ಪ್ರಧಾನ ಮಂತ್ರಿಯವರ ಕಛೇರಿ
ಮಹಾರಾಷ್ಟ್ರದ ವಾಶಿಮ್ ನಲ್ಲಿ ಕೃಷಿ ಮತ್ತು ಪಶುಸಂಗೋಪನಾ ವಲಯದ ಯೋಜನೆಗಳ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಮಂತ್ರಿಯವರ ಭಾಷಣ
Posted On:
05 OCT 2024 3:49PM by PIB Bengaluru
ದೇಶಾದ್ಯಂತದಿಂದ ಬಂದು ಭಾಗವಹಿಸುತ್ತಿರುವವರನ್ನು ನಾನು ಅಭಿವಂದಿಸುತ್ತೇನೆ - ನಮ್ಮ ಗೌರವಾನ್ವಿತ ಸಹೋದರ ಸಹೋದರಿಯರೇ ! ಜೈ ಸೇವಾಲಾಲ್! ಜೈ ಸೇವಾಲಾಲ್!
ಮಹಾರಾಷ್ಟ್ರದ ರಾಜ್ಯಪಾಲರಾದ ಸಿ.ಪಿ. ರಾಧಾಕೃಷ್ಣನ್ ಅವರೇ, ಜನಪ್ರಿಯ ಮುಖ್ಯಮಂತ್ರಿ ಏಕನಾಥ್ ಶಿಂದೆ ಅವರೇ, ಕೇಂದ್ರ ಸಚಿವ ಸಂಪುಟದಲ್ಲಿ ನನ್ನ ಸಹೋದ್ಯೋಗಿಗಳಾದ ಶಿವರಾಜ್ ಸಿಂಗ್ ಚೌಹಾಣ್ ಮತ್ತು ರಾಜೀವ್ ರಂಜನ್ ಸಿಂಗ್, ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಗಳಾದ ದೇವೇಂದ್ರ ಫಡ್ನವಿಸ್ ಮತ್ತು ಅಜಿತ್ ಪವಾರ್, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಇತರ ಸಚಿವರು, ಸಂಸದರು, ಶಾಸಕರು, ದೂರದೂರದಿಂದ ಬಂದಿರುವ ಬಂಜಾರ ಸಮುದಾಯದ ನನ್ನ ಸಹೋದರ ಸಹೋದರಿಯರೇ, ದೇಶಾದ್ಯಂತದ ರೈತ ಬಾಂಧವರೇ ಮತ್ತು ಇತರ ಎಲ್ಲಾ ಗಣ್ಯರೇ, ಮಹಾರಾಷ್ಟ್ರದ ನನ್ನ ಸಹೋದರ ಸಹೋದರಿಯರೇ, ವಾಶಿಮ್ ನ ಈ ಪವಿತ್ರ ನೆಲದಿಂದ ನಾನು ದೇವಿ ಪೋಹ್ರದೇವಿಗೆ ಗೌರವಪೂರ್ವಕವಾಗಿ ನಮಸ್ಕರಿಸುತ್ತೇನೆ. ನವರಾತ್ರಿಯ ಸಂದರ್ಭದಲ್ಲಿ, ಇಂದು ಮಾತೆ ಜಗದಂಬೆಯ ಆಶೀರ್ವಾದ ಪಡೆಯುವ ಸೌಭಾಗ್ಯ ನನಗೆ ದೊರೆಯಿತು. ನಾನು ಸಂತ ಸೇವಾಲಾಲ್ ಮಹಾರಾಜ್ ಮತ್ತು ಸಂತ ರಾಮರಾವ್ ಮಹಾರಾಜ್ ಅವರ ಸಮಾಧಿಗೆ ಭೇಟಿ ನೀಡಿ ಅವರ ಆಶೀರ್ವಾದವನ್ನು ಪಡೆದುಕೊಂಡೆ. ಈ ವೇದಿಕೆಯಿಂದ ಈ ಇಬ್ಬರು ಮಹಾನ್ ಸಂತರಿಗೆ ನಾನು ತಲೆಬಾಗಿ ಗೌರವ ಸಲ್ಲಿಸುತ್ತೇನೆ.
ಇಂದು ಮಹಾನ್ ಯೋಧ ಮತ್ತು ಗೊಂಡ್ವಾನಾದ ರಾಣಿ ದುರ್ಗಾವತಿಯವರ ಜನ್ಮದಿನವೂ ಆಗಿದೆ. ಕಳೆದ ವರ್ಷ, ರಾಷ್ಟ್ರವು ಆಕೆಯ 500 ನೇ ಜನ್ಮ ದಿನಾಚರಣೆಯನ್ನು ಆಚರಿಸಿತು. ನಾನು ರಾಣಿ ದುರ್ಗಾವತಿಗೂ ಗೌರವ ಸಲ್ಲಿಸುತ್ತೇನೆ.
ಸ್ನೇಹಿತರೇ,
ಹರಿಯಾಣದಲ್ಲಿ ಇಂದು ಮತದಾನ ನಡೆಯುತ್ತಿದೆ. ಹರಿಯಾಣದ ಎಲ್ಲಾ ದೇಶಭಕ್ತ ಜನರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸುವಂತೆ ನಾನು ಮನವಿ ಮಾಡುತ್ತೇನೆ. ನಿಮ್ಮ ಮತವು ಹರಿಯಾಣವನ್ನು ಅಭಿವೃದ್ಧಿಯ ಹೊಸ ಎತ್ತರಕ್ಕೆ ಕೊಂಡೊಯ್ಯುತ್ತದೆ.
ಸ್ನೇಹಿತರೇ,
ನವರಾತ್ರಿಯ ಈ ಪವಿತ್ರ ಅವಧಿಯಲ್ಲಿ, ಪಿಎಂ-ಕಿಸಾನ್ ಸಮ್ಮಾನ್ ನಿಧಿಯ 18 ನೇ ಕಂತನ್ನು ಬಿಡುಗಡೆ ಮಾಡುವ ಅವಕಾಶ ನನಗೆ ಸಿಕ್ಕಿತು. ಇಂದು, ದೇಶಾದ್ಯಂತ 9.5 ಕೋಟಿ ರೈತರ ಖಾತೆಗಳಿಗೆ 20,000 ಕೋಟಿ ರೂಪಾಯಿಗಳನ್ನು ವರ್ಗಾಯಿಸಲಾಗಿದೆ. ಮಹಾರಾಷ್ಟ್ರದ ಡಬಲ್ ಎಂಜಿನ್ ಸರ್ಕಾರವು ಇಲ್ಲಿನ ರೈತರಿಗೆ ಎರಡು ಪ್ರಯೋಜನಗಳನ್ನು ನೀಡುತ್ತಿದೆ. ಮಹಾರಾಷ್ಟ್ರದ 90 ಲಕ್ಷಕ್ಕೂ ಹೆಚ್ಚು ರೈತರಿಗೆ ನಮೋ ಶೇತ್ಕರಿ ಮಹಾಸನ್ಮಾನ್ ಯೋಜನೆಯಡಿ ಸುಮಾರು 1,900 ಕೋಟಿ ರೂಪಾಯಿಗಳನ್ನು ನೀಡಲಾಗಿದೆ. ಕೃಷಿ, ಪಶುಸಂಗೋಪನೆ ಮತ್ತು ರೈತ ಉತ್ಪಾದಕ ಸಂಸ್ಥೆಗಳಿಗೆ (FPOs) ಸಂಬಂಧಿಸಿದ ನೂರಾರು ಕೋಟಿ ರೂಪಾಯಿ ಮೌಲ್ಯದ ಹಲವಾರು ಯೋಜನೆಗಳನ್ನು ಇಂದು ಸಾರ್ವಜನಿಕರಿಗೆ ಸಮರ್ಪಿಸಲಾಗಿದೆ. ಪೊಹ್ರಾದೇವಿಯ ಆಶೀರ್ವಾದದಿಂದ, ಮಹಿಳೆಯರ ಸಬಲೀಕರಣ ಮಾಡುತ್ತಿರುವ ಲಾಡ್ಲಿ ಬೆಹನಾ ಯೋಜನೆಯ ಫಲಾನುಭವಿಗಳಿಗೆ ನೆರವು ನೀಡುವ ಗೌರವ ನನಗೆ ದೊರೆತಿದೆ. ನಾನು ಮಹಾರಾಷ್ಟ್ರದ ಸಹೋದರ ಸಹೋದರಿಯರಿಗೆ ಮತ್ತು ದೇಶಾದ್ಯಂತದ ಎಲ್ಲಾ ರೈತ ಸಹೋದರ ಸಹೋದರಿಯರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
ಸ್ನೇಹಿತರೇ,
ಇಂದು ಇಲ್ಲಿಗೆ ಬರುವ ಮೊದಲು, ಪೊಹ್ರಾದೇವಿಯಲ್ಲಿ ಬಂಜಾರ ಪರಂಪರೆಯ ವಸ್ತುಸಂಗ್ರಹಾಲಯವನ್ನು ಉದ್ಘಾಟಿಸುವ ಸೌಭಾಗ್ಯವೂ ನನಗಿತ್ತು. ಈ ವಸ್ತುಸಂಗ್ರಹಾಲಯವು ಶ್ರೇಷ್ಠ ಬಂಜಾರಾ ಸಂಸ್ಕೃತಿ, ಅಂತಹ ವಿಶಾಲವಾದ ಪರಂಪರೆ ಮತ್ತು ಅಂತಹ ಪ್ರಾಚೀನ ಸಂಪ್ರದಾಯವನ್ನು ಮುಂದಿನ ಪೀಳಿಗೆಗೆ ಪರಿಚಯಿಸುತ್ತದೆ. ಮತ್ತು ನಾನು ವೇದಿಕೆಯ ಮೇಲೆ ಕುಳಿತಿರುವವರು ಸೇರಿದಂತೆ ನಿಮ್ಮೆಲ್ಲರನ್ನೂ ಹೊರಡುವ ಮೊದಲು ಈ ಬಂಜಾರಾ ವಿರಾಸತ್ ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡುವಂತೆ ಕೋರುತ್ತೇನೆ. ನಾನು ದೇವೇಂದ್ರ ಜೀ ಅವರನ್ನು ಅಭಿನಂದಿಸುತ್ತೇನೆ. ಅವರ ಮೊದಲ ಸರ್ಕಾರದ ಅವಧಿಯಲ್ಲಿ ರೂಪುಗೊಂಡ ಪರಿಕಲ್ಪನೆಯನ್ನು ಈಗ ಸುಂದರವಾಗಿ ಕಾರ್ಯಗತಗೊಳಿಸಲಾಗಿದೆ. ಇಂದು ಅದನ್ನು ನೋಡಿದ ನಂತರ ನನಗೆ ಬಹಳ ತೃಪ್ತಿ ಮತ್ತು ಸಂತೋಷವಾಗುತ್ತದೆ. ಅದಕ್ಕೆ ಭೇಟಿ ನೀಡುವಂತೆ ನಾನು ನಿಮ್ಮನ್ನು ಕೋರುತ್ತೇನೆ ಮತ್ತು ನಂತರ ನಿಮ್ಮ ಕುಟುಂಬಗಳು ಸಹ ಅಲ್ಲಿಗೆ ಭೇಟಿ ನೀಡುವುದನ್ನು ಖಚಿತಪಡಿಸಿಕೊಳ್ಳಿ. ನಾನು ಪೊಹ್ರಾದೇವಿಯಲ್ಲಿ ಬಂಜಾರಾ ಸಮುದಾಯದ ಕೆಲವು ಗೌರವಾನ್ವಿತ ಸದಸ್ಯರನ್ನು ಭೇಟಿಯಾದೆ. ಈ ವಸ್ತುಸಂಗ್ರಹಾಲಯದ ಮೂಲಕ ತಮ್ಮ ಪರಂಪರೆಗೆ ದೊರೆತ ಮನ್ನಣೆಯಿಂದ ಅವರ ಮುಖಗಳು ಹೆಮ್ಮೆ ಮತ್ತು ತೃಪ್ತಿಯಿಂದ ಬೆಳಗಿದವು. ಬಂಜಾರಾ ವಿರಾಸತ್ ವಸ್ತು ಸಂಗ್ರಹಾಲಯಕ್ಕಾಗಿ ನಾನು ನಿಮ್ಮೆಲ್ಲರನ್ನೂ ಅಭಿನಂದಿಸುತ್ತೇನೆ.
ಸ್ನೇಹಿತರೇ,
ಇತರರಿಂದ ನಿರ್ಲಕ್ಷಿಸಲ್ಪಟ್ಟವರನ್ನು ಮೋದಿ ಪೂಜಿಸುತ್ತಾರೆ. ನಮ್ಮ ಬಂಜಾರಾ ಸಮುದಾಯವು ಭಾರತದ ಸಾಮಾಜಿಕ ಜೀವನದಲ್ಲಿ ಮತ್ತು ಭಾರತದ ರಾಷ್ಟ್ರ ನಿರ್ಮಾಣದ ಪ್ರಯಾಣದಲ್ಲಿ ಮಹತ್ವದ ಪಾತ್ರವನ್ನು ವಹಿಸಿದೆ. ಈ ಸಮುದಾಯದ ಶ್ರೇಷ್ಠ ವ್ಯಕ್ತಿಗಳು ಕಲೆ, ಸಂಸ್ಕೃತಿ, ಆಧ್ಯಾತ್ಮಿಕತೆ, ದೇಶ ರಕ್ಷಣೆ ಮತ್ತು ವ್ಯಾಪಾರ ಕ್ಷೇತ್ರಗಳಲ್ಲಿ ದೇಶಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ರಾಜ ಲಖಿ ಷಾ ಬಂಜಾರ ವಿದೇಶಿ ರಾಜರ ಅನೇಕ ದೌರ್ಜನ್ಯಗಳನ್ನು ಸಹಿಸಿಕೊಂಡರು! ಅವರು ತಮ್ಮ ಜೀವನವನ್ನು ಸಮಾಜ ಸೇವೆಗಾಗಿ ಮುಡಿಪಾಗಿಟ್ಟರು! ನಮ್ಮ ಬಂಜಾರಾ ಸಮುದಾಯವು ಸಂತ ಸೇವಾಲಾಲ್ ಮಹಾರಾಜ್, ಸ್ವಾಮಿ ಹಥೀರಾಮ್ ಜೀ, ಸಂತ ಈಶ್ವರ ಸಿಂಗ್ ಬಾಪೂ ಜೀ, ಸಂತ ಡಾ. ರಾಮರಾವ್ ಬಾಪೂ ಮಹಾರಾಜ್, ಸಂತ ಲಕ್ಷ್ಮಣ ಚೈತನ್ಯ ಬಾಪೂ ಜೀ ಸೇರಿದಂತೆ ಹಲವಾರು ಸಂತರನ್ನು ಸೃಷ್ಟಿಸಿದೆ. ಅವರು ಭಾರತದ ಆಧ್ಯಾತ್ಮಿಕ ಪ್ರಜ್ಞೆಗೆ ಅಪರಿಮಿತ ಶಕ್ತಿಯನ್ನು ನೀಡಿದ್ದಾರೆ. ಹಲವಾರು ತಲೆಮಾರುಗಳಿಂದ, ನೂರಾರು ಮತ್ತು ಸಾವಿರಾರು ವರ್ಷಗಳಿಂದ, ಈ ಸಮುದಾಯವು ಭಾರತದ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಸಂರಕ್ಷಿಸಿದೆ ಮತ್ತು ಪೋಷಿಸಿದೆ. ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ, ಬ್ರಿಟಿಷ್ ಸರ್ಕಾರವು ಈ ಇಡೀ ಸಮುದಾಯವನ್ನು ಅಪರಾಧಿಗಳೆಂದು ಘೋಷಿಸಿತ್ತು.
ಆದರೆ ಸಹೋದರ ಸಹೋದರಿಯರೇ,
ಸ್ವಾತಂತ್ರ್ಯದ ನಂತರ, ಬಂಜಾರಾ ಸಮುದಾಯದ ಬಗ್ಗೆ ಕಾಳಜಿ ವಹಿಸುವುದು ಮತ್ತು ಅವರಿಗೆ ಅರ್ಹವಾದ ಗೌರವವನ್ನು ನೀಡುವುದು ರಾಷ್ಟ್ರದ ಜವಾಬ್ದಾರಿಯಾಗಿತ್ತು! ಆ ಕಾಲದ ಕಾಂಗ್ರೆಸ್ ಸರ್ಕಾರಗಳು ಏನು ಮಾಡಿದ್ದವು? ಕಾಂಗ್ರೆಸ್ಸಿನ ನೀತಿಗಳು ಈ ಸಮುದಾಯವನ್ನು ಮುಖ್ಯವಾಹಿನಿಯಿಂದ ಬೇರ್ಪಡಿಸಿದವು. ಸ್ವಾತಂತ್ರ್ಯದ ನಂತರ, ಒಂದು ನಿರ್ದಿಷ್ಟ ಕುಟುಂಬದ ನಿಯಂತ್ರಣದಲ್ಲಿದ್ದ ಕಾಂಗ್ರೆಸ್ ಪಕ್ಷವು ಮೊದಲಿನಿಂದಲೂ ವಿದೇಶಿ ಮನಸ್ಥಿತಿಯನ್ನು ಹೊಂದಿತ್ತು. ಬ್ರಿಟಿಷ್ ಆಡಳಿತಗಾರರಂತೆ, ಈ ಕಾಂಗ್ರೆಸ್ ಕುಟುಂಬವೂ ಸಹ ದಲಿತರು, ಹಿಂದುಳಿದ ವರ್ಗಗಳು ಅಥವಾ ಬುಡಕಟ್ಟು ಜನಾಂಗದವರನ್ನು ಸಮಾನರೆಂದು ಪರಿಗಣಿಸಲಿಲ್ಲ. ಬ್ರಿಟಿಷರು ತಮಗೆ ಈ ಹಕ್ಕನ್ನು ನೀಡಿದ್ದರಿಂದ ಒಂದೇ ಕುಟುಂಬವು ಭಾರತವನ್ನು ಆಳುವುದನ್ನು ಮುಂದುವರಿಸಬೇಕು ಎಂದು ಅವರು ನಂಬಿದ್ದರು! ಅದಕ್ಕಾಗಿಯೇ ಅವರು ಯಾವಾಗಲೂ ಬಂಜಾರಾ ಸಮುದಾಯದ ಬಗ್ಗೆ ಅಗೌರವ ಮನೋಭಾವವನ್ನು ಹೊಂದಿದ್ದರು.
ಸ್ನೇಹಿತರೇ,
ಕೇಂದ್ರದ NDA ಸರ್ಕಾರವು ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯಗಳ ಕಲ್ಯಾಣ ಮಂಡಳಿಯನ್ನು ಸ್ಥಾಪಿಸಿದೆ. ಬಿಜೆಪಿ ಮತ್ತು NDA ಸರ್ಕಾರಗಳು ಈ ಸಮುದಾಯದ ಸಾಂಸ್ಕೃತಿಕ ಗುರುತನ್ನು ಸರಿಯಾಗಿ ಗೌರವಿಸುವುದನ್ನು ಖಚಿತಪಡಿಸಿಕೊಳ್ಳಲು ನಿರಂತರವಾಗಿ ಕೆಲಸ ಮಾಡುತ್ತಿವೆ. ರಾಜ್ಯ ಸರ್ಕಾರವು ಸಂತ ಸೇವಾಲಾಲ್ ಮಹಾರಾಜ್ ಬಂಜಾರ ತಾಂಡಾ ಸಮೃದ್ಧಿ ಅಭಿಯಾನವನ್ನು ಸಹ ಪ್ರಾರಂಭಿಸಿದೆ.
ಸ್ನೇಹಿತರೇ,
ನಮ್ಮ ಪ್ರಯತ್ನಗಳ ನಡುವೆ, ಕಾಂಗ್ರೆಸ್ ಮತ್ತು ಮಹಾ ಅಘಾಡಿ ನಿಮ್ಮ ಬಗ್ಗೆ ಹೊಂದಿದ್ದ ಮನೋಭಾವವನ್ನು ನೀವು ನೆನಪಿನಲ್ಲಿಟ್ಟುಕೊಳ್ಳಬೇಕು. ಫಡ್ನವೀಸ್ ಅವರು ಮುಖ್ಯಮಂತ್ರಿಯಾದಾಗ, ಪೊಹ್ರಾದೇವಿ ಯಾತ್ರಾ ಸ್ಥಳದ ಅಭಿವೃದ್ಧಿಯ ಯೋಜನೆಯನ್ನು ರೂಪಿಸಲಾಯಿತು. ಆದರೆ ಮಹಾ ಅಘಾಡಿ ಸರ್ಕಾರ ಅಧಿಕಾರಕ್ಕೆ ಬಂದಾಗ, ಅವರು ಕೆಲಸವನ್ನು ನಿಲ್ಲಿಸಿದರು. ಶಿಂಧೆಯವರ ನೇತೃತ್ವದಲ್ಲಿ ಮಹಾಯುತಿ ಸರ್ಕಾರ ಅಧಿಕಾರಕ್ಕೆ ಮರಳಿದಾಗ ಮಾತ್ರ ಪೊಹ್ರಾದೇವಿ ಯಾತ್ರಾ ಸ್ಥಳದ ಅಭಿವೃದ್ಧಿ ಪುನರಾರಂಭವಾಯಿತು. ಇಂದು, ಈ ಯೋಜನೆಗಾಗಿ 700 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗುತ್ತಿದೆ. ಈ ಯಾತ್ರಾ ಸ್ಥಳದ ಅಭಿವೃದ್ಧಿಯು ಭಕ್ತರಿಗೆ ಅನುಕೂಲವಾಗುವುದು ಮಾತ್ರವಲ್ಲದೆ ಸುತ್ತಮುತ್ತಲಿನ ಪ್ರದೇಶಗಳ ಅಭಿವೃದ್ಧಿಯನ್ನೂ ವೇಗಗೊಳಿಸುತ್ತದೆ.
ಸಹೋದರ ಸಹೋದರಿಯರೇ,
ಬಿಜೆಪಿ ತನ್ನ ನೀತಿಗಳ ಮೂಲಕ ಸಮಾಜದ ವಂಚಿತ ವರ್ಗಗಳನ್ನು ಮೇಲಕ್ಕೆತ್ತಲು ಉದ್ದೇಶಿಸಿದೆ, ಆದರೆ ಕಾಂಗ್ರೆಸ್ ಗೆ ಅವರನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದು ಮಾತ್ರ ತಿಳಿದಿದೆ. ಕಾಂಗ್ರೆಸ್ ಬಡವರನ್ನು ಬಡತನದಲ್ಲಿ ಇಡಲು ಬಯಸುತ್ತದೆ. ದುರ್ಬಲ ಮತ್ತು ಬಡ ಭಾರತವು ಕಾಂಗ್ರೆಸ್ ಮತ್ತು ಅದರ ರಾಜಕೀಯಕ್ಕೆ ಚೆನ್ನಾಗಿ ಹೊಂದಿಕೊಳ್ಳುತ್ತದೆ. ಅದಕ್ಕಾಗಿಯೇ ನೀವೆಲ್ಲರೂ ಕಾಂಗ್ರೆಸ್ ಬಗ್ಗೆ ಬಹಳ ಜಾಗರೂಕರಾಗಿರಬೇಕು. ಇಂದು ಕಾಂಗ್ರೆಸ್ ಅನ್ನು ನಗರ ನಕ್ಸಲರ ತಂಡವೊಂದು ನಡೆಸುತ್ತಿದೆ. ಎಲ್ಲರೂ ಒಗ್ಗೂಡಿದರೆ, ದೇಶವನ್ನು ವಿಭಜಿಸುವ ಅವರ ಕಾರ್ಯಸೂಚಿ ವಿಫಲಗೊಳ್ಳುತ್ತದೆ ಎಂದು ಕಾಂಗ್ರೆಸ್ ಭಾವಿಸುತ್ತದೆ! ಅದಕ್ಕಾಗಿಯೇ ಅವರು ನಮ್ಮ ನಡುವೆ ಬಿರುಕು ಸೃಷ್ಟಿಸಲು ಬಯಸುತ್ತಾರೆ. ಕಾಂಗ್ರೆಸ್ಸಿನ ಅಪಾಯಕಾರಿ ಕಾರ್ಯಸೂಚಿಯನ್ನು ಯಾರು ಬೆಂಬಲಿಸುತ್ತಿದ್ದಾರೆ ಎಂಬುದನ್ನು ಇಡೀ ದೇಶ ನೋಡುತ್ತಿದೆ. ಭಾರತದ ಪ್ರಗತಿಯನ್ನು ತಡೆಯಲು ಬಯಸುವವರು ಈ ದಿನಗಳಲ್ಲಿ ಕಾಂಗ್ರೆಸ್ಸಿನ ಹತ್ತಿರದ ಸ್ನೇಹಿತರು! ಆದ್ದರಿಂದ, ಇದು ಒಗ್ಗೂಡಿಸುವ ಸಮಯವಾಗಿದೆ. ನಮ್ಮ ಒಗ್ಗಟ್ಟು ಮಾತ್ರ ದೇಶವನ್ನು ರಕ್ಷಿಸುತ್ತದೆ.
ಸಹೋದರ ಸಹೋದರಿಯರೇ,
ನಾನು ಮಹಾರಾಷ್ಟ್ರದ ಜನರಿಗೆ ಕಾಂಗ್ರೆಸ್ ನ ಮತ್ತೊಂದು ದುಷ್ಕೃತ್ಯದ ಬಗ್ಗೆ ಹೇಳಲು ಬಯಸುತ್ತೇನೆ. ಇತ್ತೀಚೆಗೆ ದೆಹಲಿಯಲ್ಲಿ ಸಾವಿರಾರು ಕೋಟಿ ಮೌಲ್ಯದ ಮಾದಕ ದ್ರವ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂಬುದನ್ನು ನೀವು ಸುದ್ದಿಗಳಲ್ಲಿ ನೋಡಿರಬೇಕು. ಮತ್ತು ದುಃಖದ ವಿಷಯ ನೋಡಿ - ಈ ಮಾದಕವಸ್ತು ದಂಧೆಯ ಮುಖ್ಯ ಮಾಸ್ಟರ್ ಮೈಂಡ್ ಯಾರು? ಕಾಂಗ್ರೆಸ್ ನಾಯಕರೊಬ್ಬರು ಮುಖ್ಯ ಮಾಸ್ಟರ್ ಮೈಂಡ್ ಆಗಿ ಹೊರಹೊಮ್ಮಿದ್ದಾರೆ! ಕಾಂಗ್ರೆಸ್ ಯುವಕರನ್ನು ಮಾದಕ ವ್ಯಸನಕ್ಕೆ ತಳ್ಳಲು ಬಯಸುತ್ತದೆ ಮತ್ತು ಆ ಹಣವನ್ನು ಚುನಾವಣೆಯಲ್ಲಿ ಹೋರಾಡಲು ಮತ್ತು ಗೆಲ್ಲಲು ಬಳಸುತ್ತದೆ. ಈ ಅಪಾಯದ ಬಗ್ಗೆ ನಾವು ಜಾಗರೂಕರಾಗಿರಬೇಕು ಮತ್ತು ಇತರರಿಗೂ ಎಚ್ಚರಿಕೆ ನೀಡಬೇಕು. ನಾವು ಒಟ್ಟಾಗಿ ಈ ಯುದ್ಧವನ್ನು ಗೆಲ್ಲಬೇಕು.
ಸ್ನೇಹಿತರೇ,
ಇಂದು, ನಮ್ಮ ಸರ್ಕಾರದ ಪ್ರತಿಯೊಂದು ನಿರ್ಧಾರ ಮತ್ತು ಪ್ರತಿಯೊಂದು ನೀತಿಯು 'ವಿಕಸಿತ ಭಾರತ "ಕ್ಕೆ ಸಮರ್ಪಿತವಾಗಿದೆ. (Developed India). ಮತ್ತು 'ವಿಕಸಿತ ಭಾರತ' ಗೆ ನಮ್ಮ ರೈತರು ಪ್ರಬಲವಾದ ಅಡಿಪಾಯವಾಗಿದ್ದಾರೆ. ರೈತರ ಸಬಲೀಕರಣಕ್ಕಾಗಿ ಇಂದು ಹಲವಾರು ಪ್ರಮುಖ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇಂದು, 9,200 ರೈತ ಉತ್ಪಾದಕ ಸಂಘಗಳನ್ನು (FPO) ರಾಷ್ಟ್ರಕ್ಕೆ ಸಮರ್ಪಿಸಲಾಗಿದೆ. ಅಲ್ಲದೆ, ಕೃಷಿಗೆ ಸಂಬಂಧಿಸಿದ ಅನೇಕ ಮೂಲಸೌಕರ್ಯ ಯೋಜನೆಗಳನ್ನು ಉದ್ಘಾಟಿಸಲಾಗಿದ್ದು, ಇದು ಕೃಷಿ ಉತ್ಪನ್ನಗಳ ಸಂಗ್ರಹಣೆ, ಸಂಸ್ಕರಣೆ ಮತ್ತು ನಿರ್ವಹಣೆಯ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಈ ಪ್ರಯತ್ನಗಳು ರೈತರ ಆದಾಯವನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ. NDA ಸರ್ಕಾರದ ಅಡಿಯಲ್ಲಿ ಮಹಾರಾಷ್ಟ್ರದ ರೈತರು ದ್ವಿಗುಣ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ. ಏಕನಾಥ್ ಶಿಂಧೆ ಅವರ ಸರ್ಕಾರವು ರೈತರ ವಿದ್ಯುತ್ ಬಿಲ್ ಗಳನ್ನು ಸಹ ಶೂನ್ಯಗೊಳಿಸಿದೆ. ಇಲ್ಲಿರುವ ನಮ್ಮ ರೈತರಿಗೆ, ಅವರು ಪಡೆಯುವ ವಿದ್ಯುತ್ ಬಿಲ್ಗಳಲ್ಲಿ ಶೂನ್ಯ ಎಂದು ಬರೆದಿರುತ್ತದೆ, ಅಲ್ಲವೇ?
ಸ್ನೇಹಿತರೇ,
ಮಹಾರಾಷ್ಟ್ರದ ರೈತರು, ವಿಶೇಷವಾಗಿ ವಿದರ್ಭದ ರೈತರು ದಶಕಗಳಿಂದ ಗಮನಾರ್ಹ ಬಿಕ್ಕಟ್ಟನ್ನು ಎದುರಿಸುತ್ತಿದ್ದಾರೆ. ಕಾಂಗ್ರೆಸ್ ಮತ್ತು ಅವರ ಮಿತ್ರಪಕ್ಷಗಳ ಸರ್ಕಾರಗಳು ರೈತರನ್ನು ಸಂಕಷ್ಟ ಮತ್ತು ಬಡತನದಲ್ಲಿಡುವ ಯಾವುದೇ ಅವಕಾಶವನ್ನು ಬಿಡಲಿಲ್ಲ. ಮಹಾ ಅಘಾಡಿ ಸರ್ಕಾರವು ಇಲ್ಲಿ ಅಧಿಕಾರದಲ್ಲಿದ್ದಾಗ, ಅವರಿಗೆ ಕೇವಲ ಎರಡು ಕಾರ್ಯಸೂಚಿಗಳಿದ್ದವು. ಮೊದಲನೆಯದಾಗಿ-ರೈತರಿಗೆ ಸಂಬಂಧಿಸಿದ ಎಲ್ಲಾ ಯೋಜನೆಗಳನ್ನು ಸ್ಥಗಿತಗೊಳಿಸುವುದು. ಎರಡನೆಯದು-ಈ ಯೋಜನೆಗಳಿಗೆ ಮೀಸಲಿಟ್ಟ ಹಣದಿಂದ ಭ್ರಷ್ಟಾಚಾರದಲ್ಲಿ ತೊಡಗುವುದು! ಮಹಾರಾಷ್ಟ್ರದ ರೈತರಿಗೆ ಸಹಾಯ ಮಾಡಲು ನಾವು ಕೇಂದ್ರ ಸರ್ಕಾರದಿಂದ ಹಣವನ್ನು ಕಳುಹಿಸಿದ್ದೆವು, ಆದರೆ ಮಹಾ ಅಘಾಡಿ ಸರ್ಕಾರವು ಅದನ್ನು ತಮ್ಮೊಳಗೆ ಹಂಚಿಕೊಳ್ಳುತ್ತಿತ್ತು. ಕಾಂಗ್ರೆಸ್ ಯಾವಾಗಲೂ ರೈತರ ಜೀವನವನ್ನು ಕಷ್ಟಕರವಾಗಿಸಿದೆ. ಇಂದಿಗೂ ಕಾಂಗ್ರೆಸ್ ಅದೇ ಹಳೆಯ ಆಟವನ್ನು ಆಡುತ್ತಿದೆ. ಅದಕ್ಕಾಗಿಯೇ ಕಾಂಗ್ರೆಸ್ ಗೆ ಪಿಎಂ-ಕಿಸಾನ್ ಸಮ್ಮಾನ್ ನಿಧಿ ಯೋಜನೆ ಇಷ್ಟವಿಲ್ಲ! ಕಾಂಗ್ರೆಸ್ ಈ ಯೋಜನೆಯನ್ನು ಅಪಹಾಸ್ಯ ಮಾಡುತ್ತಿದೆ ಮತ್ತು ರೈತರಿಗೆ ಹಣ ಹೋಗುವುದನ್ನು ವಿರೋಧಿಸುತ್ತದೆ! ಏಕೆಂದರೆ ರೈತರ ಖಾತೆಗಳಿಗೆ ಹೋಗುತ್ತಿರುವ ಹಣವು ಭ್ರಷ್ಟಾಚಾರದಲ್ಲಿ ತೊಡಗಿಸಿಕೊಳ್ಳುವ ಅವರ ಅವಕಾಶವನ್ನು ಕಸಿದುಕೊಳ್ಳುತ್ತದೆ. ನೆರೆಯ ರಾಜ್ಯವಾದ ಕರ್ನಾಟಕವನ್ನು ನೋಡಿ! ಮಹಾರಾಷ್ಟ್ರದ ಮಹಾಯುತಿ ಸರ್ಕಾರವು ಕಿಸಾನ್ ಸಮ್ಮಾನ್ ನಿಧಿಯೊಂದಿಗೆ ರೈತರಿಗೆ ಹೆಚ್ಚುವರಿ ಹಣವನ್ನು ಒದಗಿಸಿದಂತೆಯೇ, ಕರ್ನಾಟಕದ ಬಿಜೆಪಿ ಸರ್ಕಾರವು ಅದೇ ರೀತಿ ಮಾಡುತ್ತಿತ್ತು. ಕರ್ನಾಟಕದ ಅನೇಕ ಬಂಜಾರ ಕುಟುಂಬಗಳು ಇಂದು ಇಲ್ಲಿಗೆ ಬಂದಿವೆ. ಆದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೂಡಲೇ ಅವರು ಆ ಹಣವನ್ನು ನೀಡುವುದನ್ನು ನಿಲ್ಲಿಸಿದರು. ಅವರು ರಾಜ್ಯದ ಅನೇಕ ನೀರಾವರಿ ಯೋಜನೆಗಳಿಂದಲೂ ದೂರ ಸರಿದರು. ಕರ್ನಾಟಕದಲ್ಲಿ ಕಾಂಗ್ರೆಸ್ ಬೀಜಗಳ ಬೆಲೆಯನ್ನು ಹೆಚ್ಚಿಸಿದೆ. ಪ್ರತಿ ಚುನಾವಣೆಯ ಮೊದಲು ಸಾಲ ಮನ್ನಾದ ಸುಳ್ಳು ಭರವಸೆಗಳನ್ನು ನೀಡುವುದು ಕಾಂಗ್ರೆಸ್ಸಿನ ನೆಚ್ಚಿನ ತಂತ್ರವಾಗಿದೆ! ತೆಲಂಗಾಣದಲ್ಲಿ, ಸಾಲ ಮನ್ನಾ ಮಾಡುವ ಭರವಸೆ ನೀಡಿ ಅಧಿಕಾರಕ್ಕೆ ಬಂದರು! ಆದರೆ ಸರ್ಕಾರ ರಚಿಸಿ ಬಹಳ ಸಮಯ ಕಳೆದುಹೋದ ನಂತರ, ರೈತರು ಈಗ ತಮ್ಮ ಸಾಲವನ್ನು ಏಕೆ ಮನ್ನಾ ಮಾಡಿಲ್ಲ ಎಂದು ಕೇಳುತ್ತಿದ್ದಾರೆ.
ಸಹೋದರ ಸಹೋದರಿಯರೇ,
ಮಹಾರಾಷ್ಟ್ರದ ಕಾಂಗ್ರೆಸ್ ಮತ್ತು ಮಹಾ ಅಘಾಡಿ ಸರ್ಕಾರವು ನೀರಾವರಿ ಸಂಬಂಧಿತ ಅನೇಕ ಯೋಜನೆಗಳನ್ನು ಹೇಗೆ ಸ್ಥಗಿತಗೊಳಿಸಿತು ಎಂಬುದನ್ನು ನಾವು ಮರೆಯಬಾರದು! ಎನ್. ಡಿ. ಎ. ಸರ್ಕಾರ ಅಧಿಕಾರಕ್ಕೆ ಬಂದಾಗ, ಅದು ಈ ದಿಕ್ಕಿನಲ್ಲಿ ಕೆಲಸವನ್ನು ವೇಗಗೊಳಿಸಿತು. ಮಹಾರಾಷ್ಟ್ರ ಸರ್ಕಾರವು ವೈನಗಂಗಾ ಮತ್ತು ನಲ್ಗಂಗಾ ನದಿಗಳನ್ನು ಸಂಪರ್ಕಿಸುವ ಯೋಜನೆಗೆ ಅನುಮೋದನೆ ನೀಡಿದೆ. 90, 000 ಕೋಟಿ ರೂಪಾಯಿಗಳ ಈ ಯೋಜನೆಯು ಅಮರಾವತಿ, ಯವತ್ಮಾಲ್, ಅಕೋಲಾ, ಬುಲ್ಧಾನಾ, ವಾಶಿಮ್, ನಾಗ್ಪುರ ಮತ್ತು ವಾರ್ಧಾದಲ್ಲಿ ನೀರಿನ ಕೊರತೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ಮಹಾರಾಷ್ಟ್ರ ಸರ್ಕಾರವು ಹತ್ತಿ ಮತ್ತು ಸೋಯಾಬೀನ್ ರೈತರಿಗೆ ಆರ್ಥಿಕ ನೆರವು ನೀಡುತ್ತಿದೆ. ಹತ್ತಿ, ಸೋಯಾಬೀನ್ ಬೆಳೆಗೆ ರೈತರ ಖಾತೆಗೆ ತಲಾ 10 ಸಾವಿರ ರೂ.ಗಳನ್ನು ನೀಡಲಾಗುತ್ತಿದೆ. ಇತ್ತೀಚೆಗೆ ಅಮರಾವತಿ ಜವಳಿ ಉದ್ಯಾನವನಕ್ಕೂ ಶಂಕುಸ್ಥಾಪನೆ ನೆರವೇರಿಸಲಾಯಿತು. ಈ ಉದ್ಯಾನವನವು ಹತ್ತಿ ಬೆಳೆಗಾರರಿಗೆ ಬಹಳ ಸಹಾಯ ಮಾಡುತ್ತದೆ.
ಸ್ನೇಹಿತರೇ,
ನಮ್ಮ ಮಹಾರಾಷ್ಟ್ರವು ದೇಶದ ಆರ್ಥಿಕ ಪ್ರಗತಿಯನ್ನು ಮುನ್ನಡೆಸುವ ಅಪಾರ ಸಾಮರ್ಥ್ಯವನ್ನು ಹೊಂದಿದೆ. ಗ್ರಾಮಗಳು, ಬಡವರು, ರೈತರು, ಕಾರ್ಮಿಕರು, ದಲಿತರು ಮತ್ತು ವಂಚಿತರ ಉನ್ನತಿಯ ಅಭಿಯಾನವು ಬಲವಾಗಿ ಮುಂದುವರಿದಾಗ ಮಾತ್ರ ಇದು ಸಂಭವಿಸುತ್ತದೆ. ನೀವೆಲ್ಲರೂ ನಮಗೆ ನಿಮ್ಮ ಆಶೀರ್ವಾದವನ್ನು ನೀಡುತ್ತಲೇ ಇರುತ್ತೀರಿ ಎಂಬ ವಿಶ್ವಾಸ ನನಗಿದೆ. ಒಟ್ಟಾಗಿ, ನಾವು 'ವಿಕಸಿತ ಮಹಾರಾಷ್ಟ್ರ, ವಿಕಸಿತ ಭಾರತ" ಕನಸನ್ನು ನನಸಾಗಿಸುತ್ತೇವೆ. (Developed Maharashtra and Developed India). ಈ ಭರವಸೆಯೊಂದಿಗೆ, ನಾನು ಮತ್ತೊಮ್ಮೆ ನಮ್ಮ ರೈತ ಸ್ನೇಹಿತರಿಗೆ ಮತ್ತು ಬಂಜಾರಾ ಸಮುದಾಯದ ನನ್ನ ಎಲ್ಲಾ ಸಹೋದರ ಸಹೋದರಿಯರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ನನ್ನೊಂದಿಗೆ "ಭಾರತ್ ಮಾತಾ ಕಿ-ಜೈ" ಎಂದು ಹೇಳಿ !
ಭಾರತ್ ಮಾತಾ ಕಿ-ಜೈ!
ಭಾರತ್ ಮಾತಾ ಕಿ-ಜೈ!
ತುಂಬಾ ಧನ್ಯವಾದಗಳು.
ಸೂಚನೆ: ಇದು ಪ್ರಧಾನ ಮಂತ್ರಿಯವರ ಭಾಷಣದ ಭಾವಾನುವಾದವಾಗಿದೆ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಯಿತು.
*****
(Release ID: 2062609)
Visitor Counter : 33
Read this release in:
Odia
,
English
,
Urdu
,
Hindi
,
Marathi
,
Bengali
,
Manipuri
,
Assamese
,
Punjabi
,
Gujarati
,
Tamil
,
Telugu
,
Malayalam