ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ​​​​​​​ ಶ್ರೀ ಅಮಿತ್ ಶಾ ಅವರು ಅಹಮದಾಬಾದ್‌ ನಲ್ಲಿಂದು ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಅಡಿಯಲ್ಲಿ  188 ನಿರಾಶ್ರಿತ ಸಹೋದರ-ಸಹೋದರಿಯರಿಗೆ ಪೌರತ್ವ ಪ್ರಮಾಣಪತ್ರವನ್ನು ವಿತರಿಸಿದರು


ಸಿಎಎ ಕೇವಲ ದೇಶದಲ್ಲಿ ವಾಸಿಸುವ ಲಕ್ಷಾಂತರ ಜನರಿಗೆ ಪೌರತ್ವವನ್ನು ನೀಡುವುದು ಮಾತ್ರವಲ್ಲ, ಅದು ಅವರಿಗೆ ನ್ಯಾಯ ಮತ್ತು ಅವರ ಹಕ್ಕುಗಳನ್ನು ಒದಗಿಸುತ್ತದೆ

ಮೊದಲು ನಿರಾಶ್ರಿತರು ಎಂದು ಕರೆಸಿಕೊಳ್ಳುತ್ತಿದ್ದವರು ಇಂದಿನಿಂದ ಭಾರತಮಾತೆಯ ಕುಟುಂಬವನ್ನು ಸೇರಿದ್ದಾರೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮೂರು ತಲೆಮಾರುಗಳಿಂದ ಅನ್ಯಾಯಕ್ಕೊಳಗಾಗಿದ್ದ ಲಕ್ಷಾಂತರ ನಿರಾಶ್ರಿತರಿಗೆ ನ್ಯಾಯ ಒದಗಿಸಿದ್ದಾರೆ

ಈಗ ವಿರೋಧ ಪಕ್ಷದಲ್ಲಿರುವವರು ವಿಭಜನೆಯ ಸಮಯದಲ್ಲಿ ನಿರಾಶ್ರಿತರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸಿಲ್ಲ

ತುಷ್ಟೀಕರಣ ನೀತಿಯಿಂದಾಗಿ ಕೋಟ್ಯಂತರ ನಿರಾಶ್ರಿತರ ಪೌರತ್ವವನ್ನು ಕಸಿದುಕೊಳ್ಳುವುದಕ್ಕಿಂತ ದೊಡ್ಡ ಪಾಪ ಮತ್ತೊಂದಿಲ್ಲ

ಈಗ ವಿರೋಧ ಪಕ್ಷದಲ್ಲಿರುವವರು ನುಸುಳುಕೋರರಿಗೆ ಹಕ್ಕುಗಳನ್ನು ನೀಡಿದ್ದಾರೆ, ಆದರೆ ನಿರಾಶ್ರಿತರಿಗೆ ಹಕ್ಕುಗಳನ್ನು ನಿರಾಕರಿಸಿದ್ದಾರೆ

ವಿಭಜನೆಯಾದಾಗ ಬಾಂಗ್ಲಾದೇಶದಲ್ಲಿ ಶೇ.27 ಹಿಂದೂಗಳಿದ್ದರೆ, ಇಂದು ಶೇ.9 ರಷ್ಟಿದ್ದಾರೆ

ನಿರಾಶ್ರಿತರ ಸ್ಥಿತಿಯನ್ನು ಹೊಂದಿರುವವರು ಭಯಪಡಬಾರದು, ಅವರು ಪೌರತ್ವಕ್ಕಾಗಿ ಮುಕ್ತವಾಗಿ ಅರ್ಜಿ ಸಲ್ಲಿಸಬಹುದು

Posted On: 18 AUG 2024 5:54PM by PIB Bengaluru

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಇಂದು ಗುಜರಾತ್‌ ನ ಅಹಮದಾಬಾದ್‌ ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಅಡಿಯಲ್ಲಿ 188 ನಿರಾಶ್ರಿತ ಸಹೋದರಿಯರು-ಸಹೋದರರಿಗೆ ಪೌರತ್ವ ಪ್ರಮಾಣಪತ್ರಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಗುಜರಾತ್ ಮುಖ್ಯಮಂತ್ರಿ ಶ್ರೀ ಭೂಪೇಂದ್ರ ಪಟೇಲ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಶ್ರೀ ಅಮಿತ್ ಶಾ ಅವರು ತಮ್ಮ ಭಾಷಣದಲ್ಲಿ, ಸಿಎಎ ಕೇವಲ ದೇಶದಲ್ಲಿ ನೆಲೆಸಿರುವ ಲಕ್ಷಾಂತರ ಜನರಿಗೆ ಪೌರತ್ವವನ್ನು ನೀಡುವುದು ಮಾತ್ರವಲ್ಲ, ಲಕ್ಷಾಂತರ ನಿರಾಶ್ರಿತರಿಗೆ ನ್ಯಾಯ ಮತ್ತು ಹಕ್ಕುಗಳನ್ನು ನೀಡುತ್ತದೆ ಎಂದು ಹೇಳಿದರು. ಹಿಂದಿನ ಸರಕಾರಗಳ ತುಷ್ಟೀಕರಣ ನೀತಿಯಿಂದ 1947ರಿಂದ 2014ರವರೆಗೆ ದೇಶದಲ್ಲಿ ಆಶ್ರಯ ಪಡೆದಿರುವ ಜನತೆಗೆ ಹಕ್ಕು, ನ್ಯಾಯ ಸಿಕ್ಕಿಲ್ಲ ಎಂದರು. ಈ ಜನರು ನೆರೆಯ ದೇಶಗಳಲ್ಲಿ ಮಾತ್ರವಲ್ಲದೆ ಇಲ್ಲಿಯೂ ನಿಂದನೆಯನ್ನು ಸಹಿಸಿಕೊಳ್ಳಬೇಕಾಯಿತು ಎಂದು ಅವರು ಹೇಳಿದರು. ಈ ಲಕ್ಷಾಂತರ ಜನರು ಮೂರು ತಲೆಮಾರುಗಳಿಂದ ನ್ಯಾಯಕ್ಕಾಗಿ ಹಾತೊರೆಯುತ್ತಿದ್ದರು, ಆದರೆ ಪ್ರತಿಪಕ್ಷಗಳ ತುಷ್ಟೀಕರಣ ನೀತಿಯಿಂದಾಗಿ ಅವರಿಗೆ ನ್ಯಾಯ ಸಿಕ್ಕಿಲ್ಲ ಎಂದು ಶ್ರೀ ಶಾ ಹೇಳಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಈ ಲಕ್ಷಾಂತರ ಜನರಿಗೆ ನ್ಯಾಯ ಒದಗಿಸಿದ್ದಾರೆ ಎಂದು ಅವರು ಹೇಳಿದರು.

ಸ್ವಾತಂತ್ರ್ಯದ ಸಂದರ್ಭದಲ್ಲಿ ಭಾರತ ಧರ್ಮದ ಆಧಾರದ ಮೇಲೆ ವಿಭಜನೆಯಾಗಿತ್ತು ಮತ್ತು ಆ ಸಮಯದಲ್ಲಿ ತೀವ್ರ ಗಲಭೆಗಳು ನಡೆದಿದ್ದವು ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ವಾಸಿಸುತ್ತಿರುವ ಕೋಟ್ಯಂತರ ಹಿಂದೂಗಳು, ಬೌದ್ಧರು, ಸಿಖ್ಖರು, ಜೈನರು ಮತ್ತು ಕ್ರಿಶ್ಚಿಯನ್ನರು ತಮ್ಮ ನೋವುಗಳನ್ನು ಮರೆಯಲು ಸಾಧ್ಯವಿಲ್ಲ ಎಂದು ಅವರು ಹೇಳಿದರು. ಈಗ ವಿರೋಧ ಪಕ್ಷದಲ್ಲಿರುವವರು ನೆರೆಯ ದೇಶಗಳಿಂದ ಬರುವ ಹಿಂದೂ, ಬೌದ್ಧ, ಸಿಖ್, ಜೈನ ಮತ್ತು ಕ್ರಿಶ್ಚಿಯನ್ ಸಮುದಾಯದ ಜನರಿಗೆ ಭಾರತದ ಪೌರತ್ವವನ್ನು ನೀಡಲಾಗುವುದು ಎಂದು ಭರವಸೆ ನೀಡಿದ್ದರು. ಚುನಾವಣೆ ಬರುವ ವೇಳೆಗೆ ಅಂದಿನ ಸರ್ಕಾರದ ನಾಯಕರು ತಮ್ಮ ಭರವಸೆಗಳಿಗೆ ಹಿಂದೆ ಸರಿದವು, 1947, 1948 ಮತ್ತು 1950ರಲ್ಲಿ ನೀಡಿದ್ದ ಆಶ್ವಾಸನೆಗಳು ಮರೆತು ಹೋದವು ಎಂದು ಶ್ರೀ ಶಾ ಹೇಳಿದರು. ತಮ್ಮ ಮತ ಬ್ಯಾಂಕ್‌ ಮುನಿಸಿಕೊಳ್ಳಬಹುದು ಎಂಬ ಕಾರಣಕ್ಕೆ ಆಗಿನ ಸರ್ಕಾರ ಈ ಜನರಿಗೆ ಪೌರತ್ವ ನೀಡಲಿಲ್ಲ ಎಂದು ಅವರು ಹೇಳಿದರು. ಅವರ ತುಷ್ಟೀಕರಣ ನೀತಿಯಿಂದಾಗಿ ಲಕ್ಷಾಂತರ ಜನರು ಪೌರತ್ವದಿಂದ ವಂಚಿತರಾಗಿದ್ದಾರೆ, ಇದಕ್ಕಿಂತ ದೊಡ್ಡ ಪಾಪ ಇನ್ನೊಂದಿಲ್ಲ ಎಂದು ಅವರು ಹೇಳಿದರು.

ಕೋಟ್ಯಂತರ ಜನರು ಓಡಿಹೋದರು ಮತ್ತು ನೋವು ಅನುಭವಿಸಿದರು, ಅನೇಕರು ತಮ್ಮ ಕುಟುಂಬ ಮತ್ತು ಆಸ್ತಿಯನ್ನು ಕಳೆದುಕೊಂಡರು, ಆದರೆ ಇಲ್ಲಿ ಭಾರತದಲ್ಲಿ ಅವರಿಗೆ ಪೌರತ್ವವೂ ಸಿಗಲಿಲ್ಲ ಎಂದು ಶ್ರೀ ಅಮಿತ್ ಶಾ ಹೇಳಿದರು. 1947ರಿಂದ 2019 ಹಾಗೂ 2019ರಿಂದ 2024ರವರೆಗಿನ ಪಯಣ ಈ ದೇಶದ ಇತಿಹಾಸದಲ್ಲಿ ಸದಾ ನೆನಪಿನಲ್ಲಿ ಉಳಿಯುತ್ತದೆ ಎಂದರು. ಆತ್ಮಗೌರವ ಬಯಸಿ  ಭಾರತಕ್ಕೆ ಬಂದಿರುವ ನೆರೆಯ ದೇಶಗಳವರಿಗೆ ಏಕೆ ಪೌರತ್ವ ನೀಡಬಾರದು ಎಂದು ಅವರು ಪ್ರಶ್ನಿಸಿದರು. ಒಂದು ಕಡೆ, ಪ್ರತಿಪಕ್ಷಗಳು ಗಡಿಯಾಚೆಯಿಂದ ನುಸುಳುವವರಿಗೆ ಭಾರತದಲ್ಲಿ ಕೋಟ್ಯಂತರ ಜನರನ್ನು ಅಕ್ರಮವಾಗಿ ನಾಗರಿಕರನ್ನಾಗಿಸಿದವು, ಮತ್ತೊಂದೆಡೆ, ಕಾನೂನನ್ನು ಅನುಸರಿಸುವ ಮತ್ತು ಪಾಲಿಸುವವರಿಗೆ ಅವರ ಪೌರತ್ವಕ್ಕೆ ಯಾವುದೇ ಕಾನೂನು ಅವಕಾಶವಿಲ್ಲ ಎಂದು ಹೇಳಿದರು.

ಕಾನೂನು ಜನರಿಗಾಗಿಯೇ ಹೊರತು ಕಾನೂನಿಗಾಗಿ ಜನರಿಗಲ್ಲ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ನಾವು 2014 ರಲ್ಲಿ ಸಿಎಎ ತರುತ್ತೇವೆ ಎಂದು ಭರವಸೆ ನೀಡಿದ್ದೆವು ಮತ್ತು 2019 ರಲ್ಲಿ ಮೋದಿ ಸರ್ಕಾರ ಈ ಕಾನೂನನ್ನು ತಂದಿದೆ ಎಂದು ಅವರು ಹೇಳಿದರು. ಈ ಕಾನೂನಿನ ಮೂಲಕ ನ್ಯಾಯ ಸಿಗದ ಕೋಟ್ಯಂತರ ಹಿಂದೂ, ಜೈನ, ಬೌದ್ಧ, ಸಿಖ್ ಧರ್ಮೀಯರಿಗೆ ನ್ಯಾಯ ಸಿಗಲಾರಂಭಿಸಿದೆ ಎಂದರು. ಈ ಕಾನೂನನ್ನು 2019 ರಲ್ಲಿ ಅಂಗೀಕರಿಸಲಾಯಿತು ಆದರೆ ಅದರ ನಂತರವೂ ಜನರನ್ನು ಪ್ರಚೋದಿಸಲಾಯಿತು ಮತ್ತು ಇದು ಮುಸ್ಲಿಮರ ಪೌರತ್ವವನ್ನು ಕಸಿದುಕೊಳ್ಳುತ್ತದೆ ಎಂದು ಹೇಳಲಾಯಿತು. ಈ ಕಾನೂನಿನಲ್ಲಿ ಯಾರ ಪೌರತ್ವವನ್ನು ಕಸಿದುಕೊಳ್ಳಲು ಅವಕಾಶವಿಲ್ಲ ಮತ್ತು ಇದು ಪೌರತ್ವ ನೀಡುವ ಕಾನೂನು ಎಂದು ಕೇಂದ್ರ ಗೃಹ ಸಚಿವರು ಸ್ಪಷ್ಟಪಡಿಸಿದರು. ನಮ್ಮದೇ ದೇಶದ ಜನರು ನಮ್ಮದೇ ದೇಶದಲ್ಲಿ ನಿರ್ಗತಿಕರಾಗಿ ಬದುಕುತ್ತಿದ್ದಾರೆ ಎಂದ ಅವರು, ಇದಕ್ಕಿಂತ ದುರ್ದೈವ ಮತ್ತು ವಿಪರ್ಯಾಸ ಮತ್ತೇನು? ತುಷ್ಟೀಕರಣ ನೀತಿಯಿಂದ ಹಲವು ವರ್ಷಗಳಿಂದ ಏನನ್ನು ಮಾಡಲಾಗಲಿಲ್ಲವೋ ಅದನ್ನು ಪ್ರಧಾನಿ ಮೋದಿಯವರು ಮಾಡಿ 2019ರಲ್ಲಿ ಈ ಕಾನೂನನ್ನು ತಂದರು ಎಂದು ಶ್ರೀ ಶಾ ಹೇಳಿದರು.

2019 ರಲ್ಲಿ ಕಾನೂನನ್ನು ಅಂಗೀಕರಿಸಿದ ನಂತರವೂ ಈ ಕುಟುಂಬಗಳಿಗೆ 2024 ರವರೆಗೆ ಪೌರತ್ವ ಸಿಕ್ಕಿಲ್ಲ, ಏಕೆಂದರೆ ದೇಶದಲ್ಲಿ ಗಲಭೆಗಳನ್ನು ಪ್ರಚೋದಿಸಲಾಯಿತು ಮತ್ತು ಅಲ್ಪಸಂಖ್ಯಾತರನ್ನು ಪ್ರಚೋದಿಸಲಾಯಿತು ಎಂದು ಶ್ರೀ ಅಮಿತ್ ಶಾ ಹೇಳಿದರು. ಸಿಎಎ ಬಗ್ಗೆ ದೇಶದಲ್ಲಿ ವದಂತಿಗಳನ್ನು ಹಬ್ಬಿಸಲಾಯಿತು ಎಂದು ಅವರು ಹೇಳಿದರು. ಈ ಕಾನೂನು ಯಾರ ಪೌರತ್ವವನ್ನೂ ಕಸಿದುಕೊಳ್ಳುವುದಿಲ್ಲ ಮತ್ತು ಹಿಂದೂ, ಜೈನ, ಸಿಖ್, ಬೌದ್ಧ ನಿರಾಶ್ರಿತರಿಗೆ ಪೌರತ್ವ ನೀಡುವ ಕಾನೂನಾಗಿದೆ, ಇಂದಿಗೂ ಕೆಲವು ರಾಜ್ಯ ಸರ್ಕಾರಗಳು ಜನರನ್ನು ದಾರಿ ತಪ್ಪಿಸುತ್ತಿವೆ ಎಂದು ಶ್ರೀ ಶಾ ಹೇಳಿದರು. ದೇಶಾದ್ಯಂತ ನಿರಾಶ್ರಿತರು ಮುಕ್ತವಾಗಿ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಿ ಎಂದು ಅವರು ಮನವಿ ಮಾಡಿದರು. ಇದು ಅವರ ಉದ್ಯೋಗಗಳು, ಮನೆಗಳು ಇತ್ಯಾದಿಗಳನ್ನು ಮೊದಲಿನಂತೆಯೇ ಉಳಿಸುತ್ತದೆ ಎಂದು ಅವರು ಹೇಳಿದರು.

ಈ ಕಾನೂನಿನಲ್ಲಿ ಯಾವುದೇ ಕ್ರಿಮಿನಲ್ ಮೊಕದ್ದಮೆಗೆ ಅವಕಾಶವಿಲ್ಲ ಮತ್ತು ಎಲ್ಲರಿಗೂ ಕ್ಷಮಾದಾನ ನೀಡಲಾಗಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಪೌರತ್ವ ನೀಡುವಲ್ಲಿ ವಿಳಂಬವಾಗುತ್ತಿರುವುದು ಸರಕಾರದಿಂದ ಹೊರತು ಜನರಿಂದಲ್ಲ ಎಂಬ ಕಾರಣಕ್ಕೆ ಹೀಗೆ ಮಾಡಲಾಗಿದೆ ಎಂದು ಅವರು ಹೇಳಿದರು. ಈ ಕಾನೂನು ನ್ಯಾಯ ಮತ್ತು ಗೌರವವನ್ನು ನೀಡುವ ಕೆಲಸ ಮಾಡುತ್ತದೆ ಮತ್ತು ನಿರಾಶ್ರಿತರ ಮೇಲೆ ನಡೆದ ದೌರ್ಜನ್ಯಕ್ಕೆ ಪ್ರಾಯಶ್ಚಿತ್ತವಾಗಲಿದೆ ಎಂದು ಅವರು ಹೇಳಿದರು.

ದೇಶ ವಿಭಜನೆಯಾದಾಗ ಬಾಂಗ್ಲಾದೇಶದಲ್ಲಿ ಶೇಕಡಾ 27 ರಷ್ಟು ಹಿಂದೂಗಳಿದ್ದರು, ಇಂದು ಕೇವಲ ಶೇಕಡಾ 9 ರಷ್ಟು ಮಾತ್ರ ಉಳಿದಿದ್ದಾರೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಉಳಿದ ಹಿಂದೂಗಳು ಎಲ್ಲಿಗೆ ಹೋದರು, ಅವರನ್ನು ಬಲವಂತವಾಗಿ ಮತಾಂತರ ಮಾಡಲಾಗಿದೆ ಎಂದು ಅವರು ಹೇಳಿದರು. ನಮ್ಮ ಆಶ್ರಯಕ್ಕೆ ಬಂದ ಜನರು ಸ್ವಾಭಿಮಾನದ ಜೀವನವನ್ನು ಹೊಂದಲು ಅರ್ಹರಾಗಿದ್ದಾರೆ ಮತ್ತು ಅವರ ಇಚ್ಛೆಯಂತೆ ಅವರ ಧರ್ಮವನ್ನು ಮುಂದುವರೆಸುತ್ತಾರೆ ಎಂದು ಶ್ರೀ ಅಮಿತ್ ಶಾ ಹೇಳಿದರು. ನೆರೆಹೊರೆಯವರು ತಮ್ಮ ದೇಶದಲ್ಲಿ ಗೌರವಯುತವಾಗಿ ಬದುಕಲು ಸಾಧ್ಯವಾಗದಿದ್ದರೆ ಮತ್ತು ನಮ್ಮ ಆಶ್ರಯಕ್ಕೆ ಬಂದರೆ ನಾವು ಮೂಕ ಪ್ರೇಕ್ಷಕರಾಗಿ ಉಳಿಯಲು ಸಾಧ್ಯವಿಲ್ಲ, ಇದು ನರೇಂದ್ರ ಮೋದಿಯವರ ಸರ್ಕಾರವಾಗಿದ್ದು, ಈ ಸರ್ಕಾರದಲ್ಲಿ ಈ ಜನರಿಗೆ ಖಂಡಿತ ನ್ಯಾಯ ಸಿಗುತ್ತದೆ ಎಂದು ಅವರು ಹೇಳಿದರು.

ಈ ಕಾನೂನನ್ನು ತರಲು ನಿರಾಶ್ರಿತರು ಬಹಳ ದಿನಗಳಿಂದ ಒತ್ತಾಯಿಸುತ್ತಿದ್ದರು ಮತ್ತು ಪ್ರಧಾನಿ ಮೋದಿ ಅವರು 2019 ರಲ್ಲಿ ಬಲವಾದ ನಿರ್ಧಾರವನ್ನು ತೆಗೆದುಕೊಂಡು ಕಾನೂನನ್ನು ಅಂಗೀಕರಿಸಿದರು ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಈ ಕಾನೂನು ಜಾರಿಯಾದ ನಂತರ ಕೆಲವೆಡೆ ಹಿಂಸಾತ್ಮಕ ಘಟನೆಗಳು ನಡೆದಿವೆ, ಆದರೆ ಅಂತಿಮವಾಗಿ 2024ರ ಲೋಕಸಭೆ ಚುನಾವಣೆಗೂ ಮುನ್ನ ಅರ್ಜಿದಾರರಿಗೆ ಪ್ರಮಾಣಪತ್ರದ ಜತೆಗೆ ಪೌರತ್ವದ ಹಕ್ಕು ನೀಡಲು ಅಗತ್ಯ ನಿಯಮಗಳನ್ನು ಹೊರತರಲಾಯಿತು ಎಂದರು.

2014 ರಲ್ಲಿ ಶ್ರೀ ನರೇಂದ್ರ ಮೋದಿಯವರು ಈ ದೇಶದ ಪ್ರಜಾಪ್ರಭುತ್ವವು ಸ್ವಜನಪಕ್ಷಪಾತ, ಜಾತಿವಾದ, ತುಷ್ಟೀಕರಣ ಮತ್ತು ಭ್ರಷ್ಟಾಚಾರ ಎಂಬ ನಾಲ್ಕು ಅನಿಷ್ಟಗಳಿಂದ ಬಳಲುತ್ತಿದೆ ಎಂದು ಹೇಳಿದ್ದರು. ಕಳೆದ 10 ವರ್ಷಗಳಲ್ಲಿ ಈ ನಾಲ್ಕು ಅನಿಷ್ಟಗಳನ್ನು ಕಿತ್ತೊಗೆಯಲು ಮೋದಿಯವರು ಅವಿರತವಾಗಿ ಶ್ರಮಿಸಿದ್ದಾರೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಈ ವರ್ಷದ ಆಗಸ್ಟ್ 15 ರಂದು, ಪ್ರಧಾನಿ ಮೋದಿ ಅವರು ವಂಶಪಾರಂಪರ್ಯ ರಾಜಕಾರಣದ ವಿರುದ್ಧ ಮನವಿ ಮಾಡಿದ್ದಾರೆ, ತಮ್ಮ ಕುಟುಂಬ ಸದಸ್ಯರು ರಾಜಕೀಯದಲ್ಲಿಲ್ಲದ 1 ಲಕ್ಷ ಯುವಕರು ರಾಜಕೀಯಕ್ಕೆ ಸೇರುವಂತೆ ಕೇಳಿಕೊಂಡಿದ್ದಾರೆ ಎಂದರು. ಮೋದಿಯವರೂ ಭ್ರಷ್ಟಾಚಾರದ ವಿರುದ್ಧ ಹೋರಾಡಿದ್ದಾರೆ ಎಂದು ಅವರು ಹೇಳಿದರು. ಜಾತೀಯತೆಯ ಪಿಡುಗನ್ನು ಕೊನೆಗೊಳಿಸಲು ಮೋದಿಯವರು ಬಡವರು, ಮಹಿಳೆಯರು, ಯುವಕರು ಮತ್ತು ರೈತರರನ್ನ ನಾಲ್ಕು ಜಾತಿಗಳು ಎಂದು ಘೋಷಿಸಿದರು ಎಂದು ಅವರು ಹೇಳಿದರು. ಪ್ರಧಾನಿ ಮೋದಿಯವರು ಹೊಸ ರೀತಿಯ ರಾಜಕೀಯ ತತ್ವವನ್ನು ದೇಶದ ಮುಂದಿಟ್ಟಿದ್ದಾರೆ ಮತ್ತು ತುಷ್ಟೀಕರಣದ ರಾಜಕೀಯವನ್ನು ಕೊನೆಗೊಳಿಸಿದ್ದಾರೆ ಎಂದು ಶ್ರೀ ಶಾ ಹೇಳಿದರು.

ಈ ದೇಶದ ಹಲವು ಸಮಸ್ಯೆಗಳು ದಶಕಗಳಿಂದ ನನೆಗುದಿಗೆ ಬಿದ್ದಿದ್ದವು ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಉದಾಹರಣೆಗೆ, 550 ವರ್ಷಗಳ ನಂತರ ಅಯೋಧ್ಯೆಯಲ್ಲಿ ಭವ್ಯವಾದ ರಾಮಮಂದಿರವನ್ನು ನಿರ್ಮಿಸುವ ಕೆಲಸವನ್ನು ಮಾಡಿದ್ದು ಮೋದಿಯವರು. ಅದೇ ರೀತಿ ಔರಂಗಜೇಬನಿಂದ ಧ್ವಂಸಗೊಂಡ ಕಾಶಿ ವಿಶ್ವನಾಥ ದೇಗುಲವನ್ನು ಪುನರ್ ನಿರ್ಮಾಣ ಮಾಡಲಾಗಿದೆ, ಮೊಹಮ್ಮದ್ ಬೇಗಡನಿಂದ ಧ್ವಂಸಗೊಂಡ ಪಾವಗಡದ ಶಕ್ತಿಪೀಠವೂ ಜೀರ್ಣೋದ್ಧಾರಗೊಂಡಿದೆ. ಭಾರತದಲ್ಲಿ ತ್ರಿವಳಿ ತಲಾಖ್ ಅನ್ನು ಕೊನೆಗಾಣಿಸುವ ಕೆಲಸವನ್ನು ನರೇಂದ್ರ ಮೋದಿಯವರು ಮಾಡಿದ್ದಾರೆ ಎಂದು ಅವರು ಹೇಳಿದರು. ಭಯೋತ್ಪಾದಕ ಕಾರ್ಖಾನೆಗಳ ಹುಟ್ಟಿಗೆ ಕಾರಣವಾದ ಮತ್ತು ಅವು ಕಾರ್ಯನಿರ್ವಹಿಸಲು ಮುಖ್ಯ ಕಾರಣವಾದ ಚಿಂತನೆಯನ್ನು ಪೋಷಿಸಿದ 370 ನೇ ವಿಧಿಯನ್ನು ಪ್ರಧಾನಿ ಮೋದಿಯವರು ರದ್ದುಗೊಳಿಸಿದರು ಎಂದು ಶ್ರೀ ಶಾ ಹೇಳಿದರು. ಅದೇ ರೀತಿ, ಪೌರತ್ವ ಕಾನೂನಿಗೆ ತಿದ್ದುಪಡಿಯನ್ನು ಶ್ರೀ ನರೇಂದ್ರ ಮೋದಿಯವರು ತಂದರು, ಆ ಮೂಲಕ ತಮ್ಮ ಹಕ್ಕುಗಳಿಂದ ವಂಚಿತರಾದ ಕೋಟ್ಯಂತರ ಹಿಂದೂ, ಸಿಖ್, ಬೌದ್ಧ, ಜೈನ ಸಹೋದರರಿಗೆ ನ್ಯಾಯವನ್ನು ನೀಡಲಾಯಿತು ಎಂದು ಅವರು ಹೇಳಿದರು.

ವಿರೋಧ ಪಕ್ಷಗಳು ನಿರಾಶ್ರಿತರನ್ನು ದಾರಿತಪ್ಪಿಸಲು ಪ್ರಯತ್ನಿಸುತ್ತವೆ, ಆದರೆ ಅವರು ಭಯಪಡಬಾರದು ಎಂದು ಶ್ರೀ ಅಮಿತ್ ಶಾ ದೇಶಾದ್ಯಂತದ ನಿರಾಶ್ರಿತರಿಗೆ ಮನವಿ ಮಾಡಿದರು. ಅಲ್ಪಸಂಖ್ಯಾತರ ದಿಕ್ಕು ತಪ್ಪಿಸುವವರು ಅವರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂಬುದನ್ನು ಅರಿಯಬೇಕು ಎಂದರು. ಈ ಕಾನೂನನ್ನು ತರಲು ಅವರಿಗೆ ಧೈರ್ಯವಿರಲಿಲ್ಲ, ಆದರೆ ಈಗ ಕನಿಷ್ಠ ಅದನ್ನು ಜಾರಿಗೆ ತರಲು ಮೋದಿ ಸರ್ಕಾರವನ್ನು ಬೆಂಬಲಿಸಬೇಕು ಎಂದು ಪ್ರತಿಪಕ್ಷಗಳಿಗೆ ಶ್ರೀ ಅಮಿತ್‌ ಶಾ ಹೇಳಿದರು.

 

*****

 


(Release ID: 2046512) Visitor Counter : 68