ಪ್ರಧಾನ ಮಂತ್ರಿಯವರ ಕಛೇರಿ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಸ್ಪೇನ್ ದೇಶದ ಪ್ರಧಾನಿ ಶ್ರೀ ಪೆಡ್ರೊ ಸ್ಯಾಂಚೆಜ್ ಅವರು ಗುಜರಾತ್ ನ ವಡೋದರಾದಲ್ಲಿ ಸಿ-295 ವಿಮಾನಗಳನ್ನು ತಯಾರಿಸಲು ಟಾಟಾ ವಿಮಾನ ತಯಾರಿಕಾ ಸಂಕೀರ್ಣವನ್ನು ಜಂಟಿಯಾಗಿ ಉದ್ಘಾಟಿಸಿದರು
ವಡೋದರದಲ್ಲಿರುವ ಸಿ-295 ವಿಮಾನ ತಯಾರಿಕಾ ಸಂಕೀರ್ಣವು ಜಾಗತಿಕ ವಿಮಾನ ತಯಾರಿಕೆಯಲ್ಲಿ ವಿಶ್ವಾಸಾರ್ಹ ಪಾಲುದಾರನಾಗಿ ಭಾರತದ ಸ್ಥಾನವನ್ನು ಬಲಪಡಿಸುತ್ತದೆ: ಪ್ರಧಾನಮಂತ್ರಿ
ಮೇಕ್ ಇನ್ ಇಂಡಿಯಾ, ಮೇಕ್ ಫಾರ್ ದಿ ವರ್ಲ್ಡ್: ಪ್ರಧಾನಮಂತ್ರಿ
ಸಿ-295 ವಿಮಾನ ಕಾರ್ಖಾನೆಯು ಹೊಸ ಭಾರತದ ಹೊಸ ಕಾರ್ಯ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ: ಪ್ರಧಾನಮಂತ್ರಿ
ಭಾರತದ ರಕ್ಷಣಾ ಉತ್ಪಾದನಾ ಪರಿಸರ ವ್ಯವಸ್ಥೆಯು ಹೊಸ ಎತ್ತರವನ್ನು ತಲುಪುತ್ತಿದೆ: ಪ್ರಧಾನಮಂತ್ರಿ
Posted On:
28 OCT 2024 11:37AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಸ್ಪೇನ್ ಪ್ರಧಾನಮಂತ್ರಿ ಶ್ರೀ ಪೆಡ್ರೊ ಸ್ಯಾಂಚೆಜ್ ಅವರು ಇಂದು ಗುಜರಾತ್ ನ ವಡೋದರದಲ್ಲಿರುವ ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್ (ಟಿಎಎಸ್ಎಲ್) ಕ್ಯಾಂಪಸ್ ನಲ್ಲಿ ಸಿ-295 ವಿಮಾನಗಳನ್ನು ತಯಾರಿಸುವ ಟಾಟಾ ವಿಮಾನ ತಯಾರಿಕಾ ಸಂಕೀರ್ಣ (ಟಾಟಾ ಏರ್ ಕ್ರಾಫ್ಟ್ ಕಾಂಪ್ಲೆಕ್ಸ್) ವನ್ನು ಜಂಟಿಯಾಗಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಪ್ರದರ್ಶಿಸಲಾದ ವಸ್ತುಪ್ರದರ್ಶನವನ್ನು ಇಬ್ಬರು ಪ್ರಧಾನಿಗಳೂ ವೀಕ್ಷಿಸಿದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಇದು ಸ್ಪೇನ್ ನ ಪ್ರಧಾನಿ, ಶ್ರೀ ಪೆಡ್ರೊ ಸ್ಯಾಂಚೆಜ್ ಅವರ ಮೊದಲ ಭಾರತ ಭೇಟಿಯಾಗಿದೆ ಮತ್ತು ಉಭಯ ದೇಶಗಳ ನಡುವಿನ ಪಾಲುದಾರಿಕೆ ಇಂದು ಹೊಸ ದಿಕ್ಕನ್ನು ಕಂಡುಕೊಳ್ಳುತ್ತಿದೆ ಎಂದು ಹೇಳಿದರು. ಸಿ-295 ವಿಮಾನಗಳ ತಯಾರಿಕೆಗಾಗಿ ಟಾಟಾ ಏರ್ಕ್ರಾಫ್ಟ್ ಕಾಂಪ್ಲೆಕ್ಸ್ ನ ಉದ್ಘಾಟನೆಯ ಬಗ್ಗೆ ಹೇಳಿದರ ಪ್ರಧಾನಮಂತ್ರಿಯವರು, ಇದು ಉಭಯ ರಾಷ್ಟ್ರಗಳ ನಡುವಿನ ಸಂಬಂಧವನ್ನು ಬಲಪಡಿಸುವುದಲ್ಲದೆ, ‘ಮೇಕ್ ಇನ್ ಇಂಡಿಯಾ, ಮೇಕ್ ಫಾರ್ ದಿ ವರ್ಲ್ಡ್’ (ಭಾರತದಲ್ಲಿ ತಯಾರಿಸುವುದು, ಜಗತ್ತಿಗಾಗಿ ಉತ್ಪಾದಿಸುವುದು) ಎಂಬ ಧ್ಯೇಯಕ್ಕೆ ವೇಗವನ್ನು ನೀಡುತ್ತದೆ ಎಂದು ಹೇಳಿದರು. ಶ್ರೀ ಮೋದಿಯವರು ಈ ಸಂದರ್ಭದಲ್ಲಿ ಏರ್ ಬಸ್ ಮತ್ತು ಟಾಟಾದ ಸಂಪೂರ್ಣ ತಂಡಕ್ಕೆ ಶುಭ ಹಾರೈಸಿದರು. ಪ್ರಧಾನಮಂತ್ರಿಯವರು ದಿವಂಗತ ಶ್ರೀ ರತನ್ ಟಾಟಾ ಜೀ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
ಸಿ295 ವಿಮಾನದ ಕಾರ್ಖಾನೆಯು ನವ ಭಾರತದ ಹೊಸ ಕಾರ್ಯ ಸಂಸ್ಕೃತಿಯ ಪ್ರತಿಬಿಂಬವಾಗಿದೆ ಎಂದು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ದೇಶದ ಯಾವುದೇ ಯೋಜನೆಯ ಆಲೋಚನೆಯಿಂದ ಹಿಡಿದು ಅನುಷ್ಠಾನದವರೆಗಿನ ಭಾರತದ ವೇಗವನ್ನು ಇಲ್ಲಿ ವೀಕ್ಷಿಸಬಹುದು ಎಂದು ಹೇಳಿದರು. ಅಕ್ಟೋಬರ್ 2022ರಲ್ಲಿ ಮಾಡಿದ ಕಾರ್ಖಾನೆಯ ಶಂಕುಸ್ಥಾಪನೆಯನ್ನು ನೆನಪಿಸಿಕೊಂಡ ಪ್ರಧಾನಮಂತ್ರಿಯವರು, ಈಗ ಸಿ 295 ವಿಮಾನಗಳ ಉತ್ಪಾದನೆಗೆ ಸೌಲಭ್ಯ ಸಿದ್ಧವಾಗಿದೆ ಎಂದು ಹೇಳಿದರು. ಯೋಜನೆಗಳ ಯೋಜನೆ ಮತ್ತು ಕಾರ್ಯಗತಗೊಳಿಸುವಿಕೆಯಲ್ಲಿನ ಅತಿಯಾದ ವಿಳಂಬವನ್ನು ನಿವಾರಿಸಲು ಒತ್ತು ನೀಡಿದ ಪ್ರಧಾನಮಂತ್ರಿಯವರು, ಗುಜರಾತ್ನ ಮುಖ್ಯಮಂತ್ರಿಯಾಗಿ ವಡೋದರಾದಲ್ಲಿ ಬೊಂಬಾರ್ಡಿಯರ್ ರೈಲು ಕೋಚ್ ಉತ್ಪಾದನಾ ಸೌಲಭ್ಯವನ್ನು ಸ್ಥಾಪಿಸಿರುವುದನ್ನು ನೆನಪಿಸಿಕೊಂಡರು ಮತ್ತು ಕಾರ್ಖಾನೆಯು ದಾಖಲೆ ಸಮಯದಲ್ಲಿ ಉತ್ಪಾದನೆಗೆ ಸಿದ್ಧವಾಗಿತ್ತು ಎಂದು ಹೇಳಿದರು. "ಈ ಕಾರ್ಖಾನೆಯಲ್ಲಿ ತಯಾರಿಸಿದ ಮೆಟ್ರೋ ಕೋಚ್ಗಳನ್ನು ಇಂದು ಇತರ ದೇಶಗಳಿಗೆ ರಫ್ತು ಮಾಡಲಾಗುತ್ತಿದೆ" ಎಂದು ಅವರು ಹೇಳಿದರು. ಇಂದು ಉದ್ಘಾಟಿಸಿದ ಘಟಕದಲ್ಲಿ ತಯಾರಾದ ವಿಮಾನಗಳು ಕೂಡ ರಫ್ತಾಗಲಿವೆ ಎಂದು ಶ್ರೀ ಮೋದಿ ವಿಶ್ವಾಸ ವ್ಯಕ್ತಪಡಿಸಿದರು.
ಖ್ಯಾತ ಸ್ಪ್ಯಾನಿಷ್ ಕವಿ ಆಂಟೋನಿಯೊ ಮಚಾಡೊ ಅವರನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ನಾವು ಗುರಿಯತ್ತ ಹೆಜ್ಜೆ ಹಾಕಲು ಪ್ರಾರಂಭಿಸಿದಾಗ, ಗುರಿಯತ್ತ ಮಾರ್ಗವು ಸ್ವಯಂಚಾಲಿತವಾಗಿ ಸೃಷ್ಟಿಯಾಗುತ್ತದೆ ಎಂದು ಹೇಳಿದರು. ಭಾರತದ ರಕ್ಷಣಾ ಉತ್ಪಾದನಾ ಪರಿಸರ ವ್ಯವಸ್ಥೆಯು ಇಂದು ಹೊಸ ಶಿಖರಗಳನ್ನು ಏರುತ್ತಿರುವುದಾಗಿ ಹೇಳಿದ ಶ್ರೀ ಮೋದಿಯವರು, 10 ವರ್ಷಗಳ ಹಿಂದೆ ಬಲವಾದ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ಇಂದು ಇಲ್ಲಿಗೆ ತಲುಪುವುದು ಅಸಾಧ್ಯವಾಗಿತ್ತು ಎಂದು ಹೇಳಿದರು. ಒಂದು ದಶಕದ ಹಿಂದೆ, ರಕ್ಷಣಾ ಉತ್ಪಾದನೆಯ ಆದ್ಯತೆ ಹಾಗು ಸ್ವರೂಪ ಕೇವಲ ಆಮದು ಮಾಡುವುದಾಗಿತ್ತು ಮತ್ತು ಭಾರತದಲ್ಲಿ ರಕ್ಷಣಾ ಉತ್ಪಾದನೆಯು ಇಷ್ಟು ದೊಡ್ಡ ಪ್ರಮಾಣದಲ್ಲಿ ನಡೆಯಬಹುದೆಂದು ಯಾರೂ ಊಹಿಸಿರಲಿಲ್ಲ ಎಂದು ಅವರು ಹೇಳಿದರು. ಸರ್ಕಾರವು ಹೊಸ ಹಾದಿಯಲ್ಲಿ ನಡೆಯಲು ನಿರ್ಧರಿಸಿದೆ, ಭಾರತಕ್ಕೆ ಹೊಸ ಗುರಿಗಳನ್ನು ನಿಗದಿಪಡಿಸಿದೆ, ಅದರ ಫಲಿತಾಂಶಗಳು ಇಂದು ಸ್ಪಷ್ಟವಾಗಿವೆ ಎಂದು ಪ್ರಧಾನಮಂತ್ರಿಯವರು ಹೇಳಿದರು.
ಭಾರತದ ರಕ್ಷಣಾ ಕ್ಷೇತ್ರದ ಪರಿವರ್ತನೆಯು ಸರಿಯಾದ ಯೋಜನೆ ಮತ್ತು ಸಹಭಾಗಿತ್ವವು ಹೇಗೆ ಸಾಧ್ಯತೆಗಳನ್ನು ಸಮೃದ್ಧಿಯನ್ನಾಗಿ ಮಾಡಬಹುದು ಎನ್ನುವುದನ್ನು ತೋರಿಸುತ್ತದೆ ಎಂದು ಪ್ರಧಾನಮಂತ್ರಿಯವರು ಹೇಳಿದರು. ಕಾರ್ಯತಂತ್ರದ ನಿರ್ಧಾರಗಳು ಕಳೆದ ದಶಕದಲ್ಲಿ ಭಾರತದಲ್ಲಿ ಚೈತನ್ಯದಾಯಕ ರಕ್ಷಣಾ ಉದ್ಯಮದ ಬೆಳವಣಿಗೆಯನ್ನು ಉತ್ತೇಜಿಸಿದೆ ಎಂದು ಅವರು ಒತ್ತಿ ಹೇಳಿದರು. "ನಾವು ರಕ್ಷಣಾ ಉತ್ಪಾದನೆಯಲ್ಲಿ ಖಾಸಗಿ ವಲಯದ ಸಹಭಾಗಿತ್ವವನ್ನು ವಿಸ್ತರಿಸಿದ್ದೇವೆ, ಸಾರ್ವಜನಿಕ ವಲಯದ ಘಟಕಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡಿದ್ದೇವೆ, ಶಸ್ತ್ರಾಸ್ತ್ರ ಕಾರ್ಖಾನೆಗಳನ್ನು ಏಳು ಪ್ರಮುಖ ಕಂಪನಿಗಳಾಗಿ ಪುನರ್ರಚಿಸಿದ್ದೇವೆ ಮತ್ತು ಡಿಆರ್ ಡಿಒ ಮತ್ತು ಎಚ್ ಎ ಎಲ್ ಸಶಕ್ತಗೊಳಿಸಿದ್ದೇವೆ " ಎಂದು ಶ್ರೀ ಮೋದಿ ಹೇಳಿದರು. ಉತ್ತರ ಪ್ರದೇಶ ಮತ್ತು ತಮಿಳುನಾಡಿನಲ್ಲಿ ರಕ್ಷಣಾ ಕಾರಿಡಾರ್ಗಳನ್ನು ಸ್ಥಾಪಿಸುವುದು ಈ ವಲಯಕ್ಕೆ ಹೊಸ ಶಕ್ತಿಯನ್ನು ತುಂಬಿದೆ ಎಂದು ಅವರು ಹೇಳಿದರು. ಐಡೆಕ್ಸ್ (ಡಿಫೆನ್ಸ್ ಎಕ್ಸಲೆನ್ಸ್ ಗಾಗಿ ನಾವೀನ್ಯತೆ) ಯೋಜನೆಯ ಬಗ್ಗೆ ಹೇಳಿದ ಪ್ರಧಾನಮಂತ್ರಿಯವರು, ಇದು ಕಳೆದ ಐದರಿಂದ ಆರು ವರ್ಷಗಳಲ್ಲಿ ಸುಮಾರು 1,000 ರಕ್ಷಣಾ ನವೋದ್ಯಮಗಳ ಬೆಳವಣಿಗೆಗೆ ಚಾಲನೆ ನೀಡಿದೆ ಎಂದು ಹೇಳಿದರು. ಕಳೆದ ದಶಕದಲ್ಲಿ ಭಾರತದ ರಕ್ಷಣಾ ರಫ್ತು 30 ಪಟ್ಟು ಹೆಚ್ಚಾಗಿದೆ ಎಂದು ಅವರು ಮಾಹಿತಿ ನೀಡಿದರು, ದೇಶವು ಈಗ 100 ಕ್ಕೂ ಹೆಚ್ಚು ದೇಶಗಳಿಗೆ ಉಪಕರಣಗಳನ್ನು ರಫ್ತು ಮಾಡುತ್ತಿದೆ ಎಂದು ಹೇಳಿದರು.
ಪ್ರಧಾನಮಂತ್ರಿಯವರು ಕೌಶಲ್ಯ ಮತ್ತು ಉದ್ಯೋಗ ಸೃಷ್ಟಿಗೆ ಒತ್ತು ನೀಡಿದರು ಮತ್ತು ಏರ್ಬಸ್-ಟಾಟಾ ಕಾರ್ಖಾನೆಯಂತಹ ಯೋಜನೆಗಳು ಸಾವಿರಾರು ಉದ್ಯೋಗಗಳನ್ನು ಸೃಷ್ಟಿಸುತ್ತವೆ ಎಂದು ಹೇಳಿದರು. ಕಾರ್ಖಾನೆಯು 18,000 ವಿಮಾನದ ಬಿಡಿಭಾಗಗಳ ಸ್ಥಳೀಯ ಉತ್ಪಾದನೆಯನ್ನು ಬೆಂಬಲಿಸುತ್ತದೆ, ಇದು ಭಾರತದಾದ್ಯಂತ ಎಮ್ಎಸ್ಎಮ್ಇ ಗಳಿಗೆ ಅಪಾರ ಅವಕಾಶಗಳನ್ನು ಒದಗಿಸುತ್ತದೆ ಎಂದು ಅವರು ಹೇಳಿದರು. ಭಾರತವು ಇಂದಿಗೂ ವಿಶ್ವದ ಪ್ರಮುಖ ವಿಮಾನ ಕಂಪನಿಗಳಿಗೆ ಬಿಡಿಭಾಗಗಳ ಅತಿದೊಡ್ಡ ಪೂರೈಕೆದಾರರಲ್ಲಿ ಒಂದಾಗಿದೆ ಎಂದು ತಿಳಿಸಿದ ಶ್ರೀ ಮೋದಿ, ಹೊಸ ವಿಮಾನ ಕಾರ್ಖಾನೆಯು ಭಾರತದಲ್ಲಿ ಹೊಸ ಕೌಶಲ್ಯ ಮತ್ತು ಹೊಸ ಕೈಗಾರಿಕೆಗಳಿಗೆ ದೊಡ್ಡ ಉತ್ತೇಜನವನ್ನು ನೀಡುತ್ತದೆ ಎಂದು ಹೇಳಿದರು.
ಸಾರಿಗೆ ವಿಮಾನಗಳ ತಯಾರಿಕೆಯನ್ನು ಮೀರಿ ಇಂದಿನ ಕಾರ್ಯಕ್ರಮವನ್ನು ನೋಡುತ್ತಿದ್ದೇನೆ ಎಂದು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು. ಕಳೆದ ದಶಕದಲ್ಲಿ ಭಾರತದ ವಾಯುಯಾನ ಕ್ಷೇತ್ರದ ಅಭೂತಪೂರ್ವ ಬೆಳವಣಿಗೆ ಮತ್ತು ರೂಪಾಂತರವನ್ನು ಎತ್ತಿ ಹಿಡಿದ ಶ್ರೀ ಮೋದಿಯವರು, ಭಾರತವು ದೇಶದ ನೂರಾರು ಸಣ್ಣ ನಗರಗಳಿಗೆ ವಾಯು ಸಂಪರ್ಕವನ್ನು ಒದಗಿಸುತ್ತಿದೆ ಮತ್ತು ಅದೇ ಸಮಯದಲ್ಲಿ ಭಾರತವನ್ನು ವಾಯುಯಾನ ಮತ್ತು ಎಂ.ಆರ್.ಒ. ಹಬ್ ಆಗಿ ಪರಿವರ್ತಿಸಲು ಕೆಲಸ ಮಾಡುತ್ತಿದೆ ಎಂದು ಹೇಳಿದರು. ಈ ಪರಿಸರ ವ್ಯವಸ್ಥೆಯು ಭವಿಷ್ಯದಲ್ಲಿ ಮೇಡ್ ಇನ್ ಇಂಡಿಯಾ ನಾಗರೀಕ ವಿಮಾನಗಳ ತಯಾರಿಕೆಗೆ ದಾರಿ ಮಾಡಿಕೊಡಲಿದೆ ಎಂದು ಅವರು ಹೇಳಿದರು. ವಿವಿಧ ಭಾರತೀಯ ವಿಮಾನಯಾನ ಸಂಸ್ಥೆಗಳು 1200 ಹೊಸ ವಿಮಾನಗಳನ್ನು ಆರ್ಡರ್ ಮಾಡಿರುವುದನ್ನು ಗಮನಿಸಿದ ಶ್ರೀ ಮೋದಿಯವರು, ಇದರರ್ಥ ಹೊಸದಾಗಿ ಉದ್ಘಾಟನೆಗೊಂಡ ಕಾರ್ಖಾನೆಯು ಭವಿಷ್ಯದಲ್ಲಿ ಭಾರತ ಮತ್ತು ಪ್ರಪಂಚದ ಅಗತ್ಯಗಳನ್ನು ಪೂರೈಸಲು ವಿನ್ಯಾಸಗೊಳಿಸುವುದರಿಂದ ಹಿಡಿದು ನಾಗರಿಕ ವಿಮಾನಗಳನ್ನು ತಯಾರಿಸುವವರೆಗೆ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದರು.
ವಡೋದರಾ ನಗರವು ಅತಿ ಸಣ್ಣ, ಸಣ್ಣ, ಮತ್ತು ಮಧ್ಯಮ ಉದ್ಯಮಗಳ ಭದ್ರಕೋಟೆಯಾಗಿತ್ತು ಎಂದು ಹೇಳಿದ ಶ್ರೀ ಮೋದಿಯವರು, ಭಾರತದ ಈ ಪ್ರಯತ್ನಗಳಲ್ಲಿ ನಗರವು ವೇಗವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದರು. ನಗರವು ಗತಿಶಕ್ತಿ ವಿಶ್ವವಿದ್ಯಾನಿಲಯವನ್ನು ಸಹ ಹೊಂದಿದ್ದು, ಇದು ಭಾರತದ ವಿವಿಧ ಕ್ಷೇತ್ರಗಳಿಗೆ ವೃತ್ತಿಪರರನ್ನು ಸಿದ್ಧಪಡಿಸುತ್ತಿದೆ ಎಂದು ಅವರು ಹೇಳಿದರು. ವಡೋದರಾದಲ್ಲಿ ಔಷಧಿ ವಲಯ, ಇಂಜಿನಿಯರಿಂಗ್ ಮತ್ತು ಹೆವಿ ಮೆಷಿನರಿ, ಕೆಮಿಕಲ್ಸ್ ಮತ್ತು ಪೆಟ್ರೋಕೆಮಿಕಲ್ಸ್, ಇಂಧನ ಸಲಕರಣೆಗಳಂತಹ ಹಲವು ಕ್ಷೇತ್ರಗಳಿಗೆ ಸಂಬಂಧಿಸಿದ ಹಲವು ಕಂಪನಿಗಳಿವೆ ಎಂದು ಪ್ರಧಾನಮಂತ್ರಿಯವರು ತಿಳಿಸಿದರು. ಈಗ ಈ ಸಂಪೂರ್ಣ ಪ್ರದೇಶವು ಭಾರತದಲ್ಲಿ ವಾಯುಯಾನ ತಯಾರಿಕೆಯ ಪ್ರಮುಖ ಕೇಂದ್ರವಾಗಲಿದೆ ಎಂದು ಅವರು ಹೇಳಿದರು. ಶ್ರೀ ಮೋದಿಯವರು ಗುಜರಾತ್ ಸರ್ಕಾರ ಮತ್ತು ಅದರ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಮತ್ತು ಅವರ ಇಡೀ ತಂಡವನ್ನು ಅವರ ಆಧುನಿಕ ಕೈಗಾರಿಕಾ ನೀತಿಗಳು ಮತ್ತು ನಿರ್ಧಾರಗಳಿಗಾಗಿ ಅಭಿನಂದಿಸಿದರು.
ವಡೋದರಾ ಭಾರತದ ಪ್ರಮುಖ ಸಾಂಸ್ಕೃತಿಕ ನಗರವೂ ಆಗಿರುವುದರ ಬಗ್ಗೆ ಹೇಳಿದ ಶ್ರೀ ಮೋದಿಯವರು, ಸ್ಪೇನ್ ನ ಎಲ್ಲಾ ಸ್ನೇಹಿತರನ್ನು ಸ್ವಾಗತಿಸಲು ನನಗೆ ಸಂತೋಷವಾಗುತ್ತಿದೆ ಎಂದು ಹೇಳಿದರು. "ಭಾರತ ಮತ್ತು ಸ್ಪೇನ್ ನಡುವಿನ ಸಾಂಸ್ಕೃತಿಕ ಸಂಪರ್ಕವು ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿದೆ" ಎಂದು ಪ್ರಧಾನಮಂತ್ರಿಯವರು ಹೇಳಿದರು. ಫಾದರ್ ಕಾರ್ಲೋಸ್ ವ್ಯಾಲೆ ಅವರು ಸ್ಪೇನ್ನಿಂದ ಬಂದು ಗುಜರಾತ್ನಲ್ಲಿ ನೆಲೆಸಿದ್ದಾರೆ ಮತ್ತು ಅವರ ಜೀವನದ ಐವತ್ತು ವರ್ಷಗಳನ್ನು ಕಳೆದಿದ್ದಾರೆ ಎಂದು ಅವರು ಹೇಳಿದರು. ಫಾದರ್ ವಲ್ಲೆ ಅವರು ತಮ್ಮ ಆಲೋಚನೆಗಳು ಮತ್ತು ಬರಹಗಳಿಂದ ಸಂಸ್ಕೃತಿಯನ್ನು ಶ್ರೀಮಂತಗೊಳಿಸಿದ್ದಾರೆ ಎಂದು ಅವರು ಹೇಳಿದರು. ಫಾದರ್ ವಾಲೆ ಅವರನ್ನು ಭೇಟಿಯಾಗುವ ಸೌಭಾಗ್ಯ ನನಗೂ ಸಿಕ್ಕಿದೆ ಮತ್ತು ಅವರ ಮಹತ್ತರ ಕೊಡುಗೆಗಾಗಿ ಭಾರತ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ ಎಂದು ಶ್ರೀ ಮೋದಿ ಹೇಳಿದರು.
ಸ್ಪೇನ್ ದೇಶದಲ್ಲಿ ಯೋಗವು ಹೆಚ್ಚು ಜನಪ್ರಿಯವಾಗಿದೆ ಮತ್ತು ಸ್ಪ್ಯಾನಿಷ್ ಫುಟ್ ಬಾಲ್ ಭಾರತದಲ್ಲಿಯೂ ಇಷ್ಟಪಡುತ್ತಾರೆ ಎಂದು ಶ್ರೀ ಮೋದಿ ಹೇಳಿದರು. ನಿನ್ನೆ ನಡೆದ ರಿಯಲ್ ಮ್ಯಾಡ್ರಿಡ್ ಮತ್ತು ಬಾರ್ಸಿಲೋನಾ ಕ್ಲಬ್ ಗಳ ನಡುವಿನ ಫುಟ್ಬಾಲ್ ಪಂದ್ಯದ ಬಗ್ಗೆ ಮಾತನಾಡಿದ ಶ್ರೀ ಮೋದಿ, ಬಾರ್ಸಿಲೋನಾದ ಅಮೋಘ ಗೆಲುವು ಭಾರತದಲ್ಲೂ ಚರ್ಚೆಯ ವಿಷಯವಾಗಿದೆ ಮತ್ತು ಎರಡೂ ಕ್ಲಬ್ಗಳ ಅಭಿಮಾನಿಗಳ ಉತ್ಸಾಹವು ಸ್ಪೇನ್ನಲ್ಲಿರುವಂತೆಯೇ ಭಾರತದಲ್ಲೂ ಇದೆ ಎಂದು ಹೇಳಿದರು. . ಭಾರತ ಮತ್ತು ಸ್ಪೇನ್ ನ ವಿವಿಧ ಸಹಭಾಗಿತ್ವದ ಮೇಲೆ ಬೆಳಕು ಚೆಲ್ಲಿದ ಪ್ರಧಾನಮಂತ್ರಿಯವರು, "ಅದು ಆಹಾರ, ಚಲನಚಿತ್ರಗಳು ಅಥವಾ ಫುಟ್ಬಾಲ್ ಆಗಿರಲಿ, ನಮ್ಮ ಜನರ ನಡುವಿನ ಬಲವಾದ ಸಂಪರ್ಕವು ಯಾವಾಗಲೂ ನಮ್ಮ ಸಂಬಂಧಗಳನ್ನು ಬಲಪಡಿಸಿದೆ" ಎಂದು ಹೇಳಿದರು. ಭಾರತ ಮತ್ತು ಸ್ಪೇನ್ 2026 ಅನ್ನು ಭಾರತ - ಸ್ಪೇನ್ ಸಂಸ್ಕೃತಿ, ಪ್ರವಾಸೋದ್ಯಮ ಮತ್ತು ಕೃತಕಬುದ್ಧಿಮತ್ತೆಯ ವರ್ಷವನ್ನಾಗಿ ಆಚರಿಸಲು ನಿರ್ಧರಿಸಿವೆ ಎಂದು ಶ್ರೀ ಮೋದಿ ಹರ್ಷ ವ್ಯಕ್ತಪಡಿಸಿದರು.
ಭಾಷಣವನ್ನು ಮುಕ್ತಾಯಗೊಳಿಸುತ್ತಾ ಪ್ರಧಾನಮಂತ್ರಿಯವರು ಇಂದಿನ ಕಾರ್ಯಕ್ರಮವು ಭಾರತ ಮತ್ತು ಸ್ಪೇನ್ ನಡುವಿನ ಅನೇಕ ಹೊಸ ಜಂಟಿ ಸಹಯೋಗದ ಯೋಜನೆಗಳಿಗೆ ಸ್ಫೂರ್ತಿ ನೀಡುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಅವರು ಸ್ಪ್ಯಾನಿಷ್ ಉದ್ಯಮ ಮತ್ತು ನವೋದ್ಯಮಿಗಳಿಗೆ ಆಹ್ವಾನವನ್ನು ನೀಡಿದರು ಮತ್ತು ಭಾರತಕ್ಕೆ ಬಂದು ದೇಶದ ಅಭಿವೃದ್ಧಿ ಪಯಣದಲ್ಲಿ ಪಾಲುದಾರರಾಗಲು ಅವರನ್ನು ಪ್ರೋತ್ಸಾಹಿಸಿದರು.
ಗುಜರಾತಿನ ಗವರ್ನರ್ ಶ್ರೀ ಆಚಾರ್ಯ ದೇವವ್ರತ್, ಗುಜರಾತ್ ಮುಖ್ಯಮಂತ್ರಿ ಶ್ರೀ ಭೂಪೇಂದ್ರ ಪಟೇಲ್, ಕೇಂದ್ರ ರಕ್ಷಣಾ ಸಚಿವ ಶ್ರೀ ರಾಜನಾಥ್ ಸಿಂಗ್ ಮತ್ತು ಕೇಂದ್ರ ವಿದೇಶಾಂಗ ಸಚಿವ ಶ್ರೀ ಎಸ್ ಜೈಶಕರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಹಿನ್ನೆಲೆ
ಸಿ-295 ಕಾರ್ಯಕ್ರಮದ ಅಡಿಯಲ್ಲಿ, ಒಟ್ಟು 56 ವಿಮಾನಗಳನ್ನು ಸರಬರಾಜು ಮಾಡಲಾಗುವುದು ಅದರಲ್ಲಿ 16 ವಿಮಾನಗಳನ್ನು ಸ್ಪೇನ್ ನ ಏರ್ಬಸ್ ನಿಂದ ನೇರವಾಗಿ ತಲುಪಿಸಲಾಗುತ್ತಿದೆ ಮತ್ತು ಉಳಿದ 40 ಅನ್ನು ಭಾರತದಲ್ಲಿ ತಯಾರಿಸಲಾಗುವುದು.
ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್ ಭಾರತದಲ್ಲಿ ಈ 40 ವಿಮಾನಗಳನ್ನು ತಯಾರಿಸುವ ಜವಾಬ್ದಾರಿಯನ್ನು ಹೊಂದಿದೆ. ಈ ಸೌಲಭ್ಯವು ಭಾರತದಲ್ಲಿ ಮಿಲಿಟರಿ ವಿಮಾನಗಳಿಗಾಗಿ ಮೊದಲ ಖಾಸಗಿ ವಲಯದ ಅಂತಿಮ ಅಸೆಂಬ್ಲಿ ಲೈನ್ (ಎಫ್ ಎ ಎಲ್ ) ಆಗಿದೆ. ಇದು ತಯಾರಿಕೆಯಿಂದ ಜೋಡಣೆ, ಪರೀಕ್ಷೆ ಮತ್ತು ಅರ್ಹತೆ, ವಿಮಾನದ ಸಂಪೂರ್ಣ ಜೀವನಚಕ್ರದ ವಿತರಣೆ ಮತ್ತು ನಿರ್ವಹಣೆಗೆ ಸಂಪೂರ್ಣ ಪರಿಸರ ವ್ಯವಸ್ಥೆಯ ಸಂಪೂರ್ಣ ಅಭಿವೃದ್ಧಿಯನ್ನು ಒಳಗೊಂಡಿರುತ್ತದೆ.
ಟಾಟಾಗಳ ಹೊರತಾಗಿ, ಪ್ರಮುಖ ರಕ್ಷಣಾ ಸಾರ್ವಜನಿಕ ವಲಯದ ಘಟಕಗಳಾದ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಮತ್ತು ಭಾರತ್ ಡೈನಾಮಿಕ್ಸ್ ಲಿಮಿಟೆಡ್, ಹಾಗೆಯೇ ಖಾಸಗಿ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳು ಈ ಕಾರ್ಯಕ್ರಮಕ್ಕೆ ಕೊಡುಗೆ ನೀಡುತ್ತವೆ. ಅಕ್ಟೋಬರ್ 2022 ರಲ್ಲಿ, ಪ್ರಧಾನಮಂತ್ರಿಯವರು ವಡೋದರಾ ಅಂತಿಮ ಅಸೆಂಬ್ಲಿ ಲೈನ್ (ಎಫ್ಎಎಲ್) ಗೆ ಅಡಿಪಾಯ ಹಾಕಿದ್ದರು.
*****
(Release ID: 2069032)
Visitor Counter : 31
Read this release in:
English
,
Urdu
,
Hindi
,
Bengali
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam