ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಕೃಷಿ ಅರ್ಥಶಾಸ್ತ್ರಜ್ಞರ ಅಂತಾರಾಷ್ಟ್ರೀಯ ಸಮ್ಮೇಳನದ ಉದ್ಘಾಟನಾ ಸಮಾರಂಭ ಉದ್ದೇಶಿಸಿ ಪ್ರಧಾನ ಮಂತ್ರಿ ಅವರ ಭಾಷಣ

Posted On: 03 AUG 2024 12:03PM by PIB Bengaluru

ಕೃಷಿ ಮತ್ತು ರೈತರ ಕಲ್ಯಾಣ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಜಿ, ಕೃಷಿ ಅರ್ಥಶಾಸ್ತ್ರದ ಅಂತಾರಾಷ್ಟ್ರೀಯ ಸಮ್ಮೇಳನದ ಅಧ್ಯಕ್ಷರಾದ ಡಾ. ಮತೀನ್ ಖೈಮ್ ಜಿ, ನೀತಿ ಆಯೋಗದ ಸದಸ್ಯ ಶ್ರೀ ರಮೇಶ್ ಜಿ, ಭಾರತ ಮತ್ತು ಇತರೆ ದೇಶಗಳ ಕೃಷಿ ವಿಜ್ಞಾನಿಗಳೆ, ವಿವಿಧ ವಿಶ್ವವಿದ್ಯಾಲಯಗಳ ಸಂಶೋಧನೆಯಲ್ಲಿ ತೊಡಗಿರುವ ನಮ್ಮೆಲ್ಲಾ ಸಹೋದ್ಯೋಗಿಗಳೆ, ಕೃಷಿ ಕ್ಷೇತ್ರದ ತಜ್ಞರು ಮತ್ತು ಪಾಲುದಾರರೆ, ಮಹಿಳೆಯರು ಮತ್ತು ಮಹನೀಯರೆ,

65 ಸುದೀರ್ಘ ವರ್ಷಗಳ ನಂತರ ಭಾರತದಲ್ಲಿ ಮತ್ತೆ ಐಸಿಎಇ ಸಮ್ಮೇಳನ ನಡೆಯುತ್ತಿರುವುದು ಸಂತಸ ತಂದಿದೆ. ನೀವು ವಿಶ್ವದ ನಾನಾ ದೇಶಗಳಿಂದ ಭಾರತಕ್ಕೆ ಬಂದಿದ್ದೀರಿ. ಭಾರತದ 120 ದಶಲಕ್ಷ ರೈತರ ಪರವಾಗಿ ನಾನು ನಿಮ್ಮನ್ನು ಸ್ವಾಗತಿಸುತ್ತೇನೆ. ಭಾರತದ 30 ದಶಲಕ್ಷ ರೈತ ಮಹಿಳೆಯರ ಪರವಾಗಿ ನಾನು ನಿಮ್ಮನ್ನು ಸ್ವಾಗತಿಸುತ್ತೇನೆ. ದೇಶದ 30 ದಶಲಕ್ಷ ಮೀನುಗಾರರ ಪರವಾಗಿ ನಾನು ನಿಮ್ಮನ್ನು ಸ್ವಾಗತಿಸುತ್ತೇನೆ. ದೇಶದ 80 ದಶಲಕ್ಷಕ್ಕೂ ಹೆಚ್ಚು ಹೈನುಗಾರರ ಪರವಾಗಿ ನಾನು ನಿಮ್ಮನ್ನು ಸ್ವಾಗತಿಸುತ್ತೇನೆ. ನೀವು 550 ದಶಲಕ್ಷ ಪ್ರಾಣಿಗಳನ್ನು ಹೊಂದಿರುವ ದೇಶದಲ್ಲಿದ್ದೀರಿ. ಕೃಷಿ ಮತ್ತು ಪ್ರಾಣಿ-ಪ್ರೀತಿಯ ದೇಶವಾದ ಭಾರತಕ್ಕೆ ನಾನು ನಿಮ್ಮೆಲ್ಲರನ್ನು ಸ್ವಾಗತಿಸುತ್ತೇನೆ.

ಸ್ನೇಹಿತರೆ,

ಭಾರತವು ಕೃಷಿ ಮತ್ತು ಆಹಾರದ ಬಗ್ಗೆ ಹೊಂದಿರುವ ನಮ್ಮ ನಂಬಿಕೆಗಳು ಮತ್ತು ಅನುಭವಗಳಷ್ಟೇ ಪ್ರಾಚೀನವಾದುದು. ಭಾರತೀಯ ಕೃಷಿ ಸಂಪ್ರದಾಯದಲ್ಲಿ ವಿಜ್ಞಾನ ಮತ್ತು ತರ್ಕಶಾಸ್ತ್ರಕ್ಕೆ ಆದ್ಯತೆ ನೀಡಲಾಗಿದೆ. ಇಂದು ಆಹಾರ ಮತ್ತು ಪೋಷಣೆಯ ಬಗ್ಗೆ ವಿಶ್ವಾದ್ಯಂತ ತುಂಬಾ ಕಾಳಜಿ ಇದೆ. ಆದರೆ ಸಾವಿರಾರು ವರ್ಷಗಳ ಹಿಂದೆಯೇ ನಮ್ಮ ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ - ಅನ್ನಂ ಹಿ ಭೂತಾನಾಂ ಜ್ಯೇಷ್ಠಮ್, ತಸ್ಮಾತ್ ಸರ್ವೌಷಧಂ ಉಚ್ಯತೇ। ಇದರರ್ಥ, ಎಲ್ಲಾ ಪದಾರ್ಥಗಳ ಪೈಕಿ ಆಹಾರವೇ ಅತ್ಯುತ್ತಮ. ಆದ್ದರಿಂದ, ಆಹಾರವನ್ನು ಎಲ್ಲಾ ಔಷಧಿಗಳ ಮೂಲವೆಂದು ಪರಿಗಣಿಸಲಾಗಿದೆ. ನಮ್ಮ ಆಹಾರವನ್ನು ಔಷಧೀಯ ಗುಣಗಳೊಂದಿಗೆ ಬಳಸುವ ಸಂಪೂರ್ಣ ಆಯುರ್ವೇದ ವಿಜ್ಞಾನವನ್ನು ನಾವು ಹೊಂದಿದ್ದೇವೆ. ಈ ಸಾಂಪ್ರದಾಯಿಕ ಜ್ಞಾನ ವ್ಯವಸ್ಥೆಯು ಭಾರತದ ಸಾಮಾಜಿಕ ಜೀವನದ ಒಂದು ಭಾಗವೇ ಆಗಿದೆ.

ಸ್ನೇಹಿತರೆ,

ಇದು ಜೀವನ ಮತ್ತು ಆಹಾರದ ಬಗ್ಗೆ ಪ್ರಾಚೀನ ಭಾರತೀಯ ಬುದ್ಧಿವಂತಿಕೆಯಾಗಿದೆ. ಭಾರತದಲ್ಲಿ ಕೃಷಿಯು ಈ ಬುದ್ಧಿವಂತಿಕೆಯ ಆಧಾರದ ಮೇಲೆ ಅಭಿವೃದ್ಧಿಗೊಂಡಿದೆ. ಸುಮಾರು 2,000 ವರ್ಷಗಳ ಹಿಂದೆ, ‘ಕೃಷಿ ಪರಾಶರ’ ಎಂಬ ಗ್ರಂಥವನ್ನು ಭಾರತದಲ್ಲಿ ರಚಿಸಲಾಗಿದೆ, ಇದು ಎಲ್ಲಾ ಮಾನವ ಇತಿಹಾಸದ ಪರಂಪರೆಯಾಗಿದೆ. ಇದು ವೈಜ್ಞಾನಿಕ ಕೃಷಿಯ ಬಗ್ಗೆ ಸಮಗ್ರ ದಾಖಲೆಯಾಗಿದೆ, ಅದರ ಅನುವಾದ ಆವೃತ್ತಿಯೂ ಲಭ್ಯವಿದೆ. ಈ ಗ್ರಂಥವು ಕೃಷಿಯ ಮೇಲೆ ಆಕಾಶಕಾಯಗಳ ಪ್ರಭಾವ, ಮೋಡಗಳ ವಿಧಗಳು, ಮಳೆಯನ್ನು ಅಳೆಯುವ ಮತ್ತು ಮುನ್ಸೂಚಿಸುವ ವಿಧಾನಗಳು, ಮಳೆನೀರು ಕೊಯ್ಲು, ಸಾವಯವ ಗೊಬ್ಬರ, ಜಾನುವಾರು ಆರೈಕೆ, ಬೀಜ ರಕ್ಷಣೆ ಮತ್ತು ಸಂಗ್ರಹಣೆಯಂತಹ ವಿವಿಧ ವಿಷಯಗಳನ್ನು ವಿವರಿಸುತ್ತದೆ. ಈ ಪರಂಪರೆಯನ್ನು ಮುಂದುವರೆಸುತ್ತಾ, ಭಾರತದಲ್ಲಿ ಕೃಷಿಗೆ ಸಂಬಂಧಿಸಿದ ಶಿಕ್ಷಣ ಮತ್ತು ಸಂಶೋಧನೆಯ ಬಲವಾದ ಪರಿಸರ ವ್ಯವಸ್ಥೆಯನ್ನು ಸ್ಥಾಪಿಸಲಾಗಿದೆ. ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರಿಸರ್ಚ್(ಭಾರತೀಯ ಕೃಷಿ ಸಂಶೋಧನಾ ಮಂಡಳಿ) 100ಕ್ಕೂ ಹೆಚ್ಚು ಸಂಶೋಧನಾ ಸಂಸ್ಥೆಗಳನ್ನು ಹೊಂದಿದೆ. ಕೃಷಿ ಮತ್ತು ಸಂಬಂಧಿತ ವಿಷಯಗಳ ಅಧ್ಯಯನಕ್ಕಾಗಿ ಭಾರತದಲ್ಲಿ 500ಕ್ಕೂ ಹೆಚ್ಚು ಕಾಲೇಜುಗಳಿವೆ. ಭಾರತವು 700ಕ್ಕೂ ಹೆಚ್ಚಿನ ಕೃಷಿ ವಿಜ್ಞಾನ ಕೇಂದ್ರಗಳನ್ನು(ಕೃಷಿ ವಿಜ್ಞಾನ ಕೇಂದ್ರಗಳು) ಹೊಂದಿದ್ದು, ಅವು ರೈತರಿಗೆ ಹೊಸ ತಂತ್ರಜ್ಞಾನ ತಲುಪಿಸಲು ಸಹಾಯ ಮಾಡುತ್ತಿವೆ.

ಸ್ನೇಹಿತರೆ,

ಭಾರತೀಯ ಕೃಷಿಯ ಇನ್ನೊಂದು ವಿಶೇಷತೆ ಏನೆಂದರೆ, ನಾವು ಇನ್ನೂ 6 ಋತುಗಳನ್ನು ಪರಿಗಣಿಸಿ ಎಲ್ಲವನ್ನೂ ಯೋಜಿಸುತ್ತಿದ್ದೇವೆ. ನಮ್ಮ ದೇಶವು 15 ಕೃಷಿ-ಹವಾಮಾನ ವಲಯಗಳಲ್ಲಿ ತನ್ನದೇ ಆದ ವಿಶಿಷ್ಟ ಲಕ್ಷಣಗಳನ್ನು ಹೊಂದಿದೆ. ಭಾರತದ ಪ್ರತಿ 100 ಕಿಲೋಮೀಟರ್ ಅಂತರದಲ್ಲಿ ಕೃಷಿ ಬದಲಾಗುತ್ತದೆ. ಬಯಲು ಸೀಮೆಯ ಬೇಸಾಯವೇ ಬೇರೆ, ಹಿಮಾಲಯದ ಬೇಸಾಯವೇ ಬೇರೆ, ಮರುಭೂಮಿಯಲ್ಲಿನ ಬೇಸಾಯವೇ ಬೇರೆ, ಕಡಿಮೆ ನೀರು ಇರುವ ಪ್ರದೇಶದಲ್ಲಿನ ಬೇಸಾಯವೇ ಬೇರೆ, ಕರಾವಳಿ ಭಾಗದ ಬೇಸಾಯವೇ ಬೇರೆ. ಈ ವೈವಿಧ್ಯತೆಯು ಭಾರತವನ್ನು ಜಾಗತಿಕ ಆಹಾರ ಭದ್ರತೆಯ ಭರವಸೆಯ ದಾರಿದೀಪವಾಗಿಸುತ್ತದೆ.

ಸ್ನೇಹಿತರೆ,

ಕಳೆದ ಬಾರಿ ಇಲ್ಲಿ ಐಸಿಎಇ ಸಮ್ಮೇಳನ ನಡೆದಾಗ ಭಾರತಕ್ಕೆ ಆಗಷ್ಟೇ ಸ್ವಾತಂತ್ರ್ಯ ಸಿಕ್ಕಿತ್ತು. ಭಾರತದ ಆಹಾರ ಭದ್ರತೆ ಮತ್ತು ಕೃಷಿಗೆ ಅದು ಸವಾಲಿನ ಸಮಯವಾಗಿತ್ತು. ಇಂದು ಭಾರತವು ಸಾಕಷ್ಟು ಆಹಾರ ಉತ್ಪಾದಿಸುವ ಮತ್ತು ದಾಸ್ತಾನು ಹೊಂದಿರುವ ದೇಶವಾಗಿದೆ. ಇಂದು ಭಾರತವು ಹಾಲು, ಬೇಳೆಕಾಳುಗಳು ಮತ್ತು ಮಸಾಲೆಗಳ ಅತಿದೊಡ್ಡ ಉತ್ಪಾದಕ ದೇಶವಾಗಿದೆ. ಭಾರತದ ಆಹಾರ ಧಾನ್ಯಗಳು, ಹಣ್ಣುಗಳು, ತರಕಾರಿಗಳು, ಹತ್ತಿ, ಸಕ್ಕರೆ, ಚಹಾ ಮತ್ತು ಸಾಕಿದ ಮೀನುಗಳ ಉತ್ಪಾದನೆಯಲ್ಲಿ ವಿಶ್ವದಲ್ಲೇ 2ನೇ ಅತಿದೊಡ್ಡ ದೇಶವಾಗಿದೆ. ಭಾರತದ ಆಹಾರ ಭದ್ರತೆ ಜಾಗತಿಕ ಕಳವಳಕ್ಕೆ ಕಾರಣವಾಗಿದ್ದ ಕಾಲವೊಂದಿತ್ತು. ಜಾಗತಿಕ ಆಹಾರ ಭದ್ರತೆ ಮತ್ತು ಜಾಗತಿಕ ಪೌಷ್ಟಿಕಾಂಶದ ಭದ್ರತೆಗೆ ಪರಿಹಾರಗಳನ್ನು ಒದಗಿಸುವಲ್ಲಿ ಭಾರತವು  ತೊಡಗಿರುವ ಸಮಯ ಇದಾಗಿದೆ.  ಆದ್ದರಿಂದ, 'ಆಹಾರ ವ್ಯವಸ್ಥೆಯ ಪರಿವರ್ತನೆ ಅಥವಾ ರೂಪಾಂತರದಂತಹ ವಿಷಯಗಳನ್ನು ಚರ್ಚಿಸಲು ಭಾರದ ಅನುಭವಗಳು ಅತ್ಯಮೂಲ್ಯವಾಗಿವೆ. ಇದು ವಿಶೇಷವಾಗಿ ಜಾಗತಿಕ ದಕ್ಷಿಣ ಭಾಗಕ್ಕೆ ಪ್ರಯೋಜನವನ್ನು ನೀಡುತ್ತದೆ.

ಸ್ನೇಹಿತರೆ,

ಭಾರತವು 'ವಿಶ್ವ ಬಂಧು'(ಜಾಗತಿಕ ಸ್ನೇಹಿತ)ವಾಗಿ ಮಾನವತೆಯ ಕಲ್ಯಾಣಕ್ಕೆ ಆದ್ಯತೆ ನೀಡುತ್ತದೆ. ಭಾರತವು ಜಿ-20 ಶೃಂಗಸಭೆ ಸಮಯದಲ್ಲಿ 'ಒಂದು ಭೂಮಿ, ಒಂದು ಕುಟುಂಬ ಮತ್ತು ಒಂದು ಭವಿಷ್ಯ'ದ ದೃಷ್ಟಿಕೋನ ಪ್ರಸ್ತುತಪಡಿತು. ಪರಿಸರ ಸ್ನೇಹಿ ಜೀವನಶೈಲಿಗೆ ಒತ್ತು ನೀಡುವ 'ಮಿಷನ್ ಲೈಫ್' ಮಂತ್ರವನ್ನೂ ಭಾರತ ಉಚ್ಚರಿಸಿತು.  ಭಾರತವು 'ಒಂದು ಭೂಮಿ-ಒಂದು ಆರೋಗ್ಯ' ಉಪಕ್ರಮವನ್ನು ಪ್ರಾರಂಭಿಸಿತು. ನಾವು ಮಾನವ, ಪ್ರಾಣಿ ಮತ್ತು ಸಸ್ಯಗಳ ಆರೋಗ್ಯವನ್ನು ಪ್ರತ್ಯೇಕವಾಗಿ ನೋಡುತ್ತಿಲ್ಲ. ಸುಸ್ಥಿರ ಕೃಷಿ ಮತ್ತು ಆಹಾರ ವ್ಯವಸ್ಥೆಗಳು ಇಂದು ಎದುರಿಸುತ್ತಿರುವ ಯಾವುದೇ ಸವಾಲುಗಳನ್ನು 'ಒಂದು ಭೂಮಿ, ಒಂದು ಕುಟುಂಬ ಮತ್ತು ಒಂದು ಭವಿಷ್ಯ' ಎಂಬ ಸಮಗ್ರ ಕಾರ್ಯವಿಧಾನದಿಂದ ಮಾತ್ರ ನಿಭಾಯಿಸಬಹುದು.

ಸ್ನೇಹಿತರೆ,

ಕೃಷಿ ನಮ್ಮ ಆರ್ಥಿಕ ನೀತಿಯ ಕೇಂದ್ರಬಿಂದುವಾಗಿದೆ. ನಮ್ಮ ದೇಶದಲ್ಲಿ ಶೇಕಡ 90ರಷ್ಟು ಕುಟುಂಬಗಳು ಬಹಳ ಕಡಿಮೆ ಭೂಮಿ ಹೊಂದಿವೆ. ಆದರೆ ಈ ಸಣ್ಣ ರೈತರು ಅಥವಾ ಹಿಡುವಳಿದಾರರು ಭಾರತದ ಆಹಾರ ಭದ್ರತೆಯ ದೊಡ್ಡ ಶಕ್ತಿಯಾಗಿದ್ದಾರೆ. ಏಷ್ಯಾದ ಹಲವು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಇದೇ ಪರಿಸ್ಥಿತಿ ಇದೆ. ಆದ್ದರಿಂದ, ಭಾರತದ ಮಾದರಿಯು ಅನೇಕ ದೇಶಗಳಿಗೆ ಪ್ರಯೋಜನಕಾರಿಯಾಗಿದೆ. ಉದಾಹರಣೆಗೆ, ಸುಸ್ಥಿರ ಬೇಸಾಯ ಒಂದು ಆದ್ಯತೆಯ ಕ್ಷೇತ್ರವಾಗಿದ್ದು, ನಾವು ಭಾರತದಲ್ಲಿ ದೊಡ್ಡ ಪ್ರಮಾಣದ ರಾಸಾಯನಿಕಮುಕ್ತ ನೈಸರ್ಗಿಕ ಕೃಷಿಯನ್ನು ಉತ್ತೇಜಿಸುತ್ತಿದ್ದೇವೆ, ನಾವು ಇದರಲ್ಲಿ ತುಂಬಾ ಸಕಾರಾತ್ಮಕ ಫಲಿತಾಂಶಗಳನ್ನು ನೋಡಿದ್ದೇವೆ. ಈ ವರ್ಷದ ಆಯವ್ಯಯವು ಸುಸ್ಥಿರ ಕೃಷಿ ಮತ್ತು ಹವಾಮಾನ-ಹೊಂದಾಣಿಯ ಕೃಷಿಯ ಮೇಲೆ ಗಮನಾರ್ಹ ಗಮನ ನೀಡಿದೆ. ನಮ್ಮ ರೈತರನ್ನು ಬೆಂಬಲಿಸಲು ನಾವು ಸಂಪೂರ್ಣ ಪರಿಸರ ವ್ಯವಸ್ಥೆ ಅಭಿವೃದ್ಧಿಪಡಿಸುತ್ತಿದ್ದೇವೆ. ಭಾರತವು ಹವಾಮಾನಕ್ಕೆ ಒಗ್ಗುವ ಬೆಳೆಗಳಿಗೆ ಸಂಬಂಧಿಸಿದ ಸಂಶೋಧನೆ ಮತ್ತು ಅಭಿವೃದ್ಧಿಗೆ ಒತ್ತು ನೀಡಿದೆ. ಕಳೆದ 10 ವರ್ಷಗಳಲ್ಲಿ ನಾವು ನಮ್ಮ ರೈತರಿಗೆ ಸುಮಾರು 1,900 ಹೊಸ ಹವಾಮಾನ-ನಿರೋಧಕ ತಳಿಗಳನ್ನು ಒದಗಿಸಿದ್ದೇವೆ. ಇದು ಭಾರತೀಯ ರೈತರಿಗೆ ಲಾಭದಾಯಕವಾಗಿದೆ. ಸಾಂಪ್ರದಾಯಿಕ ತಳಿಗಳಿಗೆ ಹೋಲಿಸಿದರೆ ಶೇ.25ರಷ್ಟು ಕಡಿಮೆ ನೀರಿನಲ್ಲಿ ಬೆಳೆಯುವ ಕೆಲವು ಅಕ್ಕಿ ತಳಿಗಳು ನಮ್ಮ ದೇಶದಲ್ಲಿವೆ. ಇತ್ತೀಚಿನ ವರ್ಷಗಳಲ್ಲಿ, ಕಪ್ಪು ಅಕ್ಕಿ ನಮ್ಮ ದೇಶದಲ್ಲಿ ಉತ್ಕೃಷ್ಟ ಆಹಾರ(ಸೂಪರ್ ಫುಡ್)ವಾಗಿ  ಹೊರಹೊಮ್ಮಿದೆ. ಮಣಿಪುರ, ಅಸ್ಸಾಂ ಮತ್ತು ಮೇಘಾಲಯದ ಕಪ್ಪು ಅಕ್ಕಿ ಅದರ ಔಷಧೀಯ ಮೌಲ್ಯಕ್ಕಾಗಿ ಮೆಚ್ಚುಗೆ ಪಡೆದಿದೆ. ಈ ಅನುಭವಗಳನ್ನು ಜಾಗತಿಕ ಸಮುದಾಯದೊಂದಿಗೆ ಹಂಚಿಕೊಳ್ಳಲು ಭಾರತವು ಅಷ್ಟೇ ಉತ್ಸುಕವಾಗಿದೆ.

ಸ್ನೇಹಿತರೆ,

ನೀರಿನ ಕೊರತೆ, ಹವಾಮಾನ ಬದಲಾವಣೆ ಮತ್ತು ಪೋಷಣೆ. ಸಮಕಾಲೀನ ಸಂದರ್ಭದಲ್ಲಿ ಗುರುತರ ಸವಾಲುಗಳಾಗಿವೆ. ಭಾರತವು ಈ ಸವಾಲುಗಳಿಗೆ ಪರಿಹಾರಗಳನ್ನು ಹೊಂದಿದೆ. ಭಾರತವು ವಿಶ್ವದ ಅತಿದೊಡ್ಡ ಸಿರಿಧಾನ್ಯ ಉತ್ಪಾದಕ ದೇಶವಾಗಿದೆ, ಇದನ್ನು ಇಡೀ ವಿಶ್ವವೇ ಉತ್ಕೃಷ್ಟ ಆಹಾರ(ಸೂಪರ್‌ಫುಡ್) ಎಂದು ಕರೆಯುತ್ತಿದೆ, ನಾವು ಅದನ್ನು 'ಶ್ರೀ ಅನ್ನ' ಎಂದು ಗುರುತಿಸಿದ್ದೇವೆ. ಇದು ಕನಿಷ್ಠ ನೀರು, ಗರಿಷ್ಠ ಉತ್ಪಾದನೆಯ ತತ್ವದ ಮೇಲೆ ಕಾರ್ಯ ನಿರ್ವಹಿಸುತ್ತದೆ. ಜಾಗತಿಕ ಪೌಷ್ಟಿಕಾಂಶ ಸಮಸ್ಯೆಯನ್ನು ಪರಿಹರಿಸುವಲ್ಲಿ ಭಾರತದ ವಿವಿಧ ಸೂಪರ್‌ಫುಡ್‌ಗಳು ಮಹತ್ವದ ಪಾತ್ರ ವಹಿಸುತ್ತವೆ. ಭಾರತವು ಈ ಸೂಪರ್‌ಫುಡ್‌ಗಳ ಬುಟ್ಟಿಯನ್ನು ವಿಶ್ವದೊಂದಿಗೆ ಹಂಚಿಕೊಳ್ಳಲು ಬಯಸುತ್ತದೆ. ಹೆಚ್ಚುವರಿಯಾಗಿ, ಕಳೆದ ವರ್ಷ ಭಾರತದ  ಉಪಕ್ರಮದಲ್ಲಿ ಇಡೀ ಜಗತ್ತೇ ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷವನ್ನು ಆಚರಿಸಿತು.

ಸ್ನೇಹಿತರೆ,

ಕಳೆದ ದಶಕದಲ್ಲಿ, ಆಧುನಿಕ ತಂತ್ರಜ್ಞಾನಕ್ಕೆ ಕೃಷಿಯನ್ನು ಸಂಪರ್ಕಿಸಲು ನಾವು ಹಲವಾರು ಪ್ರಯತ್ನಗಳನ್ನು ಮಾಡಿದ್ದೇವೆ. ಇಂದು ರೈತರು ಏನು ಬೆಳೆಯಬೇಕೆಂದು ತಿಳಿಯಲು ಮಣ್ಣಿನ ಆರೋಗ್ಯ ಕಾರ್ಡ್‌ಗಳನ್ನು ಬಳಸಬಹುದು. ಅವರು ಸೌರಶಕ್ತಿಯಿಂದ ಪಂಪ್‌ಗಳನ್ನು ಚಲಾಯಿಸಬಹುದು ಮತ್ತು ಪಾಳುಭೂಮಿಯಲ್ಲಿ ಸೌರ ಕೃಷಿಯಿಂದ ಆದಾಯ ಗಳಿಸಬಹುದು. ರೈತರು ಭಾರತದ ಡಿಜಿಟಲ್ ಕೃಷಿ ಮಾರುಕಟ್ಟೆಯಾದ ಇ-ನ್ಯಾಮ್ ಮೂಲಕ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಬಹುದು. ಅವರು ಕಿಸಾನ್ ಕ್ರೆಡಿಟ್ ಕಾರ್ಡ್ ಬಳಸುತ್ತಿದ್ದಾರೆ. ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ (ಪ್ರಧಾನ ಮಂತ್ರಿಗಳ ಬೆಳೆ ವಿಮಾ ಯೋಜನೆ) ಮೂಲಕ ತಮ್ಮ ಬೆಳೆಗಳ ಸುರಕ್ಷತೆ ಖಚಿತಪಡಿಸಿಕೊಳ್ಳುತ್ತಿದ್ದಾರೆ. ರೈತರಿಂದ ಅಗ್ರಿಟೆಕ್ ಸ್ಟಾರ್ಟಪ್‌ಗಳವರೆಗೆ, ನೈಸರ್ಗಿಕ ಕೃಷಿಯಿಂದ ಫಾರ್ಮ್ ಸ್ಟೇಗಳವರೆಗೆ ಮತ್ತು ಕೃಷಿಯಿಂದ ಊಟದ ಟೇಬಲ್(ಫಾರ್ಮ್-ಟು-ಟೇಬಲ್) ತನಕ ಭಾರತದ ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳು ನಿರಂತರವಾಗಿ ಕಾನೂನುಬದ್ಧ(ಔಪಚಾರಿಕ)ವಾಗುತ್ತಿವೆ. ಕಳೆದ 10 ವರ್ಷಗಳಲ್ಲಿ 90 ಲಕ್ಷ ಹೆಕ್ಟೇರ್ ಕೃಷಿ ಭೂಮಿಯನ್ನು ಸೂಕ್ಷ್ಮ ನೀರಾವರಿಗೆ ಒಳಪಡಿಸಿದ್ದೇವೆ. ನಮ್ಮ ಎಥೆನಾಲ್ ಮಿಶ್ರಣ ಕಾರ್ಯಕ್ರಮವು ಕೃಷಿ ಮತ್ತು ಪರಿಸರ ಎರಡಕ್ಕೂ ಪ್ರಯೋಜನಕಾರಿಯಾಗಿದೆ. ನಾವು 20% ಎಥೆನಾಲ್ ಅನ್ನು ಪೆಟ್ರೋಲ್‌ನಲ್ಲಿ ಮಿಶ್ರಣ ಮಾಡುವ ಗುರಿಯತ್ತ ವೇಗವಾಗಿ ಸಾಗುತ್ತಿದ್ದೇವೆ.

ಸ್ನೇಹಿತರೆ,

ನಾವು ಭಾರತದ ಕೃಷಿ ಕ್ಷೇತ್ರದಲ್ಲಿ ಡಿಜಿಟಲ್ ತಂತ್ರಜ್ಞಾನವನ್ನು ವ್ಯಾಪಕವಾಗಿ ಬಳಸುತ್ತಿದ್ದೇವೆ. ಪಿಎಂ-ಕಿಸಾನ್ ಸಮ್ಮಾನ್ ನಿಧಿ ಮೂಲಕ 10 ಕೋಟಿ ರೈತರ ಬ್ಯಾಂಕ್ ಖಾತೆಗಳಿಗೆ ಕೇವಲ 30 ಸೆಕೆಂಡುಗಳಲ್ಲಿ ಒಂದು ಕ್ಲಿಕ್‌ನಲ್ಲಿ ಹಣ ವರ್ಗಾವಣೆಯಾಗುತ್ತಿದೆ. ಡಿಜಿಟಲ್ ಬೆಳೆ ಸಮೀಕ್ಷೆಗಾಗಿ ನಾವು ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಸ್ಥಾಪಿಸಿದ್ದೇವೆ. ಇದು ನಮ್ಮ ರೈತರಿಗೆ ನೈಜ-ಸಮಯದ ಮಾಹಿತಿ ಪಡೆಯಲು ಸಹಾಯ ಮಾಡುತ್ತಿದೆ, ನಂತರ ಅವರು ದತ್ತಾಂಶ(ಡೇಟಾ)-ಚಾಲಿತ ನಿರ್ಧಾರಗಳನ್ನು ಮಾಡಬಹುದು. ಈ ಉಪಕ್ರಮವು ಕೋಟ್ಯಂತರ ರೈತರಿಗೆ ಪ್ರಯೋಜನ ನೀಡುತ್ತಿದೆ, ಅವರ ಆರ್ಥಿಕ ಸ್ಥಿತಿ ಸುಧಾರಿಸುತ್ತಿದೆ. ಭೂ ದಾಖಲೆಗಳನ್ನು ಡಿಜಿಟಲೀಕರಣಗೊಳಿಸುವ ಪ್ರಮುಖ ಅಭಿಯಾನವನ್ನೂ ಸರ್ಕಾರ ನಡೆಸುತ್ತಿದೆ. ಇದರಿಂದ ರೈತರ ಜಮೀನಿಗೆ ಡಿಜಿಟಲ್ ಗುರುತಿನ ಸಂಖ್ಯೆ ನೀಡಲಾಗುತ್ತಿದೆ. ನಾವು ಕೃಷಿಯಲ್ಲಿ ಡ್ರೋನ್‌ಗಳ ಬಳಕೆಯನ್ನು ವೇಗವಾಗಿ ಉತ್ತೇಜಿಸುತ್ತಿದ್ದೇವೆ. ಮಹಿಳೆಯರಿಗೆ, ನಮ್ಮ ‘ಡ್ರೋನ್ ದೀದಿಗಳಿಗೆ’ ಡ್ರೋನ್‌ಗಳಿಂದ ಕೃಷಿ ಮಾಡುವ ಅವಕಾಶ ನೀಡಲಾಗುತ್ತಿದೆ. ಈ ಎಲ್ಲಾ ಕ್ರಮಗಳು ಭಾರತೀಯ ರೈತರಿಗೆ ಪ್ರಯೋಜನವನ್ನು ನೀಡುತ್ತದೆ. ಜತೆಗೆ, ಜಾಗತಿಕ ಆಹಾರ ಭದ್ರತೆಯನ್ನು ಬಲಪಡಿಸುತ್ತದೆ.

ಸ್ನೇಹಿತರೆ,

ಮುಂದಿನ ಐದು ದಿನಗಳಲ್ಲಿ ನೀವೆಲ್ಲರೂ ಇಲ್ಲಿ ವಿವರವಾದ ಚರ್ಚೆಗಳನ್ನು ನಡೆಸುತ್ತೀರಿ. ವಿಶೇಷವಾಗಿ ಮಹಿಳೆಯರು ಮತ್ತು ಯುವಜನರ ಹೆಚ್ಚಿನ ಭಾಗವಹಿಸುವಿಕೆಯನ್ನು ನೋಡಿ ನನಗೆ ಸಂತೋಷವಾಗಿದೆ. ಎಲ್ಲರೂ ನಿಮ್ಮ ಆಲೋಚನೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾರೆ. ಸುಸ್ಥಿರ ಕೃಷಿ-ಆಹಾರ ವ್ಯವಸ್ಥೆಗಳೊಂದಿಗೆ ಜಗತ್ತನ್ನು ಸಂಪರ್ಕಿಸುವ ಮಾರ್ಗಗಳನ್ನು ಕಂಡುಹಿಡಿಯಲು ಈ ಸಮ್ಮೇಳನವು ನಮಗೆ ಸಹಾಯ ಮಾಡುತ್ತದೆ ಎಂದು ನಾನು ಭಾವಿಸುತ್ತೇನೆ. ನಾವು ಪರಸ್ಪರ ಕಲಿಯುತ್ತೇವೆ ಮತ್ತು ಪರಸ್ಪರ ಕಲಿಸುತ್ತೇವೆ.

ಸ್ನೇಹಿತರೆ,

ನೀವು ಕೃಷಿ ರಂಗದೊಂದಿಗೆ ಸಂಬಂಧ ಹೊಂದಿರುವುದರಿಂದ, ನಿಮ್ಮೊಂದಿಗೆ ಇನ್ನೂ ಒಂದು ಮಾಹಿತಿ ಹಂಚಿಕೊಳ್ಳಲು ನಾನು ಒತ್ತಾಯಿಸುತ್ತೇನೆ. ಜಗತ್ತಿನಲ್ಲಿ ಎಲ್ಲಿಯೂ ರೈತನ ಪ್ರತಿಮೆ ಇರುವುದು ನನಗೆ ತಿಳಿದಿಲ್ಲ. ಸ್ಟ್ಯಾಚ್ಯೂ ಆಫ್ ಲಿಬರ್ಟಿ ವಿಶ್ವದ ಅತಿ ಎತ್ತರದ ಪ್ರತಿಮೆ ಎಂದು ನಾವು ಕೇಳಿದ್ದೇವೆ. ಆದರೆ ರೈತರ ಶಕ್ತಿಯನ್ನು ಜಾಗೃತಗೊಳಿಸಿ ಅವರನ್ನು ಭಾರತದ ಸ್ವಾತಂತ್ರ್ಯ ಚಳವಳಿಯ ಮುಖ್ಯವಾಹಿನಿಗೆ ತಂದ ಧೀಮಂತ ರೈತ ನಾಯಕ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ವಿಶ್ವದ ಅತಿ ಎತ್ತರದ ಪ್ರತಿಮೆ ಎಂದು ಕೃಷಿ ರಂಗದ ನನ್ನ ಎಲ್ಲಾ ಸಹೋದ್ಯೋಗಿಗಳಿಗೆ ಹೇಳಿದರೆ, ಅವರು ಸಂತೋಷಪಡುತ್ತಾರೆ. ಇದು ಲಿಬರ್ಟಿ ಪ್ರತಿಮೆಗಿಂತ 2 ಪಟ್ಟು ಎತ್ತರವಾಗಿದೆ. ಅವರು ಭಾರತದ ನಿಜವಾದ ರೈತ ನಾಯಕ. ಇನ್ನೊಂದು ವಿಶೇಷವೆಂದರೆ, ಈ ಪ್ರತಿಮೆ ತಯಾರಿಸುವಾಗ, ಭಾರತದ 6 ಲಕ್ಷ ಹಳ್ಳಿಗಳ ರೈತರು ತಮ್ಮ ಹೊಲಗಳಲ್ಲಿ ಬಳಸುತ್ತಿದ್ದ ಕಬ್ಬಿಣದ ಕೃಷಿ ಸಾಧನಗಳ ತುಂಡುಗಳನ್ನು ನೀಡುವಂತೆ ಮನವಿ ಮಾಡಲಾಗಿತ್ತು. 6 ಲಕ್ಷ ಹಳ್ಳಿಗಳಿಂದ ಹೊಲಗಳಲ್ಲಿ ಬಳಸುವ ಕಬ್ಬಿಣದ ಸಾಧನ ಸಲಕರಣೆಗಳನ್ನು ತಂದು, ಕರಗಿಸಿ, ವಿಶ್ವದ ಅತಿ ಎತ್ತರದ ರೈತ ನಾಯಕನ ಕಬ್ಬಿಣದ ಪ್ರತಿಮೆಯಲ್ಲಿ ತಯಾರಿಸಲಾಯಿತು. ಈ ದೇಶದಲ್ಲಿ ರೈತನ ಮಗನಿಗೆ ನೀಡಿದ ದೊಡ್ಡ ಗೌರವ ಬಹುಶಃ ಜಗತ್ತಿನಲ್ಲಿ ಬೇರೆಲ್ಲಿಯೂ ಆಗಿಲ್ಲ ಎಂದು ನಾನು ನಿಜವಾಗಿಯೂ ನಂಬುತ್ತೇನೆ. ನೀವು ಇಲ್ಲಿರುವುದರಿಂದ, ವಿಶ್ವದ ಅತಿ ಎತ್ತರದ ಪ್ರತಿಮೆಯಾದ ಏಕತಾ ಪ್ರತಿಮೆಯನ್ನು ನೋಡಿದರೆ ನಿಜಕ್ಕೂ ನೀವು ಆಕರ್ಷಿತರಾಗುತ್ತೀರಿ ಎಂಬ ವಿಶ್ವಾಸ ನನಗಿದೆ.  ಮತ್ತೊಮ್ಮೆ, ನಿಮ್ಮೆಲ್ಲರಿಗೂ ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ!

 

ತುಂಬು ಧನ್ಯವಾದಗಳು!

 

ಹಕ್ಕು ನಿರಾಕರಣೆ: ಪ್ರಧಾನ ಮಂತ್ರಿ ಅವರ ಭಾಷಣದ ಅಂದಾಜು ಇಂಗ್ಲೀಷ್ ಅನುವಾದದ ಕನ್ನಡ ರೂಪಾಂತರ ಇದಾಗಿದೆ. ಅವರು ಮೂಲತಃ ಹಿಂದಿ ಭಾಷೆಯಲ್ಲಿ ಭಾಷಣ ಮಾಡಿದ್ದಾರೆ.

 

*****

 

 


(Release ID: 2042468) Visitor Counter : 82