ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರ ಅಧ್ಯಕ್ಷತೆಯ ಉನ್ನತ ಮಟ್ಟದ ಸಮಿತಿಯು ವಿವಿಧ ರಾಜ್ಯಗಳಿಗೆ ಹಲವಾರು ವಿಪತ್ತು ತಗ್ಗಿಸುವಿಕೆ ಮತ್ತು ಸಾಮರ್ಥ್ಯ ನಿರ್ಮಾಣ ಯೋಜನೆಗಳನ್ನು ಅನುಮೋದಿಸಿದೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ವಿಪತ್ತು ನಿರೋಧಕ ಭಾರತದ ದೃಷ್ಟಿಕೋನವನ್ನು ಈಡೇರಿಸಲು, ದೇಶದಲ್ಲಿನ ವಿಪತ್ತುಗಳ ಪರಿಣಾಮಕಾರಿ ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರ ಮಾರ್ಗದರ್ಶನದಲ್ಲಿ ಹಲವಾರು ಉಪಕ್ರಮಗಳನ್ನು ತೆಗೆದುಕೊಳ್ಳಲಾಗಿದೆ

ಮುಂಬೈ, ಕೋಲ್ಕತ್ತಾ, ಬೆಂಗಳೂರು, ಹೈದರಾಬಾದ್, ಅಹಮದಾಬಾದ್ ಮತ್ತು ಪುಣೆಯಲ್ಲಿ ನಗರ ಪ್ರವಾಹ ನಿರ್ವಹಣೆಗಾಗಿ 2514.36 ಕೋಟಿ ರೂ.ಗಳ ಆರು ಯೋಜನೆಗಳಿಗೆ ಉನ್ನತ ಮಟ್ಟದ ಸಮಿತಿಯು ಅನುಮೋದನೆ ನೀಡಿದೆ.

ಅಸ್ಸಾಂ, ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಅಗ್ನಿಶಾಮಕ ಸೇವೆಗಳ ವಿಸ್ತರಣೆ ಮತ್ತು ಆಧುನೀಕರಣದ ಅಡಿಯಲ್ಲಿ 810.64 ಕೋಟಿ ರೂ.ಗಳ ಮೂರು ಯೋಜನೆಗಳನ್ನು ಸಮಿತಿಯು ಅನುಮೋದಿಸಿದೆ

ಹಿಮಾಚಲ ಪ್ರದೇಶ, ಉತ್ತರಾಖಂಡ, ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶಗಳಿಗೆ 150 ಕೋಟಿ ರೂ.ಗಳ GLOF ಅಪಾಯ ತಗ್ಗಿಸುವಿಕೆಯ ಯೋಜನೆಯ ಪ್ರಸ್ತಾವನೆಯನ್ನು ಉನ್ನತ ಮಟ್ಟದ ಸಮಿತಿಯು ಅನುಮೋದಿಸಿದೆ

315 ಹೆಚ್ಚು ವಿಪತ್ತು ಪೀಡಿತ ಜಿಲ್ಲೆಗಳಲ್ಲಿ ಜಾರಿಗೆ ತರಲು 1300 ತರಬೇತಿ ಪಡೆದ ಆಪ್ತ ಮಿತ್ರ ಸ್ವಯಂಸೇವಕರನ್ನು ಮಾಸ್ಟರ್ ತರಬೇತುದಾರರಾಗಿ ಮತ್ತು 2.37 ಲಕ್ಷ ಸ್ವಯಂಸೇವಕರಿಗೆ ತರಬೇತಿ ನೀಡಲು 470.50 ಕೋಟಿ ರೂ.ಗಳ ವೆಚ್ಚದಲ್ಲಿ ಯುವ ಆಪ್ತ ಮಿತ್ರ ಯೋಜನೆಗೆ (ವೈಎಎಂಎಸ್) ಸಮಿತಿ ಒಪ್ಪಿಗೆ ನೀಡಿದೆ

ಪ್ರಸಕ್ತ ಹಣಕಾಸು ವರ್ಷದಲ್ಲಿ ರಾಜ್ಯ ವಿಪತ್ತು ಪರಿಹಾರ ನಿಧಿ

Posted On: 25 JUL 2024 8:13PM by PIB Bengaluru

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅಧ್ಯಕ್ಷತೆಯ ಉನ್ನತ ಮಟ್ಟದ ಸಮಿತಿಯು, ವಿವಿಧ ರಾಜ್ಯಗಳಿಗೆ ಹಲವಾರು ವಿಪತ್ತು ತಗ್ಗಿಸುವಿಕೆ ಮತ್ತು ಸಾಮರ್ಥ್ಯ ನಿರ್ಮಾಣ ಯೋಜನೆಗಳನ್ನು ಅನುಮೋದಿಸಿದೆ. ಹಣಕಾಸು ಸಚಿವರು, ಕೃಷಿ ಸಚಿವರು ಮತ್ತು ನೀತಿ ಆಯೋಗದ ಉಪಾಧ್ಯಕ್ಷರನ್ನು ಒಳಗೊಂಡ ಉನ್ನತ ಮಟ್ಟದ ಸಮಿತಿ ಸಭೆಯು ಇಂದು ನವದೆಹಲಿಯಲ್ಲಿ ನಡೆಯಿತು. ಉನ್ನತ ಮಟ್ಟದ ಸಮಿತಿಯು ಒಟ್ಟು ಒಂಬತ್ತು ಪ್ರಸ್ತಾವನೆಗಳನ್ನು ರಾಷ್ಟ್ರೀಯ ವಿಪತ್ತು ತಗ್ಗಿಸುವಿಕೆ ನಿಧಿ ((ಎನ್ ಡಿ ಎಂ ಎಫ್) ಮತ್ತು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ನಿಧಿ (ಎನ್‌ ಡಿ ಆರ್‌ ಎಫ್) ಯಿಂದ ಆರು ನಗರಗಳಲ್ಲಿ ನಗರ ಪ್ರವಾಹವನ್ನು ಎದುರಿಸಲು, 4 ಗುಡ್ಡಗಾಡು ರಾಜ್ಯಗಳಲ್ಲಿ ಗ್ಲೇಶಿಯಲ್ ಲೇಕ್ ಔಟ್‌ಬರ್ಸ್ಟ್ ಪ್ರವಾಹವನ್ನು (GLOF) ತಗ್ಗಿಸಲು ಮತ್ತು 3 ರಾಜ್ಯಗಳಲ್ಲಿ ಅಗ್ನಿಶಾಮಕ ಸೇವೆಗಳನ್ನು ಬಲಪಡಿಸಲು ಪರಿಗಣಿಸಿತು. ಸಮಿತಿಯು ಎಲ್ಲಾ 28 ರಾಜ್ಯಗಳಲ್ಲಿ ಯುವ ಆಪ್ತಮಿತ್ರ ಯೋಜನೆಯನ್ನು ಜಾರಿಗೊಳಿಸುವ ಪ್ರಸ್ತಾಪವನ್ನು ಸಹ ಪರಿಗಣಿಸಿತು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ವಿಪತ್ತು ನಿರೋಧಕ ಕುರಿತ ಭಾರತದ ದೃಷ್ಟಿಕೋನವನ್ನು ಈಡೇರಿಸಲು, ಗೃಹ ಸಚಿವ ಶ್ರೀ ಅಮಿತ್ ಶಾ ಅವರ ಮಾರ್ಗದರ್ಶನದಲ್ಲಿ ಗೃಹ ಸಚಿವಾಲಯವು ದೇಶದಲ್ಲಿನ ವಿಪತ್ತುಗಳ ಪರಿಣಾಮಕಾರಿ ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ಹಲವಾರು ಉಪಕ್ರಮಗಳನ್ನು ಕೈಗೊಂಡಿದೆ. ಭಾರತದಲ್ಲಿ ವಿಪತ್ತು ಅಪಾಯ ಕಡಿತ ವ್ಯವಸ್ಥೆಯನ್ನು ಬಲಪಡಿಸುವ ಮೂಲಕ ವಿಪತ್ತುಗಳ ಸಮಯದಲ್ಲಿ ಯಾವುದೇ ವ್ಯಾಪಕವಾದ ಜೀವ ಮತ್ತು ಆಸ್ತಿ ಹಾನಿಯನ್ನು ತಡೆಗಟ್ಟಲು ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

ಇಂದಿನ ಸಭೆಯಲ್ಲಿ ಉನ್ನತ ಮಟ್ಟದ ಸಮಿತಿಯು ತೆಲಂಗಾಣ, ಗುಜರಾತ್, ಕರ್ನಾಟಕ, ಪಶ್ಚಿಮ ಬಂಗಾಳ ಮತ್ತು ಮಹಾರಾಷ್ಟ್ರ ರಾಜ್ಯಗಳ ಆರು ಯೋಜನಾ ಪ್ರಸ್ತಾವನೆಗಳನ್ನು ಅನುಮೋದಿಸಿತು, ಆರು ಮೆಟ್ರೋ ನಗರಗಳಾದ ಮುಂಬೈ, ಕೋಲ್ಕತ್ತಾ, ಬೆಂಗಳೂರು, ಹೈದರಾಬಾದ್, ಅಹಮದಾಬಾದ್ ಮತ್ತು ಪುಣೆಯಲ್ಲಿ ನಗರ ಪ್ರವಾಹ ನಿರ್ವಹಣೆಗಾಗಿ ಒಟ್ಟು 2514.36 ಕೋಟಿ ರೂ. ವೆಚ್ಚದ ಈ ಯೋಜನೆಗಳಿಗೆ ಅನುಮೋದನೆ ನೀಡಿತು. ಈ ಹಿಂದೆ, 2023 ರ ನವೆಂಬರ್ 27 ರಂದು, ಚೆನ್ನೈ ನಗರದಲ್ಲಿ ಪ್ರವಾಹ ನಿರ್ವಹಣೆಗೆ ಸಮಗ್ರ ಪರಿಹಾರಕ್ಕಾಗಿ ತಮಿಳುನಾಡು ರಾಜ್ಯಕ್ಕೆ 561.29 ಕೋಟಿ ರೂ.ವೆಚ್ಚದಲ್ಲಿ ಯೋಜನೆಯ ಪ್ರಸ್ತಾವನೆಯನ್ನು ಸಮಿತಿಯು ಅನುಮೋದಿಸಿತ್ತು.

ಅಸ್ಸಾಂ, ಕರ್ನಾಟಕ ಮತ್ತು ತಮಿಳುನಾಡಿಗೆ "ರಾಜ್ಯಗಳಲ್ಲಿ ಅಗ್ನಿಶಾಮಕ ಸೇವೆಗಳ ವಿಸ್ತರಣೆ ಮತ್ತು ಆಧುನೀಕರಣ" ಯೋಜನೆಯಡಿಯಲ್ಲಿ 810.64 ಕೋಟಿ ರೂ.ಗಳ ಒಟ್ಟು ಮೊತ್ತದ ಮೂರು ಯೋಜನಾ ಪ್ರಸ್ತಾವನೆಗಳನ್ನು ಉನ್ನತ ಮಟ್ಟದ ಸಮಿತಿಯು ಅನುಮೋದಿಸಿದೆ. ಈ ಯೋಜನೆಗಾಗಿ ಕೇಂದ್ರ ಸರ್ಕಾರವು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ನಿಧಿ (ಎನ್‌ ಡಿ ಆರ್‌ ಎಫ್) ಅಡಿಯಲ್ಲಿ ಒಟ್ಟು 5000 ಕೋಟಿ ರೂಪಾಯಿಗಳನ್ನು ನಿಗದಿಪಡಿಸಿದೆ ಮತ್ತು ಈಗಾಗಲೇ 11 ರಾಜ್ಯಗಳ ಪ್ರಸ್ತಾವನೆಗಳನ್ನು ಒಟ್ಟು 1691.43 ಕೋಟಿ ವೆಚ್ಚದಲ್ಲಿ ಅನುಮೋದಿಸಿದೆ.

ಹೆಚ್ಚುವರಿಯಾಗಿ, ಉನ್ನತ ಮಟ್ಟದ ಸಮಿತಿಯು ಹಿಮಾಚಲ ಪ್ರದೇಶ, ಉತ್ತರಾಖಂಡ, ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶ ರಾಜ್ಯಗಳಿಗೆ ಒಟ್ಟು 150 ಕೋಟಿ ರೂಪಾಯಿಗಳ GLOF ಅಪಾಯವನ್ನು ತಗ್ಗಿಸುವ ಯೋಜನೆಯ ಪ್ರಸ್ತಾವನೆಯನ್ನು ಅನುಮೋದಿಸಿದೆ. GLOF ಅಪಾಯ ತಗ್ಗಿಸುವಿಕೆ ಯೋಜನೆಯು GLOF ಅಪಾಯಗಳನ್ನು ಪರಿಹರಿಸಲು ಅಗತ್ಯವಾದ ತಗ್ಗಿಸುವಿಕೆ ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ಈ ನಾಲ್ಕು ರಾಜ್ಯಗಳಿಗೆ ಅಗತ್ಯವಾದ ಉತ್ತೇಜನವನ್ನು ನೀಡುತ್ತದೆ.

ಎನ್‌ ಡಿ ಆರ್‌ ಎಫ್ ನಿಂದ 470.50 ಕೋಟಿ ರೂ.ಗಳ ವೆಚ್ಚದಲ್ಲಿ ಯುವ ಆಪ್ತಮಿತ್ರ ಯೋಜನೆಯ (ವೈಎಎಂಎಸ್) ಪ್ರಸ್ತಾವನೆಯನ್ನು ಉನ್ನತ ಮಟ್ಟದ ಸಮಿತಿ ಅನುಮೋದಿಸಿದೆ, ಇದರ ಅಡಿಯಲ್ಲಿ ದೇಶದ 315 ಅತ್ಯಂತ ವಿಪತ್ತು ಪೀಡಿತ ಜಿಲ್ಲೆಗಳಲ್ಲಿ 1300 ತರಬೇತಿ ಪಡೆದ ಆಪ್ತಮಿತ್ರ ಸ್ವಯಂಸೇವಕರನ್ನು ಮಾಸ್ಟರ್ ತರಬೇತುದಾರರನ್ನಾಗಿ ಮಾಡಲಾಗುವುದು ಮತ್ತು ಎನ್‌ ಸಿ ಸಿ, ಎನ್‌ ಎಸ್‌ ಎಸ್, ಎನ್‌ ವೈ ಕೆ ಎಸ್ ಮತ್ತು ಬಿಎಸ್&ಜಿ (ಭಾರತ್ ಸ್ಕೌಟ್ಸ್ & ಗೈಡ್ಸ್) ನಿಂದ 2.37 ಲಕ್ಷ ಸ್ವಯಂಸೇವಕರಿಗೆ ವಿಪತ್ತು ಸನ್ನದ್ಧತೆ ಮತ್ತು ಪ್ರತಿಕ್ರಿಯೆಗಾಗಿ ತರಬೇತಿ ನೀಡಲಾಗುವುದು. ಯಾವುದೇ ವಿಪತ್ತಿನ ಸಂದರ್ಭದಲ್ಲಿ ಸಮುದಾಯವನ್ನು ಮೊದಲ ಪ್ರತಿಸ್ಪಂದಕರನ್ನಾಗಿ ಸಿದ್ಧಪಡಿಸುವ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೃಷ್ಟಿಕೋನಕ್ಕೆ ಇದು ಅನುಗುಣವಾಗಿದೆ. ಈ ಹಿಂದೆ, ಸರ್ಕಾರವು “ಆಪ್ತಮಿತ್ರ” ಯೋಜನೆಯನ್ನು ಜಾರಿಗೆ ತಂದಿದೆ, ಇದರ ಅಡಿಯಲ್ಲಿ ದೇಶದ 350 ಅತ್ಯಂತ ವಿಪತ್ತು ಪೀಡಿತ ಜಿಲ್ಲೆಗಳಲ್ಲಿ ಸುಮಾರು 1 ಲಕ್ಷ ಸಮುದಾಯ ಸ್ವಯಂಸೇವಕರಿಗೆ ವಿಪತ್ತು ಪ್ರತಿಕ್ರಿಯೆಗಾಗಿ ತರಬೇತಿ ನೀಡಲಾಗಿದೆ. ಈ ನುರಿತ ಮತ್ತು ತರಬೇತಿ ಪಡೆದ ‘ಆಪ್ತಮಿತ್ರರು’ಮತ್ತು ‘ಆಪ್ತ ಸಖಿಗಳು’ಯಾವುದೇ ವಿಪತ್ತಿಗೆ ಸ್ಪಂದಿಸುವಲ್ಲಿ ಸ್ಥಳೀಯ ಆಡಳಿತಕ್ಕೆ ಸಹಾಯ ಮಾಡುತ್ತಾರೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ಕೇಂದ್ರ ಸರ್ಕಾರವು ರಾಜ್ಯ ವಿಪತ್ತು ಪರಿಹಾರ ನಿಧಿ (ಎಸ್‌ ಡಿ ಆರ್‌ ಎಫ್) ಅಡಿಯಲ್ಲಿ 14 ರಾಜ್ಯಗಳಿಗೆ 6348 ಕೋಟಿ ರೂ. ಗಳನ್ನು ಮತ್ತು ರಾಜ್ಯ ವಿಪತ್ತು ತಗ್ಗಿಸುವಿಕೆ ನಿಧಿ (ಎಸ್‌ ಡಿ ಎಂ ಎಫ್) ಅಡಿಯಲ್ಲಿ 6 ರಾಜ್ಯಗಳಿಗೆ 672 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ. ಹೆಚ್ಚುವರಿಯಾಗಿ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ನಿಧಿ (ಎನ್‌ ಡಿ ಆರ್‌ ಎಫ್) ಅಡಿಯಲ್ಲಿ 10 ರಾಜ್ಯಗಳಿಗೆ 4265 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ.

 

*****


(Release ID: 2037234) Visitor Counter : 42