ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯ
ಮುಂಬೈನಲ್ಲಿ ಭಾರತೀಯ ಕೌಶಲ್ಯಗಳ ಸಂಸ್ಥೆ(ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸ್ಕಿಲ್ಸ್-ಐಐಎಸ್)ಗೆ ಉದ್ಘಾಟನೆ ನೆರವೇರಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ
ಸಂಸ್ಥೆಯು ವಾರ್ಷಿಕವಾಗಿ 5,000 ವಿದ್ಯಾರ್ಥಿಗಳಿಗೆ “ಉದ್ಯಮ 4.0 ಕೌಶಲ್ಯ”ಗಳಲ್ಲಿ ತರಬೇತಿ ನೀಡುತ್ತದೆ
Posted On:
09 OCT 2024 7:13PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ವೀಡಿಯೊ ಕಾನ್ಫರೆನ್ಸ್ ಮೂಲಕ ಮಹಾರಾಷ್ಟ್ರದಲ್ಲಿ 7,600 ಕೋಟಿ ರೂ. ಮೊತ್ತದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ರಾಷ್ಟ್ರೀಯ ಮತ್ತು ಜಾಗತಿಕ ಮಟ್ಟದಲ್ಲಿ ಭಾರತೀಯ ಯುವ ಸಮುದಾಯಕ್ಕೆ ಉದ್ಯೋಗಾವಕಾಶ ಹೆಚ್ಚಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿ, ಪ್ರಧಾನ ಮಂತ್ರಿ ಅವರು ಮುಂಬೈನಲ್ಲಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸ್ಕಿಲ್ಸ್(ಐಐಎಸ್) ಸಂಸ್ಥೆಯನ್ನು ಉದ್ಘಾಟಿಸಿದರು, ಇದು ಉದ್ಯಮ 4.0ಕ್ಕಾಗಿ ಉದ್ಯಮ-ಸಿದ್ಧ ಕಾರ್ಯಪಡೆ ಬೆಳೆಸುವ ಗುರಿ ಹೊಂದಿದೆ. ಈ ಸಂಸ್ಥೆಯು ಫ್ಯಾಕ್ಟರಿ ಆಟೊಮೇಷನ್, ಡಿಜಿಟಲ್ ಮ್ಯಾನುಫ್ಯಾಕ್ಚರಿಂಗ್, ಮೆಕಾಟ್ರಾನಿಕ್ಸ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಡಾಟಾ ಅನಾಲಿಟಿಕ್ಸ್ ಮತ್ತು ಸಯೋಜಿತ ಉತ್ಪಾದನಾ ಸೇವೆಗಳು ಮತ್ತು ಉತ್ಪಾದನಾ ಕ್ಷೇತ್ರಗಳು ಮತ್ತು ಇತರ ಉದಯೋನ್ಮುಖ ವ್ಯವಹಾರಗಳು ಸೇರಿದಂತೆ ಹಲವಾರು ವಲಯಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಕೆಯ ತರಬೇತಿ ನೀಡುತ್ತದೆ.
ಸಾರ್ವಜನಿಕ-ಖಾಸಗಿ ಸಹಭಾಗಿತ್ವ(ಪಿಪಿಪಿ) ಮಾದರಿಯ ಮೂಲಕ ಸ್ಥಾಪಿತವಾದ ಈ ಸಂಸ್ಥೆಯು, ಭಾರತ ಸರ್ಕಾರದ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯ ಮತ್ತು ಟಾಟಾ ಐಐಎಸ್(ಟಾಟಾ ಟ್ರಸ್ಟ್‌ಗಳ ಅಡಿ, ವಿಭಾಗ 8 ಕಂಪನಿಗಳ ವಿಭಾಗ) ನಡುವಿನ ಸಹಭಾಗಿತ್ವ ಹೊಂದಿದೆ.
ಯುವಕರು ಆತ್ಮವಿಶ್ವಾಸದಿಂದ ತುಂಬಿದಾಗ ಮಾತ್ರ ಜಗತ್ತು ದೇಶವನ್ನು ನಂಬುತ್ತದೆ ಎಂದು ಪ್ರಧಾನಿ ಒತ್ತಿ ಹೇಳಿದರು. ಇಂದಿನ ಯುವ ಭಾರತದ ಆತ್ಮವಿಶ್ವಾಸವು ರಾಷ್ಟ್ರಕ್ಕೆ ಹೊಸ ಭವಿಷ್ಯದ ಕಥೆಯನ್ನು ಬರೆಯುತ್ತಿದೆ. ಜಾಗತಿಕ ಸಮುದಾಯವು ಭಾರತವನ್ನು ಮಾನವ ಸಂಪನ್ಮೂಲಗಳ ಮಹತ್ವದ ಕೇಂದ್ರವಾಗಿ ನೋಡುತ್ತಿದೆ. ಶಿಕ್ಷಣ, ಕೌಶಲ್ಯ, ಆರೋಗ್ಯ ಮತ್ತು ಸಾಫ್ಟ್‌ವೇರ್ ಅಭಿವೃದ್ಧಿಯಲ್ಲಿ ವ್ಯಾಪಕ ಅವಕಾಶಗಳನ್ನು ಹೊಂದಿದೆ. ಈ ಅವಕಾಶಗಳಿಗಾಗಿ ಭಾರತದ ಯುವಕರನ್ನು ಸಿದ್ಧಪಡಿಸಲು, ಸರ್ಕಾರವು ಅವರ ಕೌಶಲ್ಯಗಳನ್ನು ಜಾಗತಿಕ ಮಾನದಂಡಗಳೊಂದಿಗೆ ಜೋಡಿಸುತ್ತಿದೆ ಎಂದು ಪ್ರಧಾನಿ ಹೇಳಿದರು.
ಐಐಎಸ್ ಮುಂಬೈ ಉದ್ಘಾಟನೆಗೆ ಸಂತಸ ವ್ಯಕ್ತಪಡಿಸಿದ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಹಾಗೂ ಶಿಕ್ಷಣ ಖಾತೆ ರಾಜ್ಯ ಸಚಿವ(ಸ್ವತಂತ್ರ ಉಸ್ತುವಾರಿ) ಶ್ರೀ ಜಯಂತ್ ಚೌಧರಿ, “ಐಐಎಸ್ ನಂತಹ ಸಂಸ್ಥೆಗಳು ಭಾರತವನ್ನು 'ಜಗತ್ತಿನ ಕೌಶಲ್ಯ ರಾಜಧಾನಿ' ಮಾಡಬೇಕೆಂಬ ಗೌರವಾನ್ವಿತ ಪ್ರಧಾನ ಮಂತ್ರಿಗಳ ದೃಷ್ಟಿಕೋನವನ್ನು ವಾಸ್ತವಕ್ಕೆ ತರುವ ಮೂಲಕ ಭವಿಷ್ಯಕ್ಕೆ ಸಿದ್ಧವಾದ ಕಾರ್ಯಪಡೆ ರೂಪಿಸಲು ಪ್ರಮುಖವಾಗಿದೆ. ನಮ್ಮ ಯುವಕರನ್ನು ಅತ್ಯಾಧುನಿಕ ಪರಿಣತಿಯೊಂದಿಗೆ ಸಜ್ಜುಗೊಳಿಸುವ ಮೂಲಕ, ಈ ಸಂಸ್ಥೆಯು ಕೇವಲ ಭಾರತದೊಳಗೆ ಅವಕಾಶಗಳಿಗೆ ಬಾಗಿಲು ತೆರೆಯದೆ, ಜಾಗತಿಕ ಮಾರುಕಟ್ಟೆಗಳಲ್ಲಿ ಸ್ಪರ್ಧಿಸಲು ಮತ್ತು ಉತ್ತಮ ಸಾಧನೆ ಮಾಡಲು ಅವರ ಸ್ಥಾನಮಾನ ಹೆಚ್ಚಿಸಲಿದೆ ಎಂದರು.
ಮುಂಬೈನ ಚುನಾಭಟ್ಟಿಯಲ್ಲಿರುವ ರಾಷ್ಟ್ರೀಯ ಕೌಶಲ್ಯ ತರಬೇತಿ ಸಂಸ್ಥೆ(ಎನ್ಎಸ್ ಟಿಐ)ಯ 4 ಎಕರೆ ವಿಶಾಲವಾದ ಕ್ಯಾಂಪಸ್‌ನಲ್ಲಿ ನಿರ್ಮಿಸಲಾಗಿರುವ ಐಐಎಸ್ ಅನ್ನು ಅತ್ಯಾಧುನಿಕ ತಂತ್ರಜ್ಞಾನ ಮತ್ತು ಪ್ರಾಯೋಗಿಕ ತರಬೇತಿ ಹೊಂದಿರುವ ಉದ್ಯಮ-ಸಿದ್ಧ ಉದ್ಯೋಗಿಗಳನ್ನು ಬೆಳೆಸುವಂತೆ ವಿನ್ಯಾಸಗೊಳಿಸಲಾಗಿದೆ. ಐಐಎಸ್ ಮುಂಬೈ ಫ್ಯಾಕ್ಟರಿ ಆಟೋಮೇಷನ್, ಡಿಜಿಟಲ್ ಮ್ಯಾನುಫ್ಯಾಕ್ಚರಿಂಗ್, ಮೆಕಾಟ್ರಾನಿಕ್ಸ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಡೇಟಾ ಅನಾಲಿಟಿಕ್ಸ್ ಮತ್ತು ತಯಾರಿಕೆಯಂತಹ ಪ್ರಮುಖ ಕ್ಷೇತ್ರಗಳಲ್ಲಿ ವಿಶೇಷ ತರಬೇತಿ ನೀಡುತ್ತದೆ.
ಸಂಸ್ಥೆಯು ಆರಂಭದಲ್ಲಿ 6 ವಿಶೇಷ ಕೋರ್ಸ್‌ಗಳನ್ನು ಪ್ರಾರಂಭಿಸುತ್ತದೆ: ಸುಧಾರಿತ ಕೈಗಾರಿಕಾ ಆಟೊಮೇಷನ್ ಮತ್ತು ರೊಬೊಟಿಕ್ಸ್, ಇಂಡಸ್ಟ್ರಿಯಲ್ ಆಟೊಮೇಷನ್ ಫಂಡಮೆಂಟಲ್ಸ್, ಅಡ್ವಾನ್ಸ್ಡ್ ಎಆರ್ ಸಿ ವೆಲ್ಡಿಂಗ್ ಟೆಕ್ನಿಕ್ಸ್, ಸಂಯೋಜಕ ಉತ್ಪಾದನೆ, ಎಲೆಕ್ಟ್ರಿಕ್ ವೆಹಿಕಲ್ ಬ್ಯಾಟರಿ ಸ್ಪೆಷಲಿಸ್ಟ್ ಮತ್ತು 2&3 ವೀಲರ್ ಇವಿ ಟೆಕ್ನಿಷಿಯನ್. ಸಂಸ್ಥೆಯು ಮುಂದಿನ ದಿನಗಳಲ್ಲಿ ಅಭ್ಯರ್ಥಿಗಳಿಗೆ ತಮ್ಮ ಕಲಿಕೆಯ ಅನುಭವವನ್ನು ಹೆಚ್ಚಿಸಲು ಹಾಸ್ಟೆಲ್ ಸೌಲಭ್ಯಗಳನ್ನು ವಿಸ್ತರಿಸುತ್ತದೆ.
"ನಮ್ಮ ಯುವಕರಿಗೆ ಸುಧಾರಿತ ತಾಂತ್ರಿಕ ಕೌಶಲ್ಯಗಳು ಮತ್ತು ಅನುಭವ ನೀಡುವ ಮೂಲಕ, ನಾವು ಜಾಗತಿಕ ಕೌಶಲ್ಯ ಅಭಿವೃದ್ಧಿಯಲ್ಲಿ ಭಾರತವನ್ನು ಮುಂಚೂಣಿಯಲ್ಲಿ ಇರಿಸುತ್ತಿದ್ದೇವೆ. ಈ ಉಪಕ್ರಮವು ಕೇವಲ ತರಬೇತಿಗಿಂತ ಹೆಚ್ಚಿನದಾಗಿದೆ. ಇದು ರಾಷ್ಟ್ರಾದ್ಯಂತ ಯುವ ಪ್ರತಿಭೆಗಳಿಗೆ ಉತ್ತಮ ಸಾಧನೆ ಮಾಡಲು ಮಾರ್ಗಗಳನ್ನು ರೂಪಿಸುತ್ತದೆ. ಆದರೆ ಭಾರತದ ಆರ್ಥಿಕ ಮತ್ತು ತಾಂತ್ರಿಕ ಪ್ರಗತಿಗೆ ಪ್ರಮುಖ ಕೊಡುಗೆದಾರರಾಗಿದ್ದೇವೆ, ನಮ್ಮ ಕೌಶಲ್ಯ ಮಾರ್ಗಸೂಚಿಗಳು ಪ್ರಸ್ತುತವಾಗಿರುವುದನ್ನು ಖಚಿತಪಡಿಸಲು ನಾವು ಅತ್ಯಾಧುನಿಕ ಕೈಗಾರಿಕೆಗಳೊಂದಿಗೆ ಈ ರೀತಿಯ ಕಾರ್ಯತಂತ್ರ ಪಾಲುದಾರಿಕೆ ರೂಪಿಸುತ್ತಿದ್ದೇವೆ. ಅದು ದೂರದೃಷ್ಟಿ ಉಳ್ಳದ್ದಾಗಿರುತ್ತದೆ, ವೇಗವನ್ನು ಪೂರೈಸಲು ಸಮರ್ಥವಾಗಿರುವ ಚುರುಕುಬುದ್ಧಿಯ, ಭವಿಷ್ಯದ-ಸಿದ್ಧ ಕಾರ್ಯಪಡೆ ಸಿದ್ಧಪಡಿಸುವುದು. ಜಾಗತೀಕರಣಗೊಂಡ ಆರ್ಥಿಕತೆಯ ವಿಕಸನದ ಬೇಡಿಕೆಗಳನ್ನು ಪೂರೈಸುವುದು ನಮ್ಮ ಉದ್ದೇಶವಾಗಿದೆ" ಎನ್ನುತ್ತಾರೆ ಶ್ರೀ ಚೌಧರಿ.
ಮಹಾರಾಷ್ಟ್ರ ಸರ್ಕಾರದ ಕೌಶಲ್ಯ, ಉದ್ಯೋಗ, ಉದ್ಯಮಶೀಲತೆ ಮತ್ತು ನಾವೀನ್ಯತೆ ಖಾತೆ ಸಚಿವ ಮಂಗಲ್ ಪ್ರಭಾತ್ ಲೋಧಾ ಮಾತನಾಡಿ, "ಇಂದು ಪ್ರಾರಂಭಿಸಲಾದ ಐಐಎಸ್ ಕೇಂದ್ರವು ವಿಶ್ವಾದ್ಯಂತದ ಜನರನ್ನು ಆಕರ್ಷಿಸುವ ಅತ್ಯಾಧುನಿಕ ಸೌಲಭ್ಯವಾಗಲಿದೆ. ಟಾಟಾ ಗ್ರೂಪ್ ನ ನಂಬಿಕೆ ಮತ್ತು ಬೆಳವಣಿಗೆಗೆ ಸಮಾನಾರ್ಥಕ ಪದವು ಈ ಸಂಸ್ಥೆಗೆ ಸಂಬಂಧಿಸಿದ ಪ್ರತಿಯೊಬ್ಬ ಅಭ್ಯರ್ಥಿಗೆ ಕೆಲಸ ಮಾಡಲು ಮತ್ತು ಕಲಿಯಲು ಒಂದು ಅವಕಾಶವಾಗಿದೆ.
ಸಂಸ್ಥೆಯು ಆರಂಭದಲ್ಲಿ 15ಕ್ಕೂ ಹೆಚ್ಚು ಜಾಗತಿಕ ಮತ್ತು ಭಾರತೀಯ ಮೂಲ ಸಲಕರಣೆ ತಯಾರಕರ(ಒಇಎಂಗಳು) ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಿದ ಸುಧಾರಿತ ಪ್ರಯೋಗಾಲಯಗಳನ್ನು ಹೊಂದಿದೆ, ನೈಜ ಉದ್ಯಮದ ಉಪಕರಣಗಳನ್ನು ಬಳಸಿಕೊಂಡು ವಿದ್ಯಾರ್ಥಿಗಳು ಕೈಗೆಟುಕುವ ವೆಚ್ಚದಲ್ಲಿ ಪ್ರಾಯೋಗಿಕ ಅನುಭವವನ್ನು ಪಡೆಯುವುದನ್ನು ಖಚಿತಪಡಿಸುತ್ತದೆ. ಅವರ ತರಬೇತಿ ಪೂರ್ಣಗೊಂಡ ನಂತರ, ಅವರು ಇವಿ ತಯಾರಕರು, ಎಐ ಮತ್ತು ರೊಬೊಟಿಕ್ಸ್‌ನಂತಹ ಹೊಸ-ಯುಗದ ಉದ್ಯಮಗಳಿಂದ ಸೆಳೆಯಲು ಸಿದ್ಧರಾಗುತ್ತಾರೆ.
ಐಐಎಸ್ ತನ್ನ ಪ್ರಮುಖ ಕೊಡುಗೆಗಳ ಜೊತೆಗೆ, ಫ್ಯಾನುಕ್ ಇಂಡಿಯಾದೊಂದಿಗೆ ಕೈಗಾರಿಕಾ ರೋಬೋಟಿಕ್ಸ್, ಎಸ್‌ಎಂಸಿ ಇಂಡಿಯಾದೊಂದಿಗೆ ಕೈಗಾರಿಕಾ ಆಟೋಮೇಷನ್ ಮತ್ತು ತಾಜ್ ಸ್ಕೈಲೈನ್‌ನೊಂದಿಗೆ ಪಾಕಶಾಲೆ ಮತ್ತು ಕೋರ್ ಹೌಸ್‌ಕೀಪಿಂಗ್‌ನಂತಹ ಉದ್ಯಮ ಪಾಲುದಾರರ ಸಹಯೋಗದೊಂದಿಗೆ ಅಲ್ಪಾವಧಿಯ ಕೋರ್ಸ್‌ಗಳನ್ನು ಸಹ ಒದಗಿಸುತ್ತದೆ. ವೃತ್ತಿಪರ ತರಬೇತಿ ಮತ್ತು ದೃಢವಾದ ಉದ್ಯಮದ ಸಂಬಂಧಗಳಿಗೆ ಅದರ ನವೀನ ವಿಧಾನದೊಂದಿಗೆ ಟಾಟಾ ಐಐಎಸ್ ಮುಂಬೈ, ಭಾರತದಲ್ಲಿ ಕೌಶಲ್ಯ ಅಭಿವೃದ್ಧಿಯ ಪ್ರಧಾನ ಸಂಸ್ಥೆಯಾಗಿ ಹೊರಹೊಮ್ಮಲು ಸಿದ್ಧವಾಗಿದೆ.
"ಭಾರತದ ಬೆಳೆಯುತ್ತಿರುವ ಆರ್ಥಿಕತೆಯು ಕೌಶಲ್ಯಪೂರ್ಣ, ಚೇತರಿಕೆಯ ಕಾರ್ಯಪಡೆಗಾಗಿ ಹೆಚ್ಚು ಬೇಡಿಕೆ ಹೊಂದಿದೆ - ಇದು ಪ್ರತಿಯಾಗಿ, ಉತ್ಪಾದಕತೆ, ಆರ್ಥಿಕ ಬೆಳವಣಿಗೆ, ಸಮೃದ್ಧಿ ಮತ್ತು ರಾಷ್ಟ್ರೀಯ ಅಭಿವೃದ್ಧಿಯನ್ನು ಮುನ್ನಡೆಸುತ್ತದೆ. ನಮ್ಮ ಯುವಕರನ್ನು ಉಪಯುಕ್ತ ಕೌಶಲ್ಯಗಳೊಂದಿಗೆ ಸಜ್ಜುಗೊಳಿಸುವ ಮೂಲಕ, ನಾವು ಸ್ವಾತಂತ್ರ್ಯ ಮತ್ತು ಘನತೆಯ ಜೀವನ ನಡೆಸಲು ಅವರನ್ನು ಸಬಲಗೊಳಿಸಬಹುದು. ಇಂದು ಉದ್ಯಮದ ಅಭಿವೃದ್ಧಿ ಹೊಂದುತ್ತಿರುವ ಅಗತ್ಯಗಳಿಗೆ ತಕ್ಕಂತೆ ಅವರನ್ನು ಸಿದ್ಧಪಡಿಸಬಹುದು. ಮುಂಬೈನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸ್ಕಿಲ್ಸ್ ವಿಶ್ವದರ್ಜೆಯ ಸೌಲಭ್ಯಗಳನ್ನು ಹೊಂದಿದ್ದು, ರಾಷ್ಟ್ರದ ಸವಾಲುಗಳನ್ನು ಪರಿಹರಿಸಲು, ಯುವಕರು ಉದ್ಯೋಗ ಮತ್ತು ಉದ್ಯಮದ ಪರಿವರ್ತನೆಗೆ ಸಹಾಯ ಮಾಡಲು ದಿಟ್ಟ ಮತ್ತು ಚುರುಕಾದ ಕ್ರಮಗಳನ್ನು ತೆಗೆದುಕೊಳ್ಳುವ ಟಾಟಾ ಗ್ರೂಪ್‌ನ ದೂರದೃಷ್ಟಿಗೆ ಸಂಕೇತವಾಗಿದೆ” ಎಂದು ಟಾಟಾ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸ್ಕಿಲ್ಸ್ ಅಧ್ಯಕ್ಷ ಶ್ರೀ ವೇಣು ಶ್ರೀನಿವಾಸನ್ ಹೇಳಿದರು.
ಕೌಶಲಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯ(ಎಂಎಸ್ ಡಿಇ) ಕಾರ್ಯದರ್ಶಿ ಶ್ರೀ ಅತುಲ್ ಕುಮಾರ್ ತಿವಾರಿ ಮತ್ತು ಎಂಎಸ್ ಡಿಇ ಹಿರಿಯ ಆರ್ಥಿಕ ಸಲಹೆಗಾರ ಶ್ರೀ ನಿಲಾಂಬುಜ್ ಶರಣ್ ಸೇರಿದಂತೆ ಹಲವಾರು ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಟಾಟಾ ಐಐಎಸ್ ಅಧ್ಯಕ್ಷ ಶ್ರೀ ವೇಣು ಶ್ರೀನಿವಾಸನ್, ಟಾಟಾ ಟ್ರಸ್ಟ್‌ನ ಸಿಇಒ ಶ್ರೀ ಸಿದ್ಧಾರ್ಥ್ ಶರ್ಮಾ, ಟಾಟಾ ಐಐಎಸ್ ಸಿಇಒ ಶ್ರೀ ಸಬ್ಯಸಾಚಿ ದಾಸ್ ಮತ್ತು ಟಾಟಾ ಎಂಡಿ ಸಿಇಒ ಶ್ರೀ ಗಿರೀಶ್ ಕೃಷ್ಣಮೂರ್ತಿ ಸೇರಿದಂತೆ ಟಾಟಾ ಟ್ರಸ್ಟ್‌ಗಳು ಮತ್ತು ಟಾಟಾ ಕಂಪನಿಗಳ ಪ್ರಮುಖ ವ್ಯಕ್ತಿಗಳು ಉಪಸ್ಥಿತರಿದ್ದರು.
ಹೆಚ್ಚುವರಿಯಾಗಿ, ಭಾರತದಲ್ಲಿ ಕೌಶಲ್ಯ ಅಭಿವೃದ್ಧಿಯ ವಿಕಾಸದಲ್ಲಿ ಈ ಮೈಲಿಗಲ್ಲಿನ ಅದ್ಭುತ ಕ್ಷಣ ಆಚರಿಸಲು ಟಾಟಾ ಐಐಎಸ್‌ನ ಹಿರಿಯ ಸಲಹೆಗಾರ ಶ್ರೀ ಹೆಚ್ ಎನ್ ಶ್ರೀನಿವಾಸ್, ಇತರೆ ಹಿರಿಯ ಗಣ್ಯರು, ಅಧ್ಯಾಪಕರು ಮತ್ತು ಐಐಎಸ್ ಮುಂಬೈನಲ್ಲಿ ತರಬೇತಿ ಪಡೆದವರು ಉಪಸ್ಥಿತರಿದ್ದರು.
*****
(Release ID: 2063763)
Visitor Counter : 43