ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಸ್ವಚ್ಛ ಭಾರತ ಅಭಿಯಾನದ 10ನೇ ವರ್ಷಾಚರಣೆಯ ಅಂಗವಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಯುವಜನರೊಂದಿಗೆ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡರು


"ಶಾಲೆಗಳಲ್ಲಿ ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯಗಳನ್ನು ನಿರ್ಮಿಸುವ ಮೂಲಕ ಸ್ವಚ್ಛ ಭಾರತ ಅಭಿಯಾನದೊಂದಿಗೆ ಸ್ವಚ್ಛತೆಯತ್ತ ಮೊದಲ ಹೆಜ್ಜೆ"

"ಹೆಣ್ಣು ಮಕ್ಕಳು ಹುಟ್ಟಿದ ಕೂಡಲೇ ಪಿಎಂ ಸುಕನ್ಯಾ ಸಮೃದ್ಧಿ ಖಾತೆಯನ್ನು ತೆರೆಯಬಹುದು"

"ನಿಮ್ಮ ಸಮುದಾಯದಲ್ಲಿ ಪ್ಲಾಸ್ಟಿಕ್ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಿ"

"ಗಾಂಧೀಜಿಯವರು ಸ್ವಾತಂತ್ರ್ಯಕ್ಕಿಂತ ಸ್ವಚ್ಛತೆಯನ್ನು ಆಯ್ಕೆ ಮಾಡಿಕೊಂಡರು ಏಕೆಂದರೆ ಅವರು ಎಲ್ಲಕ್ಕಿಂತ ಹೆಚ್ಚಾಗಿ ಸ್ವಚ್ಛತೆಯನ್ನು ಗೌರವಿಸಿದರು"

"ಪ್ರತಿಯೊಬ್ಬ ನಾಗರಿಕನು ತನ್ನ ಸುತ್ತಮುತ್ತಲಿನ ಪ್ರದೇಶಗಳನ್ನು ಅಭ್ಯಾಸದಂಗವಾಗಿ  ಸ್ವಚ್ಛವಾಗಿಡಲು ಪ್ರತಿಜ್ಞೆ ಮಾಡಬೇಕು ಮತ್ತು ಇದು ಒಂದು ಕಾರ್ಯಕ್ರಮವಾಗಿರುವುದರಿಂದ ಅಲ್ಲ"

Posted On: 02 OCT 2024 4:40PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ದಿಲ್ಲಿಯಲ್ಲಿ ಶಾಲಾ ಮಕ್ಕಳೊಂದಿಗೆ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡು ಸ್ವಚ್ಛ ಭಾರತ ಅಭಿಯಾನದ 10ನೇ ವರ್ಷಾಚರಣೆಯ ಅಂಗವಾಗಿ ಅವರೊಂದಿಗೆ ಸಂವಾದ ನಡೆಸಿದರು.

ಸ್ವಚ್ಛತೆಯ ಪ್ರಯೋಜನಗಳ ಬಗ್ಗೆ ಪ್ರಧಾನಮಂತ್ರಿಯವರು ವಿಚಾರಿಸಿದಾಗ, ವಿದ್ಯಾರ್ಥಿಗಳು ಕಾಯಿಲೆಗಳಿಂದ ದೂರವಿರಲು ಮತ್ತು ಸ್ವಚ್ಛ ಹಾಗು ಆರೋಗ್ಯಕರ ಭಾರತದ ಬಗ್ಗೆ ಜಾಗೃತಿ ಮೂಡಿಸುವ ಚಿಂತನಾಪರ ದೃಷ್ಟಿಕೋನವನ್ನು ಉಲ್ಲೇಖಿಸಿದರು. ಶೌಚಾಲಯಗಳ ಅನುಪಸ್ಥಿತಿಯಿಂದಾಗಿ ರೋಗಗಳು ಹರಡುತ್ತಿವೆ ಎಂದು ವಿದ್ಯಾರ್ಥಿಯೊಬ್ಬರು ಉಲ್ಲೇಖಿಸಿದರು. ಈ ಹಿಂದೆ ಹೆಚ್ಚಿನ ಜನರು ಬಯಲಿನಲ್ಲಿ ಮಲವಿಸರ್ಜನೆ ಮಾಡುವಂತಹ ಸ್ಥಿತಿ ಇತ್ತು, ಇದು ಹಲವಾರು ರೋಗಗಳು ವ್ಯಾಪಕವಾಗಿ ಹರಡಲು ಕಾರಣವಾಯಿತು ಮತ್ತು ಮಹಿಳೆಯರಿಗೆ ಅತ್ಯಂತ ಅನಾನುಕೂಲಕರವಾಗಿತ್ತು ಎಂದು ಶ್ರೀ ಮೋದಿ ಮಾಹಿತಿ ನೀಡಿದರು. ಸ್ವಚ್ಛ ಭಾರತ ಅಭಿಯಾನದೊಂದಿಗೆ ಮೊದಲ ಹೆಜ್ಜೆಗಳನ್ನು ತೆಗೆದುಕೊಳ್ಳಲಾಗಿದೆ, ಇದರ ಮೂಲಕ ಶಾಲೆಗಳಲ್ಲಿ ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯಗಳನ್ನು ನಿರ್ಮಿಸಲಾಗಿದೆ, ಇದು ಶಾಲೆಯಿಂದ ಹೊರಗುಳಿಯುವ ಅವರ ಪ್ರಮಾಣವನ್ನು ತೀವ್ರವಾಗಿ ಕಡಿಮೆ ಮಾಡಲು ಕಾರಣವಾಗಿದೆ ಎಂದೂ ಪ್ರಧಾನಿ ಮಾಹಿತಿ ನೀಡಿದರು.

ಮಹಾತ್ಮಾ ಗಾಂಧೀಜಿ  ಮತ್ತು ಲಾಲ್ ಬಹದ್ದೂರ್ ಶಾಸ್ತ್ರೀಜಿ ಅವರ ಜನ್ಮ ದಿನಾಚರಣೆಯ ಇಂದಿನ ಸಂದರ್ಭದ ಬಗ್ಗೆಯೂ ಪ್ರಧಾನಿ ಚರ್ಚಿಸಿದರು. ಯೋಗದಲ್ಲಿ ತೊಡಗಿರುವ ಯುವಜನರ ಸಂಖ್ಯೆ ಹೆಚ್ಚುತ್ತಿರುವುದಕ್ಕೆ ಶ್ರೀ ಮೋದಿ ತೃಪ್ತಿ ವ್ಯಕ್ತಪಡಿಸಿದರು ಮತ್ತು ಆಸನದ ಪ್ರಯೋಜನಗಳ ಬಗ್ಗೆಯೂ ಪ್ರಸ್ತಾಪಿಸಿದರು. ಕೆಲವು ಮಕ್ಕಳು ಪ್ರಧಾನಿಯವರೆದುರು ಕೆಲವು ಆಸನಗಳನ್ನು ಪ್ರದರ್ಶಿಸಿದರು ಮತ್ತು ಅದು ಭಾರಿ ಚಪ್ಪಾಳೆ ಗಳಿಸಿತು. ಉತ್ತಮ ಪೌಷ್ಠಿಕಾಂಶದ ಅಗತ್ಯವನ್ನೂ ಅವರು ಒತ್ತಿ ಹೇಳಿದರು. ಪಿಎಂ-ಸುಕನ್ಯಾ ಯೋಜನೆಯ ಬಗ್ಗೆ ಪ್ರಧಾನಿಯವರು ವಿಚಾರಿಸಿದ ನಂತರ, ವಿದ್ಯಾರ್ಥಿಯೊಬ್ಬರು ಯೋಜನೆಯ ಬಗ್ಗೆ ವಿವರಿಸಿದರು ಮತ್ತು ಹುಡುಗಿಯರು ವಯಸ್ಕರಾದಾಗ ಆರ್ಥಿಕವಾಗಿ ಸಹಾಯ ಮಾಡಲು ಬ್ಯಾಂಕ್ ಖಾತೆಯನ್ನು ತೆರೆಯಲು ಇದು ಅನುವು ಮಾಡಿಕೊಡುತ್ತದೆ ಎಂದು ಹೇಳಿದರು. ಹೆಣ್ಣು ಮಕ್ಕಳು ಜನಿಸಿದ ಕೂಡಲೇ ಪಿಎಂ ಸುಕನ್ಯಾ ಸಮೃದ್ಧಿ ಖಾತೆಯನ್ನು ತೆರೆಯಬಹುದು ಎಂದು ವಿವರಿಸಿದ ಪ್ರಧಾನಿ, ಪ್ರತಿ ವರ್ಷ 1000 ರೂ.ಗಳನ್ನು ಠೇವಣಿ ಇಡುವಂತೆ ಸಲಹೆ ನೀಡಿದರು. ಇದನ್ನು ಬದುಕಿನ ಮುಂದಿನ ಅವಧಿಯಲ್ಲಿ ಶಿಕ್ಷಣಕ್ಕೆ ಅಥವಾ ಮದುವೆಗೆ ಬಳಸಬಹುದೆಂದರು. ಸುಮಾರು 32,000 ರಿಂದ 35,000 ರೂ.ಗಳ ಬಡ್ಡಿಯೊಂದಿಗೆ ಅದೇ ಠೇವಣಿ 18 ವರ್ಷಗಳಲ್ಲಿ 50,000 ರೂ.ಗೆ ಏರುತ್ತದೆ ಎಂದು ಅವರು ಮಾಹಿತಿ ನೀಡಿದರು. ಬಾಲಕಿಯರು ಶೇಕಡಾ 8.2 ರಷ್ಟು ಬಡ್ಡಿಯನ್ನು ಪಡೆಯುತ್ತಾರೆ ಎಂದು ಪಿಎಂ ಮೋದಿ ತಿಳಿಸಿದರು.

ಪ್ರಧಾನಮಂತ್ರಿಯವರು ಸ್ವಚ್ಛತೆಯ ಬಗ್ಗೆ ಗಮನ ಹರಿಸಿದ ಮಕ್ಕಳ ಕೃತಿಗಳನ್ನು ಒಳಗೊಂಡ ವಸ್ತುಪ್ರದರ್ಶನವನ್ನು ವೀಕ್ಷಿಸಿದರು. ಗುಜರಾತ್ ಬಂಜರು ಪ್ರದೇಶದ ಶಾಲೆಯೊಂದರ ಅನುಭವವನ್ನು ಹಂಚಿಕೊಂಡ ಅವರು, ಅಲ್ಲಿ ಪ್ರತಿ ವಿದ್ಯಾರ್ಥಿಗೆ ಒಂದು ಮರವನ್ನು ನಿಯೋಜಿಸಲಾಯಿತು ಮತ್ತು ಅವರ ಅಡುಗೆಮನೆಗಳಿಂದ ನೀರನ್ನು ತರುವಂತೆ ಮತ್ತು ಆ ಮರಕ್ಕೆ ಪ್ರತಿದಿನ ಅದಕ್ಕೆ ನೀರು ಹಾಕುವಂತೆ ಹೇಳಲಾಯಿತು. 5 ವರ್ಷಗಳ ನಂತರ ಇದೇ ಶಾಲೆಗೆ ತಾವು ಭೇಟಿ ನೀಡಿದಾಗ ಹಸಿರಿನ ರೂಪದಲ್ಲಿ ಅಭೂತಪೂರ್ವ ಪರಿವರ್ತನೆಗೆ ಸಾಕ್ಷಿಯಾಗುವಂತಾಯಿತು  ಎಂದು ಪ್ರಧಾನಿ ಹೇಳಿದರು. ಮಿಶ್ರಗೊಬ್ಬರವನ್ನು (ಕಂಪೋಸ್ಟ್)  ತಯಾರಿಸಲು ತ್ಯಾಜ್ಯ ವಿಂಗಡಣೆಯ ಪ್ರಯೋಜನಗಳ ಬಗ್ಗೆಯೂ ಪ್ರಧಾನಮಂತ್ರಿಯವರು ಬೆಳಕು ಚೆಲ್ಲಿದರು ಮತ್ತು ಮನೆಯಲ್ಲಿ ಅಭ್ಯಾಸವನ್ನು ಅನುಸರಿಸುವಂತೆ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು. ತಮ್ಮ ಸಮುದಾಯದಲ್ಲಿ ಪ್ಲಾಸ್ಟಿಕ್ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಅದನ್ನು ಬಟ್ಟೆ ಚೀಲದೊಂದಿಗೆ ಬದಲಾಯಿಸಲು ಅವರು ಸಲಹೆ ನೀಡಿದರು.

ಮಕ್ಕಳೊಂದಿಗೆ ಸಂವಾದ ಮುಂದುವರೆಸಿದ ಶ್ರೀ ಮೋದಿ ಅವರು, ಪ್ರದರ್ಶನ ಫಲಕದಲ್ಲಿದ್ದ ಗಾಂಧೀಜಿಯವರ ಕನ್ನಡಕವನ್ನು ತೋರಿಸಿದರು ಮತ್ತು ಸ್ವಚ್ಛತೆಯನ್ನು ಕಾಪಾಡಿಕೊಳ್ಳಲಾಗಿದೆಯೇ ಅಥವಾ ಇಲ್ಲವೇ ಎಂಬುದರ ಬಗ್ಗೆ ಗಾಂಧೀಜಿ ನಿಗಾ ವಹಿಸುತ್ತಾರೆ ಎಂದು ಮಕ್ಕಳಿಗೆ ಹೇಳಿದರು. ಗಾಂಧೀಜಿಯವರು ತಮ್ಮ ಜೀವನದುದ್ದಕ್ಕೂ ಸ್ವಚ್ಛತೆಗಾಗಿ ಶ್ರಮಿಸಿದರು ಎಂದರು. ಒಂದು ಕಥೆಯನ್ನು ಹಂಚಿಕೊಂಡ ಶ್ರೀ ಮೋದಿ ಅವರು, ಗಾಂಧೀಜಿಯವರಿಗೆ ಸ್ವಾತಂತ್ರ್ಯ ಮತ್ತು ಸ್ವಚ್ಛತೆಯ ನಡುವೆ ಆಯ್ಕೆಯನ್ನು ನೀಡಿದಾಗ, ಗಾಂಧೀಜಿಯವರು ಸ್ವಾತಂತ್ರ್ಯಕ್ಕಿಂತ ಸ್ವಚ್ಛತೆಯನ್ನು ಆಯ್ಕೆ ಮಾಡಿದರು, ಏಕೆಂದರೆ ಅವರು ಎಲ್ಲಕ್ಕಿಂತ ಹೆಚ್ಚಾಗಿ ಸ್ವಚ್ಛತೆಗೆ ಬೆಲೆ ನೀಡಿದರು ಎಂದು ಹೇಳಿದರು. ಸ್ವಚ್ಛತೆಯು ಒಂದು ಕಾರ್ಯಕ್ರಮವಾಗಬೇಕೇ ಅಥವಾ ಅಭ್ಯಾಸವಾಗಬೇಕೇ ಎಂದು ವಿದ್ಯಾರ್ಥಿಗಳನ್ನು ವಿಚಾರಿಸಿದಾಗ, ಮಕ್ಕಳು ಒಗ್ಗಟ್ಟಿನಿಂದ ಸ್ವಚ್ಛತೆಯು ಅಭ್ಯಾಸವಾಗಿರಬೇಕು ಎಂದು ಉತ್ತರಿಸಿದರು. ಸ್ವಚ್ಛತೆಯು ಒಬ್ಬ ವ್ಯಕ್ತಿಯ ಅಥವಾ ಒಂದು ಕುಟುಂಬದ ಅಥವಾ ಒಂದು ಬಾರಿಯ ಕಾರ್ಯಕ್ರಮದ ಜವಾಬ್ದಾರಿಯಲ್ಲ, ಆದರೆ ಒಬ್ಬ ವ್ಯಕ್ತಿಯು ಜೀವಂತವಾಗಿರುವವರೆಗೂ ಇದು ನಿರಂತರ ಪ್ರಕ್ರಿಯೆಯಾಗಿದೆ ಎಂದು ಅವರು ಮಕ್ಕಳಿಗೆ ತಿಳಿಸಿದರು. "ನಾನು ನನ್ನ ಸುತ್ತಮುತ್ತಲಿನ ಪ್ರದೇಶಗಳನ್ನು ಕೊಳಕು ಮಾಡುವುದಿಲ್ಲ” ಎಂಬ ಮಂತ್ರವನ್ನು ದೇಶದ ಪ್ರತಿಯೊಬ್ಬ ನಾಗರಿಕನು ಅಳವಡಿಸಿಕೊಳ್ಳಬೇಕು ಎಂದು ಅವರು ವಿದ್ಯಾರ್ಥಿಗಳಿಗೆ ತಿಳಿಸಿದರು. ಪ್ರಧಾನಮಂತ್ರಿಯವರು ಮಕ್ಕಳಿಗೆ ಸ್ವಚ್ಛತೆಯ ಪ್ರತಿಜ್ಞೆ ಮಾಡುವಂತೆ ಹೇಳಿದರು.

 

 

*****


(Release ID: 2061269) Visitor Counter : 34