ಹಣಕಾಸು ಸಚಿವಾಲಯ
azadi ka amrit mahotsav

ಯೋಜನಾ ವಿಳಂಬ, ನಿರ್ಮಾಣ ವೆಚ್ಚ ಮತ್ತು ಎಲ್ಲಾ ಅಸಮರ್ಥತೆಗಳನ್ನು ತಗ್ಗಿಸಲು, ಕಟ್ಟಡ ಮಾಹಿತಿ ಮಾದರಿ (ಬಿಐಎಂ) ಅಳವಡಿಕೆ : ಆರ್ಥಿಕ ಸಮೀಕ್ಷೆ 2023-24


ಮೂಲಸೌಕರ್ಯ ಯೋಜನೆಗಳು, ವಿನ್ಯಾಸಗಳು ಮತ್ತು ಆಸ್ತಿಗಳ ಸಾಮರ್ಥ್ಯ ಸುಧಾರಣೆಗೆ ತಂತ್ರಜ್ಞಾನದೊಂದಿಗೆ ಮೂಲಸೌಕರ್ಯ ಅಭಿವೃದ್ಧಿಯ ಸಂಯೋಜನೆ

ಟೆಲಿಕಾಂ ವಲಯದಲ್ಲಿ ನಾವಿನ್ಯತೆ, ಸುಲಲಿತ ವ್ಯಾಪಾರ ಉತ್ತೇಜನಕ್ಕೆ ಸ್ಪೆಕ್ಟ್ರಂ ರೆಗ್ಯುಲೇಟರಿ ಸ್ಯಾಂಡ್‌ ಬಾಕ್ಸ್ (ಎಸ್‌ ಆರ್‌ ಎಸ್)ಗಾಗಿ ಮಾರ್ಗಸೂಚಿ

ಸಾಮಾಜಿಕ ಪರಿಣಾಮಕ್ಕಾಗಿ ಒಳಗೊಳ್ಳುವಿಕೆ, ನಾವಿನ್ಯತೆ ಮತ್ತು ಹೊಂದಾಣಿಕೆ ಉತ್ತೇಜಿಸಲು ಗರಿಷ್ಠ ತಂತ್ರಜ್ಞಾನ ಪರಿವರ್ತನೆಗಾಗಿ ರೂಪಿಸಿದ ಭಾರತ ಎಐ ಕಾರ್ಯಕ್ರಮ

Posted On: 22 JUL 2024 2:25PM by PIB Bengaluru

ಇತ್ತೀಚಿನ ವರ್ಷಗಳಲ್ಲಿ, ಮೂಲಸೌಕರ್ಯ ಯೋಜನೆಗಳು, ವಿನ್ಯಾಸಗಳು ಮತ್ತು ಆಸ್ತಿಗಳ ಸಾಮರ್ಥ್ಯ ಸುಧಾರಣೆಗಾಗಿ ಮೂಲಸೌಕರ್ಯ ಅಭಿವೃದ್ಧಿಯ ವಿವಿಧ ಆಯಾಮಗಳನ್ನು ತಂತ್ರಜ್ಞಾನದೊಂದಿಗೆ ಸಂಯೋಜಿಸಲಾಗಿದೆ ಎಂದು ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್‌ ವ್ಯವಹಾರಗಳ ಖಾತೆ ಸಚಿವ ಶ್ರೀಮತಿ. ನಿರ್ಮಲಾ ಸೀತಾರಾಮನ್‌ ಸಂಸತ್ತಿನಲ್ಲಿಂದು ಮಂಡಿಸಿದ ಆರ್ಥಿಕ ಸಮೀಕ್ಷೆ 2023-24 ಹೇಳಿದೆ. ಬಹುತೇಕ ಎಲ್ಲಾ ಸಚಿವಾಲಯಗಳಲ್ಲಿ ಪಿಎಂ ಗತಿ ಶಕ್ತಿ, ಭುವನ್‌, ಭಾರತ್‌ ಮ್ಯಾಪ್ಸ್‌, ಏಕಗವಾಕ್ಷಿ ವ್ಯವಸ್ಥೆ, ಪರಿವೇಶ್‌ ಪೋರ್ಟಲ್‌, ರಾಷ್ಟ್ರೀಯ ದತ್ತಾಂಶ ವಿಶ್ಲೇಷಣಾ ವೇದಿಕೆ, ಏಕೀಕೃತ ಸಾಗಣೆ ಸಂಪರ್ಕ ವೇದಿಕೆ, ಕಾರ್ಯ ಸಕ್ರಿಯ ಆಡಳಿತ ಮತ್ತು ಸಮಯಕ್ಕೆ ಸರಿಯಾದ ಅನುಷ್ಠಾನ (ಪ್ರಗತಿ), ಭಾರತ ಹೂಡಿಕೆ ಗ್ರಿಡ್‌ (ಐಐಜಿ) ಮತ್ತು ಅದೇ ರೀತಿಯ ಅನೇಕ ಡ್ಯಾಷ್‌ ಬೋರ್ಡ್‌ ಗಳು ಮತ್ತು ಡಾಟಾ ಸ್ಟಾಕ್‌ ಗಳ ಮೂಲಕ ತಂತ್ರಜ್ಞಾನದ ಸಮರ್ಥ ಬಳಕೆ ಮಾಡಲಾಗುತ್ತಿದೆ. 

ದೂರಸಂಪರ್ಕ ವಲಯ

ದೂರಸಂವಹನ ವಲಯದ ತಂತ್ರಜ್ಞಾನಗಳು ಮತ್ತು ಬಳಕೆಯಲ್ಲಿ ಭಾರಿ ಬದಲಾವಣೆ ಕಂಡು ಬಂದಿದ್ದು, ಅದರಲ್ಲೂ ಕಳೆದೊಂದು ದಶಕದಲ್ಲಿ ಹೆಚ್ಚಿನ ಬದಲಾವಣೆಗಳಾಗಿವೆ ಎಂದು ಆರ್ಥಿಕ ಸಮೀಕ್ಷೆ ತಿಳಿಸುತ್ತದೆ. ಸ್ಪೆಕ್ಟ್ರಂ ನಿಯೋಜನೆ ಮತ್ತು ಸಂಬಂಧಿತ ವಿಷಯಗಳು, ದೂರಸಂಪರ್ಕ ಸೇವೆಗಳು ಮತ್ತು ಜಾಲಗಳ ಕುರಿತಾದ ಕಾನೂನುಗಳನ್ನು ಕ್ರೋಢೀಕರಿಸಿ ತಿದ್ದುಪಡಿ ತರಲು ದೂರಸಂಪರ್ಕ ಕಾಯ್ದೆ 2023 ಅನ್ನು ಜಾರಿಗೊಳಿಸಲಾಯಿತು ಎಂದು ಸಮೀಕ್ಷೆ ಹೇಳಿದೆ. 

ದೂರಸಂಪರ್ಕ ಸಾಧನಗಳ ಕಾರ್ಯಕ್ಷಮತೆ, ವಿಶ್ವಾಸಾರ್ಹತೆ ಮತ್ತು ಪರಸ್ಪರ ಕಾರ್ಯಸಾಧ್ಯತೆಯನ್ನು ಖಾತರಿಪಡಿಸಲು ಪರೀಕ್ಷಾ ಪ್ರಯೋಗಾಲಯಗಳ ಪ್ರಾಮುಖ್ಯತೆಯ ಬಗ್ಗೆ ಬೆಳಕು ಚೆಲ್ಲುತ್ತಾ, ರೌಟರ್‌, ಸ್ವಿಚ್‌ ಗಳು, ಬೇಸ್‌ ಸ್ಟೇಷನ್ ಮತ್ತು ಸಂವಹನ ಪ್ರೋಟೋಕಾಲ್ ನಂತಹ ವಿವಿಧ ದೂರಸಂಪರ್ಕ ಸಾಧನಗಳ ಕಾರ್ಯಕ್ಷಮತೆಯ ಮೌಲ್ಯಮಾಪನಕ್ಕೆ ಈ ವಿಶೇಷ ಸೌಲಭ್ಯಗಳು ಆಧುನಿಕ ಪರೀಕ್ಷಾ ಮೂಲಸೌಕರ್ಯಗಳನ್ನು ಹೊಂದಿವೆ ಎಂಬುದನ್ನು ಸಮೀಕ್ಷೆ ಗಮನಿಸಿದೆ. ದೂರಸಂಪರ್ಕ ಉತ್ಪನ್ನಗಳ ಇಎಂಐ/ಇಎಂಸಿಗಾಗಿ, ಸುರಕ್ಷತಾ ಮೌಲ್ಯಮಾಪನ, ತಾಂತ್ರಿಕ ಅಗತ್ಯಗಳುಮತ್ತು ಆರ್‌ ಎಫ್‌ ಪರೀಕ್ಷೆಗಾಗಿ ಅನುಸರಣಾ ಮೌಲ್ಯಮಾಪನ ಸಂಸ್ಥೆಯಾಗಿ 69 ಕ್ಕೂ ಹೆಚ್ಚು ಪ್ರಯೋಗಾಲಯಗಳನ್ನು ಗೊತ್ತುಪಡಿಸಲಾಗಿದೆ.

ಮುಂದುವರಿದು, ದೂರಸಂಪರ್ಕ ವಲಯದಲ್ಲಿ ನಾವಿನ್ಯತೆ ಉತ್ತೇಜನಕ್ಕೆ, ಸುಲಲಿತ ವ್ಯಾಪಾರ ನಿರ್ವಹಣೆಯನ್ನು ವೃದ್ಧಿಸಲು, ʼಮೇಕ್ – ಇನ್ ಇಂಡಿಯಾ” ಪ್ರೋತ್ಸಾಹಕ್ಕೆ ಸಹಸ್ರಮಾನದ ಎಸ್‌ ಆರ್‌ ಎಸ್‌ ಉಪಕ್ರಮದ ಭಾಗವಾಗಿ ಸ್ಪೆಕ್ಟ್ರಂ ರೆಗ್ಯುಲೇಟರಿ ಸ್ಯಾಂಡ್‌ ಬಾಕ್ಸ್ (ಎಸ್‌ ಆರ್‌ ಎಸ್‌) ಅಥವಾ ತಂತಿರಹಿತ ಪರೀಕ್ಷಾ (WiTe) ವಲಯಗಳಿಗೆ ಸರ್ಕಾರ ಮಾರ್ಗಸೂಚಿಗಳನ್ನು ಪ್ರಕಟಿಸಿದೆ ಎಂದು ಸಮೀಕ್ಷೆ ಹೇಳಿದೆ. “ಈ ಉಪಕ್ರಮವು ಸಂಶೋಧನೆ ಮತ್ತು ಅಭಿವೃದ್ಧಿ (ಆರ್‌ & ಡಿ) ಚಟುವಟಿಕೆಗಳಿಗೆ ಅನುವು ಮಾಡಿಕೊಡಲು, ಸ್ಪೆಕ್ಟ್ರಂ ಬ್ಯಾಂಡ್ ಗಳ ಮತ್ತು ಆಧುನಿಕ ತಂತ್ರಜ್ಞಾನ ಆಧಾರಿತ ಅನ್ವೇಷಣೆ ಉತ್ತೇನಕ್ಕೆ ಸರಳೀಕೃತ ನಿಯಂತ್ರಕ ಚೌಕಟ್ಟು ನೀಡಿದೆ ಎಂದು ಸಮೀಕ್ಷೆ ತಿಳಿಸಿದೆ. ವಿವಿಧ ತರಂಗಾಂತರಗಳ ಪ್ರಯೋಗಕ್ಕಾಗಿ ವೈಫೈ ಪರೀಕ್ಷಾ ವಲಯಗಳನ್ನು ನಗರ ಅಥವಾ ದೂರದ ಪ್ರದೇಶದ ಎಂದು ವರ್ಗೀಕರಿಸಲಾಗಿದ್ದು, ಶೈಕ್ಷಣಿಕ ಸಂಸ್ಥೆಗಳು, ಸಂಶೋಧನಾ ಮತ್ತು ಅಭಿವೃದ್ಧಿ ಪ್ರಯೋಗಾಲಯಗಳು, ದೂರಸಂಪರ್ಕ ಸೇವಾದಾತರು ಮತ್ತು ಇತರರಿಗೂ ಅರ್ಹತೆಯನ್ನು ವಿಸ್ತರಿಸಲಾಗಿದೆ ಎಂದು ಸಮೀಕ್ಷೆ ಹೇಳಿದೆ.

ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ವಲಯ

ಪರಿವರ್ತನಾತ್ಮಕ ತಂತ್ರಜ್ಞಾನಗಳ ಗರಿಷ್ಠ ಲಾಭಕ್ಕಾಗಿ ಒಳಗೊಳ್ಳುವಿಕೆ, ನಾವಿನ್ಯತೆ ಮತ್ತು ಹೊಂದಾಣಿಕೆ ಉತ್ತೇಜನಕ್ಕಾಗಿ ಭಾರತ ಎಐ ಕಾರ್ಯಕ್ರಮವನ್ನು ಅಭಿಯಾನ ಕೇಂದ್ರಿತ ವಿಧಾನವಾಗಿ ಸರ್ಕಾರ ಪರಿಗಣಿಸಿದೆ ಎಂದು ಸಮೀಕ್ಷೆ 2023-24 ತಿಳಿಸಿದೆ.

ಸಮೀಕ್ಷೆಯ ಪ್ರಕಾರ, ಆಡಳಿತದಲ್ಲಿ ಕೃತಕಬುದ್ಧಿಮತ್ತೆ (ಎಐ), ಎಐ ಐಪಿ ಮತ್ತು ನಾವಿನ್ಯತೆ, ಎಐ ಕಂಪ್ಯೂಟ್‌ ಮತ್ತು ಸಿಸ್ಟಮ್ಸ್‌, ಎಐಗಾಗಿ ದತ್ತಾಂಶ, ಎಐ ನಲ್ಲಿ ಕೌಶಲ್ಯ ಹಾಗೂ ಎಐ ನೈತಿಕತೆ & ಆಡಳಿತ, ಇವುಗಳ ಭಾರತದ ಕೃತಕಬುದ್ಧಿಮತ್ತೆಯ ಆಧಾರಸ್ತಂಭಗಳಾಗಿವೆ. ʼಭಾರತದಲ್ಲಿ ಎಐ ಮತ್ತು ಭಾರತಕ್ಕಾಗಿ ಎಐʼ ರೂಪಿಸುವ ಭಾಗವಾಗಿ, ಇಂಡಿಯಾಎಐ ಆವೃತ್ತಿಯನ್ನು ಅಕ್ಟೋಬರ್ 2023 ರಲ್ಲಿ ಬಿಡುಗಡೆ ಮಾಡಲಾಯಿತು ಎಂದು ಸಮೀಕ್ಷೆ ಹೇಳಿದೆ. 

ಕೃತಕ ಬುದ್ಧಿಮತ್ತೆಯ ಜಾಗತಿಕ ಪಾಲುದಾರಿಕೆ (ಜಿಪಿಎಐ)ನ ಸಂಸ್ಥಾಪಕ ಸದಸ್ಯ ರಾಷ್ಟ್ರವಾಗಿ ಭಾರವು ಜಿಪಿಎಐ ಗುರಿಗಳು ಮತ್ತು ಉದ್ದೇಶಗಳಿಗೆ ಕೊಡುಗೆ ನೀಡಿದೆ ಮತ್ತು ಜವಾಬ್ದಾರಿಯುತ ಅಭಿವೃದ್ಧಿ, ನಿಯೋಜನೆ ಮತ್ತು ಎಐ ಅಳವಡಿಕೆಗಾಗಿ ವಿವಿಧ ಸ್ಥಳೀಯ ಉಪಕ್ರಮಗಳನ್ನು ರೂಪಿಸುವ ಸಂಬಂಧ ಕಾರ್ಯೋನ್ಮುಖವಾಗಿದೆ ಎಂದು ಸಮೀಕ್ಷೆ ಹೇಳಿದೆ. ಭಾರತದ ಎಐ ಪರಿಸರ ವ್ಯವಸ್ಥೆಯಲ್ಲಿ ಎಐ ನಾವಿನ್ಯತಾ ಸ್ತಂಭಗಳಿಗೆ ಲಭ್ಯತೆ ಮತ್ತು ಜಾಗತಿಕ ಸ್ಪರ್ಧಾತ್ಮಕತೆ ಖಾತರಿಪಡಿಸಲು ಸಮಗ್ರ ಭಾರತ ಎಐ ಅಭಿಯಾನಕ್ಕಾಗಿ ₹10,300 ಕೋಟಿ ಮೊತ್ತದ ಹಂಚಿಕೆಗೆ ಕೇಂದ್ರ ಸಂಪುಟ ಅನುಮೋದನೆ ನೀಡಿದೆ ಎಂದು ಸಮೀಕ್ಷೆ ತಿಳಿಸಿದೆ. “ಭಾರತವನ್ನು ಡಿಜಿಟಲ್‌ ಸಬಲೀಕೃತ ಸಮಾಜವಾಗಿ ಮತ್ತು ಜ್ಞಾನ ಆರ್ಥಿಕತೆಯಾಗಿ ಪರಿವರ್ತಿಸಲು 2015 ರಲ್ಲಿ ಜಾರಿಗೆ ತರಲಾದ ಡಿಜಿಟಲ್‌ ಇಂಡಿಯಾ ಕಾರ್ಯಕ್ರಮದಡಿ, ನಾಗರಿಕ ಕೇಂದ್ರಿತ ಸೇವೆಗಳನ್ನು ಒದಗಿಸಲು ಅನೇಕ ಡಿಜಿಟಲ್‌ ಉಪಕ್ರಮಗಳನ್ನು ಕಾರ್ಯರೂಪಕ್ಕೆ ತರಲಾಗಿದೆ” ಎಂದು ಸಮೀಕ್ಷೆಯಲ್ಲಿ ಉಲ್ಲೇಖಿಸಲಾಗಿದೆ.

ಕಟ್ಟಡ ಮಾಹಿತಿ ಮಾದರಿ (ಬಿಐಎಂ)

ಭಾರತದಲ್ಲಿ ಸಂಕೀರ್ಣ ಮೂಲಸೌಕರ್ಯ ಯೋಜನೆಗಳಿಗೆ, ಕಟ್ಟಡ ಮಾಹಿತಿ ಮಾದರಿ (ಬಿಐಎಂ) ಅಳವಡಿಸುವ ಮೂಲಕ ಯೋಜನಾ ವಿಳಂಬವನ್ನು ಸರಾಸರಿ 39 ತಿಂಗಳು ತಗ್ಗಿಸಬಹುದು, ಮೂಲಸೌಕರ್ಯ ನಿರ್ಮಾಣ ವೆಚ್ಚವನ್ನು ಶೇಕಡ 30 ರಷ್ಟು ಕಡಿತಗೊಳಿಸಬಹುದು, ನಿರ್ವಹಣಾ ವೆಚ್ಚಗಳಲ್ಲಿ ಶೇಕಡ 20 ರಷ್ಟು, ಮಾಹಿತಿ ಮತ್ತು ಎಲ್ಲಾ ಅಸಮರ್ಥತೆಗಳನ್ನು ಶೇಕಡ 20 ರಷ್ಟು, ನಿರ್ಮಾಣ ವಲಯ ಸಂಬಂಧಿತ ಇಂಗಾಲ ಹೊರಸೂಸುವಿಕೆಗಳನ್ನು ಶೇಕಡ 38 ರಷ್ಟು, ನೀರಿನ ಬಳಕೆಯನ್ನು ಶೇಕಡ 10 ರಷ್ಟು ತಗ್ಗಿಸಬಹುದು ಹಾಗೂ ನಿರ್ಮಾಣ ವಲಯದ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಹೂಡಿಕೆಯನ್ನು ಶೇಕಡ 1 ರಷ್ಟು ಸುಧಾರಿಸಬಹುದಾಗಿದೆ. ಇದರಿಂದಾಗಿ ಮತ್ತು ಹೆಚ್ಚುವರಿ ಮೂಲಸೌಕರ್ಯಗಳಲ್ಲಿ ಮರುಹೂಡಿಕೆಯಿಂದಾಗಿ ನಲವತ್ತು ಲಕ್ಷ ಕೌಶಲ್ಯಯುತ ವೃತ್ತಿಪರ ಉದ್ಯೋಗ ಸೃಷ್ಟಿ ಮತ್ತು ಸುಮಾರು 2.5 ದಶಲಕ್ಷ ಹೆಚ್ಚುವರಿ ನಿರ್ಮಾಣ ವಲಯದ ಉದ್ಯೋಗಗಳು ಸೃಷ್ಟಿಯಾಗಲಿವೆ. 

ಭೌತಿಕ ನಿರ್ಮಾಣಕ್ಕೂ ಮುನ್ನ ಡಿಜಿಟಲ್‌ ರೂಪದಲ್ಲಿ ಸೃಷ್ಟಿ ಬಿಐಎಂ ನ ಉದ್ದೇಶವಾಗಿದೆ ಎಂದು ಸಮೀಕ್ಷೆ ಹೇಳಿದೆ. ಬಿಐಎಂ ಅನುಷ್ಠಾನಕ್ಕೆ ಸಂಬಂಧಿಸಿದಂತೆ ನೀತಿ ಆಯೋಗವು ಸವಾಲುಗಳನ್ನು ಗುರುತಿಸಿದ್ದು, ಪರಿಹಾರವನ್ನೂ, ಕಾರ್ಯಸಾಧ್ಯಗೊಳಿಸುವವರನ್ನೂ ಗುರುತಿಸಿದೆ. “ಭಾರತದಲ್ಲಿ ಬಿಐಎಂ ನ ಕ್ಷಿಪ್ರ ಅಳವಡಿಕೆಗೆ ಪರಿಸರ ವ್ಯವಸ್ಥೆ ರೂಪಿಸುವ ಮಾರ್ಗನಕ್ಷೆ ಅನ್ವಯ, ಸೆಂಟ್ರಲ್‌ ವಿಸ್ಟಾ, ಹೊಸ ಸಂಸತ್‌ ಕಟ್ಟಡ, ಸೆಂಟ್ರಲ್‌ ಸೆಕ್ರೆಟರಿಯೇಟ್‌ ಸೇರಿದಂತೆ ಮೂಲಸೌಕರ್ಯ ಯೋಜನೆಗಳಿಗೆ ಮಾರ್ಗನಕ್ಷೆ ಮತ್ತು ತಂತ್ರಗಾರಿಕೆಗಳನ್ನು ನೀಡಲಾಗುತ್ತಿದೆ ಎಂದು ಅದು ಹೇಳಿದೆ.

ಎನ್‌ ಎಚ್‌ ಎ ಐ ಆದ್ಯಂತ ದತ್ತಾಂಶ ಸರೋವರದ ರೂಪದಲ್ಲಿ ವ್ಯಾಪಕ ಡಿಜಿಟಲೀಕರಣವು ಇಡೀ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯಕ್ಕೆ ವಿಸ್ತರಣೆಯಾಗಿದೆ ಮತ್ತು ಕೇಂದ್ರ ಲೋಕೋಪಯೋಗಿ ಇಲಾಖೆಯಡಿ ಸಂಸ್ಥೆವಾರು ಸ್ವೀಕೃತಿಯ ಜೊತೆಗೆ ರಾಷ್ಟ್ರ ರಾಜಧಾನಿ ಪ್ರದೇಶ ಸಾರಿಗೆ ನಿಗಮ, ಎಲ್ಲಾ ಮೆಟ್ರೋ ರೈಲುಗಳು, ಕೈಗಾರಿಕಾ ಸಂಕೀರ್ಣಗಳು ಮತ್ತು ಪ್ರವಾಸೋದ್ಯಮ ಯೋಜನೆಗಳು, ವಿವಿಧ ವಿಮಾನ ನಿಲ್ದಾಣಗಳು, ಹೀಗೆ ಕೆಲವು ಸಚಿವಾಲಯಗಳು ಮತ್ತು ಇಲಾಖೆಗಳು ಬಿಐಎಂ ಅನ್ನು ವ್ಯಾಪಕವಾಗಿ ಮತ್ತು ಗರಿಷ್ಠ ಪ್ರಮಾಣದಲ್ಲಿ ಬಳಸುತ್ತಿವೆ ಎಂದು ಆರ್ಥಿಕ ಸಮೀಕ್ಷೆ ತಿಳಿಸಿದೆ.

 

*****
 


(Release ID: 2035582) Visitor Counter : 40