ಪ್ರಧಾನ ಮಂತ್ರಿಯವರ ಕಛೇರಿ

ಪ್ಯಾರಿಸ್ ಒಲಿಂಪಿಕ್ಸ್ ಭಾರತೀಯ ತಂಡದೊಂದಿಗೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಸಂವಾದ

Posted On: 16 AUG 2024 12:22PM by PIB Bengaluru

ಪ್ರಧಾನ ಮಂತ್ರಿ: ಸ್ನೇಹಿತರೆ, ನಾನು ನಿಮ್ಮೆಲ್ಲರೊಂದಿಗೆ ಸಂವಾದ ನಡೆಸಲು ಬಯಸುತ್ತೇನೆ. ಸೋಲು ಅನುಭವಿಸಿ ವಾಪಸಾದೆವು ಎಂದು ನಿಮ್ಮಲ್ಲಿ ಎಷ್ಟು ಮಂದಿ ಯೋಚಿಸುತ್ತಿದ್ದೀರಿ? ನಿಮ್ಮ ಮನಸ್ಸಿನಿಂದ ಆ ಆಲೋಚನೆಯನ್ನು ಮೊದಲುಅಳಿಸಿಹಾಕುವಂತೆ ನಾನು ನಿಮಗೆ ಹೇಳುತ್ತೇನೆ. ನೀವು ನಮ್ಮ ದೇಶವನ್ನು ಪ್ರತಿನಿಧಿಸಿದ ನಂತರ ಇಲ್ಲಿದ್ದೀರಿ, ನೀವು ಮೌಲ್ಯಯುತವಾದದ್ದನ್ನು ಕಲಿತು ಹಿಂತಿರುಗಿದ್ದೀರಿ. ಹಾಗಾಗಿಯೇ, ಕ್ರೀಡೆಗಳಲ್ಲಿಯಾರು ಸಹ ನಿಜವಾಗಿಯೂ ಕಳೆದುಕೊಳ್ಳುವುದು ಏನೂ ಇರುವುದಿಲ್ಲ, ಎಲ್ಲರೂ ಕಲಿಯುತ್ತಾರೆ. ನಾನು ಇದನ್ನು ನಿಮ್ಮೆಲ್ಲರಿಗೂ ಸ್ಪಷ್ಟಪಡಿಸಲು ಬಯಸುತ್ತೇನೆ. ಅದಕ್ಕಾಗಿಯೇ, ನಿಮ್ಮಲ್ಲಿ ಎಷ್ಟು ಮಂದಿಗೆ ಹಾಗೆ ಅನಿಸುತ್ತಿದೆ ಎಂದು ಕೇಳಿದೆ. ಶೇ.80ರಷ್ಟು ಜನರು ಕೈ ಎತ್ತಲಿಲ್ಲ ಎಂದರೆ ನಾನು ಹೇಳುತ್ತಿರುವುದು ನಿಮಗೆ ಅರ್ಥವಾಗುತ್ತದೆ ಅಂದುಕೊಳ್ಳುತ್ತೇನೆ. ತಮ್ಮ ಕೈಗಳನ್ನು ಎತ್ತುವವರು ನಮ್ರತೆಯಿಂದ, ಬಹುಶಃ ಬುದ್ಧಿವಂತಿಕೆಯಿಂದ ಹಾಗೆ ಮಾಡಿದರು. ಆದರೆ ಅವರಿಗೂ ನಾನು ಹೇಳಬಯಸುತ್ತೇನೆ. ನೀವು ಹಿಂದೆ ಬಿದ್ದಿದ್ದೇವೆ ಎಂದು ಭಾವಿಸುವುದು ಬೇಡ. ನೀವು ಜ್ಞಾನದ ಸಂಪತ್ತಿನಿಂದ ಹಿಂತಿರುಗಿದ್ದೀರಿ. ನೀವು ನನ್ನ ಮಾತನ್ನು ಒಪ್ಪುತ್ತೀರಾ? ಬನ್ನಿ, ಅದನ್ನು ಜೋರಾಗಿ ಹೇಳಿ –ವಾಸ್ತವವಾಗಿ, ನೀವೆಲ್ಲಾ ಕ್ರೀಡಾಪಟುಗಳೇ ಆಗಿದ್ದೀರಿ.

ಅಥ್ಲೀಟ್ಸ್: ಹೌದು, ಸರ್!

ಪ್ರಧಾನಮಂತ್ರಿ: ಈಗ ನಾನು ನಿಮ್ಮೆಲ್ಲರಿಗೆ ಒಂದು ವಿಷಯ ಕೇಳಲು ಬಯಸುತ್ತೇನೆ. ನೀವು ಮೈದಾನದಲ್ಲಿ ಮಾಡಿದ್ದನ್ನು ಜಗತ್ತು ನೋಡಿದೆ, ಆದರೆ ನೀವು ಸ್ಪರ್ಧಿಸುವುದನ್ನು ಬಿಟ್ಟು ಬೇರೆ ಏನು ಮಾಡಿದ್ದೀರಿ ಹೇಳಿ? ನೀವು ಇಡೀ ವಿಶ್ವದ ಆಟಗಾರರನ್ನು ಸ್ನೇಹಿತರನ್ನಾಗಿಮಾಡಿಕೊಂಡಿರಿ. ಬಹಳಷ್ಟು ಹೊಸ ವಿಷಯಗಳನ್ನು ಕಲಿತಿದ್ದೀರಿ. ನಮ್ಮಲ್ಲಿಯೂ ಅಂತಹದ್ದೇನಾದರೂ ಇದ್ದರೆ ಅದು ತುಂಬಾ ಒಳ್ಳೆಯದು ಎಂದು ನೀವು ಭಾವಿಸಿದ್ದೀರಿ. ಅಂತಹ ಆಲೋಚನೆಗಳು ನಿಮ್ಮ ಮನಸ್ಸನ್ನು ಮೀಟಿರಬೇಕು ಎಂದು ನನಗೆ ಖಾತ್ರಿಯಿದೆ. ಆದ್ದರಿಂದ, ನಾನು ನಿಮ್ಮ ಅನುಭವಗಳ ಬಗ್ಗೆ ಕೇಳಲು ಬಯಸುತ್ತೇನೆ. ನನ್ನೊಂದಿಗೆ ಯಾರು ವಿಚಾರ ಹಂಚಿಕೊಳ್ಳುತ್ತಾರೆ?

ಲಕ್ಷ್ಯ: ಹೌದು ಸರ್, ಮೊದಲಿಗೆ ನಿಮಗೆ ನಮಸ್ತೆ ಹೇಳಲು ಬಯಸುತ್ತೇನೆ.

ಪ್ರಧಾನ ಮಂತ್ರಿ: ನಾನು ಮೊದಲ ಬಾರಿಗೆ ಲಕ್ಷ್ಯ ಅವರನ್ನು ಭೇಟಿಯಾದಾಗ, ಅವರು ಕೇವಲ ಚಿಕ್ಕ ಹುಡುಗ, ಆದರೆ ಈಗ ಅವರನ್ನು ನೋಡಿ –ತುಂಬಾ ಬೆಳೆದಿದ್ದಾರೆ.

ಲಕ್ಷ್ಯ: ಪಂದ್ಯಾವಳಿಸಮಯದಲ್ಲಿ, ನನ್ನ ಪಂದ್ಯಗಳು ಮೊದಲ ದಿನದಿಂದಲೇ ದೀರ್ಘವಾಗಿದ್ದವು, ತೀವ್ರವಾಗಿದ್ದವು, ಆದ್ದರಿಂದ ನಾನು ಮುಖ್ಯವಾಗಿ ನನ್ನ ಆಟಗಳ ಮೇಲೆ ಗಮನ ಕೇಂದ್ರೀಕರಿಸಿದೆ. ಆದರೂ, ನಮಗೆ ಸ್ವಲ್ಪ ಬಿಡುವಿನ ವೇಳೆ ಸಿಕ್ಕಾಗ, ನಾವೆಲ್ಲರೂ ಒಟ್ಟಿಗೆ ಊಟಕ್ಕೆ ಹೋಗುತ್ತಿದ್ದೆವು, ಅಲ್ಲಿ ನಾನು ಅನೇಕ ಇತರ ಕ್ರೀಡಾಪಟುಗಳನ್ನು ಭೇಟಿಯಾದೆ. ಅವರನ್ನು ನೋಡುವುದು ಮತ್ತು ಅವರೊಂದಿಗೆ ಊಟದ ಕೋಣೆಹಂಚಿಕೊಳ್ಳುವುದೇ ನನಗೆ ದೊಡ್ಡ ವಿಷಯವಾಗಿತ್ತು. ಇಡೀ ವಾತಾವರಣನಂಬಲಸಾಧ್ಯವಾಗಿತ್ತು, ವಿಶೇಷವಾಗಿ ಇದು ನನ್ನ ಮೊದಲ ಒಲಿಂಪಿಕ್ಸ್ ಆಗಿದ್ದರಿಂದ. ಇಷ್ಟು ದೊಡ್ಡ ಸ್ಟೇಡಿಯಂನಲ್ಲಿ ತುಂಬಾ ಜನರು ನೋಡುವ ಆಟವಾಡುವುದು ಮೊದಮೊದಲು ಅಗಾಧವಾಗಿತ್ತು. ಮೊದಲ 2 ಅಥವಾ 3 ಪಂದ್ಯಗಳಲ್ಲಿ ನಾನು ಆತಂಕಗೊಂಡಿದ್ದೆ, ಆದರೆ ಪಂದ್ಯಾವಳಿ ಮುಂದುವರೆದಂತೆ, ನಾನು ಹೆಚ್ಚು ಆರಾಮದಾಯಕನಾದೆ. ಒಟ್ಟಾರೆ, ಇದೊಂದು ಉತ್ತಮ ಅನುಭವ.

ಪ್ರಧಾನ ಮಂತ್ರಿ: ಸರಿ, ನೀವು ದೇವಭೂಮಿಯವರು, ಆದರೆ ನೀವು ಇದ್ದಕ್ಕಿದ್ದಂತೆ ಸೆಲೆಬ್ರಿಟಿಯಾಗಿದ್ದೀರಿ ಎಂದು ನಿಮಗೆ ತಿಳಿದಿದೆಯೇ?

ಲಕ್ಷ್ಯ: ಹೌದು ಸರ್. ಪಂದ್ಯಗಳ ಸಮಯದಲ್ಲಿ, ಪ್ರಕಾಶ್ ಸರ್ ನನ್ನ ಫೋನ್ ತೆಗೆದುಕೊಂಡು ಪಂದ್ಯಾವಳಿ ಮುಗಿಯುವವರೆಗೆ ಅದನ್ನು ಬಳಸಲು ನನಗೆ ಕೊಡುವುದಿಲ್ಲ ಎಂದರು. ನಂತರ ನನಗೆ ಜನರಿಂದ ಸಾಕಷ್ಟು ಬೆಂಬಲ ಸಿಕ್ಕಿದೆ ಎಂಬುದು ತಿಳಿಯಿತು. ನಾನು ಗೆಲುವಿನ ಮೆಟ್ಟಿಲಿಗೆ ಹತ್ತಿರದಲ್ಲಿ ಇದ್ದದರಿಂದ, ಸ್ವಲ್ಪ ಆಘಾತಕಾರಿಯಾದರೂ ಇದು ಅಮೂಲ್ಯವಾದ ಕಲಿಕೆಯ ಅನುಭವವಾಗಿತ್ತು. ಭವಿಷ್ಯದಲ್ಲಿ ನನ್ನ ಫಲಿತಾಂಶಗಳನ್ನು ಸುಧಾರಿಸಲು ನಾನು ನಿರ್ಧರಿಸಿದ್ದೇನೆ.

ಪ್ರಧಾನಮಂತ್ರಿ: ಹಾಗಾದರೆ, ಪ್ರಕಾಶ್ ಸರ್ ಕಟ್ಟುನಿಟ್ಟಾಗಿದ್ದರು ಮತ್ತು ಶಿಸ್ತುಬದ್ಧರಾಗಿದ್ದರುಅಲ್ಲವೇ? ಮುಂದಿನ ಬಾರಿನಾನು ಅವರನ್ನೇ ನಿಮ್ಮ ಜತೆ ಕಳಿಸುವುದನ್ನು ಖಚಿತಪಡಿಸಿಕೊಳ್ಳುತ್ತೇನೆ.

ಲಕ್ಷ್ಯ: ಖಂಡಿತ, ಸಾರ್, ಖಂಡಿತ.

ಪ್ರಧಾನಿ: ಆದರೆ ನೀವು ಸಾಕಷ್ಟು ಕಲಿತಿರಬೇಕು. ನೀವು ಗೆದ್ದಿದ್ದರೆ ಅದು ನಿಜಕ್ಕೂ ಅದ್ಭುತವಾಗಿರುತ್ತಿತ್ತು, ಆದರೆ ಆಟವನ್ನು ನಿಜವಾಗಿಯೂ ಅರ್ಥಮಾಡಿಕೊಳ್ಳದವರು ಸಹ ನಿಮ್ಮ ಆಟ ವೀಕ್ಷಿಸಿದರು. ಅವರು ನಿಮ್ಮ ಆಟದ ಮುಖ್ಯಾಂಶಗಳಲ್ಲಿ ರೀಲ್‌ಗಳನ್ನು ವೀಕ್ಷಿಸುತ್ತಲೇ ಇರುತ್ತಾರೆ. ನೀವು ಆಡಿದ ರೀತಿ ವಿದೇಶಿ ಆಟಗಾರರು ಮಾತ್ರ ಮಿಂಚುವುದಲ್ಲ, ನಮ್ಮ ಮಕ್ಕಳು ಸಹ ಅದನ್ನು ಮಾಡಬಹುದು ಎಂಬುದು ಜನರಿಗೆ ಅರ್ಥವಾಯಿತು. ಈ ಆತ್ಮವು ನಿಜವಾಗಿಯೂ ನಿಮ್ಮಲ್ಲಿ ಬೇರೂರಿದೆ.

ಲಕ್ಷ್ಯ: ಹೌದು ಸರ್. ನನ್ನ 1 ಅಥವಾ 2 ಶಾಟ್‌ಗಳು ಸಾಕಷ್ಟು ಜನಪ್ರಿಯವಾಗಿವೆ ಎಂದು ನಾನು ಭಾವಿಸುತ್ತೇನೆ. ಆದರೆ ಒಟ್ಟಾರೆ, ಭವಿಷ್ಯದಲ್ಲಿ ಬ್ಯಾಡ್ಮಿಂಟನ್ ಆ.ಕೆ ಮಾಡಿಕೊಳ್ಳಉವ ಇತರೆ ಯುವ ಆಟಗಾರರಿಗೆ ನನ್ನ ಪ್ರದರ್ಶನ ನೀಡಿ, ಇದೇ ರೀತಿಯ ಆಟವಾಡುವಂತೆ ಸ್ಫೂರ್ತಿ ತುಂಬುತ್ತೇನೆ ಎಂದು ಭಾವಿಸಿದ್ದೇನೆ.

ಪ್ರಧಾನ ಮಂತ್ರಿ: ತುಂಬಾ ಒಳ್ಳೆಯದು. ಅಲ್ಲಿ ಎಸಿ ಇರಲಿಲ್ಲ, ಅದರಿಂದ ಸಾಕಷ್ಟು ಬಿಸಿಯಾಗಿತ್ತು. ಎಸಿಗಾಗಿ ಮೊದಲು ಕೂಗಿದವರು ಯಾರು? ಯಾರು ಹೇಳಿದರು? 'ಮೋದಿ ದೊಡ್ಡದಾಗಿ ಮಾತನಾಡುತ್ತಾರೆ, ಆದರೆ ಕೋಣೆಯಲ್ಲಿ ಮಾತ್ರ ಎಸಿ ಇಲ್ಲ-ನಾವು ಏನು ಮಾಡಬೇಕು?' ಶಾಖದಿಂದ ಹೆಚ್ಚು ತೊಂದರೆಗೊಳಗಾದವರು ಯಾರು? ಆದರೆ ಕೆಲವೇ ಗಂಟೆಗಳಲ್ಲಿ ಸಮಸ್ಯೆ ಬಗೆಹರಿಯಿತು ಎಂದು ಕೇಳಿದೆ. ಎಲ್ಲರಿಗೂ ತಕ್ಷಣವೇ ಎಸಿ ಸಿಕ್ಕಿತುಅಲ್ಲವೇ? ಪ್ರತಿಯೊಬ್ಬ ಆಟಗಾರರಿಗೆ ಎಷ್ಟು ಕಾಳಜಿ ವಹಿಸಲಾಗಿದೆ ಎಂದು ನೋಡಿ? ಎಲ್ಲರೂ ತಕ್ಷಣ ಕಾರ್ಯನಿರ್ವಹಿಸಿದರು.

ಅಂಜುಮ್ ಮೌದ್ಗಿಲ್: ನಮಸ್ಕಾರ ಸರ್, ನನ್ನ ಹೆಸರು ಅಂಜುಮ್ ಮೌದ್ಗಿಲ್,  ನಾನು ಶೂಟಿಂಗ್ ಕ್ರೀಡೆಯಲ್ಲಿದ್ದೇನೆ. ನನ್ನ ಒಟ್ಟಾರೆ ಅನುಭವವೆಂದರೆ ಇದು ನನ್ನ 2ನೇ ಒಲಿಂಪಿಕ್ಸ್. ನಾನು ಕೆಲವೇ ಅಂಕಗಳಿಂದ ಫೈನಲ್‌ನಿಂದ ತಪ್ಪಿಸಿಕೊಂಡೆ. ಆದರೆ ಒಬ್ಬ ಭಾರತೀಯನಾಗಿ ಮತ್ತು ಕ್ರೀಡಾಪಟುವಾಗಿ, ಕ್ರೀಡಾಪಟುಗಳು ಪ್ರತಿದಿನ ಏನನ್ನು ಅನುಭವಿಸುತ್ತಾರೆ ಎಂಬುದನ್ನು ನಾನು ಅನುಭವಿಸಿದೆ. ಗುರಿ ತಲುಪುವ ತೀವ್ರ ಸಂತೋಷ ಮತ್ತು ಅದು ಜಾರಿಹೋದಾಗ ಆಳವಾದ ನಿರಾಶೆ. ಭಾರತ ತಂಡದ  ಪ್ರದರ್ಶನದಿಂದಾಗಿ ಇಡೀ ದೇಶವೇ ಒಲಿಂಪಿಕ್ಸ್ ಸಮಯದಲ್ಲಿ ಇದನ್ನು ಅನುಭವಿಸಿದೆ.  ಒಂದು ದಿನ, ಮನುವಿನ ಪದಕದಿಂದ ನಾವು ತುಂಬಾ ಸಂತೋಷಪಟ್ಟೆವು, ಆದರೆ ನಂತರ ಇತರರು 4ನೇ ಸ್ಥಾನ ಗಳಿಸಿದ ನಿದರ್ಶನಗಳಿವೆ. ವಿನೇಶ್ ಕಥೆ ನಿಜವಾಗಿಯೂ ಹೃದಯ ಕಲಕುವಂತಿತ್ತು. ನಂತರ ಹಾಕಿ ಪಂದ್ಯ, ಅದರ ನಂತರದ ಸಂತಸ. ನಾವು ಕ್ರೀಡಾಪಟುಗಳು ಪ್ರತಿದಿನ ಅನುಭವಿಸುವ ಭಾವನೆಗಳ ವ್ಯಾಪ್ತಿಯು ಆ 10 ದಿನಗಳಲ್ಲಿ ಇಡೀ ದೇಶ ಅನುಭವಿಸಿತು. ಭಾರತದಲ್ಲಿ ಕ್ರೀಡಾ ಸಂಸ್ಕೃತಿಉತ್ತೇಜಿಸಲು ಈ ಆಟಗಳು ಉತ್ತಮ ಸಮಯದಲ್ಲಿ ಬಂದವು ಎಂದು ನಾನು ಭಾವಿಸುತ್ತೇನೆ. ಇನ್ನು ಮುಂದೆ, ಕ್ರೀಡಾಪಟುಗಳಾಗಿ ನಮ್ಮ ಪ್ರಯಾಣವನ್ನು ಜನರು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾರೆ. ಇದರಿಂದ ಆಗುವ ಸಕಾರಾತ್ಮಕ ಬದಲಾವಣೆಗಳು ಭವಿಷ್ಯದಲ್ಲಿ ಇನ್ನಷ್ಟು ಉತ್ತಮಪರಿಣಾಮ ಬೀರುತ್ತವೆ.

ಪ್ರಧಾನ ಮಂತ್ರಿ: ನೀವು ಹೇಳಿದ್ದು ಸರಿ; ಅದು ನೀವಷ್ಟೇ ಅಲ್ಲ,  ಭಾರತದ ಪ್ರತಿಯೊಂದು ಮೂಲೆಯೂ ಇದೇ ಮನೋಭಾವ ಹಂಚಿಕೊಂಡಿದೆ. ಯಾವುದೇ ಆಟಗಾರಸ್ವಲ್ಪ ತೊಂದರೆಗೀಡಾದರೆ, ಆಟವನ್ನು ನೋಡುವ ಜನರು ಚಡಪಡಿಸುತ್ತಾರೆ. ಇದು ಕಾರನ್ನು ಓಡಿಸುವುದಕ್ಕೆ ಸಮಾನವಾಗಿದೆ. ನೀವು ಹಿಂದಿನ ಸೀಟಿನಲ್ಲಿದ್ದರೆ ಮತ್ತು ಚಾಲನೆ ಮಾಡುವುದು ಹೇಗೆ ಎಂದು ನಿಮಗೆ ತಿಳಿದಿದ್ದರೆ, ಮುಂಭಾಗದಲ್ಲಿರುವ ವ್ಯಕ್ತಿಯು ಬ್ರೇಕ್‌ ಹಾಕಬೇಕಾಗಿದ್ದರೂ ಸಹ, ನಾವು ಚಾಲನೆ ಮಾಡುತ್ತಿರುವಂತೆ ನಾವು ನಮ್ಮ ಪಾದಗಳನ್ನು ಒತ್ತುತ್ತೇವೆ. ಅದೇ ರೀತಿ, ಆಟಗಾರರು ಆಡುವಾಗಲೆಲ್ಲಾ ಜನರು ತಮ್ಮ ಕೈಕಾಲುಗಳನ್ನು ಮೇಲಕ್ಕೆ ಮತ್ತು ಕೆಳಕ್ಕೆ ಆಡಿಸುತ್ತಿದ್ದರು. ಶ್ರೀಜೇಶ್, ನೀವು ಈಗಾಗಲೇ ನಿವೃತ್ತರಾಗಲು ನಿರ್ಧರಿಸಿದ್ದೀರಾ ಅಥವಾ ಇದು ಇತ್ತೀಚಿನ ನಿರ್ಧಾರವೇ?

ಶ್ರೀಜೇಶ್: ಸರ್, ನಮಸ್ತೆ. ನಾನು ಕೆಲವು ವರ್ಷಗಳಿಂದ ಅದನ್ನು ಪರಿಗಣಿಸುತ್ತಿದ್ದೆ. ನೀನು ಯಾವಾಗ ನಿವೃತ್ತಿ ಹೊಂದುತ್ತೀಯಾ ಎಂದು ನನ್ನ ತಂಡದ ಸದಸ್ಯರು ಆಗಾಗ್ಗೆ ನನ್ನನ್ನು ಕೇಳುತ್ತಿದ್ದರು. ಈ ಪ್ರಶ್ನೆ ನನ್ನನ್ನು ಆಗಾಗ ಕಾಡುತ್ತಿತ್ತು. ಆದಾಗ್ಯೂ, ನಾನು 2002ರಲ್ಲಿ ನನ್ನ ವೃತ್ತಿಜೀವನಪ್ರಾರಂಭಿಸಿದೆ. 2004ರಲ್ಲಿ ಜೂನಿಯರ್ ತಂಡದೊಂದಿಗೆ ನನ್ನ ಮೊದಲ ಅಂತಾರಾಷ್ಟ್ರೀಯ ಪಂದ್ಯಆಡಿದ್ದೆ. ನಾನು 20 ವರ್ಷಗಳಿಂದ ನನ್ನ ದೇಶಕ್ಕಾಗಿ ಆಡುತ್ತಿದ್ದೇನೆ, ಆದ್ದರಿಂದ ನಾನು ಪ್ರಮುಖ ವೇದಿಕೆಯಿಂದ ನಿವೃತ್ತಿ ಹೊಂದಲು ಬಯಸುತ್ತೇನೆ. ಒಲಿಂಪಿಕ್ಸ್ ಅಂತಹ ವೇದಿಕೆಯಾಗಿದೆ, ಅಲ್ಲಿ ಇಡೀ ಜಗತ್ತು ಸ್ಪರ್ಧಿಸುತ್ತದೆ. ಆದ್ದರಿಂದ ಉತ್ತಮ ಅವಕಾಶವಿಲ್ಲ ಎಂದು ನಾನು ನಂಬಿದ್ದೇನೆ. ಹೀಗಾಗಿ, ನಾನು ಚೆನ್ನಾಗಿ ಯೋಚಿಸಿ ನಿರ್ಧಾರ ತೆಗೆದುಕೊಂಡೆ.

ಪ್ರಧಾನ ಮಂತ್ರಿ: ತಂಡವು ನಿಸ್ಸಂದೇಹವಾಗಿ ನಿಮ್ಮನ್ನು ಕಳೆದುಕೊಳ್ಳುತ್ತದೆ ಎಂದು ನಾನು ನಿಮಗೆ ಹೇಳುತ್ತೇನೆ, ಆದರೆ ಅವರು ನಿಮಗೆ ಅದ್ಭುತವಾದ ವಿದಾಯಹೇಳಿದರು.

ಶ್ರೀಜೇಶ್: ಹೌದು ಸಾರ್.

ಪ್ರಧಾನ ಮಂತ್ರಿ: ತಂಡಕ್ಕೆ ಅಭಿನಂದನೆಗಳು.

ಶ್ರೀಜೇಶ್: ನಿಜ, ಸರ್, ನಾವು ಅಂತಹ ಫಲಿತಾಂಶದ ಬಗ್ಗೆ ಕನಸು ಕಾಣುತ್ತೇವೆ. ನಾವು ಸೆಮಿಫೈನಲ್‌ನಲ್ಲಿ ಸೋತಾಗ ನಮಗೆ ತುಂಬಾ ಕಠಿಣವಾಗಿತ್ತು. ತಂಡವು ಪ್ಯಾರಿಸ್‌ಗೆ ಹೋದಾಗ ನಮಗೆ ಹೆಚ್ಚಿನ ಭರವಸೆ ಇತ್ತು. ನಾವು ಫೈನಲ್ ತಲುಪಲು ಅಥವಾ ಬಹುಶಃ ಚಿನ್ನ ಗೆಲ್ಲುವ ಗುರಿ ಹೊಂದಿದ್ದೆವು. ಸೆಮಿಫೈನಲ್‌ನಲ್ಲಿ ಸೋತಿದ್ದರಿಂದ ಎಲ್ಲರೂ ಸ್ವಲ್ಪ ನಿರಾಶೆಗೊಂಡರು. ಆದಾಗ್ಯೂ, ನಾವು ಅಂತಿಮ ಪಂದ್ಯಆಡಲು ತಯಾರಾದಾಗ, ಎಲ್ಲರೂ ಶ್ರೀ ಭಾಯಿ(ಶ್ರೀಜೇಶ್)ಗೆಲ್ಲಲಿ ಎಂದು ನಿರ್ಧರಿಸಿದರು. ಇದು ಸರ್, ನನಗೆ ಅತ್ಯಂತ ಹೆಮ್ಮೆ ತಂದಿದೆ. ನಾನು ಪಟ್ಟ ಕಷ್ಟದ ವರ್ಷಗಳು ನನ್ನ ದೇಶಕ್ಕಾಗಿ. ನನ್ನ ತಂಡದ ಸದಸ್ಯರು ನನ್ನನ್ನು ಬೆಂಬಲಿಸಿದರು. ವಿದಾಯ ಸಮಯದಲ್ಲಿ ನಾನು ವಿಶೇಷವಾಗಿ ಅವರಿಗೆ ಧನ್ಯವಾದಗಳನ್ನು ಅರ್ಪಿಸಿ, ವಿದಾಯ ಹೇಳಿದೆ.

ಪ್ರಧಾನ ಮಂತ್ರಿ: ಹೇಳಿ, ನೀವು ಕೇವಲ 10 ಆಟಗಾರರೊಂದಿಗೆ ಬ್ರಿಟನ್ ವಿರುದ್ಧ ಸ್ಪರ್ಧಿಸಬೇಕಾಗಿದ್ದಾಗ, ನೀವು ಆರಂಭದಲ್ಲಿ ಖಿನ್ನತೆಅನುಭವಿಸಿದಿರಾ? ಸರಪಂಚ್ ಸಾಹಬ್, ದಯವಿಟ್ಟು ನಿಮ್ಮ ಆಲೋಚನೆಗಳನ್ನು ಹಂಚಿಕೊಳ್ಳಿ. ಅದು ತುಂಬಾ ಚಾಲೆಂಜಿಂಗ್ ಆಗಿರಬೇಕು.

ಹರ್ಮನ್‌ಪ್ರೀತ್ ಸಿಂಗ್: ನಮಸ್ಕಾರಸರ್. ಹೌದು, ಇದು ನಿಜವಾಗಿಯೂ ತುಂಬಾ ಕಷ್ಟಕರವಾಗಿತ್ತು. ನಮ್ಮ ಆಟಗಾರ ಈಗಾಗಲೇ ಕ್ವಾರ್ಟರ್ ಫೈನಲ್‌ನಲ್ಲಿ ಸೋತಿದ್ದರು. ಆದಾಗ್ಯೂ, ನಮ್ಮ ಕೋಚಿಂಗ್ ಸಿಬ್ಬಂದಿ ಗಣನೀಯ ಬೆಂಬಲ ನೀಡಿದರು. ನಾವು ಪ್ರತಿ ಸಂಭವನೀಯ ಸನ್ನಿವೇಶವನ್ನು ದೃಶ್ಯೀಕರಿಸಿದ್ದೇವೆ. ಏಕೆಂದರೆ ಒಲಿಂಪಿಕ್ಸ್‌ನಲ್ಲಿ ಸಾಮಾನ್ಯವಾಗಿ ಅನಿರೀಕ್ಷಿತವಾಗಿ ಏನು ಬೇಕಾದರೂ ಆಗಬಹುದು. ಪರಿಸ್ಥಿತಿಲೆಕ್ಕಿಸದೆ ನಾವು ನಮ್ಮ ಯೋಜನೆಗಳಿಗೆ ಅಂಟಿಕೊಳ್ಳಲು ನಿರ್ಧರಿಸಿದ್ದೆವು. ಇದು ತಂಡದ ಉತ್ಸಾಹಹೆಚ್ಚಿಸಿತು. ನಾವು ಗ್ರೇಟ್ ಬ್ರಿಟನ್(GB)ಯೊಂದಿಗೆ ಸ್ವಲ್ಪ ಪೈಪೋಟಿ ಎದುರಿಸಿದೆವು, ಅದು ನಮ್ಮನ್ನು ಮತ್ತಷ್ಟು ಪ್ರೇರೇಪಿಸಿತು.

ಪ್ರಧಾನ ಮಂತ್ರಿ: ಆ ಪೈಪೋಟಿ 150 ವರ್ಷಗಳಿಂದ ನಡೆಯುತ್ತಿದೆ.

ಹರ್ಮನ್‌ಪ್ರೀತ್ ಸಿಂಗ್: ನಿಜ ಸರ್. ನಾವು ಆ ಸಂಪ್ರದಾಯಮುಂದುವರಿಸುತ್ತಿದ್ದೇವೆ. ನಾವು ಪಂದ್ಯಗೆಲ್ಲುತ್ತೇವೆ ಎಂದು ದೃಢಸಂಕಲ್ಪ ಹೊಂದಿದ್ದೆವು, ಪಂದ್ಯವು ಒಂದರ ಮೇಲೊಂದು ಡ್ರಾದಲ್ಲಿ ಕೊನೆಗೊಂಡಿತು. ನಾವು ಶೂಟೌಟ್‌ನಲ್ಲಿ ಜಯಗಳಿಸಿದ್ದು ಮಹತ್ವದ ಕ್ಷಣವಾಗಿದೆ. ಇದು ಒಲಿಂಪಿಕ್ ಇತಿಹಾಸದಲ್ಲಿ ಅಭೂತಪೂರ್ವವಾಗಿತ್ತು. ಇನ್ನೊಂದು ಮುಖ್ಯಾಂಶವೆಂದರೆ, ಆಸ್ಟ್ರೇಲಿಯಾವನ್ನು ಸೋಲಿಸುವುದು, ಅದು ನಮಗೆ ಒಂದು ಪ್ರಮುಖ ಸಾಧನೆಯಾಗಿದೆ, 52 ವರ್ಷಗಳ ಸರಣಿಯನ್ನು ಕೊನೆಗೊಳಿಸಿತು.

ಪ್ರಧಾನ ಮಂತ್ರಿ: ನಿಜಕ್ಕೂ ನೀವು 52 ವರ್ಷಗಳ ದಾಖಲೆಗಳನ್ನು ಮುರಿದಿದ್ದೀರಿ. ಸತತ ಒಲಂಪಿಕ್ಸ್‌ನಲ್ಲಿ ಸ್ಪರ್ಧಿಸುತ್ತಿರುವುದು ಕೂಡ ಮಹತ್ವದ ಸಾಧನೆಯಾಗಿದೆ.

ಹರ್ಮನ್‌ಪ್ರೀತ್ ಸಿಂಗ್: ಹೌದು, ಸರ್.

ಪ್ರಧಾನ ಮಂತ್ರಿ: ನೀವು ಚಿಕ್ಕವರು.

ಅಮನ್ ಸೆಹ್ರಾವತ್: ನಮಸ್ತೆ, ಸರ್.

ಪ್ರಧಾನ ಮಂತ್ರಿ: ನಿಮಗೆ ಸಲಹೆ ನೀಡುವ ಹಲವು ಧ್ವನಿಗಳಿವೆ, ಏನು ಮಾಡಬಾರದು ಎಂದು ಹೇಳುತ್ತಿದ್ದರು ಎಂಬುದು ನನಗೆ ಖಾತ್ರಿಯಿದೆ. ಅದು ನಿಮಗೆ ಒಮ್ಮೊಮ್ಮೆ ಆತಂಕ ಸೃಷ್ಟಿಸಿದೆಯೇ?

ಅಮನ್ ಸೆಹ್ರಾವತ್: ಇಷ್ಟು ಚಿಕ್ಕ ವಯಸ್ಸಿನಲ್ಲಿ ನಾನು ತುಂಬಾ ಸವಾಲಿನ ಸಮಯಎದುರಿಸಿದ್ದೇನೆ. ನಾನು ಕೇವಲ 10 ವರ್ಷದವನಿದ್ದಾಗ ನನ್ನ ಹೆತ್ತವರು ನನ್ನನ್ನು ತೊರೆದರು. ಒಲಿಂಪಿಕ್ ಪದಕ ಗೆಲ್ಲುವ ಕನಸನ್ನು ಮಾತ್ರ ನನಗೆ ಬಿಟ್ಟುಕೊಟ್ಟರು. ಆ ಕನಸನ್ನು ಹಂಚಿಕೊಂಡು ದೇಶಕ್ಕಾಗಿ ಪದಕ ಗೆಲ್ಲುವ ಸಂಕಲ್ಪ ಮಾಡಿದ್ದೇನೆ. ಅದನ್ನು ಮನಸ್ಸಿನಲ್ಲಿಟ್ಟುಕೊಂಡು, ನಾನು ಶ್ರದ್ಧೆಯಿಂದ ಅಭ್ಯಾಸ ಮುಂದುವರೆಸಿದೆ. ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಸ್ಕೀಮ್ (TOPS), ಭಾರತೀಯ ಕ್ರೀಡಾ ಪ್ರಾಧಿಕಾರ (SAI), ಮತ್ತು ವ್ರೆಸ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ (WFI) ನೀಡಿದ ಬೆಂಬಲಅಮೂಲ್ಯವಾಗಿದೆ.

ಪ್ರಧಾನಿ: ಈಗ ನಿಮಗೆ ಹೇಗನಿಸುತ್ತಿದೆ?

ಅಮನ್ ಸೆಹ್ರಾವತ್: ನನಗೆ ತುಂಬಾ ಚೆನ್ನಾಗಿದೆ. ನಾನು ಸಾಕಷ್ಟು ಸಂತಸಗೊಂಡಿದ್ದೇನೆ.

ಪ್ರಧಾನ ಮಂತ್ರಿ: ಮನೆಗೆ ಹಿಂದಿರುಗಿದಾಗಿನಿಂದ ನೀವು ಆನಂದಿಸುವ ಏನಾದರೂ ತಿನಿಸು?

ಅಮನ್ ಸೆಹ್ರಾವತ್: ನಾನು ಇನ್ನೂ ಮನೆಗೆ ಹೋಗಿಲ್ಲ.

ಪ್ರಧಾನಿ: ನೀವು ಮನೆಗೆ ಹೋಗಿಲ್ಲವೇ? ನೀವು ನನಗೆ ಮೊದಲೇ ತಿಳಿಸಿದ್ದರೆ, ನಾನು ನಿಮಗೆ ಏನಾದರೂ ವ್ಯವಸ್ಥೆ ಮಾಡುತ್ತಿದ್ದೆ.

ಅಮನ್ ಸೆಹ್ರಾವತ್: ನಾನು ಮನೆಗೆ ಹೋದ ನಂತರ ಚುರ್ಮಾ ಮಾಡಲು ಯೋಜಿಸುತ್ತೇನೆ.

ಪ್ರಧಾನ ಮಂತ್ರಿ: ಅಂದಹಾಗೆ, ನಮ್ಮ ಸರಪಂಚ ಸಾಹಬ್‌ಗೆ ಅಡ್ಡಹೆಸರು ಇರುವಂತೆಯೇ, ನಿಮ್ಮಲ್ಲಿ ಬೇರೆ ಯಾರಿಗಾದರೂ ಅಡ್ಡಹೆಸರು ಇದೆಯೇ?

ಶ್ರೇಯಸಿ ಸಿಂಗ್: ನಮಸ್ಕಾರಸರ್. ನಾನು ಶ್ರೇಯಸಿ ಸಿಂಗ್, ಪ್ರಸ್ತುತ ಬಿಹಾರದ ಶಾಸಕಿ. ತಂಡದ ಎಲ್ಲರೂ ನನ್ನನ್ನು ಎಂಎಲ್ಎ ದೀದಿ ಎಂದೇ ಕರೆಯುತ್ತಾರೆ.

ಪ್ರಧಾನ ಮಂತ್ರಿ: ಎಂಎಲ್ಎ ದೀದಿ, ನೀವು ಹೇಳಿ.

ಶ್ರೇಯಸಿ ಸಿಂಗ್:ಹಾ ಸರ್.

ಪ್ರಧಾನ ಮಂತ್ರಿ: ಹಾಗಾದರೆ, ಇಲ್ಲಿ ನಮಗೆ ಒಬ್ಬ ಸರಪಂಚ್ ಮತ್ತು ಎಂಎಲ್ಎ ಇಬ್ಬರೂ ಇದ್ದಾರೆ. ಈ ದಿನಗಳಲ್ಲಿ ನಿಮ್ಮಲ್ಲಿ ಹಲವರು ನಿಮ್ಮ ಮೊಬೈಲ್ ಫೋನ್‌ಗಳಿಗೆ ಅಂಟಿಕೊಂಡಿರುವುದನ್ನು ನಾನು ಗಮನಿಸಿದ್ದೇನೆ. ಅದು ಸರಿಯೇ? ನೀವು ರೀಲ್‌ಗಳನ್ನು ನೋಡುತ್ತೀರಿ ಮತ್ತು ರೀಲ್‌ಗಳನ್ನು ಸಹ ಮಾಡುತ್ತೀರಿ, ಅಲ್ಲವೇ? ನಿಮ್ಮಲ್ಲಿ ಎಷ್ಟು ಮಂದಿ ರೀಲ್‌ಗಳನ್ನು ತಯಾರಿಸುತ್ತಿದ್ದೀರಿ?

ಹರ್ಮನ್‌ಪ್ರೀತ್ ಸಿಂಗ್: ಸರ್, ವಾಸ್ತವವಾಗಿ, ಇಡೀ ತಂಡವು ಒಲಿಂಪಿಕ್ಸ್‌ನಾದ್ಯಂತ ಮೊಬೈಲ್ ಫೋನ್‌ಗಳನ್ನು ಬಳಸದಿರಲು ನಿರ್ಧರಿಸಿತ್ತು ಎಂದು ಹೇಳಲು ಬಯಸುತ್ತೇನೆ. ನಾವು ಸಾಮಾಜಿಕ ಮಾಧ್ಯಮದೊಂದಿಗೆ ತೊಡಗಿಸಿಕೊಳ್ಳದಿರಲು ನಿರ್ಧರಿಸಿದ್ದೆವು.

ಪ್ರಧಾನ ಮಂತ್ರಿ: ಅದು ಒಳ್ಳೆಯ ನಿರ್ಧಾರ - ಚೆನ್ನಾಗಿದೆ!

ಹರ್ಮನ್‌ಪ್ರೀತ್ ಸಿಂಗ್: ಖಂಡಿತವಾಗಿಸರ್. ಕಾಮೆಂಟ್‌ಗಳು ಸಕಾರಾತ್ಮಕವಾಗಿರಲಿ ಅಥವಾ ನಕಾರಾತ್ಮಕವಾಗಿರಲಿ, ಅವು ನಮ್ಮ ಮೇಲೆ ಪ್ರಭಾವ ಬೀರಬಹುದು ಎಂದು ನಾವು ಭಾವಿಸಿದ್ದೆವು. ಆದ್ದರಿಂದ, ಒಂದು ತಂಡವಾಗಿ, ನಾವು ಸಂಪೂರ್ಣವಾಗಿ ಸಾಮಾಜಿಕ ಮಾಧ್ಯಮದಿಂದ ದೂರವಿರಲು ಒಪ್ಪಿಕೊಂಡಿದ್ದೆವು.

ಪ್ರಧಾನ ಮಂತ್ರಿ: ನೀವೆಲ್ಲರೂ ಶ್ಲಾಘನೀಯ ನಿರ್ಧಾರ ತೆಗೆದುಕೊಂಡಿದ್ದೀರಿ.

ಹರ್ಮನ್‌ಪ್ರೀತ್ ಸಿಂಗ್: ಹೌದು, ಸರ್.

ಪ್ರಧಾನ ಮಂತ್ರಿ: ಸಾಮಾಜಿಕ ಮಾಧ್ಯಮದಿಂದ ದೂರವಿರುವುದು ತುಂಬಾ ಪ್ರಯೋಜನಕಾರಿ ಎಂದು ನೀವು ದೇಶದ ಯುವಕರಿಗೆ ಸಲಹೆ ನೀಡಬೇಕೆಂದು ನಾನು ಬಯಸುತ್ತೇನೆ. ಅನೇಕ ಜನರು ತಮ್ಮ ಸಮಯ ವ್ಯರ್ಥ ಮಾಡುತ್ತಾರೆ ಮತ್ತು ಅದರಲ್ಲಿ ಸಿಲುಕಿಕೊಳ್ಳುತ್ತಾರೆ. ನೀವು ಸ್ವಲ್ಪ ನಿರಾಶೆಗೊಂಡಂತೆ ತೋರುತ್ತಿದೆ, ಮಗಳೆ.

ರೀತಿಕಾ ಹೂಡಾ: ಹೌದು ಸರ್. ನಾನು ಮೊದಲ ಬಾರಿಗೆ ಸ್ಪರ್ಧಿಸಿದ್ದೇನೆ, ಪಂದ್ಯವನ್ನು ಕಡಿಮೆ ಅಂತರದಿಂದ ಕಳೆದುಕೊಂಡೆ. ಆ ಪಂದ್ಯದಲ್ಲಿ ಗೆದ್ದಿದ್ದರೆ ಫೈನಲ್‌ಗೆ ತಲುಪಿ ಚಿನ್ನ ಗೆಲ್ಲುತ್ತಿದ್ದೆ. ದುರದೃಷ್ಟವಶಾತ್, ಇದು ಕೇವಲ ದುರಾದೃಷ್ಟ ಮತ್ತು ನನಗೆ ಒಳ್ಳೆಯ ದಿನವಲ್ಲ.

ಪ್ರಧಾನ ಮಂತ್ರಿ: ಪರವಾಗಿಲ್ಲ; ನೀವು ಇನ್ನೂ ಚಿಕ್ಕವರಾಗಿದ್ದೀರಿ, ಹೆಚ್ಚಿನದನ್ನು ಸಾಧಿಸಲು ಸಾಕಷ್ಟು ಸಮಯವಿದೆ.

ರಿತಿಕಾ ಹೂಡಾ: ಹೌದು ಸರ್.

ಪ್ರಧಾನ ಮಂತ್ರಿ: ಹರಿಯಾಣದ ಮಣ್ಣು ನಿಮ್ಮ ಶಕ್ತಿ ತೋರಿಸಲಿದೆ, ನಿಮ್ಮಲ್ಲಿ ಚೈತನ್ಯ ತುಂಬುತ್ತದೆ

ರಿತಿಕಾ ಹೂಡಾ: ಹೌದು ಸರ್.

ಡಾ. ದಿನ್ಶಾ ಪರ್ದಿವಾಲಾ: ನಮಸ್ಕಾರ್ಪ್ರಧಾನ ಮಂತ್ರಿ. ಈ ಸಮಯದಲ್ಲಿ, ನಮ್ಮ ತಂಡದ ಗಾಯಗಳು ಕಡಿಮೆ ಎಂದೇ ನಾನು ನಂಬುತ್ತೇನೆ. ಕೇವಲ ಒಂದು ಅಥವಾ ಎರಡು ಗಂಭೀರಗಾಯಗಳಾಗಿವೆ, ಆದರೆ ಸಾಮಾನ್ಯವಾಗಿ, ಶಸ್ತ್ರಚಿಕಿತ್ಸೆಯ ಅಗತ್ಯವಿರುವ ಎಲ್ಲಾ ಕ್ರೀಡೆಗಳಲ್ಲಿ 3 ಅಥವಾ 4 ಪ್ರಮುಖ ಗಾಯಗಳನ್ನು ನಾವು ನೋಡುತ್ತೇವೆ. ಅದೃಷ್ಟವಶಾತ್, ಈ ಬಾರಿ ಕೇವಲ ಒಂದು ಗಮನಾರ್ಹವಾದ ಗಾಯವಿತ್ತು, ಅದು ಸಕಾರಾತ್ಮಕ ಫಲಿತಾಂಶವಾಗಿದೆ. ಒಲಂಪಿಕ್ ಗ್ರಾಮವು ಸೀಮಿತ ಸೌಲಭ್ಯಗಳನ್ನು ಹೊಂದಿದ್ದ ಹಿಂದಿನ ಬಾರಿಗಿಂತ ಭಿನ್ನವಾಗಿ, ಈ ಬಾರಿ ನಾವು ನಮ್ಮ ಸ್ವಂತ ಕಟ್ಟಡದಲ್ಲಿ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಹೊಂದಿದ್ದೆವು, ಇದು ಗಮನಾರ್ಹ ಸುಧಾರಣೆಯಾಗಿದೆ. ಇದು ಅನೇಕ ಕ್ರೀಡಾಪಟುಗಳಿಗೆ ಚೇತರಿಕೆ, ಗಾಯ ನಿರ್ವಹಣೆ ಮತ್ತು ತಯಾರಿಯನ್ನು ಹೆಚ್ಚು ಸುಲಭಗೊಳಿಸಿತು. ಈ ಸೆಟಪ್ ಪ್ರಯೋಜನಕಾರಿಯಾಗಿದೆ ಎಂದು ನಾನು ನಂಬುತ್ತೇನೆ. ಕ್ರೀಡಾಪಟುಗಳಿಗೆ ಅಗತ್ಯವಿರುವ ಎಲ್ಲಾ ಸಂಪನ್ಮೂಲಗಳನ್ನು ಹೊಂದಿದ್ದೇವೆ ಎಂದು ತಿಳಿಸಿದರು, ಜತೆಗೆ ಅವರು ಆತ್ಮವಿಶ್ವಾಸ ತುಂಬಿದರು. ಭವಿಷ್ಯದಲ್ಲಿ ನಾವು ಈ ವಿಧಾನವನ್ನು ಮುಂದುವರಿಸಿದರೆ, ನಾವು ನಮ್ಮ ಕ್ರೀಡಾಪಟುಗಳನ್ನು ಉತ್ತಮವಾಗಿ ಬೆಂಬಲಿಸಲು ಸಾಧ್ಯವಾಗುತ್ತದೆ.

ಪ್ರಧಾನ ಮಂತ್ರಿ: ನೋಡಿ, ವೈದ್ಯರು ನನಗೆ ಒಂದು ಪ್ರಮುಖ ಅಂಶ ತಿಳಿಸಿದರು: ಈ ಬಾರಿ, ನಮ್ಮ ತಂಡವು ಹಿಂದಿನ ವರ್ಷಗಳಿಗೆ ಹೋಲಿಸಿದರೆ ಗಮನಾರ್ಹವಾಗಿ ಕಡಿಮೆ ಗಾಯಗಳನ್ನು ಅನುಭವಿಸಿದೆ. ಗಾಯಗಳ ಇಳಿಕೆಯು ಆಟದ ಪ್ರತಿಯೊಂದು ಅಂಶದಲ್ಲೂ ನೀವು ಪರಿಣತಿಯನ್ನು ಹೊಂದಿದ್ದೀರಿ ಎಂದು ಸೂಚಿಸುತ್ತದೆ. ಕ್ರೀಡೆಯ ಬಗ್ಗೆ ನಮ್ಮ ತಿಳುವಳಿಕೆಯಲ್ಲಿನ ಅಂತರದಿಂದಾಗಿ ಗಾಯಗಳು ಹೆಚ್ಚಾಗಿ ಸಂಭವಿಸುತ್ತವೆ, ಇದು ಕೆಲವೊಮ್ಮೆ ಹಾನಿಗೆ ಕಾರಣವಾಗಬಹುದು. ನಿಮ್ಮ ತಯಾರಿ ಮತ್ತು ತರಬೇತಿಯು ನಿಮ್ಮ ದೇಹವನ್ನು ಸಣ್ಣ ತೊಂದರೆಗಳನ್ನು ತಡೆದುಕೊಳ್ಳಲು ಸುಸ್ಪಷ್ಟವಾಗಿ ಸಜ್ಜುಗೊಳಿಸಿದೆ, ಇದರಿಂದಾಗಿ ದೊಡ್ಡ ಗಾಯಗಳನ್ನು ತಡೆಯುತ್ತದೆ. ಇದನ್ನು ಸಾಧಿಸಲು ನೀವು ಶ್ರದ್ಧೆಯಿಂದ ತರಬೇತಿ ಪಡೆದಿದ್ದೀರಿ ಮತ್ತು ತುಂಬಾ ಶ್ರಮಿಸಿದ್ದೀರಿ ಎಂಬ ವಿಶ್ವಾಸವಿದೆ ನನಗಿದೆ. ಈ ಗಮನಾರ್ಹ ಸಾಧನೆಗಾಗಿ ನಿಮ್ಮೆಲ್ಲರಿಗೂ ಅಭಿನಂದನೆಗಳು.

ಪ್ರಧಾನ ಮಂತ್ರಿ: ಸ್ನೇಹಿತರೆ,

ನನ್ನೊಂದಿಗೆ ಮನ್ಸುಖ್ ಮಾಂಡವಿಯಾ ಜಿ ಮತ್ತು ಕ್ರೀಡಾ ರಾಜ್ಯ ಸಚಿವ ರಕ್ಷಾ ಖಡ್ಸೆ ಜಿ. ಕ್ರೀಡಾ ಲೋಕದಲ್ಲಿ ನಮ್ಮ ದೇಶಕ್ಕೆ ಹೆಮ್ಮೆ ತಂದ ವ್ಯಕ್ತಿ ಪಿ.ಟಿ.ಉಷಾ ಜಿ ಕೂಡ ಇಲ್ಲಿದ್ದಾರೆ. ನೀವೆಲ್ಲರೂ ಪ್ಯಾರಿಸ್‌ನಿಂದ ಹಿಂತಿರುಗಿದ್ದೀರಿ. ನಾನು ನಿಮಗೆ ಮತ್ತು ನಿಮ್ಮ ಸಹೋದ್ಯೋಗಿಗಳಿಗೆ ನನ್ನ ಹೃದಯಾಂತರಾಳದ ಆತ್ಮೀಯ ಸ್ವಾಗತನೀಡುತ್ತೇನೆ. ನಾನು ನಿಮ್ಮನ್ನು ಪ್ಯಾರಿಸ್‌ಗೆ ವಿದಾಯ ಹೇಳಿದ ಅದೇ ಉತ್ಸಾಹದಿಂದ ನಿಮ್ಮನ್ನು ಸ್ವಾಗತಿಸುತ್ತೇನೆ. ಈ ಸ್ವಾಗತವು ಗೆದ್ದ ಪದಕಗಳ ಸಂಖ್ಯೆಯನ್ನು ಆಧರಿಸಿಲ್ಲ, ಆದರೆ ನಮ್ಮ ಭಾರತೀಯ ಆಟಗಾರರ ಜಾಗತಿಕ ಪ್ರಶಂಸೆಯನ್ನು ಆಧರಿಸಿದೆ. ಅವರ ಧೈರ್ಯ, ಶಿಸ್ತು ಮತ್ತು ನಡವಳಿಕೆಯ ಬಗ್ಗೆ ನಾನು ಪ್ರಪಂಚದ ಮೂಲೆ ಮೂಲೆಗಳಿಂದ ಕೇಳುತ್ತಿದ್ದೇನೆ. ಇದು ನನ್ನಲ್ಲಿ ಅಪಾರ ಹೆಮ್ಮೆ ತಂದಿದೆ. ನಮ್ಮ ಆಟಗಾರರು ನಮ್ಮ ದೇಶವನ್ನು ಎಷ್ಟು ಸಮರ್ಪಣಾ ಮನೋಭಾವದಿಂದ ಪ್ರತಿನಿಧಿಸುತ್ತಾರೆ ಎಂದರೆ ಪ್ರತಿ ಆಟಗಾರನೂ ನಮ್ಮ ರಾಷ್ಟ್ರದ ಹೆಸರಿನ ಮೇಲೆ ಒಂದು ಸಣ್ಣ ಕಳಂಕ ತರಲಿಲ್ಲ. ಇದೇ ನಮ್ಮ ದೊಡ್ಡ ಆಸ್ತಿಯಾಗಿದೆ, ಇಡೀ ತಂಡವು ಹೃತ್ಪೂರ್ವಕ ಅಭಿನಂದನೆಗಳಿಗೆ ಅರ್ಹವಾಗಿದೆ.

ಸ್ನೇಹಿತರೆ,

ವಿಶ್ವಾದ್ಯಂತ ತ್ರಿವರ್ಣ ಧ್ವಜದ ವೈಭವ ಹೆಚ್ಚಿಸಿದ ನಂತರ ನೀವು ದೇಶಕ್ಕೆ ಮರಳಿದ್ದೀರಿ ಎಂದು ನಾನು ಹೆಮ್ಮೆಪಡುತ್ತೇನೆ, ನನ್ನ ನಿವಾಸಕ್ಕೆ ನಿಮ್ಮನ್ನು ಸ್ವಾಗತಿಸುವ ಗೌರವ ನನ್ನದಾಗಿದೆ. ಪ್ಯಾರಿಸ್‌ಗೆ ಹೋದವರು  ಅತ್ಯುತ್ತಮವಾದದ್ದನ್ನು ನೀಡಬೇಕು ಎಂಬುದನ್ನು ತಿಳಿದಿದ್ದರು, ನೀವು ಖಂಡಿತವಾಗಿಯೂ ಅದನ್ನು ಮಾಡಿದ್ದೀರಿ. ಇದಲ್ಲದೆ, ನಮ್ಮ ಆಟಗಾರರು ಚಿಕ್ಕವರಾಗಿದ್ದಾರೆ, ಅವರು ಅಮೂಲ್ಯವಾದ ಅನುಭವ ಗಳಿಸಿದ್ದಾರೆ, ಅಂದರೆ ಭವಿಷ್ಯದಲ್ಲಿ ಇನ್ನೂ ಹೆಚ್ಚಿನದನ್ನು ಸಾಧಿಸಲು ಅವಕಾಶ ಇದೆ. ಈ ಅನುಭವದಿಂದ ದೇಶಕ್ಕೆ ಹೆಚ್ಚಿನ ಲಾಭವಾಗಲಿದೆ.

ಬಹುಶಃ ಈ ಪ್ಯಾರಿಸ್ ಒಲಿಂಪಿಕ್ಸ್ ಭಾರತಕ್ಕೆ ಹಲವಾರು ರೀತಿಯಲ್ಲಿ ಐತಿಹಾಸಿಕವಾಗಿದೆ. ಈ ಕ್ರೀಡಾಕೂಟದಲ್ಲಿ ಸ್ಥಾಪಿಸಲಾದ ದಾಖಲೆಗಳು ದೇಶಾದ್ಯಂತ ಕೋಟಿಗಟ್ಟಲೆ ಯುವಕರಿಗೆ ಸ್ಫೂರ್ತಿ ನೀಡುತ್ತವೆ. ಒಲಿಂಪಿಕ್ಸ್ ನ ಸುಮಾರು 125 ವರ್ಷಗಳ ಇತಿಹಾಸದಲ್ಲಿ, ಮನು 2 ವೈಯಕ್ತಿಕ ಪದಕಗಳನ್ನು ಗೆದ್ದ ನಮ್ಮ ಮೊದಲ ಮಹಿಳಾ ಕ್ರೀಡಾಪಟು. ನೀರಜ್ ಚೋಪ್ರಾ ವೈಯಕ್ತಿಕ ಸ್ಪರ್ಧೆಗಳಲ್ಲಿ ಚಿನ್ನ ಮತ್ತು ಬೆಳ್ಳಿ ಎರಡನ್ನೂ ಗಳಿಸಿದ ಮೊದಲ ಭಾರತೀಯರಾಗಿದ್ದಾರೆ. ಹಾಕಿಯಲ್ಲಿ ಭರತ್ 52 ವರ್ಷಗಳಲ್ಲಿ ಮೊದಲ ಬಾರಿಗೆ ಸತತ 2 ಒಲಿಂಪಿಕ್ಸ್‌ಗಳಲ್ಲಿ ಪದಕ ಗೆದ್ದಿದ್ದಾರೆ. ಅಮನ್ ಕೇವಲ 21ನೇ ವಯಸ್ಸಿನಲ್ಲಿ ಪದಕ ಗೆಲ್ಲುವ ಮೂಲಕ ರಾಷ್ಟ್ರಕ್ಕೆ ಹೆಚ್ಚಿನ ಸಂತೋಷ ತಂದಿದ್ದಾರೆ. ಅವರ ಯಶೋಗಾಥೆಯು ಈಗ ಒಬ್ಬರ ಕನಸುಗಳನ್ನು ಸಾಧಿಸಲು ವೈಯಕ್ತಿಕ ಸವಾಲುಗಳನ್ನು ಹೇಗೆ ಜಯಿಸಬಹುದು ಎಂಬುದನ್ನು ಎತ್ತಿ ತೋರಿಸುತ್ತದೆ. ಅಮಾನ್ ಅವರ ಪ್ರಯಾಣವು ಕಷ್ಟಗಳನ್ನು ನಿವಾರಿಸಬಲ್ಲದು ಎಂಬುದನ್ನು ಸಾಬೀತುಪಡಿಸುತ್ತದೆ. ವಿನೇಶ್ ಕುಸ್ತಿಯಲ್ಲಿ ಫೈನಲ್ ತಲುಪಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು, ಇದು ಗಮನಾರ್ಹ ಸಾಧನೆಯಾಗಿದೆ. ಭಾರತೀಯ ಶೂಟರ್‌ಗಳು 7 ಶೂಟಿಂಗ್ ಸ್ಪರ್ಧೆಗಳಲ್ಲಿ ಫೈನಲ್‌ಗೆ ತಲುಪಿದ್ದಾರೆ, ಇದು ನಮಗೆ ಮೊದಲನೆಯದು. ಅದೇ ರೀತಿ ಆರ್ಚರಿಯಲ್ಲಿ ಧೀರಜ್ ಮತ್ತು ಅಂಕಿತಾ ಪದಕಕ್ಕಾಗಿ ಸ್ಪರ್ಧಿಸಿದ ಮೊದಲ ಭಾರತೀಯ ಬಿಲ್ಲುಗಾರರಾದರು. ಲಕ್ಷ್ಯ ಸೇನ್ ಅವರ ಪ್ರದರ್ಶನವು ರಾಷ್ಟ್ರವನ್ನು ಬಹಳವಾಗಿ ರೋಮಾಂಚನಗೊಳಿಸಿದೆ, ಅವರನ್ನು ಸೆಮಿಫೈನಲ್ ತಲುಪಿದ ಏಕೈಕ ಭಾರತೀಯ ಬ್ಯಾಡ್ಮಿಂಟನ್ ಆಟಗಾರನನ್ನಾಗಿ ಮಾಡಿದೆ. ಸ್ಟೀಪಲ್‌ಚೇಸ್‌ನಲ್ಲಿ ಫೈನಲ್‌ಗೆ ಅರ್ಹತೆ ಪಡೆಯುವ ಮೂಲಕ ಅವಿನಾಶ್ ಸಾಬಲ್ ಕೂಡ ಇತಿಹಾಸ ನಿರ್ಮಿಸಿದರು, ಈ ಮಾದರಿಯಲ್ಲಿ ಮತ್ತೊಂದು ಮೊದಲನೆಯದಾಗಿದೆ.

ಸ್ನೇಹಿತರೆ,

ನಮ್ಮ ಪದಕ ವಿಜೇತರಲ್ಲಿ ಹೆಚ್ಚಿನವರು 20ರ ಹರೆಯದವರು, ಅವರು ನಂಬಲಾಗದಷ್ಟು ಚಿಕ್ಕವರಾಗಿದ್ದಾರೆ. ನಿಮ್ಮ ಮುಂದೆ ಸಾಕಷ್ಟು ಸಮಯ ಮತ್ತು ಶಕ್ತಿ ಇದೆ. ಸಾಮಾನ್ಯವಾಗಿ ಒಲಂಪಿಕ್ಸ್ ನಡುವೆ 4 ವರ್ಷಗಳ ಅಂತರವಿದ್ದರೂ ಈ ಬಾರಿ ಕೇವಲ 3 ವರ್ಷ ಮಾತ್ರ. ಬಹುಶಃ ಹೆಚ್ಚುವರಿ ವರ್ಷದ ಅಭ್ಯಾಸದೊಂದಿಗೆ, ಇನ್ನೂ ಹೆಚ್ಚು ಗಮನಾರ್ಹವಾದ ಸಾಧನೆಗಳು ಸಾಧ್ಯವಾಗಬಹುದಿತ್ತು. ನಿಮ್ಮ ವೃತ್ತಿಜೀವನದುದ್ದಕ್ಕೂ ನೀವು ಅನೇಕ ಪ್ರಮುಖ ಪಂದ್ಯಾವಳಿಗಳಲ್ಲಿ ಭಾಗವಹಿಸುವಿರಿ, ಆಡುವುದನ್ನು ನಿಲ್ಲಿಸಬೇಡಿ ಅಥವಾ ಒಂದೂ ಪಂದ್ಯವನ್ನು ತಪ್ಪಿಸಿಕೊಳ್ಳಬೇಡಿ. ಈ ಯುವ ತಂಡವು ಭಾರತೀಯ ಕ್ರೀಡೆಗಳ ಉಜ್ವಲ ಭವಿಷ್ಯಕ್ಕೆ ಉದಾಹರಣೆಯಾಗಿದೆ. ಪ್ಯಾರಿಸ್ ಒಲಿಂಪಿಕ್ಸ್ ಭಾರತೀಯ ಕ್ರೀಡೆಗಳ ಭವಿಷ್ಯದ ಉಡಾವಣಾ ವೇದಿಕೆಯಾಗಿ ಕಾರ್ಯ ನಿರ್ವಹಿಸುತ್ತದೆ ಮತ್ತು ಮಹತ್ವದ ತಿರುವು ನೀಡುತ್ತದೆ ಎಂದು ನಾನು ನಂಬುತ್ತೇನೆ. ಇಲ್ಲಿಂದ ಮುಂದೆ ಗೆಲುವೊಂದೇ ದಾರಿ. ನಾವು ನಿಲ್ಲುವುದಿಲ್ಲ.

ಸ್ನೇಹಿತರೆ,

ಇಂದು ಭಾರತವು ವಿಶ್ವ ದರ್ಜೆಯ ಕ್ರೀಡಾ ಪರಿಸರ ವ್ಯವಸ್ಥೆಯ ಅಭಿವೃದ್ಧಿಗೆ ಆದ್ಯತೆ ನೀಡುತ್ತಿದೆ. ತಳಮಟ್ಟದಿಂದ ಪ್ರತಿಭೆಗಳನ್ನು ಗುರುತಿಸಿ ಪೋಷಿಸುವುದು ಬಹುಮುಖ್ಯ. ಪ್ರತಿ ಹಳ್ಳಿ ಮತ್ತು ನಗರದ ಯುವ ಪ್ರತಿಭೆಗಳನ್ನು ಉತ್ತೇಜಿಸಲು ನಾವು ಖೇಲೋ ಇಂಡಿಯಾ ಅಭಿಯಾನ ಪ್ರಾರಂಭಿಸಿದ್ದೇವೆ. ಅಮನ್,  ಅನಂತ್‌ಜೀತ್, ಧೀರಜ್ ಮತ್ತು ಸರಬ್ಜೋತ್ ಸೇರಿದಂತೆ ಖೇಲೋ ಇಂಡಿಯಾದ 28 ಆಟಗಾರರು ಈ ಒಲಿಂಪಿಕ್ ತಂಡದ ಭಾಗವಾಗಿರುವುದನ್ನು ನೋಡಿ ನನಗೆ ಸಂತೋಷವಾಗಿದೆ. ಅವರ ಪ್ರಯಾಣವು ಖೇಲೋ ಇಂಡಿಯಾ ಅಥ್ಲೀಟ್‌ಗಳಾಗಿ ಪ್ರಾರಂಭವಾಯಿತು, ಭಾರತದ ಕ್ರೀಡಾ ಭೂದೃಶ್ಯದಲ್ಲಿ ಈ ಕಾರ್ಯಕ್ರಮದ ಮಹತ್ವವನ್ನು ಎತ್ತಿ ತೋರಿಸುತ್ತದೆ.

ಖೇಲೋ ಇಂಡಿಯಾ ಇನ್ನೂ ಹೆಚ್ಚಿನ ಒತ್ತು ಮತ್ತು ಬೆಂಬಲಕ್ಕೆ ಅರ್ಹವಾಗಿದೆ ಎಂದು ನಾನು ನಂಬುತ್ತೇನೆ. ಈ ಉಪಕ್ರಮದ ಮೂಲಕ, ನಾವು ಹೊಸ ಮತ್ತು ಭರವಸೆಯ ಪ್ರತಿಭೆಗಳನ್ನು ಕಂಡುಕೊಳ್ಳುತ್ತೇವೆ. ನಿಮ್ಮಂತೆಯೇ, ನಮ್ಮ ದೇಶಕ್ಕಾಗಿ ಖೇಲೋ ಇಂಡಿಯಾ ಕ್ರೀಡಾಪಟುಗಳ ಗಣನೀಯ ಸಮೂಹವನ್ನು ಸಿದ್ಧಪಡಿಸಲಾಗುತ್ತಿದೆ. ನಮ್ಮ ಆಟಗಾರರು ಸಾಕಷ್ಟು ಸೌಲಭ್ಯಗಳು ಮತ್ತು ಸಂಪನ್ಮೂಲಗಳಿಗೆ ಪ್ರವೇಶ ಹೊಂದಿದ್ದಾರೆ ಎಂದು ಖಚಿತಪಡಿಸಿಕೊಳ್ಳಲು ಬಜೆಟ್ ಅನ್ನು ಸ್ಥಿರವಾಗಿ ಹೆಚ್ಚಿಸಲಾಗುತ್ತಿದೆ. ಇದರಿಂದಾಗಿ ಅವರ ತರಬೇತಿಯಲ್ಲಿ ಯಾವುದೇ ಅಡೆತಡೆಗಳನ್ನು ತಪ್ಪಿಸಬಹುದು. ಕ್ರೀಡಾಪಟುಗಳು ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸುವುದು ಎಷ್ಟು ನಿರ್ಣಾಯಕ ಎಂಬುದು ಎಲ್ಲರಿಗೂ ತಿಳಿದಿದೆ. ಒಲಿಂಪಿಕ್ಸ್ ಗೂ ಮುನ್ನ ನೀವು ಹಲವು ಅಂತಾರಾಷ್ಟ್ರೀಯ ಕಾರ್ಯಕ್ರಮಗಳಿಗೆ ತೆರೆದುಕೊಂಡಿರುವುದು ನನಗೆ ಸಂತಸವಾಗಿದೆ. ಹಲವಾರು ತರಬೇತುದಾರರು ಮತ್ತು ಪರಿಣಿತರು ಒದಗಿಸಿದ ವಿವರಗಳಿಗೆ ಗಮನ ನೀಡಲಾಗಿದ್ದು, ಆಹಾರ, ಉಪಕರಣಗಳು ಮತ್ತು ತರಬೇತಿಯ ಜೊತೆಗೆ ವಿಶ್ವ ದರ್ಜೆಯ ಸೌಲಭ್ಯಗಳನ್ನು ಒದಗಿಸುವ ಪ್ರಯತ್ನಗಳು ಅಭೂತಪೂರ್ವವಾಗಿದೆ. ಇಂತಹ ಬೆಂಬಲ ನಮ್ಮ ದೇಶದಲ್ಲಿ ಹಿಂದೆ ಇರಲಿಲ್ಲ. ಈ ಹಿಂದೆ, ಆಟಗಾರರು ದೇಶಕ್ಕಾಗಿ ಯಶಸ್ಸು ಸಾಧಿಸಲು ತಮ್ಮ ಸ್ವಂತ ಪ್ರಯತ್ನ ಮತ್ತು ಅದೃಷ್ಟವನ್ನು ಅವಲಂಬಿಸಿದ್ದರು. ಆದಾಗ್ಯೂ, ಈಗ ಸಮಗ್ರ ಪರಿಸರ ವ್ಯವಸ್ಥೆ ಸ್ಥಾಪಿಸಲಾಗಿದೆ. ಇದು ದೇಶದ ಕ್ರೀಡಾ ನೀತಿಗಳಲ್ಲಿನ ಬದಲಾವಣೆಯನ್ನು ಪ್ರತಿನಿಧಿಸುತ್ತದೆ. ಜತೆಗೆ, ರಾಷ್ಟ್ರವು ಈಗ ತನ್ನ ಯುವ ಪೀಳಿಗೆಯಲ್ಲಿ ಇರಿಸಿರುವ ನಂಬಿಕೆಯ ಪ್ರದರ್ಶನವಾಗಿದೆ.

ಸ್ನೇಹಿತರೆ,

ನೀವೆಲ್ಲರೂ ನಮ್ಮ ದೇಶದ ಯುವಕರಿಗೆ ಸ್ಫೂರ್ತಿಯ ಅದ್ಭುತ ಮೂಲ. ರಾಷ್ಟ್ರ ಮತ್ತು ಯುವಕರು ನಿಮ್ಮಲ್ಲಿ ಪ್ರತಿಯೊಬ್ಬರೊಂದಿಗೆ ಹೆಚ್ಚು ಪರಿಚಿತರಾಗಿರುವುದು ಮುಖ್ಯ. ನಾನು ನಿಮ್ಮಲ್ಲಿ ಪ್ರತಿಯೊಬ್ಬರನ್ನು, ವಿಶೇಷವಾಗಿ ನಮ್ಮ ಹೆಣ್ಣುಮಕ್ಕಳನ್ನು ಹೆಸರಿನಿಂದ ಗುರುತಿಸಲು ಬಯಸುತ್ತೇನೆ. ಕಳೆದ ಬಾರಿಯಂತೆ, ನಮ್ಮ ಹೆಣ್ಣುಮಕ್ಕಳು ಮತ್ತೊಮ್ಮೆ ಒಲಿಂಪಿಕ್ಸ್ ನಲ್ಲಿ ಭಾರತವನ್ನು ಮುನ್ನಡೆಸಿದ್ದಾರೆ. ಈ ಹಿಂದೆ ಮನುವಿನ ತಾಂತ್ರಿಕ ತೊಂದರೆಗಳ ಹೊರತಾಗಿಯೂ, ಅವರ ಗಮನಾರ್ಹ ಪುನರಾಗಮನ, ಅಂಕಿತಾ ಅವರ ಅತ್ಯುತ್ತಮ ಪ್ರದರ್ಶನ ಮತ್ತು ಮನಿಕಾಬಾತ್ರಾ ಮತ್ತು ಶ್ರೀಜಾಕುಲಾ ಅವರ ಪ್ರಭಾವಶಾಲಿ ಪ್ರದರ್ಶನಗಳು ಸಾರ್ವಜನಿಕ ಗಮನ ಸೆಳೆದಿವೆ. ಅದೇ ರೀತಿ, ನೀರಜ್‌ ಅವರ ಸ್ಥಿರತೆ, ಸವಾಲುಗಳ ಮೇಲೆ ಸ್ವಪ್ನಿಲ್‌ನ ಗೆಲುವು ಮತ್ತು ನಮ್ಮ ಸರಪಂಚ ಸಾಹಬ್‌ನ ಹಾಕಿ ತಂಡ ಇವೆಲ್ಲವೂ ಭಾರತದ  ಶಕ್ತಿಯನ್ನು ಪ್ರದರ್ಶಿಸಿವೆ. ಪಿ.ಆರ್. ಶ್ರೀಜೇಶ್ ಚೆಂಡಿನ ಮಹತ್ವವನ್ನು ತೋರಿಸಿದ್ದಾರೆ. ಪ್ರತಿ ಅಥ್ಲೀಟ್, ಅವರು ಪದಕ ಗೆದ್ದರೂ ಅಥವಾ ಕಡಿಮೆ ಅಂತರದಿಂದ ತಪ್ಪಿಸಿಕೊಂಡರೂ, ಚಿನ್ನವನ್ನು ಭದ್ರಪಡಿಸಿಕೊಳ್ಳಲು ಒಂದೇ ರೀತಿಯ ಸಂಕಲ್ಪ ಹಂಚಿಕೊಂಡಿದ್ದಾರೆ. ಇದರಿಂದ ನಮ್ಮ ದೇಶದ ಯುವಕರು ಸಾಕಷ್ಟು ಕಲಿಯುತ್ತಾರೆ ಎಂಬ ವಿಶ್ವಾಸ ನನಗಿದೆ.

ಸ್ನೇಹಿತರೆ,

ಭಾರತವು 2036ರ ಒಲಿಂಪಿಕ್ಸ್ ಆತಿಥ್ಯ ವಹಿಸಲು ಸಿದ್ಧತೆ ನಡೆಸಿದೆ. ನಾವು ಸಂಪೂರ್ಣ ಸಿದ್ಧತೆಗಳನ್ನು ಕೈಗೊಳ್ಳುತ್ತಿದ್ದೇವೆ ಎಂದು ನಾನು ಕೆಂಪುಕೋಟೆಯಿಂದ ಉಲ್ಲೇಖಿಸಿದೆ.  ಹಿಂದಿನ ಒಲಿಂಪಿಕ್ಸ್ ನಲ್ಲಿ ಭಾಗವಹಿಸಿದ ಕ್ರೀಡಾಪಟುಗಳ ಒಳನೋಟಗಳು ಅಮೂಲ್ಯವಾಗಿವೆ. ಒಲಿಂಪಿಕ್ ಯೋಜನೆಯಿಂದ ಈವೆಂಟ್ ಮ್ಯಾನೇಜ್‌ಮೆಂಟ್‌ವರೆಗೆ ಮತ್ತು ಕ್ರೀಡಾ ನಿರ್ವಹಣೆಯಿಂದ ಸಾಂಸ್ಥಿಕ ವ್ಯವಸ್ಥೆಗಳವರೆಗೆ ನೀವು ಹೆಚ್ಚಿನದನ್ನು ಗಮನಿಸಿದ್ದೀರಿ ಮತ್ತು ಅನುಭವಿಸಿದ್ದೀರಿ. ನಿಮ್ಮ ಅನುಭವಗಳು ಮತ್ತು ಅವಲೋಕನಗಳನ್ನು ಸರ್ಕಾರದೊಂದಿಗೆ ದಾಖಲಿಸುವುದು ಮತ್ತು ಹಂಚಿಕೊಳ್ಳುವುದು ಅತ್ಯಗತ್ಯ. ಕ್ರೀಡಾಪಟುಗಳು ಗುರುತಿಸಿರುವ ಸವಾಲುಗಳು ಮತ್ತು ಅಂತರವನ್ನು ಪರಿಹರಿಸುವ ಮೂಲಕ 2036ಕ್ಕೆ ತಯಾರಿ ನಡೆಸಲು ಇದು ನಮಗೆ ಸಹಾಯ ಮಾಡುತ್ತದೆ. ಮೂಲಭೂತವಾಗಿ, ನೀವು ನನ್ನ 2036 ತಂಡದ ಮುಂಚೂಣಿಯಲ್ಲಿರುವವರು. ಹೊಸ ಜಾಗತಿಕ ಗುಣಮಟ್ಟ ಹೊಂದಿಸುವ 2036ರಲ್ಲಿ ಒಲಿಂಪಿಕ್ ಕ್ರೀಡಾಕೂಟಗಳನ್ನು ಆಯೋಜಿಸಲು ನಿಮ್ಮ ಸಹಾಯವು ನಮಗೆ ಸಹಾಯ ಮಾಡುತ್ತದೆ. ಕ್ರೀಡಾ ಸಚಿವಾಲಯವು ಯೋಜನೆ ರೂಪಿಸಲು ಮತ್ತು ಸಂಪೂರ್ಣ ಸಿದ್ಧತೆ ಖಚಿತಪಡಿಸಿಕೊಳ್ಳಲು ಎಲ್ಲಾ ಆಟಗಾರರಿಂದ ವಿವರವಾದ ಪ್ರತಿಕ್ರಿಯೆ ಮತ್ತು ಸಲಹೆಗಳನ್ನು ಸಂಗ್ರಹಿಸಲು ನಾನು ಬಯಸುತ್ತೇನೆ.

ಸ್ನೇಹಿತರೆ,

ಆಟಗಾರರು ಮತ್ತು ತರಬೇತುದಾರರು ಭಾರತೀಯ ಕ್ರೀಡೆಗಳನ್ನು ಹೇಗೆ ವರ್ಧಿಸುವುದು ಎಂಬುದರ ಕುರಿತು ಮೌಲ್ಯಯುತವಾದ ವಿಚಾರಗಳನ್ನು ಒದಗಿಸುತ್ತಾರೆ, ಅದನ್ನು ನಾವು ವ್ಯವಸ್ಥಾಪಕರು ನೀಡಲು ಸಾಧ್ಯವಿಲ್ಲ. ನಿಮ್ಮ ಸಲಹೆ ಸೂಚನೆ ಮತ್ತು ಆಲೋಚನೆಗಳು ನಿರ್ಣಾಯಕವಾಗಿವೆ. ಭವಿಷ್ಯದ ಆಟಗಾರರನ್ನು ಪ್ರೇರೇಪಿಸುವ ಮತ್ತು ಮಾರ್ಗದರ್ಶನ ಮಾಡುವ ಜವಾಬ್ದಾರಿಯೂ ನಿಮ್ಮ ಮೇಲಿದೆ. ಸಾಮಾಜಿಕ ಮಾಧ್ಯಮಗಳ ಮೂಲಕ ಯುವಕರೊಂದಿಗೆ ತೊಡಗಿಸಿಕೊಳ್ಳಿ ಮತ್ತು ಅವರಿಗೆ ಸ್ಫೂರ್ತಿ ನೀಡಿ. ಕ್ರೀಡಾ ಸಚಿವಾಲಯ ಮತ್ತು ಇತರ ಸಂಸ್ಥೆಗಳು ಅನುಭವಗಳನ್ನು ಹಂಚಿಕೊಳ್ಳಲು ವಿವಿಧ ಗುಂಪುಗಳೊಂದಿಗೆ ಸಂವಾದ ಅವಧಿಗಳನ್ನು ಸುಗಮಗೊಳಿಸಬಹುದು. ವ್ಯಕ್ತಿಗಳು ನನ್ನೊಂದಿಗೆ ನೇರವಾಗಿ ಮಾತನಾಡದಿದ್ದರೂ, ಅವರು ತಮ್ಮ ಅನುಭವಗಳನ್ನು ಅಂತಹ ಸ್ಥಳಗಳಲ್ಲಿ ಹಂಚಿಕೊಳ್ಳಬಹುದು.

ಸ್ನೇಹಿತರೆ,

ನಿಮ್ಮೆಲ್ಲರನ್ನೂ ಭೇಟಿಯಾಗುವ ಅವಕಾಶ ಸಿಕ್ಕಿದ್ದು, ನಿಮ್ಮ ಜವಾಬ್ದಾರಿಯನ್ನು ಪ್ರಸ್ತಾಪಿಸದೆ ಬಿಡುವುದು ಅಪೂರ್ಣ ಎಂದು ನಾನು ನಂಬುತ್ತೇನೆ. ಹಿಂದೆ,  ನಾನು ಏನನ್ನಾದರೂ ಮಾಡಲು ಕೇಳಿದಾಗ, ನೀವು ಅದನ್ನು ಪೂರೈಸಲು ಪ್ರಯತ್ನಿಸಿದ್ದೀರಿ. ಉದಾಹರಣೆಗೆ, ಟೋಕಿಯೊ ಒಲಿಂಪಿಕ್ಸ್ ನಿಂದ ಹಿಂದಿರುಗಿದ ಸ್ನೇಹಿತರಿಗೆ ಶಾಲೆಗಳಿಗೆ ಭೇಟಿ ನೀಡಲು ಮತ್ತು ಯುವಕರೊಂದಿಗೆ ತೊಡಗಿಸಿಕೊಳ್ಳಲು ನಾನು ವಿನಂತಿಸಿದೆ, ಅವರು ಪ್ರಯೋಜನಕಾರಿ ಫಲಿತಾಂಶಗಳೊಂದಿಗೆ ಹಾಗೆ ಮಾಡಿದರು. ಇಂದು, ನಮ್ಮ ದೇಶವು ಪರಿಸರ ಸಂರಕ್ಷಣೆ ಉತ್ತೇಜಿಸಲು 'ಏಕ್ ಪೆಡ್ ಮಾಕೇನಾಮ್' ಎಂಬ ಅಭಿಯಾನ ನಡೆಸುತ್ತಿದೆ. ಈ ಉಪಕ್ರಮದಲ್ಲಿ ಭಾಗವಹಿಸಲು ನಾನು ನಿಮ್ಮೆಲ್ಲರನ್ನು ಆಹ್ವಾನಿಸಲು ಬಯಸುತ್ತೇನೆ. ನಿಮ್ಮ ತಾಯಿಯೊಂದಿಗೆ ಮರವನ್ನು ನೆಡಿರಿ ಮತ್ತು ನೀವು ಹಾಗೆ ಮಾಡುವಾಗ ಪ್ಯಾರಿಸ್ ನೆನಪಿಸಿಕೊಳ್ಳಿ. ನಿಮ್ಮ ತಾಯಿ ಇಲ್ಲದಿದ್ದರೆ, ಅವರ ಚಿತ್ರದ ಪಕ್ಕದಲ್ಲಿ ಮರ ನೆಡಿ. ನಿಮ್ಮಲ್ಲಿ ಅನೇಕರು ಗ್ರಾಮೀಣ ಮತ್ತು ಸಾಧಾರಣ ಹಿನ್ನೆಲೆಯಿಂದ ಬಂದವರು. ಈ ವರ್ಷದ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಪ್ರಚಾರ ಮಾಡಲಾದ ಪರಿಸರ ಸ್ನೇಹಿ ಅಭ್ಯಾಸಗಳನ್ನು ನೀವು ವೀಕ್ಷಿಸಿದ್ದೀರಿ. ನಿಮ್ಮ ಹಳ್ಳಿಗಳಿಗೆ ಹಿಂದಿರುಗಿದ ನಂತರ, ನೈಸರ್ಗಿಕ, ರಾಸಾಯನಿಕ ಮುಕ್ತ ಕೃಷಿಯ ಬಗ್ಗೆ ಮಾಹಿತಿ ಹಂಚಿಕೊಳ್ಳಿ. ನಮ್ಮ ತಾಯಿ ಭೂಮಿಯನ್ನು ರಕ್ಷಿಸುವ ಮಹತ್ವಕ್ಕೆ ಒತ್ತು ನೀಡಿ. ಹೆಚ್ಚುವರಿಯಾಗಿ, ಕ್ರೀಡೆಗಳನ್ನು ಕೈಗೆತ್ತಿಕೊಳ್ಳಲು ಮತ್ತು ಫಿಟ್ನೆಸ್ ಅನ್ನು ಅಳವಡಿಸಿಕೊಳ್ಳಲು ಇತರ ಯುವಜನರನ್ನು ಪ್ರೇರೇಪಿಸಿ. ನೀವು ಮಾತ್ರ ಅವರಿಗೆ ಆರೋಗ್ಯಕರ ಜೀವನಶೈಲಿಯ ಕಡೆಗೆ ಮಾರ್ಗದರ್ಶನ ನೀಡಬಹುದು, ಅದು ಹೆಚ್ಚು ಪ್ರಯೋಜನಕಾರಿ ಎಂದು ನಾನು ನಂಬುತ್ತೇನೆ.

ಸ್ನೇಹಿತರೆ,

ನೀವು ನಮ್ಮ ದೇಶಕ್ಕೆ ಗೌರವ ತಂದುಕೊಡುವಿರಿ ಎಂಬ ವಿಶ್ವಾಸ ನನಗಿದೆ. ನಿಮ್ಮಂತಹ ಯುವ ಪ್ರತಿಭೆಗಳ ಯಶಸ್ಸು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವತ್ತ ನಮ್ಮ ಪ್ರಯಾಣವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಈ ಭರವಸೆಯೊಂದಿಗೆ, ನಿಮ್ಮಲ್ಲಿ ಪ್ರತಿಯೊಬ್ಬರಿಗೂ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸುತ್ತೇನೆ. ನನಗೆ, ನೀವೆಲ್ಲರೂ ಸಾಧಕರು ಮತ್ತು ನಿಮ್ಮಲ್ಲಿ ಗಮನಾರ್ಹವಾದದ್ದನ್ನು ಸಾಧಿಸದ ಯಾರೂ ಇಲ್ಲ. ನಮ್ಮ ಯುವಕರು ಮಹತ್ತರವಾದುದನ್ನು ಸಾಧಿಸುತ್ತಿದ್ದಂತೆ, ನಮ್ಮ ದೇಶವು ಹೊಸ ಎತ್ತರವನ್ನು ತಲುಪಲು ಪ್ರೇರೇಪಿಸುತ್ತದೆ.

ಮತ್ತೊಮ್ಮೆ ಅಭಿನಂದನೆಗಳು ಮತ್ತು ಶುಭಾಶಯಗಳು ಸ್ನೇಹಿತರೆ.

ಹಕ್ಕು ನಿರಾಕರಣೆ: ಪ್ರಧಾನ ಮಂತ್ರಿ ಅವರ ಭಾಷಣದ ಅಂದಾಜು ಇಂಗ್ಲೀಷ್ ಅನುವಾದದ ಕನ್ನಡ  ರೂಪಾಂತರ ಇದಾಗಿದೆ. ಅವರು ಮೂಲತಃ ಹಿಂದಿ ಭಾಷೆಯಲ್ಲಿ ಭಾಷಣ ಮಾಡಿದ್ದಾರೆ.

 

*****

 



(Release ID: 2048666) Visitor Counter : 3


Read this release in: English , Hindi , Manipuri , Gujarati