ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav g20-india-2023

ಮಾನ್ಯ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ದಿನಾಂಕ 29.09.2024 ರಂದು ಮಾಡಿದ ‘ಮನ್ ಕಿ ಬಾತ್’ – 114ನೇಸಂಚಿಕೆಯ ಕನ್ನಡ ಅವತರಣಿಕೆ

Posted On: 29 SEP 2024 12:09PM by PIB Bengaluru

ನನ್ನ ಪ್ರೀತಿಯ ದೇಶವಾಸಿಗಳೆ ನಮಸ್ಕಾರ. ಮತ್ತೊಮ್ಮೆ ನಾವೆಲ್ಲರೂ  'ಮನದ ಮಾತಿನ' ಮೂಲಕ ಒಗ್ಗೂಡುವ ಅವಕಾಶ ಲಭಿಸಿದೆ. ಇಂದಿನ ಈ ಕಂತು ನನ್ನನ್ನು ಬಹಳ ಭಾವುಕನನ್ನಾಗಿಸಲಿದೆ, ಅನೇಕ ಹಳೆಯ ನೆನಪುಗಳು ನನ್ನನ್ನು ಮುತ್ತಿವೆ - ಕಾರಣ ಏನೆಂದರೆ 'ಮನದ ಮಾತಿನ' ನಮ್ಮ ಈ ಪಯಣಕ್ಕೆ 10 ವರ್ಷಗಳು ತುಂಬುತ್ತಿದೆ. 10 ವರ್ಷಗಳ ಹಿಂದೆ ಅಕ್ಟೋಬರ್ 3 ರಂದು ವಿಜಯದಶಮಿಯ ದಿನದಂದು  'ಮನದ ಮಾತು’ ಪ್ರಾರಂಭವಾಗಿತ್ತು ಮತ್ತು ಈ ವರ್ಷ ಅಕ್ಟೋಬರ್ 3 ರಂದು 'ಮನದ ಮಾತಿಗೆ ' 10 ವರ್ಷತುಂಬುವ ಸಂದರ್ಭ ನವರಾತ್ರಿಯ ಮೊದಲ ದಿನವಾಗಿದೆ. 'ಮನದ ಮಾತಿನ’ ಈ ಸುದೀರ್ಘ ಪಯಣದಲ್ಲಿ ನಾನು ಎಂದೂ ಮರೆಯಲಾಗದ ಇಂತಹ ಹಲವಾರು ಮೈಲಿಗಲ್ಲುಗಳಿವೆ, ನಮ್ಮ ಈ ಪಯಣದಲ್ಲಿ ನಿರಂತರ ಸಹಯೋಗವನ್ನು ನೀಡಿದಂತಹ ' ಮನದ ಮಾತಿನ'  ಕೋಟ್ಯಂತರ ಶ್ರೋತೃ ಬಾಂಧವರಿದ್ದಾರೆ. ದೇಶದ ಮೂಲೆ ಮೂಲೆಗಳಿಂದ ಅವರು ಮಾಹಿತಿಯನ್ನು ಒದಗಿಸಿದರು. ಮನದ ಮಾತಿನ ಶ್ರೋತೃಗಳೇ ಈ ಕಾರ್ಯಕ್ರಮದ ನಿಜವಾದ ರೂವಾರಿಗಳು.   ಸಾಮಾನ್ಯವಾಗಿ ಎಲ್ಲಿಯವರೆಗೆ ರೋಚಕ ವಿಷಯಗಳನ್ನು ಮಾತನಾಡುವುದಿಲ್ಲವೋ, ನಕಾರಾತ್ಮಕ ವಿಷಯಗಳನ್ನು ಮಾತನಾಡುವುದಿಲ್ಲವೋ ಅಲ್ಲಿವರೆಗೆ ಅದು ಹೆಚ್ಚಿನ ಗಮನ ಸೆಳೆಯುವುದಿಲ್ಲ ಎನ್ನಲಾಗುತ್ತದೆ. ಆದರೆ ಮನದ ಮಾತು ದೇಶದ ಜನರು ಸಕಾರಾತ್ಮಕ ಮಾಹಿತಿಗಾಗಿ , ಎಷ್ಟು ಉತ್ಸುಕರಾಗಿದ್ದಾರೆ ಎಂಬುದನ್ನು ಸಾಬೀತುಪಡಿಸಿದೆ.  ಸಕಾರಾತ್ಮಕ ಮಾತು, ಪ್ರೇರಣಾತ್ಮಕ ಉದಾಹರಣೆಗಳು,  ಸ್ಫೂರ್ತಿದಾಯಕ ಕಥೆಗಳು ಜನರಿಗೆ ಬಹಳ ಇಷ್ಟವಾಗುತ್ತವೆ. ಕೇವಲ ಮಳೆಹನಿಗಳನ್ನು ಮಾತ್ರ ಕುಡಿಯುವಂತಹ ಚಾತಕ ಪಕ್ಷಿಯಂತೆ ಜನರು ದೇಶದ ಸೌಲಭ್ಯಗಳ ಬಗ್ಗೆ, ಜನರ ಸಾಮೂಹಿಕ ಸಾಧನೆಗಳ ಬಗ್ಗೆ ಮನದ ಮಾತಿನ ಮೂಲಕ ಎಷ್ಟು ಹೆಮ್ಮೆಯಿಂದ ಕೇಳುತ್ತಾರೆ.  ಮನದ ಮಾತಿನ 10 ವರ್ಷಗಳ ಪಯಣ ಎಷ್ಟು ಅದ್ಭುತವಾದ ಹಾರವನ್ನು ಸಿದ್ಧಗೊಳಿಸಿದೆ ಎಂದರೆ ಪ್ರತಿ ಸಂಚಿಕೆಯೊಂದಿಗೆ ಹೊಸ ಯಶೋಗಾಥೆಗಳು, ಹೊಸ ಕೀರ್ತಿವಂತರು ಮತ್ತು ಹೊಸ ವ್ಯಕ್ತಿತ್ವಗಳನ್ನು ಸೇರಿಸುತ್ತಾ ಸಾಗಿದೆ. ನಮ್ಮ ಸಮಾಜದಲ್ಲಿ ಸಾಮಾಜಿಕ ಹಿತದೃಷ್ಟಿಯ ಭಾವನೆಯಿಂದ ಯಾವುದೇ ಕೆಲಸ ಮಾಡಿದರೂ ಅವರಿಗೆ 'ಮನದ ಮಾತಿನ' ಮೂಲಕ ಗೌರವ ಲಭಿಸುತ್ತದೆ. 'ಮನದ ಮಾತಿ'ಗೆ ಬಂದ ಪತ್ರಗಳನ್ನು ನಾನು ಓದಿದಾಗ ನನ್ನ ಮನವೂ ಹೆಮ್ಮೆಯಿಂದ ಬೀಗುತ್ತದೆ.  ನಮ್ಮ ದೇಶದಲ್ಲಿ ಅದೆಷ್ಟೋ ಪ್ರತಿಭಾವಂತರಿದ್ದಾರೆ, ಅವರು ತಮ್ಮ ಇಡೀ ಜೀವನವನ್ನು ಜನರ ನಿಸ್ವಾರ್ಥ ಸೇವೆಗಾಗಿ ಮುಡಿಪಾಗಿಟ್ಟಿದ್ದಾರೆ.  ಅವರ ಬಗ್ಗೆ ತಿಳಿಯುವುದು ನನ್ನಲ್ಲಿ ಹೊಸ ಶಕ್ತಿಯನ್ನು ತುಂಬುತ್ತದೆ.  'ಮನದ ಮಾತಿನ' ಈ ಸಂಪೂರ್ಣ ಪ್ರಕ್ರಿಯೆಯು ನನಗೆ ದೇವಾಲಯಕ್ಕೆ ತೆರಳಿ ದೇವರ ದರ್ಶನ ಪಡೆಯುವಂತಿದೆ. ಮನದ ಮಾತಿನ ಪ್ರತಿ ವಿಷಯ, ಪ್ರತಿ ಘಟನೆ, ಪ್ರತಿ ಪತ್ರವನ್ನು ನೆನಪಿಸಿಕೊಂಡಾಗ, ನನಗೆ ಭಗವಂತನ ರೂಪದಲ್ಲಿರುವ ಜನತಾ ಜನಾರ್ದನನ ದರ್ಶನ ಪಡೆದಂತೆ ಭಾಸವಾಗುತ್ತದೆ.

ಸ್ನೇಹಿತರೇ, ಇಂದು ನಾನು ದೂರದರ್ಶನ, ಪ್ರಸಾರ ಭಾರತಿ ಮತ್ತು ಆಲ್ ಇಂಡಿಯಾ ರೇಡಿಯೊಗೆ ಸಂಬಂಧಿಸಿದ ಎಲ್ಲ ಜನರನ್ನು ಶ್ಲಾಘಿಸಲು ಬಯಸುತ್ತೇನೆ, ಅವರ ಅವಿರತ ಪ್ರಯತ್ನದಿಂದಾಗಿ, 'ಮನದ ಮಾತು' ಈ ಪ್ರಮುಖ ಘಟ್ಟವನ್ನು ತಲುಪಿದೆ.  ನಿರಂತರ ಇದರ ಪ್ರಸಾರವನ್ನು ಬಿತ್ತರಗೊಳಿಸಿದ ವಿವಿಧ ಟಿವಿ ಚಾನೆಲ್‌ಗಳು, ಪ್ರಾದೇಶಿಕ ಟಿವಿ ಚಾನೆಲ್‌ಗಳಿಗೂ ನಾನು ಆಭಾರಿಯಾಗಿದ್ದೇನೆ.  'ಮನ ಮಾತಿನ' ಮೂಲಕ ನಾವು ಎತ್ತಿದ ಸಮಸ್ಯೆಗಳ ಕುರಿತು ವಿವಿಧ ಟಿವಿ ಚಾನೆಲ್‌ಗಳು ಪ್ರಚಾರವನ್ನು ಮಾಡಿವೆ. 'ಮನ ಮಾತನ್ನು ಮನೆ ಮನೆಗೂ ತಲುಪಿಸಿದ ಮುದ್ರಣ ಮಾಧ್ಯಮಕ್ಕೂ ನಾನು ಕೃತಜ್ಞನಾಗಿದ್ದೇನೆ. 'ಮನ ಮಾತಿನ ಕುರಿತು ಅನೇಕ ಕಾರ್ಯಕ್ರಮಗಳನ್ನು ರೂಪಿಸಿದ ಯುಟ್ಯೂಬರ್ಸ್ ಗಳಿಗೂ ಧನ್ಯವಾದ ಹೇಳಲು ಬಯಸುತ್ತೇನೆ. ಈ ಕಾರ್ಯಕ್ರಮವನ್ನು ದೇಶದ 22 ಭಾಷೆಗಳಲ್ಲಿ ಮತ್ತು 12 ವಿದೇಶಿ ಭಾಷೆಗಳಲ್ಲಿ ಕೇಳಬಹುದು. ಜನರು 'ಮನದ ಮಾತನ್ನು ತಮ್ಮ ಸ್ಥಳೀಯ ಭಾಷೆಯಲ್ಲಿ ಕೇಳಿರುವುದಾಗಿ ತಿಳಿಸಿದಾಗ ನನಗೆ ಸಂತೋಷವಾಗುತ್ತದೆ. 'ಮನದ ಮಾತು' ಕಾರ್ಯಕ್ರಮವನ್ನು ಆಧರಿಸಿ ರಸಪ್ರಶ್ನೆ ಸ್ಪರ್ಧೆ ನಡೆಯುತ್ತಿದೆ ಎಂದು ನಿಮ್ಮಲ್ಲಿ ಹಲವರಿಗೆ ತಿಳಿದಿರಬಹುದು, ಇದರಲ್ಲಿ ಯಾರಾದರೂ ಭಾಗವಹಿಸಬಹುದು. Mygov.in ಗೆ ಭೇಟಿ ನೀಡುವ ಮೂಲಕ ನೀವು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು ಮತ್ತು ಬಹುಮಾನಗಳನ್ನು ಗೆಲ್ಲಬಹುದು. ಇಂದು ಈ ಮಹತ್ವಪೂರ್ಣ ಘಟ್ಟವನ್ನು ತಲುಪಿದ ಸಂದರ್ಭದಲ್ಲಿ  ಮತ್ತೊಮ್ಮೆ ನಿಮ್ಮೆಲ್ಲರ ಆಶೀರ್ವಾದವನ್ನು ಕೋರುತ್ತೇನೆ. ಶುದ್ಧ ಹೃದಯ ಮತ್ತು ಸಂಪೂರ್ಣ ಸಮರ್ಪಣೆಯೊಂದಿಗೆ, ನಾನು ಭಾರತದ ಜನರ ಶ್ರೇಷ್ಠತೆಯ ಗೀತೆಯನ್ನು ಮುಂದುವರಿಸಬಯಸುತ್ತೇನೆ. ದೇಶದ  ಸಂಘಟನಾ ಶಕ್ತಿಯನ್ನು ನಾವೆಲ್ಲರೂ ಸೇರಿ ಹೀಗೆ, ಇದೇ ರೀತಿ, ಆಚರಿಸುತ್ತಲೇ ಇರೋಣ – ಇದೇ ಭಗವಂತನಲ್ಲಿ ಮತ್ತು ಜನತಾ ಜನಾರ್ಧನರಲ್ಲಿ ನನ್ನ ಪ್ರಾರ್ಥನೆಯಾಗಿದೆ.    

ನನ್ನ ಪ್ರಿಯ ದೇಶವಾಸಿಗಳೇ, ಕಳೆದ ಕೆಲವು ವಾರಗಳಿಂದ ದೇಶದ ವಿವಿಧ ಭಾಗಗಳಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಮಳೆಗಾಲದ ಈ ಋತು ಜಲಸಂರಕ್ಷಣೆ ಮತ್ತು ನೀರಿನ ಉಳಿತಾಯ ಎಷ್ಟು ಮಹತ್ವಪೂರ್ಣವಾದುದು ಎಂದು ನಮಗೆ ನೆನಪಿಸುತ್ತದೆ. ಮಳೆಗಾಲದಲ್ಲಿ ಸಂರಕ್ಷಣೆ ಮಾಡಿದ ನೀರು ಬಿಕ್ಕಟ್ಟಿನ ಸ್ಥಿತಿಯಲ್ಲಿ ಬಹಳ ಸಹಾಯಕಾರಿಯಾಗುತ್ತದೆ, ಮತ್ತು ಇದೇ 'Catch the Rain' ನಂತಹ ಅಭಿಯಾನಕ್ಕೆ ಉತ್ತೇಜನವಾಗುತ್ತದೆ. ಜಲಸಂರಕ್ಷಣೆ ಕುರಿತು ಕೆಲವು ಜನರು ಮುಂದಡಿಯಿಡುತ್ತಿರುವುದನ್ನು ಕಂಡು ನನಗೆ ಸಂತೋಷವಾಗುತ್ತದೆ. ಅಂತಹ ಒಂದು ಪ್ರಯತ್ನವು ಉತ್ತರಪ್ರದೇಶದ ಝಾನ್ಸಿಯಲ್ಲಿ ಕಂಡುಬಂದಿದೆ. 'ಝಾನ್ಸಿ' ಬುಂದೇಲ್‌ಖಂಡ್‌ನಲ್ಲಿದ್ದು, ನೀರಿನ ಕೊರತೆಯಿಂದಲೇ ಗುರುತಿಸಲ್ಪಡುತ್ತದೆ ಎಂದು ನಿಮಗೆ ತಿಳಿದಿದೆ.  ಝಾನ್ಸಿಯಲ್ಲಿ, ಕೆಲವು ಮಹಿಳೆಯರು ಘುರಾರಿ ನದಿಗೆ ಮರು  ಜೀವ ನೀಡಿದ್ದಾರೆ. ಈ ಮಹಿಳೆಯರು ಸ್ವಸಹಾಯ ಗುಂಪಿಗೆ ಸೇರಿದವರಾಗಿದ್ದಾರೆ. ಅಲ್ಲದೆ ಜಲ ಸ್ನೇಹಿತೆಯರಾಗುವ ಮೂಲಕ ಈ ಅಭಿಯಾನವನ್ನು ಮುನ್ನಡೆಸಿದ್ದಾರೆ. ಬತ್ತಿ ಹೋಗುತ್ತಿದ್ದ ಘುರಾರಿ ನದಿಯನ್ನು ಈ ಮಹಿಳೆಯರು ಸಂರಕ್ಷಿಸಿದ ರೀತಿಯನ್ನು ಯಾರೂ ಊಹಿಸಲು ಸಾಧ್ಯವಿಲ್ಲ. ಈ ನೀರಿನ ಗೆಳತಿಯರು ಗೋಣಿ ಚೀಲಗಳಲ್ಲಿ ಮರಳನ್ನು ತುಂಬಿ ಚೆಕ್ ಡ್ಯಾಂ ಸಿದ್ಧಪಡಿಸಿದರು. ಮಳೆ ನೀರು ಪೋಲಾಗದಂತೆ ತಡೆದರು. ನದಿಯನ್ನು ನೀರಿನಿಂದ ತುಂಬಿ ತುಳುಕುವಂತೆ ಮಾಡಿದರು. ಈ ಮಹಿಳೆಯರು ನೂರಾರು ಜಲಾಶಯಗಳ ನಿರ್ಮಾಣ ಮತ್ತು ಪುನರುಜ್ಜೀವನ ಕಾರ್ಯದಲ್ಲಿಯೂ ಸಹಾಯ ಹಸ್ತ ಚಾಚಿದ್ದಾರೆ.  ಇದರಿಂದ ಈ ಭಾಗದ ಜನರ ನೀರಿನ ಸಮಸ್ಯೆ ನೀಗಿತು ಮಾತ್ರವಲ್ಲ, ಅವರ ಮುಖದಲ್ಲಿ ಸಂತೋಷವೂ ಅರಳಿತು.  

ಸ್ನೇಹಿತರೇ, ಕೆಲವು ಸ್ಥಳಗಳಲ್ಲಿ ಮಹಿಳಾ ಶಕ್ತಿ ಜಲ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಜಲಶಕ್ತಿ - ನಾರಿಶಕ್ತಿಗೆ ಪುಷ್ಟಿ ನೀಡುತ್ತದೆ.  ಮಧ್ಯಪ್ರದೇಶದ 2 ಬಹುದೊಡ್ಡ ಪ್ರೇರಣಾದಾಯಕ ಪ್ರಯತ್ನಗಳ ಬಗ್ಗೆ ತಿಳಿದುಬಂದಿದೆ. ಡಿಂಡೌರಿಯ  ರಾಯಪುರಾ ಗ್ರಾಮದಲ್ಲಿ ಒಂದು ದೊಡ್ಡ ಕೊಳದ ನಿರ್ಮಾಣದಿಂದ ಅಂತರ್ಜಲದ ಮಟ್ಟವು ಗಣನೀಯವಾಗಿ ಹೆಚ್ಚಿದೆ. ಇದರ ಲಾಭ ಈ ಗ್ರಾಮದ ಮಹಿಳೆಯರಿಗೆ ಲಭಿಸಿದೆ. ಇಲ್ಲಿಯ “ಶಾರದಾ ಆಜೀವಿಕಾ ಸ್ವಯಂ ಸಹಾಯತಾ ಸಮೂಹ”ದ ಮಹಿಳೆಯರಿಗೆ ಮೀನು ಸಾಕಣೆಯ ಹೊಸ ಉದ್ಯೋಗವೂ ಲಭಿಸಿದೆ. ಈ ಮಹಿಳೆಯರು ಫಿಶ್ ಪಾರ್ಲರ್    ಕೂಡಾ ಆರಂಭಿಸಿದ್ದಾರೆ. ಇಲ್ಲಿ ಆಗುವ ಮೀನು ಮಾರಾಟದಿಂದ ಅವರ ಆದಾಯವೂ ಹೆಚ್ಚುತ್ತಿದೆ. ಮಧ್ಯಪ್ರದೇಶದ ಛತ್ತರ್‌ಪುರದ ಮಹಿಳೆಯರ ಪ್ರಯತ್ನವೂ ಬಹಳ ಶ್ಲಾಘನೀಯ. ಇಲ್ಲಿನ ಖೋಪ್ ಗ್ರಾಮದ ದೊಡ್ಡ ಕೊಳ ಬತ್ತಲು ಆರಂಭಿಸಿದಾಗ ಅದನ್ನು ಪುನಶ್ಚೇತನಗೊಳಿಸಲು ನಿರ್ಧರಿಸಿದರು. ‘ಹರಿ ಬಗಿಯಾ ಸ್ವಸಹಾಯ ಸಂಘದ’ ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಹೂಳು ತೆಗೆದರು. ಈ ಹೂಳು ಮಣ್ಣನ್ನು ಬಂಜರು ಭೂಮಿಯಲ್ಲಿ ಹಣ್ಣಿನ ವನವನ್ನು ಸಿದ್ಧಗೊಳಿಸಲು ಬಳಸಿದರು. ಈ ಮಹಿಳೆಯರ ಪರಿಶ್ರಮದಿಂದ ಕೆರೆಯಲ್ಲಿ ಸಾಕಷ್ಟು ನೀರು ತುಂಬಿದ್ದು ಮಾತ್ರವಲ್ಲದೆ ಬೆಳೆ ಇಳುವರಿಯೂ ಗಣನೀಯವಾಗಿ ಹೆಚ್ಚಿದೆ. ದೇಶದ ಮೂಲೆ ಮೂಲೆಗಳಲ್ಲಿ ನಡೆಯುತ್ತಿರುವ ಇಂತಹ 'ಜಲ ಸಂರಕ್ಷಣೆ' ಪ್ರಯತ್ನಗಳು ನೀರಿನ ಬಿಕ್ಕಟ್ಟನ್ನು ಎದುರಿಸಲು ಬಹಳ ಸಹಾಯಕವಾಗಲಿವೆ. ನಿಮ್ಮ ಸುತ್ತಮುತ್ತ ನಡೆಯುವ ಇಂತಹ ಪ್ರಯತ್ನಗಳಿಗೆ ನೀವೂ ಖಂಡಿತಾ ಕೈಜೋಡಿಸುತ್ತೀರಿ ಎಂಬ ಸಂಪೂರ್ಣ ವಿಶ್ವಾಸ ನನಗಿದೆ.

ನನ್ನ ಪ್ರಿಯ ದೇಶವಾಸಿಗಳೇ, ಉತ್ತರಾಖಂಡದ ಉತ್ತರಕಾಶಿಯಲ್ಲಿ ಗಡಿಭಾಗದಲ್ಲಿ ‘ಝಾಲಾ’ ಎಂಬ ಗ್ರಾಮವಿದೆ. ಇಲ್ಲಿನ ಯುವಕರು ತಮ್ಮ ಗ್ರಾಮವನ್ನು ಸ್ವಚ್ಛವಾಗಿಡಲು ವಿಶೇಷ ಉಪಕ್ರಮ ಆರಂಭಿಸಿದ್ದಾರೆ. ಅವರು ತಮ್ಮ ಗ್ರಾಮದಲ್ಲಿ ಪ್ರಕೃತಿಗೆ ಧನ್ಯವಾದ ಹೇಳುವ ‘ಥ್ಯಾಂಕ್ಯೂ ನೇಚರ್’ ಅಭಿಯಾನ ನಡೆಸುತ್ತಿದ್ದಾರೆ. ಇದರ ಅಡಿಯಲ್ಲಿ ಪ್ರತಿ ದಿನ ಎರಡು ಗಂಟೆಗಳ ಕಾಲ ಗ್ರಾಮದಲ್ಲಿ ಸ್ವಚ್ಛತೆ ಮಾಡಲಾಗುತ್ತದೆ. ಗ್ರಾಮದ ಬೀದಿಗಳಲ್ಲಿ ಎಲ್ಲೆಂದರಲ್ಲಿ ಬಿದ್ದಿರುವ ಕಸವನ್ನು ಸಂಗ್ರಹಿಸಿ ಗ್ರಾಮದ ಹೊರಗೆ ನಿಗದಿತ ಸ್ಥಳದಲ್ಲಿ ಸುರಿಯಲಾಗುತ್ತದೆ. ಇದರಿಂದ ಝಾಲಾ ಗ್ರಾಮವೂ ಸ್ವಚ್ಛವಾಗುತ್ತಿದೆ, ಜನರಲ್ಲಿ ಜಾಗೃತಿಯೂ ಮೂಡುತ್ತಿದೆ. ಪ್ರತಿ ಹಳ್ಳಿ, ಪ್ರತಿ ಬೀದಿ, ಪ್ರತಿ ಪ್ರದೇಶವು ಇದೇ ರೀತಿಯ ಧನ್ಯವಾದ ಅಭಿಯಾನವನ್ನು ಪ್ರಾರಂಭಿಸಿದರೆ, ಆಗ ಎಷ್ಟು ದೊಡ್ಡ ಬದಲಾವಣೆಯಾಗಬಹುದು ಎಂದು ಯೋಚಿಸಿ.   

ಸ್ನೇಹಿತರೇ, ಪುದುಚೇರಿಯ ಕಡಲತೀರಗಳಲ್ಲಿ ಸ್ವಚ್ಛತೆಯ ಬಗ್ಗೆ ಭಾರೀ ಪ್ರಚಾರವನ್ನು ನಡೆಸಲಾಗುತ್ತಿದೆ. ಇಲ್ಲಿ ರಮ್ಯಾ ಎಂಬ ಮಹಿಳೆ ಮಾಹೆ ಪುರಸಭೆ ಮತ್ತು ಅದರ ಸುತ್ತಮುತ್ತಲಿನ ಯುವಕರ ತಂಡದ ನೇತೃತ್ವ ವಹಿಸಿದ್ದಾರೆ. ಈ ತಂಡದ ಜನರು ತಮ್ಮ ಪ್ರಯತ್ನದಿಂದ ಮಾಹೆ ಪ್ರದೇಶವನ್ನು ಮತ್ತು ವಿಶೇಷವಾಗಿ ಅಲ್ಲಿನ ಬೀಚ್‌ಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸುತ್ತಿದ್ದಾರೆ.

ಸ್ನೇಹಿತರೇ, ನಾನು ಇಲ್ಲಿ ಕೇವಲ ಎರಡು ಪ್ರಯತ್ನಗಳ ಬಗ್ಗೆ ಮಾತ್ರ ಚರ್ಚಿಸಿದ್ದೇನೆ, ಆದರೆ ನಾವು ನಮ್ಮಸುತ್ತ ಮುತ್ತ ನೋಡಿದರೆ, ದೇಶದ ಪ್ರತಿಯೊಂದು ಭಾಗದಲ್ಲೂ 'ಸ್ವಚ್ಛತೆ'ಗೆ ಸಂಬಂಧಿಸಿದಂತೆ ಕೆಲವು ವಿಶಿಷ್ಟ ಪ್ರಯತ್ನಗಳು ನಡೆಯುತ್ತಲೇ ಇವೆ. ಇನ್ನು ಕೆಲವೇ ದಿನಗಳಲ್ಲಿ ಅಂದರೆ ಅಕ್ಟೋಬರ್ 2 ರಂದು 'ಸ್ವಚ್ಛ ಭಾರತ್ ಮಿಷನ್' 10 ವರ್ಷಗಳನ್ನು ಪೂರೈಸುತ್ತಿದೆ. ಭಾರತೀಯ ಇತಿಹಾಸದಲ್ಲಿ ಇದನ್ನು ಇಷ್ಟು ದೊಡ್ಡ ಜನಾಂದೋಲನವನ್ನಾಗಿ ಮಾಡಿದ ಜನರನ್ನು ಅಭಿನಂದಿಸುವ ಸಂದರ್ಭವಿದು. ತಮ್ಮ ಜೀವನದುದ್ದಕ್ಕೂ ಈ ಉದ್ದೇಶಕ್ಕಾಗಿಯೇ ಸಮರ್ಪಿಸಿಕೊಂಡ ಮಹಾತ್ಮ ಗಾಂಧೀಜಿಯವರಿಗೆ ಇದು ನಿಜವಾದ ಗೌರವವಾಗಿದೆ.

ಸ್ನೇಹಿತರೇ, ಇಂದು 'ಸ್ವಚ್ಛ ಭಾರತ್ ಮಿಷನ್' ಯಶಸ್ಸಿನಿಂದಾಗಿ 'ವೇಸ್ಟ್ ಟು ವೆಲ್ತ್' ಎಂಬ ಮಂತ್ರವು ಜನಪ್ರಿಯವಾಗುತ್ತಿದೆ. ಜನರು ‘Reduce, Reuse ಮತ್ತು Recycle’ ಕುರಿತು ಮಾತನಾಡಲು ಪ್ರಾರಂಭಿಸಿದ್ದಾರೆ ಮತ್ತು ಅದೇ ಉದಾಹರಣೆಗಳನ್ನು ನೀಡುತ್ತಿದ್ದಾರೆ. ಕೇರಳದ ಕೋಝಿಕ್ಕೋಡ್‌ನಲ್ಲಿ ಒಂದು ಅದ್ಭುತವಾದ ಪ್ರಯತ್ನದ ಬಗ್ಗೆ ನನಗೆ ಇದೀಗ ತಿಳಿಯಿತು. ಇಲ್ಲಿ, ಎಪ್ಪತ್ನಾಲ್ಕು (74) ವರ್ಷದ ಸುಬ್ರಹ್ಮಣ್ಯನ್ ಅವರು 23 ಸಾವಿರಕ್ಕೂ ಹೆಚ್ಚು ಕುರ್ಚಿಗಳನ್ನು ದುರಸ್ತಿ ಮಾಡಿ ಮತ್ತೆ ಬಳಸುವಂತೆ ಮಾಡಿದ್ದಾರೆ. ಜನರು ಅವರನ್ನು ‘Reduce, Reuse ಮತ್ತು Recycle’, ಅಂದರೆ, RRR (ಟ್ರಿಪಲ್ R) ಚಾಂಪಿಯನ್ ಎಂದೂ ಕರೆಯುತ್ತಾರೆ. ಅವರ ಈ ವಿಶಿಷ್ಟ ಪ್ರಯತ್ನಗಳ ಫಲಶೃತಿಯನ್ನು ಕೋಝಿಕ್ಕೋಡ್ ಸಿವಿಲ್ ಸ್ಟೇಷನ್, PWD ಮತ್ತು LIC ಕಚೇರಿಗಳಲ್ಲಿ ಕಾಣಬಹುದು.

ಸ್ನೇಹಿತರೇ, ಸ್ವಚ್ಛತೆಯ ಅಭಿಯಾನದಲ್ಲಿ ಸಾಧ್ಯವಾದಷ್ಟು ಜನರನ್ನು ನಾವು ತೊಡಗಿಸಬೇಕಿದೆ ಮತ್ತು ಈ ಅಭಿಯಾನವು ಒಂದು ದಿನ ಅಥವಾ ಒಂದು ವರ್ಷವಲ್ಲ, ಇದು ಯುಗಯುಗಾಂತರಗಳವರೆಗೆ ನಿರಂತರವಾಗಿ ಮಾಡುವ ಕೆಲಸವಾಗಿದೆ. ಇದು ‘ಸ್ವಚ್ಛತೆ’ ನಮ್ಮ ಸ್ವಭಾವವಾಗುವವರೆಗೂ ಮಾಡಲೇಬೇಕಾದ ಕೆಲಸವಾಗಿದೆ. ನಿಮ್ಮ ಕುಟುಂಬ, ಸ್ನೇಹಿತರು, ನೆರೆಹೊರೆಯವರು ಅಥವಾ ಸಹೋದ್ಯೋಗಿಗಳೊಂದಿಗೆ ಸ್ವಚ್ಛತಾ ಅಭಿಯಾನದಲ್ಲಿ ನೀವೂ ಪಾಲ್ಗೊಳ್ಳುವಂತೆ ನಾನು ನಿಮ್ಮನ್ನು ಕೋರುತ್ತೇನೆ. ‘ಸ್ವಚ್ಛ ಭಾರತ್ ಮಿಷನ್’ ಯಶಸ್ಸಿಗಾಗಿ ನಾನು ಮತ್ತೊಮ್ಮೆ ನಿಮ್ಮೆಲ್ಲರನ್ನು ಅಭಿನಂದಿಸುತ್ತೇನೆ.

ನನ್ನ ಪ್ರಿಯ ದೇಶವಾಸಿಗಳೇ, ನಾವೆಲ್ಲರೂ ನಮ್ಮ ಪರಂಪರೆಯ ಬಗ್ಗೆ ಬಹಳ ಹೆಮ್ಮೆಪಡುತ್ತೇವೆ. ಮತ್ತು ನಾನು ಯಾವಾಗಲೂ, 'ಅಭಿವೃದ್ಧಿ ಮತ್ತು ಪರಂಪರೆ' ಜೊತೆಯಾಗಿ ಸಾಗಬೇಕು ಎಂದು ಹೇಳುತ್ತೇನೆ. ಅದಕ್ಕಾಗಿಯೇ ನನ್ನ ಇತ್ತೀಚಿನ ಅಮೆರಿಕ ಪ್ರವಾಸದ ನಿರ್ದಿಷ್ಟ ಅಂಶದ ಕುರಿತು ಬಹಳಷ್ಟು ಸಂದೇಶಗಳು ಬರುತ್ತಿವೆ. ಮತ್ತೊಮ್ಮೆ ನಮ್ಮ ಪುರಾತನ ಕಲಾಕೃತಿಗಳ ಹಿಂಪಡೆಯುವಿಕೆ  ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಈ ಬಗ್ಗೆ ನಿಮ್ಮೆಲ್ಲರ ಭಾವನೆಗಳನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ ಮತ್ತು ಈ ಬಗ್ಗೆ 'ಮನದ ಮಾತಿನ' ಕೇಳುಗರಿಗೂ  ಕುರಿತು ಹೇಳಬಯಸುತ್ತೇನೆ.

ಸ್ನೇಹಿತರೇ, ನನ್ನ ಅಮೆರಿಕ ಭೇಟಿಯ ಸಂದರ್ಭದಲ್ಲಿ ಅಲ್ಲಿನ ಸರ್ಕಾರವು ಸುಮಾರು 300 ಪುರಾತನ ಕಲಾಕೃತಿಗಳನ್ನು ಭಾರತಕ್ಕೆ ಹಿಂದಿರುಗಿಸಿತು. ಅಮೆರಿಕಾ ಅಧ್ಯಕ್ಷ ಬೈಡೆನ್ ಅವರು, ಬಹಳ ಆತ್ಮೀಯತೆಯನ್ನು ತೋರುತ್ತಾ ಡೆಲವೇರ್ ನಲ್ಲಿರುವ ತಮ್ಮ ಖಾಸಗಿ ನಿವಾಸದಲ್ಲಿ ಈ ಕಲಾಕೃತಿಗಳ ಪೈಕಿ ಕೆಲವನ್ನು ನನಗೆ ತೋರಿಸಿದರು. ಹಿಂದಿರುಗಿಸಲಾದ ಕಲಾಕೃತಿಗಳು ಟೆರ್ರ ಕೋಟಾ, ಕಲ್ಲು, ಆನೆಯ ದಂತ, ಮರ, ತಾಮ್ರ, ಕಂಚು ಇತ್ಯಾದಿ ವಸ್ತುಗಳಿಂದ ತಯಾರಿಸಲ್ಪಟ್ಟಿವೆ. ಇವುಗಳಲ್ಲಿ ಹಲವು ಸುಮಾರು ನಾಲ್ಕು ಸಾವಿರ ವರ್ಷಗಳಷ್ಟು ಹಳೆಯವು. ಅಮೆರಿಕ ದೇಶವು ನಾಲ್ಕು ಸಾವಿರ ವರ್ಷಗಳಷ್ಟು ಹಳೆಯದಾದ ಕಲಾಕೃತಿಗಳಿಂದ ಹಿಡಿದು 19ನೇ ಶತಮಾನದವರೆಗಿನ ಕಲಾಕೃತಿಗಳನ್ನು ಹಿಂದಿರುಗಿಸಿದೆ - ಇವುಗಳಲ್ಲಿ ಹೂದಾನಿಗಳು, ದೇವರು ಮತ್ತು ದೇವತೆಗಳ ಟೆರ್ರಕೋಟಾ ಫಲಕಗಳು, ಜೈನ ತೀರ್ಥಂಕರರ ಪ್ರತಿಮೆಗಳು, ಹಾಗೆಯೇ ಭಗವಾನ್ ಬುದ್ಧ ಮತ್ತು ಶ್ರೀ ಕೃಷ್ಣನ ಪ್ರತಿಮೆಗಳೂ ಸೇರಿವೆ.ಹಿಂತಿರುಗಿಸಲಾದ ವಸ್ತುಗಳ ಪೈಕಿ ಪ್ರಾಣಿಗಳ ಅನೇಕ ಕಲಾಕೃತಿಗಳಿವೆ. ಪುರುಷರು ಮತ್ತು ಮಹಿಳೆಯರ ಚಿತ್ರಗಳಿರುವ ಜಮ್ಮು ಮತ್ತು ಕಾಶ್ಮೀರದ ಟೆರ್ರಕೋಟಾ ಟೈಲ್ಸ್ ತುಂಬಾ ಆಸಕ್ತಿದಾಯಕವಾಗಿದೆ. ಇವುಗಳಲ್ಲಿ, ದಕ್ಷಿಣ ಭಾರತದ ಕಂಚಿನ ಶ್ರೀ ಗಣೇಶನ ಪ್ರತಿಮೆಗಳೂ ಇವೆ. ಹಿಂತಿರುಗಿದ ವಸ್ತುಗಳಲ್ಲಿ ವಿಷ್ಣುವಿನ ಚಿತ್ರಗಳು ಅಧಿಕ ಸಂಖ್ಯೆಯಲ್ಲಿವೆ. ಇವು ಮುಖ್ಯವಾಗಿ ಉತ್ತರ ಮತ್ತು ದಕ್ಷಿಣ ಭಾರತಕ್ಕೆ ಸಂಬಂಧಿಸಿದ್ದಾಗಿವೆ. ಈ ಕಲಾಕೃತಿಗಳನ್ನು ನೋಡಿದಾಗ, ನಮ್ಮ ಪೂರ್ವಜರು ಇಂತಹವುಗಳಿಗೆ ಎಷ್ಟು ಗಮನ ನೀಡಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ. ಅವರು ಕಲೆಯ ಬಗ್ಗೆ ಅದ್ಭುತವಾದತಿಳುವಳಿಕೆಯನ್ನು ಹೊಂದಿದ್ದರು. ಇವುಗಳಲ್ಲಿ ಹಲವು ಕಲಾಕೃತಿಗಳನ್ನು ಕಳ್ಳಸಾಗಾಣಿಕೆ ಮತ್ತು ಇತರ ಕಾನೂನು ಬಾಹಿರ ವಿಧಾನಗಳ ಮೂಲಕ ದೇಶದಿಂದ ಹೊರಕ್ಕೆ ಕೊಂಡೊಯ್ಯಲಾಗಿದೆ - ಇದು ಗಂಭೀರ ಅಪರಾಧವಾಗಿದೆ, ಒಂದು ರೀತಿಯಲ್ಲಿ ಇದು ಪರಂಪರೆಯನ್ನು ನಾಶಪಡಿಸುತ್ತಿದೆ, ಆದರೆ ಕಳೆದ ದಶಕದಲ್ಲಿ ಇಂತಹ ಹಲವಾರು ಕಲಾಕೃತಿಗಳು ಮತ್ತು ನಮ್ಮ ಹಲವು ಪ್ರಾಚೀನ ಪರಂಪರೆಗಳು ನಮ್ಮ ದೇಶಕ್ಕೆ ಮರಳಿ ಬಂದಿವೆ ಎಂಬ ವಿಷಯ ನನಗೆ ಬಹಳ ಸಂತೋಷ ತಂದಿದೆ. ಈ ನಿಟ್ಟಿನಲ್ಲಿ ಇಂದು ಭಾರತವೂ ಹಲವು ದೇಶಗಳೊಂದಿಗೆ ಕೈಜೋಡಿಸಿ ಕೆಲಸ  ಮಾಡುತ್ತಿದೆ. ನಾವು ನಮ್ಮ ಪರಂಪರೆಯ ಬಗ್ಗೆ ಹೆಮ್ಮೆಪಟ್ಟಾಗ, ಜಗತ್ತು ಅದನ್ನು ಗೌರವಿಸುತ್ತದೆ ಎಂದು ನಾನು ನಂಬುತ್ತೇನೆ ಮತ್ತು ಅದರ ಪರಿಣಾಮವೇ ಇಂದು ಪ್ರಪಂಚದ ಅನೇಕ ದೇಶಗಳು ನಮ್ಮ ದೇಶದಿಂದ ಹೋದ ಹಲವಾರು ಇಂತಹ ಕಲಾಕೃತಿಗಳನ್ನು ನಮಗೆ ಮರಳಿ ನೀಡುತ್ತಿವೆ.

ನನ್ನ ಪ್ರೀತಿಯ ಸ್ನೇಹಿತರೇ, ಮಗು ಯಾವ ಭಾಷೆಯನ್ನು ಹೆಚ್ಚು ಸುಲಭವಾಗಿ ಮತ್ತು ತ್ವರಿತವಾಗಿ ಕಲಿಯುತ್ತದೆ ಎಂದು ನಾನು ಕೇಳಿದರೆ - ನಿಮ್ಮ ಉತ್ತರ 'ಮಾತೃಭಾಷೆ' ಎಂದಾಗಿರುತ್ತದೆ. ನಮ್ಮ ದೇಶದಲ್ಲಿ ಸುಮಾರು ಇಪ್ಪತ್ತು ಸಾವಿರ ಭಾಷೆಗಳು ಮತ್ತು ಉಪಭಾಷೆಗಳಿವೆ ಮತ್ತು ಅವೆಲ್ಲವೂ ಖಂಡಿತವಾಗಿಯೂ ಯಾರಾದರೊಬ್ಬರ ಮಾತೃ ಭಾಷೆಯಾಗಿರುತ್ತವೆ. ಕೆಲವು ಭಾಷೆಗಳನ್ನು ಮಾತನಾಡುವ ಜನಸಂಖ್ಯೆ ಬಹಳ ಕಡಿಮೆಯೂ ಇರಬಹುದು. ಆದರೆ ಇಂದು,ಆ ಭಾಷೆಗಳನ್ನು ಸಂರಕ್ಷಿಸಲು ಹಲವು ವಿಶೇಷ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ತಿಳಿದು ನಿಮಗೆ ಸಂತೋಷವಾಗಬಹುದು. ಅಂತಹ ಒಂದು ಭಾಷೆಯೇ ನಮ್ಮ ‘ಸಂತಲಿ’ ಭಾಷೆ. ಡಿಜಿಟಲ್ ಆವಿಷ್ಕಾರದ ಸಹಾಯದಿಂದ ‘ಸಂತಲಿ’ಗೆ ಹೊಸ ಗುರುತನ್ನು ನೀಡುವ ಅಭಿಯಾನವನ್ನು ಪ್ರಾರಂಭಿಸಲಾಗಿದೆ. ನಮ್ಮ ದೇಶದ ಹಲವು ರಾಜ್ಯಗಳಲ್ಲಿ ವಾಸಿಸುವ ಸಂತಾಲ್ ಬುಡಕಟ್ಟು ಸಮುದಾಯದ ಜನರು 'ಸಂತಾಲಿ' ಭಾಷೆ ಮಾತನಾಡುತ್ತಾರೆ. ಭಾರತವಲ್ಲದೆ, ಸಂತಾಲಿ ಭಾಷೆ ಮಾತನಾಡುವ ಬುಡಕಟ್ಟು ಸಮುದಾಯಗಳು ಬಾಂಗ್ಲಾದೇಶ, ನೇಪಾಳ ಮತ್ತು ಭೂತಾನ್‌ನಲ್ಲಿಯೂ ಇವೆ. ಒಡಿಶಾದ ಮಯೂರ್‌ ಭಂಜ್‌ ನಿವಾಸಿಯಾಗಿರುವ ಶ್ರೀ ರಾಮ್‌ಜಿತ್ ತುಡು ಅವರು ಸಂತಾಲಿ ಭಾಷೆಯ ಆನ್‌ಲೈನ್ ಗುರುತನ್ನು ರಚಿಸಲು ಅಭಿಯಾನವೊಂದನ್ನು ನಡೆಸುತ್ತಿದ್ದಾರೆ. ಸಂತಾಲಿ ಭಾಷೆಗೆ ಸಂಬಂಧಿಸಿದ ಸಾಹಿತ್ಯವನ್ನು ಸಂತಾಲಿ ಭಾಷೆಯಲ್ಲಿ ಓದಲು ಮತ್ತು ಬರೆಯಲು ರಾಮ್‌ಜಿತ್ ಅವರು ಡಿಜಿಟಲ್ ವೇದಿಕೆಯನ್ನು ರಚಿಸಿದ್ದಾರೆ. ವಾಸ್ತವದಲ್ಲಿ, ಕೆಲವು ವರ್ಷಗಳ ಹಿಂದೆ, ರಾಮ್‌ಜಿತ್ ಅವರು ಮೊಬೈಲ್ ಫೋನ್ ಬಳಸಲು ಪ್ರಾರಂಭಿಸಿದಾಗ, ಅವರು ತಮ್ಮ ಮಾತೃಭಾಷೆಯಲ್ಲಿ ಸಂದೇಶಗಳನ್ನು ಕಳುಹಿಸಲು ಸಾಧ್ಯವಾಗದ ಕುರಿತಂತೆ ಬೇಸರಗೊಂಡಿದ್ದರು. ಇದಾದ ನಂತರ ‘ಸಂತಾಲಿ ಭಾಷೆಯ ‘ಓಲ್ಚಿಕಿ’ ಲಿಪಿಯನ್ನು ಟೈಪ್ ಮಾಡುವ ಸಾಧ್ಯತೆಗಳನ್ನು ಅನ್ವೇಷಿಸಲು ಆರಂಭಿಸಿದರು. ಅವರ ಕೆಲವು ಸಹೋದ್ಯೋಗಿಗಳ ಸಹಾಯದಿಂದ ಅವರು 'ಓಲ್ ಚಿಕ್' ಟೈಪ್ ಮಾಡುವ ತಂತ್ರವನ್ನು ಅಭಿವೃದ್ಧಿಪಡಿಸಿದರು. ಇಂದು ಅವರ ಈ ಪ್ರಯತ್ನದಿಂದ ಸಂತಾಲಿ ಭಾಷೆಯಲ್ಲಿ ಬರೆದ ಲೇಖನಗಳು ಲಕ್ಷಾಂತರ ಜನರನ್ನು ತಲುಪುತ್ತಿವೆ.

ಸ್ನೇಹಿತರೇ, ನಮ್ಮ ಸಂಕಲ್ಪದೊಂದಿಗೆ ಸಾಮೂಹಿಕ ಸಹಭಾಗಿತ್ವವನ್ನು ಸಂಯೋಜಿಸಿದಾಗ, ಇಡೀ ಸಮಾಜಕ್ಕೆ ಅದ್ಭುತ ಫಲಿತಾಂಶಗಳು ಹೊರಹೊಮ್ಮುತ್ತವೆ. ಇದಕ್ಕೆ ತೀರಾ ಇತ್ತೀಚಿನ ಉದಾಹರಣೆಯೆಂದರೆ ‘ಒಂದು ಸಸ್ಯ ತಾಯಿಯ ಹೆಸರಿನಲ್ಲಿ’ ಎಂಬ ಅಭಿಯಾನ. ಇದೊಂದು ಅದ್ಭುತ ಅಭಿಯಾನವಾಗಿತ್ತು, ಸಾರ್ವಜನಿಕ ಸಹಭಾಗಿತ್ವದಇಂತಹ ಉದಾಹರಣೆ ನಿಜವಾಗಿಯೂ ಸ್ಫೂರ್ತಿದಾಯಕವಾಗಿದೆ. ಪರಿಸರ ಸಂರಕ್ಷಣೆಗಾಗಿ ಆರಂಭಿಸಿದ ಈ ಅಭಿಯಾನದಲ್ಲಿ ದೇಶದ ಮೂಲೆ ಮೂಲೆಯ ಜನರು ಅದ್ಭುತಗಳನ್ನು ಮಾಡಿ ತೋರಿದ್ದಾರೆ. ಉತ್ತರ ಪ್ರದೇಶ, ಗುಜರಾತ್, ಮಧ್ಯಪ್ರದೇಶ, ರಾಜಸ್ಥಾನ ಮತ್ತು ತೆಲಂಗಾಣ ರಾಜ್ಯಗಳು ಗುರಿಗಿಂತ ಹೆಚ್ಚು ಗಿಡಗಳನ್ನು ನೆಡುವುದರ ಮೂಲಕ ಹೊಸ ದಾಖಲೆ ಸೃಷ್ಟಿಸಿವೆ. ಈ ಅಭಿಯಾನದ ಅಡಿಯಲ್ಲಿ ಉತ್ತರ ಪ್ರದೇಶದಲ್ಲಿ 26ಕೋಟಿಗೂ ಹೆಚ್ಚು ಸಸಿಗಳನ್ನು ನೆಡಲಾಗಿದೆ. ಗುಜರಾತ್‌ನ ಜನರು 15 ಕೋಟಿಗೂ ಅಧಿಕ ಸಸಿಗಳನ್ನು ನೆಟ್ಟರು. ಆಗಸ್ಟ್ ತಿಂಗಳೊಂದರಲ್ಲೇ ರಾಜಸ್ಥಾನದಲ್ಲಿ 6 ಕೋಟಿಗೂ ಹೆಚ್ಚು ಸಸಿಗಳನ್ನು ನೆಡಲಾಯಿತು. ದೇಶದ ಸಾವಿರಾರು ಶಾಲೆಗಳು ಕೂಡ ಈ ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿವೆ.

ಸ್ನೇಹಿತರೇ, ಸಸಿ ನೆಡುವ ಅಭಿಯಾನಕ್ಕೆ ಸಂಬಂಧಿಸಿದ ಅನೇಕ ಉದಾಹರಣೆಗಳು ನಮ್ಮ ದೇಶದಲ್ಲಿ ಬೆಳಕಿಗೆ ಬರುತ್ತಲೇ ಇರುತ್ತವೆ. ಅಂತಹ ಒಂದು ಉದಾಹರಣೆಯೆಂದರೆ ತೆಲಂಗಾಣದ ಕೆ.ಎನ್.ರಾಜಶೇಖರ್ ಅವರು. ಸಸಿಗಳನ್ನು ನೆಡುವ ಕುರಿತ ಅವರ ಬದ್ಧತೆ ನಮ್ಮೆಲ್ಲರನ್ನು ಬೆರಗುಗೊಳಿಸುತ್ತದೆ. ಸುಮಾರು ನಾಲ್ಕು ವರ್ಷಗಳ ಹಿಂದೆ ಸಸಿ ನೆಡುವ ಅಭಿಯಾನವನ್ನು ಅವರು ಆರಂಭಿಸಿದ್ದರು. ಪ್ರತಿ ದಿನವೂ ಒಂದೊಂದು ಸಸಿ ನೆಡಬೇಕು ಎಂದು ನಿರ್ಧರಿಸಿದರು. ಅವರು ಈ ಅಭಿಯಾನವನ್ನು ಕಟ್ಟುನಿಟ್ಟಾದ ಉಪವಾಸದಂತೆ ಅನುಸರಿಸಿದರು. ಇದುವರೆಗೂ ಅವರು 1500 ಕ್ಕೂ ಅಧಿಕ ಸಸಿಗಳನ್ನು ನೆಟ್ಟಿದ್ದಾರೆ. ಈ ವರ್ಷ ಅಪಘಾತಕ್ಕೆ ತುತ್ತಾದ ನಂತರವೂ ಅವರು ತಮ್ಮ ಸಂಕಲ್ಪವನ್ನು ಸಡಿಲಿಸಲಿಲ್ಲ. ಅಂತಹ ಎಲ್ಲಾ ಪ್ರಯತ್ನಗಳನ್ನು ನಾನು ಹೃತ್ಪೂರ್ವಕವಾಗಿ ಪ್ರಶಂಸಿಸುತ್ತೇನೆ. ಈ ಪವಿತ್ರ ಅಭಿಯಾನ ‘ಒಂದು ಸಸಿ ತಾಯಿಯ ಹೆಸರಿನಲ್ಲಿಗೆ ಸೇರಲು ನಾನು ನಿಮ್ಮಲ್ಲಿಯೂ ಮನವಿ ಮಾಡುತ್ತಿದ್ದೇನೆ.

ನನ್ನ ಪ್ರೀತಿಯ ಸ್ನೇಹಿತರೇ, ಆಪತ್ಕಾಲದಲ್ಲಿ ತಾಳ್ಮೆ, ಸಹನೆ ಕಳೆದುಕೊಳ್ಳದೇ, ದೈರ್ಯಗೆಡದೆ, ಅಂತಹ ಸಮಯದಿಂದ ಏನನ್ನಾದರೂ ಕಲಿತುಕೊಳ್ಳುವ ಕೆಲವರು ನಮ್ಮ ನಡುವೆ ಇದ್ದಾರೆ ಎಂಬುದನ್ನು ನೀವು ಗಮನಿಸಿರಬೇಕು. ಅಂತಹ ಜನರ ಪೈಕಿ ಸುಭಶ್ರೀ ಎಂಬ ಮಹಿಳೆಯೂ ಒಬ್ಬರು. ಸುಭಶ್ರೀ ಅವರು ತಮ್ಮ ಶ್ರಮ ಹಾಗೂ ಪ್ರಯತ್ನದಿಂದ ಅಪರೂಪದ ಮತ್ತು ಅತ್ಯಂತ ಉಪಯುಕ್ತವಾದ ಗಿಡಮೂಲಿಕೆಗಳ ಅದ್ಭುತ ಉದ್ಯಾನವನ ರಚಿಸಿದ್ದಾರೆ. ಆಕೆ ತಮಿಳುನಾಡಿನ ಮಧುರೈ ನಿವಾಸಿಯಾಗಿದ್ದಾರೆ. ಇವರು ವೃತ್ತಿಯಲ್ಲಿ ಶಿಕ್ಷಕರಾಗಿದ್ದರೂ, ಔಷಧೀಯ ಸಸ್ಯಗಳು ಮತ್ತು ವೈದ್ಯಕೀಯ ಗಿಡಮೂಲಿಕೆಗಳ ಬಗ್ಗೆ ಆಳವಾದ ಆಸಕ್ತಿಯನ್ನು ಹೊಂದಿದ್ದಾರೆ. 80 ರ ದಶಕದಲ್ಲಿ ಅವರ ತಂದೆಯನ್ನು ಒಮ್ಮೆ ವಿಷಪೂರಿತ ಹಾವೊಂದು ಕಚ್ಚಿದ ಸಂದರ್ಭದಲ್ಲಿ ಸುಭಶ್ರೀ ಅವರಿಗೆ ಔಷಧೀಯ ಸಸ್ಯಗಳ ಬಗ್ಗೆ ಒಲವು ಪ್ರಾರಂಭವಾಯಿತು. ಆ ಸಮಯದಲ್ಲಿ ಅವರ ತಂದೆಯ ಆರೋಗ್ಯವನ್ನು ಸುಧಾರಿಸುವಲ್ಲಿ ಸಾಂಪ್ರದಾಯಿಕ ಗಿಡಮೂಲಿಕೆಗಳು ಬಹಳಷ್ಟು ಉಪಯೋಗಕ್ಕೆ ಬಂದಿತು. ಈ ಘಟನೆಯ ನಂತರ ಅವರು ಸಾಂಪ್ರದಾಯಿಕ ಔಷಧಗಳು ಮತ್ತು ಗಿಡಮೂಲಿಕೆಗಳನ್ನು ಅನ್ವೇಷಿಸಲು ಪ್ರಾರಂಭಿಸಿದರು. ಇಂದು, ಅವರು ಮಧುರೈನ ವೆರಿಚಿಯೂರ್ ಗ್ರಾಮದಲ್ಲಿ ವಿಶಿಷ್ಟವಾದ ಗಿಡಮೂಲಿಕೆಗಳ ಉದ್ಯಾನವನವನ್ನು ಹೊಂದಿದ್ದಾರೆ, ಇದು ಈ ವನದಲ್ಲಿ 500 ಕ್ಕೂ ಹೆಚ್ಚು ಅಪರೂಪದ ಔಷಧೀಯ ಸಸ್ಯಗಳು ಬೆಳೆದಿವೆ. ಈ ಉದ್ಯಾನವನ ಬೆಳೆಸಲು ಅವರು ಸಾಕಷ್ಟು ಶ್ರಮಿಸಿದ್ದಾರೆ. ಪ್ರತಿಯೊಂದು ಸಸ್ಯದ ಅನ್ವೇಷಣೆಗೆ ಅವರು ದೂರ ದೂರದವರೆಗೂ ಪ್ರಯಾಣಿಸಿದ್ದಾರೆ. ಮಾಹಿತಿಯನ್ನು ಸಂಗ್ರಹಿಸಿದ್ದಾರೆ ಮತ್ತು ಅನೇಕ ಬಾರಿ ಇತರರಲ್ಲಿ ಸಹಾಯಕ್ಕಾಗಿ ಕೂಡಾ ಕೇಳಿದ್ದಾರೆ. ಕೋವಿಡ್ ಸಮಯದಲ್ಲಿ, ಅವರು ಜನರಿಗೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗಿಡಮೂಲಿಕೆಗಳನ್ನು ವಿತರಿಸಿದರು.ಇಂದು ಅವರ ಗಿಡಮೂಲಿಕೆಗಳ ತೋಟವನ್ನು ನೋಡಲು ದೂರ ದೂರದ ಪ್ರದೇಶಗಳಿಂದ ಜನರು ಬರುತ್ತಾರೆ. ಅವರೆಲ್ಲರಿಗೂ ಗಿಡಮೂಲಿಕೆ ಸಸ್ಯಗಳು ಮತ್ತು ಅವುಗಳ ಉಪಯೋಗಗಳ ಬಗ್ಗೆ ಅವರು ತಿಳಿಸುತ್ತಾರೆ. ನೂರಾರು ವರ್ಷಗಳಿಂದ ನಮ್ಮ ಸಂಸ್ಕೃತಿಯ ಭಾಗವಾಗಿರುವ ನಮ್ಮ ಪರಂಪರೆಯನ್ನು ಸುಭಶ್ರೀ ಮುನ್ನಡೆಸುತ್ತಿದ್ದಾರೆ. ಅವರ ಗಿಡಮೂಲಿಕೆಗಳ ತೋಟ ನಮ್ಮ ಭೂತಕಾಲವನ್ನು ಭವಿಷ್ಯದೊಂದಿಗೆ ಸಂಪರ್ಕಿಸುತ್ತದೆ. ಅವರಿಗೆ ನನ್ನ ಶುಭಾಶಯಗಳು.

ಸ್ನೇಹಿತರೇ, ಬದಲಾಗುತ್ತಿರುವ ಈ ಕಾಲದಲ್ಲಿ ಉದ್ಯೋಗಗಳ ಸ್ವರೂಪವೂ ಬದಲಾಗುತ್ತಿದೆ ಮತ್ತು ಹೊಸ ಕ್ಷೇತ್ರಗಳು ಹೊರಹೊಮ್ಮುತ್ತಿವೆ. ಗೇಮಿಂಗ್, ಅನಿಮೇಷನ್, ರೀಲ್ ಮೇಕಿಂಗ್, ಫಿಲ್ಮ್ ಮೇಕಿಂಗ್ ಅಥವಾ ಪೋಸ್ಟರ್ ಮೇಕಿಂಗ್ ಇತ್ಯಾದಿ. ಈ ಯಾವುದೇ ಕೌಶಲ್ಯಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲು ನಿಮಗೆ ಸಾಧ್ಯವಾದಲ್ಲಿ, ನಿಮ್ಮ ಪ್ರತಿಭೆಯ ಪ್ರದರ್ಶನಕ್ಕೆ ದೊಡ್ಡದೊಂದು ವೇದಿಕೆ ದೊರೆಯಬಹುದು ಅಥವಾ ನೀವು ಯಾವುದೇ ಬ್ಯಾಂಡ್ ಗಳಲ್ಲಿ ಅಥವಾ ಸಮುದಾಯ ರೇಡಿಯೊದಲ್ಲಿ ಕೆಲಸ ಮಾಡುತ್ತಿದ್ದಲ್ಲಿ, ನಿಮಗೆ ಬೃಹತ್ ಅವಕಾಶಗಳಿವೆ. ನಿಮ್ಮ ಪ್ರತಿಭೆ ಮತ್ತು ಸೃಜನಶೀಲತೆಯನ್ನು ಉತ್ತೇಜಿಸಲು, ಭಾರತ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು 'ಭಾರತದಲ್ಲೇ ರಚಿಸಿ' ಎಂಬ ಶೀರ್ಷಿಕೆಯಡಿಯಲ್ಲಿ 25 ಸವಾಲುಗಳನ್ನು ಪ್ರಾರಂಭಿಸಿದೆ. ಖಂಡಿತವಾಗಿಯೂ ಈ ಸವಾಲುಗಳು ನಿಮಗೆ ಆಸಕ್ತಿದಾಯಕವಾಗಿರುತ್ತವೆ. ಕೆಲವು ಸವಾಲುಗಳು ಸಂಗೀತ, ಶಿಕ್ಷಣ ಮತ್ತು ಆಂಟಿ-ಪೈರಸಿ ವಿಷಯಗಳ ಮೇಲೆ ಕೇಂದ್ರೀಕೃತವಾಗಿವೆ. ಈ ಸವಾಲುಗಳಿಗೆ ತಮ್ಮ ಸಂಪೂರ್ಣ ಬೆಂಬಲವನ್ನು ನೀಡುತ್ತಿರುವ ಅನೇಕ ವೃತ್ತಿಪರ ಸಂಸ್ಥೆಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿವೆ. ಇವುಗಳಲ್ಲಿ ಭಾಗವಹಿಸಲು ನೀವು wavesindia.org ಗೆ ಲಾಗಿನ್ ಮಾಡಬಹುದು. ದೇಶಾದ್ಯಂತ ಇರುವ ಸೃಜನಶೀಲ ಜನತೆ ಇದರಲ್ಲಿ ಪಾಲ್ಗೊಂಡು ತಮ್ಮ ಸೃಜನಶೀಲತೆಯನ್ನು ಜಗತ್ತಿನ ಮುಂದೆ ಪ್ರದರ್ಶಿಸಬೇಕು ಎನ್ನುವುದು ನನ್ನ ವಿಶೇಷ ಮನವಿಯಾಗಿದೆ.

ನನ್ನ ಪ್ರೀತಿಯ ದೇಶವಾಸಿಗಳೇ, ಈ ತಿಂಗಳು ಮತ್ತೊಂದು ಮಹತ್ವಪೂರ್ಣ ಅಭಿಯಾನಕ್ಕೆ 10 ವರ್ಷಗಳು ಪೂರ್ಣವಾಗಿದೆ. ಈ ಅಭಿಯಾನದ ಯಶಸ್ಸಿನಲ್ಲಿ, ದೊಡ್ಡ ಉದ್ಯಮಗಳಿಂದ ಹಿಡಿದು ಸಣ್ಣ ಸಣ್ಣ ವ್ಯಾಪಾರಿಗಳವರೆಗೆ ಪ್ರತಿಯೊಬ್ಬರ ಕೊಡುಗೆಯೂ ಸೇರಿದೆ. ನಾನು ಈಗ ಮಾತನಾಡುತ್ತಿರುವುದು 'ಮೇಕ್ ಇನ್ ಇಂಡಿಯಾ' ಅಭಿಯಾನದ ಬಗ್ಗೆ. ಇಂದು ಬಡವರು,ಮಧ್ಯಮ ವರ್ಗದವರು ಮತ್ತು ಎಂಎಸ್‌ಎಂಇಗಳು ಈ ಅಭಿಯಾನದಿಂದ ಸಾಕಷ್ಟು ಪ್ರಯೋಜನವನ್ನು ಪಡೆಯುತ್ತಿರುವುದನ್ನು ನೋಡಿ ನನಗೆ ತುಂಬಾ ಸಂತೋಷವಾಗಿದೆ. ಈ ಅಭಿಯಾನವು ಪ್ರತಿಯೊಂದು ವರ್ಗದ ಜನರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶ ನೀಡಿದೆ. ಇಂದು,ಭಾರತವು ಉತ್ಪಾದನೆಯ ಶಕ್ತಿ ಕೇಂದ್ರವೆನಿಸಿದೆ ಮತ್ತು ದೇಶದ ಯುವ ಶಕ್ತಿಯಿಂದಾಗಿ, ಇಡೀ ಪ್ರಪಂಚ ನಮ್ಮ ಕಡೆಗೆ ನೋಡುವಂತಾಗಿದೆ. ವಾಹನೋದ್ಯಮ, ಜವಳಿ, ವಿಮಾನಯಾನ, ಎಲೆಕ್ಟ್ರಾನಿಕ್ಸ್ ಅಥವಾ ರಕ್ಷಣಾ ಕ್ಷೇತ್ರ ಯಾವುದೇ ಆಗಿರಲಿ, ಪ್ರತಿಯೊಂದು ಕ್ಷೇತ್ರದಲ್ಲೂ ದೇಶದ ರಫ್ತು ಪ್ರಮಾಣ ನಿರಂತರವಾಗಿ ಹೆಚ್ಚಾಗುತ್ತಿದೆ. ದೇಶದಲ್ಲಿ ವಿದೇಶೀ ನೇರ ಹೂಡಿಕೆ ಪ್ರಮಾಣ ಸತತವಾಗಿ ಹೆಚ್ಚಾಗುತ್ತಿರುವುದು ನಮ್ಮ 'ಮೇಕ್ ಇನ್ ಇಂಡಿಯಾ'ದ ಯಶೋಗಾಥೆಯನ್ನೂ ಹೇಳುತ್ತಿದೆ. ಈಗ ನಾವು ಮುಖ್ಯವಾಗಿ ಎರಡು ವಿಷಯಗಳ ಮೇಲೆ ಗಮನ ಕೇಂದ್ರೀಕರಿಸುತ್ತಿದ್ದೇವೆ. ಮೊದಲನೆಯದು 'ಗುಣಮಟ್ಟ' ಅಂದರೆ ನಮ್ಮ ದೇಶದಲ್ಲಿ ತಯಾರಾಗುವ ಉತ್ಪನ್ನಗಳು ಜಾಗತಿಕ ಗುಣಮಟ್ಟ ಹೊಂದಿರಬೇಕು. ಎರಡನೆಯದು 'ವೋಕಲ್ ಫಾರ್ ಲೋಕಲ್' ಅಂದರೆ ಸ್ಥಳೀಯ ಉತ್ಪನ್ನಗಳಿಗೆಸಾಧ್ಯವಾದಷ್ಟೂ ಉತ್ತೇಜನ ನೀಡಬೇಕು, ಪ್ರಚಾರ ಮಾಡಬೇಕು. 'ಮನದ ಮಾತಿನಲ್ಲಿ' ನಾವು #MyProductMyPride ಕುರಿತಂತೆ ಕೂಡಾ ಮಾತನಾಡಿದ್ದೇವೆ. ಸ್ಥಳೀಯ ಉತ್ಪನ್ನಗಳಿಗೆ ಉತ್ತೇಜನ ನೀಡುವುದರಿಂದ ದೇಶದ ಜನರಿಗೆ ಯಾವರೀತಿ ಲಾಭವಾಗುತ್ತದೆ ಎಂಬುದನ್ನು ಒಂದು ಉದಾಹರಣೆ ಸಹಿತ ಅರ್ಥಮಾಡಿಕೊಳ್ಳಬಹುದು.

ಮಹಾರಾಷ್ಟ್ರದ ಭಂಡಾರಾ ಜಿಲ್ಲೆಯಲ್ಲಿ ಜವಳಿಗೆ ಸಂಬಂಧಿಸಿದಂತೆ ಒಂದು ಹಳೆಯ ಸಂಪ್ರದಾಯವಿದೆ - 'ಭಂಡಾರ ಟಸ್ಸರ್ ಸಿಲ್ಕ್ ಹ್ಯಾಂಡ್ಲೂಮ್'. ಟಸ್ಸರ್ ಸಿಲ್ಕ್ ತನ್ನ ವಿನ್ಯಾಸ, ಬಣ್ಣ ಮತ್ತು ದೃಢತೆಗೆ ಹೆಸರುವಾಸಿಯಾಗಿದೆ. ಭಂಡಾರ ಜಿಲ್ಲೆಯ  ಕೆಲವು ಪ್ರದೇಶಗಳಲ್ಲಿ  50ಕ್ಕೂ ಅಧಿಕ 'ಸ್ವಸಹಾಯ ಸಂಘ'ಗಳು ಇದನ್ನು ಸಂರಕ್ಷಿಸುವ ಕಾರ್ಯದಲ್ಲಿ ತೊಡಗಿಕೊಂಡಿವೆ. ಇವುಗಳಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಅಧಿಕ ಪ್ರಮಾಣದಲ್ಲಿದೆ. ಈ ರೇಷ್ಮೆ ವೇಗವಾಗಿ ಹೆಚ್ಚು ಹೆಚ್ಚು ಜನಪ್ರಿಯವಾಗುತ್ತಿದೆ ಮತ್ತು ಸ್ಥಳೀಯ ಸಮುದಾಯಗಳನ್ನು ಸಬಲೀಕರಣಗೊಳಿಸುತ್ತಿದೆ ಮತ್ತು ಇದು 'ಮೇಕ್ ಇನ್ ಇಂಡಿಯಾ'ದ ಸ್ಫೂರ್ತಿಯೆನಿಸಿದೆ.

ಸ್ನೇಹಿತರೇ, ಹಬ್ಬಗಳ ಈ ಕಾಲದಲ್ಲಿ ನೀವು ನಿಮ್ಮ ಹಳೆಯ ನಿರ್ಣಯವನ್ನು ಮತ್ತೊಮ್ಮೆ ಪುನರ್ ಮನನ ಮಾಡಿಕೊಳ್ಳಿ. ನೀವು ಏನನ್ನು ಖರೀದಿಸಿದರೂ ಅದು 'ಭಾರತದಲ್ಲಿ ತಯಾರಾಗಿರಬೇಕು' ಅಂದರೆ 'ಮೇಡ್ ಇನ್ ಇಂಡಿಯಾ' ಆಗಿರಬೇಕು, ನೀವು ಬೇರೆಯವರಿಗೆ ಏನೇ ಉಡುಗೊರೆ ನೀಡಿದರೂ ಅದು 'ಮೇಡ್ ಇನ್ ಇಂಡಿಯಾ' ಆಗಿರಬೇಕು. ಕೇವಲ ಮಣ್ಣಿನ ದೀಪಗಳನ್ನು ಖರೀದಿಸುವುದು 'ಲೋಕಲ್ ಫಾರ್ ವೋಕಲ್' ಅಲ್ಲ. ನೀವು ವಾಸವಾಗಿರುವ ಪ್ರದೇಶದಲ್ಲಿ ತಯಾರಿಸಿದ ಸ್ಥಳೀಯ ಉತ್ಪನ್ನಗಳಿಗೆ ನೀವು ಸಾಧ್ಯವಾದಷ್ಟೂ ಉತ್ತೇಜನ, ಪ್ರೋತ್ಸಾಹ ನೀಡಬೇಕು. ನಮ್ಮ ಕುಶಲಕರ್ಮಿಗಳು ತಮ್ಮ ಶ್ರಮದಿಂದ ಬೆವರು ಹರಿಸಿ, ಭಾರತದ ನೆಲದಲ್ಲಿ ತಯಾರಿಸಿದ ಯಾವುದೇ ಉತ್ಪನ್ನ ನಮ್ಮ ಹೆಮ್ಮೆಯಾಗಿರುತ್ತದೆ– ಈ ಹೆಮ್ಮೆಯನ್ನು ನಾವು ನಮ್ಮ ಪ್ರಯತ್ನದಿಂದಲೂ ನಾಲ್ಕು ಪಟ್ಟು ಹೆಚ್ಚಿಸಬೇಕು.

ಸ್ನೇಹಿತರೇ, ‘ಮನದ ಮಾತಿನ’ ಈ ಸಂಚಿಕೆಯಲ್ಲಿ ನಿಮ್ಮೊಂದಿಗೆ ಬೆರೆತು ನನಗೆ ಬಹಳ ಸಂತೋಷವಾಗಿದೆ. ಈ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ನಿಮ್ಮ ಅಭಿಪ್ರಾಯಗಳನ್ನು ಮತ್ತು ಸಲಹೆಗಳನ್ನು ಖಂಡಿತವಾಗಿಯೂ ನನಗೆ ಕಳುಹಿಸಿಕೊಡಿ. ನಾನು ನಿಮ್ಮ ಪತ್ರಗಳು ಮತ್ತು ಸಂದೇಶಗಳಿಗಾಗಿ ನಿರೀಕ್ಷಿಸುತ್ತಿರುತ್ತೇನೆ. ಕೆಲವೇ ದಿನಗಳ ನಂತರ ಹಬ್ಬಗಳ ಕಾಲ ಆರಂಭವಾಗಲಿದೆ. ನವರಾತ್ರಿಯಿಂದ ಈ ಹಬ್ಬಗಳ ಸಾಲು ಆರಂಭವಾಗುತ್ತದೆ ಮತ್ತು ಆ ನಂತರದ ಎರಡು ತಿಂಗಳುಗಳವರೆಗೂ ಪೂಜೆ-ಪುನಸ್ಕಾರ, ವ್ರತ-ಹಬ್ಬ, ಉಲ್ಲಾಸ-ಉತ್ಸಾಹ, ನಾಲ್ಕೂ ದಿಕ್ಕಿನಲ್ಲಿ ಇದೇ ಸಂತಸದ ವಾತಾವರಣ ಆವರಿಸಿಕೊಂಡಿರುತ್ತದೆ. ಮುಂಬರುವ ಹಬ್ಬಗಳಿಗಾಗಿ ನಾನು ನಿಮ್ಮೆಲ್ಲರಿಗೂ ಅನೇಕಾನೇಕ ಶುಭಾಶಯ ಕೋರುತ್ತೇನೆ. ನೀವೆಲ್ಲರೂ, ನಿಮ್ಮ ಕುಟುಂಬದವರ ಮತ್ತು ನಿಮ್ಮ ಆತ್ಮೀಯ ಬಂಧು ಬಾಂಧವರೊಂದಿಗೆ ಹಬ್ಬದ ಆನಂದವನ್ನು ಸಂಪೂರ್ಣವಾಗಿ ಸವಿಯಿರಿ. ಇತರರನ್ನೂ ನಿಮ್ಮ ಸಂತೋಷದಲ್ಲಿ ಭಾಗಿಯಾಗಿಸಿಕೊಳ್ಳಿ. ಮುಂದಿನ ತಿಂಗಳು ಮನದ ಮಾತಿನಲ್ಲಿ ಮತ್ತಷ್ಟು ಹೊಸ ವಿಷಯಗಳೊಂದಿಗೆ ನಿಮ್ಮೊಂದಿಗೆ ಇರಲಿದ್ದೇನೆ. ನಿಮ್ಮೆಲ್ಲರಿಗೂ ಅನೇಕಾನೇಕ ಧನ್ಯವಾದ.

 

*****

 

 



(Release ID: 2060121) Visitor Counter : 7