ಸಂಪುಟ
azadi ka amrit mahotsav

ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (ಎಬಿ ಪಿಎಂ-ಜೆಎವೈ) ಅಡಿಯಲ್ಲಿ 70 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಎಲ್ಲಾ ಹಿರಿಯ ನಾಗರಿಕರಿಗೆ ಅವರ ಆದಾಯವನ್ನು ಲೆಕ್ಕಿಸದೆ ಆರೋಗ್ಯ ರಕ್ಷಣೆಗೆ ಸಂಪುಟವು ಅನುಮೋದನೆ ನೀಡಿದೆ


4.5 ಕೋಟಿ ಕುಟುಂಬಗಳು ಇದರ ಪ್ರಯೋಜನ ಪಡೆಯಲಿವೆ

Posted On: 11 SEP 2024 8:08PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು, ಪ್ರಮುಖ ಯೋಜನೆಯಾದ ಆಯುಷ್ಮಾನ್ ಭಾರತ್ ಪ್ರಧಾನ್ ಮಂತ್ರಿ ಜನ ಆರೋಗ್ಯ ಯೋಜನೆ (ಎಬಿ ಪಿಎಂ-ಜೆಎವೈ) ಅಡಿಯಲ್ಲಿ 70 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಎಲ್ಲಾ ಹಿರಿಯ ನಾಗರಿಕರಿಗೆ ಅವರ ಆದಾಯವನ್ನು ಲೆಕ್ಕಿಸದೆ ಆರೋಗ್ಯ ರಕ್ಷಣೆಯನ್ನು ಒದಗಿಸಲು ಅನುಮೋದನೆ ನೀಡಿದೆ.

ಇದು ಕುಟುಂಬದ ಆಧಾರದ ಮೇಲೆ 5 ಲಕ್ಷ ರೂಪಾಯಿಗಳ ಉಚಿತ ಆರೋಗ್ಯ ವಿಮಾ ರಕ್ಷಣೆಯೊಂದಿಗೆ ಆರು ಕೋಟಿ ಹಿರಿಯ ನಾಗರಿಕರನ್ನು ಹೊಂದಿರುವ ಸರಿಸುಮಾರು 4.5 ಕೋಟಿ ಕುಟುಂಬಗಳಿಗೆ ಪ್ರಯೋಜನವನ್ನು ನೀಡುವ ಗುರಿಯನ್ನು ಹೊಂದಿದೆ.

ಈ ಅನುಮೋದನೆಯೊಂದಿಗೆ, 70 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಎಲ್ಲಾ ಹಿರಿಯ ನಾಗರಿಕರು ಅವರ ಸಾಮಾಜಿಕ-ಆರ್ಥಿಕ ಸ್ಥಿತಿಯನ್ನು ಲೆಕ್ಕಿಸದೆಯೇ ಎಬಿ ಪಿಎಂ-ಜೆಎವೈ ಪ್ರಯೋಜನಗಳನ್ನು ಪಡೆಯಲು ಅರ್ಹರಾಗಿರುತ್ತಾರೆ. ಅರ್ಹ ಹಿರಿಯ ನಾಗರಿಕರಿಗೆ ಎಬಿ ಪಿಎಂ-ಜೆಎವೈ ಅಡಿಯಲ್ಲಿ ಹೊಸ ವಿಶಿಷ್ಟ ಕಾರ್ಡ್ ನೀಡಲಾಗುತ್ತದೆ. ಈಗಾಗಲೇ ಎಬಿ ಪಿಎಂ-ಜೆಎವೈ ವ್ಯಾಪ್ತಿಗೆ ಒಳಪಡುವ ಕುಟುಂಬಗಳಿಗೆ ಸೇರಿದ 70 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯ ನಾಗರಿಕರು ವರ್ಷಕ್ಕೆ 5 ಲಕ್ಷ ರೂ.ವರೆಗೆ ಹೆಚ್ಚುವರಿ ಟಾಪ್-ಅಪ್ ಕವರ್ ಅನ್ನು ಪಡೆಯುತ್ತಾರೆ (ಇದನ್ನು ಅವರು ಕುಟುಂಬದ 70 ವರ್ಷದೊಳಗಿನ ಇತರ ಸದಸ್ಯರೊಂದಿಗೆ ಹಂಚಿಕೊಳ್ಳಬೇಕಾಗಿಲ್ಲ). 70 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಎಲ್ಲಾ ಹಿರಿಯ ನಾಗರಿಕರು ಕುಟುಂಬದ ಆಧಾರದ ಮೇಲೆ ವರ್ಷಕ್ಕೆ 5 ಲಕ್ಷ ರೂ.ವರೆಗೆ ರಕ್ಷಣೆಯನ್ನು ಪಡೆಯುತ್ತಾರೆ. ಕೇಂದ್ರ ಸರ್ಕಾರದ ಆರೋಗ್ಯ ಯೋಜನೆ (ಸಿ ಜಿ ಎಚ್ ಎಸ್), ಮಾಜಿ ಸೈನಿಕರ ಕೊಡುಗೆ ಆರೋಗ್ಯ ಯೋಜನೆ (ಇ ಸಿ ಎಚ್ ಎಸ್), ಆಯುಷ್ಮಾನ್ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (ಸಿ ಎ ಪಿ ಎಫ್) ನಂತಹ ಇತರ ಸಾರ್ವಜನಿಕ ಆರೋಗ್ಯ ವಿಮಾ ಯೋಜನೆಗಳ ಪ್ರಯೋಜನಗಳನ್ನು ಈಗಾಗಲೇ ಪಡೆಯುತ್ತಿರುವ 70 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯ ನಾಗರಿಕರು ಅವರ ಅಸ್ತಿತ್ವದಲ್ಲಿರುವ ಯೋಜನೆ ಅಥವಾ ಎಬಿ ಪಿಎಂ-ಜೆಎವೈ ಅನ್ನು ಆರಿಸಿಕೊಳ್ಳಬಹುದು. ಖಾಸಗಿ ಆರೋಗ್ಯ ವಿಮಾ ಪಾಲಿಸಿಗಳು ಅಥವಾ ಉದ್ಯೋಗಿಗಳ ರಾಜ್ಯ ವಿಮಾ ಯೋಜನೆಯಡಿಯಲ್ಲಿರುವ 70 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ಹಿರಿಯ ನಾಗರಿಕರು ಎಬಿ ಪಿಎಂ-ಜೆಎವೈ ಅಡಿಯಲ್ಲಿ ಪ್ರಯೋಜನಗಳನ್ನು ಪಡೆಯಲು ಅರ್ಹರಾಗಿರುತ್ತಾರೆ ಎಂದು ಸ್ಪಷ್ಟಪಡಿಸಲಾಗಿದೆ.

ಎಬಿ ಪಿಎಂ-ಜೆಎವೈ ವಿಶ್ವದ ಅತಿದೊಡ್ಡ ಸಾರ್ವಜನಿಕ ನಿಧಿಯ ಆರೋಗ್ಯ ಭರವಸೆ ಯೋಜನೆಯಾಗಿದ್ದು, ಇದು 12.34 ಕೋಟಿ ಕುಟುಂಬಗಳ 55 ಕೋಟಿ ವ್ಯಕ್ತಿಗಳಿಗೆ ದ್ವಿತೀಯ ಮತ್ತು ತೃತೀಯ ಆರೈಕೆ ಆಸ್ಪತ್ರೆಗೆ ಪ್ರತಿ ಕುಟುಂಬಕ್ಕೆ ವರ್ಷಕ್ಕೆ 5 ಲಕ್ಷ ರೂಪಾಯಿಗಳ ಆರೋಗ್ಯ ರಕ್ಷಣೆಯನ್ನು ಒದಗಿಸುತ್ತದೆ. ವಯಸ್ಸನ್ನು ಲೆಕ್ಕಿಸದೆ ಅರ್ಹ ಕುಟುಂಬಗಳ ಎಲ್ಲಾ ಸದಸ್ಯರು ಯೋಜನೆಯ ಅಡಿಯಲ್ಲಿ ಬರುತ್ತಾರೆ. ಈ ಯೋಜನೆಯು 49 ಪ್ರತಿಶತ ಮಹಿಳಾ ಫಲಾನುಭವಿಗಳನ್ನು ಒಳಗೊಂಡಂತೆ 7.37 ಕೋಟಿ ಆಸ್ಪತ್ರೆ ದಾಖಲಾತಿಗಳನ್ನು ಒಳಗೊಂಡಿದೆ. ಈ ಯೋಜನೆಯಡಿ ಸಾರ್ವಜನಿಕರು 1 ಲಕ್ಷ ಕೋಟಿ ರೂ.ಗೂ ಅಧಿಕ ಲಾಭ ಪಡೆದಿದ್ದಾರೆ. 

70 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯ ನಾಗರಿಕರಿಗೆ ಆರೋಗ್ಯ ರಕ್ಷಣೆಯ ವಿಸ್ತರಣೆಯನ್ನು ಈ ಹಿಂದೆ ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಏಪ್ರಿಲ್ 2024 ರಲ್ಲಿ ಘೋಷಿಸಿದ್ದರು.

ಎಬಿ ಪಿಎಂ-ಜೆಎವೈ ಯೋಜನೆಯ ಫಲಾನುಭವಿಗಳ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ. ಆರಂಭದಲ್ಲಿ, ಈ ಯೋಜನೆಯು ಭಾರತದ ಜನಸಂಖ್ಯೆಯ ಶೇ.40 ರಷ್ಟನ್ನು ಒಳಗೊಂಡಿರುವ 10.74 ಕೋಟಿ ಬಡ ಮತ್ತು ದುರ್ಬಲ ಕುಟುಂಬಗಳನ್ನು ಒಳಗೊಂಡಿತ್ತು. ನಂತರ, ಭಾರತ ಸರ್ಕಾರವು ಜನವರಿ 2022 ರಲ್ಲಿ ಎಬಿ ಪಿಎಂ-ಜೆಎವೈ ಅಡಿಯಲ್ಲಿ 10.74 ಕೋಟಿಯಿಂದ 12 ಕೋಟಿ ಕುಟುಂಬಗಳಿಗೆ ಫಲಾನುಭವಿಗಳನ್ನು ಪರಿಷ್ಕರಿಸಿತು, 2011 ರ ಜನಸಂಖ್ಯೆಗೆ ಹೋಲಿಸಿದರೆ ಭಾರತದ ಒಂದು ದಶಕದ ಜನಸಂಖ್ಯೆಯ ಬೆಳವಣಿಗೆಯು ಶೇ.11.7 ಆಗಿದೆ. ದೇಶಾದ್ಯಂತ ಕೆಲಸ ಮಾಡುತ್ತಿರುವ 37 ಲಕ್ಷ ಆಶಾ/ಅಂಗನವಾಡಿ ಕಾರ್ಯಕರ್ತೆಯರು/ಅಂಗನವಾಡಿ ಸಹಾಯಕರು ಮತ್ತು ಅವರ ಕುಟುಂಬಗಳಿಗೆ ಉಚಿತ ಆರೋಗ್ಯ ಸೌಲಭ್ಯಗಳನ್ನು ಒದಗಿಸಲು ಯೋಜನೆಯನ್ನು ವಿಸ್ತರಿಸಲಾಗಿತ್ತು. ಎಬಿ ಪಿಎಂ-ಜೆಎವೈ ಈಗ ದೇಶಾದ್ಯಂತ 70 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಎಲ್ಲಾ ನಾಗರಿಕರಿಗೆ 5 ಲಕ್ಷ ರೂಪಾಯಿಗಳ ಉಚಿತ ಆರೋಗ್ಯ ರಕ್ಷಣೆಯನ್ನು ಒದಗಿಸುವ ಮೂಲಕ ಅಭಿಯಾನವನ್ನು ಮುಂದಕ್ಕೆ ಕೊಂಡೊಯ್ಯಲಾಗುತ್ತಿದೆ.

 

*****


(Release ID: 2054005) Visitor Counter : 395