ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
"ಹೆಲ್ತ್ ಡೈನಾಮಿಕ್ಸ್ ಆಫ್ ಇಂಡಿಯಾ(ಮೂಲಸೌಕರ್ಯ ಮತ್ತು ಮಾನವ ಸಂಪನ್ಮೂಲ)-2022-23" ವಾರ್ಷಿಕ ಪ್ರಕಟಣೆ(ದಾಖಲೆ ಪುಸ್ತಕ) ಬಿಡುಗಡೆ ಮಾಡಿದ ಆರೋಗ್ಯ ಸಚಿವಾಲಯ
ವಾರ್ಷಿಕ ಪ್ರಕಟಣೆಯು ರಾಷ್ಟ್ರೀಯ ಆರೋಗ್ಯ ಮಿಷನ್ ಒಳಗೆ ಮಾನವಶಕ್ತಿ ಮತ್ತು ಮೂಲಸೌಕರ್ಯಗಳ ಅಗತ್ಯವಿರುವ ಹೆಚ್ಚಿನ ಮಾಹಿತಿ ಒದಗಿಸುವ ಮೌಲ್ಯಯುತ ದಾಖಲೆಯಾಗಿದೆ, ಇದು ನೀತಿ ರಚನೆ, ಪ್ರಕ್ರಿಯೆಗಳನ್ನು ಸುಧಾರಿಸಲು ಮತ್ತು ಸಮಸ್ಯೆ ಪರಿಹಾರಕ್ಕೆ ಸಹಾಯಕವಾಗಿದೆ: ಕೇಂದ್ರ ಆರೋಗ್ಯ ಕಾರ್ಯದರ್ಶಿ
"ಆರೋಗ್ಯ ಕಾರ್ಯಕರ್ತರ ಕೆಲಸದ ಹೊರೆ ಕಡಿಮೆ ಮಾಡಲು ಮತ್ತು ದತ್ತಾಂಶವನ್ನು ಸಮಯೋಚಿತವಾಗಿ ಅಪ್‌ಲೋಡ್ ಮಾಡಲಾಗಿದೆ; ಎಚ್ಚರಿಕೆಯಿಂದ ವಿಶ್ಲೇಷಿಸಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಆರೋಗ್ಯ ನಿರ್ವಹಣೆ ಮಾಹಿತಿ ವ್ಯವಸ್ಥೆ(ಎಚ್ಎಂಐಎಸ್) ಪೋರ್ಟಲ್ ಅನ್ನು ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ(ಆರ್ ಸಿಎಚ್) ಮತ್ತು ಸಚಿವಾಲಯದ ಇತರೆ ಪೋರ್ಟಲ್‌ಗಳೊಂದಿಗೆ ಸಂಯೋಜಿಸುವ ಅಗತ್ಯವಿದೆ"
Posted On:
09 SEP 2024 12:38PM by PIB Bengaluru
ಕೇಂದ್ರ ಆರೋಗ್ಯ ಕಾರ್ಯದರ್ಶಿ ಶ್ರೀ ಅಪೂರ್ವ ಚಂದ್ರ ಅವರು ದೆಹಲಿಯಲ್ಲಿಂದು "ಹೆಲ್ತ್ ಡೈನಾಮಿಕ್ಸ್ ಆಫ್ ಇಂಡಿಯಾ(ಮೂಲಸೌಕರ್ಯ ಮತ್ತು ಮಾನವ ಸಂಪನ್ಮೂಲಗಳು)-2022-23" ವಾರ್ಷಿಕ ಪ್ರಕಟಣೆ ಬಿಡುಗಡೆ ಮಾಡಿದರು, ಇದನ್ನು ಈ ಹಿಂದೆ "ಗ್ರಾಮೀಣ ಆರೋಗ್ಯ ಅಂಕಿಅಂಶಗಳು" ಎಂದು ಕರೆಯಲಾಗುತ್ತಿತ್ತು. ಈ ವಾರ್ಷಿಕ ಪ್ರಕಟಣೆಯನ್ನು 1992ರಿಂದಲೂ ಪ್ರಕಟಿಸುತ್ತಾ ಬರಲಾಗಿದೆ.
ರಾಷ್ಟ್ರೀಯ ಆರೋಗ್ಯ ಮಿಷನ್(ಎನ್ಎಚ್ಎಂ)ನ ವಿವಿಧ ಅಂಶಗಳ ಬಗ್ಗೆ ವಿಶ್ವಾಸಾರ್ಹ ಮತ್ತು ಅಧಿಕೃತ ಮಾಹಿತಿಯ ಮೂಲವಾಗಿ ಈ ದಾಖಲೆ ಪುಸ್ತಕವು ಬಳಕೆಗೆ ಬರುತ್ತದೆ ಎಂದು ಬೆಳಕು ಚೆಲ್ಲಿದ ಶ್ರೀ ಅಪೂರ್ವ ಚಂದ್ರ, "ವಾರ್ಷಿಕ ಪ್ರಕಟಣೆಯು ರಾಷ್ಟ್ರೀಯ ಆರೋಗ್ಯ ಮಿಷನ್ ಒಳಗೆ ಮಾನವಶಕ್ತಿ ಮತ್ತು ಮೂಲಸೌಕರ್ಯದ ಬಗ್ಗೆ ಹೆಚ್ಚು ಅಗತ್ಯವಿರುವ ಮಾಹಿತಿ ಒದಗಿಸುವ ಅಮೂಲ್ಯ ದಾಖಲೆಯಾಗಿದೆ, ಇದು ನೀತಿ ನಿರೂಪಣೆಗೆ ಸಹಾಯಕವಾಗಿದೆ. ಆಡಳಿತ ಪ್ರಕ್ರಿಯೆಗಳ ಸುಧಾರಣೆ ಮತ್ತು ಸಮಸ್ಯೆಗಳ ಪರಿಹಾರ”ಕ್ಕೂ ಅವಶ್ಯಕವಾಗಿದೆ. ಮಾನವಶಕ್ತಿ ಮತ್ತು ಮೂಲಸೌಕರ್ಯ ಲಭ್ಯತೆ ಮತ್ತು ಕೊರತೆಗಳ ಕುರಿತು ಈ ದಾಖಲೆ ಪುಸ್ತಕವು ರಾಜ್ಯಗಳಾದ್ಯಂತ ಅಡ್ಡ ವಿಶ್ಲೇಷಣೆ ನೀಡುತ್ತದೆ. ರಾಜ್ಯಗಳ ಅಗತ್ಯತೆಗಳು, ಅವುಗಳ ಆದ್ಯತೆಯ ಕ್ಷೇತ್ರಗಳು ಮತ್ತು ನೀತಿಗಳನ್ನು ರೂಪಿಸಲು ಮತ್ತು ಉದ್ದೇಶಿತ ಅಭಿಯಾನಗಳನ್ನು ಅರ್ಥ ಮಾಡಿಕೊಳ್ಳಲು ಇದರಲ್ಲಿರುವ ದತ್ತಾಂಶವು ಅಪಾರ ಸಹಾಯಕವಾಗಿದೆ. ಆರೋಗ್ಯ ಅಂಕಿಅಂಶಗಳು ವಿವಿಧ ನಿಯತಾಂಕಗಳಲ್ಲಿ ರಾಜ್ಯಗಳ ಕಾರ್ಯಕ್ಷಮತೆಯನ್ನು ಹೋಲಿಕೆ ಮಾಡಲು ಸಹಾಯ ಮಾಡುತ್ತದೆ ಎಂದು ಅವರು ಬೆಳಕು ಚೆಲ್ಲಿದರು.
"ಆರೋಗ್ಯ ನಿರ್ವಹಣಾ ಮಾಹಿತಿ ವ್ಯವಸ್ಥೆ(ಎಚ್ಎಂಐಎಸ್) ಪೋರ್ಟಲ್ ಅನ್ನು ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ(ಆರ್ ಸಿಎಚ್) ಮತ್ತು ಸಚಿವಾಲಯದ ಇತರೆ ಪೋರ್ಟಲ್‌ಗಳೊಂದಿಗೆ ಸಂಯೋಜಿಸುವ ಅಗತ್ಯವಿದೆ. ಆರೋಗ್ಯ ಕಾರ್ಯಕರ್ತರ ಕೆಲಸದ ಹೊರೆ ಕಡಿಮೆ ಮಾಡಲು ಮತ್ತು ದತ್ತಾಂಶ ಖಚಿತಪಡಿಸಿಕೊಳ್ಳಲು ಇದರಿಂದ ಸಾಧ್ಯವಿದೆ. ಸಮಯೋಚಿತವಾಗಿ ಅಪ್‌ಲೋಡ್ ಮಾಡಲಾಗಿದೆ ಮತ್ತು ಎಚ್ಚರಿಕೆಯಿಂದ ವಿಶ್ಲೇಷಿಸಲಾಗಿದೆ ಎಂಬುದನ್ನು ಸಹ ಖಚಿತಪಡಿಸಿಕೊಳ್ಳುವುದು ಅಗತ್ಯವಿದೆ ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ಹೇಳಿದರು.
ಹಿನ್ನೆಲೆ:
1992ರಿಂದಲೂ ಈ ವಾರ್ಷಿಕ ಪ್ರಕಟಣೆಯು ಆರೋಗ್ಯ ಮೂಲಸೌಕರ್ಯ ಮತ್ತು ಮಾನವ ಸಂಪನ್ಮೂಲಗಳ ಕುರಿತು ವಿವರವಾದ ವಾರ್ಷಿಕ ದತ್ತಾಂಶವನ್ನು ಒದಗಿಸುತ್ತಾ ಬಂದಿದೆ. ಪ್ರತಿ ವರ್ಷ ಮಾರ್ಚ್ 31ಕ್ಕೆ ಅನ್ವಯವಾಗುವಂತೆ ಪರಿಷ್ಕರಣೆಗೊಳ್ಳುತ್ತಿದೆ. ಈ ದತ್ತಾಂಶವು ಆರೋಗ್ಯ ವಲಯದ ಪಾಲುದಾರರಿಗೆ ನಿರ್ಣಾಯಕವಾಗಿದೆ, ಏಕೆಂದರೆ ಇದು ದೇಶಾದ್ಯಂತ ಆರೋಗ್ಯ ಮೂಲಸೌಕರ್ಯಗಳ ಪರಿಣಾಮಕಾರಿ ಯೋಜನೆ, ಮೇಲ್ವಿಚಾರಣೆ ಮತ್ತು ನಿರ್ವಹಣೆಯನ್ನು ಬೆಂಬಲಿಸುತ್ತದೆ. ಆರೋಗ್ಯ ಮೂಲಸೌಕರ್ಯ ಮತ್ತು ಮಾನವ ಸಂಪನ್ಮೂಲಗಳ ಪ್ರಸ್ತುತ ಸ್ಥಿತಿಯ ಸ್ಪಷ್ಟ ಮಾಹಿತಿ ಒದಗಿಸುವ ಮೂಲಕ, ಗ್ರಾಮೀಣ, ನಗರ ಮತ್ತು ಬುಡಕಟ್ಟು ಪ್ರದೇಶಗಳು ಸೇರಿದಂತೆ ವಿವಿಧ ಪ್ರದೇಶಗಳ ಕಂದಕ ಅಥವಾ ಅಂತರ ಗುರುತಿಸಲು ಮತ್ತು ಅಗತ್ಯಗಳನ್ನು ಪರಿಹರಿಸಲು ಪ್ರಕಟಣೆಯು ಭದ್ರ ಬುನಾದಿಯ ಸಾಧನವಾಗಿ ಕಾರ್ಯ ನಿರ್ವಹಿಸುತ್ತದೆ.
ಇದು 2 ಭಾಗಗಳಲ್ಲಿ ರಚನೆಯಾಗಿದೆ:
ಭಾಗ 1 ಸ್ಪಷ್ಟತೆಗಾಗಿ ನಕ್ಷೆಗಳು ಮತ್ತು ಚಾರ್ಟ್‌ಗಳಂತಹ ದೃಶ್ಯ ಸಾಧನಗಳನ್ನು ಬಳಸಿಕೊಂಡು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದ ವಿವರಗಳೊಂದಿಗೆ ಭಾರತದ ಆರೋಗ್ಯ ವ್ಯವಸ್ಥೆಯ ಒಟ್ಟಾರೆ ನೋಟವನ್ನು ಪ್ರಸ್ತುತಪಡಿಸುತ್ತದೆ.
ಭಾಗ 2 ಅನ್ನು 9 ವಿಭಾಗಗಳಾಗಿ ವಿಂಗಡಿಸಲಾಗಿದೆ, ಆರೋಗ್ಯ ಸೌಲಭ್ಯಗಳು, ಮಾನವಶಕ್ತಿ ಮತ್ತು ಜನಸಂಖ್ಯಾ ಸೂಚಕಗಳ ಕುರಿತು ಆಳವಾದ ದತ್ತಾಂಶ ನೀಡುತ್ತದೆ.
ಪ್ರಕಟಣೆಯಲ್ಲಿ ಒಳಗೊಂಡಿರುವ ಮಾಹಿತಿಯು ನೀತಿ ನಿರೂಪಕರು, ಆರೋಗ್ಯ ನಿರ್ವಾಹಕರು ಮತ್ತು ಯೋಜಕರು ಆರೋಗ್ಯ ಸೌಲಭ್ಯಗಳು ಮತ್ತು ಮಾನವ ಸಂಪನ್ಮೂಲಗಳ ವಿತರಣೆ ಮತ್ತು ಸಮರ್ಪಕತೆಯನ್ನು ನಿರ್ಣಯಿಸಲು ಅನುವು ಮಾಡಿಕೊಡುತ್ತದೆ. ಆರೋಗ್ಯ ಸೇವೆಯ ವಿತರಣೆಯನ್ನು ಅತ್ಯುತ್ತಮವಾಗಿಸಲು ಮತ್ತು ಸಂಪನ್ಮೂಲಗಳನ್ನು ಸಮರ್ಥವಾಗಿ ನಿಯೋಜಿಸಲು ಉದ್ದೇಶಿತ ಕಾರ್ಯತಂತ್ರಗಳನ್ನು ರೂಪಿಸುವಲ್ಲಿ ಇದು ಸಹಾಯ ಮಾಡುತ್ತದೆ. ಹೆಚ್ಚುವರಿಯಾಗಿ, ದತ್ತಾಂಶವು ವಿವಿಧ ಪ್ರದೇಶಗಳಲ್ಲಿನ ಅಗತ್ಯಗಳನ್ನು ಅರ್ಥ ಮಾಡಿಕೊಳ್ಳಲು ಮುನ್ನೋಟ ದಾಖಲೆಯಾಗಿ ಕಾರ್ಯ ನಿರ್ವಹಿಸುತ್ತದೆ, ಆರೋಗ್ಯ ಸೇವೆಗಳ ಹೆಚ್ಚು ಸಮಾನವಾದ ವಿತರಣೆಯನ್ನು ಸುಗಮಗೊಳಿಸುತ್ತದೆ.
ಒಟ್ಟಾರೆಯಾಗಿ, ಆರೋಗ್ಯ ಮೂಲಸೌಕರ್ಯ ಅಭಿವೃದ್ಧಿಯು ಎಲ್ಲಾ ಜನಸಂಖ್ಯೆಯ ಗುಂಪುಗಳ ನಿರ್ದಿಷ್ಟ ಅವಶ್ಯಕತೆಗಳೊಂದಿಗೆ ಜೋಡಿಸಲ್ಪಟ್ಟಿದೆ ಎಂದು ಖಚಿತಪಡಿಸಿಕೊಳ್ಳಲು ಪ್ರಕಟಣೆಯು ಅತ್ಯಗತ್ಯ ಸಂಪನ್ಮೂಲ ವಸ್ತುವಾಗಿದೆ, ಅಂತಿಮವಾಗಿ ದೇಶಾದ್ಯಂತ ಹೆಚ್ಚು ಚೇತರಿಸಿಕೊಳ್ಳುವ ಮತ್ತು ಸ್ಪಂದನಾಶೀಲ ಆರೋಗ್ಯ ವ್ಯವಸ್ಥೆಗೆ ಕೊಡುಗೆ ನೀಡುತ್ತದೆ.
2023 ಮಾರ್ಚ್ 31ಕ್ಕೆ ಅನ್ವಯವಾಗುವಂತೆ, ದೇಶವು ಒಟ್ಟು 1,69,615 ಉಪ-ಕೇಂದ್ರಗಳು(ಎಸ್ ಸಿಗಳು), 31,882 ಪ್ರಾಥಮಿಕ ಆರೋಗ್ಯ ಕೇಂದ್ರಗಳು(ಪಿಎಚ್ ಸಿಗಳು), 6,359 ಸಮುದಾಯ ಆರೋಗ್ಯ ಕೇಂದ್ರಗಳು(ಸಿಎಚ್ ಸಿಗಳು), 1,340 ಉಪ-ವಿಭಾಗ,ಜಿಲ್ಲಾ ಆಸ್ಪತ್ರೆಗಳು(ಎಚ್ಡಿಎಚ್ ಗಳು), 714 ಜಿಲ್ಲಾ ಆಸ್ಪತ್ರೆಗಳು(ಡಿಎಚ್ ಗಳು), ಮತ್ತು 362 ವೈದ್ಯಕೀಯ ಕಾಲೇಜುಗಳು(ಎಂಸಿಗಳು) ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಸೇವೆ ಸಲ್ಲಿಸುತ್ತಿವೆ.
ಈ ಆರೋಗ್ಯ ರಕ್ಷಣೆಯ ಮೂಲಸೌಕರ್ಯಗಳನ್ನು ಎಸ್ ಸಿಗಳಲ್ಲಿ 2,39,911 ಆರೋಗ್ಯ ಕಾರ್ಯಕರ್ತರು(ಪುರುಷ + ಮಹಿಳೆ), ಪಿಎಚ್ ಸಿಗಳಲ್ಲಿ 40,583 ವೈದ್ಯರು, ವೈದ್ಯಕೀಯ ಅಧಿಕಾರಿಗಳು, ಸಿಎಚ್ ಸಿಗಳಲ್ಲಿ 26,280 ತಜ್ಞರು ಮತ್ತು ವೈದ್ಯಕೀಯ ಅಧಿಕಾರಿಗಳು ಮತ್ತು 45,027 ವೈದ್ಯರು ಮತ್ತು ಡಿಎಚ್ಎಸ್ ಡಿ ತಜ್ಞರು ಬೆಂಬಲಿಸುತ್ತಾರೆ. ಹೆಚ್ಚುವರಿಯಾಗಿ, ಪಿಎಚ್ ಸಿಗಳಲ್ಲಿ 47,932 ಸಿಬ್ಬಂದಿ ನರ್ಸ್‌ಗಳು, ಸಿಎಚ್ ಸಿಗಳಲ್ಲಿ 51,059 ನರ್ಸಿಂಗ್ ಸಿಬ್ಬಂದಿ ಮತ್ತು 1,35,793 ಪ್ಯಾರಾಮೆಡಿಕಲ್ ಸಿಬ್ಬಂದಿ ಎಸ್ ಡಿಎಚ್ ಗಳು ಮತ್ತು ಡಿಎಚ್ ಗಳಲ್ಲಿ ದೇಶಾದ್ಯಂತ ಇದ್ದಾರೆ.
“ಹೆಲ್ತ್ ಡೈನಾಮಿಕ್ಸ್ ಆಫ್ ಇಂಡಿಯಾ(ಮೂಲಸೌಕರ್ಯ ಮತ್ತು ಮಾನವ ಸಂಪನ್ಮೂಲ) 2022-23” ಪ್ರಕಟಣೆ ನೋಡಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ವೆಬ್‌ಸೈಟ್‌ನ ಡಾಕ್ಯುಮೆಂಟ್ಸ್ ವಿಭಾಗದ ಅಡಿ, ಲಿಂಕ್ ಬಳಸಿಕೊಂಡು ಪ್ರವೇಶಿಸಬಹುದು: https://mohfw.gov.in/.
ಪ್ರಕಟಣೆಯ ಪ್ರಮುಖ ಲಕ್ಷಣಗಳು:
1. ತುಲನಾತ್ಮಕ ವಿಶ್ಲೇಷಣೆ: 2005 ಮತ್ತು 2023ರ ನಡುವೆ ಆರೋಗ್ಯ ಮೂಲಸೌಕರ್ಯ ಮತ್ತು ಮಾನವಶಕ್ತಿಯ ಹೋಲಿಕೆಗಳನ್ನು ನೀಡುತ್ತದೆ. ಜತೆಗೆ, 2022ರಿಂದ 2023ರ ವರೆಗೆ ಆಗಿರುವ ಪ್ರಗತಿ ಮತ್ತು ಅಂತರವನ್ನು ತೋರಿಸುತ್ತದೆ.
2. ಜಿಲ್ಲಾವಾರು ದತ್ತಾಂಶ: ಉಪ-ಕೇಂದ್ರಗಳು(ಎಸ್ ಸಿಗಳು), ಪ್ರಾಥಮಿಕ ಆರೋಗ್ಯ ಕೇಂದ್ರಗಳು(ಪಿಎಚ್ ಸಿಗಳು), ಸಮುದಾಯ ಆರೋಗ್ಯ ಕೇಂದ್ರಗಳು(ಸಿಎಚ್ ಸಿಗಳು), ಉಪ-ಜಿಲ್ಲಾ ಆಸ್ಪತ್ರೆಗಳು(ಎಸ್ ಡಿಎಚ್ ಗಳು), ಜಿಲ್ಲಾ ಆಸ್ಪತ್ರೆಗಳು(ಡಿಎಚ್ ಗಳು) ಮತ್ತು ವೈದ್ಯಕೀಯ ಕಾಲೇಜುಗಳ ಆರೋಗ್ಯ ಸೌಲಭ್ಯಗಳ ಜಿಲ್ಲಾ ಮಟ್ಟದ ವಿವರಗಳನ್ನು ನೀಡುತ್ತದೆ.
3. ಗ್ರಾಮೀಣ, ನಗರ ಮತ್ತು ಬುಡಕಟ್ಟು ಪ್ರದೇಶಗಳ ಮೇಲೆ ಗಮನ: ಗ್ರಾಮೀಣ, ನಗರ ಮತ್ತು ಬುಡಕಟ್ಟು ಪ್ರದೇಶಗಳಲ್ಲಿ ಮೂಲಸೌಕರ್ಯ ಮತ್ತು ಮಾನವಶಕ್ತಿಯ ವಿವರಗಳು, ನೀತಿ ಯೋಜನೆಗಾಗಿ ಉದ್ದೇಶಿತ ಒಳನೋಟಗಳನ್ನು ಒದಗಿಸುತ್ತದೆ.
4. ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ವರ್ಗೀಕರಣ: ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಪ್ರಮುಖ ಆರೋಗ್ಯ ನಿರ್ವಹಣೆಯ ಮೆಟ್ರಿಕ್‌ಗಳ ಆಧಾರದ ಮೇಲೆ ವರ್ಗೀಕರಿಸಲಾಗಿದೆ, ಉದ್ದೇಶಿತ ಮಧ್ಯಸ್ಥಿಕೆ ವಹಿಸಲು ಸಹಾಯ ಮಾಡುತ್ತದೆ.
5. ಬಳಕೆದಾರ ಸ್ನೇಹಿ ಮುಖ್ಯಾಂಶಗಳು: ತ್ವರಿತ ಉಲ್ಲೇಖಕ್ಕಾಗಿ ಪ್ರಮುಖ ಸಂಶೋಧನೆಗಳನ್ನು ಆರಂಭದಲ್ಲಿ ಸಂಕ್ಷಿಪ್ತಗೊಳಿಸಲಾಗಿದೆ.
6. ಪಾಲುದಾರರಿಗೆ ಮಾರ್ಗದರ್ಶನ: ಮೂಲಸೌಕರ್ಯ ಮತ್ತು ಮಾನವ ಸಂಪನ್ಮೂಲಗಳಲ್ಲಿನ ಅಂತರಗಳು ಮತ್ತು ಕೊರತೆಗಳನ್ನು ಗುರುತಿಸುವ ಮೂಲಕ ಆರೋಗ್ಯ ಯೋಜನೆ ಮತ್ತು ನಿರ್ವಹಣೆಗೆ ನಿರ್ಣಾಯಕ ಸಾಧನವಾಗಿ ಕಾರ್ಯ ನಿರ್ವಹಿಸುತ್ತದೆ.
ಆರೋಗ್ಯ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಮತ್ತು ಎನ್ಎಚ್ಎಂ ನಿರ್ದೇಶಕಿ ಶ್ರೀಮತಿ ಆರಾಧನಾ ಪಟ್ನಾಯಕ್ ಮತ್ತು ಕೇಂದ್ರ ಆರೋಗ್ಯ ಸಚಿವಾಲಯದ ಹಿರಿಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
*****
(Release ID: 2053158)
Visitor Counter : 56