ಪ್ರಧಾನ ಮಂತ್ರಿಯವರ ಕಛೇರಿ

ಭಾರತ-ಪೋಲೆಂಡ್ ನಡುವೆ ಕಾರ್ಯತಂತ್ರ ಸಹಭಾಗಿತ್ವದ ಅನುಷ್ಠಾನಕ್ಕಾಗಿ ಕ್ರಿಯಾಯೋಜನೆ (2024-2028)

Posted On: 22 AUG 2024 8:22PM by PIB Bengaluru

ಪೋಲೆಂಡ್ ನ ವಾರ್ಸಾದಲ್ಲಿ 2024 ಆಗಸ್ಟ್ 22ರಂದು ಭಾರತ ಮತ್ತು ಪೋಲೆಂಡ್ ಪ್ರಧಾನ ಮಂತ್ರಿಗಳು ನಡೆಸಿದ ಮಾತುಕತೆ ವೇಳೆ ಸಾಧಿಸಿದ ಒಮ್ಮತಾಭಿಪ್ರಾಯದ  ಮೇಲೆ ಕಾರ್ಯತಂತ್ರ ಸಹಭಾಗಿತ್ವ ಸ್ಥಾಪನೆಯಿಂದ ಉಂಟಾದ ದ್ವಿಪಕ್ಷೀಯ ಸಹಕಾರದ ಆವೇಗ ಗುರುತಿಸಿ, ಉಭಯ ನಾಯಕರು 5 ವರ್ಷಗಳ ಕ್ರಿಯಾಯೋಜನೆ(2024-2028) ರೂಪಿಸಲು ಮತ್ತು ಕಾರ್ಯಗತಗೊಳಿಸಲು ಒಪ್ಪಿಕೊಂಡರು. ಕ್ರಿಯಾಯೋಜನೆಯು 5 ವರ್ಷಗಳ ದ್ವಿಪಕ್ಷೀಯ ಸಹಭಾಗಿತ್ವವನ್ನು ಈ ಕೆಳಗಿನ ವಲಯಗಳಲ್ಲಿ ಆದ್ಯತೆಯಾಗಿ ರೂಪಿಸಲು ಮಾರ್ಗದರ್ಶನ ಮಾಡುತ್ತದೆ:

ರಾಜಕೀಯ ಮಾತುಕತೆ ಮತ್ತು ಭದ್ರತಾ ಸಹಕಾರ

ಉಭಯ ರಾಷ್ಟ್ರಗಳ ವಿದೇಶಾಂಗ ಸಚಿವರು ನಿಯಮಿತ ಸಂಪರ್ಕಗಳನ್ನು ನಿರ್ವಹಿಸುತ್ತಾರೆ, ಅವರು ಈ ಮಾತುಕತೆಗಳಿಗಾಗಿ ದ್ವಿಪಕ್ಷೀಯ ಮತ್ತು ಬಹುಪಕ್ಷೀಯ ವೇದಿಕೆಗಳನ್ನು ಬಳಸಲಿದ್ದಾರೆ.

ವಿಶ್ವಸಂಸ್ಥೆಯ ಸನ್ನದು(ಚಾರ್ಟರ್‌) ಅನ್ವಯ, ಬಹುಪಕ್ಷೀಯ ಸಹಕಾರಕ್ಕೆ ಕೊಡುಗೆ ನೀಡಲು ಎರಡೂ ಕಡೆಯವರು ಪರಸ್ಪರರ ಆಕಾಂಕ್ಷೆಗಳನ್ನು ಕೇಸ್-ಬೈ-ಕೇಸ್ ಆಧಾರದ ಮೇಲೆ ಬೆಂಬಲಿಸುವುದನ್ನು ಪರಿಗಣಿಸಲಿದ್ದಾರೆ.

ವಿದೇಶಾಂಗ ಸಂಬಂಧಗಳ ಉಸ್ತುವಾರಿ ಹೊಂದಿರುವ ಉಪಸಚಿವರ ಮಟ್ಟದಲ್ಲಿ ವಾರ್ಷಿಕ ರಾಜಕೀಯ ಮಾತುಕತೆ ಖಚಿತಪಡಿಸಿಕೊಳ್ಳುತ್ತಾರೆ.

ರಕ್ಷಣಾ ಕೈಗಾರಿಕೆಗಳ ನಡುವಿನ ಸಂಪರ್ಕ ಉತ್ತೇಜಿಸಲು, ಮಿಲಿಟರಿ ಉಪಕರಣಗಳನ್ನು ಆಧುನೀಕರಿಸಲು ಮತ್ತು ಮಹೋನ್ನತ ಸಮಸ್ಯೆಗಳನ್ನು ಪರಿಹರಿಸಲು ಭದ್ರತೆ ಮತ್ತು ರಕ್ಷಣಾ ಸಹಕಾರದ ಕುರಿತು ನಿಯಮಿತ ಸಮಾಲೋಚನೆ ನಡೆಸಲು ಎರಡೂ ಕಡೆಯವರು ಸಂಬಂಧಿತ ಸಂಸ್ಥೆಗಳಿಗೆ ಪ್ರೋತ್ಸಾಹ ನೀಡಲಿದ್ದಾರೆ.

ರಕ್ಷಣಾ ಸಹಕಾರಕ್ಕಾಗಿ ಜಂಟಿ ಕಾರ್ಯಕಾರಿ ಗುಂಪಿನ ಮಾತುಕತೆಯ ಮುಂದಿನ ಸುತ್ತು 2024ರಲ್ಲಿ ನಡೆಯಲಿದೆ ಎಂದು ಉಭಯ ರಾಷ್ಟ್ರಗಳು ನಿರ್ಧರಿಸಿವೆ.

ವ್ಯಾಪಾರ ಮತ್ತು ಹೂಡಿಕೆ

ಉನ್ನತ ತಂತ್ರಜ್ಞಾನ, ಕೃಷಿ, ಕೃಷಿ ತಂತ್ರಜ್ಞಾನ, ಆಹಾರ ತಂತ್ರಜ್ಞಾನ, ಇಂಧನ, ಹವಾಮಾನ, ಹಸಿರು ತಂತ್ರಜ್ಞಾನಗಳು, ಮೂಲಸೌಕರ್ಯ, ಸ್ಮಾರ್ಟ್ ಸಿಟಿಗಳು, ರಕ್ಷಣೆ, ಆರೋಗ್ಯ, ಔಷಧ ಮತ್ತು ಗಣಿಗಾರಿಕೆ ವಲಯದಲ್ಲಿ ಇರುವ ಅವಕಾಶಗಳನ್ನು ಗುರುತಿಸಿ, ಮುಂದಿನ ಜಂಟಿ ಆಯೋಗದ ಅವಧಿಯಲ್ಲಿ ಈ ವಲಯಗಳಲ್ಲಿ ಹೆಚ್ಚಿನ ಸಹಕಾರವನ್ನು ಉಭಯ ದೇಶಗಳು ಅನ್ವೇಷಿಸಲಿವೆ. ಆರ್ಥಿಕ ಸಹಕಾರ(ಜೆಸಿಇಸಿ)ದ ಜಂಟಿ ಆಯೋಗ ಸಭೆಯನ್ನು 2024ರ ಅಂತ್ಯಕ್ಕೆ ನಿಗದಿಪಡಿಸಲಾಗಿದೆ.

ಎರಡು ಪಕ್ಷಗಳು ಪ್ರತಿ 5 ವರ್ಷಗಳಿಗೊಮ್ಮೆ ಕನಿಷ್ಠ 2 ಬಾರಿ ಜೆಸಿಇಸಿ ಸಭೆಗಳನ್ನು ಆಯೋಜಿಸಲು ಪ್ರಯತ್ನಿಸುತ್ತವೆ. ಅಗತ್ಯ ಬಿದ್ದರೆ ಆಗಾಗ್ಗೆ ಹೆಚ್ಚಿನ ಸಭೆಗಳನ್ನು ಆಯೋಜಿಸುವ ಸಾಧ್ಯತೆಯಿದೆ.

ಸಮತೋಲಿತ ದ್ವಿಪಕ್ಷೀಯ ವ್ಯಾಪಾರ ಸಾಧಿಸಲು ಎರಡೂ ಕಡೆಯವರು ಕಾರ್ಯೋನ್ಮುಖರಾಗುತ್ತಾರೆ, ಸುಗಮ ವ್ಯಾಪಾರ ಮತ್ತು ಹೂಡಿಕೆಗೆ ಅನುಕೂಲವಾಗುವಂತೆ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುತ್ತಾರೆ.

ಪೂರೈಕೆ ಸರಪಳಿಯ ಹೊಂದಾಣಿಕೆ ಹೆಚ್ಚಿಸುವ ಮತ್ತು ವ್ಯಾಪಾರ ಅವಲಂಬನೆಗಳಿಗೆ ಸಂಬಂಧಿಸಿದ ಅಪಾಯಗಳನ್ನು ತಗ್ಗಿಸುವ ಮೂಲಕ ಎರಡೂ ಕಡೆಯವರು ಆರ್ಥಿಕ ಭದ್ರತಾ ಸಹಕಾರ ಹೆಚ್ಚಿಸುತ್ತಾರೆ.

ಹವಾಮಾನ, ಇಂಧನ, ಗಣಿಗಾರಿಕೆ, ವಿಜ್ಞಾನ ಮತ್ತು ತಂತ್ರಜ್ಞಾನ

ಹಸಿರು ಆರ್ಥಿಕತೆ ಮತ್ತು ತ್ಯಾಜ್ಯ-ನೀರಿನ ನಿರ್ವಹಣೆಗಾಗಿ ಸುಸ್ಥಿರ ಮತ್ತು ಪರಿಸರ ಸ್ನೇಹಿ ತಾಂತ್ರಿಕ ಪರಿಹಾರಗಳಲ್ಲಿ ಎರಡೂ ಕಡೆಯವರು ಸಹಕಾರ ವಿಸ್ತರಿಸುತ್ತಾರೆ.

ಇಂಧನ ಭದ್ರತೆಗಾಗಿ ದೇಶೀಯ ಸರಬರಾಜುಗಳ ಮೇಲೆ ತಮ್ಮ ಐತಿಹಾಸಿಕ ಅವಲಂಬನೆ ಅಂಗೀಕರಿಸಿ, ಪರಿಸರದ ಪ್ರಭಾವ ಕಡಿಮೆ ಮಾಡಲು ಸ್ವಚ್ಛ ಇಂಧನ ವಿಧಾನಗಳನ್ನು ಮತ್ತು ಸ್ವಚ್ಛ ಕಲ್ಲಿದ್ದಲು ತಂತ್ರಜ್ಞಾನ ಸಹಕಾರ ಅನ್ವೇಷಿಸಲು ಎರಡೂ ಕಡೆಯವರು ಒಟ್ಟಾಗಿ ಕೆಲಸ ಮಾಡುತ್ತಾರೆ.

ನಾವೀನ್ಯತೆಯ ನಿರ್ಣಾಯಕ ಪಾತ್ರವನ್ನು ಮತ್ತು ನಿರ್ಣಾಯಕ ಖನಿಜಗಳ ಹೆಚ್ಚುತ್ತಿರುವ ಪ್ರಾಮುಖ್ಯತೆ ಗುರುತಿಸಿ, ಎರಡೂ ಕಡೆಯವರು ಸುಧಾರಿತ ಗಣಿಗಾರಿಕೆ ವ್ಯವಸ್ಥೆಗಳು, ಹೈಟೆಕ್ ಯಂತ್ರೋಪಕರಣಗಳು, ಪ್ರವರ್ತಕ ಸುರಕ್ಷತಾ ಮಾನದಂಡಗಳು ಮತ್ತು ಗಣಿಗಾರಿಕೆ-ಸಂಬಂಧಿತ ಕೈಗಾರಿಕೆಗಳಲ್ಲಿ ವಿನಿಮಯ ಮತ್ತು ಸಹಕಾರ ಹೆಚ್ಚಿಸಲು ಸಹಕರಿಸುತ್ತಾರೆ.

ಬಾಹ್ಯಾಕಾಶ ಮತ್ತು ವಾಣಿಜ್ಯ ಬಾಹ್ಯಾಕಾಶ ಪರಿಸರ ವ್ಯವಸ್ಥೆಗಳ ಸುರಕ್ಷಿತ, ಸಮರ್ಥನೀಯ ಮತ್ತು ಸುರಕ್ಷಿತ ಬಳಕೆ ಉತ್ತೇಜಿಸುವ ಸಹಕಾರ ಒಪ್ಪಂದ ಅಂತಿಮಗೊಳಿಸಲು ಎರಡೂ ಕಡೆಯವರು ಒಪ್ಪಿಕೊಂಡರು. ಮಾನವ ಮತ್ತು ರೊಬೊಟಿಕ್ ಅನ್ವೇಷಣೆಯನ್ನು ಉತ್ತೇಜಿಸಲು ಸಹ ಅವರು ಒಪ್ಪಿಕೊಂಡರು.

ಅಂತಾರಾಷ್ಟ್ರೀಯ ಇಂಧನ ಸಂಸ್ಥೆಗೆ ಸೇರುವ ಭಾರತದ ಮಹತ್ವಾಕಾಂಕ್ಷೆಯನ್ನು ಪೋಲೆಂಡ್ ಗುರುತಿಸಿದೆ.

ಸಾರಿಗೆ ಮತ್ತು ಸಂಪರ್ಕ

ಸಾರಿಗೆ ಮೂಲಸೌಕರ್ಯ ಕ್ಷೇತ್ರದಲ್ಲಿ ಸಹಕಾರ ಅಭಿವೃದ್ಧಿಪಡಿಸಲು ಉಭಯ ದೇಶಗಳು ಅನ್ವೇಷಣೆ ನಡೆಸಲಿವೆ.

ಉಭಯ ದೇಶಗಳು ತಮ್ಮ ದೇಶಗಳು ಮತ್ತು ಆಯಾ ಪ್ರದೇಶಗಳ ನಡುವಿನ ಸಂಪರ್ಕ ಹೆಚ್ಚಿಸಲು ಚರ್ಚಿಸುವ ಮತ್ತು ವಿಮಾನ ಸಂಪರ್ಕಗಳ ಮತ್ತಷ್ಟು ವಿಸ್ತರಣೆ ಮುಂದುವರಿಸಲು ಕೆಲಸ ಮಾಡಲಿವೆ.

ಭಯೋತ್ಪಾದನೆ

ಭಯೋತ್ಪಾದನೆಯ ಎಲ್ಲಾ ರೂಪಗಳು ಮತ್ತು ಅಭಿವ್ಯಕ್ತಿಗಳನ್ನು ನಿಸ್ಸಂದಿಗ್ಧವಾಗಿ ಎರಡೂ ಕಡೆಯವರು ಖಂಡಿಸಿದರು. ಯಾವುದೇ ದೇಶ ಭಯೋತ್ಪಾದಕ ಕೃತ್ಯಗಳಿಗೆ ಹಣಕಾಸು, ಯೋಜನೆ, ಬೆಂಬಲ ಅಥವಾ ಕೃತ್ಯ ಎಸಗುವವರಿಗೆ ಸುರಕ್ಷಿತ ಆಶ್ರಯ ನೀಡಬಾರದು ಎಂದು ಒತ್ತಿ ಹೇಳಿದರು. ವಿಶ್ವಸಂಸ್ಥೆ ಭದ್ರತಾ ಮಂಡಳಿಯ 1267 ನಿರ್ಬಂಧಗಳ ಸಮಿತಿಯಿಂದ ಪಟ್ಟಿ ಮಾಡಲಾದ ಗುಂಪುಗಳೊಂದಿಗೆ ಸಂಯೋಜಿತವಾಗಿರುವ ವ್ಯಕ್ತಿಗಳನ್ನು ಗೊತ್ತುಪಡಿಸುವುದು ಸೇರಿದಂತೆ ಎಲ್ಲಾ ಭಯೋತ್ಪಾದಕರ ವಿರುದ್ಧ ಎರಡೂ ಕಡೆಯವರು ಸಂಘಟಿತ ಪ್ರಯತ್ನಗಳನ್ನು ಮಾಡಲು ಒಪ್ಪಿದ್ದಾರೆ.

ಸೈಬರ್ ಭದ್ರತೆ

ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಸೈಬರ್ ಭದ್ರತೆಯ ನಿರ್ಣಾಯಕ ಪ್ರಾಮುಖ್ಯತೆ ಗುರುತಿಸಿ, ಅಂತಾರಾಷ್ಟ್ರೀಯ ಸಹಕಾರ, ಶಾಸಕಾಂಗ ಮತ್ತು ನಿಯಂತ್ರಕ ಪರಿಹಾರಗಳು, ನ್ಯಾಯಾಂಗ ಮತ್ತು ಪೊಲೀಸ್ ಚಟುವಟಿಕೆಗಳು, ಸೈಬರ್ ದಾಳಿಗಳ ತಡೆಗಟ್ಟುವಿಕೆ, ನಿಯಂತ್ರಣ ಮತ್ತು ಪ್ರತಿಕ್ರಿಯೆ ಅಥವಾ ಸ್ಪಂದನೆ, ಜಾಗೃತಿ ನಿರ್ಮಾಣ ಮತ್ತು ಶೈಕ್ಷಣಿಕ ಕಾರ್ಯಕ್ರಮಗಳು, ವೈಜ್ಞಾನಿಕ ಮತ್ತು ತಾಂತ್ರಿಕ ಸಂಶೋಧನೆ ಮತ್ತು ಅಭಿವೃದ್ಧಿ, ವ್ಯಾಪಾರ ಮತ್ತು ಆರ್ಥಿಕ ವಿನಿಮಯಗಳಿಗೆ ನಿರ್ದಿಷ್ಟವಾಗಿ ಗಮನ ಹರಿಸುವುದರೊಂದಿಗೆ ಐಸಿಟಿ-ಸಂಬಂಧಿತ ಕ್ಷೇತ್ರಗಳಲ್ಲಿ ನಿಕಟ ಸಂವಹನ(ಸಂಪರ್ಕ) ಮತ್ತು ವಿನಿಮಯ ಹೆಚ್ಚಿಸಲಿದೆ.

ಆರೋಗ್ಯ

ಪರಸ್ಪರ ಆಸಕ್ತಿಯ ಕ್ಷೇತ್ರಗಳ ಕುರಿತು ಮಾಹಿತಿ ವಿನಿಮಯ ಮತ್ತು ಹಂಚಿಕೊಳ್ಳುವಿಕೆ, ಆರೋಗ್ಯ ತಜ್ಞರ ನಡುವೆ ಸಂಪರ್ಕ ಹೆಚ್ಚಿಸುವುದು ಮತ್ತು ಎರಡೂ ದೇಶಗಳಲ್ಲಿನ ಆರೋಗ್ಯ ಸಂಸ್ಥೆಗಳ ನಡುವಿನ ಸಹಕಾರ ಬೆಂಬಲಿಸುವ ಮೂಲಕ ಆರೋಗ್ಯ ಕ್ಷೇತ್ರದಲ್ಲಿ ಸಹಭಾಗಿತ್ವ ಬಲಪಡಿಸುವ ಪ್ರಮುಖ ಪಾತ್ರಕ್ಕೆ ಎರಡೂ ಕಡೆಯವರು ಒತ್ತು ನೀಡಿದರು.

ಜನರು-ಜನರ ನಡುವಿನ ಸಂಬಂಧಗಳು ಮತ್ತು ಸಾಂಸ್ಕೃತಿಕ ಸಹಕಾರ

ಸಾಮಾಜಿಕ ಭದ್ರತೆಯ ಒಪ್ಪಂದ ಕಾರ್ಯಗತಗೊಳಿಸಲು ಎರಡೂ ಕಡೆಯವರು ಒಟ್ಟಾಗಿ ಕೆಲಸ ಮಾಡುತ್ತಾರೆ, ಈ ನಿಟ್ಟಿನಲ್ಲಿ ತಮ್ಮ ಆಂತರಿಕ ಕಾನೂನು ಕಾರ್ಯವಿಧಾನಗಳನ್ನು ಪೂರ್ಣಗೊಳಿಸಲು ಅವರು ಪ್ರಯತ್ನಿಸುತ್ತಾರೆ.

ಉಭಯ ದೇಶಗಳ ಸಾಂಸ್ಕೃತಿಕ ಸಂಸ್ಥೆಗಳು ಮತ್ತು ಸಂಘಸಂಸ್ಥೆಗಳ ನಡುವಿನ ಸಹಕಾರ ಬಲಪಡಿಸುತ್ತಾರೆ. ಎರಡೂ ದೇಶಗಳ ಕಲಾವಿದರು, ಭಾಷಾ ತಜ್ಞರು, ವಿದ್ವಾಂಸರು ಮತ್ತು ಸಾಂಸ್ಕೃತಿಕ ಸಂಸ್ಥೆಗಳ ನಡುವಿನ ವಿನಿಮಯ ಬಲಪಡಿಸುತ್ತಾರೆ. ಚಿಂತಕರ ಚಾವಡಿ ಮತ್ತು ತಜ್ಞರ ನಡುವೆ ಸಹಕಾರ ಮತ್ತು ಸಂವಾದ(ಚರ್ಚೆ) ಏರ್ಪಡಿಸಲು ಅನ್ವೇಷಣೆ ನಡೆಸುತ್ತಾರೆ.

ಉನ್ನತ ಶಿಕ್ಷಣದಲ್ಲಿ ಸಹಕಾರ ಬಲಪಡಿಸಲು ಮತ್ತು ಸಂಬಂಧಿತ ಚಟುವಟಿಕೆಗಳನ್ನು ಆಯೋಜಿಸಲು ಎರಡೂ ಕಡೆಯ ವಿಶ್ವವಿದ್ಯಾಲಯಗಳನ್ನು ಉತ್ತೇಜಿಸಲು ಒಟ್ಟಾಗಿ ಕೆಲಸ ಮಾಡುತ್ತಾರೆ. ಎರಡೂ ದೇಶಗಳಲ್ಲಿನ ಶೈಕ್ಷಣಿಕ ಸಂಸ್ಥೆಗಳ ನಡುವೆ ಪಾಲುದಾರಿಕೆ ಸ್ಥಾಪಿಸಲು ಅವರು ಆಯಾ ಅಧಿಕಾರಿಗಳನ್ನು ಪ್ರೋತ್ಸಾಹಿಸುತ್ತಾರೆ.

ಪರಸ್ಪರ ತಿಳುವಳಿಕೆಯನ್ನು ನಿರ್ಮಿಸುವಲ್ಲಿ ಮತ್ತು ದ್ವಿಪಕ್ಷೀಯ ಸಾಂಸ್ಕೃತಿಕ ಸಂಬಂಧಗಳನ್ನು ಬೆಳೆಸುವಲ್ಲಿ ಶಿಕ್ಷಣ ಮತ್ತು ಭಾಷಾ ಮತ್ತು ಸಾಂಸ್ಕೃತಿಕ ವಿನಿಮಯದ ಮಹತ್ವವನ್ನು ಎರಡೂ ಕಡೆಯವರು ಒತ್ತಿ ಹೇಳಿದರು. ಅವರು ಪೋಲೆಂಡ್‌ನಲ್ಲಿ ಹಿಂದಿ ಮತ್ತು ಭಾರತೀಯ ಅಧ್ಯಯನಗಳ ಪಾತ್ರವನ್ನು ಮತ್ತು ಭಾರತದಲ್ಲಿ ಪೋಲಿಷ್ ಭಾಷೆ ಮತ್ತು ಸಂಸ್ಕೃತಿ ಅಧ್ಯಯನಗಳನ್ನು ಗುರುತಿಸಿದ್ದಾರೆ ಮತ್ತು ಪೋಲಿಷ್ ನ್ಯಾಷನಲ್ ಏಜೆನ್ಸಿ ಫಾರ್ ಅಕಾಡೆಮಿಕ್ ಎಕ್ಸ್‌ಚೇಂಜ್ ಮತ್ತು ಆಯಾ ಭಾರತೀಯ ಏಜೆನ್ಸಿಗಳ ನಡುವೆ ಭಾರತದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಪೋಲಿಷ್ ಭಾಷೆಯನ್ನು ಕಲಿಸುವ ಕುರಿತು ಒಪ್ಪಂದದಲ್ಲಿ ಕೆಲಸ ಮಾಡಲು ಒಪ್ಪಿಕೊಂಡರು.

ಪ್ರವಾಸೋದ್ಯಮದಲ್ಲಿ ಸಹಕಾರ ಬಲಪಡಿಸುವ ಮೂಲಕ ಎರಡೂ ದಿಕ್ಕುಗಳಲ್ಲಿ ಪ್ರವಾಸಿ ಹರಿವು ಹೆಚ್ಚಿಸಲು ಕಾರ್ಯೋನ್ಮುಖರಾಗಲಿದ್ದಾರೆ. ಇದು ಪ್ರವಾಸೋದ್ಯಮ ಮಿಷನ್‌ಗಳನ್ನು ಆಯೋಜಿಸುವುದು, ಪ್ರಭಾವಿಗಳು ಮತ್ತು ಪ್ರಯಾಣ ಏಜೆನ್ಸಿಗಳಿಗೆ ಕುಟುಂಬ ಪ್ರವಾಸಗಳನ್ನು ಏರ್ಪಡಿಸುವುದು ಮತ್ತು ಎರಡೂ ದೇಶಗಳಲ್ಲಿ ಪ್ರವಾಸೋದ್ಯಮ ಮೇಳಗಳು ಮತ್ತು ರೋಡ್‌ಶೋಗಳಲ್ಲಿ ಭಾಗವಹಿಸುವುದನ್ನು ಒಳಗೊಂಡಿದೆ.

ರಾಜತಾಂತ್ರಿಕ ಸಂಬಂಧಗಳ ಸ್ಥಾಪನೆಯ 75ನೇ ವಾರ್ಷಿಕೋತ್ಸವ ಗುರುತಿಸಲು, ಎರಡೂ ಕಡೆಯವರು ರಾಜತಾಂತ್ರಿಕ ಮಿಷನ್‌ಗಳು ಆಯೋಜಿಸುವ ಪರಸ್ಪರ ದೇಶಗಳಲ್ಲಿ ಸಾಂಸ್ಕೃತಿಕ ಉತ್ಸವಗಳನ್ನು ನಡೆಸುತ್ತಾರೆ. ಅಂತಹ ವಿಶೇಷ ಕಾರ್ಯಕ್ರಮಗಳ ದಿನಾಂಕಗಳನ್ನು ಪರಸ್ಪರ ಸಮಾಲೋಚನೆಯಲ್ಲಿ ನಿರ್ಧರಿಸಲಾಗುತ್ತದೆ.

ಎರಡೂ ಕಡೆಯವರು ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮವನ್ನು ಉತ್ತೇಜಿಸುತ್ತಾರೆ ಮತ್ತು ಯುವ ಪೀಳಿಗೆಯೊಂದಿಗೆ ಪರಸ್ಪರ ತಿಳುವಳಿಕೆ ನಿರ್ಮಿಸುತ್ತಾರೆ.

ಭಾರತ-ಐರೋಪ್ಯ ಒಕ್ಕೂಟ

ಐರೋಪ್ಯ ಒಕ್ಕೂಟ ಮತ್ತು ಭಾರತವು ಶಾಂತಿ, ಸ್ಥಿರತೆ ಮತ್ತು ಸಮೃದ್ಧಿ ಉತ್ತೇಜಿಸುವಲ್ಲಿ ಮಹತ್ವದ ಪಾತ್ರ ಹೊಂದಿರುವ ಪ್ರಮುಖ ಅಂತಾರಾಷ್ಟ್ರೀಯ ಪಾಲುದಾರರು ಎಂದು ಗುರುತಿಸಿ, ಎರಡೂ ಕಡೆಯಿಂದ ನಡೆಯುತ್ತಿರುವ ಭಾರತ-ಐರೋಪ್ಯ ಒಕ್ಕೂಟ ವ್ಯಾಪಾರ ಮತ್ತು ಹೂಡಿಕೆ ಮಾತುಕತೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಬೆಂಬಲ ನೀಡುತ್ತಾರೆ. ಅಲ್ಲದೆ, ಭಾರತ-ಐರೋಪ್ಯ ಒಕ್ಕೂಟದ ವ್ಯಾಪಾರ ಕಾರ್ಯಾಚರಣೆ ಮತ್ತು ಟೆಕ್ನಾಲಜಿ ಕೌನ್ಸಿಲ್(ಟಿಟಿಸಿ), ಮತ್ತು ವ್ಯಾಪಾರ, ಹೊಸ ತಂತ್ರಜ್ಞಾನಗಳು ಮತ್ತು ಭದ್ರತೆಯಲ್ಲಿ ಭಾರತ-ಐರೋಪ್ಯ ಒಕ್ಕೂಟದ ಕಾರ್ಯತಂತ್ರ ಪಾಲುದಾರಿಕೆ  ಮುನ್ನಡೆಸಲು ಭಾರತ-ಐರೋಪ್ಯ ಒಕ್ಕೂಟದ ಸಂಪರ್ಕ ಪಾಲುದಾರಿಕೆಯ ಅನುಷ್ಠಾನಕ್ಕೂ ಬೆಂಬಲ ನೀಡಲಿವೆ.

ಮುಂದಿನ ದಾರಿ

ಎರಡೂ ಕಡೆಯವರು ಕ್ರಿಯಾಯೋಜನೆಯ ಅನುಷ್ಠಾನದ ನಿಯಮಿತ ಮೇಲ್ವಿಚಾರಣೆ ಖಚಿತಪಡಿಸುತ್ತಾರೆ. ವಾರ್ಷಿಕ ರಾಜಕೀಯ ಸಮಾಲೋಚನೆ ಚಟುವಟಿಕೆಗಳನ್ನು ಪರಿಶೀಲಿಸುವ ಮತ್ತು ನವೀಕರಿಸುವ ಪ್ರಾಥಮಿಕ ಕಾರ್ಯವಿಧಾನವಾಗಿದೆ. ಇನ್ನೊಂದು 5 ವರ್ಷಗಳ ಅವಧಿಗೆ ಕ್ರಿಯಾಯೋಜನೆಯ ವಿಸ್ತರಣೆಗೆ ಆಯಾ ವಿದೇಶಾಂಗ ವ್ಯವಹಾರಗಳ ಉಸ್ತುವಾರಿ ಸಚಿವರು ನಿಗಾ ವಹಿಲಿದ್ದಾರೆ.

 

*****

 



(Release ID: 2048054) Visitor Counter : 10