ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಜಪಾನಿನ ಸ್ಪೀಕರ್ ಮತ್ತು ಅವರ ನಿಯೋಗವನ್ನು ಭೇಟಿ ಮಾಡಿದ ಪ್ರಧಾನ ಮಂತ್ರಿ


ಭಾರತ-ಜಪಾನ್ ವಿಶೇಷ ಕಾರ್ಯತಂತ್ರ ಮತ್ತು ಜಾಗತಿಕ ಪಾಲುದಾರಿಕೆಯಲ್ಲಿ ಸಹಯೋಗದ ಪ್ರಮುಖ ಕ್ಷೇತ್ರಗಳ ಬಗ್ಗೆ ಅವರು ಚರ್ಚಿಸಿದರು

ಸಾಂಪ್ರದಾಯಿಕ ಉತ್ಪಾದನೆ ಮತ್ತು ಅರೆವಾಹಕಗಳು (ಸೆಮಿಕಂಡಕ್ಟರ್), ಇವಿ, ಹಸಿರು ಮತ್ತು ಶುದ್ಧ ಇಂಧನದಂತಹ ಆಧುನಿಕ ಕ್ಷೇತ್ರಗಳಲ್ಲಿ ಸಹಕಾರವನ್ನು ಬಲಪಡಿಸುವ ಮಾರ್ಗಗಳ ಬಗ್ಗೆ ಅವರು ಚರ್ಚಿಸಿದರು

ಭಾರತೀಯ ಯುವಜನರಿಗೆ ಜಪಾನೀಸ್ ಭಾಷೆಯಲ್ಲಿ ತರಬೇತಿ ಸೇರಿದಂತೆ ತರಬೇತಿ ಮತ್ತು ಸಾಮರ್ಥ್ಯ ವರ್ಧನೆಯ ಬಗ್ಗೆಯೂ ಚರ್ಚಿಸಲಾಯಿತು

Posted On: 01 AUG 2024 9:25PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜಪಾನ್ ನ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ನ ಸ್ಪೀಕರ್ ಶ್ರೀ ನುಕಾಗಾ ಫುಕುಶಿರೊ ಮತ್ತು ಜಪಾನಿನ ಸಂಸತ್ತಿನ ಸದಸ್ಯರು ಹಾಗು ಜಪಾನಿನ ಪ್ರಮುಖ ಕಂಪನಿಗಳನ್ನು ಪ್ರತಿನಿಧಿಸುವ ವಾಣಿಜ್ಯ ಮುಖಂಡರು ಸೇರಿದಂತೆ ಅವರ ನಿಯೋಗವನ್ನು ಸ್ವಾಗತಿಸಿದರು. ಇವರ ಸಭೆ ದೃಢವಾದ ಭಾರತ-ಜಪಾನ್ ವಿಶೇಷ ಕಾರ್ಯತಂತ್ರ ಮತ್ತು ಜಾಗತಿಕ ಪಾಲುದಾರಿಕೆಯನ್ನು ಒತ್ತಿಹೇಳಿತು, ಜನರ ನಡುವಿನ ಸಹಕಾರವನ್ನು ಕೇಂದ್ರೀಕರಿಸಿ ಸಹಯೋಗ ಮತ್ತು ಪರಸ್ಪರ ಹಿತಾಸಕ್ತಿಯ ಪ್ರಮುಖ ಕ್ಷೇತ್ರಗಳ ಬಗ್ಗೆ ಚರ್ಚಿಸಿತು.  ಜೊತೆಗೆ ಭಾರತ ಮತ್ತು ಜಪಾನ್ ನಡುವಿನ ಸಂಸದೀಯ ವಿನಿಮಯದ ಮಹತ್ವವನ್ನು ಪುನರುಚ್ಚರಿಸಿತು.

2022-27ರ ಅವಧಿಗೆ ಭಾರತ ಮತ್ತು ಜಪಾನ್ ನಡುವೆ ನಿಗದಿಪಡಿಸಿದ 5 ಟ್ರಿಲಿಯನ್ ಜಪಾನೀಸ್ ಯೆನ್ ಹೂಡಿಕೆಯ ಪ್ರಸ್ತುತ ಗುರಿಯ ಪ್ರಗತಿಯ ಬಗ್ಗೆ ಅವರು ತೃಪ್ತಿ ವ್ಯಕ್ತಪಡಿಸಿದರು ಮತ್ತು 2027 ರ ನಂತರದ ಅವಧಿಗೆ ವ್ಯಾಪಾರ ಮತ್ತು ಆರ್ಥಿಕ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವ ಮಾರ್ಗಗಳ ಬಗ್ಗೆ ಚರ್ಚಿಸಿದರು. ಸಾಂಪ್ರದಾಯಿಕ ಉತ್ಪಾದನೆ (ಮೊನ್ಜುಕುರಿ) ಮತ್ತು ಅರೆವಾಹಕಗಳು (ಸೆಮಿಕಂಡಕ್ಟರ್ ಗಳು), ಇವಿ, ಹಸಿರು ಮತ್ತು ಶುದ್ಧ ಇಂಧನದಂತಹ ಆಧುನಿಕ ಕ್ಷೇತ್ರಗಳಲ್ಲಿ ಸಹಕಾರವನ್ನು ಹೇಗೆ ಬಲಪಡಿಸುವುದು ಎಂಬುದರ ಬಗ್ಗೆಯೂ ಅವರು ಚರ್ಚಿಸಿದರು. ಮುಂಬೈ ಅಹ್ಮದಾಬಾದ್ ಹೈಸ್ಪೀಡ್ ರೈಲು ಯೋಜನೆಯನ್ನು ಯಶಸ್ವಿಯಾಗಿ ಮತ್ತು ಸಮಯೋಚಿತವಾಗಿ ಪೂರ್ಣಗೊಳಿಸುವ ಮಹತ್ವವನ್ನು ಅವರು ಗುರುತಿಸಿದರು.

ಜಪಾನಿನ ಭಾಷೆ, ಸಂಸ್ಕೃತಿ ಮತ್ತು ಕೆಲಸದ ಪದ್ಧತಿ/ಅಭ್ಯಾಸಗಳಲ್ಲಿ ತರಬೇತಿ ನಡೆಸುವುದು ಸೇರಿದಂತೆ ವಿವಿಧ ವ್ಯಾಪಾರಗಳಲ್ಲಿ ಭಾರತ ಮತ್ತು ಜಪಾನ್ ಗಳು ಮುಂದಿನ ಪೀಳಿಗೆಯ (ನೆಕ್ಸ್ಟ್ಜೆನ್)  ಕಾರ್ಯಪಡೆಯನ್ನು ಪೋಷಿಸಿ ತರಬೇತಿ ನೀಡಬೇಕು ಎಂದು ಶ್ರೀ ನುಕಾಗಾ ಪ್ರಸ್ತಾಪಿಸಿದರು; ಮತ್ತು ಈ ಪ್ರಯತ್ನಗಳಲ್ಲಿ ಖಾಸಗಿ ವಲಯದ ಪಾತ್ರವನ್ನು ಒತ್ತಿಹೇಳಿದರು. ಈ ಸಂಪನ್ಮೂಲ ವ್ಯಕ್ತಿಗಳು ಮುಂಬರುವ ದಿನಗಳಲ್ಲಿ ಎರಡೂ ಕಡೆಗಳ ನಡುವೆ ಸೇತುವೆಯ ಪಾತ್ರವನ್ನು ವಹಿಸಲಿದ್ದಾರೆ ಎಂದು ಅವರು ಹೇಳಿದರು.

ಜಪಾನ್ ನಿಂದ ಹೆಚ್ಚಿನ ಹೂಡಿಕೆ ಮತ್ತು ತಂತ್ರಜ್ಞಾನಕ್ಕಾಗಿ ಭಾರತದಲ್ಲಿ ಕೈಗೊಂಡಿರುವ ವ್ಯಾಪಾರೋದ್ಯಮಕ್ಕಾಗಿ ಅನುಕೂಲಕರ ವಾತಾವರಣ ನಿರ್ಮಾಣ ಮತ್ತು ಸುಧಾರಣೆಗಳ ಬಗ್ಗೆ ಪ್ರಧಾನಮಂತ್ರಿಯವರು ಪ್ರಮುಖವಾಗಿ ಪ್ರಸ್ತಾಪಿಸಿದರು. ಮತ್ತು ಈ ಪ್ರಯತ್ನಗಳಿಗೆ ಭಾರತ ಸರ್ಕಾರ ಸಂಪೂರ್ಣ ಬೆಂಬಲ ನೀಡುವ  ಭರವಸೆಯನ್ನು ನಿಯೋಗಕ್ಕೆ  ನೀಡಿದರು.

 

*****




(Release ID: 2040526) Visitor Counter : 46