ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
azadi ka amrit mahotsav

ಭಾರತವನ್ನು ʻಕ್ರೀಡಾ ಸೂಪರ್ ಪವರ್ʼ ಆಗಿ ಮಾಡಲು ಪ್ರತಿಭಾ ಸುಧಾರಣೆಯನ್ನು ಒತ್ತಿ ಹೇಳಿದ  ಡಾ. ಮನ್ಸುಖ್ ಮಂಡಾವಿಯಾ


ʻಕೀರ್ತಿʼ ಕಾರ್ಯಕ್ರಮದ ಎರಡನೇ ಹಂತಕ್ಕೆ ಚಾಲನೆ ನೀಡಿದ ಕೇಂದ್ರ ಸಚಿವರು

"ಭಾರತವು ವೈವಿಧ್ಯತೆ ಮತ್ತು ಸಾಮರ್ಥ್ಯದಿಂದ ತುಂಬಿದೆ. ಭಾರತದಲ್ಲಿ ಬೌದ್ಧಿಕಶಕ್ತಿ, ಮಾನವಶಕ್ತಿ ಅಥವಾ ಪ್ರತಿಭೆಯ ಕೊರತೆ ಎಂದಿಗೂ ಕಾಡಿಲ್ಲ" - ಡಾ. ಮನ್ಸುಖ್ ಮಂಡಾವಿಯಾ

"100 ದಿನಗಳಲ್ಲಿ ʻಕೀರ್ತಿʼ ಕಾರ್ಯಕ್ರಮದಡಿ ಒಂದು ಲಕ್ಷ ಉದಯೋನ್ಮುಖ ಯುವ ಕ್ರೀಡಾಪಟುಗಳನ್ನು ಗುರುತಿಸಲಾಗುವುದು"

Posted On: 19 JUL 2024 3:08PM by PIB Bengaluru

ಕೇಂದ್ರ ಯುವಜನ ವ್ಯವಹಾರಗಳು ಮತ್ತು ಕ್ರೀಡೆ ಹಾಗೂ ಕಾರ್ಮಿಕ ಮತ್ತು ಉದ್ಯೋಗ ಖಾತೆ ಸಚಿವ ಡಾ.ಮನ್ಸುಖ್ ಮಂಡಾವಿಯಾ ಅವರು ಇಂದು ನವದೆಹಲಿಯ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ʻಕೀರ್ತಿʼ (ಖೇಲೋ ಇಂಡಿಯಾ ರೈಸಿಂಗ್ ಟ್ಯಾಲೆಂಟ್ ಐಡೆಂಟಿಫಿಕೇಶನ್) ಕಾರ್ಯಕ್ರಮದ ಎರಡನೇ ಹಂತಕ್ಕೆ ಚಾಲನೆ ನೀಡಿದರು. ಗೌರವಾನ್ವಿತ ಸಂಸತ್ ಸದಸ್ಯರಾದ ಶ್ರೀ ಮನೋಜ್ ತಿವಾರಿ ಮತ್ತು ಶ್ರೀಮತಿ ಕಮಲ್ ಜೀತ್ ಸೆಹ್ರಾವತ್; ಖ್ಯಾತ ಕ್ರೀಡಾಪಟುಗಳು, ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ ಮತ್ತು ಕ್ರೀಡಾ ಪ್ರಾಧಿಕಾರದ (ಸಾಯ್) ಹಿರಿಯ ಅಧಿಕಾರಿಗಳು ಹಾಗೂ ಎಂಸಿಡಿ ಶಾಲಾ ಮಕ್ಕಳು ಸಂದರ್ಭದಲ್ಲಿ ಉಪಸ್ಥಿತರಿದ್ದರು.

Image

ಸಭಿಕರನ್ನು ಉದ್ದೇಶಿಸಿ ಮಾತನಾಡಿದ ಡಾ. ಮಂಡಾವಿಯಾ ಅವರು, "ಭಾರತವು ವೈವಿಧ್ಯತೆ ಮತ್ತು ಸಾಮರ್ಥ್ಯದಿಂದ ತುಂಬಿದೆ. ಭಾರತದಲ್ಲಿ ಬೌದ್ಧಿಕಶಕ್ತಿ, ಮಾನವಶಕ್ತಿ ಅಥವಾ ಪ್ರತಿಭೆಯ ಕೊರತೆ ಎಂದಿಗೂ ಕಾಡಿಲ್ಲ. ನಗರಗಳು ಮಾತ್ರವಲ್ಲ, ಈಶಾನ್ಯ, ಕರಾವಳಿ, ಹಿಮಾಲಯ ಮತ್ತು ಬುಡಕಟ್ಟು ಪ್ರದೇಶಗಳಂತಹ ನಮ್ಮ ದೂರದ ಪ್ರದೇಶಗಳಲ್ಲಿಯೂ ಗುಣಮಟ್ಟದ ಕ್ರೀಡಾಪಟುಗಳು ಇರಬಹುದು. ಪ್ರತಿಭಾವಂತ ಕ್ರೀಡಾಪಟುಗಳನ್ನು ಗುರುತಿಸುವ ಮತ್ತು ಅವರ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವ ಗುರಿಯನ್ನು ʻಕೀರ್ತಿʼ ಉಪಕ್ರಮವು ಹೊಂದಿದೆ," ಎಂದು ಹೇಳಿದರು.

"ನಮ್ಮ ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಅವರು ನಮ್ಮ ಜೀವನದಲ್ಲಿ ಕ್ರೀಡೆಯ ಮಹತ್ವವನ್ನು ಪದೇ ಪದೇ ಒತ್ತಿಹೇಳಿದ್ದಾರೆ. ಭಾರತವನ್ನು ಜಾಗತಿಕ ಕ್ರೀಡಾ ಸೂಪರ್ ಪವರ್ ಮಾಡುವ ಆಶಯದೊಂದಿಗೆ, ಪ್ರತಿಭಾವಂತ ಕ್ರೀಡಾಪಟುಗಳನ್ನು ಪೂರ್ಣ ಹೃದಯದಿಂದ ಬೆಂಬಲಿಸಲು ಸರ್ಕಾರ ಸಕ್ರಿಯ ಕ್ರಮಗಳನ್ನು ಕೈಗೊಂಡಿದೆ. ಇತ್ತೀಚಿನ ವರ್ಷಗಳಲ್ಲಿ ಒಲಿಂಪಿಕ್ಸ್ ಸೇರಿದಂತೆ ವಿವಿಧ ಜಾಗತಿಕ ಪಂದ್ಯಾವಳಿಗಳಲ್ಲಿ ಹೆಚ್ಚಿದ ನಮ್ಮ ಪದಕಗಳ ಸಂಖ್ಯೆಯು ಸರ್ಕಾರದ ಕೇಂದ್ರೀಕೃತ ಕಾರ್ಯವಿಧಾನವನ್ನು ಸೂಚಿಸುತ್ತದೆ. ಈ ಉನ್ನತ ಕಾರ್ಯಕ್ಷಮತೆಯ ಪ್ರತಿಭೆಗಳ ಸ್ಥಿರವಾದ ಹರಿವನ್ನು ನಾವು ಕಾಯ್ದುಕೊಳ್ಳಬೇಕು. ನಮ್ಮ ಕ್ರೀಡಾ ಶ್ರೇಷ್ಠತೆಯ ಮೆಟ್ಟಿಲಾದ ʻಕೀರ್ತಿʼಯ ಪಾತ್ರ ಮುಖ್ಯವಾಗುವುದು ಇಲ್ಲಿಯೇ," ಎಂದು ಡಾ ಮಂಡಾವಿಯಾ ಹೇಳಿದರು.

ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ ಸಾವಿರಾರು ಶಾಲಾ ಮಕ್ಕಳೊಂದಿಗೆ ಮಾತನಾಡಿದ ಡಾ.ಮಂಡಾವಿಯಾ ಅವರು, "ನಿಮ್ಮಲ್ಲಿ ಖಂಡಿತವಾಗಿಯೂ ಒಲಿಂಪಿಕ್ ಚಾಂಪಿಯನ್ ಇರುತ್ತಾರೆ. ನಿಮ್ಮ ಪೋಷಕರು ಬಂದು ಕ್ರೀಡೆಗಳನ್ನು ಆಡಲು ನಿಮ್ಮನ್ನು ಪ್ರೋತ್ಸಾಹಿಸುತ್ತಿದ್ದಾರೆ ಎಂದರೆ ಅದು ನಿಜಕ್ಕೂ ಪ್ರಶಂಸನೀಯ,ʼʼ ಎಂದು ಹೇಳಿದರು.  ಬಹುಶಃ ಒಂದು ದಿನ ನೀವು ಒಲಿಂಪಿಕ್ ಪದಕ ಗೆದ್ದಾಗ, ನೀವು ಅಥವಾ ನಿಮ್ಮ ಪೋಷಕರು ಜೆಎಲ್ಎನ್ ಕ್ರೀಡಾಂಗಣದಲ್ಲಿ ದಿನವನ್ನು ನೆನಪಿಸಿಕೊಳ್ಳುತ್ತೀರಿ ಎಂದು ಕೇಂದ್ರ ಸಚಿವರು ಹೇಳಿದರು.

ʻಕೀರ್ತಿʼ ಕಾರ್ಯಕ್ರಮದಡಿ 100 ದಿನಗಳಲ್ಲಿ 1 ಲಕ್ಷ ಉದಯೋನ್ಮುಖ ಯುವ ಕ್ರೀಡಾಪಟುಗಳನ್ನು ಗುರುತಿಸಲು ಸರ್ಕಾರ ನಿರ್ಧರಿಸಿದೆ ಎಂದು ಡಾ.ಮಂಡಾವಿಯಾ ಮಾಹಿತಿ ನೀಡಿದರು. ʻಕೀರ್ತಿʼ ಕಾರ್ಯಕ್ರಮದಡಿ, ಪ್ರತಿಯೊಬ್ಬರಿಗೂ ತಮ್ಮ ಕ್ರೀಡಾ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳಲು ಅವಕಾಶಗಳನ್ನು ನೀಡಲಾಗುವುದು, ಅವರು ಹಳ್ಳಿಯಲ್ಲಿ ವಾಸಿಸುತ್ತಿರಲಿ ಅಥವಾ ನಗರದಲ್ಲಿ ವಾಸಿಸುತ್ತಿರಲಿ, ಅವರು ಬಡತನದ ಹಿನ್ನೆಲೆಯಿಂದ ಬಂದವರಾಗಿರಲಿ ಅಥವಾ ಬೇರೆ ರೀತಿಯಲ್ಲಿರಲಿ, ಎಲ್ಲರಿಗೂ ಪ್ರತಿಭಾ ವೃದ್ಧಿಗೆ ಅವಕಾಶ ಕಲ್ಪಿಸಲಾಗುವುದು  ಎಂದು ಅವರು ಉಲ್ಲೇಖಿಸಿದರು.
 


 

ಇಂದಿನ ಕಾರ್ಯಕ್ರಮವು ರಾಷ್ಟ್ರವ್ಯಾಪಿ ಪ್ರತಿಭಾನ್ವೇಷಣೆಯ ಆರಂಭಕ್ಕೆ ಶ್ರೀಕಾರ ಬರೆದಿದೆ. ಇದು 2047 ವೇಳೆಗೆ ಭಾರತವನ್ನು ಒಲಿಂಪಿಕ್ ಕ್ರೀಡಾಕೂಟದಲ್ಲಿ ಅಗ್ರ 5 ರಾಷ್ಟ್ರಗಳಲ್ಲಿ ಒಂದಾಗಿಸಲು ಆರಂಭಿಕ ಮೆಟ್ಟಿಲಾಗಲಿದೆ. ಕುತೂಹಲಕಾರಿ ಸಂಗತಿಯೆಂದರೆ, ವರ್ಷ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ 117 ಕ್ರೀಡಾಪಟುಗಳಲ್ಲಿ 28 ಮಂದಿ ʻಖೇಲೋ ಇಂಡಿಯಾʼ ಪರಿಸರ ವ್ಯವಸ್ಥೆಯಿಂದ ಹೊರಹೊಮ್ಮಿದವರು.

ʻಕೀರ್ತಿʼಯ ಪ್ರತಿಭಾನ್ವೇಷಣೆ ಮಾದರಿಯನ್ನು ಐಟಿ ಸಾಧನಗಳು ಮತ್ತು ಜಾಗತಿಕ ಅತ್ಯುತ್ತಮ ಅಭ್ಯಾಸಗಳನ್ನು ಬಳಸಿಕೊಂಡು ವೈಜ್ಞಾನಿಕವಾಗಿ ಯೋಜಿಸಲಾಗಿದೆ. ಕೀರ್ತಿ ಕಾರ್ಯಕ್ರಮವು ಅಂತರವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ. ಜೊತೆಗೆ, ಯುವ ಉದಯೋನ್ಮುಖ ಕ್ರೀಡಾಪಟುಗಳಿಗೆ ಅವರ ಸಾಮರ್ಥ್ಯಗಳ ಆಧಾರದ ಮೇಲೆ ವೃತ್ತಿಜೀವನದ ಮಾರ್ಗವನ್ನು ಆಯ್ಕೆ ಮಾಡಲು ಮಾರ್ಗದರ್ಶನ ನೀಡುತ್ತದೆ.

ʻಪ್ರಾಜೆಕ್ಟ್ ಕೀರ್ತಿʼ ಕಾರ್ಯಕ್ರಮವು ತನ್ನ ವಿಕೇಂದ್ರೀಕೃತ ಮತ್ತು ವಿಭಾಗ ಆಧಾರಿತ ಪ್ರತಿಭಾನ್ವೇಷಣೆ ವಿಧಾನದ ಮೂಲಕ ಎರಡು ಉದ್ದೇಶಗಳನ್ನು ಸಾಧಿಸಲು ಪ್ರಯತ್ನಿಸುತ್ತದೆ, ಅವೆಂದರೆ:  ಸಾಮೂಹಿಕ ಭಾಗವಹಿಸುವಿಕೆ ಮತ್ತು ಕ್ರೀಡೆಯಲ್ಲಿ ಉತ್ಕೃಷ್ಟತೆ. ʻಕೀರ್ತಿʼ ಯೋಜನೆಯು 100 ಸ್ಥಳಗಳಲ್ಲಿ 100 ದಿನಗಳಲ್ಲಿ 1 ಲಕ್ಷಕ್ಕೂ ಹೆಚ್ಚು ಮೌಲ್ಯಮಾಪನಗಳನ್ನು ಮುಗಿಸುವ ಮೂಲಕ ಪ್ರತಿಭಾನ್ವೇಷಣೆ ಮತ್ತು ಪ್ರತಿಭಾ ಅಭಿವೃದ್ಧಿಯನ್ನು ವೇಗಗೊಳಿಸುವ ಬದ್ಧತೆಯನ್ನು ಒತ್ತಿಹೇಳುತ್ತದೆ. ಅಲ್ಲದೆ, ನಂತರ ಕಾರ್ಯಾಚರಣೆಗಳನ್ನು ಹೆಚ್ಚಿಸಿ, ಒಂದು ವರ್ಷದೊಳಗೆ 20 ಲಕ್ಷ ಮೌಲ್ಯಮಾಪನಗಳನ್ನು ನಡೆಸಲಿದೆ.

 


ದೆಹಲಿಯಲ್ಲಿ, ʻಭಾರತೀಯ ಕ್ರೀಡಾ ಪ್ರಾಧಿಕಾರʼ ಮತ್ತು ʻದೆಹಲಿ ಮುನ್ಸಿಪಲ್ ಕಾರ್ಪೊರೇಷನ್ʼ (ಎಂಸಿಡಿ) ಸಹಯೋಗದೊಂದಿಗೆ ಒಟ್ಟು 12 ವಲಯಗಳಲ್ಲಿ 25000ಕ್ಕೂ ಹೆಚ್ಚು ʻಎಂಸಿಡಿʼ ವಿದ್ಯಾರ್ಥಿಗಳ ʻಕೀರ್ತಿʼ ಮೌಲ್ಯಮಾಪನವನ್ನು ನಡೆಸಲಾಗುವುದು. ಮೌಲ್ಯಮಾಪನಗಳು ಒಟ್ಟು 27 ದಿನಗಳವರೆಗೆ ಮುಂದುವರಿಯುತ್ತವೆ ಮತ್ತು ಅಥ್ಲೆಟಿಕ್ಸ್, ಫುಟ್ಬಾಲ್, ವಾಲಿಬಾಲ್, ಕಬಡ್ಡಿ ಮತ್ತು ಖೋ-ಖೋ ಎಂಬ 5 ಪ್ರಮುಖ ವಿಭಾಗಗಳನ್ನು ಒಳಗೊಂಡಿರುತ್ತವೆ.

ʻದೆಹಲಿ ಮುನ್ಸಿಪಲ್ ಕಾರ್ಪೊರೇಷನ್ʼ, 2022-23ರಲ್ಲಿ ತಮ್ಮ ಪ್ರಾಯೋಗಿಕ ಯೋಜನೆಯಲ್ಲಿ ಫುಟ್ಬಾಲ್, ವಾಲಿಬಾಲ್ ಮುಂತಾದ ವಿವಿಧ ಕ್ರೀಡೆಗಳನ್ನು ಒಳಗೊಂಡ 6-10 ವರ್ಷ ವಯಸ್ಸಿನ ಯುವ ʻಎಂಸಿಡಿʼ ವಿದ್ಯಾರ್ಥಿಗಳಿಗೆ ದೆಹಲಿಯಾದ್ಯಂತ ವಿವಿಧ ಕ್ರೀಡಾ ಶಿಬಿರಗಳನ್ನು ಆಯೋಜಿಸಿತ್ತು.

3ನೇ ಹಂತದಲ್ಲಿ, ʻಕೀರ್ತಿʼ ಕಾರ್ಯಕ್ರಮದ ವ್ಯಾಪ್ತಿಗೆ ʻಖೇಲೋ ಇಂಡಿಯಾʼ ಯೋಜನೆಯ ಎಲ್ಲಾ 20 ವಿಭಾಗಗಳು ಸೇರ್ಪಡೆಯಾಗಲಿವೆ.

ʻಕೀರ್ತಿʼ ಕಾರ್ಯಕ್ರಮದ ಮೊದಲ ಹಂತವನ್ನು ವರ್ಷದ ಮಾರ್ಚ್ 12 ರಂದು ಚಂಡೀಗಢದಲ್ಲಿ ಪ್ರಾರಂಭಿಸಲಾಯಿತು.

ʻಕೀರ್ತಿʼ ಹಂತ-2 ಪ್ರಾರಂಭವನ್ನು ವೀಕ್ಷಿಸಲು, ಇಲ್ಲಿ ಕ್ಲಿಕ್ ಮಾಡಿ.

https://www.youtube.com/live/pLLZfrtVO2E

ʻಕೀರ್ತಿʼ ಕಾರ್ಯಕ್ರಮದ ವಿವರಣೆಯನ್ನು ಓದಲು, ಇಲ್ಲಿ ಕ್ಲಿಕ್ ಮಾಡಿ.

https://pib.gov.in/PressNoteDetails.aspx?NoteId=151938&ModuleId=3


*****


(Release ID: 2034586) Visitor Counter : 41