಮಾನವತೆಗೆ ಗಮನಾರ್ಹ ರೀತಿಯಲ್ಲಿ ಸೇವೆ ಸಲ್ಲಿಸುತ್ತಾರೆ.
ಸ್ನೇಹಿತರೆ,
21ನೇ ಶತಮಾನದಲ್ಲಿ, ವಿಜ್ಞಾನವು ವೈದ್ಯಕೀಯ ಕ್ಷೇತ್ರದಲ್ಲಿ ಅಭೂತಪೂರ್ವ ಪ್ರಗತಿಯನ್ನು ಮಾಡಿದೆ. ಒಂದು ಕಾಲದಲ್ಲಿ ಗುಣಪಡಿಸಲಾಗದು ಎಂದು ಪರಿಗಣಿಸಲ್ಪಟ್ಟ ರೋಗಗಳಿಗೆ ಈಗ ಚಿಕಿತ್ಸೆಗಳು ಲಭ್ಯವಿವೆ. ಚಿಕಿತ್ಸೆಯೊಂದಿಗೆ ಯೋಗಕ್ಷೇಮವನ್ನು ಜಗತ್ತು ಗೌರವಿಸುತ್ತಿದೆ. ಯೋಗಕ್ಷೇಮ ಮತ್ತು ಆರೋಗ್ಯದ ವಿಷಯಕ್ಕೆ ಬಂದರೆ ಭಾರತಕ್ಕೆ ಸಾವಿರಾರು ವರ್ಷಗಳ ಅನುಭವವಿದೆ. ಆಧುನಿಕ ವಿಜ್ಞಾನದ ಮಸೂರದ ಮೂಲಕ ನಮ್ಮ ಪ್ರಾಚೀನ ಜ್ಞಾನವನ್ನು ಮೌಲ್ಯೀಕರಿಸುವ ಸಮಯ ಇದೀಗ ಬಂದಿದೆ. ಅದಕ್ಕಾಗಿಯೇ ನಾನು ಪುರಾವೆ ಆಧಾರಿತ ಆಯುರ್ವೇದಕ್ಕೆ ನಿರಂತರವಾಗಿ ಒತ್ತು ನೀಡುತ್ತೇನೆ. ಆಯುರ್ವೇದವು ವೈಯಕ್ತಿಕಗೊಳಿಸಿದ ಚಿಕಿತ್ಸಾ ಸಂಪ್ರದಾಯಗಳ ಆಳವಾದ ಜ್ಞಾನ ಹೊಂದಿದೆ. ಆದಾಗ್ಯೂ, ಆಧುನಿಕ ವೈಜ್ಞಾನಿಕ ದೃಷ್ಟಿಕೋನದಿಂದ ಸಂಕೀರ್ಣ ಕೆಲಸವನ್ನು ಇನ್ನೂ ಈ ಪ್ರದೇಶದಲ್ಲಿ ಮಾಡಲಾಗಿಲ್ಲ. ಈ ನಿಟ್ಟಿನಲ್ಲಿ ದೇಶವು ಮಹತ್ವದ ಅಭಿಯಾನ ಪ್ರಾರಂಭಿಸುತ್ತಿದೆ ಎಂದು ಘೋಷಿಸಲು ನನಗೆ ಸಂತೋಷವಾಗಿದೆ. ಈ ಅಭಿಯಾನವೇ ‘ಪ್ರಕೃತಿ ಪರೀಕ್ಷಣ ಅಭಿಯಾನ’(ಪ್ರಕೃತಿ ಪರೀಕ್ಷಾ ಅಭಿಯಾನ)! ಏಕೆಂದರೆ ಆಯುರ್ವೇದದಿಂದ ರೋಗಿಯು ಚೇತರಿಸಿಕೊಂಡಾಗ, ಫಲಿತಾಂಶಗಳು ಗೋಚರಿಸುತ್ತವೆ, ಆದರೆ ಪುರಾವೆಗಳು ಲಭ್ಯವಿಲ್ಲ ಎಂದು ನಾವು ನೋಡುತ್ತೇವೆ. ಜಾಗತಿಕ ಆರೋಗ್ಯಕ್ಕಾಗಿ ನಮ್ಮಲ್ಲಿ ಗಿಡಮೂಲಿಕೆಗಳಿವೆ ಎಂದು ಜಗತ್ತಿಗೆ ತೋರಿಸಲು ನಮಗೆ ಫಲಿತಾಂಶಗಳು ಮತ್ತು ಪುರಾವೆಗಳೆರಡೂ ಬೇಕು. ಈ ಅಭಿಯಾನದ ಅಡಿ, ನಾವು ಆಯುರ್ವೇದದ ತತ್ವಗಳ ಆಧಾರದ ಮೇಲೆ ಪ್ರತಿಯೊಬ್ಬ ವ್ಯಕ್ತಿಗೆ ಆದರ್ಶ ಜೀವನಶೈಲಿ ವಿನ್ಯಾಸಗೊಳಿಸಬಹುದು. ರೋಗಗಳು ಬರುವ ಮೊದಲು ನಾವು ವ್ಯಕ್ತಿಗಳಿಗೆ ಅಪಾಯದ ವಿಶ್ಲೇಷಣೆಯನ್ನು ನಡೆಸಬಹುದು. ಈ ದಿಕ್ಕಿನಲ್ಲಿ ಸಕಾರಾತ್ಮಕ ಪ್ರಗತಿಯು ನಮ್ಮ ಆರೋಗ್ಯ ಕ್ಷೇತ್ರವನ್ನು ಸಂಪೂರ್ಣವಾಗಿ ಮರುವ್ಯಾಖ್ಯಾನಿಸಬಹುದು ಎಂದು ನಾನು ನಂಬುತ್ತೇನೆ. ನಾವು ಆರೋಗ್ಯದ ಬಗ್ಗೆ ಹೊಸ ದೃಷ್ಟಿಕೋನವನ್ನು ಜಗತ್ತಿಗೆ ಒದಗಿಸಬಹುದು.
ಸ್ನೇಹಿತರೆ,
ಆಧುನಿಕ ವೈದ್ಯಕೀಯ ವಿಜ್ಞಾನದ ಯಶಸ್ಸಿಗೆ ಮತ್ತೊಂದು ಮಹತ್ವದ ಕಾರಣವೆಂದರೆ, ಪ್ರತಿಯೊಂದು ತತ್ವದ ಪ್ರಯೋಗಾಲಯದ ಮೌಲ್ಯಮಾಪನ. ನಮ್ಮ ಸಾಂಪ್ರದಾಯಿಕ ಆರೋಗ್ಯ ವ್ಯವಸ್ಥೆಯೂ ಈ ಮಾನದಂಡವನ್ನು ಪೂರೈಸುವ ಅಗತ್ಯವಿದೆ. ಅಶ್ವಗಂಧ, ಅರಿಶಿನ, ಕರಿಮೆಣಸು-ಎಷ್ಟು ಗಿಡಮೂಲಿಕೆಗಳನ್ನು ನಾವು ತಲೆಮಾರುಗಳಿಂದ ವಿವಿಧ ಚಿಕಿತ್ಸೆಗಳಿಗೆ ಬಳಸಿದ್ದೇವೆ ನೋಡಿ. ಈಗ, ಹೆಚ್ಚಿನ ಪ್ರಭಾವದ ಅಧ್ಯಯನಗಳು ತಮ್ಮ ಉಪಯುಕ್ತತೆಯನ್ನು ಸಾಬೀತುಪಡಿಸುತ್ತಿವೆ. ಪರಿಣಾಮವಾಗಿ, ಅಶ್ವಗಂಧದಂತಹ ಗಿಡಮೂಲಿಕೆಗಳ ಬೇಡಿಕೆಯು ಪ್ರಪಂಚದಾದ್ಯಂತ ವೇಗವಾಗಿ ಹೆಚ್ಚುತ್ತಿದೆ. ಈ ದಶಕದ ಅಂತ್ಯದ ವೇಳೆಗೆ, ಅಶ್ವಗಂಧ ಸಾರದ ಮಾರುಕಟ್ಟೆಯು ಸುಮಾರು 2.5 ಶತಕೋಟಿ ಡಾಲರ್‌ಗಳನ್ನು ತಲುಪುವ ನಿರೀಕ್ಷೆಯಿದೆ. ಪ್ರಯೋಗಾಲಯಗಳ ಮೌಲ್ಯೀಕರಣದ ಮೂಲಕ ಈ ಗಿಡಮೂಲಿಕೆಗಳ ಮೌಲ್ಯಮಾಪನವನ್ನು ನಾವು ಎಷ್ಟು ಹೆಚ್ಚಿಸಬಹುದು ಎಂಬುದನ್ನು ನೀವೇ ಊಹಿಸಬಹುದು! ನಾವು ವಿಶಾಲವಾದ ಮಾರುಕಟ್ಟೆಯನ್ನು ರೂಪಿಸಬಹುದು ಅಥವಾ ಸೃಷ್ಟಿಸಬಹುದು!
ಹಾಗಾಗಿ ಸ್ನೇಹಿತರೆ,
ಆಯುಷ್‌ನ ಯಶಸ್ಸಿನ ಪರಿಣಾಮ ಆರೋಗ್ಯ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿಲ್ಲ. ಇದು ಭಾರತದಲ್ಲಿ ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿದೆ ಮತ್ತು ಜಾಗತಿಕ ಯೋಗಕ್ಷೇಮ ಪ್ರಯತ್ನಗಳನ್ನು ಬೆಂಬಲಿಸುತ್ತದೆ. 10 ವರ್ಷಗಳಲ್ಲಿ, ಆಯುಷ್ ದೇಶದಲ್ಲಿ ವೇಗವಾಗಿ ಬೆಳೆಯುತ್ತಿರುವ ಕ್ಷೇತ್ರಗಳಲ್ಲಿ ಒಂದಾಗಿದೆ. 2014ರಲ್ಲಿ, ಆಯುಷ್‌ಗೆ ಸಂಬಂಧಿಸಿದ ಉತ್ಪಾದನಾ ವಲಯವು 3 ಶತಕೋಟಿ ಡಾಲರ್ ಮೌಲ್ಯ ಹೊಂದಿತ್ತು. ಇಂದು, ಇದು ಸರಿಸುಮಾರು 24 ಶತಕೋಟಿ ಡಾಲರ್‌ಗೆ ಬೆಳೆದಿದೆ. ಅಂದರೆ 10 ವರ್ಷಗಳಲ್ಲಿ 8 ಪಟ್ಟು ಬೆಳವಣಿಗೆ. ಅದಕ್ಕಾಗಿಯೇ ಇಂದು ದೇಶದ ಯುವಕರು ಹೊಸ ಆಯುಷ್ ಸ್ಟಾರ್ಟಪ್ ಗಳನ್ನು ಪ್ರಾರಂಭಿಸುತ್ತಿದ್ದಾರೆ. 900ಕ್ಕೂ ಹೆಚ್ಚು ಆಯುಷ್ ಸ್ಟಾರ್ಟಪ್‌ಗಳು ಪ್ರಸ್ತುತ ದೇಶದಲ್ಲಿ ಸಾಂಪ್ರದಾಯಿಕ ಉತ್ಪನ್ನಗಳು, ತಂತ್ರಜ್ಞಾನ-ಚಾಲಿತ ಹೊಸ ಉತ್ಪನ್ನಗಳು ಮತ್ತು ಹೊಸ ಸೇವೆಗಳಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಇಂದು ಭಾರತವು 150 ದೇಶಗಳಿಗೆ ಶತಕೋಟಿ ಡಾಲರ್ ಮೌಲ್ಯದ ಆಯುಷ್ ಉತ್ಪನ್ನಗಳನ್ನು ರಫ್ತು ಮಾಡುತ್ತಿದೆ. ಇದರಿಂದ ನೇರವಾಗಿ ನಮ್ಮ ರೈತರಿಗೆ ಅನುಕೂಲವಾಗುತ್ತಿದೆ. ಒಂದು ಕಾಲದಲ್ಲಿ ಸ್ಥಳೀಯ ಮಾರುಕಟ್ಟೆಗೆ ಸೀಮಿತವಾಗಿದ್ದ ಗಿಡಮೂಲಿಕೆಗಳು ಮತ್ತು ಉತ್ಕೃಷ್ಟ ಆಹಾರಗಳು(ಸಿರಿಧಾನ್ಯಗಳು) ಈಗ ಜಾಗತಿಕ ಮಾರುಕಟ್ಟೆಯನ್ನು ತಲುಪುತ್ತಿವೆ.
ಸ್ನೇಹಿತರೆ,
ಈ ಬದಲಾಗುತ್ತಿರುವ ಭೂದೃಶ್ಯದ ಪ್ರಯೋಜನಗಳನ್ನು ರೈತರಿಗೆ ಗರಿಷ್ಠಗೊಳಿಸಲು, ಸರ್ಕಾರವು ಗಿಡಮೂಲಿಕೆ ಉತ್ಪಾದನೆಯನ್ನು ಉತ್ತೇಜಿಸುತ್ತಿದೆ. ನಮಾಮಿ ಗಂಗೆ ಯೋಜನೆಯಡಿ ಗಂಗಾನದಿಯ ದಡದಲ್ಲಿ ನೈಸರ್ಗಿಕ ಕೃಷಿ ಮತ್ತು ಗಿಡಮೂಲಿಕೆ ಉತ್ಪಾದನೆಗೆ ಉತ್ತೇಜನ ನೀಡಲಾಗುತ್ತಿದೆ.
ಸ್ನೇಹಿತರೆ,
ನಮ್ಮ ರಾಷ್ಟ್ರೀಯ ಪಾತ್ರ ಮತ್ತು ಸಾಮಾಜಿಕ ರಚನೆಯ ಸಾರವನ್ನು ಈ ಪದಗುಚ್ಛದಲ್ಲಿ ಸೆರೆಹಿಡಿಯಲಾಗಿದೆ: "ಸರ್ವೇ ಭವಂತು ಸುಖಿನಃ, ಸರ್ವೇ ಸಂತು ನಿರಾಮಯಃ" ಎಲ್ಲರೂ ಸಂತೋಷವಾಗಿರಲಿ; ಎಲ್ಲರೂ ಅನಾರೋಗ್ಯದಿಂದ ಮುಕ್ತರಾಗಿರಲಿ. ಕಳೆದ 10 ವರ್ಷಗಳಲ್ಲಿ, 'ಸಬ್ಕಾ ಸಾಥ್, ಸಬ್ಕಾ ವಿಕಾಸ್' ಎಂಬ ಮಂತ್ರ ಅನುಸರಿಸುವ ಮೂಲಕ ನಾವು ಈ ಭಾವನೆಯನ್ನು ದೇಶದ ನೀತಿಗಳಿಗೆ ಜೋಡಿಸಿದ್ದೇವೆ. ಮುಂಬರುವ 25 ವರ್ಷಗಳಲ್ಲಿ, ಆರೋಗ್ಯ ಕ್ಷೇತ್ರದಲ್ಲಿ ನಮ್ಮ ಪ್ರಯತ್ನಗಳು 'ವಿಕಸಿತ ಭಾರತ'(ಅಭಿವೃದ್ಧಿ ಹೊಂದಿದ ಭಾರತ)ಕ್ಕೆ ಭದ್ರ ಅಡಿಪಾಯ ಹಾಕುತ್ತವೆ. ಭಗವಾನ್ ಧನ್ವಂತರಿಯ ಆಶೀರ್ವಾದದಿಂದ ನಾವು ಖಂಡಿತವಾಗಿಯೂ ‘ನಿರಾಮ ಭಾರತ’(ಆರೋಗ್ಯಕರ ಭಾರತ)ದ ಜತೆಗೆ ‘ವಿಕಸಿತ ಭಾರತ’ದ ಕನಸನ್ನು ನನಸಾಗಿಸಿಕೊಳ್ಳುತ್ತೇವೆ ಎಂಬ ವಿಶ್ವಾಸ ನನಗಿದೆ.
ಸ್ನೇಹಿತರೆ,
ನಾನು ಫಲಿತಾಂಶಗಳು ಮತ್ತು ಪುರಾವೆಗಳ ಬಗ್ಗೆ ಮಾತನಾಡುವಾಗ, ಆಯುರ್ವೇದಕ್ಕೆ ಸಂಬಂಧಿಸಿದ ನಮ್ಮ ದೇಶದ ವಿಶಾಲವಾದ ಹಸ್ತಪ್ರತಿ ಪರಂಪರೆ ಸಂರಕ್ಷಿಸಲು ನಾವು ಮಹತ್ವದ ಪ್ರಯತ್ನಗಳನ್ನು ಮಾಡಲಿದ್ದೇವೆ. ಅಂತಹ ಹಸ್ತಪ್ರತಿಗಳು ಅನೇಕ ಸ್ಥಳಗಳಲ್ಲಿ ಹರಡಿಕೊಂಡಿವೆ. ಈಗ ದೇಶವು ಈ ಪರಂಪರೆಯನ್ನು ಸಂರಕ್ಷಿಸಲು ಕಾರ್ಯಾಚರಣೆ ಮಾದರಿಯಲ್ಲಿ ಕೆಲಸ ಮಾಡಲು ಸಿದ್ಧವಾಗಿದೆ. ಈ ಎಲ್ಲಾ ಜ್ಞಾನದ ನಿಧಿಯನ್ನು ಕಲ್ಲುಗಳ ಮೇಲೆ ಕೆತ್ತಲಾಗಿದೆ, ತಾಮ್ರದ ಫಲಕಗಳಲ್ಲಿ ಬರೆಯಲಾಗಿದೆ ಅಥವಾ ಕೈಬರಹದ ಹಸ್ತಪ್ರತಿಗಳಲ್ಲಿ ಕಂಡುಬರುತ್ತವೆ. ನಾವು ಇವೆಲ್ಲವನ್ನೂ ಸಂಗ್ರಹಿಸುವ ಗುರಿ ಹೊಂದಿದ್ದೇವೆ. ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಈ ಯುಗದಲ್ಲಿ, ಆ ಜ್ಞಾನದಿಂದ ಹೊಸ ಒಳನೋಟಗಳನ್ನು ಹೊರತೆಗೆಯಲು ತಂತ್ರಜ್ಞಾನಕ್ಕೆ ಅದನ್ನು ಜೋಡಿಸುತ್ತೇವೆ. ಆ ನಿಟ್ಟಿನಲ್ಲಿ ಮಹತ್ವದ ಪ್ರಯತ್ನಕ್ಕೆ ಕೈ ಹಾಕುತ್ತಿದ್ದೇವೆ.
ಸ್ನೇಹಿತರೆ,
ಈ ಸಂದರ್ಭದಲ್ಲಿ, ನಾಡಿನ 70 ವರ್ಷ ಮೇಲ್ಪಟ್ಟ ಎಲ್ಲಾ ಗೌರವಾನ್ವಿತ ಹಿರಿಯರಿಗೆ ಮತ್ತೊಮ್ಮೆ ನನ್ನ ನಮನಗಳನ್ನು ಸಲ್ಲಿಸುತ್ತೇನೆ. ಜತೆಗೆ, ನಾನು ನಿಮ್ಮೆಲ್ಲರನ್ನು ಅಭಿನಂದಿಸುತ್ತೇನೆ.
ತುಂಬು ಧನ್ಯವಾದಗಳು!
*****
(Release ID: 2069530)
Visitor Counter : 4