ಬುಡಕಟ್ಟು ವ್ಯವಹಾರಗಳ ಸಚಿವಾಲಯ
azadi ka amrit mahotsav

ಬಹುಸಂಖ್ಯಾತ ಬುಡಕಟ್ಟು ಪ್ರದೇಶಗಳಲ್ಲಿ ವಿಶೇಷ ದುರ್ಬಲ ಬುಡಕಟ್ಟು ಗುಂಪುಗಳಿಗೆ ಸರ್ಕಾರದ ಯೋಜನೆಗಳ ಕುರಿತು ಅರಿವು ಮೂಡಿಸಲು ಮತ್ತು  ಯೋಜನೆಯ ಲಾಭ 100%  ದೊರಕುವುದನ್ನು ಖಾತರಿಪಡಿಸಿಕೊಳ್ಳಲು ಪಿಎಮ್- ಜನ್ಮನ್ ಮಿಷನ್‌ನಡಿ ಮಾಹಿತಿ, ಶಿಕ್ಷಣ, ಸಂವಹನ (ಐಇಸಿ) ಅಭಿಯಾನವು 23ನೇ ಆಗಸ್ಟ್‌ನಿಂದ 10ನೇ ಸೆಪ್ಟೆಂಬರ್, 2024 ರವರೆಗೆ ನಡೆಯಲಿದೆ


28.7 ಸಾವಿರ ವಿಶೇಷ ದುರ್ಬಲ ಬುಡಕಟ್ಟು ಗುಂಪುಗಳಿರುವ (ಪಿವಿಟಿಜಿ) ಪ್ರದೇಶಗಳಲ್ಲಿ ಸುಮಾರು 44.6 ಲಕ್ಷ ವ್ಯಕ್ತಿಗಳನ್ನು (10.7 ಲಕ್ಷ ಮನೆಗಳು) ತಲುಪಲು ಅಭಿಯಾನ; ದೇಶಾದ್ಯಂತ 194 ಜಿಲ್ಲೆಗಳಲ್ಲಿ 16,500 ಗ್ರಾಮಗಳು, 15,000 ಗ್ರಾಮ ಪಂಚಾಯಿತಿಗಳು ಮತ್ತು 1000 ತಾಲೂಕುಗಳನ್ನು ವ್ಯಾಪ್ತಿಗೆ ತರಲು ಪ್ರಯತ್ನ

Posted On: 23 AUG 2024 11:39AM by PIB Bengaluru

ದೇಶದಾದ್ಯಂತ 194 ಜಿಲ್ಲೆಗಳಲ್ಲಿ ವಿಶೇಷ ದುರ್ಬಲ ಬುಡಕಟ್ಟು ಗುಂಪುಗಳ (ಪಿವಿಟಿಜಿ) ಪ್ರದೇಶ ಮತ್ತು ಪಿವಿಟಿಜಿ ಕುಟುಂಬಗಳನ್ನು ತಲುಪುವ ಗುರಿಯೊಂದಿಗೆ, ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವಾಲಯವು ರಾಷ್ಟ್ರವ್ಯಾಪಿ ಮಾಹಿತಿ, ಶಿಕ್ಷಣ ಮತ್ತು ಸಂವಹನ (ಐಇಸಿ) ಅಭಿಯಾನ ಮತ್ತು ಫಲಾನುಭವಿಗಳ ವಿಶೇಷ ಶಿಬಿರಗಳನ್ನು ಆಯೋಜಿಸಿದೆ. ಪ್ರಧಾನ ಮಂತ್ರಿ ಜನಜಾತಿ ಆದಿವಾಸಿ ನ್ಯಾಯ ಮಹಾ ಅಭಿಯಾನ (ಪಿಎಮ್-ಜನ್ಮನ್‌), 23ನೇ ಆಗಸ್ಟ್, 2024 ರಿಂದ 10ನೇ ಸೆಪ್ಟೆಂಬರ್, 2024 ರವರೆಗೆ ನಡೆಯಲಿದೆ.

ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವರಾದ ಶ್ರೀ ಜುಯಲ್ ಓರಮ್ ಮತ್ತು ರಾಜ್ಯ ಸಚಿವರಾದ ಶ್ರೀ ದುರ್ಗಾದಾಸ್ ಯುಕೆ ಅವರು ಪಿಎಂ-ಜನ್ಮನ್ ಅಡಿಯಲ್ಲಿನ ಯೋಜನೆಗಳ ಪ್ರಗತಿಯನ್ನು ಪರಿಶೀಲಿಸಿದರು ಮತ್ತು ನಿನ್ನೆ ಕರೆದ ಸಭೆಯಲ್ಲಿ ಪಿಎಂ-ಜನ್ಮನ್ ಕುರಿತು ಐಇಸಿ ಅಭಿಯಾನದ ಸಿದ್ದತೆಗಳ ಕುರಿತು ಪರಿಶೀಲಿಸಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜಾರ್ಖಂಡ್‌ನ ಖುಂಟಿ ಜಿಲ್ಲೆಯಿಂದ ಜಂಜಾತಿಯಾ ಗೌರವ್ ದಿವಸ್ (15ನೇ ನವೆಂಬರ್, 2023) ದಂದು ಪಿಎಮ್-ಜನ್ಮನ್ ಮಿಷನ್ ಅನ್ನು ಪ್ರಾರಂಭಿಸಿದರು.

ಪ್ರಚಾರ ಚಟುವಟಿಕೆಗಳು ಮತ್ತು ತಲುಪುವಿಕೆ

ಕಳೆದ ವರ್ಷ 18 ರಾಜ್ಯಗಳು ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಕೇಂದ್ರಾಡಳಿತ ಪ್ರದೇಶಗಳಾದ್ಯಂತ ಸುಮಾರು 500 ಬ್ಲಾಕ್‌ಗಳು ಮತ್ತು 15,000 ವಿಶೇಷ ದುರ್ಬಲ ಬುಡಕಟ್ಟು ಗುಂಪುಗಳ (ಪಿವಿಟಿಜಿ) ಪ್ರದೇಶಗಳನ್ನು ಒಳಗೊಂಡ 100 ಜಿಲ್ಲೆಗಳಲ್ಲಿ ಸಮಗ್ರ ಐಇಸಿ ಅಭಿಯಾನವನ್ನು ನಡೆಸಲಾಯಿತು. 

ಈ ವರ್ಷ, ಆಂಧ್ರಪ್ರದೇಶ, ಛತ್ತೀಸ್‌ಗಢ, ಗುಜರಾತ್, ಜಾರ್ಖಂಡ್, ಕರ್ನಾಟಕ, ಕೇರಳ, ಇತರೆ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ 194 ಜಿಲ್ಲೆಗಳ 28,700 ಪಿವಿಟಿಜಿ ಪ್ರದೇಶಗಳಲ್ಲಿ 10.7 ಲಕ್ಷ ಪಿವಿಟಿಜಿ ಮನೆಗಳ 44.6 ಲಕ್ಷ ಪಿವಿಟಿಜಿ ವ್ಯಕ್ತಿಗಳನ್ನು ತಲುಪಲು ವಿಶೇಷ ಅಭಿಯಾನವನ್ನು ಆರಂಭಿಸಲಾಗುತ್ತದೆ. ಮಹಾರಾಷ್ಟ್ರ, ಒಡಿಶಾ, ರಾಜಸ್ಥಾನ, ತಮಿಳುನಾಡು, ತೆಲಂಗಾಣ, ತ್ರಿಪುರಾ, ಉತ್ತರ ಪ್ರದೇಶ, ಉತ್ತರಾಖಂಡ, ಪಶ್ಚಿಮ ಬಂಗಾಳ, ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಸೇರಿದಂತೆ ವಿವಿಧ ರಾಜ್ಯಗಳಿಂದ ಜಿಲ್ಲೆಗಳವರೆಗೆ, ಬ್ಲಾಕ್‌ನಿಂದ ಹಳ್ಳಿಯವರೆಗೆ, ಪಿವಿಟಿಜಿ ಪ್ರದೇಶಗಳವರೆಗೆ ಎಲ್ಲಾ ಹಂತಗಳಲ್ಲಿ ಜಾಗೃತಿ ಮೂಡಿಸಲಾಗುವುದು. ಈ 194 ಜಿಲ್ಲೆಗಳಲ್ಲಿ ಸುಮಾರು 16,500 ಗ್ರಾಮಗಳು, 15,000 ಗ್ರಾಮ ಪಂಚಾಯತ್‌ಗಳು ಮತ್ತು 1000 ತಾಲೂಕನ್ನು ತಲುಪಲಾಗುತ್ತದೆ.

ಈ ಅಭಿಯಾನವು ಪ್ರಮುಖ ವೈಯಕ್ತಿಕ ಹಕ್ಕುಗಳೊಂದಿಗೆ ಪಿವಿಟಿಜಿ ಕುಟುಂಬಗಳನ್ನು ಸಂತೃಪ್ತಿಗೊಳಿಸುವ ಗುರಿಯನ್ನು ಹೊಂದಿದೆ ಮತ್ತು ಪಿವಿಟಿಜಿ ಪ್ರದೇಶಗಳಲ್ಲಿ ಮೂಲಭೂತ ಸೌಲಭ್ಯ ಒದಗಿಸಲು ಪಿಎಮ್-ಜನ್ಮನ್‌ ಅಭಿಯಾನದ ಮಾಹಿತಿಯನ್ನು ನೀಡುವ ಗುರಿಯನ್ನು ಹೊಂದಿದೆ, ಇದರಿಂದಾಗಿ ಈ ಬುಡಕಟ್ಟು ಸಮುದಾಯಗಳು ಕೇಂದ್ರ ಮತ್ತು ರಾಜ್ಯ ಯೋಜನೆಗಳ ಬಗ್ಗೆ ತಿಳಿದಿರುವಂತೆ ಮತ್ತು ಅದರ ಅಡಿಯಲ್ಲಿ ಪ್ರಯೋಜನಗಳನ್ನು ಪಡೆಯಲು ಅನುವಾಗುತ್ತದೆ. ಈ ಉಪಕ್ರಮವು ರಸ್ತೆ ಮತ್ತು ಡಿಜಿಟಲ್ ಸಂಪರ್ಕದ ಕೊರತೆಯಿಂದಾಗಿ ತಲುಪದೆ ಉಳಿದಿರುವ ಪ್ರತಿಯೊಂದು ಪಿವಿಟಿಜಿ ಕುಟುಂಬವನ್ನೂ ಒಳಗೊಳ್ಳುತ್ತದೆ ಮತ್ತು ಅವರ ಮನೆ ಬಾಗಿಲಿಗೆ ಸೌಲಭ್ಯಗಳನ್ನು ಒದಗಿಸುತ್ತದೆ. ಈ ಕಾರ್ಯಕ್ರಮಗಳನ್ನು ಆಯೋಜಿಸಲು ಹಾತ್ ಬಜಾರ್, ಸಮುದಾಯ ಸೇವಾ ಕೇಂದ್ರ, ಗ್ರಾಮ ಪಂಚಾಯಿತಿ, ಅಂಗನವಾಡಿ, ವಿವಿಧೋದ್ದೇಶ ಕೇಂದ್ರಗಳು, ವಂಧನ್ ವಿಕಾಸ ಕೇಂದ್ರಗಳು, ಕೃಷಿ ವಿಜ್ಞಾನ ಕೇಂದ್ರಗಳಂತಹ ಸ್ಥಳಗಳನ್ನು ಬಳಸಿಕೊಳ್ಳಲಾಗುತ್ತದೆ. ಇದಲ್ಲದೆ, ಅಭಿಯಾನದ ಯಶಸ್ಸನ್ನು ಖಚಿತಪಡಿಸಿಕೊಳ್ಳಲು (MyBharat) ಮೈ ಭಾರತ ಸ್ವಯಂಸೇವಕರು, ನೆಹರು ಯುವ ಕೇಂದ್ರಗಳು, ಕೃಷಿ ವಿಜ್ಞಾನ ಕೇಂದ್ರಗಳು, ಎನ್‌ ಎಸ್‌ ಎಸ್‌ , ಎನ್‌ ಸಿ ಸಿ, ಸ್ವ-ಸಹಾಯ ಗುಂಪುಗಳು / ಎಫ್‌ ಪಿ ಒ ಗಳು ಮತ್ತು ಇತರ ಸಂಸ್ಥೆಗಳ ಸಕ್ರಿಯ ಒಳಗೊಳ್ಳುವಿಕೆಗೆ ಪ್ರಯತ್ನಿಸಲಾಗುತ್ತಿದೆ.

*ಸಂಪೂರ್ಣ ಪ್ರಚಾರದ ಅವಧಿಯಲ್ಲಿ, ಆಧಾರ್ ಕಾರ್ಡ್‌ಗಳು, ಸಮುದಾಯ ಪ್ರಮಾಣಪತ್ರಗಳು, ಜನ್ ಧನ್ ಖಾತೆಗಳು ಮತ್ತು ಅರಣ್ಯ ಹಕ್ಕುಗಳ ಕಾಯ್ದೆ (ಎಫ್‌ಆರ್‌ಎ) ಫಲಾನುಭವಿಗಳಿಗೆ ಪಟ್ಟಾಗಳನ್ನು ಒದಗಿಸಲಾಗುತ್ತದೆ. ಇವುಗಳು ಇತರ ಯೋಜನೆಗಳಿಗೆ ಮೂಲಭೂತ ಅವಶ್ಯಕತೆಗಳಾಗಿವೆ.

*ಪಿಎಮ್‌-ಜನ್ಮನ್‌ ಮಧ್ಯಸ್ಥಿಕೆ ಕಾರ್ಡ್‌ಗಳನ್ನು ಪಿವಿಟಿಜಿಗಳ ಭಾಷೆಯಲ್ಲಿ ವಿತರಿಸಲಾಗುತ್ತದೆ.

*ಅಭಿಯಾನದ ಭಾಗವು ಫಲಾನುಭವಿಗಳ ವಿಶೇಷ ಶಿಬಿರಗಳು ಮತ್ತು ಆರೋಗ್ಯ ಶಿಬಿರಗಳನ್ನು ಒಳಗೊಂಡಿರುತ್ತದೆ. ಈ ಶಿಬಿರಗಳು ವ್ಯಕ್ತಿಗಳು/ಕುಟುಂಬಗಳಿಗೆ ಯೋಜನೆಗಳ ಅಡಿಯಲ್ಲಿ ಪ್ರಯೋಜನಗಳನ್ನು ಒದಗಿಸುವುದರ ಮೇಲೆ ಮತ್ತು ವಿಶೇಷವಾಗಿ ಪಿವಿಟಿಜಿ ಗುಂಪುಗಳಿಗೆ ಆರೋಗ್ಯ ಸಂಬಂಧಿತ ಸಮಸ್ಯೆಗಳಿಗೆ, ಉದಾಹರಣೆಗೆ ಸಿಕಲ್‌ ಸೆಲ್‌ ಡೀಸಿಸ್ (Sickle Cell Disease) ಸ್ಕ್ರೀನಿಂಗ್ ಪರೀಕ್ಷೆಗಳ ಮೇಲೆ ಕೇಂದ್ರೀಕರಿಸುತ್ತವೆ.  

*ಕರಪತ್ರಗಳು, ವಿಡಿಯೋ, ಕ್ರಿಯೇಟಿವ್‌ಗಳು, ಇನ್ಫೋಗ್ರಾಫಿಕ್ಸ್ ಮುಂತಾದ ಜಾಗೃತಿ ಸಾಮಗ್ರಿಗಳನ್ನು ಸ್ಥಳೀಯ ಮತ್ತು ಬುಡಕಟ್ಟು ಭಾಷೆಗಳಲ್ಲಿ ಬಳಸಿಕೊಳ್ಳುವ ನಿರೀಕ್ಷೆಯಿದೆ.
*ಪ್ರಮುಖ ಪಿಎಮ್-ಜನ್ಮನ್‌ ಸಂದೇಶಗಳನ್ನು ಹೊಂದಿರುವ ವಿಷಯಗಳ‌ ಕುರಿತ ಗೋಡೆ ಬರಹಗಳು ಪಿವಿಟಿಜಿ ಪ್ರದೇಶಗಳಲ್ಲಿ ತಲೆ ಎತ್ತಲಿವೆ.

*ಶಿಷ್ಯವೇತನ, ಮಾತೃತ್ವ ಪ್ರಯೋಜನ ಯೋಜನೆಗಳು, ಕಿಸಾನ್ ಕ್ರೆಡಿಟ್ ಕಾರ್ಡ್, ಕಿಸಾನ್ ಸಮ್ಮಾನ್ ನಿಧಿ, ಎಸ್‌ಸಿಡಿ ರೋಗಿಗಳಿಗೆ ಅಂಗವೈಕಲ್ಯ ಕುರಿತ ಪ್ರಮಾಣಪತ್ರಗಳಂತಹ ವಿವಿಧ ಯೋಜನೆಗಳ ಅಡಿಯಲ್ಲಿ ಪ್ರಯೋಜನಗಳು ಮತ್ತು ಅರ್ಹ ಪಿವಿಟಿಜಿ ಫಲಾನುಭವಿಗಳಿಗೆ ತಲುಪುವುದನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಗಳನ್ನು ಕೈಗೊಳ್ಳಲಾಗುವುದು.

*ಯೋಜನೆಯ ಫಲಾನುಭವಿಗಳು ಮತ್ತು ಸಾಧಕರು ಸಮುದಾಯದ ಇತರ ಸದಸ್ಯರು ಮುಂದೆ ಬರಲು ಪ್ರೇರೇಪಿಸಲು ವಿಶೇಷ ಅಧಿವೇಶನಗಳಲ್ಲಿ ತಮ್ಮ ಯಶಸ್ಸಿನ ಕಥೆಗಳನ್ನು ವಿವರಿಸುತ್ತಾರೆ.

ಅಭಿಯಾನದ ಮೇಲ್ವಿಚಾರಣೆಗಾಗಿ ಪ್ರತಿ ಜಿಲ್ಲೆಗೆ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ನಿಯೋಜಿಸಲಾಗಿದೆ, ಆದರೆ ರಾಜ್ಯ ಮಟ್ಟದ ಅಧಿಕಾರಿಗಳು ಅಭಿಯಾನ ಮತ್ತು ಮಿಷನ್‌ನ ಯಶಸ್ಸನ್ನು ಖಚಿತಪಡಿಸಿಕೊಳ್ಳಲು ರಾಜ್ಯ ಸರ್ಕಾರಗಳ ವಿವಿಧ ಸಾಲಿನ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸುತ್ತಾರೆ. ಸಂಬಂಧಿಸಿದ ಎಲ್ಲಾ ಇಲಾಖೆಗಳ ಪಾಲ್ಗೊಳ್ಳುವಿಕೆ ಖಚಿತಪಡಿಸಿಕೊಳ್ಳಲು ನಿಯಮಿತ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಗೂ ಸಲಹೆಗಾರರು ಮತ್ತು ಇತರ ಗುತ್ತಿಗೆ ಸಿಬ್ಬಂದಿಗೆ ಕೆಳ ಹಂತದವರೆಗೆ ಮಾಹಿತಿ ಕಾರ್ಯಾಗಾರಗಳನ್ನು ನಡೆಸಲಾಗುತ್ತದೆ. ಇದಲ್ಲದೆ, ವಿವಿಧ ರಾಜ್ಯಗಳಲ್ಲಿನ ಬುಡಕಟ್ಟು ಸಂಶೋಧನಾ ಸಂಸ್ಥೆಗಳು ಜಿಲ್ಲೆ, ಬ್ಲಾಕ್ ಮತ್ತು ಬುಡಕಟ್ಟು ವಸತಿ ಮಟ್ಟದಲ್ಲಿ ಈ ಚಟುವಟಿಕೆಗಳನ್ನು ಯೋಜಿಸಲು ಮತ್ತು ಕಾರ್ಯಗತಗೊಳಿಸಲು ಸಹಾಯ ಮಾಡುತ್ತದೆ.

ಮಿಷನ್ ಉದ್ದೇಶ

ಪಿಎಮ್-ಜನ್ಮನ್‌ ಅಭಿಯಾನ  9 ಪ್ರಮುಖ ಸಚಿವಾಲಯಗಳು/ಇಲಾಖೆಗಳಿಗೆ ಸಂಬಂಧಿಸಿದ 11 ನಿರ್ಣಾಯಕ ಮಧ್ಯಸ್ಥಿಕೆಗಳ ಮೇಲೆ ಕೇಂದ್ರೀಕರಿಸುತ್ತದೆ, ಇದರ ಬಜೆಟ್ ವೆಚ್ಚವು ರೂ. 24,104 ಕೋಟಿ ರೂ.ಗಳಾಗಿದೆ. (ಕೇಂದ್ರದ ಪಾಲು: ರೂ.15,336 ಕೋಟಿ ಮತ್ತು ರಾಜ್ಯದ ಪಾಲು: ರೂ.8,768 ಕೋಟಿ) ಆರ್ಥಿಕ ವರ್ಷ 2023-24 ರಿಂದ 2025-26 ರವರೆಗೆ, ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಕ್ರಿಯಾ ಯೋಜನೆಯಡಿ (ಡಿಎಪಿಎಸ್‌ ಟಿ) ಕಾರ್ಯಕ್ರಮ ರೂಪಿಸಲಾಗಿದೆ.

ಆಧಾರ್‌ನಲ್ಲಿ ದಾಖಲಾತಿ, ಸಮುದಾಯ ಪ್ರಮಾಣ ಪತ್ರಗಳ ವಿತರಣೆ, ಪಿಎಂ-ಜನಧನ್ ಯೋಜನೆ, ಪಿಎಂ ಗರೀಬ್ ಕಲ್ಯಾಣ್ ಯೋಜನೆ, ಆಯುಷ್ಮಾನ್ ಕಾರ್ಡ್, ಪಿಎಂ ಕಿಸಾನ್‌ನಂತಹ ಪಿವಿಟಿಜಿಗಳ ಸಮಗ್ರ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಲು ಇತರ ಯೋಜನೆಗಳು ಮತ್ತು ಸಚಿವಾಲಯಗಳು/ಇಲಾಖೆಗಳನ್ನು ಒಳಗೊಂಡಿರುವ ಇತರ 10 ಮಧ್ಯಸ್ಥಿಕೆಗಳನ್ನು ಗುರುತಿಸಲಾಗಿದೆ. ಸಮ್ಮಾನ್ ನಿಧಿ, ಕಿಸಾನ್ ಕ್ರೆಡಿಟ್ ಕಾರ್ಡ್, ವೈಯಕ್ತಿಕ ಮತ್ತು ಸಮುದಾಯ ಅರಣ್ಯ ಹಕ್ಕುಗಳ ಬಾಕಿ ಪ್ರಕರಣಗಳನ್ನು ಪರಿಹರಿಸುವುದು ಇತ್ಯಾದಿ ಸೇರಿದೆ. 

ಡಿಸೆಂಬರ್ 15, 2023 ರಂದು ನಡೆದ ರಾಷ್ಟ್ರೀಯ ಮಂಥನ ಶಿಬಿರದ ಸಂದರ್ಭದಲ್ಲಿ, ಮಿಷನ್ ಅನುಷ್ಠಾನದ ಕಾರ್ಯತಂತ್ರವನ್ನು ಚರ್ಚಿಸಲಾಯಿತು, ಅಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ 700 ಕ್ಕೂ ಹೆಚ್ಚು ಅಧಿಕಾರಿಗಳು ಜಂಟಿಯಾಗಿ ಸಮಾಲೋಚನೆ ನಡೆಸಿದರು.  ನಂತರ, ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು, ನಿರ್ದೇಶಕರು ಮತ್ತು ರಾಜ್ಯ ಬುಡಕಟ್ಟು ಕಲ್ಯಾಣ ಇಲಾಖೆಗಳ ಅಧಿಕಾರಿಗಳೊಂದಿಗೆ ಈ ವರ್ಷ ಜುಲೈ 18-19, 2024 ರಂದು ಪಿಎಂ-ಜನ್ಮನ್ ಅಡಿಯಲ್ಲಿ ಕೈಗೊಂಡ ಚಟುವಟಿಕೆಗಳ ಪ್ರಗತಿಯನ್ನು ಪರಿಶೀಲಿಸಲು ಎರಡು ದಿನಗಳ ಮಂಥನ ಶಿಬಿರವನ್ನು ನಡೆಸಲಾಯಿತು.  ಪಿಎಮ್-ಜನ್ಮನ್‌ ನ 2ನೇ ಹಂತದ ಹೊಸ ಉಪಕ್ರಮಗಳ ಬಗ್ಗೆಯೂ ಚರ್ಚಿಸಲಾಯಿತು.


Hashtags

#PMJANMAN
#EmpoweringTribalsTransformingIndia

 

*****



(Release ID: 2048167) Visitor Counter : 92