ಪ್ರಧಾನ ಮಂತ್ರಿಯವರ ಕಛೇರಿ

ನವದೆಹಲಿಯಲ್ಲಿ ನಡೆದ 2ನೇ ಏಷ್ಯಾ ಪೆಸಿಫಿಕ್ ನಾಗರಿಕ ವಿಮಾನಯಾನ ಸಚಿವರ ಸಮ್ಮೇಳನ ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ

Posted On: 12 SEP 2024 9:38PM by PIB Bengaluru

ವಿವಿಧ ದೇಶಗಳಿಂದ ಆಗಮಿಸಿರುವ ಎಲ್ಲ ಗಣ್ಯರಿಗೆ ನಾನು ಹೃತ್ಪೂರ್ವಕ ಸ್ವಾಗತ ಕೋರುತ್ತೇನೆ. ಕಳೆದ 2 ದಿನಗಳಿಂದ ನಾಗರೀಕ ವಿಮಾನಯಾನ ವಲಯಕ್ಕೆ ಸಂಬಂಧಿಸಿದ ಹಲವಾರು ಪ್ರಮುಖ ವಿಷಯಗಳನ್ನು ಚರ್ಚಿಸಿದ್ದೀರಿ. ನಮ್ಮ ಸಾಮೂಹಿಕ ಅಥವಾ ಸಂಘಟಿತ ಬದ್ಧತೆ ಮತ್ತು ಏಷ್ಯಾ ಪೆಸಿಫಿಕ್ ವಲಯದ ಸಾಮರ್ಥ್ಯವನ್ನು ಪ್ರತಿಬಿಂಬಿಸುವ ನಾಗರಿಕ ವಿಮಾನಯಾನ ಕ್ಷೇತ್ರದಲ್ಲಿ ನಾವು ಕೆಲವು ಪ್ರಕಾಶಮಾನವಾದ ಮನಸ್ಸುಗಳನ್ನು ಹೊಂದಿದ್ದೇವೆ ಎಂದು ನಾನು ನಂಬುತ್ತೇನೆ. ಈ ಸಂಸ್ಥೆಯು 80 ವರ್ಷಗಳನ್ನು ಪೂರೈಸಿದೆ. ನಮ್ಮ ಸಚಿವರಾದ ಶ್ರೀ ನಾಯ್ಡು ಅವರ ಮಾರ್ಗದರ್ಶನ ಮತ್ತು ನೇತೃತ್ವದಲ್ಲಿ, 80,000 ಮರಗಳನ್ನು ನೆಡುವ ಪ್ರಮುಖ ಉಪಕ್ರಮವನ್ನು 'ಏಕ್ ಪೆಡ್ ಮಾ ಕೆ ನಾಮ್'(ಭೂತಾಯಿಗಾಗಿ ಒಂದು ಮರ) ಕೈಗೊಳ್ಳಲಾಗಿದೆ. ಆದಾಗ್ಯೂ, ನಾನು ಇನ್ನೊಂದು ವಿಷಯದತ್ತ ನಿಮ್ಮ ಗಮನ ಸೆಳೆಯಲು ಬಯಸುತ್ತೇನೆ. ನಮ್ಮ ದೇಶದಲ್ಲಿ, ಒಬ್ಬ ವ್ಯಕ್ತಿ 80 ವರ್ಷ ತಲುಪಿದಾಗ, ಅದನ್ನು ವಿಶೇಷ ರೀತಿಯಲ್ಲಿ ಆಚರಿಸಲಾಗುತ್ತದೆ. ನಮ್ಮ ಪೂರ್ವಜರ ಪ್ರಕಾರ, 80ನೇ ವಯಸ್ಸು ತಲುಪುವುದು ಎಂದರೆ ಒಂದು ಸಾವಿರ ಹುಣ್ಣಿಮೆಗಳನ್ನು ನೋಡುವ ಅವಕಾಶ ಹೊಂದಿರುವುದು ಎಂಬರ್ಥ. ಒಂದರ್ಥದಲ್ಲಿ ನಮ್ಮ ಈ ವಲಯದ ಸಂಸ್ಥೆಯೂ ಒಂದು ಸಾವಿರ ಹುಣ್ಣಿಮೆಗಳನ್ನು ಕಣ್ತುಂಬಿಕೊಂಡು ಹತ್ತಿರದಿಂದ ನೋಡಿದ ಅನುಭವ ಪಡೆದಿದೆ. ಹೀಗಾಗಿ, ಭೂಮಿಯ ಮೇಲಿನ ಈ 80 ವರ್ಷಗಳ ಪ್ರಯಾಣವು ಸ್ಮರಣೀಯ, ಯಶಸ್ವಿ ಮತ್ತು ಶ್ಲಾಘನೀಯ ಪ್ರಯಾಣವಾಗಿದೆ.

ಸ್ನೇಹಿತರೆ,

ಪ್ರಸ್ತುತ ನಡೆಯುತ್ತಿರುವ ಬೆಳವಣಿಗೆಯ ಹಿಂದೆ ನಾಗರಿಕ ವಿಮಾನಯಾನ ಕ್ಷೇತ್ರವು ಮಹತ್ವದ ಪಾತ್ರ ಹೊಂದಿದೆ. ಭಾರತದ ಆರ್ಥಿಕತೆಯಲ್ಲಿ ವೇಗವಾಗಿ ಬೆಳೆಯುತ್ತಿರುವ ವಲಯಗಳಲ್ಲಿ, ವೈಮಾನಿಕ ಕ್ಷೇತ್ರವೂ ಒಂದಾಗಿದೆ. ನಾವು ಈ ವಲಯದ ಮೂಲಕ ನಮ್ಮ ಜನರು, ಸಂಸ್ಕೃತಿ ಮತ್ತು ಸಮೃದ್ಧಿಯನ್ನು ಸಂಪರ್ಕಿಸುತ್ತಿದ್ದೇವೆ. 4 ಶತಕೋಟಿ ಜನರು, ವೇಗವಾಗಿ ಬೆಳೆಯುತ್ತಿರುವ ಮಧ್ಯಮ ವರ್ಗದ ಬೇಡಿಕೆಯ ಪರಿಣಾಮವಾಗಿ, ಇದು ಕ್ಷೇತ್ರದ ಅಭಿವೃದ್ಧಿಗೆ ಮಹತ್ವದ ಪ್ರೇರಕಶಕ್ತಿಯಾಗಿದೆ. ಈ ಪ್ರದೇಶದಲ್ಲಿ ಅವಕಾಶಗಳ ವಿಸ್ತೃತ ಜಾಲ ರೂಪಿಸುವ ಗುರಿಯೊಂದಿಗೆ ನಾವು ಮುಂದುವರಿಯುತ್ತಿದ್ದೇವೆ. ಇದು ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುತ್ತದೆ, ನಾವೀನ್ಯತೆಯನ್ನು ಉತ್ತೇಜಿಸುತ್ತದೆ, ಶಾಂತಿ ಮತ್ತು ಸಮೃದ್ಧಿಯನ್ನು ಬಲಪಡಿಸುತ್ತದೆ. ವಾಯುಯಾನದ ಭವಿಷ್ಯವನ್ನು ಸುರಕ್ಷಿತಗೊಳಿಸುವುದು ನಮ್ಮ ಹಂಚಿಕೆಯ ಬದ್ಧತೆಯಾಗಿದೆ. ನಾಗರಿಕ ವಿಮಾನಯಾನಕ್ಕೆ ಸಂಬಂಧಿಸಿದ ಅವಕಾಶಗಳ ಬಗ್ಗೆ ನೀವೆಲ್ಲರೂ ಗಂಭೀರವಾಗಿ ಚರ್ಚಿಸಿದ್ದೀರಿ. ನಿಮ್ಮ ಪ್ರಯತ್ನಕ್ಕೆ ತುಂಬು ಧನ್ಯವಾದಗಳು, ದೆಹಲಿ ಘೋಷಣೆ ಈಗ ನಮ್ಮ ಮುಂದಿದೆ. ಈ ಘೋಷಣೆಯು ಪ್ರಾದೇಶಿಕ ಸಂಪರ್ಕ, ನಾವೀನ್ಯತೆ ಮತ್ತು ವಾಯುಯಾನದಲ್ಲಿ ಸುಸ್ಥಿರ ಬೆಳವಣಿಗೆಗೆ ನಮ್ಮ ಬದ್ಧತೆಯನ್ನು ಮುನ್ನಡೆಸುತ್ತದೆ. ಪ್ರತಿಯೊಂದು ವಿಷಯದಲ್ಲೂ ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂಬ ವಿಶ್ವಾಸ ನನಗಿದೆ. ನಾವು ಈ ಘೋಷಣೆಯನ್ನು ಕಾರ್ಯಗತಗೊಳಿಸುತ್ತೇವೆ ಮತ್ತು ಸಾಮೂಹಿಕ ಶಕ್ತಿಯೊಂದಿಗೆ ಹೊಸ ಎತ್ತರ ತಲುಪುತ್ತೇವೆ. ವಾಯುಯಾನ ಸಂಪರ್ಕ ಹೆಚ್ಚಿಸುವಲ್ಲಿ ಮತ್ತು ನಮ್ಮಲ್ಲಿ ಜ್ಞಾನ, ಪರಿಣತಿ ಮತ್ತು ಸಂಪನ್ಮೂಲಗಳನ್ನು ಹಂಚಿಕೊಳ್ಳುವಲ್ಲಿ ಏಷ್ಯಾ ಪೆಸಿಫಿಕ್ ವಲಯದ ಸಹಯೋಗವು ನಮ್ಮ ಶಕ್ತಿಯನ್ನು ಇನ್ನಷ್ಟು ಹೆಚ್ಚಿಸುತ್ತದೆ. ನಮಗೆ ಮೂಲಸೌಕರ್ಯದಲ್ಲಿ ಹೆಚ್ಚಿನ ಹೂಡಿಕೆಯ ಅಗತ್ಯವಿದೆ,  ಇದು ಎಲ್ಲಾ ಸಂಬಂಧಿತ ದೇಶಗಳಿಗೆ ಸ್ವಾಭಾವಿಕ ಅಥವಾನೈಸರ್ಗಿಕ ಆದ್ಯತೆಯಾಗಿ ಉಳಿಯಬೇಕು. ಆದಾಗ್ಯೂ, ಮೂಲಸೌಕರ್ಯ ಮಾತ್ರ ಸಾಕಾಗುವುದಿಲ್ಲ, ನುರಿತ ಮಾನವಶಕ್ತಿಯ ನಿರಂತರ ಪ್ರಕ್ರಿಯೆ ಮತ್ತು ಉನ್ನತೀಕರಿಸಿದ ತಂತ್ರಜ್ಞಾನವು ಅಭಿವೃದ್ಧಿಗೆ ನಿರ್ಣಾಯಕವಾಗಿದೆ, ಇದು ನಮಗೆ ಅಗತ್ಯವಿರುವ ಮತ್ತೊಂದು ರೀತಿಯ ಹೂಡಿಕೆಯಾಗಿದೆ ಎಂದು ನಾನು ನಂಬುತ್ತೇನೆ. ಸಾಮಾನ್ಯ ನಾಗರಿಕರಿಗೆ ವಿಮಾನ ಪ್ರಯಾಣ ಲಭ್ಯವಾಗುವಂತೆ ಮಾಡುವುದು ನಮ್ಮ ಗುರಿಯಾಗಿದೆ. ನಾವು ವಿಮಾನ ಪ್ರಯಾಣವನ್ನು ಸುರಕ್ಷಿತ, ಕೈಗೆಟುಕುವ ಮತ್ತು ಎಲ್ಲರಿಗೂ ಪ್ರವೇಶಿಸುವಂತೆ ಮಾಡಬೇಕಾಗಿದೆ. ಈ ಘೋಷಣೆ, ನಮ್ಮ ಸಾಮೂಹಿಕ ಪ್ರಯತ್ನಗಳು ಮತ್ತು ನಮ್ಮ ವ್ಯಾಪಕ ಅನುಭವವು ತುಂಬಾ ಪ್ರಯೋಜನಕಾರಿಯಾಗಿದೆ ಎಂಬ ವಿಶ್ವಾಸ ನನಗಿದೆ.

ಸ್ನೇಹಿತರೆ,

ನಾನು ಭಾರತದ ಅನುಭವವನ್ನು ಇಂದು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ. ಇಂದು ಭಾರತವು ವಿಶ್ವದ ಉನ್ನತ ನಾಗರಿಕ ವಿಮಾನಯಾನ ಪರಿಸರ ವ್ಯವಸ್ಥೆಗಳಲ್ಲಿ ಪ್ರಬಲ ಆಧಾರಸ್ತಂಭವಾಗಿದೆ. ನಮ್ಮ ನಾಗರಿಕ ವಿಮಾನಯಾನ ಕ್ಷೇತ್ರದ ಬೆಳವಣಿಗೆ ಅಭೂತಪೂರ್ವವಾಗಿದೆ. ಭಾರತವು ಕೇವಲ ಒಂದು ದಶಕದಲ್ಲಿ ಗಮನಾರ್ಹ ಪರಿವರ್ತನೆ ತೋರಿಸಿದೆ. ಈ ವರ್ಷಗಳಲ್ಲಿ, ಭಾರತವು ವಾಯುಯಾನ-ವಿಶೇಷ ದೇಶದಿಂದ ವಾಯುಯಾನ-ಎಲ್ಲರನ್ನೂ ಒಳಗೊಂಡ ದೇಶವಾಗಿ ವಿಕಸನಗೊಂಡಿದೆ. ಭಾರತದಲ್ಲಿ ವಿಮಾನ ಪ್ರಯಾಣ ಕೆಲವೇ ಜನರಿಗೆ ಮಾತ್ರ ಸೀಮಿತವಾಗಿತ್ತು. ಕೆಲವು ಪ್ರಮುಖ ನಗರಗಳು ಮಾತ್ರ ಉತ್ತಮ ವಾಯುಸಂಪರ್ಕ ಹೊಂದಿದ್ದ ಹೆಗ್ಗಳಿಕೆಗೆ ಪಾತ್ರವಾಗಿದ್ದವು. ಕೆಲವು ಸಂಪನ್ಮೂಲ ಜನರು ನಿರಂತರವಾಗಿ ವಿಮಾನ ಪ್ರಯಾಣದ ಲಾಭ ಪಡೆದರು. ದುರ್ಬಲ ಮತ್ತು ಮಧ್ಯಮ ವರ್ಗದವರು ಸಾಂದರ್ಭಿಕವಾಗಿ ಪ್ರಯಾಣಿಸುತ್ತಿದ್ದರು, ಆಗಾಗ್ಗೆ ಅವಶ್ಯಕತೆಯಿದ್ದಾಗ ಮಾತ್ರ. ಆದರೆ ಇದು ಅವರ ಜೀವನದ ಸಾಮಾನ್ಯ ಭಾಗವಾಗಿರಲಿಲ್ಲ. ಆದರೆ, ಇಂದು ಭಾರತದ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಈಗ, ನಮ್ಮ ಶ್ರೇಣಿ-2 ಮತ್ತು ಶ್ರೇಣಿ-3 ನಗರಗಳ ನಾಗರಿಕರು ಸಹ ವಿಮಾನಗಳನ್ನು ಬಳಸುತ್ತಿದ್ದಾರೆ. ಈ ನಿಟ್ಟಿನಲ್ಲಿ, ನಾವು ಹಲವಾರು ಉಪಕ್ರಮಗಳನ್ನು ಕೈಗೊಂಡಿದ್ದೇವೆ, ನೀತಿ ಬದಲಾವಣೆಗಳನ್ನು ಮಾಡಿದ್ದೇವೆ ಮತ್ತು ಇದನ್ನು ಸಾಧಿಸಲು ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಿದ್ದೇವೆ. ಭಾರತದಲ್ಲಿ ವಾಯುಯಾನ ಒಳಗೊಂಡಿರುವ ಭಾರತದ ಉಡಾನ್ ಯೋಜನೆಯನ್ನು ನೀವು ಅಧ್ಯಯನ ಮಾಡುತ್ತೀರಿ ಎಂದು ನನಗೆ ವಿಶ್ವಾಸವಿದೆ. ಈ ಯೋಜನೆಯು ಭಾರತದಲ್ಲಿರುವ ಸಣ್ಣ ನಗರಗಳು ಮತ್ತು ಕೆಳಮಧ್ಯಮ ವರ್ಗದ ವ್ಯಕ್ತಿಗಳಿಗೆ ವಿಮಾನ ಪ್ರಯಾಣ ಒದಗಿಸುತ್ತಿದೆ. ಈ ಯೋಜನೆಯಡಿ, 14 ದಶಲಕ್ಷ ಪ್ರಯಾಣಿಕರು ಇಲ್ಲಿಯವರೆಗೆ ಪ್ರಯಾಣಿಸಿದ್ದಾರೆ,  ಅವರಲ್ಲಿ ಹಲವರು ಮೊದಲ ಬಾರಿಗೆ ಒಳಗಿನಿಂದ ವಿಮಾನ ನೋಡಿದ್ದಾರೆ. ಉಡಾನ್ ಯೋಜನೆಯು ಸೃಷ್ಟಿಸಿದ ಬೇಡಿಕೆಯು ಅನೇಕ ಸಣ್ಣ ನಗರಗಳಲ್ಲಿ ಮತ್ತು ನೂರಾರು ಹೊಸ ಮಾರ್ಗಗಳಲ್ಲಿ ಹೊಸ ವಿಮಾನ ನಿಲ್ದಾಣಗಳನ್ನು ಸ್ಥಾಪಿಸಲು ಕಾರಣವಾಗಿದೆ. ನಾಯ್ಡು ಜಿ ಉಲ್ಲೇಖಿಸಿದಂತೆ, ಭಾರತದಲ್ಲಿರುವ ವಿಮಾನ ನಿಲ್ದಾಣಗಳ ಸಂಖ್ಯೆ ಕಳೆದ 10 ವರ್ಷಗಳಲ್ಲಿ ದ್ವಿಗುಣಗೊಂಡಿದೆ ಎಂದು ತಿಳಿದರೆ ನೀವು ಆಶ್ಚರ್ಯಚಕಿತರಾಗುವಿರಿ. ನಾವು ಇತರ ಕ್ಷೇತ್ರಗಳಲ್ಲಿಯೂ ವೇಗವಾಗಿ ಪ್ರಗತಿ ಸಾಧಿಸುತ್ತಿದ್ದೇವೆ. ಒಂದೆಡೆ, ನಾವು ಸಣ್ಣ ನಗರಗಳಲ್ಲಿ ವಿಮಾನ ನಿಲ್ದಾಣಗಳನ್ನು ನಿರ್ಮಿಸುತ್ತಿದ್ದೇವೆ. ಮತ್ತೊಂದೆಡೆ, ನಾವು ದೊಡ್ಡ ನಗರಗಳಲ್ಲಿ ವಿಮಾನ ನಿಲ್ದಾಣಗಳನ್ನು ಆಧುನೀಕರಿಸಲು ವೇಗವಾಗಿ ಕೆಲಸ ಮಾಡುತ್ತಿದ್ದೇವೆ.

ಭಾರತವು ವಾಯುಸಂಪರ್ಕ ವಿಷಯದಲ್ಲಿ ವಿಶ್ವದ ಅತ್ಯಂತ ಸಂಪರ್ಕಿತ ಪ್ರದೇಶಗಳಲ್ಲಿ ಒಂದಾಗಲಿದೆ. ನಮ್ಮ ವಿಮಾನಯಾನ ಸಂಸ್ಥೆಗಳಿಗೂ ಇದರ ಅರಿವಿದೆ. ಅದಕ್ಕಾಗಿಯೇ ನಮ್ಮ ಭಾರತೀಯ ವಿಮಾನಯಾನ ಸಂಸ್ಥೆಗಳು 1,200 ಹೊಸ ವಿಮಾನಗಳನ್ನು ಆರ್ಡರ್ ಮಾಡಿವೆ. ನಾಗರಿಕ ವಿಮಾನಯಾನ ಬೆಳವಣಿಗೆಯು ವಿಮಾನಗಳು ಮತ್ತು ವಿಮಾನ ನಿಲ್ದಾಣಗಳಿಗೆ ಸೀಮಿತವಾಗಿಲ್ಲ. ವಿಮಾನಯಾನ ಕ್ಷೇತ್ರವು ಭಾರತದಲ್ಲಿ ಉದ್ಯೋಗ ಸೃಷ್ಟಿಯನ್ನು ವೇಗಗೊಳಿಸುತ್ತಿದೆ. ನುರಿತ ಪೈಲಟ್‌ಗಳು, ಸಿಬ್ಬಂದಿ ಸದಸ್ಯರು, ಎಂಜಿನಿಯರ್‌ಗಳು ಮತ್ತು ಇತರ ಹಲವು ಉದ್ಯೋಗಗಳನ್ನು ಸೃಷ್ಟಿಸಲಾಗುತ್ತಿದೆ. ನಿರ್ವಹಣೆ, ದುರಸ್ತಿ ಮತ್ತು ಕೂಲಂಕುಷ ಪರೀಕ್ಷೆ(ಎಂ ಆರ್ ಒ) ಸೇವೆಗಳನ್ನು ಬಲಪಡಿಸಲು ನಾವು ನಿರ್ಧಾರಗಳನ್ನು ಕೈಗೊಂಡಿದ್ದೇವೆ. ಇದು ಉನ್ನತ ಕೌಶಲ್ಯದ ಉದ್ಯೋಗಗಳ ಸೃಷ್ಟಿಗೆ ಕಾರಣವಾಗುತ್ತದೆ. ಭಾರತ ಈ ದಶಕದ ಅಂತ್ಯದ ವೇಳೆಗೆ 4 ಶತಕೋಟಿ ಡಾಲರ್ ಮೊತ್ತದ ಎಂಆರ್ ಒ ಉದ್ಯಮದೊಂದಿಗೆ ಪ್ರಮುಖ ವಿಮಾನಯಾನ ಕೇಂದ್ರವಾಗುವ ಗುರಿಯೊಂದಿಗೆ ಮುನ್ನಡೆಯುತ್ತಿದೆ. ಈ ಉದ್ದೇಶಕ್ಕಾಗಿ ನಾವು ಎಂಆರ್ ಒ ನೀತಿಗಳನ್ನು ಸಹ ಅಭಿವೃದ್ಧಿಪಡಿಸಿದ್ದೇವೆ. ಶ್ರೇಣಿ-2 ಮತ್ತು ಶ್ರೇಣಿ-3 ನಗರಗಳಲ್ಲಿನ ವಾಯು ಸಂಪರ್ಕವು ಭಾರತದಲ್ಲಿ ನೂರಾರು ಹೊಸ ನಗರಗಳನ್ನು ಬೆಳವಣಿಗೆಯ ಕೇಂದ್ರಗಳಾಗಿ ಪರಿವರ್ತಿಸುತ್ತದೆ.

ಬಹುಬಂದರು ಅಥವಾ ಮಲ್ಟಿಪೋರ್ಟ್‌ನಂತಹ ನಾವೀನ್ಯತೆಗಳ ಬಗ್ಗೆ ನಿಮಗೆಲ್ಲರಿಗೂ ತಿಳಿದಿದೆ. ಇದು ವಾಯು ಸಾರಿಗೆಯ ಮಾದರಿಯಾಗಿದ್ದು, ನಗರಗಳಲ್ಲಿ ಪ್ರಯಾಣದ ಸುಲಭತೆ ಹೆಚ್ಚಿಸುತ್ತಿದೆ. ಸುಧಾರಿತ ವಾಯು ಚಲನಶೀಲತೆಗಾಗಿ ನಾವು ಭಾರತವನ್ನು ಸಿದ್ಧಪಡಿಸುತ್ತಿದ್ದೇವೆ. ಏರ್ ಟ್ಯಾಕ್ಸಿಗಳು ವಾಸ್ತವ ಮತ್ತು ಸಾಮಾನ್ಯ ಸಾರಿಗೆ ವಿಧಾನವಾಗುವ ದಿನ ದೂರವಿಲ್ಲ. ಮಹಿಳಾ ನೇತೃತ್ವದ ಅಭಿವೃದ್ಧಿಯು ನಮ್ಮ ಬದ್ಧತೆಯಾಗಿದೆ. ಜಿ-20 ಶೃಂಗಸಭೆಯಲ್ಲಿ ಮಹಿಳಾ ನೇತೃತ್ವದ ಅಭಿವೃದ್ಧಿಗೆ ಸಂಬಂಧಿಸಿದ ಮಹತ್ವದ ನಿರ್ಧಾರ ತೆಗೆದುಕೊಂಡಿರುವುದನ್ನು ನೀವು ಗಮನಿಸಿರಬಹುದು. ನಮ್ಮ ವಾಯುಯಾನ ಕ್ಷೇತ್ರವು ಮಹಿಳಾ ನೇತೃತ್ವದ ಅಭಿವೃದ್ಧಿಯ ನಮ್ಮ ಧ್ಯೇಯವನ್ನು ಹೆಚ್ಚು ಬೆಂಬಲಿಸುತ್ತಿದೆ. ಜಾಗತಿಕ ಸರಾಸರಿ ಕೇವಲ 5%ಗೆ ಹೋಲಿಸಿದರೆ ಭಾರತದಲ್ಲಿ ಸುಮಾರು 15% ಪೈಲಟ್‌ಗಳು ಮಹಿಳೆಯರಿದ್ದಾರೆ. ಮಹಿಳೆಯರಿಗೆ ಕೆಲಸ ನೀತಿಗಳು ಮತ್ತು ವಿಶೇಷ ನಾಯಕತ್ವ ಮತ್ತು ಮಾರ್ಗದರ್ಶನ ಕಾರ್ಯಕ್ರಮಗಳು ಸೇರಿದಂತೆ ಈ ವಲಯವನ್ನು ಹೆಚ್ಚು ಮಹಿಳಾ ಸ್ನೇಹಿಯನ್ನಾಗಿ ಮಾಡಲು ಭಾರತವು ಅಗತ್ಯ ಸಲಹೆಗಳನ್ನು ಜಾರಿಗೊಳಿಸಿದೆ.

ಸ್ನೇಹಿತರೆ,

ಭಾರತದ ಗ್ರಾಮೀಣ ಪ್ರದೇಶಗಳಲ್ಲಿ, ವಿಶೇಷವಾಗಿ ಕೃಷಿ ಕ್ಷೇತ್ರದಲ್ಲಿ ಬಹಳ ಮಹತ್ವಾಕಾಂಕ್ಷೆಯ ಡ್ರೋನ್ ಯೋಜನೆ ಪ್ರಾರಂಭಿಸಲಾಗಿದೆ. ಹಳ್ಳಿಯಿಂದ ಹಳ್ಳಿಗೆ ‘ಡ್ರೋನ್ ದೀದಿ’ ಅಭಿಯಾನದ ಮೂಲಕ ನಾವು ತರಬೇತಿ ಪಡೆದ ಡ್ರೋನ್ ಪೈಲಟ್‌ಗಳ ಸಮೂಹ ರಚಿಸಿದ್ದೇವೆ. ಭಾರತದ ವಾಯುಯಾನ ಕ್ಷೇತ್ರದ ಹೊಸ ವೈಶಿಷ್ಟ್ಯವೆಂದರೆ ಡಿಜಿ ಯಾತ್ರಾ ಉಪಕ್ರಮ, ಇದು ಸುಗಮ ಮತ್ತು ತಡೆರಹಿತ ವಿಮಾನ ಪ್ರಯಾಣಕ್ಕೆ ಡಿಜಿಟಲ್ ಪರಿಹಾರವಾಗಿದೆ. ವಿಮಾನ ನಿಲ್ದಾಣದಲ್ಲಿನ ವಿವಿಧ ಚೆಕ್‌ಪಾಯಿಂಟ್‌ಗಳಿಂದ ಪ್ರಯಾಣಿಕರನ್ನು ಬಿಡುಗಡೆ ಮಾಡಲು, ಸಮಯ ಉಳಿಸಲು ಇದು ಫೇಶಿಯಲ್ ರೆಕಗ್ನಿಷನ್ ತಂತ್ರಜ್ಞಾನ ಬಳಸುತ್ತದೆ. ಡಿಜಿ ಯಾತ್ರಾ ಕೇವಲ ಪರಿಣಾಮಕಾರಿ ಮತ್ತು ಅನುಕೂಲಕರ ಮಾತ್ರವಲ್ಲ, ಆದರೆ ಇದು ಪ್ರಯಾಣದ ಭವಿಷ್ಯದ ಬಗ್ಗೆ ಒಂದು ಸ್ಪಷ್ಟ ನೋಟ ನೀಡುತ್ತದೆ. ನಮ್ಮ ಪ್ರದೇಶವು ಶ್ರೀಮಂತ ಇತಿಹಾಸ, ಸಂಪ್ರದಾಯಗಳು ಮತ್ತು ವೈವಿಧ್ಯತೆಯನ್ನು ಹೊಂದಿದೆ. ಪ್ರಾಚೀನ ಸಾಂಸ್ಕೃತಿಕ ಪರಂಪರೆ ಮತ್ತು ಶ್ರೇಷ್ಠ ಸಂಪ್ರದಾಯಗಳಲ್ಲಿ ನಾವು ಶ್ರೀಮಂತರಾಗಿದ್ದೇವೆ. ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯಗಳು ಸಾವಿರಾರು ವರ್ಷಗಳಷ್ಟು ಹಳೆಯವು. ಈ ಕಾರಣಗಳಿಗಾಗಿ ಜಗತ್ತು ನಮ್ಮತ್ತ ಆಕರ್ಷಿತವಾಗಿದೆ. ನಮ್ಮ ದೇಶಗಳಲ್ಲಿ ಪ್ರವಾಸೋದ್ಯಮ ಉತ್ತೇಜಿಸಲು ನಾವು ಸಹಾಯ ಮಾಡಬೇಕು. ಅನೇಕ ದೇಶಗಳು ಭಗವಾನ್ ಬುದ್ಧನನ್ನು ಆರಾಧಿಸುತ್ತವೆ. ಹಾಗಾಗಿ, ಭಾರತವು ಬೌದ್ಧ ಸರ್ಕ್ಯೂಟ್ ಅಭಿವೃದ್ಧಿಪಡಿಸಿದೆ, ಕುಶಿನಗರದಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸಿದೆ. ಏಷ್ಯಾದ್ಯಂತ ಬೌದ್ಧ ಯಾತ್ರಾ ಸ್ಥಳಗಳನ್ನು ಸಂಪರ್ಕಿಸಲು ನಾವು ಅಭಿಯಾನ ಕೈಗೊಂಡರೆ, ಸಂಬಂಧಿತ ದೇಶಗಳಲ್ಲಿನ ವಾಯುಯಾನ ಕ್ಷೇತ್ರಕ್ಕೆ ಮತ್ತು ಸಾಮಾನ್ಯವಾಗಿ ಪ್ರಯಾಣಿಕರಿಗೆ ನಾವು ಗೆಲುವು-ಗೆಲುವಿನ ಮಾದರಿ ರೂಪಿಸಬಹುದು. ಆ ನಿಟ್ಟಿನಲ್ಲಿ ನಾವು ಪ್ರಯತ್ನ ಮಾಡಬೇಕು. ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಪ್ರಯಾಣಿಕರನ್ನು ಸಾಗಿಸಲು ಸಮಗ್ರ ಮಾದರಿ ಅಭಿವೃದ್ಧಿಪಡಿಸುವುದು ಎಲ್ಲಾ ಸಂಬಂಧಿತ ದೇಶಗಳಿಗೆ ಗಮನಾರ್ಹ ಪ್ರಯೋಜನಗಳನ್ನು ಖಾತರಿಪಡಿಸುತ್ತದೆ. ನಾವು ಅಂತಾರಾಷ್ಟ್ರೀಯ ಬೌದ್ಧ ಸರ್ಕ್ಯೂಟ್ ಅಭಿವೃದ್ಧಿಪಡಿಸಿದರೆ, ಇದು ಒಳಗೊಂಡಿರುವ ಎಲ್ಲಾ ದೇಶಗಳ ಪ್ರಯಾಣಿಕರು ಮತ್ತು ಆರ್ಥಿಕತೆಗಳಿಗೆ ಹೆಚ್ಚಿನ ಪ್ರಯೋಜನ ನೀಡುತ್ತದೆ. ಏಷ್ಯಾ ಪೆಸಿಫಿಕ್ ರಾಷ್ಟ್ರಗಳು ಮತ್ತೊಂದು ಕ್ಷೇತ್ರದಲ್ಲೂ ಸಹಕಾರ ಹೆಚ್ಚಿಸಬಹುದು.

ಏಷ್ಯಾ ಪೆಸಿಫಿಕ್ ಪ್ರದೇಶವು ಈಗ ವ್ಯಾಪಾರ ಕೇಂದ್ರವಾಗುತ್ತಿದೆ. ವಿಶ್ವಾದ್ಯಂತದ ಕಾರ್ಯ ನಿರ್ವಾಹಕರು ಅಥವಾ ಉದ್ಯೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಪ್ರದೇಶಕ್ಕೆ ಬರುತ್ತಿದ್ದಾರೆ. ಸ್ವಾಭಾವಿಕವಾಗಿ, ಕೆಲವರು ಇಲ್ಲಿ ಕಚೇರಿಗಳನ್ನು ಸ್ಥಾಪಿಸಿದ್ದಾರೆ, ಇದು ಆಗಾಗ್ಗೆ ಪ್ರಯಾಣಿಸಲು ಕಾರಣವಾಗುತ್ತದೆ. ಈ ವೃತ್ತಿಪರರು ಯಾವ ಸಾಮಾನ್ಯ ಮಾರ್ಗಗಳನ್ನು ಆಗಾಗ್ಗೆ ಬಳಸುತ್ತಾರೆ? ಅವರ ಅಗತ್ಯಗಳನ್ನು ಉತ್ತಮವಾಗಿ ಪೂರೈಸಲು ಮತ್ತು ಪ್ರಯಾಣವನ್ನು ಹೆಚ್ಚು ಅನುಕೂಲಕರವಾಗಿಸಲು ನಾವು ಈ ಮಾರ್ಗಗಳನ್ನು ಸಮಗ್ರ ವಿಧಾನದೊಂದಿಗೆ ಮರು-ಮಾರ್ಗ ಮಾಡಬಹುದೇ? ನೀವು ಈ ದಿಕ್ಕನ್ನು ಸಹ ಪರಿಗಣಿಸಬೇಕೆಂದು ನಾನು ಬಯಸುತ್ತೇನೆ, ಏಕೆಂದರೆ ಪ್ರದೇಶದ ಅಭಿವೃದ್ಧಿಯು ಖಚಿತವಾಗಿದೆ ಮತ್ತು ವೃತ್ತಿಪರರಿಗೆ ಒದಗಿಸುವ ಅನುಕೂಲ ಕೆಲಸದ ಪ್ರಗತಿಯನ್ನು ವೇಗಗೊಳಿಸುತ್ತದೆ. ನಾವು ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆ ಮತ್ತು ಷಿಕಾಗೊ ಸಮಾವೇಶದ 18ನೇ ವಾರ್ಷಿಕೋತ್ಸವ ಆಚರಿಸುತ್ತಿದ್ದೇವೆ. ನಾವು ದೇಶೀಯ ಮತ್ತು ಎಲ್ಲರನ್ನೂ ಒಳಗೊಂಡ ವಾಯುಯಾನ ವಲಯಕ್ಕೆ ನಮ್ಮ ಬದ್ಧತೆಯನ್ನು ನವೀಕರಿಸಬೇಕಾಗಿದೆ. ಸೈಬರ್ ಭದ್ರತೆ ಮತ್ತು ಡೇಟಾ ಸುರಕ್ಷತೆಗೆ ಸಂಬಂಧಿಸಿದಂತೆ ನಿಮ್ಮ ಕಾಳಜಿಗಳ ಬಗ್ಗೆಯೂ ನನಗೆ ತಿಳಿದಿದೆ. ತಂತ್ರಜ್ಞಾನವು ಸವಾಲುಗಳನ್ನು ಪ್ರಸ್ತುತಪಡಿಸುತ್ತದೆ, ಆದರೆ ತಂತ್ರಜ್ಞಾನದಿಂದಲೂ ಪರಿಹಾರಗಳು ಬರುತ್ತವೆ. ನಾವು ಅಂತಾರಾಷ್ಟ್ರೀಯ ಸಹಭಾಗಿತ್ವ ಬಲಪಡಿಸಬೇಕು, ತಂತ್ರಜ್ಞಾನ ಮತ್ತು ಮಾಹಿತಿಯನ್ನು ಮುಕ್ತವಾಗಿ ಹಂಚಿಕೊಳ್ಳಬೇಕು, ಆ ಮೂಲಕ ಈ ವ್ಯವಸ್ಥೆಗಳನ್ನು ಸುರಕ್ಷಿತವಾಗಿರಿಸಬೇಕು. ಈ ದೆಹಲಿ ಸಮ್ಮೇಳನವು ಏಕತೆ ಮತ್ತು ಹಂಚಿಕೆಯ ಉದ್ದೇಶದೊಂದಿಗೆ ಮುಂದುವರಿಯುವ ನಮ್ಮ ಸಂಕಲ್ಪವನ್ನು ಬಲಪಡಿಸುತ್ತದೆ. ಆಗಸ ಎಲ್ಲರಿಗೂ ಮುಕ್ತವಾಗಿರುವ ಭವಿಷ್ಯದತ್ತ ನಾವು ಕೆಲಸ ಮಾಡಬೇಕು, ಅಲ್ಲಿ ಪ್ರತಿಯೊಬ್ಬ ವ್ಯಕ್ತಿಯ ಹಾರುವ ಕನಸು ಈಡೇರುತ್ತದೆ. ಮತ್ತೊಮ್ಮೆ, ನಾನು ಎಲ್ಲಾ ಅತಿಥಿಗಳನ್ನು ಸ್ವಾಗತಿಸುತ್ತೇನೆ. ಈ ಮಹತ್ವದ ಶೃಂಗಸಭೆಯಲ್ಲಿ ನೀವು ಭಾಗವಹಿಸಿದ್ದಕ್ಕಾಗಿ ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. ನಿಮ್ಮೆಲ್ಲರಿಗೂ ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ.

 

ತುಂಬು ಧನ್ಯವಾದಗಳು!

 

*****



(Release ID: 2054812) Visitor Counter : 13