ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯ
azadi ka amrit mahotsav

ಪ್ರಾದೇಶಿಕ ಭಾಷೆಗಳಲ್ಲಿ ಉಚಿತ ಆನ್‌ಲೈನ್ ತರಬೇತಿ: ಐಟಿಐ ವಿದ್ಯಾರ್ಥಿಗಳಿಗಾಗಿ ಎನ್ ಐ ಎಂ ಐ ನಿಂದ ಯೂಟ್ಯೂಬ್ ಚಾನೆಲ್ ಆರಂಭ

Posted On: 12 SEP 2024 4:38PM by PIB Bengaluru

ವೃತ್ತಿಪರ ಶಿಕ್ಷಣವು ಹೆಚ್ಚು ಹೆಚ್ಚು ಜನರಿಗೆ ಸಿಗುವಂತಾಗಲು, ತರಬೇತಿ ಮಹಾನಿರ್ದೇಶನಾಲಯ (ಡಿಜಿಟಿ) ಮತ್ತು ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತಾ ಸಚಿವಾಲಯ (ಎಂ ಎಸ್ ಡಿ ಇ) ಅಡಿಯಲ್ಲಿ ರಾಷ್ಟ್ರೀಯ ಕಲಿಕಾ ಮಾಧ್ಯಮ ಸಂಸ್ಥೆ (ಎನ್ ಐ ಎಂ ಐ), ಇಂದು ಯೂಟ್ಯೂಬ್ ವಾಹಿನಿ ಸರಣಿ ಆರಂಭಿಸಿದೆ. ಈ ಡಿಜಿಟಲ್ ಉಪಕ್ರಮವು ಒಂಭತ್ತು ಭಾಷೆಗಳಲ್ಲಿ ಭಾರತದ ಕೈಗಾರಿಕಾ ತರಬೇತಿ ಸಂಸ್ಥೆ (ಐಟಿಐ) ಕೌಶಲ್ಯ ಪರಿಸರ ವ್ಯವಸ್ಥೆಯಾದ್ಯಂತ ಕಲಿಯುವ ಲಕ್ಷಾಂತರ ಜನರಿಗೆ ಉತ್ತಮ ಗುಣಮಟ್ಟದ ತರಬೇತಿ ವಿಡಿಯೊಗಳನ್ನು ಒದಗಿಸಲಿದೆ. 

ಇಂಗ್ಲಿಷ್, ಹಿಂದಿ, ತಮಿಳು, ಬೆಂಗಾಲಿ, ಮರಾಠಿ, ಪಂಜಾಬಿ, ಮಲಯಾಳಂ, ತೆಲುಗು ಮತ್ತು ಕನ್ನಡ ಭಾಷೆಗಳಲ್ಲಿನ ಯೂಟ್ಯೂಬ್ ವಾಹಿನಿಯ ಈ ವಿಡಿಯೋಗಳು ಡಿಜಿಟಲ್ ಸಂಪನ್ಮೂಲಗಳಲ್ಲಿ ಸುಲಭವಾಗಿ ಮತ್ತು ಉಚಿತವಾಗಿ ಲಭ್ಯವಿದ್ದು, ಕಲಿಕಾಸಕ್ತರು ಅವರ ತಾಂತ್ರಿಕ ಕೌಶಲ್ಯಗಳನ್ನು ವೃದ್ಧಿಸಿಕೊಳ್ಳಲು ನೆರವಾಗುವ ಗುರಿಯನ್ನು ಹೊಂದಿವೆ. ಪ್ರತಿಯೊಂದು ಚಾನೆಲ್ ನಲ್ಲೂ ಪಠ್ಯಗಳು (ಟ್ಯುಟೋರಿಯಲ್‌ಗಳು), ಕೌಶಲ್ಯ ಪ್ರಾತ್ಯಕ್ಷಿಕೆಗಳು ಮತ್ತು ಸೈದ್ಧಾಂತಿಕ ಪಾಠಗಳಿದ್ದು ಇವೆಲ್ಲವೂ ಇಂದಿನ ವೃತ್ತಿಪರ ವ್ಯವಸ್ಥೆಗೆ ಸರಿಹೊಂದುವ ತರಬೇತಿ ನೀಡಲು ಉದ್ಯಮ ತಜ್ಞರಿಂದ ರೂಪಿಸಲ್ಪಟ್ಟಿವೆ.

ಯೂ ಟ್ಯೂಬ್ ವಾಹಿನಿಯ ಪ್ರಮುಖ ಲಕ್ಷಣಗಳು:

• ಒಂಭತ್ತು ಪ್ರಾದೇಶಿಕ ಭಾಷೆಗಳಲ್ಲಿ ಉಚಿತವಾಗಿ ಮಾಹಿತಿಯು ಲಭ್ಯವಿದೆ.
• ಉತ್ಪಾದನೆ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನದಂತಹ ವಲಯಗಳಲ್ಲಿ ಉತ್ತಮ ಗುಣಮಟ್ಟದ ಕಲಿಕಾ ಸಾಮಗ್ರಿಗಳು.
• ಕಲಿಯುವವರಿಗೆ ಇತ್ತೀಚಿನ ಉದ್ಯಮ ಕೌಶಲ್ಯಗಳ ಬಗ್ಗೆ ತಿಳಿಸಲು ನಿಯಮಿತ ಅಪ್‌ಡೇಟ್‌ಗಳು.

ಎನ್ ಐ ಎಂ ಐ ನ ಈ ಉಪಕ್ರಮವು ಭಾರತದ ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ಮಿಷನ್ ಮತ್ತು ಹೊಸ ಶಿಕ್ಷಣ ನೀತಿ (ಎನ್ ಇ ಪಿ) ಯ ಗುರಿಗಳೊಂದಿಗೆ ಹೊಂದಿಕೆಯಾಗುತ್ತದೆ. ಇದು ಪ್ರಗತಿ ಹೊಂದುತ್ತಿರುವ ಕೈಗಾರಿಕೆಗಳಿಗೆ ಪೂರಕವಾಗುವ ತರಬೇತಿಯೊಂದಿಗೆ ಸಜ್ಜಾದ ಭವಿಷ್ಯದ ಭಾರತೀಯ ಕಾರ್ಯಪಡೆಯನ್ನು ಸಿದ್ಧಪಡಿಸುವ ಪ್ರಯತ್ನ ಮಾಡುತ್ತಿದೆ.

"ವೃತ್ತಿಪರ ಶಿಕ್ಷಣದ ಪರಿವರ್ತನೆಯಲ್ಲಿ ಡಿಜಿಟಲ್ ವೇದಿಕೆಗಳು ಪ್ರಮುಖ ಎಂಬುದಾಗಿ ನಾವು ನಂಬಿದ್ದೇವೆ" ಎಂದು ಎನ್ ಐ ಎಂ ಐ ಅಧಿಕಾರಿಯೊಬ್ಬರು ಹೇಳಿದ್ದಾರೆ. "ಬಹು ಭಾಷೆಗಳಲ್ಲಿ ಮಾಹಿತಿ ಒದಗಿಸುವ ಮೂಲಕ, ಶಿಕ್ಷಣವು ದೇಶದ ಪ್ರತಿಯೊಂದು ಭಾಗವನ್ನು ತಲುಪುವುದನ್ನು ನಾವು ಖಚಿತಪಡಿಸಿಕೊಳ್ಳುತ್ತಿದ್ದೇವೆ, ಈ ಮೂಲಕ ಕಲಿಕೆಯನ್ನು ಒಳಗೊಳ್ಳುವಂತೆ ಮತ್ತು ಕಲಿಕಾಸಕ್ತರಿಗೆ ಉದ್ಯಮಕ್ಕೆ ಅಗತ್ಯವಿರುವ ಕೌಶಲ್ಯಗಳನ್ನು ಪಡೆದುಕೊಳ್ಳಲು ಸಬಲಗೊಳಿಸಲಾಗುತ್ತಿದೆ."

ಐಟಿಐ ವಿದ್ಯಾರ್ಥಿಗಳು, ಬೋಧಕರು ಮತ್ತು ಕೌಶಲ್ಯ ಕಲಿಕಾಸಕ್ತರು ತಾಜಾ ಮಾಹಿತಿ ಪಡೆಯಲು ತಮ್ಮ ಆದ್ಯತೆಯ ಪ್ರಾದೇಶಿಕ ವಾಹಿನಿಗೆ ಚಂದಾದಾರರಾಗಲು ಎನ್ ಐ ಎಂ ಐ ಪ್ರೋತ್ಸಾಹಿಸುತ್ತದೆ.

ಹೆಚ್ಚಿನ ಮಾಹಿತಿ ಎನ್ ಐ ಎಂ ಐ ಜಾಲತಾಣದಲ್ಲಿ ಲಭ್ಯವಿದೆ ಅಥವಾ ಯೂಟ್ಯೂಬ್ ನಲ್ಲಿ ನಲ್ಲಿ ಎನ್ ಐ ಎಂ ಐ ಡಿಜಿಟಲ್‌ಗೆ ಸಬ್ಸ್ ಕ್ರೈಬ್ ಆಗಬಹುದು.

 

*****


(Release ID: 2054443) Visitor Counter : 31