ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav g20-india-2023

ಕ್ವಾಡ್ ನಾಯಕರ ಕ್ಯಾನ್ಸರ್‌ ಮೂನ್‌ಶಾಟ್‌ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

Posted On: 22 SEP 2024 5:16AM by PIB Bengaluru

ಗೌರವಾನ್ವಿತರೇ,

ಈ ಪ್ರಮುಖ ಕಾರ್ಯಕ್ರಮವನ್ನು ಆಯೋಜಿಸಿದ್ದಕ್ಕಾಗಿ ನಾನು ಅಧ್ಯಕ್ಷ ಬೈಡೆನ್ ಅವರನ್ನು ಅಭಿನಂದಿಸುತ್ತೇನೆ. ಇದು ಕೈಗೆಟುಕುವ, ಸುಲಭವಾಗಿ ಲಭ್ಯವಿರುವ ಮತ್ತು ಗುಣಮಟ್ಟದ ಆರೋಗ್ಯ ರಕ್ಷಣೆಗೆ ನಮ್ಮ ಹಂಚಿಕೆಯ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ, ನಾವು ಇಂಡೋ-ಪೆಸಿಫಿಕ್‌ಗಾಗಿ "ಕ್ವಾಡ್ ಲಸಿಕೆ ಉಪಕ್ರಮ" ವನ್ನು ಆರಂಭಿಸಿದ್ದೇವೆ. ಮತ್ತು ಕ್ವಾಡ್ ನಲ್ಲಿ ಗರ್ಭಕಂಠದ ಕ್ಯಾನ್ಸರ್‌ ನಂತಹ ಸವಾಲನ್ನು ಎದುರಿಸಲು ನಾವು ಒಟ್ಟಾಗಿ ನಿರ್ಧರಿಸಿರುವುದು ನನಗೆ ಸಂತೋಷ ತಂದಿದೆ.

ಕ್ಯಾನ್ಸರ್‌ ಗುಣಪಡಿಸುವ ಚಿಕಿತ್ಸೆಗೆ ಸಹಭಾಗಿತ್ವ ಅತ್ಯಂತ ಅಗತ್ಯ. ಕ್ಯಾನ್ಸರ್ ನ ಹೊರೆಯನ್ನು ತಗ್ಗಿಸಲು ಮೊದಲೇ ಮುನ್ನೆಚ್ಚರಿಕೆ ವಹಿಸುವುದು, ತಪಾಸಣೆ ನಡೆಸುವುದು, ರೋಗಪತ್ತೆ ಮಾಡುವುದು ಮತ್ತು ಚಿಕಿತ್ಸೆಯನ್ನು ಒಳಗೊಂಡಿರುವ ಒಂದು ಸಮಗ್ರ ವಿಧಾನವು ಅತ್ಯಗತ್ಯವಾಗಿದೆ. ಭಾರತವು ಅತ್ಯಂತ ದುಬಾರಿಯಾಗಿರುವ ಗರ್ಭಕಂಠದ ಕ್ಯಾನ್ಸರ್ ತಪಾಸಣೆ ಕಾರ್ಯಕ್ರಮವನ್ನು ಸಾಮೂಹಿಕ ಪ್ರಮಾಣದಲ್ಲಿ ಮಾಡುತ್ತಿದೆ. ಅಲ್ಲದೆ, ಹೆಚ್ಚುವರಿಯಾಗಿ ಭಾರತವು ವಿಶ್ವದ ಅತಿದೊಡ್ಡ ಆರೋಗ್ಯ ವಿಮಾ ಯೋಜನೆಯನ್ನು ಸಹ ನಡೆಸುತ್ತದೆ ಮತ್ತು ಎಲ್ಲರಿಗೂ ಕೈಗೆಟಕುವ ದರದಲ್ಲಿ ಔಷಧಗಳು ಲಭ್ಯವಾಗುವಂತೆ ವಿಶೇಷ ಕೇಂದ್ರಗಳನ್ನು ಸಹ ತೆರೆದಿದೆ. ಗರ್ಭಕಂಠದ ಕ್ಯಾನ್ಸರ್‌ಗೆ ಭಾರತ ತನ್ನದೇ ಆದ ಲಸಿಕೆಯನ್ನು ಅಭಿವೃದ್ಧಿಪಡಿಸಿದೆ. ಮತ್ತು ಕೃತಕ ಬುದ್ದಿಮತ್ತೆ (ಎಐ) ಸಹಾಯದಿಂದ ಹೊಸ ಚಿಕಿತ್ಸಾ ಶಿಷ್ಟಾಚಾರ (ಪ್ರೋಟೋಕಾಲ್‌) ಗಳನ್ನು ಆರಂಭಿಸುತ್ತಿದೆ.

ಗೌರವಾನ್ವಿತರೇ,

ಭಾರತ ತನ್ನ ಅನುಭವ ಮತ್ತು ಪರಿಣಿತಿ ಎರಡನ್ನೂ ಹಂಚಿಕೊಳ್ಳಲು ಸಿದ್ಧವಿದೆ. ಇಂದು, ಕ್ಯಾನ್ಸರ್ ಆರೈಕೆಯಲ್ಲಿ ಕೆಲಸ ಮಾಡುತ್ತಿರುವ ಭಾರತದ ಅನೇಕ ತಜ್ಞರು ಈ ಕಾರ್ಯಕ್ರಮಕ್ಕೆ ನಮ್ಮೊಂದಿಗೆ ಸೇರಿಕೊಂಡಿದ್ದಾರೆ. ಭಾರತದ ಮುನ್ನೋಟ "ಒಂದು ಭೂಮಿ, ಒಂದು ಆರೋಗ್ಯ" ಎಂಬುದಾಗಿದೆ. ಅದೇ ಸ್ಪೂರ್ತಿಯಲ್ಲಿ, ಕ್ವಾಡ್ ಮೂನ್‌ಶಾಟ್ ಉಪಕ್ರಮದಡಿಯಲ್ಲಿ ಮಾದರಿ ಕಿಟ್‌ಗಳು, ರೋಗ ಪತ್ತೆ ಕಿಟ್‌ಗಳು ಮತ್ತು ಲಸಿಕೆಗಳಿಗಾಗಿ ನಮ್ಮ 7.5 ಮಿಲಿಯನ್ ಡಾಲರ್‌ ಕೊಡುಗೆಯನ್ನು ಘೋಷಿಸಲು ನನಗೆ ಸಂತೋಷವಾಗಿದೆ. ರೇಡಿಯೊಥೆರಪಿ ಚಿಕಿತ್ಸೆ ಮತ್ತು ಸಾಮರ್ಥ್ಯ ವೃದ್ಧಿಗೆ ಭಾರತವು ಬೆಂಬಲವನ್ನು ನೀಡುತ್ತದೆ.

ಗವಿ ಮತ್ತು ಕ್ವಾಡ್ ನ ಉಪಕ್ರಮಗಳ ಮೂಲಕ ಭಾರತವು ಇಂಡೋ-ಪೆಸಿಫಿಕ್ ದೇಶಗಳಿಗೆ 40 ಮಿಲಿಯನ್ ಲಸಿಕೆ ಡೋಸ್‌ಗಳನ್ನು ಕೊಡುಗೆಯಾಗಿ ನೀಡಲಿದೆ ಎಂದು ಹಂಚಿಕೊಳ್ಳಲು ನನಗೆ ಸಂತೋಷವಾಗುತ್ತಿದೆ. ಈ 40 ಮಿಲಿಯನ್ ಲಸಿಕೆ ಡೋಸ್‌ಗಳು ಕೋಟಿಗಟ್ಟಲೆ ಜನರ ಜೀವನದಲ್ಲಿ ಭರವಸೆಯ ಕಿರಣಗಳಾಗಲಿವೆ. ನೀವು ನೋಡುವಂತೆ ಕ್ವಾಡ್ ಕಾರ್ಯನಿರ್ವಹಿಸಿದಾಗ, ಅದು ರಾಷ್ಟ್ರಗಳಿಗೆ ಮಾತ್ರವಲ್ಲ - ಅದು ಜನರಿಗೆ ಅನುಕೂಲಕಾರಿಯಾಗಿದೆ. ಇದು ನಮ್ಮ ಮಾನವ ಕೇಂದ್ರಿತ ವಿಧಾನದ ನಿಜವಾದ ಸಾರವಾಗಿದೆ.

ಧನ್ಯವಾದಗಳು.

ಘೋಷಣೆ: ಇದು ಪ್ರಧಾನಮಂತ್ರಿಗಳ ಭಾಷಣದ ಯಥಾವತ್‌ ಅನುವಾದವಲ್ಲ, ಅವರು ಮೂಲತಃ ಹಿಂದಿಯಲ್ಲಿ ಮಾತನಾಡಿದರು.

 

*****



(Release ID: 2057890) Visitor Counter : 10