ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಸಂಸತ್ತಿನ ಬಜೆಟ್ ಅಧಿವೇಶನ ಆರಂಭದಲ್ಲಿ ಪ್ರಧಾನ ಮಂತ್ರಿ ಭಾಷಣ

Posted On: 22 JUL 2024 11:41AM by PIB Bengaluru

ಇಂದು ಶ್ರಾವಣ ಮಾಸದ ಮೊದಲ ಸೋಮವಾರ, ಮಹತ್ವದ ಅಧಿವೇಶನ ಆರಂಭವಾಗುವ ಶುಭ ದಿನ. ಈ ಸಂದರ್ಭದಲ್ಲಿ ನನ್ನ ಎಲ್ಲಾ ದೇಶದ ಜನತೆಗೆ ಶುಭಾಶಯಗಳನ್ನು ತಿಳಿಸುತ್ತೇನೆ.

ಸಂಸತ್ತಿನ ಮುಂಗಾರು ಅಧಿವೇಶನ ಇಂದಿನಿಂದ ಆರಂಭವಾಗಿದೆ. ಇಡೀ ರಾಷ್ಟ್ರವೇ ಸೂಕ್ಷ್ಮವಾಗಿ ಗಮನಿಸುತ್ತಿದೆ. ಈ ಅಧಿವೇಶನವು ಸಕಾರಾತ್ಮಕ, ರಚನಾತ್ಮಕ ಮತ್ತು ಜನರ ಕನಸುಗಳನ್ನು ನನಸಾಗಿಸಲು ಭದ್ರ ನಾದಿ ಹಾಕುತ್ತದೆ ಎಂದು ಆಶಿಸುತ್ತಿದೆ.

ಸ್ನೇಹಿತರೆ,

ಭಾರತೀಯ ಪ್ರಜಾಪ್ರಭುತ್ವದ ವೈಭವದ ಪಯಣದಲ್ಲಿ ಇದೊಂದು ಮಹತ್ವದ ಮೈಲಿಗಲ್ಲು ಎಂದು ನಾನು ನೋಡುತ್ತೇನೆ. ಸುಮಾರು 60 ವರ್ಷಗಳ ನಂತರ ಸರ್ಕಾರವೊಂದು 3ನೇ ಅವಧಿಗೆ ಅಧಿಕಾರಕ್ಕೆ ಮರಳಿದೆ. ಈ ಅವಧಿಯ ಮೊದಲ ಬಜೆಟ್ ಮಂಡಿಸುವ ಸೌಭಾಗ್ಯ ನನಗೆ ಮತ್ತು ನನ್ನ ಎಲ್ಲ ಸಹೋದ್ಯೋಗಿಗಳಿಗೆ ಸಿಕ್ಕಿರುವುದು ಹೆಮ್ಮೆಯ ವಿಷಯವಾಗಿದೆ. ಭಾರತೀಯ ಪ್ರಜಾಪ್ರಭುತ್ವದ ವೈಭವದ ಪಯಣದಲ್ಲಿ ಇದೊಂದು ಗೌರವಾನ್ವಿತ ಘಟನೆ ಎಂದು ಇಡೀ ದೇಶವೇ ಪರಿಗಣಿಸುತ್ತದೆ. ಇದು ಬಜೆಟ್ ಅಧಿವೇಶನವಾಗಿದ್ದು, ರಾಷ್ಟ್ರಕ್ಕೆ ನಾನು ನೀಡಿದ ಭರವಸೆಗಳನ್ನು ಹಂತ ಹಂತವಾಗಿ ಜಾರಿಗೊಳಿಸುವ ಗುರಿಯೊಂದಿಗೆ ನಾವು ಮುನ್ನಡೆಯುತ್ತಿದ್ದೇವೆ. ‘ಅಮೃತಕಾಲ’ಕ್ಕೆ ಈ ಬಜೆಟ್ ನಿರ್ಣಾಯಕವಾಗಿದೆ. ನಮಗೆ 5 ವರ್ಷಗಳ ಜನಾದೇಶವಿದೆ.  ಇಂದಿನ ಬಜೆಟ್ ಈ 5 ವರ್ಷಗಳಲ್ಲಿ ನಮ್ಮ ಕೆಲಸಗಳಿಗೆ ಹೊಸ  ದಿಕ್ಕನ್ನು ತೋರುತ್ತದೆ. ನಾವು 100 ವರ್ಷಗಳ ಸ್ವಾತಂತ್ರ್ಯ ಸುವರ್ಣ ಮಹೋತ್ಸವ  ಆಚರಿಸುವ 2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತದ ನಮ್ಮ ದೂರದೃಷ್ಟಿಯನ್ನು ಸಾಧಿಸಲು ಬಲವಾದ ಅಡಿಪಾಯ ಹಾಕಲಿದೆ. ಭಾರತವು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿದ್ದು, ಕಳೆದ 3 ವರ್ಷಗಳಲ್ಲಿ 8% ಸ್ಥಿರವಾದ ಜಿಡಿಪಿ ಬೆಳವಣಿಗೆ ದರ ನಿರ್ವಹಿಸುತ್ತಿದೆ ಎಂಬುದು ಪ್ರತಿಯೊಬ್ಬ ನಾಗರಿಕನಿಗೂ ಅಪಾರ ಹೆಮ್ಮೆಯ ವಿಷಯವಾಗಿದೆ. ಇಂದು ಭಾರತವು ಸಕಾರಾತ್ಮಕ ದೃಷ್ಟಿಕೋನ, ಹೂಡಿಕೆಯ ಪೂರಕ ವಾತಾವರಣ ಮತ್ತು ಕಾರ್ಯಕ್ಷಮತೆಯು ಉತ್ತುಂಗದಲ್ಲಿದೆ. ಇದು ನಮ್ಮ ಅಭಿವೃದ್ಧಿ ಪಯಣದಲ್ಲಿ ಪ್ರಮುಖ ಮೈಲಿಗಲ್ಲನ್ನು ಗುರುತಿಸುತ್ತಿದೆ.

ಸ್ನೇಹಿತರೆ,

ಜನವರಿಯಿಂದ ನಾವು ನಮ್ಮೆಲ್ಲಾ ಶಕ್ತಿಯಿಂದ ಹೋರಾಡಿದ್ದೇವೆ, ನಮ್ಮ ಸಂದೇಶಗಳನ್ನು ದೇಶದ ಜನತೆಗೆ ತಿಳಿಸಿದ್ದೇವೆ ಎಂದು ಪರಿಗಣಿಸಲು ಎಲ್ಲಾ ಸಂಸತ್ ಸದಸ್ಯರು ತಮ್ಮ ಪಕ್ಷಕ್ಕೆ ಸೇರಿದವರಾಗಿರಲಿ ಎಂದು ನಾನು ವಿನಂತಿಸುತ್ತೇನೆ. ಕೆಲವರು ಮಾರ್ಗದರ್ಶನ ಮಾಡಲು ಪ್ರಯತ್ನಿಸಿದರೆ, ಇತರರು ದಾರಿ ತಪ್ಪಿಸಲು ಪ್ರಯತ್ನಿಸಿದರು. ಆದರೆ, ಆ ಅವಧಿ ಮುಗಿದು, ಜನರು ತಮ್ಮ ಸ್ಪಷ್ಟ ತೀರ್ಪು ನೀಡಿದ್ದಾರೆ. ಈಗ ಎಲ್ಲಾ ಚುನಾಯಿತ ಸಂಸದರ ಕರ್ತವ್ಯ ಮತ್ತು ಎಲ್ಲಾ ರಾಜಕೀಯ ಪಕ್ಷಗಳ ವಿಶೇಷ ಜವಾಬ್ದಾರಿಯು ಪಕ್ಷದ ಕದನಗಳಿಂದ ಹೊರಬಂದು  ನಮ್ಮ ಗಮನವನ್ನು ಮುಂದಿನ 5 ವರ್ಷಗಳಲ್ಲಿ ದೇಶಕ್ಕಾಗಿ ಹೋರಾಡಲು ಬದಲಾಯಿಸಬೇಕು. ನಾವು ಹೆಚ್ಚಿನ ಸಮಗ್ರತೆ ಮತ್ತು ಸಮರ್ಪಣೆಯೊಂದಿಗೆ ಕಾರ್ಯ ನಿರ್ವಹಿಸಬೇಕು. ಎಲ್ಲಾ ರಾಜಕೀಯ ಪಕ್ಷಗಳು ಪಕ್ಷಪಾತದ ರಾಜಕೀಯದಿಂದ ಹೊರಬಂದು ಮುಂದಿನ 4 - 4.5 ವರ್ಷಗಳ ಕಾಲ ದೇಶಕ್ಕಾಗಿ ಸೇವೆ ಸಲ್ಲಿಸಲು ಸಂಸತ್ತಿನ ಘನತೆಯ ವೇದಿಕೆಯನ್ನು ಸದ್ಬಳಕೆ ಮಾಡಬೇಕು ಎಂದು ನಾನು ಒತ್ತಾಯಿಸುತ್ತೇನೆ.

ಜನವರಿ 2029ರ ನಂತರ, ಅದು ಚುನಾವಣಾ ವರ್ಷವಾದಾಗ, ನೀವು ಆ 6 ತಿಂಗಳು ರಾಜಕೀಯ ಆಟಗಳಲ್ಲಿ ತೊಡಗಬಹುದು. ಆದರೆ ಅಲ್ಲಿಯವರೆಗೆ, ದೇಶದ ಬಡವರು, ರೈತರು, ಯುವಕರು ಮತ್ತು ಮಹಿಳೆಯರ ಸಬಲೀಕರಣಕ್ಕಾಗಿ ಸಾಮೂಹಿಕ ಆಂದೋಲನವನ್ನು ರೂಪಿಸುವ ಮೂಲಕ 2047ರ ಕನಸನ್ನು ನನಸಾಗಿಸಲು ನಾವೆಲ್ಲಾ ನಮ್ಮ ಎಲ್ಲಾ ಪ್ರಯತ್ನಗಳಿಗೆ ಗಮನ ಕೇಂದ್ರೀಕರಿಸಬೇಕು. 2014ರಿಂದ ಕೆಲವು ಸಂಸದರು ಸೇವೆ ಸಲ್ಲಿಸುತ್ತಲೇ ಬಂದಿದ್ದಾರೆ ಎಂದು ಹೇಳಲು ನನಗೆ ಬೇಸರವಾಗಿದೆ. ಕೆಲವರು 5 ವರ್ಷಗಳು, ಮತ್ತೆ ಕೆಲವರು 10 ವರ್ಷಗಳಿಂದಲೂ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಆದರೆ ಅನೇಕರಿಗೆ ತಮ್ಮ ಕ್ಷೇತ್ರಗಳಲ್ಲಿ ಮಾತನಾಡಲು ಅಥವಾ ತಮ್ಮ ಅಭಿಪ್ರಾಯಗಳಿಂದ ಸಂಸತ್ತನ್ನು ಶ್ರೀಮಂತಗೊಳಿಸಲು ಅವಕಾಶವನ್ನೇ ಮಾಡಲಿಲ್ಲ. ಕೆಲವು ಪಕ್ಷಗಳ ಋಣಾತ್ಮಕ ರಾಜಕೀಯವು ತಮ್ಮ ರಾಜಕೀಯ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಪ್ರಮುಖ ಸಂಸತ್ತಿನ ಸಮಯವನ್ನು ದುರುಪಯೋಗಪಡಿಸಿಕೊಂಡಿದೆ. ಸದನದಲ್ಲಿ ಮೊದಲ ಬಾರಿಗೆ ಸಂಸದರಾದವರಿಗೆ ಚರ್ಚೆಯ ಸಮಯದಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಅವಕಾಶ ನೀಡುವಂತೆ ನಾನು ಎಲ್ಲಾ ಪಕ್ಷಗಳನ್ನು ಕೋರುತ್ತೇನೆ. ಸಾಧ್ಯವಾದಷ್ಟು ಧ್ವನಿಗಳನ್ನು ಕೇಳಲು ನಾವು ಅನುಮತಿ ನೀಡಬೇಕು. ಹೊಸ ಸರ್ಕಾರ ರಚನೆಯಾದ ನಂತರ ಸಂಸತ್ತಿನ ಮೊದಲ ಅಧಿವೇಶನದಲ್ಲಿ, 140 ಕೋಟಿ ನಾಗರಿಕರ ಬಹುಮತದಿಂದ ಆಯ್ಕೆಯಾದ ಸರ್ಕಾರದ ಧ್ವನಿಯನ್ನು ಹತ್ತಿಕ್ಕುವ ಅಪ್ರಜಾಸತ್ತಾತ್ಮಕ ಪ್ರಯತ್ನ ನಡೆದಿದೆ. ಪ್ರಜಾಪ್ರಭುತ್ವದಲ್ಲಿ 2.5 ಗಂಟೆಗಳ ಕಾಲ ಪ್ರಧಾನಿಯ ಬಾಯಿ ಮುಚ್ಚಿಸಲು, ಅವರ ಧ್ವನಿಯನ್ನು ಹತ್ತಿಕ್ಕಲು ಅವಕಾಶ ಇರಬಾರದು. ಅಂತಹ ಕ್ರಮಗಳಿಗೆ ಯಾವುದೇ ಪಶ್ಚಾತ್ತಾಪ ಅಥವಾ ವಿಷಾದವಿಲ್ಲ ಎಂಬುದು ಕಳವಳಕಾರಿಯಾಗಿದೆ.

ಇಂದು ನಾಗರಿಕರು ನಮ್ಮನ್ನು ಇಲ್ಲಿಗೆ ಕಳುಹಿಸಿದ್ದು ದೇಶ ಸೇವೆ ಮಾಡಲು ಎಂದು, ಆದರೆ ನಮ್ಮ ಪಕ್ಷಗಳು ಆರಿಸಿ ಕಳಿಸಿಲ್ಲ  ಎಂದು ನಾನು ಒತ್ತಿ ಹೇಳಲು ಬಯಸುತ್ತೇನೆ. ಈ ಸದನವು ರಾಷ್ಟ್ರಕ್ಕಾಗಿ ಅಸ್ತಿತ್ವದಲ್ಲಿದೆಯೇ ಹೊರತು, ಪಕ್ಷಪಾತದ ಹಿತಾಸಕ್ತಿಗಾಗಿ ಅಲ್ಲ. ಈ ಸದನವು ನಮ್ಮ ದೇಶದ 140 ಕೋಟಿ ಜನರನ್ನು ಪ್ರತಿನಿಧಿಸುತ್ತದೆ, ಸಂಸದರನ್ನು ಮಾತ್ರವಲ್ಲ. ನಮ್ಮ ಎಲ್ಲ ಗೌರವಾನ್ವಿತ ಸಂಸದರು ಸಂಪೂರ್ಣ ಸಿದ್ಧತೆಯೊಂದಿಗೆ ಚರ್ಚೆಗೆ ಕೊಡುಗೆ ನೀಡುತ್ತಾರೆ ಎಂದು ನಾನು ನಂಬುತ್ತೇನೆ. ವೈವಿಧ್ಯಮಯ ಅಭಿಪ್ರಾಯಗಳು ಸದಾ ಮೌಲ್ಯಯುತವಾಗಿರುತ್ತವೆ, ಆದರೆ ನಕಾರಾತ್ಮಕತೆ ಹಾನಿಕಾರಕವಾಗಿದೆ. ದೇಶಕ್ಕೆ ನಕಾರಾತ್ಮಕ ಚಿಂತನೆಯ ಅಗತ್ಯವಿಲ್ಲ ಆದರೆ ಪ್ರಗತಿ ಮತ್ತು ಅಭಿವೃದ್ಧಿಯ ಸಿದ್ಧಾಂತದೊಂದಿಗೆ ಮುನ್ನಡೆಯಬೇಕು, ಅದು ನಮ್ಮ ರಾಷ್ಟ್ರವನ್ನು ಹೊಸ ಎತ್ತರಕ್ಕೆ ಏರಿಸುತ್ತದೆ. ಭಾರತದ ಸಾಮಾನ್ಯ ಜನರ ಆಶಯಗಳು ಮತ್ತು ಆಕಾಂಕ್ಷೆಗಳನ್ನು ಈಡೇರಿಸಲು ನಾವು ಈ ಪ್ರಜಾಪ್ರಭುತ್ವ ದೇವಾಲಯವನ್ನು ರಚನಾತ್ಮಕವಾಗಿ ಬಳಸುತ್ತೇವೆ ಎಂದು ನಾನು ಪ್ರಾಮಾಣಿಕವಾಗಿ ಭಾವಿಸುತ್ತೇನೆ.

ಸ್ನೇಹಿತರೆ, ತುಂಬು ಧನ್ಯವಾದಗಳು.

 

*****


(Release ID: 2036489) Visitor Counter : 38