ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ವಿಯೆಟ್ನಾಂ ಪ್ರಧಾನಮಂತ್ರಿಯವರ ಭಾರತ ಭೇಟಿಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನೀಡಿದ ಪತ್ರಿಕಾ ಹೇಳಿಕೆಯ ಕನ್ನಡ ಅನುವಾದ (ಆಗಸ್ಟ್ 01, 2024)

Posted On: 01 AUG 2024 2:14PM by PIB Bengaluru

ಗೌರವಾನ್ವಿತ ಪ್ರಧಾನ ಮಂತ್ರಿಗಳಾದ ಫಾಮ್ ಮಿನ್‌ ಚಿನ್‌ ಅವರೇ,

ಉಭಯ ದೇಶಗಳ ಪ್ರತಿನಿಧಿಗಳೇ,

ನಮ್ಮ ಮಾಧ್ಯಮದ ಸ್ನೇಹಿತರೇ,

ನಮಸ್ಕಾರ!

ಸಿನ್‌ ಚಾವೋ!

ನಾನು ಪ್ರಧಾನಮಂತ್ರಿ ಫಾಮ್ ಮಿನ್‌ ಚಿನ್‌ ಮತ್ತು ಅವರ ನಿಯೋಗವನ್ನು ಭಾರತಕ್ಕೆ ಹಾರ್ದಿಕವಾಗಿ ಸ್ವಾಗತಿಸುತ್ತೇನೆ.

ಮೊದಲನೆಯದಾಗಿ, ಎಲ್ಲಾ ಭಾರತೀಯರ ಪರವಾಗಿ, ಪ್ರಧಾನ ಕಾರ್ಯದರ್ಶಿ ನುಯೆನ್ ಫು ಚಾಂಗ್‌ ಅವರ ನಿಧನಕ್ಕೆ ನನ್ನ ಆಳವಾದ ಸಂತಾಪವನ್ನು ವ್ಯಕ್ತಪಡಿಸುತ್ತೇನೆ.

ಅವರು ಭಾರತದ ಉತ್ತಮ ಸ್ನೇಹಿತರಾಗಿದ್ದರು. ಅವರ ನಾಯಕತ್ವದಲ್ಲಿ ಭಾರತ ಮತ್ತು ವಿಯೆಟ್ನಾಂ ಸಂಬಂಧಗಳು ವ್ಯೂಹಾತ್ಮಕ ದಿಕ್ಕಿಗೆ ತಿರುವು ಪಡೆದವು.

ಸ್ನೇಹಿತರೇ,

ಕಳೆದ ದಶಕದಲ್ಲಿ, ನಮ್ಮ ಸಂಬಂಧಗಳ ಆಯಾಮಗಳು ವಿಸ್ತರಿಸಿವೆ ಮತ್ತು ಆಳವಾಗಿವೆ.

ಕಳೆದ 10 ವರ್ಷಗಳಲ್ಲಿ, ನಾವು ನಮ್ಮ ಸಂಬಂಧವನ್ನು ಸಮಗ್ರ ವ್ಯೂಹಾತ್ಮಕ ಪಾಲುದಾರಿಕೆಯಾಗಿ ಪರಿವರ್ತಿಸಿದ್ದೇವೆ.

ನಮ್ಮ ದ್ವಿಪಕ್ಷೀಯ ವ್ಯಾಪಾರವು ಶೇಕಡಾ 85 ಕ್ಕಿಂತ ಹೆಚ್ಚಾಗಿದೆ.

ಇಂಧನ, ತಂತ್ರಜ್ಞಾನ ಮತ್ತು ಅಭಿವೃದ್ಧಿ ಪಾಲುದಾರಿಕೆ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರ ವಿಸ್ತರಿಸಿದೆ.

ರಕ್ಷಣಾ ಮತ್ತು ಭದ್ರತಾ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರವು ಹೊಸ ವೇಗವನ್ನು ಪಡೆದುಕೊಂಡಿದೆ.

ಕಳೆದ ದಶಕದಲ್ಲಿ, ಉಭಯ ದೇಶಗಳ ಸಂಪರ್ಕವು ಅನೇಕ ಪಟ್ಟು ಹೆಚ್ಚಾಗಿದೆ. ಇಂದು ನಾವು 50ಕ್ಕೂ ಹೆಚ್ಚು ನೇರ ವಿಮಾನಗಳನ್ನು ಹೊಂದಿದ್ದೇವೆ.

ಇದರೊಂದಿಗೆ, ಪ್ರವಾಸೋದ್ಯಮವು ನಿರಂತರವಾಗಿ ವಿಸ್ತರಿಸುತ್ತಿದೆ, ಮತ್ತು ಜನರಿಗೆ ಇ-ವೀಸಾ ಸೌಲಭ್ಯವನ್ನು ಸಹ ನೀಡಲಾಗಿದೆ.

'ಮೈ ಸನ್' ತಾಣದಲ್ಲಿ ಪ್ರಾಚೀನ ದೇವಾಲಯಗಳ ಜೀರ್ಣೋದ್ಧಾರ ಕಾರ್ಯ ಯಶಸ್ವಿಯಾಗಿ ಪೂರ್ಣಗೊಂಡಿದೆ.

ಸ್ನೇಹಿತರೇ,

ಕಳೆದ ದಶಕದ ಸಾಧನೆಗಳ ಬಗ್ಗೆ ದೃಷ್ಟಿ ಹಾಯಿಸುತ್ತಾ, ಇಂದಿನ ನಮ್ಮ ಚರ್ಚೆಯಲ್ಲಿ ನಾವು ಪರಸ್ಪರ ಸಹಕಾರದ ಎಲ್ಲಾ ಕ್ಷೇತ್ರಗಳ ಬಗ್ಗೆ ಸಮಗ್ರವಾಗಿ ಚರ್ಚಿಸಿದ್ದೇವೆ.

ಮತ್ತು ಭವಿಷ್ಯವನ್ನು ಯೋಜಿಸುವತ್ತ ಹಲವಾರು ಕ್ರಮಗಳನ್ನು ಕೈಗೊಂಡಿದ್ದೇವೆ.

ಭಾರತದ 'ವಿಕಸಿತ ಭಾರತ 2047' ಮತ್ತು ವಿಯೆಟ್ನಾಂನ 'ವಿಷನ್ 2045' ಹಿನ್ನೆಲೆಯಲ್ಲಿ, ಎರಡೂ ದೇಶಗಳಲ್ಲಿ ಅಭಿವೃದ್ಧಿಯು ವೇಗವನ್ನು ಪಡೆದುಕೊಂಡಿದೆ ಎಂದು ನಾವು ನಂಬುತ್ತೇವೆ.

ಇದು ಪರಸ್ಪರ ಸಹಕಾರದ ಅನೇಕ ಹೊಸ ಕ್ಷೇತ್ರಗಳು ತೆರೆದುಕೊಂಡಿವೆ.

ಆದ್ದರಿಂದ, ನಮ್ಮ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಲು, ಇಂದು ನಾವು ಹೊಸ ಕ್ರಿಯಾ ಯೋಜನೆಯನ್ನು ಅಳವಡಿಸಿಕೊಂಡಿದ್ದೇವೆ.

ರಕ್ಷಣೆ ಮತ್ತು ಭದ್ರತೆ ಕ್ಷೇತ್ರದಲ್ಲಿ ಸಹಕಾರಕ್ಕಾಗಿ ಹೊಸ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

'ನ್ಹಾ ಟ್ರಾಂಗ್'ನಲ್ಲಿ ನಿರ್ಮಿಸಲಾದ ʻಸೇನಾ ಸಾಫ್ಟ್‌ವೇರ್ ಪಾರ್ಕ್ʼ ಅನ್ನು ಇಂದು ಉದ್ಘಾಟಿಸಲಾಯಿತು.

300 ದಶಲಕ್ಷ ಡಾಲರ್ ಸಾಲ ವಿತರಣೆ ಒಪ್ಪಂದವು ವಿಯೆಟ್ನಾಂನ ಕಡಲ ಭದ್ರತೆಯನ್ನು ಬಲಪಡಿಸುತ್ತದೆ.

ಭಯೋತ್ಪಾದನೆ ಮತ್ತು ಸೈಬರ್ ಭದ್ರತೆಯ ವಿಷಯಗಳಲ್ಲಿ ಸಹಕಾರಕ್ಕೆ ಒತ್ತು ನೀಡಲು ನಾವು ನಿರ್ಧರಿಸಿದ್ದೇವೆ.

ಪರಸ್ಪರ ವ್ಯಾಪಾರದ ಸಾಮರ್ಥ್ಯವನ್ನು ಅರಿಯುವ ನಿಟ್ಟಿನಲ್ಲಿ, ʻಆಸಿಯಾನ್-ಭಾರತ ಸರಕುಗಳ ವ್ಯಾಪಾರ ಒಪ್ಪಂದʼದ ಪರಾಮರ್ಶೆಯನ್ನು ಆದಷ್ಟು ಬೇಗ ಮುಕ್ತಾಯಗೊಳಿಸಲು ನಾವು ಸಹಮತ ಸೂಚಿಸಿದ್ದೇವೆ.

ಡಿಜಿಟಲ್ ಪಾವತಿ ಸಂಪರ್ಕಕ್ಕಾಗಿ ನಮ್ಮ ಕೇಂದ್ರ ಬ್ಯಾಂಕುಗಳ ನಡುವೆ ಒಪ್ಪಂದ ಏರ್ಪಟ್ಟಿದೆ.

ಹಸಿರು ಆರ್ಥಿಕತೆ ಮತ್ತು ಹೊಸ ಉದಯೋನ್ಮುಖ ತಂತ್ರಜ್ಞಾನದ ಕ್ಷೇತ್ರಗಳ ಮೇಲೆ ಗಮನ ಹರಿಸಲು ನಾವು ನಿರ್ಧರಿಸಿದ್ದೇವೆ.

ಇಂಧನ ಮತ್ತು ಬಂದರು ಅಭಿವೃದ್ಧಿ ವಲಯದಲ್ಲಿ ಎರಡೂ ರಾಷ್ಟ್ರಗಳ ಸಾಮರ್ಥ್ಯವನ್ನು ಪರಸ್ಪರ ಲಾಭಕ್ಕಾಗಿ ಬಳಸಿಕೊಳ್ಳಲಾಗುವುದು.

ಎರಡೂ ದೇಶಗಳ ಖಾಸಗಿ ವಲಯ, ಸಣ್ಣ ಮತ್ತು ಮಧ್ಯಮ ಉದ್ಯಮಗಳು ಹಾಗೂ ನವೋದ್ಯಮಗಳನ್ನು ಪರಸ್ಪರ ಸಂಪರ್ಕಿಸುವ ಕೆಲಸವನ್ನೂ ಮಾಡಲಾಗುವುದು.

ಸ್ನೇಹಿತರೇ,

ಎರಡೂ ದೇಶಗಳ ಪಾಲಿಗೆ ಕೃಷಿ ಮತ್ತು ಮೀನುಗಾರಿಕೆ ಆರ್ಥಿಕತೆಯ ಪ್ರಮುಖ ಭಾಗಗಳಾಗಿವೆ.

ಈ ವಲಯಗಳು ಜನರ ಜೀವನೋಪಾಯ ಮತ್ತು ಆಹಾರ ಭದ್ರತೆಗೆ ನೇರವಾಗಿ ಸಂಬಂಧಿಸಿವೆ.

ಈ ಕ್ಷೇತ್ರಗಳಲ್ಲಿ ʻಜೆರ್ಮ್‌ಪ್ಲಾಸಂʼ ವಿನಿಮಯ ಮತ್ತು ಜಂಟಿ ಸಂಶೋಧನೆಯನ್ನು ಉತ್ತೇಜಿಸಲು ನಾವು ನಿರ್ಧರಿಸಿದ್ದೇವೆ.

ನಮ್ಮ ಏಕರೀತಿಯ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವ ನಿಟ್ಟಿನಲ್ಲಿ, ವಿಶ್ವ ಪರಂಪರೆಯ ತಾಣ "ಮೈ ಸನ್"ನ "ಬ್ಲಾಕ್ ಎಫ್" ದೇವಾಲಯಗಳ ಸಂರಕ್ಷಣೆಯಲ್ಲಿ ಭಾರತ ಸಹಕರಿಸುತ್ತದೆ.

ನಮಗೆಲ್ಲರಿಗೂ ತಿಳಿದಿರುವಂತೆ, ಬೌದ್ಧ ಧರ್ಮವು ನಮ್ಮ ಸಾಮಾನ್ಯ ಪರಂಪರೆಯಾಗಿದೆ, ಇದು ಎರಡೂ ದೇಶಗಳ ಜನರನ್ನು ಆಧ್ಯಾತ್ಮಿಕ ಮಟ್ಟದಲ್ಲಿ ಒಂದುಗೂಡಿಸಿದೆ.

ನಾವು ವಿಯೆಟ್ನಾಂನ ಜನರನ್ನು ಭಾರತದ ʻಬೌದ್ಧ ಸರ್ಕ್ಯೂಟ್ʼಗೆ ಆಹ್ವಾನಿಸುತ್ತೇವೆ.

ಮತ್ತು ವಿಯೆಟ್ನಾಂನ ಯುವಕರು ಸಹ ನಳಂದ ವಿಶ್ವವಿದ್ಯಾಲಯದ ಲಾಭವನ್ನು ಪಡೆಯಬೇಕೆಂದು ಬಯಸುತ್ತೇನೆ.

ಸ್ನೇಹಿತರೇ,

ನಮ್ಮ ʻಆಕ್ಟ್ ಈಸ್ಟ್ ನೀತಿʼ ಮತ್ತು ನಮ್ಮ ʻಇಂಡೋ-ಪೆಸಿಫಿಕ್ ದೃಷ್ಟಿಕೋನʼದಲ್ಲಿ, ವಿಯೆಟ್ನಾಂ ಪ್ರಮುಖ ಪಾಲುದಾರ.

ಇಂಡೋ-ಪೆಸಿಫಿಕ್ ಪ್ರದೇಶದ ಬಗ್ಗೆ ನಮ್ಮ ಅಭಿಪ್ರಾಯಗಳಲ್ಲಿ ನಾವು ಒಗ್ಗಟ್ಟನ್ನು ಹೊಂದಿದ್ದೇವೆ.

ನಾವು ವಿಕಾಸವನ್ನು ಬೆಂಬಲಿಸುತ್ತೇವೆಯೇ ಹೊರತು ವಿಸ್ತರಣಾವಾದವನ್ನು ಅಲ್ಲ.

ಮುಕ್ತ, ತೆರೆದ, ನಿಯಮ ಆಧಾರಿತ ಹಾಗೂ ಸಮೃದ್ಧ ʻಇಂಡೋ-ಪೆಸಿಫಿಕ್ʼಗಾಗಿ ನಾವು ನಮ್ಮ ಸಹಕಾರವನ್ನು ಮುಂದುವರಿಸುತ್ತೇವೆ.

ʻಸಿಡಿಆರ್‌ಐʼಗೆ ಸೇರುವ ವಿಯೆಟ್ನಾಂ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ.

ಸ್ನೇಹಿತರೇ,

ಮತ್ತೊಮ್ಮೆ ನಾನು ಪ್ರಧಾನಮಂತ್ರಿ ಫಾಮ್ ಮಿನ್‌ ಚಿನ್‌ ಅವರನ್ನು ಸ್ವಾಗತಿಸುತ್ತೇನೆ.

ನಿಮ್ಮ ಭೇಟಿಯೊಂದಿಗೆ ನಮ್ಮ ಸಂಬಂಧಗಳಿಗೆ ಹೊಸ ಮತ್ತು ಸುವರ್ಣ ಅಧ್ಯಾಯ  ಸೇರ್ಪಡೆಗೊಂಡಿದೆ.

ಅನಂತ ಧನ್ಯವಾದಗಳು.

 

ಗಮನಿಸಿ: ಇದು ಪ್ರಧಾನಿಯವರ ಹೇಳಿಕೆಯ ಭಾವಾನುವಾದ. ಮೂಲ ಹೇಳಿಕೆ ಹಿಂದಿಯಲ್ಲಿದೆ.

 

*****


(Release ID: 2041714) Visitor Counter : 33