ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

2025 ನೇ ಸಾಲಿನ ಪದ್ಮ ಪ್ರಶಸ್ತಿಗಳ ನಾಮನಿರ್ದೇಶನಗಳು 15ನೇ ಸೆಪ್ಟೆಂಬರ್, 2024 ರವರೆಗೆ ತೆರೆದಿರುತ್ತವೆ

Posted On: 22 AUG 2024 12:38PM by PIB Bengaluru

2025ರ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಘೋಷಿಸಲಾಗುವ 2025ನೇ ಸಾಲಿನ ಪದ್ಮ ಪ್ರಶಸ್ತಿಗಳಿಗೆ ನಾಮನಿರ್ದೇಶನಗಳು/ಶಿಫಾರಸುಗಳು 01 ಮೇ 2024 ರಿಂದ ಪ್ರಾರಂಭವಾಗಿವೆ. ಪದ್ಮ ಪ್ರಶಸ್ತಿಗಳ ನಾಮನಿರ್ದೇಶನಗಳಿಗೆ 15 ಸೆಪ್ಟೆಂಬರ್, 2024 ಕೊನೆಯ ದಿನವಾಗಿದೆ. ಪದ್ಮ ಪ್ರಶಸ್ತಿಗಳಿಗೆ ನಾಮನಿರ್ದೇಶನಗಳು/ಶಿಫಾರಸುಗಳನ್ನು ರಾಷ್ಟ್ರೀಯ ಪುರಸ್ಕಾರ್ ಪೋರ್ಟಲ್‌ ನಲ್ಲಿ  (https://awards.gov.in) ಆನ್‌ಲೈನ್‌ ಮೂಲಕ ಸ್ವೀಕರಿಸಲಾಗುತ್ತದೆ.

ಪದ್ಮ ಪ್ರಶಸ್ತಿಗಳಲ್ಲಿ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಾದ ಪದ್ಮವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀ ಸೇರಿವೆ. 1954 ರಲ್ಲಿ ಸ್ಥಾಪಿಸಲಾದ ಈ ಪ್ರಶಸ್ತಿಗಳನ್ನು ಪ್ರತಿ ವರ್ಷ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಘೋಷಿಸಲಾಗುತ್ತದೆ. ಪ್ರಶಸ್ತಿಯನ್ನು 'ವಿಶಿಷ್ಟ ಕೆಲಸವನ್ನು' ಗುರುತಿಸಿ ನೀಡಲಾಗುತ್ತದೆ. ಈ ಪ್ರಶಸ್ತಿಗಳನ್ನು ಕಲೆ, ಸಾಹಿತ್ಯ ಮತ್ತು ಶಿಕ್ಷಣ, ಕ್ರೀಡೆ, ವೈದ್ಯಕೀಯ, ಸಮಾಜಕಾರ್ಯ, ವಿಜ್ಞಾನ ಮತ್ತು ಇಂಜಿನಿಯರಿಂಗ್, ಸಾರ್ವಜನಿಕ ವ್ಯವಹಾರಗಳು, ನಾಗರಿಕಸೇವೆ ವ್ಯಾಪಾರ ಮತ್ತು ಕೈಗಾರಿಕೆ ಮುಂತಾದ ಕ್ಷೇತ್ರಗಳಲ್ಲಿ ವಿಶಿಷ್ಟ ಮತ್ತು ಅಸಾಧಾರಣ ಸಾಧನೆಗಳು/ಸೇವೆಗಾಗಿ ನೀಡಲಾಗುತ್ತದೆ. ಜನಾಂಗ, ಉದ್ಯೋಗ, ಸ್ಥಾನ ಅಥವಾ ಲಿಂಗದ ಭೇದವಿಲ್ಲದೆ ಎಲ್ಲರೂ ಈ ಪ್ರಶಸ್ತಿಗಳಿಗೆ ಅರ್ಹರಾಗಿರುತ್ತಾರೆ. ವೈದ್ಯರು ಮತ್ತು ವಿಜ್ಞಾನಿಗಳನ್ನು ಹೊರತುಪಡಿಸಿ ಸಾರ್ವಜನಿಕ ಉದ್ಯಮಗಳಲ್ಲಿ ಕೆಲಸ ಮಾಡುವವರು ಸೇರಿದಂತೆ ಸರ್ಕಾರಿ ನೌಕರರು ಪದ್ಮ ಪ್ರಶಸ್ತಿಗಳಿಗೆ ಅರ್ಹರಾಗಿರುವುದಿಲ್ಲ.

ಪದ್ಮ ಪ್ರಶಸ್ತಿಗಳನ್ನು "ಜನರ ಪದ್ಮಗಳು" ಆಗಿ ಪರಿವರ್ತಿಸಲು ಸರ್ಕಾರ ಬದ್ಧವಾಗಿದೆ. ಆದ್ದರಿಂದ, ಎಲ್ಲಾ ನಾಗರಿಕರು ಸ್ವಯಂ ನಾಮನಿರ್ದೇಶನ ಸೇರಿದಂತೆ ನಾಮನಿರ್ದೇಶನಗಳನ್ನು/ಶಿಫಾರಸುಗಳನ್ನು ಮಾಡಲು ವಿನಂತಿಸಲಾಗಿದೆ. ಅವರ ಶ್ರೇಷ್ಠತೆ ಮತ್ತು ಸಾಧನೆಗಳು ನಿಜವಾಗಿಯೂ ಮನ್ನಣೆಗೆ ಅರ್ಹವಾಗಿವೆ ಮತ್ತು ಸಮಾಜಕ್ಕೆ ನಿಸ್ವಾರ್ಥ ಸೇವೆಯನ್ನು ಸಲ್ಲಿಸುತ್ತಿವೆ ಎನ್ನಿಸಿದ ಮಹಿಳೆಯರು, ಸಮಾಜದ ದುರ್ಬಲ ವರ್ಗಗಳು, ಪರಿಶಿಷ್ಟ ಜಾತಿ ಮತ್ತು ಪಂಗಡಗಳಲ್ಲಿರುವ ಪ್ರತಿಭಾವಂತ ವ್ಯಕ್ತಿಗಳನ್ನು ಗುರುತಿಸಲು ಸಂಘಟಿತ ಪ್ರಯತ್ನಗಳನ್ನು ಮಾಡಬಹುದು,

ನಾಮನಿರ್ದೇಶನಗಳು/ಶಿಫಾರಸುಗಳು ಮೇಲೆ ತಿಳಿಸಿದ ಪೋರ್ಟಲ್‌ ನಲ್ಲಿ ಲಭ್ಯವಿರುವ ಫಾರ್ಮ್ಯಾಟ್‌ನಲ್ಲಿ ನಿರ್ದಿಷ್ಟಪಡಿಸಿದ ಎಲ್ಲಾ ಸಂಬಂಧಿತ ವಿವರಗಳನ್ನು ಒಳಗೊಂಡಿರಬೇಕು, ವಿವರಣಾತ್ಮಕ ರೂಪದಲ್ಲಿ (ಗರಿಷ್ಠ 800 ಪದಗಳು) ಉಲ್ಲೇಖಗಳು ಸೇರಿದಂತೆ ಆಯಾ ಕ್ಷೇತ್ರದಲ್ಲಿ ಶಿಫಾರಸು ಮಾಡಿದ ವ್ಯಕ್ತಿಯ ನಿರ್ದಿಷ್ಟ ಮತ್ತು ಅಸಾಧಾರಣ ಸಾಧನೆಗಳು/ಸೇವೆಗಳನ್ನು ಸ್ಪಷ್ಟವಾಗಿ ಎತ್ತಿ ತೋರಿಸುವಂತಿರಬೇಕು.

ಈ ಸಂಬಂಧದ ವಿವರಗಳು ಗೃಹ ಸಚಿವಾಲಯದ ಜಾಲತಾಣ (https://mha.gov.in) ಮತ್ತು ಪದ್ಮ ಪ್ರಶಸ್ತಿಗಳ ಪೋರ್ಟಲ್‌ ನಲ್ಲಿ (https://padmaawards.gov.in) 'ಪ್ರಶಸ್ತಿಗಳು ಮತ್ತು ಪದಕಗಳು' ಶೀರ್ಷಿಕೆಯಡಿಯಲ್ಲಿ ಲಭ್ಯವಿದೆ. ಈ ಪ್ರಶಸ್ತಿಗಳಿಗೆ ಸಂಬಂಧಿಸಿದ ನಿಯಮಾವಳಿಗಳು ಮತ್ತು ನಿಯಮಗಳು ವೆಬ್‌ಸೈಟ್‌ ನಲ್ಲಿ https://padmaawards.gov.in/AboutAwards.aspx ಲಿಂಕ್‌ ನಲ್ಲಿ ಲಭ್ಯವಿದೆ.

 

*****

 


(Release ID: 2047674) Visitor Counter : 46