ಪ್ರಧಾನ ಮಂತ್ರಿಯವರ ಕಛೇರಿ

ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ಗುಜರಾತ್‌ನ ಸೂರತ್‌ನಲ್ಲಿ ನಡೆದ ನೀರು ಕೊಯ್ಲು ಸಾರ್ವಜನಿಕ ಸಹಭಾಗಿತ್ವ ಉಪಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನ ಮಂತ್ರಿಯವರ ಭಾಷಣ

Posted On: 06 SEP 2024 3:04PM by PIB Bengaluru

ಗುಜರಾತ್ ಮುಖ್ಯಮಂತ್ರಿ, ಶ್ರೀ ಭೂಪೇಂದ್ರಭಾಯಿ ಪಟೇಲ್, ಕೇಂದ್ರ ಸಚಿವ ಸಂಪುಟದಲ್ಲಿ ನನ್ನ ಸಹೋದ್ಯೋಗಿಯಾದ  ಸಿ.ಆರ್. ಪಾಟೀಲ್, ನಿಮುಬೆನ್, ಗುಜರಾತ್ ಸರ್ಕಾರದ ಮಂತ್ರಿವಲಯ, ಸಂಸದರು, ಶಾಸಕರು, ದೇಶದ ಎಲ್ಲಾ ಜಿಲ್ಲೆಗಳ ಡಿಎಂಗಳು, ಜಿಲ್ಲಾಧಿಕಾರಿಗಳು, ಇತರ ಗಣ್ಯರೇ ಮತ್ತು ನನ್ನ ಎಲ್ಲಾ ಸಹೋದರ ಸಹೋದರಿಯರೇ!

ಇಂದು ಗುಜರಾತ್‌ನಲ್ಲಿ ಜಲಶಕ್ತಿ ಸಚಿವಾಲಯವು ಮಹತ್ವದ ಅಭಿಯಾನವನ್ನು ಪ್ರಾರಂಭಿಸುತ್ತಿದೆ. ಈ ಹಿಂದೆ ಕಳೆದ ಕೆಲವು ದಿನಗಳಲ್ಲಿ ದೇಶದ ಮೂಲೆ ಮೂಲೆಗಳಲ್ಲಿನ ಮಳೆಯ ಆರ್ಭಟ ಜೋರಾಗಿತ್ತು. ದೇಶದ ಯಾವುದೇ ಒಂದು ಪ್ರದೇಶ ಈ ಬಿಕ್ಕಟ್ಟಿನಿಂದ ಹೊರತಾಗಿಲ್ಲ. ನಾನು ಹಲವು ವರ್ಷಗಳ ಕಾಲ ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದೆ, ಆದರೆ ಏಕಕಾಲದಲ್ಲಿ ಇಷ್ಟೊಂದು ಭಾರಿ ಮಳೆಯಾಗಿರುವುದನ್ನು ನಾನು ಎಂದೂ ಕೇಳಿರಲಿಲ್ಲ ಅಥವಾ ನೋಡಿರಲಿಲ್ಲ. ಆದರೆ ಈ ಬಾರಿ ಗುಜರಾತ್ ಗೆ ದೊಡ್ಡ ಬಿಕ್ಕಟ್ಟು ಎದುರಾಗಿದೆ. ನಮ್ಮ ಎಲ್ಲ ವ್ಯವಸ್ಥೆಗಳು ಪ್ರಕೃತಿಯ ಈ ಕೋಪಾವೇಶವನ್ನು ತಡೆದುಕೊಳ್ಳುವಷ್ಟು ಬಲವಾಗಿರಲಿಲ್ಲ. ಆದರೆ ಗುಜರಾತ್‌ನ ಜನರು, ಅಷ್ಟೇ ಅಲ್ಲ ನಮ್ಮ ದೇಶವಾಸಿಗಳು ತಮ್ಮದೇ ಆದ ವಿಶಿಷ್ಟತೆಯನ್ನು ಹೊಂದಿದ್ದಾರೆ, ಅವರು ಬಿಕ್ಕಟ್ಟಿನ ಸಮಯದಲ್ಲಿ ಹೆಗಲಿಗೆ ಹೆಗಲು ಕೊಟ್ಟು ಪರಸ್ಪರ ಸಹಾಯ ಮಾಡುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಇಂದಿಗೂ ದೇಶದ ಹಲವೆಡೆ ಭೀಕರ ಮಳೆಯಿಂದಾಗಿ ಜನರು ಸಮಸ್ಯೆ ಎದುರಿಸುತ್ತಿದ್ದಾರೆ.

ಸ್ನೇಹಿತರೆ,  

ನೀರು ಕೊಯ್ಲು ಕೇವಲ ಪಾಲಿಸಿ ಮಾತ್ರವಲ್ಲ. ಇದು ಒಂದು ಪ್ರಯತ್ನ, ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಇದು ಒಂದು ಪುಣ್ಯಸಾಧನೆ. ಇದರಲ್ಲಿ ಔದಾರ್ಯವೂ ಇದೆ, ಜವಾಬ್ದಾರಿಯೂ ಇದೆ. ಮುಂಬರುವ ಪೀಳಿಗೆಗಳು ನಮ್ಮ ಬಗ್ಗೆ ನಿರ್ಣಯ ಕೈಗೊಳ್ಳುವಾಗ, ನೀರಿನ ಬಗ್ಗೆ ನಮ್ಮ ನಿಲುವು ಬಹುಶಃ ಅವರ ಮೊದಲ ನಿಯತಾಂಕವಾಗಬಹುದು. ಏಕೆಂದರೆ, ಇದು ಕೇವಲ ಸಂಪನ್ಮೂಲಗಳ ಪ್ರಶ್ನೆಯಲ್ಲ. ಜೀವನದ ಪ್ರಶ್ನೆ, ಇದು ಮಾನವತೆಯ ಭವಿಷ್ಯದ ಪ್ರಶ್ನೆ. ಆದ್ದರಿಂದ ಸುಸ್ಥಿರ ಭವಿಷ್ಯಕ್ಕಾಗಿ ನಾವು 9 ನಿರ್ಣಯಗಳಿಗೆ ಮುಂದಡಿ ಇರಿಸಿದ್ದೇವೆ. ಅವುಗಳಲ್ಲಿ  ಜಲ ಸಂರಕ್ಷಣೆಯೇ ಮೊದಲ ನಿರ್ಣಯವಾಗಿದೆ. ಈ ನಿಟ್ಟಿನಲ್ಲಿ ಇಂದು ಸಾರ್ವಜನಿಕರ ಸಹಭಾಗಿತ್ವದದೊಂದಿಗೆ ಮತ್ತೊಂದು ಅರ್ಥಪೂರ್ಣ ಪ್ರಯತ್ನಕ್ಕೆ ಮುಂದಾಗಿರುವುದು ಸಂತಸ ತಂದಿದೆ. ಈ ಸಂದರ್ಭದಲ್ಲಿ, ನಾನು ಜಲ ಶಕ್ತಿ ಸಚಿವಾಲಯ, ಭಾರತ ಸರ್ಕಾರ, ಗುಜರಾತ್ ಸರ್ಕಾರ ಮತ್ತು ಈ ಅಭಿಯಾನದಲ್ಲಿ ಭಾಗವಹಿಸುವ ದೇಶದ ಎಲ್ಲಾ ಜನರಿಗೆ ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ.

ಸ್ನೇಹಿತರೆ, 

ಇಂದು ಪರಿಸರ ಮತ್ತು ಜಲ ಸಂರಕ್ಷಣೆಯ ವಿಷಯ ಬಂದಾಗ, ಎಂದಿಗೂ ಮರೆಯಲಾರದಂತಹ ಹಲವಾರು ಸತ್ಯಗಳಿವೆ. ವಿಶ್ವದ ಒಟ್ಟಾರೆ ಶುದ್ಧ ನೀರಿನ ಶೇಕಡಾ 4 ರಷ್ಟು ಭಾಗ ಮಾತ್ರ ಭಾರತದಲ್ಲಿದೆ. ಶೇಕಡಾ 4ರಷ್ಟು ಮಾತ್ರ ಎಂದು ನಮ್ಮ ಗುಜರಾತಿನ ಜನ ಅರ್ಥ ಮಾಡಿಕೊಳ್ಳುತ್ತಾರೆ. ಭಾರತದಲ್ಲಿ ಅನೇಕ ದೊಡ್ಡ ನದಿಗಳಿವೆ, ಆದರೂ ನಮ್ಮ ಭೂಮಿಯ ಹೆಚ್ಚಿನ ಭಾಗವು ನೀರಿನ ಅಭಾವವನ್ನು ಎದುರಿಸುತ್ತಿದೆ. ಹಲವೆಡೆ ನೀರಿನ ಮಟ್ಟ ನಿರಂತರವಾಗಿ ಕುಸಿಯುತ್ತಿದೆ. ಹವಾಮಾನ ಬದಲಾವಣೆಯು ಈ ಬಿಕ್ಕಟ್ಟನ್ನು ಮತ್ತಷ್ಟು ಉಲ್ಬಣಿಸುತ್ತಿದೆ.

ಸ್ನೇಹಿತರೆ, 

ಇದೆಲ್ಲದರ ಹೊರತಾಗಿಯೂ, ಈ ಸವಾಲುಗಳಿಗೆ ಸ್ವತಃ ಭಾರತವೇ ತನಗಾಗಿ ಮತ್ತು ಇಡೀ ಜಗತ್ತಿಗಾಗಿ ಪರಿಹಾರವನ್ನು ಕಂಡುಕೊಳ್ಳಬಲ್ಲದು. ಇದಕ್ಕೆ ಕಾರಣ ಭಾರತದ ಪ್ರಾಚೀನ ಜ್ಞಾನ ಪರಂಪರೆ. ಜಲ ಸಂರಕ್ಷಣೆ, ನಿಸರ್ಗ ಸಂರಕ್ಷಣೆ, ಇವು ನಮಗೆ ಹೊಸ ಪದಗಳಲ್ಲ, ಇದು ನಮಗೆ ಪುಸ್ತಕದ ಜ್ಞಾನವಲ್ಲ. ಸಂದರ್ಭಗಳಿಗನುಸಾರ ನಮ್ಮ ಪಾಲಿಗೆ ಬಂದ ಕೆಲಸವೂ ಅಲ್ಲ. ಇದು ಭಾರತದ ಸಾಂಸ್ಕೃತಿಕ ಅರಿವಾಗಿದೆ. ನೀರನ್ನು ದೇವತಾ ಸ್ವರೂಪವೆಂದು, ನದಿಗಳನ್ನು ದೇವತೆ ಎಂದು ಪರಿಗಣಿಸಲಾದ, ಕೆರೆ, ಕೊಳಗಳು ದೇವಾಲಯಗಳ ಸ್ಥಾನಮಾನ ಪಡೆದಂತಹ ಸಂಸ್ಕೃತಿಯ ಹಿನ್ನೆಲೆಯ ಜನರು ನಾವು. ಗಂಗೆ ನಮ್ಮ ತಾಯಿ, ನರ್ಮದೆ ನಮ್ಮ ತಾಯಿ. ಗೋದಾವರಿ ಮತ್ತು ಕಾವೇರಿ ನಮ್ಮ ತಾಯಂದಿರು. ಈ ಅನುಬಂಧ ಸಾವಿರಾರು ವರ್ಷಗಳದ್ದು. ಸಾವಿರಾರು ವರ್ಷಗಳ ಹಿಂದೆಯೇ ನಮ್ಮ ಪೂರ್ವಜರು ನೀರು ಮತ್ತು ಅದರ ಸಂರಕ್ಷಣೆಯ ಮಹತ್ವವನ್ನು ಅರಿತಿದ್ದರು. ಶತಮಾನಗಳಷ್ಟು ಹಳೆಯದಾದ ನಮ್ಮ ಗ್ರಂಥಗಳಲ್ಲಿ ಹೀಗೆ ಹೇಳಲಾಗಿದೆ - ಅದ್ಭಿಃ ಸರ್ವಾಣಿ ಭೂತಾನಿ, ಜೀವಂತಿ ಪ್ರಭವಂತಿ ಚ. ತಸ್ಮಾತ್ ಸರ್ವೇಷು ದಾನೇಷು, ತಯೋದಾನಂ ವಿಶಿಷ್ಯತೇ । ಅಂದರೆ, ಎಲ್ಲಾ ಜೀವಿಗಳು ಜಲಮೂಲದಿಂದಲೇ ಉತ್ಪನ್ನವಾಗಿವೆ ಮತ್ತು ಅವುಗಳ ಬದುಕಿಗೆ ನೀರು ಅನಿವಾರ್ಯ. ಆದ್ದರಿಂದ, ಜಲದಾನ, ಇತರರಿಗಾಗಿ  ನೀರನ್ನು ಕಾಪಾಡುವುದು ಬಹು ದೊಡ್ಡ ದಾನವಾಗಿದೆ. ನೂರಾರು ವರ್ಷಗಳ ಹಿಂದೆ ರಹೀಮದಾಸ್ ಕೂಡ ಇದೇ ಮಾತನ್ನು ಹೇಳಿದ್ದರು. ನಾವೆಲ್ಲರೂ ಅದನ್ನು ಓದಿದ್ದೇವೆ. ರಹೀಮ್ದಾಸ್ ಹೀಗೆ ಹೇಳಿದ್ದರು – “ರಹಿಮನ್, ಪಾನಿ ರಖಿಯೇ ಬಿನ್ ಪಾನಿ ಸಬ್ ಸೂನ್!” ಎಂದು. ಯಾವ ರಾಷ್ಟ್ರದ ಚಿಂತನೆ ಸಮಗ್ರ ಮತ್ತು ದೂರದೃಷ್ಟಿಯುಳ್ಳದ್ದಾಗಿದೆಯೋ ಆ ರಾಷ್ಟ್ರವು ನೀರಿನ ಬಿಕ್ಕಟ್ಟಿನ ದುರಂತಕ್ಕೆ ಪರಿಹಾರಗಳನ್ನು ಹುಡುಕುವಲ್ಲಿ ವಿಶ್ವದ ಮುಂಚೂಣಿಯಲ್ಲಿರಬೇಕಾಗುತ್ತದೆ.

ಸ್ನೇಹಿತರೆ, 

ಜನತೆಗೆ ನೀರು ಒದಗಿಸಿ ನೀರು ಉಳಿಸುವ ನಿಟ್ಟಿನಲ್ಲಿ ಹಲವಾರು  ಯಶಸ್ವಿ ಪ್ರಯೋಗಗಳನ್ನು ಮಾಡಿರುವ ಗುಜರಾತ್ ನಲ್ಲಿ ಇಂದಿನ ಕಾರ್ಯಕ್ರಮವನ್ನು ಆರಂಭಿಸಲಾಗುತ್ತಿದೆ. ಎರಡೂವರೆ ದಶಕಗಳ ಹಿಂದೆ ಸೌರಾಷ್ಟ್ರದ ಸ್ಥಿತಿ ಹೇಗಿತ್ತು ಎಂಬುದು ನಮಗೆಲ್ಲ ನೆನಪಿದೆ, ಉತ್ತರ ಗುಜರಾತ್‌ನ ಸ್ಥಿತಿ ಹೇಗಿತ್ತು ಎಂಬುದು ನಮಗೆ ತಿಳಿದಿದೆ. ಜಲ ಸಂಗ್ರಹಕ್ಕೆ ಬೇಕಾದ ದೂರದೃಷ್ಟಿ ಕೂಡ ಹಿಂದಿನ ಸರ್ಕಾರಗಳಲ್ಲಿ ಇರಲಿಲ್ಲ. ಆಗಲೇ  ನೀರಿನ ಸಮಸ್ಯೆಯೂ ಬಗೆಹರಿಯಬಹುದು ಎಂದು ವಿಶ್ವಕ್ಕೆ ತಿಳಿಸುವ ಸಂಕಲ್ಪಗೈದೆ. ದಶಕಗಳಿಂದ ಬಾಕಿ ಉಳಿದಿದ್ದ ಸರ್ದಾರ್ ಸರೋವರ ಅಣೆಕಟ್ಟಿನ ಕಾಮಗಾರಿ ಪೂರ್ಣಗೊಳಯಿಸಲಾಯಿತು. ಗುಜರಾತ್‌ನಲ್ಲಿ ಸೌನಿ ಯೋಜನೆಯು ಪ್ರಾರಂಭವಾಯಿತು. ಹೆಚ್ಚುವರಿ ನೀರು ಇರುವ ಸ್ಥಳಗಳಿಂದ ನೀರಿನ ಸಮಸ್ಯೆ ಇರುವ ಸ್ಥಳಗಳಿಗೆ ನೀರು ಸಾಗಿಸಲಾಯಿತು. ಆಗಲೂ ಹಾಕುತ್ತಿರುವ ನೀರಿನ ಪೈಪ್‌ಗಳಿಂದ ಗಾಳಿ ಬರುತ್ತದೆ ಎಂದು ಪ್ರತಿಪಕ್ಷದವರು ಗೇಲಿ ಮಾಡುತ್ತಿದ್ದರು. ಆದರೆ ಇಂದು ಗುಜರಾತಿನಲ್ಲಿ ಮಾಡಿದ ಪ್ರಯತ್ನದ ಫಲ ಇಡೀ ಜಗತ್ತಿನ ಮುಂದಿದೆ. ಗುಜರಾತ್‌ನ ಯಶಸ್ಸು ಮತ್ತು ಗುಜರಾತ್‌ನಲ್ಲಿನ ನನ್ನ ಅನುಭವಗಳು ನಾವು ದೇಶವನ್ನು ಜಲ ಸಂಕಟದಿಂದ ಮುಕ್ತಗೊಳಿಸಬಹುದು ಎಂಬ ವಿಶ್ವಾಸವನ್ನು ಮೂಡಿಸುತ್ತವೆ.

ಸ್ನೇಹಿತರೆ, 

ಜಲ ಸಂರಕ್ಷಣೆಯು ಕೇವಲ ನೀತಿಗಳಿಗೆ ಸೀಮಿತವಾಗಿರದೆ ಸಾಮಾಜಿಕ ನಿಷ್ಠೆಯ ವಿಷಯವೂ ಆಗಿದೆ. ಜಾಗೃತ ಜನತೆ, ಸಾರ್ವಜನಿಕ ಭಾಗವಹಿಸುವಿಕೆ ಮತ್ತು ಸಾರ್ವಜನಿಕ ಚಳುವಳಿ ಈ ಅಭಿಯಾನದ ದೊಡ್ಡ ಶಕ್ತಿಯಾಗಿದೆ. ದಶಕಗಳಿಂದ ನೀರು ಮತ್ತು ನದಿಗಳ ಹೆಸರಿನಲ್ಲಿ ಸಾವಿರಾರು ಕೋಟಿ ರೂಪಾಯಿಗಳ ಯೋಜನೆಗಳು ಬರುತ್ತಲೇ ಇದ್ದವು ಎಂಬುದು ನಿಮಗೆ ನೆನಪಿರಲಿ.  ಆದರೆ, ಫಲಿತಾಂಶ- ಈ 10 ವರ್ಷಗಳಲ್ಲಿ ಮಾತ್ರ ಕಂಡುಬಂದಿದೆ. ನಮ್ಮ ಸರ್ಕಾರವು ಸಂಪೂರ್ಣ ಸಮಾಜ ಮತ್ತು ಸರ್ಕಾರದ ಸಂಪೂರ್ಣ ಬದ್ಧತೆಯೊಂದಿಗೆ ಕೆಲಸ ಮಾಡಿದೆ. 10 ವರ್ಷಗಳ ಎಲ್ಲಾ ದೊಡ್ಡ ಯೋಜನೆಗಳನ್ನು ನೀವು ನೋಡಿದರೆ, ಮೊದಲ ಬಾರಿಗೆ, ಜಲ ಸಂಬಂಧಿತ ಸಮಸ್ಯೆಗಳ ಮೇಲಿನ ಅಡ್ಡಿ ಆತಂಕಗಳನ್ನು ತೊಡೆದು ಹಾಕಲಾಯಿತು. ಇಡೀ ಸರ್ಕಾರದ ಬದ್ಧತೆಯ ಮೇರೆಗೆ ನಾವು ಮೊದಲ ಬಾರಿಗೆ ಪ್ರತ್ಯೇಕ ಜಲಶಕ್ತಿ ಸಚಿವಾಲಯವನ್ನು ರಚಿಸಿದ್ದೇವೆ. ಮೊದಲ ಬಾರಿಗೆ, ದೇಶವು ಜಲ-ಜೀವನ್ ಮಿಷನ್ ರೂಪದಲ್ಲಿ 'ಪ್ರತಿ ಮನೆಗೆ ನೀರು' ಒದಗಿಸುವ ಪ್ರತಿಜ್ಞೆಗೈದಿದ್ದೇವೆ. ಈ ಹಿಂದೆ ದೇಶದಲ್ಲಿ 3 ಕೋಟಿ ಮನೆಗಳಿಗೆ ಮಾತ್ರ ಪೈಪ್‌ಲೈನ್‌ ಮೂಲಕ ನೀರು ಪೂರೈಕೆ ಮಾಡಲಾಗಿತ್ತು. ಇಂದು ದೇಶದ 15 ಕೋಟಿಗೂ ಹೆಚ್ಚು ಗ್ರಾಮಗಳ ಮನೆಗಳಿಗೆ ಪೈಪ್‌ಲೈನ್‌ನಲ್ಲಿ ನೀರು ಪ್ರವಹಿಸಲಾರಂಭಿಸಿದೆ. ಜಲ-ಜೀವನ್ ಮಿಷನ್ ಮೂಲಕ ದೇಶದ ಪ್ರತಿಶತ 75 ಕ್ಕೂ ಹೆಚ್ಚು ಮನೆಗಳಿಗೆ ಶುದ್ಧ ನಲ್ಲಿ ನೀರು ತಲುಪಿದೆ. ಸ್ಥಳೀಯ ಜಲ ಸಮಿತಿಗಳು ಜಲ-ಜೀವನ್ ಮಿಷನ್‌ನ ಈ ಜವಾಬ್ದಾರಿಯನ್ನು ನಿರ್ವಹಿಸುತ್ತಿವೆ. ಮಹಿಳೆಯರು ಗುಜರಾತ್‌ನ ಜಲ ಸಮಿತಿಗಳಲ್ಲಿ ಅದ್ಭುತ ಸಾಧನೆ ಮಾಡಿದಂತೆಯೇ, ಈಗ ದೇಶಾದ್ಯಂತ ಜಲ ಸಮಿತಿಗಳಲ್ಲಿ ಮಹಿಳೆಯರು ಅದ್ಭುತ ಕೆಲಸ ಮಾಡುತ್ತಿದ್ದಾರೆ. ಇದರಲ್ಲಿ ಕನಿಷ್ಠ ಶೇಕಡ 50ರಷ್ಟು ಪಾಲು ಗ್ರಾಮಸ್ಥ ಮಹಿಳೆಯರದ್ದಾಗಿದೆ.

ಸೋದರ ಸೋದರಿಯರೇ,

ಇಂದು ಜಲಶಕ್ತಿ ಅಭಿಯಾನ ರಾಷ್ಟ್ರೀಯ ಮಿಷನ್ ಆಗಿ ಮಾರ್ಪಟ್ಟಿದೆ. ಸಾಂಪ್ರದಾಯಿಕ ಜಲಮೂಲಗಳ ನವೀಕರಣವಾಗಲಿ ಅಥವಾ ಹೊಸ ಶೇಖರಣಾಗಾರಗಳ ನಿರ್ಮಾಣವಾಗಲಿ, ಪಾಲುದಾರರಿಂದ ನಾಗರಿಕ ಸಮಾಜ ಮತ್ತು ಪಂಚಾಯತ್‌ಗಳವರೆಗೆ ಎಲ್ಲರೂ ಇದರಲ್ಲಿ ತೊಡಗಿಸಿಕೊಂಡಿದ್ದಾರೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಪ್ರತಿ ಜಿಲ್ಲೆಯಲ್ಲೂ ಅಮೃತ ಸರೋವರ ನಿರ್ಮಿಸುವ ಕೆಲಸವನ್ನು ಸಾರ್ವಜನಿಕ ಸಹಭಾಗಿತ್ವದ ಮೂಲಕ ಪ್ರಾರಂಭಿಸಿದ್ದೇವೆ. ಇದರ ಅಡಿಯಲ್ಲಿ, ಸಾರ್ವಜನಿಕ ಸಹಭಾಗಿತ್ವದಲ್ಲಿ ದೇಶದಲ್ಲಿ 60 ಸಾವಿರಕ್ಕೂ ಹೆಚ್ಚು ಅಮೃತ ಸರೋವರಗಳನ್ನು ನಿರ್ಮಿಸಲಾಗಿದೆ. ದೇಶದ ಮುಂಬರುವ ಪೀಳಿಗೆಗೆ ಇದು ಎಂತಹ ದೊಡ್ಡ ಅನುಕೂಲವೆಂದು ನೀವು ಊಹಿಸಬಹುದು. ಅಂತೆಯೇ, ನಾವು ಅಂತರ್ಜಲ ಮರುಪೂರಣಕ್ಕಾಗಿ ಅಟಲ್ ಭೂಜಲ ಯೋಜನೆ ಪ್ರಾರಂಭಿಸಿದ್ದೇವೆ. ಇದರಲ್ಲೂ ಜಲಮೂಲಗಳ ನಿರ್ವಹಣೆಯ ಹೊಣೆಯನ್ನು ಗ್ರಾಮದ ಸಮಾಜದವರಿಗೇ ವಹಿಸಲಾಗಿದೆ. 2021 ರಲ್ಲಿ ನಾವು ‘ಕ್ಯಾಚ್ ದಿ ರೈನ್’ ಅಭಿಯಾನವನ್ನು ಪ್ರಾರಂಭಿಸಿದ್ದೇವೆ. ಇಂದು, ನಗರಗಳಿಂದ ಹಳ್ಳಿಗಳವರೆಗೆ, ಜನರು ಹೆಚ್ಚಿನ ಸಂಖ್ಯೆಯಲ್ಲಿ ಕ್ಯಾಚ್ ದಿ ರೈನ್‌ ಅಭಿಯಾನಕ್ಕೆ ಸೇರ್ಪಡೆಗೊಳ್ಳುತ್ತಿದ್ದಾರೆ. ‘ನಮಾಮಿ ಗಂಗೆ’ ಯೋಜನೆಯ ಉದಾಹರಣೆಯೂ ನಮ್ಮ ಮುಂದಿದೆ. 'ನಮಾಮಿ ಗಂಗೆ' ಕೋಟ್ಯಂತರ ದೇಶವಾಸಿಗಳ ಭಾವನಾತ್ಮಕ ಸಂಕಲ್ಪವಾಗಿ ಪರಿಣಮಿಸಿದೆ. ನಮ್ಮ ನದಿಗಳನ್ನು ಶುದ್ಧಗೊಳಿಸಲು, ಜನರು ಸಂಪ್ರದಾಯಿಕ ರೂಢಿಗಳನ್ನು ಬಿಡುತ್ತಿದ್ದಾರೆ ಮತ್ತು ಅಪ್ರಸ್ತುತ ಪದ್ಧತಿಗಳನ್ನು ಸಹ ಬದಲಾಯಿಸುತ್ತಿದ್ದಾರೆ.

ಸ್ನೇಹಿತರೆ,  

ಪರಿಸರ ರಕ್ಷಣೆಗಾಗಿ 'ತಾಯಿಯ ಹೆಸರಿನಲ್ಲಿ ಒಂದು ಮರ' ನೆಡುವಂತೆ ನಾನು ದೇಶವಾಸಿಗಳಲ್ಲಿ ಮನವಿ ಮಾಡಿರುವುದು ನಿಮಗೆಲ್ಲರಿಗೂ ತಿಳಿದಿಡೇ. ಮರಗಳನ್ನು ನೆಟ್ಟಾಗ ಅಂತರ್ಜಲ ಮಟ್ಟ ಬಹುಬೇಗ ವೃದ್ಧಿಸುತ್ತದೆ. ಕಳೆದ ಕೆಲವು ವಾರಗಳಲ್ಲಿ ಅಮ್ಮನ ಹೆಸರಿನಲ್ಲಿ ದೇಶದಲ್ಲಿ ಕೋಟಿಗಟ್ಟಲೆ ಗಿಡಗಳನ್ನು ನೆಡಲಾಗಿದೆ. ಇಂತಹ ಅದೆಷ್ಟೋ ಅಭಿಯಾನಗಳಿವೆ, ಎಷ್ಟೊಂದು ಸಂಕಲ್ಪಗಳಿವೆ, ಇಂದು ಇವೆಲ್ಲ 140 ಕೋಟಿ ದೇಶವಾಸಿಗಳ ಭಾಗವಹಿಸುವಿಕೆಯ ಮೂಲಕ  ಸಾಮೂಹಿಕ ಚಳುವಳಿಗಳಾಗಿ ಮಾರ್ಪಾಡಾಗುತ್ತಿವೆ.

ಸ್ನೇಹಿತರೆ,  

ಜಲಸಂರಕ್ಷಣೆಗಾಗಿ, ಇಂದು ನಾವು 'ಕಡಿಮೆ ಬಳಕೆ, ಮರುಬಳಕೆ, ಮರುಪೂರಣ ಮತ್ತು ಮರುಬಳಕೆ' ಮಂತ್ರದ ಮೊರೆ ಹೋಗಬೇಕಾಗಿದೆ. ಅಂದರೆ, ನಾವು ನೀರಿನ ದುರ್ಬಳಕೆಯನ್ನು ನಿಲ್ಲಿಸಿದಾಗ ಮತ್ತು ತಗ್ಗಿಸಿದಾಗ ಮಾತ್ರ ನೀರು ಉಳಿತಾಯವಾಗುತ್ತದೆ. ನಾವು ನೀರನ್ನು ಮರುಬಳಕೆ ಮಾಡುವಾಗ, ನೀರಿನ ಮೂಲಗಳನ್ನು ರೀಚಾರ್ಜ್ ಮಾಡುವಾಗ ಮತ್ತು ಕಲುಷಿತ ನೀರನ್ನು ಮರುಬಳಕೆ ಮಾಡುವಾಗ ಹೊಸ ವಿಧಾನಗಳನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. ನಾವು ಇನ್ನೋವೇಟಿವ್ ಆಗಬೇಕು, ತಂತ್ರಜ್ಞಾನವನ್ನು ಬಳಸಿಕೊಳ್ಳಬೇಕು. ನಮ್ಮ ನೀರಿನ ಅಗತ್ಯತೆಯ ಪ್ರತಿಶತ 80  ಭಾಗ ಕೃಷಿ ಉದ್ದೇಶಗಳಿಗೆ ಬಳಕೆಯಾಗುತ್ತದೆ ಎಂದು ನಮಗೆಲ್ಲರಿಗೂ ತಿಳಿದಿದೆ. ಆದ್ದರಿಂದ, ನಮ್ಮ ಸರ್ಕಾರವು ಸುಸ್ಥಿರ ಕೃಷಿಯಲ್ಲಿ ಹನಿ ನೀರಾವರಿಯಂತಹ ತಂತ್ರಜ್ಞಾನಗಳನ್ನು ನಿರಂತರವಾಗಿ ಹೆಚ್ಚಿಸುತ್ತಿದೆ. ಪ್ರತಿ ಡ್ರಾಪ್ ಹೆಚ್ಚು ಬೆಳೆ ನಂತಹ ಅಭಿಯಾನಗಳು ನೀರನ್ನು ಉಳಿಸುತ್ತಿವೆ ಮತ್ತು ಕಡಿಮೆ ನೀರು ಇರುವ ಪ್ರದೇಶಗಳಲ್ಲಿ ರೈತರ ಆದಾಯ ಕೂಡ ಹೆಚ್ಚುತ್ತಿದೆ. ದ್ವಿದಳ ಧಾನ್ಯಗಳು, ಎಣ್ಣೆಕಾಳುಗಳು ಮತ್ತು ಸಿರಿಧಾನ್ಯಗಾಳಾಂತಹ ಕಡಿಮೆ ನೀರು-ಅಪೇಕ್ಷಿಸುವ ಬೆಳೆಗಳನ್ನು ಬೆಳೆಯಲು ಸರ್ಕಾರವು ಉತ್ತೇಜನ ನೀಡುತ್ತಿದೆ. ಕೆಲವು ರಾಜ್ಯಗಳು ಜಲ ಸಂರಕ್ಷಣೆಗಾಗಿ ಪರ್ಯಾಯ ಬೆಳೆಗಳಿಗೆ ರೈತರಿಗೆ ಪ್ರೋತ್ಸಾಹ ಧನ ನೀಡುತ್ತಿವೆ. ಈ ಪ್ರಯತ್ನಗಳಿಗೆ ಮತ್ತಷ್ಟು ಉತ್ತೇಜನ ನೀಡಲು, ಎಲ್ಲಾ ರಾಜ್ಯಗಳು ಒಗ್ಗೂಡಿ ಅಭಿಯಾನದ ಮಾದರಿಯಲ್ಲಿ ಕೆಲಸ ಮಾಡಬೇಕು ಎಂದು ನಾನು ಆಗ್ರಹಿಸುತ್ತೇನೆ. ಹೊಲಗಳ ಬಳಿ ಕೆರೆಗಳನ್ನು ನಿರ್ಮಿಸುವುದು ಮತ್ತು ಬಾವಿಗಳನ್ನು ಮರುಪೂರಣಗೊಳಿಸುವಂತಹ ಅನೇಕ ಹೊಸ ತಂತ್ರಜ್ಞಾನಗಳ ಜೊತೆಗೆ ನಾವು ಅಂತಹ ಸಾಂಪ್ರದಾಯಿಕ ಜ್ಞಾನವನ್ನು ಉತ್ತೇಜಿಸಬೇಕಾಗಿದೆ.

ಸ್ನೇಹಿತರೆ,  

ಶುದ್ಧ ನೀರಿನ ಲಭ್ಯತೆ, ಜಲಸಂರಕ್ಷಣೆಯ ಯಶಸ್ಸಿನೊಂದಿಗೆ, ಬೃಹತ್ ನೀರಿನ ಆರ್ಥಿಕತೆಯೂ ಸಂಬಂಧ ಹೊಂದಿದೆ. ಜಲ ಜೀವನ್ ಮಿಷನ್ ಲಕ್ಷಾಂತರ ಜನರಿಗೆ ಉದ್ಯೋಗ ಮತ್ತು ಸ್ವಯಂ ಉದ್ಯೋಗ ಅವಕಾಶಗಳನ್ನು ಕಲ್ಪಿಸಿದೆ. ಎಂಜಿನಿಯರ್‌ಗಳು, ಪ್ಲಂಬರ್‌ಗಳು, ಎಲೆಕ್ಟ್ರಿಷಿಯನ್ ಮತ್ತು ವ್ಯವಸ್ಥಾಪಕರಂತಹ ಉದ್ಯೋಗಗಳು ಹೆಚ್ಚಿನ ಸಂಖ್ಯೆಯಲ್ಲಿ  ಜನರಿಗೆ ದೊರೆತಿವೆ. ಪ್ರತಿ ಮನೆಗೆ ಪೈಪ್‌ಲೈನ್‌ನಲ್ಲಿ ನೀರು ಒದಗಿಸುವ ಮೂಲಕ ದೇಶದ ಜನರು ಸುಮಾರು 5.5 ಕೋಟಿ ಗಂಟೆಗಳ ಉಳಿತಾಯ ಮಾಡುತ್ತಾರೆ ಎಂದು ಡಬ್ಲ್ಯುಎಚ್‌ಒ ಅಂದಾಜಿಸಿದೆ. ವಿಶೇಷವಾಗಿ ನಮ್ಮ ಸಹೋದರಿಯರು ಮತ್ತು ಹೆಣ್ಣುಮಕ್ಕಳಿಗೆ ಈ ಉಳಿತಾಯದ ಸಮಯ, ದೇಶದ ಆರ್ಥಿಕತೆಯನ್ನು ಹೆಚ್ಚಿಸಲು ನೇರವಾಗಿ ನೆರವಾಗುತ್ತದೆ. ನೀರು ಆರ್ಥಿಕತೆಯ ಪ್ರಮುಖ ಅಂಶವಾಗಿದೆ – ಜೊತೆಗೆ ಆರೋಗ್ಯ ಕೂಡ ಇದರ ಮತ್ತೊಂದು ಪ್ರಮುಖ ಅಂಶವಾಗಿದೆ.  ಜಲ ಜೀವನ್ ಮಿಷನ್ 1.25 ಲಕ್ಷಕ್ಕೂ ಹೆಚ್ಚು ಮಕ್ಕಳ ಅಕಾಲಿಕ ಮರಣವನ್ನು ತಡೆಯುತ್ತದೆ ಎಂದು ವರದಿಯಿಂದ ತಿಳಿದುಬಂದಿದೆ.. ನಾವು ಪ್ರತಿ ವರ್ಷ 4 ಲಕ್ಷಕ್ಕೂ ಹೆಚ್ಚು ಜನರನ್ನು ಅತಿಸಾರದಂತಹ ಕಾಯಿಲೆಗಳಿಂದ ರಕ್ಷಿಸಲು ಸಾಧ್ಯವಾಗುತ್ತದೆ, ಅಂದರೆ ರೋಗಗಳಿಗಾಗಿ ಜನರ ವ್ಯಯಿಸುವ ಖರ್ಚು ಕೂಡ ಕಡಿಮೆಯಾಗಿರಬಹುದು.

ಸ್ನೇಹಿತರೆ,  

ಸಾರ್ವಜನಿಕ ಸಹಭಾಗಿತ್ವದ ಈ ಧ್ಯೇಯೋದ್ದೇಶದಲ್ಲಿ ನಮ್ಮ ಉದ್ಯಮ ವಲಯದ ಕೊಡುಗೆಯೂ ಅಪಾರವಾದುದು. ನಿವ್ವಳ ಶೂನ್ಯ ದ್ರವ ವಿಸರ್ಜನೆ ಮಾನದಂಡಗಳು ಮತ್ತು ನೀರಿನ ಮರುಬಳಕೆಯ ಗುರಿಗಳು ಪೂರೈಸಿದ ಕೈಗಾರಿಕೆಗಳಿಗೆ ಇಂದು ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿಗಳು ಜವಾಬ್ದಾರಿಗಳಡಿ ಅನೇಕ ಕೈಗಾರಿಕೆಗಳು ನೀರಿನ ಸಂರಕ್ಷಣಾ ಕಾರ್ಯಗಳನ್ನು ಪ್ರಾರಂಭಿಸಿವೆ. ಜಲ ಸಂರಕ್ಷಣೆಗಾಗಿ ಸಿಎಸ್‌ಆರ್‌ ಉಪಕ್ರಮಗಳಲ್ಲಿ ಗುಜರಾತ್‌ ಹೊಸ ದಾಖಲೆ ನಿರ್ಮಿಸಿದೆ. ಸೂರತ್, ವಲ್ಸಾದ್, ಡಾಂಗ, ತಾಪಿ, ನವಸಾರಿ, ಸಿಎಸ್‌ಆರ್ ಉಪಕ್ರಮಗಳ ಸಹಾಯದಿಂದ ಈ ಎಲ್ಲಾ ಸ್ಥಳಗಳಲ್ಲಿ ಸುಮಾರು 10 ಸಾವಿರ ಬೋರ್‌ವೆಲ್ ರೀಚಾರ್ಜ್ ಕೆಲಸ ಪೂರ್ಣಗೊಂಡಿದೆ ಎಂದು ನನಗೆ ತಿಳಿಸಲಾಗಿದೆ. ಈಗ, 'ಜಲ ಸಂಚಯ್-ಜನ್ ಭಾಗಿದರಿ ಅಭಿಯಾನ' ದ ಮೂಲಕ, ಜಲ ಶಕ್ತಿ ಸಚಿವಾಲಯ ಮತ್ತು ಗುಜರಾತ್ ಸರ್ಕಾರವು ಒಗ್ಗೂಡಿ ಇಂತಹ 24 ಸಾವಿರ ಘಟಕಗಳನ್ನು ನಿರ್ಮಿಸುವ ಅಭಿಯಾನವನ್ನು ಪ್ರಾರಂಭಿಸಿವೆ. ಈ ಅಭಿಯಾನವು ಒಂದು ಮಾದರಿಯಾಗಿದ್ದು, ಭವಿಷ್ಯದಲ್ಲಿ ಇತರ ರಾಜ್ಯಗಳು ಇದೇ ರೀತಿಯ ಪ್ರಯತ್ನಗಳನ್ನು ಮಾಡಲು ಪ್ರೇರೇಪಿಸುತ್ತದೆ. ಭಾರತವನ್ನು ಜಲಸಂರಕ್ಷಣೆಗಾಗಿ ಇಡೀ ಮಾನವಕುಲಕ್ಕೆ ಸ್ಫೂರ್ತಿಯಾಗುವಂತೆ ನಾವು ಒಗ್ಗೂಡಿ ಕೆಲಸ ಮಾಡುತ್ತೇವೆ ಎಂದು ನಾನು ಭಾವಿಸುತ್ತೇನೆ. ಈ ವಿಶ್ವಾಸದೊಂದಿಗೆ, ಮತ್ತೊಮ್ಮೆ ನಿಮ್ಮೆಲ್ಲರಿಗೂ ಈ ಅಭಿಯಾನದ ಯಶಸ್ಸಿಗಾಗಿ ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ.

ಅನಂತ ಅನಂತ ಧನ್ಯವಾದಗಳು 


*****



(Release ID: 2052754) Visitor Counter : 15