ರಾಷ್ಟ್ರಪತಿಗಳ ಕಾರ್ಯಾಲಯ

ಶಿಕ್ಷಕರ ದಿನಾಚರಣೆಯ ಮುನ್ನಾದಿನದಂದು ಭಾರತದ ರಾಷ್ಟ್ರಪತಿಗಳ ಶುಭಾಶಯ

Posted On: 04 SEP 2024 6:19PM by PIB Bengaluru

ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು, ಶಿಕ್ಷಕರ ದಿನಾಚರಣೆಯ ಮುನ್ನಾದಿನದಂದು ದೇಶಾದ್ಯಂತದ ಶಿಕ್ಷಕರಿಗೆ ಶುಭಾಶಯವನ್ನು ಕೋರಿದ್ದಾರೆ.

ರಾಷ್ಟ್ರಪತಿಗಳು ತಮ್ಮ ಸಂದೇಶದಲ್ಲಿ, “ಶಿಕ್ಷಕರ ದಿನದ ಸಂದರ್ಭದಲ್ಲಿ, ನಮ್ಮ ದೇಶದ ಎಲ್ಲಾ ಶಿಕ್ಷಕರಿಗೆ ನನ್ನ ಆತ್ಮೀಯ ಶುಭಾಶಯಗಳನ್ನು ತಿಳಿಸುತ್ತೇನೆ. ಶ್ರೇಷ್ಠ ಶಿಕ್ಷಣತಜ್ಞ, ದಾರ್ಶನಿಕ ಮತ್ತು ಭಾರತದ ಮಾಜಿ ರಾಷ್ಟ್ರಪತಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದಂದು  ಶಿಕ್ಷಕರ ದಿನವನ್ನು ಆಚರಿಸಲಾಗುತ್ತದೆ, ಅವರು ಇಡೀ ರಾಷ್ಟ್ರಕ್ಕೆ ಸ್ಫೂರ್ತಿಯ ಮೂಲವಾಗಿದ್ದಾರೆ. ಈ ಸಂದರ್ಭದಲ್ಲಿ ಅವರಿಗೆ ವಿನಮ್ರ ನಮನಗಳನ್ನು ಸಲ್ಲಿಸುತ್ತೇನೆ.

ಮಕ್ಕಳೇ ದೇಶದ ಭವಿಷ್ಯವಾಗಿದ್ದಾರೆ. ವಿದ್ಯಾರ್ಥಿಗಳಾಗಿ ಅವರು ಜೀವನ ಕೌಶಲ್ಯ ಮತ್ತು ಮೌಲ್ಯಗಳನ್ನು ಕಲಿಯುತ್ತಾರೆ. ಶಿಕ್ಷಕರು ಅವರ ಮಾರ್ಗದರ್ಶಕರಾಗಿ, ವಿದ್ಯಾರ್ಥಿಗಳನ್ನು ನಮ್ಮ ದೇಶದ ಭವಿಷ್ಯವನ್ನು ರೂಪಿಸುವ ಭವಿಷ್ಯದ ನಾಯಕರಾಗಿ ರೂಪಿಸಬಹುದು.

 ಭವಿಷ್ಯದ ಪೀಳಿಗೆಯನ್ನು ಒಟ್ಟಾರೆಯಾಗಿ ಅತ್ಯುತ್ತಮವಾಗಿಸಲು ಅವರ ಮನಸ್ಸನ್ನು ರೂಪಿಸುವ ಪ್ರಮುಖ ಕಾರ್ಯವನ್ನು ಶಿಕ್ಷಕರಿಗೆ ವಹಿಸಲಾಗಿದೆ. ವಿದ್ಯಾರ್ಥಿಗಳಲ್ಲಿ ನೈತಿಕ ಮೌಲ್ಯಗಳು, ವಿಮರ್ಶಾತ್ಮಕ ಚಿಂತನೆ ಮತ್ತು ಸಮಾಜದ ಬಗ್ಗೆ ಜವಾಬ್ದಾರಿಯ ಪ್ರಜ್ಞೆಯನ್ನು ಬೆಳೆಸುವುದು ಶಿಕ್ಷಕರ ಕರ್ತವ್ಯವಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿ 2020 ರಲ್ಲಿ ಕಲ್ಪಿಸಿದಂತೆ ಶಿಕ್ಷಣವನ್ನು ನೀಡುವ ಆಧುನಿಕ ವಿಧಾನಗಳು ಮತ್ತು ತಂತ್ರಜ್ಞಾನದ ಅತ್ಯುತ್ತಮ ಬಳಕೆಯ ಮೂಲಕ, ಶಿಕ್ಷಕರು ಫಲಪ್ರದ ಜೀವನವನ್ನು ಹೊಂದಲು ಮತ್ತು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನು ನಿರ್ಮಿಸಲು ವಿದ್ಯಾರ್ಥಿಗಳನ್ನು ಸಶಕ್ತರನ್ನಾಗಿಸಬಹುದು. 
 
ನಾನು ಮತ್ತೊಮ್ಮೆ ಇಡೀ ಶಿಕ್ಷಕ ಸಮುದಾಯಕ್ಕೆ ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ ಮತ್ತು ಭಾರತವನ್ನು ಹೆಚ್ಚಿನ ಎತ್ತರಕ್ಕೆ ಕೊಂಡೊಯ್ಯುವ ವಿದ್ಯಾರ್ಥಿಗಳ ಪ್ರಬುದ್ಧ ಸಮುದಾಯವನ್ನು ನಿರ್ಮಿಸುವ ಪ್ರಯತ್ನದಲ್ಲಿ ಅವರು ಯಶಸ್ವಿಯಾಗಲಿ ಎಂದು ಹಾರೈಸುತ್ತೇನೆ”.

ರಾಷ್ಟ್ರಪತಿಗಳ ಸಂದೇಶಕ್ಕಾಗಿ ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ -

https://static.pib.gov.in/WriteReadData/specificdocs/documents/2024/sep/doc202494387201.pdf

 

*****



(Release ID: 2052122) Visitor Counter : 15