ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಗುಜರಾತ್‌ನ ಗಾಂಧಿನಗರದಲ್ಲಿ ರಿ-ಇನ್ವೆಸ್ಟ್ 2024 ಸಮ್ಮೇಳನದ ಉದ್ಘಾಟನಾ ಸಮಾರಂಭ ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ

Posted On: 16 SEP 2024 2:58PM by PIB Bengaluru

ಗುಜರಾತ್ ರಾಜ್ಯಪಾಲರಾದ ಶ್ರೀ ಆಚಾರ್ಯ ದೇವವ್ರತ್ ಜಿ, ಗುಜರಾತ್ ಮುಖ್ಯಮಂತ್ರಿ, ಶ್ರೀ ಭೂಪೇಂದ್ರಭಾಯಿ ಪಟೇಲ್, ಆಂಧ್ರ ಪ್ರದೇಶ ಮುಖ್ಯಮಂತ್ರಿ ಶ್ರೀ ಚಂದ್ರಬಾಬು ನಾಯ್ಡು ಜಿ, ರಾಜಸ್ಥಾನ ಮುಖ್ಯಮಂತ್ರಿ ಶ್ರೀ ಭಜನ್ ಲಾಲ್ ಶರ್ಮಾ ಜಿ, ಮಧ್ಯಪ್ರದೇಶ ಮುಖ್ಯಮಂತ್ರಿ ಶ್ರೀ ಮೋಹನ್ ಯಾದವ್ ಜಿ, ಛತ್ತೀಸ್‌ಗಢ ಮುಖ್ಯಮಂತ್ರಿ ಮತ್ತು ಗೋವಾ ಮುಖ್ಯಮಂತ್ರಿಗಳೆ, ಸಂಪು ಸಹೋದ್ಯೋಗಿಗಳಾದ ಪ್ರಲ್ಹಾದ್ ಜೋಶಿ ಮತ್ತು ಶ್ರೀಪಾದ್ ನಾಯ್ಕ್ ಜಿ, ಜರ್ಮನಿಯ ಆರ್ಥಿಕ ಸಹಕಾರ ಸಚಿವರು ಮತ್ತು ಡೆನ್ಮಾರ್ಕ್‌ನ ಕೈಗಾರಿಕಾ ವ್ಯವಹಾರ ಸಚಿವರು ಸೇರಿದಂತೆ ವಿದೇಶಿ ಗಣ್ಯ ಅತಿಥಿಗಳೆ, ವಿವಿಧ ರಾಜ್ಯಗಳ ಇಂಧನ ಸಚಿವರೆ, ಹಲವಾರು ದೇಶಗಳ ಪ್ರತಿನಿಧಿಗಳೆ, ಇಲ್ಲಿ ನೆರೆದಿರುವ ಮಹಿಳೆಯರೆ ಮತ್ತು ಮಹನೀಯರೆ!

ವಿಶ್ವದ ವಿವಿಧ ದೇಶಗಳಿಂದ ಇಲ್ಲಿಗೆ ಆಗಮಿಸಿರುವ ನಮ್ಮ ಎಲ್ಲಾ ಅತಿಥಿಗಳಿಗೆ ನಾನು ಆತ್ಮೀಯ ಸ್ವಾಗತ ಕೋರುತ್ತೇನೆ. ಇದು ರಿ-ಇನ್ವೆಸ್ಟ್(RE-Invest) ಸಮ್ಮೇಳನದ 4ನೇ ಆವೃತ್ತಿಯಾಗಿದ್ದು, ಮುಂದಿನ 3 ದಿನಗಳಲ್ಲಿ ಇಂಧನ, ತಂತ್ರಜ್ಞಾನ ಮತ್ತು ನೀತಿಗಳ ಭವಿಷ್ಯ ಕುರಿತು ವಿಸ್ತೃತವಾದ ಚರ್ಚೆಗಳು ನಡೆಯಲಿವೆ ಎಂಬ ವಿಶ್ವಾಸ ನನಗಿದೆ. ಈ ವಲಯದಲ್ಲಿ ವ್ಯಾಪಕ ಅನುಭವ ಹೊಂದಿರುವ ನಮ್ಮ ಅನೇಕ ಹಿರಿಯ ಮುಖ್ಯಮಂತ್ರಿಗಳು ಸಹ ನಮ್ಮೊಂದಿಗಿದ್ದಾರೆ. ಈ ಚರ್ಚೆಗಳಲ್ಲಿ ಅವರ ಅಮೂಲ್ಯವಾದ ಒಳನೋಟಗಳಿಂದ ನಾವು ಪ್ರಯೋಜನ ಪಡೆಯುತ್ತೇವೆ ಎಂಬ ಖಾತ್ರಿ ನನಗಿದೆ. ನಾವು ಇಲ್ಲಿ ವಿನಿಮಯ ಮಾಡಿಕೊಳ್ಳುವ ಜ್ಞಾನವು ಒಟ್ಟಾರೆಯಾಗಿ ಮಾನವತೆಯ ಸುಧಾರಣೆಗೆ ಕೊಡುಗೆ ನೀಡುತ್ತದೆ. ನಿಮ್ಮೆಲ್ಲರಿಗೂ ನನ್ನ ಶುಭ ಹಾರೈಕೆಗಳು.

ಸ್ನೇಹಿತರೆ,

ನಿಮಗೆ ತಿಳಿದಿರುವಂತೆ, ಭಾರತದ ಜನರು 60 ವರ್ಷಗಳಲ್ಲಿ ಮೊದಲ ಬಾರಿಗೆ ಸತತ 3ನೇ ಅವಧಿಗೆ ನಮ್ಮ ಸರ್ಕಾರವನ್ನು ಆಯ್ಕೆ ಮಾಡಿದ್ದಾರೆ. ಈ ಐತಿಹಾಸಿಕ ನಿರ್ಧಾರದ ಹಿಂದೆ ಭಾರತದ ಪ್ರಚಂಡ ಆಶಯಗಳಿವೆ. ಇಂದು 140 ಕೋಟಿ ಭಾರತೀಯರು-ವಿಶೇಷವಾಗಿ ಯುವಜನರು ಮತ್ತು ಮಹಿಳೆಯರು ಕಳೆದ 10 ವರ್ಷಗಳಲ್ಲಿ ತಮ್ಮ ಆಕಾಂಕ್ಷೆಗಳಿಗೆ ನೀಡಿದ ರೆಕ್ಕೆಪುಕ್ಕಗಳು ಈ 3ನೇ ಅವಧಿಯಲ್ಲಿ ಇನ್ನಷ್ಟು ಎತ್ತರಕ್ಕೆ ಏರಲಿವೆ ಎಂಬ ವಿಶ್ವಾಸವಿದೆ. ದೇಶಾದ್ಯಂತ ಬಡವರು, ನಿರ್ಲಕ್ಷಿತರು ಮತ್ತು ತುಳಿತಕ್ಕೊಳಗಾದವರಿಗೆ ನಮ್ಮ 3ನೇ ಅವಧಿಯು, ಅವರಿಗೆ ಗೌರವಯುತ ಜೀವನ ಖಚಿತಪಡಿಸುತ್ತದೆ ಎಂದು ನಂಬಿದ್ದಾರೆ.

ಭಾರತದ 140 ಕೋಟಿ ನಾಗರಿಕರು ರಾಷ್ಟ್ರವನ್ನು ಅಗ್ರ 3 ಜಾಗತಿಕ ಆರ್ಥಿಕತೆಗಳಲ್ಲಿ ಮುನ್ನಡೆಸುವ ತಮ್ಮ ಸಂಕಲ್ಪದಲ್ಲಿ ಒಗ್ಗೂಡಿದ್ದಾರೆ. ಅಂದಹಾಗೆ, ಇಂದಿನ ಘಟನೆಯು ಪ್ರತ್ಯೇಕವಾದ ಘಟನೆಯಲ್ಲ, ಇದು ಭವ್ಯವಾದ ದೃಷ್ಟಿ ಮತ್ತು ಮಹತ್ವದ ಮಿಷನ್‌ನ ಭಾಗವಾಗಿದೆ. ಇದು 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ನಮ್ಮ ಕ್ರಿಯಾಯೋಜನೆಯ ಪ್ರಮುಖ ಅಂಶವಾಗಿದೆ. ಈ 3ನೇ ಅವಧಿಯ ಮೊದಲ 100 ದಿನಗಳಲ್ಲಿ ನಾವು ಮಾಡಿದ ನಿರ್ಧಾರಗಳಲ್ಲಿ ನಮ್ಮ ಪ್ರಗತಿಯ ಆರಂಭಿಕ ಚಿಹ್ನೆಗಳು ಈಗಾಗಲೇ ಸ್ಪಷ್ಟವಾಗಿವೆ.

ಸ್ನೇಹಿತರೆ,

ಮೊದಲ 100 ದಿನಗಳಲ್ಲಿ, ನಮ್ಮ ಆದ್ಯತೆಗಳು ಸ್ಪಷ್ಟವಾಗಿವೆ ಮತ್ತು ನಮ್ಮ ವೇಗ ಮತ್ತು ಪ್ರಮಾಣವೂ ಸ್ಪಷ್ಟವಾಗಿದೆ. ಈ ಸಮಯದಲ್ಲಿ, ನಾವು ಭಾರತದ ತ್ವರಿತ ಅಭಿವೃದ್ಧಿಗೆ ಅಗತ್ಯವಿರುವ ಪ್ರತಿಯೊಂದು ಕ್ಷೇತ್ರ ಮತ್ತು ಪ್ರತಿಯೊಂದು ಅಂಶಗಳ ಮೇಲೆ ಗಮನ ಕೇಂದ್ರೀಕರಿಸಿದ್ದೇವೆ. ಈ 100 ದಿನಗಳಲ್ಲಿ, ನಾವು ಭೌತಿಕ ಮತ್ತು ಸಾಮಾಜಿಕ ಮೂಲಸೌಕರ್ಯಗಳನ್ನು ವಿಸ್ತರಿಸಲು ಮಹತ್ವದ ನಿರ್ಧಾರಗಳನ್ನು ಮಾಡಿದ್ದೇವೆ. ನಾವು ಭಾರತದಲ್ಲಿ 70 ದಶಲಕ್ಷ ಅಥವಾ 7 ಕೋಟಿ ಮನೆಗಳನ್ನು ನಿರ್ಮಿಸುತ್ತಿದ್ದೇವೆ ಎಂಬುದನ್ನು ತಿಳಿಯಲು ನಮ್ಮ ಅಂತಾರಾಷ್ಟ್ರೀಯ ಅತಿಥಿಗಳು ಆಶ್ಚರ್ಯಪಡಬಹುದು. ಅನೇಕ ದೇಶಗಳ ಜನಸಂಖ್ಯೆಗಿಂತ ಹೆಚ್ಚು ಇದಾಗಿದೆ. ನಮ್ಮ ಸರ್ಕಾರದ ಮೊದಲ 2 ಅವಧಿಯಲ್ಲಿ, ನಾವು 40 ದಶಲಕ್ಷ ಅಥವಾ 4 ಕೋಟಿ ಮನೆಗಳನ್ನು ನಿರ್ಮಿಸಿದ್ದೇವೆ. ಈಗ ನಮ್ಮ 3ನೇ ಅವಧಿಯಲ್ಲಿ ನಾವು ಹೆಚ್ಚುವರಿ 30 ದಶಲಕ್ಷ ಅಥವಾ 3 ಕೋಟಿ ಮನೆಗಳ ನಿರ್ಮಾಣ ಪ್ರಾರಂಭಿಸಿದ್ದೇವೆ. ಕಳೆದ 100 ದಿನಗಳಲ್ಲಿ ನಾವು ಭಾರತದಲ್ಲಿ 12 ಹೊಸ ಕೈಗಾರಿಕಾ ನಗರಗಳ ಅಭಿವೃದ್ಧಿಗೆ ಅನುಮೋದನೆ ನೀಡಿದ್ದೇವೆ. ಈ ಅವಧಿಯಲ್ಲಿ 8 ಹೈಸ್ಪೀಡ್ ರಸ್ತೆ ಕಾರಿಡಾರ್ ಯೋಜನೆಗಳಿಗೂ ಅನುಮೋದನೆ ನೀಡಲಾಗಿದೆ. ಹೆಚ್ಚುವರಿಯಾಗಿ, 15ಕ್ಕೂ ಹೆಚ್ಚು ಹೊಸ ಮೇಡ್-ಇನ್-ಇಂಡಿಯಾ ಸೆಮಿ-ಹೈ-ಸ್ಪೀಡ್ ವಂದೇ ಭಾರತ್ ರೈಲುಗಳನ್ನು ಪ್ರಾರಂಭಿಸಲಾಗಿದೆ. ಸಂಶೋಧನೆ ಮತ್ತು ನಾವೀನ್ಯತೆ ಉತ್ತೇಜಿಸಲು ನಾವು ಒಂದು ಟ್ರಿಲಿಯನ್ ರೂಪಾಯಿ ಸಂಶೋಧನಾ ನಿಧಿಯನ್ನು ಸ್ಥಾಪಿಸಿದ್ದೇವೆ, ವಿದ್ಯುತ್ ಪೂರೈಕೆ ಅಥವಾ ಚಲನಶೀಲತೆ ಹೆಚ್ಚಿಸಲು ಹಲವಾರು ಉಪಕ್ರಮಗಳನ್ನು ಘೋಷಿಸಲಾಗಿದೆ. ಭವಿಷ್ಯದಲ್ಲಿ ಪ್ರಮುಖ ಪಾತ್ರ ವಹಿಸುವ ಉನ್ನತ-ಕಾರ್ಯಕ್ಷಮತೆಯ ಜೈವಿಕ ಉತ್ಪಾದನೆಯನ್ನು ಮುನ್ನಡೆಸುವುದು ನಮ್ಮ ಗುರಿಯಾಗಿದೆ. ಇದಕ್ಕಾಗಿ, ಬಯೋಇ3 ನೀತಿಯನ್ನು ಅನುಮೋದಿಸಲಾಗಿದೆ.

ಸ್ನೇಹಿತರೆ,

ಕಳೆದ 100 ದಿನಗಳಲ್ಲಿ ನಾವು ಹಸಿರು ಇಂಧನ ಹೆಚ್ಚಿಸಲು ಹಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದ್ದೇವೆ. ನಾವು 7,000 ಕೋಟಿ ರೂ.ಗೂ ಹೆಚ್ಚು ಹೂಡಿಕೆ ಮಾಡುವ ಯೋಜನೆಯೊಂದಿಗೆ ಕಡಲಾಚೆಯ ಪವನಶಕ್ತಿ ಯೋಜನೆಗಳಿಗಾಗಿ ಕಾರ್ಯಸಾಧ್ಯತೆಯ ಅಂತರ ನಿಧಿ ಯೋಜನೆ ಪರಿಚಯಿಸಿದ್ದೇವೆ. ಸದ್ಯದಲ್ಲಿಯೇ ಭಾರತ 31,000 ಮೆಗಾವ್ಯಾಟ್ ಜಲವಿದ್ಯುತ್ ಉತ್ಪಾದಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ, ಇದಕ್ಕಾಗಿ ಸರ್ಕಾರವು 12,000 ಕೋಟಿ ರೂ. ಅನುದಾನಕ್ಕೆ ಅನುಮೋದನೆ ನೀಡಿದೆ.

ಸ್ನೇಹಿತರೆ,

ಭಾರತದ ವೈವಿಧ್ಯತೆ, ಪ್ರಮಾಣ, ಸಾಮರ್ಥ್ಯ, ತಾಕತ್ತು(ಶಕ್ತಿ) ಮತ್ತು ಕಾರ್ಯಕ್ಷಮತೆ ಎಲ್ಲವೂ ಅಸಾಧಾರಣವಾಗಿದೆ. ಇದಕ್ಕಾಗಿಯೇ ನಾನು ಹೇಳುತ್ತೇನೆ, ಜಾಗತಿಕ ಅಪ್ಲಿಕೇಶನ್‌ಗಾಗಿ ಭಾರತೀಯ ಪರಿಹಾರಗಳು ಎಂದು. ಜಗತ್ತು ಇದನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಪ್ರಾರಂಭಿಸಿದೆ. ಇಂದು, ಭಾರತೀಯರು ಮಾತ್ರವಲ್ಲದೆ, ಇಡೀ ವಿಶ್ವವೇ ಭಾರತವನ್ನು 21ನೇ ಶತಮಾನದ ಅತ್ಯಂತ ಭರವಸೆಯ ಅವಕಾಶವೆಂದು ಪರಿಗಣಿಸುತ್ತಿದೆ. ಈ ತಿಂಗಳ ಆರಂಭದಲ್ಲಿ ನಡೆದ ಇತ್ತೀಚಿನ ಜಾಗತಿಕ ಗಣಕಾಸು ತಂತ್ರಜ್ಞಾನ ಉತ್ಸವ(ಗ್ಲೋಬಲ್ ಫಿನ್‌ಟೆಕ್ ಫೆಸ್ಟ್)ವನ್ನು ಪರಿಗಣಿಸಿ. ಅದರ ನಂತರ, ಜಾಗತಿಕ ಪ್ರತಿನಿಧಿಗಳು ಮೊದಲ ಸೌರಶಕ್ತಿ ಅಂತಾರಾಷ್ಟ್ರೀಯ ಉತ್ಸವದಲ್ಲಿ ಭಾಗವಹಿಸಿದರು. ನಂತರ, ಜಾಗತಿಕ ಸೆಮಿಕಂಡಕ್ಟರ್ ಶೃಂಗಸಭೆಗಾಗಿ ವಿಶ್ವದ ಮೂಲೆ ಮೂಲೆಗಳಿಂದ ಜನರು ಭಾರತಕ್ಕೆ ಬಂದರು. ಈ ಅವಧಿಯಲ್ಲಿ, ಭಾರತ ನಾಗರಿಕ ವಿಮಾನಯಾನದ ಏಷ್ಯಾ-ಪೆಸಿಫಿಕ್ ಸಚಿವರ ಸಮ್ಮೇಳನ ಆಯೋಜಿಸುವ ಜವಾಬ್ದಾರಿಯನ್ನು ಸಹ ವಹಿಸಿಕೊಂಡೆವು. ಈಗ, ಇಂದು ನಾವು ಹಸಿರು ಇಂಧನ ಭವಿಷ್ಯದ ಬಗ್ಗೆ ಚರ್ಚಿಸಲು ಒಟ್ಟುಗೂಡಿದ್ದೇವೆ.

ಸ್ನೇಹಿತರೆ,

ಶ್ವೇತ ಕ್ರಾಂತಿ ಅಥವಾ ಕ್ಷೀರಕ್ರಾಂತಿ ಸಂಭವಿಸಿದ, ಮಧುರ ಕ್ರಾಂತಿ, ಜೇನು ಉಪಕ್ರಮ ಆರಂಭಿಸಿದ, ಸೌರ ಕ್ರಾಂತಿ ಆರಂಭವಾದ ಗುಜರಾತ್‌ನಲ್ಲೇ ಈ ಅದ್ಧೂರಿ ಕಾರ್ಯಕ್ರಮ ನಡೆಯುತ್ತಿರುವುದು ನನ್ನ ಪಾಲಿಗೆ ದೊಡ್ಡ ಕಾಕತಾಳೀಯ. ಭಾರತದಲ್ಲಿ ಮೊದಲು ಸೌರ ವಿದ್ಯುತ್ ನೀತಿ ಪರಿಚಯಿಸಿದ ರಾಜ್ಯ ಗುಜರಾತ್. ಇದೆಲ್ಲವೂ ಗುಜರಾತ್‌ನಲ್ಲಿ ಪ್ರಾರಂಭವಾಗಿ, ನಂತರ ನಾವು ರಾಷ್ಟ್ರಮಟ್ಟದಲ್ಲಿ ಪ್ರಗತಿ ಸಾಧಿಸಿದ್ದೇವೆ. ಭೂಪೇಂದ್ರ ಭಾಯ್ ಪ್ರಸ್ತಾಪಿಸಿದಂತೆ, ಹವಾಮಾನಕ್ಕಾಗಿ ಪ್ರತ್ಯೇಕ ಸಚಿವಾಲಯ ಸ್ಥಾಪಿಸಿದ ಪ್ರಪಂಚದಲ್ಲಿ ಗುಜರಾತ್ ಕೂಡ ಮೊದಲನೆಯದು. ಸೌರಶಕ್ತಿಯನ್ನು ಭಾರತದಲ್ಲಿ ವ್ಯಾಪಕವಾಗಿ ಚರ್ಚಿಸದ ಸಮಯದಲ್ಲಿ, ಗುಜರಾತ್‌ನಲ್ಲಿ ನೂರಾರು ಮೆಗಾವ್ಯಾಟ್ ಸೌರ ಸ್ಥಾವರಗಳನ್ನು ಸ್ಥಾಪಿಸಲಾಯಿತು.

ಸ್ನೇಹಿತರೆ,

ಈ ಸ್ಥಳಕ್ಕೆ ಮಹಾತ್ಮ ಗಾಂಧಿ-ಮಹಾತ್ಮ ಮಂದಿರ ಎಂದು ಹೆಸರಿಸಿರುವುದನ್ನು ನೀವು ಗಮನಿಸಿರಬಹುದು. ಹವಾಮಾನ ಬದಲಾವಣೆಯ ವಿಷಯವು ಜಾಗತಿಕವಾಗಿ ಹೊರಹೊಮ್ಮುವ ಮೊದಲು, ಮಹಾತ್ಮ ಗಾಂಧಿಯವರು ಜಗತ್ತಿಗೆ ಎಚ್ಚರಿಕೆ ನೀಡಿದ್ದರು. ನೀವು ಅವರ ಜೀವನವನ್ನು ನೋಡಿದರೆ, ಅವರು ಕನಿಷ್ಠ ಇಂಗಾಲದ ಹೆಜ್ಜೆಗುರುತಿನಿಂದ, ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಬದುಕಿದ್ದರೆಂದು ನೀವು ನೋಡುತ್ತೀರಿ. ಅವರು ಆಗಲೇ ಹೇಳಿದ್ದರು - "ಭೂಮಿಯು ನಮ್ಮ ಅಗತ್ಯಗಳನ್ನು ಪೂರೈಸಲು ಸಾಕಷ್ಟು ಸಂಪನ್ಮೂಲಗಳನ್ನು ಹೊಂದಿದೆ, ಆದರೆ ನಮ್ಮ ದುರಾಸೆಯಲ್ಲ." ಮಹಾತ್ಮ ಗಾಂಧೀಜಿ ಅವರ ಈ ದೃಷ್ಟಿಕೋನವು ಭಾರತದ ಶ್ರೇಷ್ಠ ಸಂಪ್ರದಾಯದಲ್ಲಿ ಬೇರೂರಿದೆ. ನಮಗೆ, ಹಸಿರು ಭವಿಷ್ಯ ಮತ್ತು ನಿವ್ವಳ ಶೂನ್ಯದಂತಹ ಪರಿಕಲ್ಪನೆಗಳು ಕೇವಲ ಅಲಂಕಾರಿಕ ಪದಗಳಲ್ಲ, ಅವು ಭಾರತಕ್ಕೆ ಅತ್ಯಗತ್ಯ. ಅವು ಭಾರತ ಮತ್ತು ಅದರ ಎಲ್ಲಾ ರಾಜ್ಯ ಸರ್ಕಾರಗಳ ಬದ್ಧತೆಯನ್ನು ಪ್ರತಿಬಿಂಬಿಸುತ್ತವೆ. ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಯಾಗಿಯೂ ಸಹ, ಈ ಬದ್ಧತೆಗಳನ್ನು ತಪ್ಪಿಸಲು ನಾವು ಮಾನ್ಯವಾದ ಕ್ಷಮೆಯನ್ನು ಹೊಂದಬಹುದಿತ್ತು. ಹಾನಿ ಉಂಟುಮಾಡುವಲ್ಲಿ ನಮ್ಮ ಪಾತ್ರವಿಲ್ಲ ಎಂದು ನಾವು ಜಗತ್ತಿಗೆ ಹೇಳಬಹುದಿತ್ತು, ಆದರೆ ನಾವು ಅದನ್ನು ಮಾಡಲಿಲ್ಲ. ಬದಲಾಗಿ, ನಾವು ನಮ್ಮ ಪಾಲಿನ ಜವಾಬ್ದಾರಿಯುತ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಮಾನವತೆಯ  ಉಜ್ವಲ ಭವಿಷ್ಯದ ಬಗ್ಗೆ ನಮ್ಮ ಕಾಳಜಿಯಿಂದ ಪ್ರೇರೇಪಿಸಲ್ಪಟ್ಟ ಜಗತ್ತಿಗೆ ಒಂದು ಉದಾಹರಣೆಯಾಗಿದ್ದೇವೆ.

ಭಾರತ ಇಂದು ಕೇವಲ ವರ್ತಮಾನಕ್ಕೆ ಮಾತ್ರವಲ್ಲ, ಮುಂದಿನ ಸಾವಿರ ವರ್ಷಗಳಿಗೂ ಭದ್ರ ಬುನಾದಿ ಹಾಕುತ್ತಿದೆ. ನಮ್ಮ ಗುರಿ ಕೇವಲ ಮೇಲಕ್ಕೆ ತಲುಪುವುದಲ್ಲ, ನಾವು ಅಲ್ಲಿ ಉಳಿಯಲು ತಯಾರಿ ನಡೆಸುತ್ತಿದ್ದೇವೆ. ಭಾರತವು ತನ್ನ ಇಂಧನ ಅಗತ್ಯತೆಗಳನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಂಡಿದೆ, 2047ರ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲು ಏನು ಬೇಕು ಎಂಬುದು ನಮಗೆ ತಿಳಿದಿದೆ. ನಾವು ನಮ್ಮದೇ ಆದ ತೈಲ ಮತ್ತು ಅನಿಲ ನಿಕ್ಷೇಪಗಳ ಕೊರತೆ ಹೊಂದಿದ್ದೇವೆ, ಇಂಧನ ಸ್ವತಂತ್ರವಾಗಿಲ್ಲ ಎಂಬುದು ಸಹ ನಮಗೆ ತಿಳಿದಿದೆ. ಆದ್ದರಿಂದ, ನಾವು ಸೌರಶಕ್ತಿ, ಪವನ ಶಕ್ತಿ, ಪರಮಾಣು ಶಕ್ತಿ ಮತ್ತು ಜಲವಿದ್ಯುತ್ ಮೇಲೆ ನಮ್ಮ ಭವಿಷ್ಯ ನಿರ್ಮಿಸಲು ಆಯ್ಕೆ ಮಾಡಿಕೊಂಡಿದ್ದೇವೆ.

ಸ್ನೇಹಿತರೆ,

ಪ್ಯಾರಿಸ್ ಒಪ್ಪಂದದಲ್ಲಿ ನಿಗದಿಪಡಿಸಿದ ಹವಾಮಾನ ಬದ್ಧತೆಗಳನ್ನು ಪೂರೈಸಿದ ಮೊದಲ ಜಿ-20 ರಾಷ್ಟ್ರ ಭಾರತವಾಗಿದ್ದು, ನಿಗದಿತ ಸಮಯಕ್ಕಿಂತ 9 ವರ್ಷಗಳ ಮುಂಚಿತವಾಗಿ ಅವುಗಳನ್ನು ಸಾಧಿಸಿದ್ದೇವೆ. -20 ಗುಂಪಿನಲ್ಲಿರುವ ಏಕೈಕ ದೇಶ ನಮ್ಮದು. ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಏನನ್ನು ಸಾಧಿಸಿಲ್ಲ, ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರವು ಜಗತ್ತಿಗೆ ಸಾಧಿಸಿದೆ. ಈಗ, 2030ರ ವೇಳೆಗೆ 500 ಗಿಗಾವ್ಯಾಟ್ ನವೀಕರಿಸಬಹುದಾದ ಇಂಧನ ಉತ್ಪಾನೆಯ ನಮ್ಮ ಗುರಿ ತಲುಪಲು, ನಾವು ಅನೇಕ ಹಂತಗಳಲ್ಲಿ ಕೆಲಸ ಮಾಡುತ್ತಿದ್ದೇವೆ. ಹಸಿರು ಪರಿವರ್ತನೆಯನ್ನು ಜನಾಂದೋಲನವಾಗಿ ಪರಿವರ್ತಿಸುತ್ತಿದ್ದೇವೆ. ನೀವು ವೀಡಿಯೊದಲ್ಲಿ ನೋಡಿದಂತೆ, ನಮ್ಮ ಪ್ರಧಾನ ಮಂತ್ರಿ ಸೂರ್ಯ ಘರ್ ಮುಫ್ತ್ ಬಿಜ್ಲೀ ಯೋಜನೆಯನ್ನು ಅಧ್ಯಯನ ಮಾಡಲು ನಾನು ನಿಮ್ಮನ್ನು ಪ್ರೋತ್ಸಾಹಿಸುತ್ತೇನೆ. ಮೇಲ್ಛಾವಣಿಯ ಸೌರ ವ್ಯವಸ್ಥೆಗಳಿಗೆ ಈ ವಿಶಿಷ್ಟ ಉಪಕ್ರಮವು ಸೌರಫಲಕಗಳನ್ನು ಸ್ಥಾಪಿಸಲು ಮತ್ತು ನಿರ್ವಹಿಸಲು ಕುಟುಂಬಗಳಿಗೆ ಹಣಕಾಸಿನ ಬೆಂಬಲ ನೀಡುತ್ತದೆ. ಈ ಯೋಜನೆಯೊಂದಿಗೆ, ಭಾರತದಲ್ಲಿರುವ ಪ್ರತಿಯೊಂದು ಮನೆಯೂ ವಿದ್ಯುತ್ ಉತ್ಪಾದಕರಾಗಬಹುದು. ಇಲ್ಲಿಯವರೆಗೆ, 13 ದಶಲಕ್ಷ ಅಥವಾ 1 ಕೋಟಿ 30 ಲಕ್ಷ ಕುಟುಂಬಗಳು ಈ ಯೋಜನೆಗೆ ನೋಂದಾಯಿಸಿಕೊಂಡಿವೆ. ಈ ಯೋಜನೆಯಡಿ, 3.25 ಲಕ್ಷ ಮನೆಗಳಲ್ಲಿ ಅನುಸ್ಥಾಪನೆ ಪೂರ್ಣಗೊಳಿಸಲಾಗಿದೆ.

ಸ್ನೇಹಿತರೆ,

ಹೊರಹೊಮ್ಮಲು ಪ್ರಾರಂಭವಾಗಿರುವ ಪ್ರಧಾನ ಮಂತ್ರಿ ಸೂರ್ಯ ಘರ್ ಮುಫ್ತ್ ಬಿಜ್ಲೀ ಯೋಜನೆಯ ಫಲಿತಾಂಶಗಳು ನಿಜವಾಗಿಯೂ ಗಮನಾರ್ಹವಾಗಿವೆ. ಉದಾಹರಣೆಗೆ, ತಿಂಗಳಿಗೆ 250 ಯೂನಿಟ್ ವಿದ್ಯುತ್ ಬಳಸುವ ಸಣ್ಣ ಕುಟುಂಬವನ್ನು ತೆಗೆದುಕೊಳ್ಳಿ. 100 ಯೂನಿಟ್ ವಿದ್ಯುತ್ ಉತ್ಪಾದಿಸಿ ಮತ್ತೆ ಗ್ರಿಡ್ ಗೆ ಮಾರಾಟ ಮಾಡಿದರೆ ವರ್ಷಕ್ಕೆ ಸುಮಾರು 25,000 ರೂ. ಆದಾಯ ಬರುತ್ತದೆ. ಇದರರ್ಥ ಅವರ ವಿದ್ಯುತ್ ಬಿಲ್‌ನಲ್ಲಿನ ಒಟ್ಟು ಉಳಿತಾಯ ಮತ್ತು ಅವರು ಗಳಿಸುವ ಆದಾಯವು ವಾರ್ಷಿಕವಾಗಿ ಸರಿಸುಮಾರು 25,000 ರೂಪಾಯಿ ಆಗುತ್ತದೆ. ಈಗ ಅವರು ಈ ಹಣವನ್ನು ಪಬ್ಲಿಕ್ ಪ್ರಾವಿಡೆಂಟ್ ಫಂಡ್‌ನಲ್ಲಿ (ಪಿಪಿಎಫ್) ಹೂಡಿಕೆ ಮಾಡಿದರೆ ಮತ್ತು ಅವರಿಗೆ ನವಜಾತ ಹೆಣ್ಣು ಮಗುವಿದೆ ಎಂದು ಹೇಳಿದರೆ, ಅವಳು 20 ವರ್ಷ ತುಂಬುವ ವೇಳೆಗೆ ಅವರು 10-12 ಲಕ್ಷ ರೂಪಾಯಿಗಿಂತ ಹೆಚ್ಚು ಹಣ ಕೂಡಿಡುತ್ತಾರೆ. ಅವಳ ವಿದ್ಯಾಭ್ಯಾಸದಿಂದ ಹಿಡಿದು ಮದುವೆಯವರೆಗೂ ಈ ಹಣ ಎಷ್ಟು ಉಪಯುಕ್ತ ಎಂಬುದನ್ನು ನೀವೇ ಊಹಿಸಿ.

ಸ್ನೇಹಿತರೆ,

ಈ ಯೋಜನೆಯಿಂದ ಇನ್ನೆರಡು ಮಹತ್ವದ ಪ್ರಯೋಜನಗಳಿವೆ. ಈ ಯೋಜನೆಯು ವಿದ್ಯುತ್ ವೆಚ್ಚ ಉಳಿತಾಯವಾಗುವ ಜತೆಗೆ, ಉದ್ಯೋಗ ಸೃಷ್ಟಿ ಮತ್ತು ಪರಿಸರ ಸಂರಕ್ಷಣೆಯ ಚಾಲಕನಾಗಿ ಪರಿಣಮಿಸುತ್ತಿದೆ. ಹಸಿರು ಉದ್ಯೋಗಗಳು ವೇಗವಾಗಿ ಬೆಳೆಯಲು ಸಿದ್ಧವಾಗಿವೆ, ಸಾವಿರಾರು ಮಾರಾಟಗಾರರು ಮತ್ತು ಲಕ್ಷಗಟ್ಟಲೆ ಸ್ಥಾಪಕರ ಅಗತ್ಯವಿದೆ. ಈ ಯೋಜನೆಯು ಸುಮಾರು 2 ದಶಲಕ್ಷ ಅಥವಾ 20 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುತ್ತದೆ. ಪ್ರಧಾನ ಮಂತ್ರಿ ಸೂರ್ಯ ಘರ್ ಯೋಜನೆಯಡಿ, 3 ಲಕ್ಷ ಯುವಕರನ್ನು ನುರಿತ ಮಾನವಶಕ್ತಿಯಾಗಿ ತರಬೇತಿ ಮಾಡುವ ಗುರಿ ಹೊಂದಿದ್ದು, ಅವರಲ್ಲಿ 1 ಲಕ್ಷ ಜನರು ಸೋಲಾರ್ ಪಿವಿ ತಂತ್ರಜ್ಞರಾಗುತ್ತಾರೆ. ಇದಲ್ಲದೆ, ಉತ್ಪಾದಿಸುವ ಪ್ರತಿ 3 ಕಿಲೋವ್ಯಾಟ್ ಸೌರ ವಿದ್ಯುತ್ 50-60 ಟನ್ ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆ ತಡೆಯುತ್ತದೆ. ಇದರರ್ಥ ಪ್ರಧಾನ ಮಂತ್ರಿ ಸೂರ್ಯ ಘರ್ ಮುಫ್ತ್ ಬಿಜ್ಲೀ ಯೋಜನೆಯಲ್ಲಿ ಭಾಗವಹಿಸುವ ಪ್ರತಿಯೊಂದು ಕುಟುಂಬವು ಹವಾಮಾನ ಬದಲಾವಣೆ ಎದುರಿಸಲು ಮಹತ್ವದ ಕೊಡುಗೆ ನೀಡುತ್ತದೆ.

ಸ್ನೇಹಿತರೆ,

21ನೇ ಶತಮಾನದ ಇತಿಹಾಸ ಬರೆದಾಗ ಭಾರತದ ಸೌರಶಕ್ತಿಯ ಕ್ರಾಂತಿಯು ಸುವರ್ಣಾಕ್ಷರಗಳಲ್ಲಿ ಮೂಡಿಬರಲಿದೆ.

ಸ್ನೇಹಿತರೆ,

ಇಲ್ಲಿಂದ ಕೇವಲ 100 ಕಿಲೋಮೀಟರ್ ದೂರದಲ್ಲಿರುವ ಒಂದು ವಿಶೇಷವಾದ ಹಳ್ಳಿಯ ಬಗ್ಗೆ ನಮ್ಮ ಅಂತಾರಾಷ್ಟ್ರೀಯ ಅತಿಥಿಗಳಿಗೆ ತಿಳಿಸಲು ನಾನು ಬಯಸುತ್ತೇನೆ – ಅದು ಮೊಧೇರಾ. ಈ ಗ್ರಾಮವು ಶತಮಾನಗಳಷ್ಟು ಹಳೆಯದಾದ ಸೂರ್ಯ ದೇವಾಲಯದ ನೆಲೆಯಾಗಿದೆ, ಇದು ಭಾರತದ ಮೊದಲ ಸೌರಶಕ್ತಿಯ ಗ್ರಾಮವಾಗಿದೆ. ಅಲ್ಲಿ ಎಲ್ಲಾ ಇಂಧನ ಅಗತ್ಯಗಳನ್ನು ಸೌರಶಕ್ತಿಯಿಂದ ಪೂರೈಸಲಾಗುತ್ತದೆ. ಇಂದು ನಾವು ದೇಶಾದ್ಯಂತ ಇನ್ನೂ ಅನೇಕ ಸೌರಶಕ್ತಿ ಚಾಲಿತ ಹಳ್ಳಿಗಳನ್ನು ನಿರ್ಮಿಸಲು ಕೆಲಸ ಮಾಡುತ್ತಿದ್ದೇವೆ.

ಸ್ನೇಹಿತರೆ,

ನಾನು ಇತ್ತೀಚೆಗೆ ಇಲ್ಲಿ ನಡೆಯುತ್ತಿರುವ ವಸ್ತುಪ್ರದರ್ಶನಕ್ಕೆ ಭೇಟಿ ನೀಡಿದ್ದೇನೆ, ಅದನ್ನು ನೋಡಲು ಸಮಯ ಮೀಸಲಿಡುವಂತೆ ನಾನು ನಿಮ್ಮೆಲ್ಲರನ್ನು ಒತ್ತಾಯಿಸುತ್ತೇನೆ. ಶ್ರೀರಾಮನ ಜನ್ಮಸ್ಥಳ ಅಯೋಧ್ಯೆಯ ಬಗ್ಗೆ ನಿಮಗೆಲ್ಲರಿಗೂ ತಿಳಿದಿದೆ. ಭಗವಾನ್ ರಾಮನು ಸೂರ್ಯವಂಶಿ ವಂಶಕ್ಕೆ ಸೇರಿದವನು. ನಾನು ಈ ಪ್ರದರ್ಶನಕ್ಕೆ ಭೇಟಿ ನೀಡಿದಾಗ, ನಾನು ಉತ್ತರ ಪ್ರದೇಶದ ಸ್ಟಾಲ್(ಮಳಿಗೆ) ಒಂದನ್ನು ನೋಡಿದೆ. ಕಾಶಿಯ ಸಂಸದನಾಗಿದ್ದ ನನಗೆ ಸಹಜವಾಗಿಯೇ ಉತ್ತರ ಪ್ರದೇಶದ ಸ್ಟಾಲ್‌ಗೆ ಭೇಟಿ ನೀಡಲು ಒಲವು ತೋರಿತು. ನನ್ನ ಒಂದು ಆಸೆ ಈಡೇರಿತು ಎಂದು ತಿಳಿದು ಖುಷಿಯಾಯಿತು. ಭಗವಾನ್ ರಾಮನಿಗೆ ಸಮರ್ಪಿತವಾದ ಭವ್ಯವಾದ ದೇವಾಲಯ ನಿರ್ಮಿಸಲಾಗಿದೆ, ನಾವು ಈಗ ಅಯೋಧ್ಯೆಯನ್ನು ಶ್ರೀರಾಮನಿಗೆ ಸಂಬಂಧಿಸಿದ ನಗರವನ್ನು ಸೂರ್ಯವಂಶಿ ಮಾದರಿ ಸೌರ ನಗರವನ್ನಾಗಿ ಮಾಡುವ ಗುರಿ ಹೊಂದಿದ್ದೇವೆ ಎಂದು ನಾನು ಜಗತ್ತಿಗೆ ಹೇಳಲು ಬಯಸುತ್ತೇನೆ. ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಅಯೋಧ್ಯೆಯ ಪ್ರತಿಯೊಂದು ಮನೆ, ಪ್ರತಿ ಕಚೇರಿ ಮತ್ತು ಪ್ರತಿಯೊಂದು ಸೇವೆಯು ಸೌರಶಕ್ತಿಯಿಂದ ನಡೆಯುವುದನ್ನು ಖಚಿತಪಡಿಸಿಕೊಳ್ಳುವುದು ನಮ್ಮ ಗುರಿಯಾಗಿದೆ. ನಾವು ಈಗಾಗಲೇ ಅಯೋಧ್ಯೆಯಲ್ಲಿ ಅನೇಕ ಮನೆಗಳು ಮತ್ತು ಸೌಲಭ್ಯಗಳನ್ನು ಸೌರಶಕ್ತಿಗೆ ಸಂಪರ್ಕಿಸಿದ್ದೇವೆ ಎಂದು ಹಂಚಿಕೊಳ್ಳಲು ನನಗೆ ಸಂತೋಷವಾಗುತ್ತಿದೆ. ಅಯೋಧ್ಯೆಯಲ್ಲಿ ಸೌರಶಕ್ತಿ ಚಾಲಿತ ಬೀದಿ ದೀಪಗಳು, ಛೇದಕಗಳು, ದೋಣಿಗಳು, ನೀರಿನ ಎಟಿಎಂಗಳು ಮತ್ತು ಕಟ್ಟಡಗಳನ್ನು ನೀವು ದೊಡ್ಡ ಸಂಖ್ಯೆಯಲ್ಲಿ ನೋಡಬಹುದು.

ನಾವು ಇದೇ ರೀತಿ ಸೌರ ನಗರಗಳಾಗಿ ಅಭಿವೃದ್ಧಿಪಡಿಸಲು ಭಾರತದಾದ್ಯಂತ 17 ನಗರಗಳನ್ನು ಗುರುತಿಸಿದ್ದೇವೆ. ನಾವು ನಮ್ಮ ಕೃಷಿ ಕ್ಷೇತ್ರ, ಕೃಷಿ ಮತ್ತು ರೈತರನ್ನು ಸೌರವಿದ್ಯುತ್ ಉತ್ಪಾದನೆಯ ಮೂಲಕ ಸಬಲಗೊಳಿಸುತ್ತಿದ್ದೇವೆ. ನೀರಾವರಿಗಾಗಿ ಸೋಲಾರ್ ಪಂಪ್‌ಗಳು ಮತ್ತು ಸಣ್ಣ ಸೋಲಾರ್ ಪ್ಲಾಂಟ್‌ಗಳನ್ನು ಅಳವಡಿಸಲು ರೈತರಿಗೆ ಈಗ ನೆರವು ಸಿಗುತ್ತಿದೆ. ನವೀಕರಿಸಬಹುದಾದ ಇಂಧನಕ್ಕೆ ಸಂಬಂಧಿಸಿದ ಪ್ರತಿಯೊಂದು ವಲಯದಲ್ಲಿ ಭಾರತವು ವೇಗವಾಗಿ ಮತ್ತು ದೊಡ್ಡ ಪ್ರಮಾಣದಲ್ಲಿ ಮುನ್ನಡೆಯುತ್ತಿದೆ. ಕಳೆದ 1 ದಶಕದಲ್ಲಿ ನಾವು ಪರಮಾಣು ಶಕ್ತಿಯಿಂದ ವಿದ್ಯುತ್ ಉತ್ಪಾದನೆಯನ್ನು 35% ಹೆಚ್ಚಿಸಿದ್ದೇವೆ. ಹೆಚ್ಚುವರಿಯಾಗಿ, ಭಾರತವು ಹಸಿರು ಹೈಡ್ರೋಜನ್‌ನಲ್ಲಿ ಜಾಗತಿಕ ನಾಯಕನಾಗಲು ಶ್ರಮಿಸುತ್ತಿದೆ, ಸುಮಾರು 20,000 ಕೋಟಿ ರೂಪಾಯಿ ಹೂಡಿಕೆಯೊಂದಿಗೆ ಗ್ರೀನ್ ಹೈಡ್ರೋಜನ್ ಮಿಷನ್  ಪ್ರಾರಂಭಿಸಿದ್ದೇವೆ. ಭಾರತದಲ್ಲಿ ಪ್ರಮುಖ ತ್ಯಾಜ್ಯದಿಂದ ಇಂಧನ ಉತ್ಪಾದನೆ ಅಭಿಯಾನವೂ ನಡೆಯುತ್ತಿದೆ, ನಿರ್ಣಾಯಕ ಖನಿಜಗಳಿಗೆ ಸಂಬಂಧಿಸಿದ ಸವಾಲುಗಳನ್ನು ಎದುರಿಸಲು ನಾವು ವೃತ್ತಾಕಾರದ ವಿಧಾನ(ಹಸಿರು ಆರ್ಥಿಕತೆ)ವನ್ನು ಉತ್ತೇಜಿಸುತ್ತಿದ್ದೇವೆ. ಮರುಬಳಕೆ ಮತ್ತು ಮರುಬಳಕೆಗಾಗಿ ಸುಧಾರಿತ ತಂತ್ರಜ್ಞಾನ ಅಭಿವೃದ್ಧಿಪಡಿಸುತ್ತಿರುವ ಸ್ಟಾರ್ಟಪ್‌ಗಳನ್ನು ನಾವು ಬೆಂಬಲಿಸುತ್ತಿದ್ದೇವೆ.

ಸ್ನೇಹಿತರೆ,

ಪೃಥ್ವಿ ಪರವಾದ ಜನರ(ಪ್ರೊ-ಪ್ಲಾನೆಟ್ ಪೀಪಲ್) ತತ್ವವೇ ನಮ್ಮ ಬದ್ಧತೆಯಾಗಿದೆ. ಇದಕ್ಕಾಗಿಯೇ ಭಾರತವು ಮಿಷನ್ ಲೈಫ್-ಪರಿಸರಕ್ಕಾಗಿ ಜೀವನಶೈಲಿಯ ದೃಷ್ಟಿಕೋನವನ್ನು ಜಗತ್ತಿಗೆ ಪ್ರಸ್ತುತಪಡಿಸಿದೆ. ಅಂತಾರಾಷ್ಟ್ರೀಯ ಸೌರಒಕ್ಕೂಟ ಉಪಕ್ರಮದ ಮೂಲಕ ಭಾರತವು ನೂರಾರು ದೇಶಗಳನ್ನು ಸಂಪರ್ಕಿಸಿದೆ. ಭಾರತವು ಜಿ-20 ಅಧ್ಯಕ್ಷತೆ ವಹಿಸಿದ್ದ ಅವಧಿಯಲ್ಲಿ, ನಾವು ಹಸಿರು ಇಂಧನ ಪರಿವರ್ತನೆಗೆ ಗಮನಾರ್ಹ ಒತ್ತು ನೀಡಿದ್ದೇವೆ. ಜಿ-20 ಶೃಂಗಸಭೆಯಲ್ಲಿ ನಾವು ಜಾಗತಿಕ ಜೈವಿಕ ಇಂಧನ ಒಕ್ಕೂಟ ಪ್ರಾರಂಭಿಸಿದ್ದೇವೆ. ಈ ದಶಕದ ಅಂತ್ಯದ ವೇಳೆಗೆ ನಮ್ಮ ರೈಲ್ವೆ ವಲಯವನ್ನು ಇಂಗಾಲ ಶೂನ್ಯವನ್ನಾಗಿ ಮಾಡುವ ಮಹತ್ವಾಕಾಂಕ್ಷೆಯ ಗುರಿ ಹಾಕಿಕೊಂಡಿದ್ದೇವೆ. ಭಾರತದಲ್ಲಿ ನಿವ್ವಳ-ಶೂನ್ಯ ರೈಲ್ವೆ ಎಂದರೆ ಏನು ಎಂದು ಕೆಲವರು ಆಶ್ಚರ್ಯ ಪಡಬಹುದು. ನಾನು ವಿವರಿಸುತ್ತೇನೆ - ನಮ್ಮ ರೈಲ್ವೆ ಜಾಲ ವಿಸ್ತಾರವಾಗಿದೆ, ಪ್ರತಿದಿನ ಸುಮಾರು 1-1.5 ಕೋಟಿ ಪ್ರಯಾಣಿಕರು ರೈಲುಗಳಲ್ಲಿ ಪ್ರಯಾಣಿಸುತ್ತಾರೆ. ನಾವು ಈ ಸಂಪೂರ್ಣ ಜಾಲವನ್ನು ಇಂಗಾಲ ಶೂನ್ಯವಾಗಿಸಲಿದ್ದೇವೆ. ಹೆಚ್ಚುವರಿಯಾಗಿ, 2025ರ ವೇಳೆಗೆ ಪೆಟ್ರೋಲ್‌ನಲ್ಲಿ 20% ಎಥೆನಾಲ್ ಮಿಶ್ರಣ ಸಾಧಿಸಲು ನಾವು ನಿರ್ಧರಿಸಿದ್ದೇವೆ. ಭಾರತದಾದ್ಯಂತ, ಜನರು ನೀರಿನ ಸಂರಕ್ಷಣೆಗಾಗಿ ಹಳ್ಳಿಗಳಲ್ಲಿ ಸಾವಿರಾರು ಅಮೃತ ಸರೋವರಗಳನ್ನು ನಿರ್ಮಿಸಿದ್ದಾರೆ. ಈ ದಿನಗಳಲ್ಲಿ, ಭಾರತದಲ್ಲಿ ಜನರು ತಮ್ಮ ತಾಯಂದಿರ ಗೌರವಾರ್ಥವಾಗಿ 'ಏಕ್ ಪೆಡ್ ಮಾ ಕೆ ನಾಮ್' (ತಾಯಿಗಾಗಿ ಒಂದು ಮರ) ಉಪಕ್ರಮದ ಅಡಿ, ಮರಗಳನ್ನು ನೆಡುತ್ತಿರುವ ಪ್ರವೃತ್ತಿಯನ್ನು ನೀವು ಗಮನಿಸಬಹುದು. ಈ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ನಾನು ನಿಮ್ಮೆಲ್ಲರಿಗೂ ಮತ್ತು ಪ್ರತಿಯೊಬ್ಬ ಜಾಗತಿಕ ನಾಗರಿಕರಿಗೂ ಮನವಿ ಮಾಡುತ್ತೇನೆ.

ಸ್ನೇಹಿತರೆ,

ಭಾರತದಲ್ಲಿ ನವೀಕರಿಸಬಹುದಾದ ಇಂಧನ ಬೇಡಿಕೆ ಹೆಚ್ಚುತ್ತಿದೆ, ಈ ಬೇಡಿಕೆ ಪೂರೈಸಲು ಸರ್ಕಾರವು ಹೊಸ ನೀತಿಗಳನ್ನು ರೂಪಿಸುತ್ತಿದೆ, ಸಾಧ್ಯವಿರುವ ಎಲ್ಲ ರೀತಿಯ ಬೆಂಬಲ ನೀಡುತ್ತಿದೆ. ಅಂದರೆ ಇಂಧನ ಉತ್ಪಾದನೆಯಲ್ಲಿ ವಿಫುಲ ಅವಕಾಶಗಳಿವೆ. ಭಾರತದ ಪ್ರಯತ್ನಗಳು ಮೇಡ್-ಇನ್-ಇಂಡಿಯಾ ಪರಿಹಾರಗಳ ಮೇಲೆ ಸಂಪೂರ್ಣವಾಗಿ ಕೇಂದ್ರೀಕೃತವಾಗಿವೆ. ಇದು ನಿಮ್ಮೆಲ್ಲರಿಗೂ ಹಲವಾರು ಸಾಧ್ಯತೆಗಳನ್ನು ಸೃಷ್ಟಿಸುತ್ತವೆ. ಭಾರತವು ನಿಜವಾಗಿಯೂ ವಿಸ್ತರಣೆ ಮತ್ತು ಉತ್ತಮ ಆದಾಯದ ಭೂಮಿಯಾಗಿದೆ, ನೀವು ಈ ಪ್ರಯಾಣದಲ್ಲಿ ಪಾಲ್ಗೊಳ್ಳುತ್ತೀರಿ ಎಂದು ನಾನು ಭಾವಿಸುತ್ತೇನೆ. ಈ ವಲಯದಲ್ಲಿ ಹೂಡಿಕೆಗೆ ಉತ್ತಮ ಸ್ಥಳವಿಲ್ಲ ಮತ್ತು ನಾವೀನ್ಯತೆಗೆ ಅವಕಾಶವಿಲ್ಲ... ಈ ರೀತಿಯ ಮಾಧ್ಯಮ ಬರಹಗಳಲ್ಲಿನ ಗಾಸಿಪ್ ಕಾಲಮ್‌ಗಳ ಬಗ್ಗೆ ನಾನು ಕೊಲವೊಮ್ಮೆ ಯೋಚಿಸುತ್ತೇನೆ, ಅದು ಸಾಮಾನ್ಯವಾಗಿ ಸಾಕಷ್ಟು ಮಸಾಲೆಯುಕ್ತವಾಗಿರುತ್ತದೆ ಮತ್ತು ಆಸಕ್ತಿದಾಯಕವಾಗಿದೆ. ಆದರೆ, ವಾಸ್ತವವಾಗಿ ಅವರು ಒಂದು ವಿಷಯ ಕಡೆಗಣಿಸಿದ್ದಾರೆ, ಇಂದಿನ ನಂತರ ಅವರು ಗಮನಿಸುತ್ತಾರೆ ಎಂದು ನನಗೆ ಖಾತ್ರಿಯಿದೆ. ಈಗಷ್ಟೇ ಇಲ್ಲಿ ಭಾಷಣ ಮಾಡಿದ ಪ್ರಲ್ಹಾದ್ ಜೋಶಿ ಅವರು ನಮ್ಮ ನವೀಕರಿಸಬಹುದಾದ ಇಂಧನ ಸಚಿವರು. ಆದರೆ ನನ್ನ ಹಿಂದಿನ ಸರ್ಕಾರದಲ್ಲಿ ಅವರು ಕಲ್ಲಿದ್ದಲು ಸಚಿವರಾಗಿದ್ದರು. ಹಾಗಾಗಿ, ನನ್ನ ಸಚಿವರುಸಹ ಕಲ್ಲಿದ್ದಲಿನಿಂದ ನವೀಕರಿಸಬಹುದಾದ ಇಂಧನಕ್ಕೆ ಪರಿವರ್ತನೆ ಆಗಿದ್ದಾರೆ!

ಭಾರತದ ಹಸಿರು ಪರಿವರ್ತನೆಯಲ್ಲಿ ಹೂಡಿಕೆ ಮಾಡಲು ನಾನು ಮತ್ತೊಮ್ಮೆ ನಿಮ್ಮೆಲ್ಲರನ್ನು ಆಹ್ವಾನಿಸುತ್ತೇನೆ. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಇಲ್ಲಿಗೆ ಬಂದಿದ್ದಕ್ಕಾಗಿ ನಾನು ಹೃತ್ಪೂರ್ವಕವಾಗಿ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಈ ನೆಲದಲ್ಲಿ ಹುಟ್ಟಿರುವ ನನಗೆ ಗುಜರಾತ್ ಸಾಕಷ್ಟು ಕಲಿಸಿದೆ. ಆದ್ದರಿಂದ, ಗುಜರಾತ್ ಮುಖ್ಯಮಂತ್ರಿ ಜತೆಗೆ, ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಕೃತಜ್ಞತೆ ಮತ್ತು ಸ್ವಾಗತ ಕೋರುವುದು ನನ್ನ ಕರ್ತವ್ಯ ಎಂದು ನಾನು ಭಾವಿಸುತ್ತೇನೆ. ಇಲ್ಲಿ ಭಾಗವಹಿಸಿದ್ದಕ್ಕಾಗಿ ನಾನು ರಾಜ್ಯ ಸರ್ಕಾರಗಳಿಗೂ ಧನ್ಯವಾದ ಹೇಳುತ್ತೇನೆ, ಇಲ್ಲಿ ನಮ್ಮೊಂದಿಗೆ ಸೇರಿಕೊಂಡ ಮುಖ್ಯಮಂತ್ರಿಗಳಿಗೆ ವಿಶೇಷ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಈ ಶೃಂಗಸಭೆ ಮತ್ತು ನಡೆಯಲಿರುವ ಸಂವಾದಗಳು ಮುಂದಿನ ಪೀಳಿಗೆಗೆ ಉಜ್ವಲ ಭವಿಷ್ಯದ ಅನ್ವೇಷಣೆಯಲ್ಲಿ ನಮ್ಮೆಲ್ಲರನ್ನು ಒಂದುಗೂಡಿಸುತ್ತದೆ ಎಂಬ ವಿಶ್ವಾಸ ನನಗಿದೆ.

ದ್ವಿಪಕ್ಷೀಯ ಚರ್ಚೆಗಾಗಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರು ಭಾರತಕ್ಕೆ ಭೇಟಿ ನೀಡಿದ ಸಂದರ್ಭವನ್ನು ನಾನು ನೆನಪಿಸಿಕೊಳ್ಳುತ್ತೇನೆ. ದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರೊಬ್ಬರು ನನಗೆ ಪ್ರಶ್ನೆ ಕೇಳಿದರು. ಆ ಸಮಯದಲ್ಲಿ, ಅನೇಕ ದೇಶಗಳು ವಿವಿಧ ಜಾಗತಿಕ ಸಮಸ್ಯೆಗಳಿಗೆ ಮಹತ್ವಾಕಾಂಕ್ಷೆಯ ಗುರಿಗಳನ್ನು ಘೋಷಿಸುತ್ತಿದ್ದವು. ಅದರಿಂದ ನನಗೆ ಏನಾದರೂ ಒತ್ತಡವಿದೆಯೇ ಎಂದು ಪತ್ರಕರ್ತರು ಕೇಳಿದರು. ‘ಮೋದಿ ಇಲ್ಲಿದ್ದಾರೆ... ಹಾಗಾಗಿ, ಬಾಹ್ಯ ಒತ್ತಡ ಇಲ್ಲ’ ಎಂದು ಪ್ರತಿಕ್ರಿಯಿಸಿದ್ದೆ. ಆದರೆ ನಾನು ಭಾವಿಸುವ ಒಂದು ಒತ್ತಡವಿದೆ ಎಂದು ನಾನು ಸೇರಿಸಿದೆ - ಭವಿಷ್ಯದ ಪೀಳಿಗೆಯ ಬಗ್ಗೆ ಜವಾಬ್ದಾರಿಯ ಒತ್ತಡ, ಇನ್ನೂ ಹುಟ್ಟಲಿರುವ ಮಕ್ಕಳು, ಅವರ ಉಜ್ವಲ ಭವಿಷ್ಯದ ಬಗ್ಗೆ ನಾನು ಆಳವಾಗಿ ಚಿಂತಿಸುತ್ತಿದ್ದೇನೆ. ಅದು ನನ್ನ ಒತ್ತಡ, ಅದಕ್ಕಾಗಿಯೇ ನಾನು ಮುಂಬರುವ ಪೀಳಿಗೆಯ ಕಲ್ಯಾಣಕ್ಕಾಗಿ ಕೆಲಸ ಮಾಡಲು ಬದ್ಧನಾಗಿದ್ದೇನೆ. ಇಂದಿಗೂ, ಈ ಶೃಂಗಸಭೆಯು ನಮ್ಮ ನಂತರದ 2ನೇ, 3ನೇ ಮತ್ತು 4ನೇ ತಲೆಮಾರುಗಳಿಗೆ ಉಜ್ವಲ ಭವಿಷ್ಯದ ಭರವಸೆಯಾಗಿ ಕಾರ್ಯ  ನಿರ್ವಹಿಸುತ್ತದೆ. ನಿಜವಾಗಿಯೂ ಮಹತ್ವಪೂರ್ಣವಾದುದನ್ನು ಸಾಧಿಸಲು ನೀವೆಲ್ಲರೂ ಇಲ್ಲಿ ಸೇರಿದ್ದೀರಿ ಮತ್ತು ಮಹಾತ್ಮ ಗಾಂಧಿ ಅವರ ಗೌರವಾರ್ಥವಾಗಿ ನಿರ್ಮಿಸಲಾದ ಈ ಮಹಾತ್ಮ ಮಂದಿರಕ್ಕೆ ನೀವು ಬಂದಿದ್ದೀರಿ. ಮತ್ತೊಮ್ಮೆ ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ.

 

ನಮಸ್ಕಾರ!

 

 

*****


(Release ID: 2055970) Visitor Counter : 55