ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ಲೈಟ್ಸ್, ಕ್ಯಾಮರಾ, ಪ್ರಶಸ್ತಿಗಳು!


ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು

ಭಾರತೀಯ ಸಿನಿಮಾರಂಗದಲ್ಲಿ ಜೀವಮಾನ ಸಾಧನೆಗಾಗಿ ಮಿಥುನ್ ಚಕ್ರವರ್ತಿ ಅವರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಲಾಯಿತು

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು, ಸಮಾಜವನ್ನು ಬದಲಾಯಿಸಲು ಚಲನಚಿತ್ರಗಳು ಮತ್ತು ಸಾಮಾಜಿಕ ಮಾಧ್ಯಮಗಳು ಅತ್ಯಂತ ಶಕ್ತಿಶಾಲಿ ಮಾಧ್ಯಮಗಳಾಗಿವೆ ಎಂದು ಹೇಳಿದರು

ಸರ್ಕಾರವು ಶೀಘ್ರದಲ್ಲೇ ಮುಂಬೈನಲ್ಲಿ ಭಾರತದ ಮೊದಲ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್  ಕ್ರಿಯೇಟಿವ್  ಟೆಕ್ನಾಲಜಿಯನ್ನು ಸ್ಥಾಪಿಸಲಿದೆ

ಚಲನಚಿತ್ರೋದ್ಯಮವನ್ನು ಮೂರು ಪ್ರಮುಖ ಸ್ತಂಭಗಳ ಸುತ್ತ ಅಭಿವೃದ್ಧಿಪಡಿಸುವುದು ಸರ್ಕಾರದ ದೃಷ್ಟಿಕೋನವಾಗಿದೆ. ಪ್ರತಿಭೆಗಳ ಸಮೂಹ, ಮೂಲಸೌಕರ್ಯ ಮತ್ತು ಚಲನಚಿತ್ರ ನಿರ್ಮಾಣದಲ್ಲಿ ಒಳಗೊಂಡಿರುವ ಪ್ರಕ್ರಿಯೆಯ ಸರಳೀಕರಿಸುವುದು: ಶ್ರೀ ಅಶ್ವಿನಿ ವೈಷ್ಣವ್

Posted On: 08 OCT 2024 9:27PM by PIB Bengaluru

"ನೀವು ನಿದ್ದೆ ಮಾಡಿದರೂ ನಿಮ್ಮ ಕನಸುಗಳನ್ನು ಎಂದಿಗೂ ನಿದ್ದೆ ಮಾಡಲು ಬಿಡಬೇಡಿ". ರಾಷ್ಟ್ರ ರಾಜಧಾನಿಯಲ್ಲಿ ವಿವಿಧ ವಿಭಾಗಗಳಲ್ಲಿ 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದ ಯುವ ಪ್ರಶಸ್ತಿ ವಿಜೇತರಿಗೆ ಚಲನಚಿತ್ರ ದಂತಕಥೆ ಮಿಥುನ್ ಚಕ್ರವರ್ತಿ ಅವರಾಡಿದ ಚಿನ್ನದಂತಹ ಮಾತುಗಳಿವು. ಭಾರತೀಯ ಸಿನಿಮಾಕ್ಕೆ ನೀಡಿದ ಅಮೂಲ್ಯ ಕೊಡುಗೆಗಾಗಿ ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಮಿಥುನ್ ಚಕ್ರವರ್ತಿ ಅವರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸಿದಾಗ ವಿಜ್ಞಾನ ಭವನದ ಸಭಾಂಗಣದಲ್ಲಿದ್ದ ಎಲ್ಲರೂ ಎದ್ದು ನಿಂತು ಚಪ್ಪಾಳೆ ತಟ್ಟಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಮಿಥುನ್ ದಾ, ಚಲನಚಿತ್ರ ಉದ್ಯಮದಲ್ಲಿ ತಮ್ಮ ಹೋರಾಟದ ಅನುಭವಗಳನ್ನು ಹಂಚಿಕೊಂಡರು. ತಮ್ಮ ಕಪ್ಪು ಬಣ್ಣದ ಕಾರಣ ತಾವು ಎದುರಿಸಿದ ತಾರತಮ್ಯವನ್ನು ನೆನಪಿಸಿಕೊಂಡರು ಮತ್ತು ತಮ್ಮ ನೃತ್ಯದ ಯಶಸ್ಸಿನ ಮಂತ್ರವನ್ನು ಪ್ರಶಸ್ತಿ ವಿಜೇತರು ಮತ್ತು ಸಭಾಂಗಣದಲ್ಲಿದ್ದ ಪ್ರೇಕ್ಷಕರೊಂದಿಗೆ ಹಂಚಿಕೊಂಡರು. ತಮ್ಮ ಕನಸುಗಳನ್ನು ಬೆನ್ನಟ್ಟುವಾಗ ತಮ್ಮ ಪ್ರತಿಭೆಯನ್ನು ಗುರುತಿಸಲು ಮಿಥುನ್ ದಾ ಅವರು ಪ್ರತಿಭಾವಂತ ಯುವ ಕಲೆಗಾರರಿಗೆ ಸಂದೇಶ ನೀಡಿದರು.

70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಮಾತನಾಡಿ, ಚಲನಚಿತ್ರಗಳು ಮತ್ತು ಸಾಮಾಜಿಕ ಮಾಧ್ಯಮಗಳು ಸಮಾಜವನ್ನು ಬದಲಾಯಿಸುವ ಅತ್ಯಂತ ಪ್ರಭಾವಶಾಲಿ ಮಾಧ್ಯಮಗಳಾಗಿವೆ ಎಂದು ಹೇಳಿದರು. ಈ ಪ್ರಶಸ್ತಿಗಳ ಮೂಲಕ ಉದಯೋನ್ಮುಖ ಪ್ರತಿಭೆಗಳಿಗೆ ಸಮಾನ ಅವಕಾಶ ಕಲ್ಪಿಸಿದ್ದಕ್ಕಾಗಿ ಅವರು ವಾರ್ತಾ ಮತ್ತು ಪ್ರಸಾರ ಸಚಿವಾಲಯವನ್ನು ಶ್ಲಾಘಿಸಿದರು. ಇದರಿಂದ ಹೊಸ ಪ್ರತಿಭೆಗಳು ದೇಶದ ಖ್ಯಾತ ಹೆಸರುಗಳು ಮತ್ತು ದೊಡ್ಡ ನಿರ್ಮಾಣ ಸಂಸ್ಥೆಗಳೊಂದಿಗೆ ಒಂದೇ ವೇದಿಕೆಯಲ್ಲಿ ಸ್ಪರ್ಧಿಸಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.

ಪ್ರಶಸ್ತಿ ಸಮಾರಂಭದಲ್ಲಿ ಮನೋಜ್ ಬಾಜಪೇಯಿ, ವಿಶಾಲ್ ಭಾರದ್ವಾಜ್, ನೀನಾ ಗುಪ್ತಾ, ಕರಣ್ ಜೋಹರ್, ಋಷಭ್ ಶೆಟ್ಟಿ ಮುಂತಾದ ಪ್ರಶಸ್ತಿ ವಿಜೇತರು ಭಾಗವಹಿಸಿದ್ದರು. ಶರ್ಮಿಳಾ ಠಾಕೂರ್, ಪ್ರಸೂನ್ ಜೋಶಿ ಮುಂತಾದ ಭಾರತೀಯ ಸಿನಿಮಾ ರಂಗದ ಇತರ ಗಣ್ಯರೂ ಹಾಜರಿದ್ದರು. ಎ.ಆರ್. ರಹಮಾನ್ ಮತ್ತು ಮಣಿರತ್ನಂ ಅವರಂತಹ ಗೌರವಾನ್ವಿತ ವ್ಯಕ್ತಿಗಳು ಏಳನೇ ಬಾರಿಗೆ ಪ್ರತಿಷ್ಠಿತ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದ ಪ್ರಶಸ್ತಿ ವಿಜೇತರ ಪೈಕಿ ಒಬ್ಬರಾಗಿದ್ದರು. ಇದು ಅವರ ನಿರಂತರ ಪ್ರತಿಭೆ ಮತ್ತು ಚಲನಚಿತ್ರ ಕ್ಷೇತ್ರದ ಮೇಲಿನ ಪ್ರಭಾವಕ್ಕೆ ಸಾಕ್ಷಿಯಾಗಿದೆ. ಅವರ ಸಾಧನೆಗಳು ನಿರಂತರವಾಗಿ ವಿಕಸನಗೊಳ್ಳುತ್ತಿರುವ ಭಾರತೀಯ ಸಿನಿಮಾ ರಂಗದಲ್ಲಿ ಪ್ರಬುದ್ಧ ಮತ್ತು ಉದಯೋನ್ಮುಖ ಕಲಾವಿದರಿಬ್ಬರಿಗೂ ಸ್ಫೂರ್ತಿದಾಯಕವಾಗಿ ಮುಂದುವರಿದಿವೆ.

ವಾರ್ತಾ ಮತ್ತು ಪ್ರಸಾರ, ರೈಲ್ವೇಗಳು ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್, ವಾರ್ತಾ ಮತ್ತು ಪ್ರಸಾರ ಖಾತೆಯ ರಾಜ್ಯ ಸಚಿವರಾದ ಡಾ. ಎಲ್. ಮುರುಗನ್, ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಶ್ರೀ ಸಂಜಯ್ ಜಾಜು,  ಶ್ರೀ ರಾಹುಲ್ ರಾವೈಲ್,  ಶ್ರೀ ನೀಲ ಮಾಧಬ್ ಪಾಂಡಾ ಮತ್ತು ಮತ್ತು ತೀರ್ಪುಗಾರರಾಗಿ ಶ್ರೀ ಗಂಗಾಧರ ಮುದಲಿಯಾರ್ ಅವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಶ್ರೀ ಅಶ್ವಿನಿ ವೈಷ್ಣವ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರನ್ನು  ಆತ್ಮೀಯವಾಗಿ ಸ್ವಾಗತಿಸಿ, ಚಲನಚಿತ್ರ ನಿರ್ಮಾಪಕರು, ನಟರು, ತಂತ್ರಜ್ಞರು ಮತ್ತು ಸಿನಿಮಾ ಕಲೆಯಲ್ಲಿ ತೊಡಗಿರುವ ಎಲ್ಲ ಪಾಲುದಾರರ ಪ್ರತಿಭೆಯನ್ನು ಆಚರಿಸುವ ಈ ಪ್ರತಿಷ್ಠಿತ ಕಾರ್ಯಕ್ರಮದ ಭಾಗವಾಗಿರುವುದಕ್ಕೆ  ಗೌರವವನ್ನು ವ್ಯಕ್ತಪಡಿಸಿದರು. ಭಾರತೀಯ ಸಿನಿಮಾ ಮತ್ತು ಸಮಾಜಕ್ಕೆ ಅಸಾಮಾನ್ಯ ಕೊಡುಗೆ ನೀಡಿದ್ದಕ್ಕಾಗಿ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯಿಂದ ಗೌರವಿಸಲ್ಪಟ್ಟ ಖ್ಯಾತ ನಟ ಮಿಥುನ್ ಚಕ್ರವರ್ತಿ ಅವರಿಗೂ ಅವರು ಗೌರವ ಸಲ್ಲಿಸಿದರು. "ಮಿಥುನ್ ದಾ, ನಿಮ್ಮ ಜೀವನವೇ ನಿಮ್ಮ ಸಂದೇಶ. ನೀವು ನಮ್ಮ ಸಮಾಜಕ್ಕೆ ಪರದೆಯ ಮೇಲೆ ಮತ್ತು ಹೊರಗೆ ಐಕಾನ್ ಆಗಿದ್ದೀರಿ "ಎಂದು ಹಿರಿಯ ನಟನ ಆದರ್ಶಪ್ರಾಯ ವೃತ್ತಿಜೀವನ ಮತ್ತು ಸಾರ್ವಜನಿಕ ಸೇವೆಯನ್ನು ಶ್ಲಾಘಿಸಿದರು.

ಶ್ರೀ ವೈಷ್ಣವ್ ಒಂಬತ್ತು ಹೊಸ ನಿರ್ದೇಶಕರ ಅದ್ಭುತ ಸಾಧನೆಯನ್ನು ಹೈಲೈಟ್ ಮಾಡಿದರು. ಅವರ ಧೈರ್ಯಶಾಲಿ ಕಥನ ಶೈಲಿಯನ್ನು ಶ್ಲಾಘಿಸಿದರು.  ಚಲನಚಿತ್ರ ಉದ್ಯಮ ಅಥವಾ ಸ್ಟಾರ್ಟ್ ಅಪ್ ಗಳಲ್ಲಿರಲಿ, ಕ್ರಿಯೇಟಿವ್ ಎಕಾನಮಿಯನ್ನು ಚಾಲನೆ ಮಾಡುವಲ್ಲಿ ಯುವ  ಉದ್ಯಮಿಗಳ  ಪಾತ್ರವನ್ನು ಕೊಂಡಾಡಿದರು.

ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಕ್ರಿಯೇಟಿವ್ ಟೆಕ್ನಾಲಜಿ (IICT)

ಸೃಜನಶೀಲ ಉದ್ಯಮಗಳ ಬೆಳವಣಿಗೆಗೆ ಇನ್ನಷ್ಟು ಬೆಂಬಲ ನೀಡಲು, ಶ್ರೀ ವೈಷ್ಣವ್ ಅವರು ಮುಂಬೈನಲ್ಲಿ ಮೊದಲ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಕ್ರಿಯೇಟಿವ್ ಟೆಕ್ನಾಲಜಿ (IICT) ಯನ್ನು ಸ್ಥಾಪಿಸುವ ಮಹತ್ವದ ಯೋಜನೆಯನ್ನು ಘೋಷಿಸಿದರು. ವಿಶ್ವದ ಅತ್ಯುತ್ತಮ ತಾಂತ್ರಿಕ ಮತ್ತು ನಿರ್ವಹಣಾ ಪ್ರತಿಭೆಗಳನ್ನು ಉತ್ಪಾದಿಸಿದ (ಅವರಲ್ಲಿ ಕೆಲವರು ಗೂಗಲ್, ಮೈಕ್ರೋಸಾಫ್ಟ್ ಮುಂತಾದ ದೊಡ್ಡ ದೈತ್ಯ ಕಂಪನಿಗಳನ್ನು ಮುನ್ನಡೆಸುತ್ತಿದ್ದಾರೆ) ಐಐಟಿ ಮತ್ತು ಐಐಎಂ ಗಳಂತಹ ಪ್ರತಿಷ್ಠಿತ ಸಂಸ್ಥೆಗಳ ಮಾದರಿಯಲ್ಲಿ, ಐಐಸಿಟಿಯು ಸೃಜನಶೀಲ ಕೌಶಲ್ಯಗಳು ಮತ್ತು ಜ್ಞಾನವನ್ನು ಅಭಿವೃದ್ಧಿಪಡಿಸುವುದರ ಮೇಲೆ ಗಮನ ಹರಿಸಲಿದೆ. ಈ ಹೊಸ ಸಂಸ್ಥೆಯು ನಾವೀನ್ಯತೆ, ಸೃಜನಶೀಲತೆ ಮತ್ತು ಪ್ರತಿಭಾ ಅಭಿವೃದ್ಧಿಯ ಕೇಂದ್ರವಾಗಿ ಕಾರ್ಯನಿರ್ವಹಿಸಲಿದ್ದು, ಜಾಗತಿಕ ಕ್ರಿಯೇಟಿವ್ ಎಕಾನಮಿಯಲ್ಲಿ ಭಾರತವು ಮುಂಚೂಣಿಯಲ್ಲಿ ಉಳಿಯುವುದನ್ನು ಖಚಿತಪಡಿಸಲಿದೆ.

ಮೂರು ಪ್ರಮುಖ ಸ್ತಂಭಗಳೊಂದಿಗೆ ಚಲನಚಿತ್ರೋದ್ಯಮವನ್ನು ಅಭಿವೃದ್ಧಿಪಡಿಸುವ ಸರ್ಕಾರದ ದೃಷ್ಟಿಕೋನವನ್ನು ಅವರು ವಿವರಿಸಿದರು:

1. ಟ್ಯಾಲೆಂಟ್ ಪೈಪ್‌ಲೈನ್ ನ ಅಭಿವೃದ್ಧಿ: ಚಲನಚಿತ್ರ ನಿರ್ಮಾಣದಲ್ಲಿ ಹೆಚ್ಚುತ್ತಿರುವ ತಂತ್ರಜ್ಞಾನದ  ಪಾತ್ರವನ್ನು ಗುರುತಿಸಿದ ಅವರು ಬಲವಾದ ಟ್ಯಾಲೆಂಟ್ ಪೈಪ್‌ಲೈನ್ ನ ಅಗತ್ಯವನ್ನು ಪ್ರತಿಪಾದಿಸಿದರು. ಐಟಿ ಮತ್ತು ಸೆಮಿಕಂಡಕ್ಟರ್ ಕ್ಷೇತ್ರಗಳಲ್ಲಿ ಭಾರತದ ಯಶಸ್ಸಿನೊಂದಿಗೆ ಹೋಲಿಕೆಗಳನ್ನು ತೋರಿಸಿದ ಅವರು, ಐಐಸಿಟಿಗಳು ಪ್ರಮುಖ ಪಾತ್ರ ವಹಿಸುವುದರೊಂದಿಗೆ ಸೃಜನಶೀಲ ತಂತ್ರಜ್ಞಾನಗಳಲ್ಲಿ ಪ್ರತಿಭೆಗಳನ್ನು ಪೋಷಿಸುವ ಮಹತ್ವವನ್ನು ಪ್ರತಿಪಾದಿಸಿದರು.

2. ಮೂಲಸೌಕರ್ಯ ಅಭಿವೃದ್ಧಿ: ಚಲನಚಿತ್ರ ಉದ್ಯಮದ ವಿಕಸನಗೊಳ್ಳುತ್ತಿರುವ ಅಗತ್ಯಗಳನ್ನು ಬೆಂಬಲಿಸಲು ವಿಶ್ವ ದರ್ಜೆಯ ಮೂಲಸೌಕರ್ಯಗಳ ಅಗತ್ಯವನ್ನು ಶ್ರೀ ವೈಷ್ಣವರು ಪ್ರತಿಪಾದಿಸಿದರು. ಭಾರತೀಯ ಸಿನೆಮಾವನ್ನು ಜಾಗತಿಕ ಗುಣಮಟ್ಟಕ್ಕೆ ಕೊಂಡೊಯ್ಯುವ ಅಡಿಪಾಯವನ್ನು ರಚಿಸಲು ಕೊಡುಗೆ ನೀಡುವಂತೆ ಅವರು ಉದ್ಯಮದ ನಾಯಕರನ್ನು ಆಹ್ವಾನಿಸಿದರು.

3. ಪ್ರಕ್ರಿಯೆಗಳ ಸರಳೀಕರಣ: ಚಲನಚಿತ್ರ ನಿರ್ಮಾಪಕರಿಗೆ ತಮ್ಮ ಯೋಜನೆಗಳಲ್ಲಿ ರೈಲ್ವೆ, ಅರಣ್ಯ ಮತ್ತು ಪುರಾತತ್ವ ತಾಣಗಳಂತಹ ವೈವಿಧ್ಯಮಯ ಸ್ಥಳಗಳನ್ನು ಬಳಸಲು ಸುಲಭವಾಗುವಂತೆ  ಅನುಮತಿಗಳನ್ನು ಸರಳೀಕರಿಸುವ ಬಗ್ಗೆ ಸಚಿವರು ಚರ್ಚಿಸಿದರು. ಈ ಪ್ರಕ್ರಿಯೆಗಳನ್ನು ಸುವ್ಯವಸ್ಥಿತಗೊಳಿಸುವುದು ಸೃಜನಶೀಲತೆಯನ್ನು ಉತ್ತೇಜಿಸುತ್ತದೆ ಮತ್ತು ಅಧಿಕಾರಶಾಹಿ ಅಡೆತಡೆಗಳನ್ನು ಕಡಿಮೆ ಮಾಡುತ್ತದೆ.

ಶ್ರೇಷ್ಠ ಚಲನಚಿತ್ರಗಳಿಂದ ಹಿಡಿದು ಪೋಸ್ಟರ್‌ ಗಳು ಮತ್ತು ವೃತ್ತಪತ್ರಿಕೆ ತುಣುಕುಗಳವರೆಗೆ ಭಾರತದ ಶ್ರೀಮಂತ ಚಲನಚಿತ್ರ ಪರಂಪರೆಯನ್ನು ಸಂರಕ್ಷಿಸುವ ಮಹತ್ವವನ್ನು ಶ್ರೀ ವೈಷ್ಣವ್ ಪ್ರತಿಪಾದಿಸಿದರು. ಭವಿಷ್ಯದ ಪೀಳಿಗೆಗಾಗಿ ಈ ಅಮೂಲ್ಯ ಸಂಪತ್ತನ್ನು ರಕ್ಷಿಸಲು ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ, ಕಾರ್ಯದರ್ಶಿ ಶ್ರೀ ಸಂಜಯ್ ಜಾಜು ಅವರು, 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಫೀಚರ್ ಫಿಲ್ಮ್ಸ್ ವಿಭಾಗದಲ್ಲಿ 32 ವಿಭಿನ್ನ ಭಾಷೆಗಳಲ್ಲಿ 309 ಚಲನಚಿತ್ರಗಳು ಮತ್ತು ನಾನ್-ಫೀಚರ್ ಫಿಲ್ಮ್ಸ್ ವಿಭಾಗದಲ್ಲಿ 17 ಭಾಷೆಗಳಲ್ಲಿ 128 ಚಲನಚಿತ್ರಗಳು ಸ್ವೀಕರಿಸಲಾಗಿದೆ ಎಂದು ತಿಳಿಸಿದರು. ಇದು ನಮ್ಮ ಸಾಂಸ್ಕೃತಿಕ ಪರಿಸರದ ಸಮೃದ್ಧಿ ಮತ್ತು ನಮ್ಮ ಕಥಾವಸ್ತುವಿನ ಸಮನ್ವಯವನ್ನು ಸೂಚಿಸುತ್ತದೆ.  ಜಾಗತಿಕ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಚಲನಚಿತ್ರ  ಉದ್ಯಮದ ಸ್ಥೈರ್ಯವನ್ನು ಗುರುತಿಸಿ, ಅವರು ಕಥೆ ಹೇಳುವ ಕಲೆಯ ಮೂಲಕ ಪ್ರೇಕ್ಷಕರನ್ನು ಆಕರ್ಷಿಸಿದ ಚಲನಚಿತ್ರ ನಿರ್ಮಾಪಕರನ್ನು ಶ್ಲಾಘಿಸಿದರು.

70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಮುಖ್ಯಾಂಶಗಳು

ಈ ವರ್ಷದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ವೈವಿಧ್ಯಮಯ ಚಲನಚಿತ್ರಗಳು ಮತ್ತು ಪ್ರತಿಭೆಗಳನ್ನು ಗುರುತಿಸುವ ಸಂಪ್ರದಾಯವನ್ನು ಮುಂದುವರೆಸಿವೆ. 2022ರ ಪ್ರಶಸ್ತಿಗಳು ಹಲವಾರು ಅಸಾಧಾರಣ ವಿಜೇತರನ್ನು ಒಳಗೊಂಡಿವೆ:

•  ಅತ್ಯುತ್ತಮ ಫೀಚರ್ ಚಲನಚಿತ್ರ: ಆನಂದ್ ಏಕರ್ಶಿ ನಿರ್ದೇಶಿಸಿದ ಮಲಯಾಳಂ ಚಿತ್ರ "ಆಟ್ಟಂ (ದಿ ಪ್ಲೇ)" ತನ್ನ ಕಲಾತ್ಮಕ ಪ್ರತಿಭೆಗಾಗಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಗೆದ್ದಿದೆ.

•  ಅತ್ಯುತ್ತಮ ನಾನ್-ಫೀಚರ್ ಚಲನಚಿತ್ರ: ಸಿದ್ಧಾಂತ್ ಸರಿನ್ ನಿರ್ದೇಶಿಸಿದ "ಅಯೇನಾ (ಮಿರರ್)" ಈ ಗೌರವವನ್ನು ಪಡೆದುಕೊಂಡಿದೆ.

• ಅತ್ಯುತ್ತಮ ನಟ (ಪ್ರಮುಖ ಪಾತ್ರ): ರಿಷಭ್ ಶೆಟ್ಟಿ ಕನ್ನಡ ಚಿತ್ರ *"ಕಾಂತಾರ"*ದಲ್ಲಿನ ತಮ್ಮ ಅದ್ಭುತ ಅಭಿನಯಕ್ಕಾಗಿ ಈ ಪ್ರಶಸ್ತಿಯನ್ನು ಗೆದ್ದಿದ್ದಾರೆ.

• ಅತ್ಯುತ್ತಮ ನಟಿ (ಪ್ರಮುಖ ಪಾತ್ರ): ಅತ್ಯುತ್ತಮ ನಟಿಯ ಪ್ರಶಸ್ತಿಯನ್ನು ತಮಿಳು ಚಿತ್ರ "ತಿರುಚಿತ್ರಂಬಲಂ"ದಲ್ಲಿನ ಅಭಿನಯಕ್ಕಾಗಿ ನಿತ್ಯಾ ಮೇನನ್ ಮತ್ತು ಗುಜರಾತಿ ಚಿತ್ರ "ಕಚ್ ಎಕ್ಸ್‌ಪ್ರೆಸ್"ಗಾಗಿ ಮಾನಸಿ ಪಾರೇಖ್ ಹಂಚಿಕೊಂಡಿದ್ದಾರೆ.

•  ಅತ್ಯುತ್ತಮ ನಿರ್ದೇಶನ: ಹಿಂದಿ ಚಿತ್ರ " ಉಂಚೈ "ಗಾಗಿ ಸೂರಜ್ ಆರ್. ಬರ್ಜತ್ಯಾ ಪಡೆದಿದ್ದಾರೆ.

ಇತರ ಕೆಲವು ಪ್ರಶಸ್ತಿ ವಿಜೇತರಲ್ಲಿ AVGC (ಅನಿಮೇಷನ್, ವಿಷುಯಲ್ ಎಫೆಕ್ಟ್ಸ್, ಗೇಮಿಂಗ್ & ಕಾಮಿಕ್) ವಿಭಾಗದಲ್ಲಿ ಅತ್ಯುತ್ತಮ ಚಲನಚಿತ್ರಕ್ಕಾಗಿ "ಬ್ರಹ್ಮಾಸ್ತ್ರ - ಪಾರ್ಟ್ 1: ಶಿವ", ಸಂಪೂರ್ಣ ಮನರಂಜನೆ ನೀಡುವ ಅತ್ಯುತ್ತಮ ಜನಪ್ರಿಯ ಚಲನಚಿತ್ರಕ್ಕಾಗಿ "ಕಾಂತಾರ" ಮತ್ತು ಚಲನಚಿತ್ರದ ಕುರಿತು ಅತ್ಯುತ್ತಮ ಪುಸ್ತಕಕ್ಕಾಗಿ "ಕಿಶೋರ್ ಕುಮಾರ್: ದಿ ಅಲ್ಟಿಮೇಟ್ ಬಯೋಗ್ರಫಿ" ಸೇರಿವೆ.

ಪ್ರಶಸ್ತಿಗಳ ಸಂಪೂರ್ಣ ಪಟ್ಟಿಯನ್ನು ಕೆಳಗಿನ ಲಿಂಕ್‌ನಲ್ಲಿ ಕಾಣಬಹುದು:

https://pib.gov.in/PressReleasePage.aspx?PRID=2045960

 

*****



(Release ID: 2063379) Visitor Counter : 15