ಪ್ರಧಾನ ಮಂತ್ರಿಯವರ ಕಛೇರಿ

22ನೇ ʻಭಾರತ-ರಷ್ಯಾ ವಾರ್ಷಿಕ ಶೃಂಗಸಭೆʼ ಬಳಿಕ ಉಭಯ ದೇಶಗಳ ಜಂಟಿ ಹೇಳಿಕೆ

Posted On: 09 JUL 2024 9:54PM by PIB Bengaluru

ಭಾರತ-ರಷ್ಯಾ: ನಿರಂತರ ಮತ್ತು ವಿಸ್ತರಿಸುತ್ತಿರುವ ಪಾಲುದಾರಿಕೆ

1. 22ನೇ ಭಾರತ-ರಷ್ಯಾ ವಾರ್ಷಿಕ ಶೃಂಗಸಭೆಗಾಗಿ ರಷ್ಯಾ ಒಕ್ಕೂಟದ ಅಧ್ಯಕ್ಷರಾದ ಘನತೆವೆತ್ತ ಶ್ರೀ ವ್ಲಾಡಿಮಿರ್ ಪುಟಿನ್ ಅವರ ಆಹ್ವಾನದ ಮೇರೆಗೆ ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2024ರ ಜುಲೈ 8 ಮತ್ತು 9ರಂದು ರಷ್ಯಾ ಒಕ್ಕೂಟಕ್ಕೆ ಅಧಿಕೃತ ಭೇಟಿ ನೀಡಿದರು.

2. ಈ ಭೇಟಿಯ ವೇಳೆ, ಗೌರವಾನ್ವಿತ ಅಧ್ಯಕ್ಷರಾದ ವ್ಲಾಡಿಮಿರ್‌ ಪುಟಿನ್ ಅವರು ಭಾರತ ಮತ್ತು ರಷ್ಯಾ ನಡುವಿನ ವಿಶಿಷ್ಟ ಮತ್ತು ವಿಶೇಷ ವ್ಯೂಹಾತ್ಮಕ ಪಾಲುದಾರಿಕೆಯ ಅಭಿವೃದ್ಧಿಗೆ ಹಾಗೂ ಉಭಯ ದೇಶಗಳ ಜನರ ನಡುವಿನ ಸ್ನೇಹ ಸಂಬಂಧಗಳಿಗೆ ನೀಡಿದ ವಿಶಿಷ್ಟ ಕೊಡುಗೆಗಾಗಿ ರಷ್ಯಾದ ಅತ್ಯುನ್ನತ ನಾಗರಿಕ ಗೌರವ "ಆರ್ಡರ್ ಆಫ್ ಸೇಂಟ್ ಆಂಡ್ರ್ಯೂ ದಿ ಅಪೊಸ್ಟಲ್" ಅನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಪ್ರದಾನ ಮಾಡಿದರು.

ರಾಜಕೀಯ ಸಂಬಂಧಗಳು

3. ಭಾರತ ಮತ್ತು ರಷ್ಯಾ ನಡುವಿನ ವಿಶಿಷ್ಟ ಮತ್ತು ವಿಶೇಷ ವ್ಯೂಹಾತ್ಮಕ ಪಾಲುದಾರಿಕೆಯು ನಿರಂತರವಾಗಿ ಬಲವರ್ಧನೆಯಾಗುತ್ತಿರುವ ಹಾಗೂ ಆಳವಾಗುತ್ತಿರುವ ಬಗ್ಗೆ ನಾಯಕರು ಉಲ್ಲೇಖಿಸಿದರು.

4. ವಿಶ್ವಾಸ, ಪರಸ್ಪರ ತಿಳಿವಳಿಕೆ ಮತ್ತು ಕಾರ್ಯತಂತ್ರದ ವಿಚಾರದಲ್ಲಿ ಒಮ್ಮತವನ್ನು ಆಧರಿಸಿದ ಈ ಸುದೀರ್ಘ ಸಂಬಂಧದ ವಿಶೇಷ ಸ್ವರೂಪವನ್ನು ಉಭಯ ನಾಯಕರು ಬಹುವಾಗಿ ಶ್ಲಾಘಿಸಿದರು. 2023ರಲ್ಲಿ ನಡೆದ ʻಶಾಂಘೈ ಸಹಕಾರ ಒಕ್ಕೂಟʼದ(ಎಸ್‌ಸಿಒ) ಸಭೆ ಮತ್ತು ಭಾರತದ ಅಧ್ಯಕ್ಷತೆಯಲ್ಲಿ ನಡೆದ ʻಜಿ20ʼ ಶೃಂಗಸಭೆ ಹಾಗೂ 2024ರಲ್ಲಿ ರಷ್ಯಾದ ಅಧ್ಯಕ್ಷತೆಯಲ್ಲಿ ನಡೆದ ʻಬ್ರಿಕ್ಸ್ʼ ಶೃಂಗಸಭೆ ಸೇರಿದಂತೆ ಎಲ್ಲಾ ಹಂತಗಳಲ್ಲಿ ಕಾಲಕಾಲಕ್ಕೆ ನಡೆಸಲಾದ ದ್ವಿಪಕ್ಷೀಯ ಮಾತುಕತೆಗಳು, ಬೆಳೆಯುತ್ತಿರುವ ದ್ವಿಪಕ್ಷೀಯ ಪಾಲುದಾರಿಕೆಯನ್ನು ಮತ್ತಷ್ಟು ಆಳಗೊಳಿಸಲು ಹಾಗೂ ವಿಸ್ತರಿಸಲು ನೆರವಾಗಿವೆ.

5. ರಾಜಕೀಯ ಮತ್ತು ವ್ಯೂಹಾತ್ಮಕತೆ, ಮಿಲಿಟರಿ ಮತ್ತು ಭದ್ರತೆ, ವ್ಯಾಪಾರ ಮತ್ತು ಹೂಡಿಕೆ, ಇಂಧನ, ವಿಜ್ಞಾನ ಮತ್ತು ತಂತ್ರಜ್ಞಾನ, ಪರಮಾಣು, ಬಾಹ್ಯಾಕಾಶ, ಸಾಂಸ್ಕೃತಿಕ, ಶಿಕ್ಷಣ ಮತ್ತು ಮಾನವೀಯ ಸಹಕಾರ ಸೇರಿದಂತೆ ಸಹಕಾರದ ಎಲ್ಲ ಕ್ಷೇತ್ರಗಳನ್ನು ವ್ಯಾಪಿಸಿರುವ; ಹಾಗೂ ಸ್ವರೂಪದಲ್ಲಿ ಬಹುಮುಖಿ ಮತ್ತು ಪರಸ್ಪರ ಪ್ರಯೋಜನಕಾರಿಯಾಗಿರುವ ಭಾರತ-ರಷ್ಯಾ ಸಂಬಂಧಗಳ ಬಗ್ಗೆ ನಾಯಕರು ಸಕಾರಾತ್ಮಕವಾಗಿ ಮೌಲ್ಯಮಾಪನ ಮಾಡಿದರು. ಸಾಂಪ್ರದಾಯಿಕ ಕ್ಷೇತ್ರಗಳಲ್ಲಿ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಜೊತೆಗೆ ಎರಡೂ ಕಡೆಯವರು ಸಹಕಾರಕ್ಕಾಗಿ ಹೊಸ ಮಾರ್ಗಗಳನ್ನು ಸಕ್ರಿಯವಾಗಿ ಅನ್ವೇಷಿಸುತ್ತಿದ್ದಾರೆ ಎಂದು ನಾಯಕರು ತೃಪ್ತಿ ವ್ಯಕ್ತಪಡಿಸಿದರು.  

6. ಹಾಲಿ ಇರುವ ಸಂಕೀರ್ಣ, ಸವಾಲಿನ ಮತ್ತು ಅನಿಶ್ಚಿತ ಭೌಗೋಳಿಕ-ರಾಜಕೀಯ ಪರಿಸ್ಥಿತಿಯ ಹಿನ್ನೆಲೆಯಲ್ಲಿ
ಭಾರತ-ರಷ್ಯಾ ಸಂಬಂಧಗಳು ಸದೃಢವಾಗಿ ಉಳಿದಿವೆ ಎಂದು ಉಭಯ ನಾಯಕರು ಒತ್ತಿಹೇಳಿದರು. ಎರಡೂ ಕಡೆಯವರು ಸಮಕಾಲೀನ, ಸಮತೋಲಿತ, ಪರಸ್ಪರ ಲಾಭದಾಯಕ, ಸುಸ್ಥಿರ ಮತ್ತು ದೀರ್ಘಕಾಲೀನ ಪಾಲುದಾರಿಕೆಯನ್ನು ರೂಪಿಸಲು ಶ್ರಮಿಸಿದ್ದಾರೆ. ಇಡೀ ಸಹಕಾರ ಕ್ಷೇತ್ರದ ಸಂಪೂರ್ಣ ವ್ಯಾಪ್ತಿಯಲ್ಲಿ, ಪರಸ್ಪರ ಹಂಚಿಕೊಂಡ ಸಮಾನ ವಿದೇಶಾಂಗ ನೀತಿಯ ಆದ್ಯತೆಯೊಂದಿಗೆ ಭಾರತ-ರಷ್ಯಾ ಸಂಬಂಧಗಳನ್ನು ಅಭಿವೃದ್ಧಿಪಡಿಸಲಾಗಿದೆ. ವ್ಯೂಹಾತ್ಮಕ ಪಾಲುದಾರಿಕೆಯ ಸಂಪೂರ್ಣ ಸಾಮರ್ಥ್ಯವನ್ನು ಅನಾವರಣ ಮಾಡಲು ಎಲ್ಲಾ ಪ್ರಯತ್ನಗಳನ್ನು ಮಾಡಲು ಉಭಯ ನಾಯಕರು ಸಹಮತ ವ್ಯಕ್ತಪಡಿಸಿದರು.

ವಿದೇಶಾಂಗ ಸಚಿವಾಲಯಗಳ ಮಟ್ಟದಲ್ಲಿ ಸಹಕಾರ

7. ಸಂಕೀರ್ಣವಾದ ಮತ್ತು ನಿರಂತರವಾಗಿ ವಿಕಸನಗೊಳ್ಳುತ್ತಿರುವ ಭೌಗೋಳಿಕ-ರಾಜಕೀಯ ಸನ್ನಿವೇಶದ ನಡುವೆ ದ್ವಿಪಕ್ಷೀಯ ಪಾಲುದಾರಿಕೆಯನ್ನು ಪೋಷಿಸಲು, ಮುನ್ನಡೆಸಲು ಹಾಗೂ ಬದಲಾಗುತ್ತಿರುವ ಪರಿಸ್ಥಿತಿಗಳಿಗೆ ಹೊಂದಿಕೊಳ್ಳಲು ವಿದೇಶಾಂಗ ಸಚಿವಾಲಯಗಳ ನಡುವಿನ ನಿಕಟ ಸಹಕಾರ ಮತ್ತು ವಿದೇಶಾಂಗ ಸಚಿವರ ನಡುವೆ ಆಗಾಗ್ಗೆ ನಡೆಯುವ ಸಭೆಗಳು ಮತ್ತು ಅಭಿಪ್ರಾಯ ವಿನಿಮಯಗಳನ್ನು ನಾಯಕರು ಶ್ಲಾಘಿಸಿದರು. ಉಭಯ ದೇಶಗಳ ನಡುವೆ ನಿಯಮಿವಾದ ನಿಕಟ ಒಡನಾಟದಿಂದ ಪರಸ್ಪರ ಪ್ರಮುಖ ಹಿತಾಸಕ್ತಿಗಳ ಬಗ್ಗೆ ಆಳವಾಗಿ ಅರಿಯಲು; ಅಂತಾರಾಷ್ಟ್ರೀಯ ವಿಷಯಗಳು ಹಾಗೂ ವಿವಿಧ ಅಂತಾರಾಷ್ಟ್ರೀಯ ಮತ್ತು ಬಹುಪಕ್ಷೀಯ ಸಂಸ್ಥೆಗಳ ವಿಚಾರದಲ್ಲಿ ಹೊಂದಿರುವ ನಿಲುವುಗಳ ಬಗ್ಗೆ ತಿಳಿವಳಿಕೆ ಪಡೆಯಲು ಸಹಾಯ ಮಾಡಿದೆ.

8. ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ರಷ್ಯಾ ಒಕ್ಕೂಟದ ವಿದೇಶಾಂಗ ವ್ಯವಹಾರಗಳ ಸಚಿವಾಲಯಗಳು 2023ರ ಡಿಸೆಂಬರ್‌ನಲ್ಲಿ ಸಹಿ ಹಾಕಿದ ʻ2024-28ರ ಅವಧಿಯ ವಿದೇಶಾಂಗ ಕಚೇರಿ ಸಮಾಲೋಚನೆಗಳ ಶಿಷ್ಟಾಚಾರʼವನ್ನು ನಾಯಕರು ಸ್ವಾಗತಿಸಿದರು. ಇದು ಅತ್ಯಂತ ಒತ್ತಡದ ದ್ವಿಪಕ್ಷೀಯ, ಜಾಗತಿಕ ಮತ್ತು ಪ್ರಾದೇಶಿಕ ವಿಷಯಗಳ ಬಗ್ಗೆ ಅಭಿಪ್ರಾಯ ವಿನಿಮಯ ಮತ್ತು ಸಂವಾದಕ್ಕೆ ಅಡಿಪಾಯ ಹಾಕುತ್ತದೆ. ದ್ವಿಪಕ್ಷೀಯ, ವಿಶ್ವಸಂಸ್ಥೆ ಸಂಬಂಧಿತ, ಭಯೋತ್ಪಾದನೆ ನಿಗ್ರಹ, ಕಾನ್ಸುಲರ್ ಮತ್ತು ಆಸ್ತಿ ವಿಷಯಗಳು ಹಾಗೂ ಪರಸ್ಪರ ಹಿತಾಸಕ್ತಿಯ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಬಗ್ಗೆ ನಿಯಮಿತವಾಗಿ ವಿದೇಶಾಂಗ ಕಚೇರಿಗಳು ಸಮಾಲೋಚನೆಗಳನ್ನು ನಡೆಸುತ್ತಿರುವುದರ ಬಗ್ಗೆ ಅವರು ತೃಪ್ತಿ ವ್ಯಕ್ತಪಡಿಸಿದರು.

ಸಂಸದೀಯ ಸಹಕಾರ

9. ನಿಕಟವಾದ ಅಂತರ-ಸಂಸದೀಯ ಸಂವಾದದ ಬಗ್ಗೆ ಉಭಯ ನಾಯಕರು ಪ್ರಸ್ತಾಪಿಸಿದರು. ಭಾರತ-ರಷ್ಯಾ ಸಂಬಂಧಗಳ ಮೌಲ್ಯಯುತ ಅಂಶದ ಭಾಗವಾಗಿ, ʻಅಂತರ-ಸಂಸದೀಯ ಆಯೋಗʼ ಮತ್ತು ʻಉಭಯ ಸದನಗಳ ಸಂಸದೀಯ ಮಿತ್ರ ಪಡೆʼಗಳು ನಿಯಮಿತವಾಗಿ ಸಭೆ ಸೇರುವುದರ ಮಹತ್ವವನ್ನು ಅವರು ಒತ್ತಿ ಹೇಳಿದರು. 9ನೇ ʻಜಿ20 ಸಂಸದೀಯ ಸ್ಪೀಕರ್‌ಗಳ ಶೃಂಗಸಭೆʼಗಾಗಿ 2023ರ ಅಕ್ಟೋಬರ್‌ನಲ್ಲಿ ʻರಷ್ಯಾ ಫೆಡರೇಷನ್‌ ಕೌನ್ಸಿಲ್‌ʼನ ಸ್ಪೀಕರ್ ನವದೆಹಲಿಗೆ ಭೇಟಿ ನೀಡಿದ್ದನ್ನು ಅವರು ಶ್ಲಾಘಿಸಿದರು.

ʻರಾಷ್ಟ್ರೀಯ ಭದ್ರತಾ ಮಂಡಳಿʼಗಳ ನಡುವೆ ಸಹಕಾರ

10. ದ್ವಿಪಕ್ಷೀಯ ಮತ್ತು ಪ್ರಾದೇಶಿಕ ವಿಷಯಗಳ ಬಗ್ಗೆ ʻರಾಷ್ಟ್ರೀಯ ಭದ್ರತಾ ಸಲಹೆಗಾರʼರು ಮತ್ತು ʻರಾಷ್ಟ್ರೀಯ ಭದ್ರತಾ ಮಂಡಳಿʼಗಳ ಮಟ್ಟದಲ್ಲಿ ಭದ್ರತಾ ಸಂವಾದದ ಮಹತ್ವವನ್ನು ನಾಯಕರು ಒತ್ತಿ ಹೇಳಿದರು. ದ್ವಿಪಕ್ಷೀಯ ಮತ್ತು ಪರಸ್ಪರ ಕಾಳಜಿ ಹೊಂದಿರುವ ಜಾಗತಿಕ ಮತ್ತು ಪ್ರಾದೇಶಿಕ ವಿಷಯಗಳ ಬಗ್ಗೆ ಉಭಯ ದೇಶಗಳ ನಡುವೆ ಸುಧಾರಿತ ಕಾರ್ಯತಂತ್ರ ಮತ್ತು ಸಮನ್ವಯಕ್ಕೆ ಅನುಕೂಲವಾಗುವ ರೀತಿಯಲ್ಲಿ ನಿಯಮಿತ ಸಮಾಲೋಚನೆಗಳನ್ನು ಅವರು ಸ್ವಾಗತಿಸಿದರು.

ವ್ಯಾಪಾರ ಮತ್ತು ಆರ್ಥಿಕ ಪಾಲುದಾರಿಕೆ

11. 2023ರಲ್ಲಿ ದ್ವಿಪಕ್ಷೀಯ ವ್ಯಾಪಾರದ ಗಮನಾರ್ಹ ಬೆಳವಣಿಗೆಯ ಬಗ್ಗೆ ಉಭಯ ನಾಯಕರು ತೃಪ್ತಿ ವ್ಯಕ್ತಪಡಿಸಿದರು. ಇದು 2025ಕ್ಕೆ ನಾಯಕರು ನಿಗದಿಪಡಿಸಿದ 30 ಶತಕೋಟಿ ಅಮೆರಿಕನ್‌ ಡಾಲರ್‌ ದ್ವಿಪಕ್ಷೀಯ ವ್ಯಾಪಾರ ಗುರಿಗಿಂತ ಎರಡು ಪಟ್ಟು ಹೆಚ್ಚಾಗಿದೆ. ದೀರ್ಘಾವಧಿಯಲ್ಲಿ ಸಮತೋಲಿತ ಮತ್ತು ಸುಸ್ಥಿರ ದ್ವಿಪಕ್ಷೀಯ ವ್ಯಾಪಾರವನ್ನು ಸಾಧಿಸಲು, ಕೈಗಾರಿಕಾ ಸಹಕಾರವನ್ನು ಬಲಪಡಿಸುವ ಮೂಲಕ, ಹೊಸ ತಾಂತ್ರಿಕ ಮತ್ತು ಹೂಡಿಕೆ ಪಾಲುದಾರಿಕೆಗಳನ್ನು ರೂಪಿಸುವ ಮೂಲಕ, ವಿಶೇಷವಾಗಿ ಸುಧಾರಿತ ಉನ್ನತ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಮತ್ತು ಸಹಕಾರದ ಹೊಸ ಮಾರ್ಗಗಳು ಮತ್ತು ರೂಪಗಳನ್ನು ಕಂಡುಕೊಳ್ಳುವ ಮೂಲಕ ರಷ್ಯಾಕ್ಕೆ ಭಾರತೀಯ ರಫ್ತುಗಳನ್ನು ಹೆಚ್ಚಿಸುವ ಅಗತ್ಯವನ್ನು ನಾಯಕರು ಒತ್ತಿ ಹೇಳಿದರು.

12. ದ್ವಿಪಕ್ಷೀಯ ವ್ಯಾಪಾರದ ಬೆಳವಣಿಗೆಯನ್ನು ಮತ್ತಷ್ಟು ವೇಗಗೊಳಿಸುವ ಮತ್ತು ಸುಸ್ಥಿರಗೊಳಿಸುವ ಗುರಿಯೊಂದಿಗೆ, 2030ರ ವೇಳೆಗೆ 100 ಶತಕೋಟಿ ಅಮೆರಿಕನ್‌ ಡಅಲರ್‌ ಮೌಲ್ಯದ ದ್ವಿಪಕ್ಷೀಯ ವ್ಯಾಪಾರ ಗುರಿಯನ್ನು ನಿಗದಿಪಡಿಸಲು ನಾಯಕರು ಸಮ್ಮತಿಸಿದರು.

13. 2023ರ ಏಪ್ರಿಲ್‌ನಲ್ಲಿ ನವದೆಹಲಿಯಲ್ಲಿ ನಡೆದ ʻವ್ಯಾಪಾರ, ಆರ್ಥಿಕ, ವೈಜ್ಞಾನಿಕ, ತಾಂತ್ರಿಕ ಮತ್ತು ಸಾಂಸ್ಕೃತಿಕ ಸಹಕಾರ ಕುರಿತ ಭಾರತ–ರಷ್ಯಾ ಅಂತರ ಸರ್ಕಾರಿ ಆಯೋಗʼದ (ಐಆರ್‌ಐಜಿಸಿ-ಟಿಇಸಿ) ಹಾಗೂ ʻಭಾರತ–ರಷ್ಯಾ ವ್ಯಾಪಾರ ವೇದಿಕೆʼಯ 24ನೇ ಅಧಿವೇಶನ ಮತ್ತು ʻಸಾರಿಗೆ, ನಗರಾಭಿವೃದ್ಧಿ ಮತ್ತು ರೈಲ್ವೆ ಕುರಿತ ಕಾರ್ಯಪಡೆಗಳು ಮತ್ತು ಉಪ ಕಾರ್ಯಪಡೆಗಳʼ ಉದ್ಘಾಟನಾ ಸಭೆಗಳನ್ನು ನಾಯಕರು ಸ್ವಾಗತಿಸಿದರು. ದ್ವಿಪಕ್ಷೀಯ ಆರ್ಥಿಕ ಸಂಬಂಧಗಳ ಮತ್ತಷ್ಟು ವಿಸ್ತರಿಸಿದ ಮತ್ತು ವೈವಿಧ್ಯತೆಯನ್ನು ಖಾತ್ರಿಪಡಿಸಿದ ಆಯೋಗದ ಕಾರ್ಯವನ್ನು ಅವರು ಶ್ಲಾಘಿಸಿದರು. ʻಐಆರ್‌ಐಜಿಸಿ-ಟಿಇಸಿʼಯ ಮುಂದಿನ ಅಧಿವೇಶನವನ್ನು 2024ರ ದ್ವಿತೀಯಾರ್ಧದಲ್ಲಿ ರಷ್ಯಾದಲ್ಲಿ ನಡೆಸಲು ಅವರು ಒಪ್ಪಿದರು.

14. ವ್ಯಾಪಾರ ಮತ್ತು ಆರ್ಥಿಕ ಸಹಕಾರವನ್ನು ಆಳಗೊಳಿಸುವ ಪ್ರಯತ್ನದ ಭಾಗವಾಗಿ ಮತ್ತು ಎರಡೂ ದೇಶಗಳ ನಡುವೆ ಸರಕು ಮತ್ತು ಸೇವೆಗಳ ವ್ಯಾಪಾರದಲ್ಲಿ ಕ್ರಿಯಾತ್ಮಕ ಬೆಳವಣಿಗೆಯ ಪ್ರವೃತ್ತಿಯನ್ನು ಕಾಯ್ದುಕೊಳ್ಳುವ ಉದ್ದೇಶದಿಂದ ಹಾಗೂ ಈ ಪ್ರಮಾಣದಲ್ಲಿ ಗಮನಾರ್ಹ ಹೆಚ್ಚಳವನ್ನು ಖಾತರಿಪಡಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳಿಗೆ ನಾಯಕರು ಒಲವು ವ್ಯಕ್ತಪಡಿಸಿದರು. ಇದಕ್ಕಾಗಿ, 2030 ರವರೆಗೆ ರಷ್ಯಾ-ಭಾರತ ಆರ್ಥಿಕ ಸಹಕಾರದ ಭರವಸೆಯ ಪ್ರದೇಶಗಳ ಅಭಿವೃದ್ಧಿಗೆ ಕಾರ್ಯಕ್ರಮವನ್ನು ಸಿದ್ಧಪಡಿಸುವಂತೆ (ಕಾರ್ಯಯೋಜನೆ-2030) ಸಂಬಂಧಪಟ್ಟ ಸಂಸ್ಥೆಗಳಿಗೆ ಸೂಚನೆ ನೀಡಿದರು. ʻಕಾರ್ಯಯೋಜನೆ-2030ʼರಲ್ಲಿ ಒದಗಿಸಲಾದ ಉಪಕ್ರಮಗಳು, ಯೋಜನೆಗಳು, ಕ್ರಮಗಳು ಮತ್ತು ಚಟುವಟಿಕೆಗಳ ಅನುಷ್ಠಾನಕ್ಕೆ ಅಗತ್ಯ ಕೊಡುಗೆ ನೀಡಲು ಸಿದ್ಧವಿರುವುದಾಗಿ ಎರಡೂ ಕಡೆಯವರು ಪುನರುಚ್ಚರಿಸಿದರು. ಇದರ ಅನುಷ್ಠಾನದ ಒಟ್ಟಾರೆ ಸಮನ್ವಯವನ್ನು ʻಐಆರ್‌ಐಜಿಸಿ-ಟಿಇಸಿʼ ನಿರ್ವಹಿಸುತ್ತದೆ. ʻಕಾರ್ಯಯೋಜನೆ-2030ʼರ ಮೇಲ್ವಿಚಾರಣೆ, ನಿಯಂತ್ರಣ ಮತ್ತು ಅದಕ್ಕೆ ಬೇಕಾದ ಬೆಂಬಲವನ್ನು ಖಚಿತಪಡಿಸಿಕೊಳ್ಳಲು ಅದರ ಕಾರ್ಯಪಡೆಗಳು ಮತ್ತು ಉಪ-ಕಾರ್ಯಪಡೆಗಳು ಮತ್ತು ಎರಡೂ ದೇಶಗಳ ಸಂಬಂಧಿತ ಏಜೆನ್ಸಿಗಳಿಗೆ ಸೂಚನೆ ನೀಡಲಾಗಿದೆ.

15. ರಾಷ್ಟ್ರೀಯ ಕರೆನ್ಸಿಗಳನ್ನು ಬಳಸಿಕೊಂಡು, ದ್ವಿಪಕ್ಷೀಯ ವಸಾಹತು ವ್ಯವಸ್ಥೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಜೊತೆಯಾಗಿ ಕೆಲಸ ಮಾಡುವುದನ್ನು ಮುಂದುವರಿಸಲು ಎರಡೂ ಕಡೆಯವರು ಸಹಮತಿಸಿದರು. ತಮ್ಮ ಹಣಕಾಸು ಸಂದೇಶ ವ್ಯವಸ್ಥೆಗಳ ಪರಸ್ಪರ ಕಾರ್ಯಸಾಧ್ಯತೆಗಾಗಿ ಸಮಾಲೋಚನೆಗಳನ್ನು ಮುಂದುವರಿಸಲು ಎರಡೂ ಕಡೆಯವರು ಸಮ್ಮತಿಸಿದರು. ದ್ವಿಪಕ್ಷೀಯ ವ್ಯಾಪಾರದಲ್ಲಿ ಮತ್ತಷ್ಟು ವರ್ಧನೆಗೆ ಅನುಕೂಲವಾಗುವಂತೆ ವಿಮೆ ಮತ್ತು ಮರುವಿಮೆಯ ಸಮಸ್ಯೆಗಳಿಗೆ ಪರಸ್ಪರ ಸ್ವೀಕಾರಾರ್ಹ ಪರಿಹಾರಗಳನ್ನು ಕಂಡುಕೊಳ್ಳುವ ಮಹತ್ವವನ್ನು ಅವರು ಉಲ್ಲೇಖಿಸಿದರು.

16. ಸುಂಕರಹಿತ / ಸುಂಕ ಅಡೆತಡೆಗಳು ಒಳಗೊಂಡಂತೆ ವ್ಯಾಪಾರದಲ್ಲಿನ ರಕ್ಷಣಾತ್ಮಕ ಕ್ರಮಗಳು ಮತ್ತು ಆಡಳಿತಾತ್ಮಕ ಅಡೆತಡೆಗಳ ನಿವಾರಿಸುವ ನಿಟ್ಟಿನಲ್ಲಿ ʻಭಾರತ ಮತ್ತು ಯುರೇಷಿಯನ್ ಆರ್ಥಿಕ ಒಕ್ಕೂಟದ ನಡುವೆ ಸರಕುಗಳ ಮುಕ್ತ ವ್ಯಾಪಾರ ಒಪ್ಪಂದʼಕ್ಕಾಗಿ ಸಂಪೂರ್ಣ ಮಟ್ಟದ ಸಮಾಲೋಚನೆಗಳನ್ನು ಪ್ರಾರಂಭಿಸಲು ಮಾರ್ಚ್ 2024ರಲ್ಲಿ ನಡೆದ ಆರಂಭಿಕ ಸಭೆಯನ್ನು ನಾಯಕರು ಶ್ಲಾಘಿಸಿದರು. ಸೇವೆಗಳು ಮತ್ತು ಹೂಡಿಕೆಗಳಲ್ಲಿ ದ್ವಿಪಕ್ಷೀಯ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕುವ ನಿಟ್ಟಿನಲ್ಲಿ ಮಾತುಕತೆಗಳನ್ನು ಪ್ರಾರಂಭಿಸುವ ಸಾಧ್ಯತೆಯನ್ನು ಅನ್ವೇಷಿಸುವಂತೆ ನಾಯಕರು ತಮ್ಮ ಸಂಬಂಧಿತ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

17. ದ್ವಿಪಕ್ಷೀಯ ಸಂಬಂಧಗಳ ಅಭಿವೃದ್ಧಿಗೆ ಕೈಗಾರಿಕಾ ಸಹಕಾರದ ಮಹತ್ವವನ್ನು ಗಮನಿಸಿದ ಎರಡೂ ಕಡೆಯವರು, ಸಾರಿಗೆ ಎಂಜಿನಿಯರಿಂಗ್, ಲೋಹಶಾಸ್ತ್ರ, ರಾಸಾಯನಿಕ ಕೈಗಾರಿಕೆ ಮತ್ತು ಪರಸ್ಪರ ಹಿತಾಸಕ್ತಿಯ ಇತರ ಕ್ಷೇತ್ರಗಳಲ್ಲಿ ಉತ್ಪಾದನಾ ಸಹಕಾರವನ್ನು ಬಲಪಡಿಸುವ ತಮ್ಮ ಪರಸ್ಪರ ಆಕಾಂಕ್ಷೆಯನ್ನು ವ್ಯಕ್ತಪಡಿಸಿದರು. ಆದ್ಯತೆಯ ಕ್ಷೇತ್ರಗಳಲ್ಲಿ ಭರವಸೆಯ ಜಂಟಿ ಯೋಜನೆಗಳ ಅನುಷ್ಠಾನಕ್ಕೆ ಅನುಕೂಲಕರ ಪರಿಸ್ಥಿತಿಗಳನ್ನು ಸೃಷ್ಟಿಸುವ ಉದ್ದೇಶವನ್ನು ಎರಡೂ ಕಡೆಯವರು ವ್ಯಕ್ತಪಡಿಸಿದರು. ಕೈಗಾರಿಕಾ ಉತ್ಪನ್ನಗಳ ಪರಸ್ಪರ ವ್ಯಾಪಾರ ಹರಿವನ್ನು ವಿಸ್ತರಿಸುವ ಮತ್ತು ದ್ವಿಪಕ್ಷೀಯ ವ್ಯಾಪಾರದಲ್ಲಿ ತಮ್ಮ ಪಾಲನ್ನು ಹೆಚ್ಚಿಸುವ ಮಹತ್ವವನ್ನು ಎರಡೂ ಕಡೆಯವರು ಒತ್ತಿ ಹೇಳಿದರು.

18. ʻಅಧಿಕೃತ ಆರ್ಥಿಕ ನಿರ್ವಾಹಕʼರಿಗೆ ಸಂಬಂಧಿಸಿದ ಸಂಸ್ಥೆಗಳನ್ನು ಪರಸ್ಪರ ಗುರುತಿಸುವ ಉದ್ದೇಶದಿಂದ ರಷ್ಯಾದ ʻಫೆಡರಲ್ ಕಸ್ಟಮ್ಸ್ ಸೇವೆʼ ಮತ್ತು ʻಭಾರತದ ಪರೋಕ್ಷ ತೆರಿಗೆ ಮಂಡಳಿʼ ಮತ್ತು ʻಇಂಡಿಯನ್‌ ಕಸ್ಟಮ್ಸ್ʼ ನಡುವೆ 2024ರ ಮೇ ತಿಂಗಳಲ್ಲಿ ಸಹಿ ಹಾಕಲಾದ ಒಪ್ಪಂದವು ರಷ್ಯಾ-ಭಾರತ ವ್ಯಾಪಾರದ ಪ್ರಮಾಣವನ್ನು ಹೆಚ್ಚಿಸಲು ಮತ್ತಷ್ಟು ಇಂಬು ನೀಡಲಿದೆ ಎಂದು ಎರಡೂ ಕಡೆಯವರು ಪುನರುಚ್ಚರಿಸಿದರು.  ಜೊತೆಗೆ ಪೂರೈಕೆ ಸರಪಳಿಗಳ ಭದ್ರತೆಯನ್ನು ಖಚಿತಪಡಿಸುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

19. ರಷ್ಯಾ ಸರ್ಕಾರ ಮತ್ತು ಭಾರತ ಸರ್ಕಾರದ ನಡುವೆ ವಲಸೆ ಮತ್ತು ಸಾರಿಗೆ ಪಾಲುದಾರಿಕೆ ಒಪ್ಪಂದದ ಬಗ್ಗೆ ಚರ್ಚೆಯನ್ನು ಮುಂದುವರಿಸಲು ಉಭಯ ದೇಶಗಳು ಸಹಮತ ವ್ಯಕ್ತಪಡಿಸಿವೆ.

20. ʻರಸಗೊಬ್ಬರಗಳ ಕುರಿತಾದ ಭಾರತ-ರಷ್ಯಾ ಜಂಟಿ ಸಮಿತಿʼಯ ಚೌಕಟ್ಟಿನೊಳಗೆ ಕಂಪನಿಯಿಂದ ಕಂಪನಿ ನಡುವೆ ದೀರ್ಘಕಾಲೀನ ಒಪ್ಪಂದಗಳ ಆಧಾರದ ಮೇಲೆ ಭಾರತಕ್ಕೆ ರಸಗೊಬ್ಬರಗಳ ಸುಸ್ಥಿರ ಪೂರೈಕೆಯ ಸಹಕಾರವನ್ನು ಮುಂದುವರಿಸುವ ಬಗ್ಗೆ ಎರಡೂ ಕಡೆಯವರು ಸಹಮತಿಸಿದರು.

21. 2024ರ ಏಪ್ರಿಲ್‌ನಲ್ಲಿ ಮಾಸ್ಕೋದಲ್ಲಿ ನಡೆದ ಮೊದಲ ʻಭಾರತ-ರಷ್ಯಾ ಹೂಡಿಕೆ ವೇದಿಕೆʼ ಮತ್ತು ʻಆದ್ಯತೆಯ ಹೂಡಿಕೆ ಯೋಜನೆಗಳ ಕುರಿತ ಕಾರ್ಯಪಡೆʼಯ 7ನೇ ಸಭೆಯನ್ನು ನಾಯಕರು ಸ್ವಾಗತಿಸಿದರು. ಅಲ್ಲಿ "ಮೇಕ್ ಇನ್ ಇಂಡಿಯಾ" ಮತ್ತು "ಆತ್ಮನಿರ್ಭರ ಭಾರತ್" ಕಾರ್ಯಕ್ರಮಗಳಲ್ಲಿ ರಷ್ಯಾದ ಉದ್ಯಮಗಳ ಭಾಗವಹಿಸುವಿಕೆಗೆ ಮತ್ತು ರಷ್ಯಾದಲ್ಲಿ ಹೂಡಿಕೆ ಯೋಜನೆಗಳಲ್ಲಿ ಭಾರತೀಯ ಕಂಪನಿಗಳ ಭಾಗವಹಿಸುವಿಕೆಗೆ ಅನುಕೂಲವಾಗುವಂತೆ ಕ್ರಮ ಕೈಗೊಳ್ಳಲು ಎರಡೂ ಕಡೆಯವರು ಒಪ್ಪಿಕೊಂಡಿದ್ದಾರೆ. ಭಾರತ ಸರ್ಕಾರದ ʻಕೈಗಾರಿಕಾ ಕಾರಿಡಾರ್ʼ ಕಾರ್ಯಕ್ರಮದ ಅಡಿಯಲ್ಲಿ ʻಗ್ರೀನ್ ಫೀಲ್ಡ್ ಕೈಗಾರಿಕಾ ನಗರʼಗಳಲ್ಲಿ ಉತ್ಪಾದನಾ ಸೌಲಭ್ಯಗಳನ್ನು ಸ್ಥಾಪಿಸಲು ಭಾರತವು ರಷ್ಯಾದ ಉದ್ಯಮಗಳಿಗೆ ಆಹ್ವಾನ ನೀಡಿದೆ.

 
22. ದೂರಸಂಪರ್ಕ, ಉಪಗ್ರಹ ಸಂವಹನ, ಸಾರ್ವಜನಿಕ ಆಡಳಿತ ಮತ್ತು ನಗರ ಪರಿಸರದ ಡಿಜಿಟಲೀಕರಣ, ಮೊಬೈಲ್ ಸಂವಹನ, ಮಾಹಿತಿಯ ಸುರಕ್ಷತೆ ಸೇರಿದಂತೆ ಸಂವಹನ ತಂತ್ರಜ್ಞಾನ ಕ್ಷೇತ್ರದಲ್ಲಿ ಸಹಕಾರವನ್ನು ವಿಸ್ತರಿಸುವ ಆಸಕ್ತಿಯನ್ನು ಉಭಯ ದೇಶಗಳು ಖಚಿತಪಡಿಸಿದವು.

ಸಾರಿಗೆ ಮತ್ತು ಸಂಪರ್ಕ

23. ಸ್ಥಿರ ಮತ್ತು ಪರಿಣಾಮಕಾರಿ ಸಾರಿಗೆ ಕಾರಿಡಾರ್‌ಗಳ ಹೊಸ ವ್ಯವಸ್ಥೆಯನ್ನು ನಿರ್ಮಿಸುವ ವಿಧಾನಗಳನ್ನು ಉಭಯ ದೇಶಗಳು ಹಂಚಿಕೊಳ್ಳಲಿವೆ. ಜೊತೆಗೆ, ʻಗ್ರೇಟರ್ ಯುರೇಷಿಯನ್ ಸ್ಥಳʼದ ಕಲ್ಪನೆಯನ್ನು ಕಾರ್ಯಗತಗೊಳಿಸುವ ಉದ್ದೇಶ ಸೇರಿದಂತೆ ಯುರೇಷಿಯಾದಲ್ಲಿ ಉತ್ಪಾದನೆ ಮತ್ತು ಮಾರುಕಟ್ಟೆ ಸರಪಳಿಗಳ ಭರವಸೆಯುಕ್ತ ಅಭಿವೃದ್ಧಿಗೆ ನಿಕಟವಾಗಿ ಗಮನ ಹರಿಸಲಿವೆ. ಈ ನಿಟ್ಟಿನಲ್ಲಿ, ʻಚೆನ್ನೈ-ವ್ಲಾಡಿವೋಸ್ಟಾಕ್ ಪೂರ್ವ ಕಡಲ ಕಾರಿಡಾರ್ʼ ಮತ್ತು ʻಅಂತಾರಾಷ್ಟ್ರೀಯ ಉತ್ತರ-ದಕ್ಷಿಣ ಸಾರಿಗೆ ಕಾರಿಡಾರ್ʼ ಅನುಷ್ಠಾನ ಮತ್ತು ʻಉತ್ತರ ಸಮುದ್ರ ಮಾರ್ಗʼದ ಸಾಮರ್ಥ್ಯವನ್ನು ಬಳಸುವುದು ಸೇರಿದಂತೆ ಮೂಲಸೌಕರ್ಯಗಳ ಸಾಮರ್ಥ್ಯವನ್ನು ಹೆಚ್ಚಿಸಲು ಒತ್ತು ನೀಡುವ ಮೂಲಕ ಸರಕುಸಾಗಣೆ ಸಂಪರ್ಕಗಳನ್ನು ವಿಸ್ತರಿಸಲು ಸಕ್ರಿಯವಾಗಿ ಕೆಲಸ ಮಾಡಲು ಸಿದ್ಧವಿರುವುದಾಗಿ ಎರಡೂ ದೇಶಗಳು ಹೇಳಿವೆ.

24. ಸರಕು ಸಾಗಣೆಯ ಸಮಯ ಮತ್ತು ವೆಚ್ಚವನ್ನು ಕಡಿಮೆ ಮಾಡಲು ಹಾಗೂ ಯುರೇಷಿಯನ್ ಪ್ರದೇಶದಲ್ಲಿ ಸಂಪರ್ಕವನ್ನು ಉತ್ತೇಜಿಸಲು ʻಐಎನ್ಎಸ್‌ಟಿಸಿʼ ಮಾರ್ಗದ ಬಳಕೆಯನ್ನು ತೀವ್ರಗೊಳಿಸಲು ಎರಡೂ ಕಡೆಯವರು ಜಂಟಿ ಪ್ರಯತ್ನಗಳನ್ನು ಮುಂದುವರಿಸಲಿದ್ದಾರೆ. ಸಾರಿಗೆ ಮತ್ತು ಸರಕು ಸಾಗಣೆ ಕ್ಷೇತ್ರದಲ್ಲಿನ ಸಹಕಾರವು ಪಾರದರ್ಶಕತೆ, ವ್ಯಾಪಕ ಭಾಗವಹಿಸುವಿಕೆ, ಸ್ಥಳೀಯ ಆದ್ಯತೆಗಳು, ಆರ್ಥಿಕ ಸುಸ್ಥಿರತೆ ಮತ್ತು ಸಾರ್ವಭೌಮತ್ವತ್ವ ಹಾಗೂ ಎಲ್ಲಾ ರಾಷ್ಟ್ರಗಳ ಪ್ರಾದೇಶಿಕ ಸಮಗ್ರತೆಗೆ ಗೌರವ ನೀಡುವ ತತ್ವಗಳನ್ನು ಆಧರಿಸಿರುತ್ತದೆ.

25. ʻಉತ್ತರ ಸಮುದ್ರ ಮಾರ್ಗʼದ ಮೂಲಕ ರಷ್ಯಾ ಮತ್ತು ಭಾರತದ ನಡುವೆ ಹಡಗು ಮಾರ್ಗ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸಹಕಾರಕ್ಕೆ ಎರಡೂ ದೇಶಗಳು ಬೆಂಬಲಿಸಲಿವೆ. ಈ ಉದ್ದೇಶಕ್ಕಾಗಿ, ʻಉತ್ತರ ಸಮುದ್ರ ಮಾರ್ಗʼದೊಳಗಿನ ಸಹಕಾರಕ್ಕಾಗಿ ʻಐಆರ್‌ಐಜಿಸಿ-ಟಿಇಸಿʼಯೊಳಗೆ ಜಂಟಿ ಕಾರ್ಯ ಸಂಸ್ಥೆಯನ್ನು ಸ್ಥಾಪಿಸಲು ಸಿದ್ಧವಿರುವುದಾಗಿ ಉಭಯ ದೇಶಗಳು ಹೇಳಿವೆ.

26. ಮಾಸ್ಕೋದಲ್ಲಿ ನಡೆದ (ಫೆಬ್ರವರಿ, 2023) ʻನಾಗರಿಕ ವಿಮಾನಯಾನ ಕುರಿತ ಉಪ ಕಾರ್ಯಪಡೆʼಯ ಸಭೆಯ ಫಲಿತಾಂಶಗಳನ್ನು ಎರಡೂ ಕಡೆಯವರು ತೃಪ್ತಿಯಿಂದ ಉಲ್ಲೇಖಿಸಿದರು. ನಾಗರಿಕ ವಿಮಾನಯಾನ ಮತ್ತು ನಾಗರಿಕ ವಿಮಾನಯಾನ ಭದ್ರತೆ ಕ್ಷೇತ್ರದಲ್ಲಿ ಸಹಕರಿಸಲು ಪರಸ್ಪರ ಸಹಮತ ವ್ಯಕ್ತಪಡಿಸಿದರು.

ಇಂಧನ ಪಾಲುದಾರಿಕೆ

27. ವಿಶಿಷ್ಟ ಮತ್ತು ವಿಶೇಷ ವ್ಯೂಹಾತ್ಮಕ ಪಾಲುದಾರಿಕೆಯ ಮಹತ್ವದ ಆಧಾರಸ್ತಂಭವಾಗಿ ಇಂಧನ ಕ್ಷೇತ್ರದಲ್ಲಿನ ದೃಢವಾದ ಮತ್ತು ವ್ಯಾಪಕ ಶ್ರೇಣಿಯ ಸಹಕಾರದ ಮಹತ್ವವನ್ನು ಎರಡೂ ಕಡೆಯವರು ಪುನರುಚ್ಚರಿಸಿದರು. ಈ ನಿಟ್ಟಿನಲ್ಲಿ, ಇಂಧನ ಸಂಪನ್ಮೂಲಗಳ ವಿಚಾರವಾಗಿ ನಿರಂತರವಾದ ದ್ವಿಪಕ್ಷೀಯ ವ್ಯಾಪಾರದ ವಿಶೇಷ ಮಹತ್ವವದ ಬಗ್ಗೆ ಎರಡೂ ಕಡೆಯವರು ಗಮನ ಸೆಳೆದರು ಮತ್ತು ಹೊಸ ದೀರ್ಘಕಾಲೀನ ಒಪ್ಪಂದಗಳನ್ನು ಅನ್ವೇಷಿಸಲು ಸಮ್ಮತಿಸಿದರು.

28. ಕಲ್ಲಿದ್ದಲು ಕ್ಷೇತ್ರದಲ್ಲಿ ನಡೆಯುತ್ತಿರುವ ಸಹಕಾರವನ್ನು ಎರಡೂ ಕಡೆಯವರು ಶ್ಲಾಘಿಸಿದರು ಮತ್ತು ಭಾರತಕ್ಕೆ ʻಕೋಕಿಂಗ್ ಕಲ್ಲಿದ್ದಲುʼ ಪೂರೈಕೆಯನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆಯನ್ನು ಅನ್ವೇಷಿಸಲು ಮತ್ತು ರಷ್ಯಾದಿಂದ ಭಾರತಕ್ಕೆ ʻಆಂಥ್ರಾಸೈಟ್ʼ ಕಲ್ಲಿದ್ದಲನ್ನು ರಫ್ತು ಮಾಡುವ ಅವಕಾಶಗಳನ್ನು ಅನ್ವೇಷಿಸಲು ಒಪ್ಪಿಕೊಂಡರು.

ರಷ್ಯಾದ ದೂರ ಪ್ರಾಚ್ಯ (ಫಾರ್‌ ಈಸ್ಟ್‌) ಮತ್ತು ಆರ್ಕ್ಟಿಕ್‌ನಲ್ಲಿ ಸಹಕಾರ

29. ರಷ್ಯಾ ಒಕ್ಕೂಟದ ದೂರ ಪ್ರಾಚ್ಯ ಮತ್ತು ಆರ್ಕ್ಟಿಕ್ ವಲಯದಲ್ಲಿ ವ್ಯಾಪಾರ ಮತ್ತು ಹೂಡಿಕೆ ಸಹಕಾರವನ್ನು ತೀವ್ರಗೊಳಿಸಲು ಎರಡೂ ಕಡೆಯವರು ತಮ್ಮ ಸಿದ್ಧತೆಯನ್ನು ವ್ಯಕ್ತಪಡಿಸಿದರು. ಈ ನಿಟ್ಟಿನಲ್ಲಿ, 2024-2029ರ ಅವಧಿಗೆ ರಷ್ಯಾದ ದೂರ ಪ್ರಾಚ್ಯದಲ್ಲಿ ವ್ಯಾಪಾರ, ಆರ್ಥಿಕ ಮತ್ತು ಹೂಡಿಕೆ ಕ್ಷೇತ್ರಗಳಲ್ಲಿ ಭಾರತ-ರಷ್ಯಾ ಸಹಕಾರ ಕಾರ್ಯಕ್ರಮಕ್ಕೆ ಸಹಿ ಹಾಕಿರುವುದನ್ನು ಹಾಗೂ ರಷ್ಯಾ ಒಕ್ಕೂಟದ ಆರ್ಕ್ಟಿಕ್ ವಲಯದಲ್ಲಿನ ಸಹಕಾರ ತತ್ವಗಳಿಗೆ ಸಹಿ ಹಾಕಿರುವುದನ್ನು ಎರಡೂ ಕಡೆಯವರು ಸ್ವಾಗತಿಸಿದರು. ಸಹಕಾರ ಕಾರ್ಯಕ್ರಮವು ಭಾರತ ಮತ್ತು ರಷ್ಯಾದ ದೂರದ ಪ್ರಾಚ್ಯ ವಲಯದ ನಡುವೆ, ವಿಶೇಷವಾಗಿ ಕೃಷಿ, ಇಂಧನ, ಗಣಿಗಾರಿಕೆ, ಮಾನವಶಕ್ತಿ, ವಜ್ರಗಳು, ಔಷಧ, ಕಡಲ ಸಾರಿಗೆ ಇತ್ಯಾದಿ ಕ್ಷೇತ್ರಗಳಲ್ಲಿ ಹೆಚ್ಚಿನ ಸಹಕಾರಕ್ಕೆ ಅಗತ್ಯವಾದ ನೀತಿ ಚೌಕಟ್ಟನ್ನು ಒದಗಿಸುತ್ತದೆ.

30. ರಷ್ಯಾದ ದೂರ ಪ್ರಾಚ್ಯ ಮತ್ತು ಭಾರತದ ರಾಜ್ಯಗಳ ನಡುವೆ ಅಂತರ-ಪ್ರಾದೇಶಿಕ ಮಾತುಕತೆಯ ಅಗತ್ಯವನ್ನು ಎರಡೂ ಕಡೆಯವರು ಪುನರುಚ್ಚರಿಸಿದರು ಮತ್ತು ವ್ಯಾಪಾರ, ಶೈಕ್ಷಣಿಕ, ಸಾಂಸ್ಕೃತಿಕ ವಿನಿಮಯ ಮತ್ತು ಯೋಜನೆಗಳನ್ನು ಅಭಿವೃದ್ಧಿಪಡಿಸಲು ಅವಳಿ ಸಂಬಂಧಗಳ ಸ್ಥಾಪನೆಗೆ ಉತ್ತೇಜಿಸಲು ಸಹಮತಿಸಿದರು.

31. ರಷ್ಯಾದ ದೂರ ಪ್ರಾಚ್ಯದಲ್ಲಿ ಸುಧಾರಿತ ಅಭಿವೃದ್ಧಿಯ ಪ್ರದೇಶಗಳ ಚೌಕಟ್ಟಿನೊಳಗೆ ಹೈಟೆಕ್ ಹೂಡಿಕೆ ಯೋಜನೆಗಳನ್ನು ಕಾರ್ಯಗತಗೊಳಿಸಲು ರಷ್ಯಾದ ಕಡೆಯವರು ಆಸಕ್ತ ಭಾರತೀಯ ಹೂಡಿಕೆದಾರರನ್ನು ಆಹ್ವಾನಿಸಿದ್ದಾರೆ. 2024ರ ಜನವರಿಯಲ್ಲಿ ನಡೆದ ʻರೋಮಾಂಚಕ ಗುಜರಾತ್ ಜಾಗತಿಕ ಶೃಂಗಸಭೆʼಯಲ್ಲಿ ರಷ್ಯಾದ ದೂರ ಪ್ರಾಚ್ಯ ಮತ್ತು ಆರ್ಕ್ಟಿಕ್ ಅಭಿವೃದ್ಧಿ ಸಚಿವಾಲಯದ ನಿಯೋಗದ ಭಾಗವಹಿಸುವಿಕೆಯನ್ನು ಭಾರತೀಯ ಕಡೆಯವರು ಶ್ಲಾಘಿಸಿದರು. ʻಸೇಂಟ್ ಪೀಟರ್ಸ್‌ಬರ್ಗ್‌ ಅಂತಾರಾಷ್ಟ್ರೀಯ ಆರ್ಥಿಕ ವೇದಿಕೆʼ (ಜೂನ್ 2023) ಮತ್ತು ʻಪೂರ್ವ ಆರ್ಥಿಕ ವೇದಿಕೆʼಯಲ್ಲಿ (ಸೆಪ್ಟೆಂಬರ್ 2023) ಭಾರತೀಯ ನಿಯೋಗಗಳ ಭಾಗವಹಿಸುವಿಕೆಯನ್ನು ರಷ್ಯಾದ ಕಡೆಯವರು ಸ್ವಾಗತಿಸಿದರು. ದ್ವಿಪಕ್ಷೀಯ ವ್ಯಾಪಾರ, ಆರ್ಥಿಕ ಮತ್ತು ಹೂಡಿಕೆ ಸಹಕಾರವನ್ನು ಉತ್ತೇಜಿಸಲು ಈ ಆರ್ಥಿಕ ವೇದಿಕೆಗಳ ಹೊರತಾಗಿ ಆಯೋಜಿಸಲಾದ ಭಾರತ-ರಷ್ಯಾ ವ್ಯಾಪಾರ ಸಮಾಲೋಚನೆಯ ಕೊಡುಗೆಯ ಬಗ್ಗೆ  ಎರಡೂ ಕಡೆಯವರು ಗಮನ ಸೆಳೆದರು.

32. ಪೂರ್ವ ಆರ್ಥಿಕ ವೇದಿಕೆಯ ಚೌಕಟ್ಟಿನೊಳಗೆ ಸೇರಿದಂತೆ ಏಷ್ಯಾ-ಪೆಸಿಫಿಕ್ ವಲಯದ ಪ್ರಮುಖ ವ್ಯಾಪಾರ ಕ್ಷೇತ್ರಗಳಲ್ಲಿ ಸಹಕಾರವನ್ನು ಅಭಿವೃದ್ಧಿಪಡಿಸುವ ಮಹತ್ವವನ್ನು ಎರಡೂ ಕಡೆಯವರು ಗುರುತಿಸಿದ್ದಾರೆ.

ನಾಗರಿಕ ಪರಮಾಣು ಮತ್ತು ಬಾಹ್ಯಾಕಾಶ ಕ್ಷೇತ್ರದಲ್ಲಿ ಸಹಕಾರ

33. ವ್ಯೂಹಾತ್ಮಕ ಪಾಲುದಾರಿಕೆಯ ಮಹತ್ವದ ಅಂಶವಾಗಿ ಪರಮಾಣು ಶಕ್ತಿಯ ಶಾಂತಿಯುತ ಬಳಕೆಯಲ್ಲಿ ಸಹಕಾರದ ಮಹತ್ವವನ್ನು ಎರಡೂ ಕಡೆಯವರು ಗಮನಿಸಿದರು. ಕೂಡಂಕುಳಂನಲ್ಲಿ ಬಾಕಿ ಉಳಿದಿರುವ ಅಣು ವಿದ್ಯುತ್ ಸ್ಥಾವರ ಘಟಕಗಳ ನಿರ್ಮಾಣದಲ್ಲಿ ಆಗಿರುವ ಪ್ರಗತಿಯನ್ನು ಎರಡೂ ಕಡೆಯವರು ಸ್ವಾಗತಿಸಿದರು ಮತ್ತು ಸರಬರಾಜುಗಳ ವಿತರಣೆಯ ಸಮಯ ಸೇರಿದಂತೆ ಕಾಲಮಿತಿಗೆ ಬದ್ಧವಾಗಿರಲು ಒಪ್ಪಿಕೊಂಡರು. ಈ ಹಿಂದೆ ಸಹಿ ಹಾಕಲಾದ ಒಪ್ಪಂದಗಳಿಗೆ ಅನುಗುಣವಾಗಿ ಭಾರತದಲ್ಲಿ ಎರಡನೇ ಸ್ಥಳದ ಬಗ್ಗೆ ಹೆಚ್ಚಿನ ಚರ್ಚೆಯ ಮಹತ್ವವನ್ನು ಎರಡೂ ಕಡೆಯವರು ಗಮನಿಸಿದರು. ರಷ್ಯಾದ ವಿನ್ಯಾಸದ ʻವಿವಿಇಆರ್ 1200ʼ ಕುರಿತಾಗಿ, ಉಪಕರಣಗಳ ಸ್ಥಳೀಕರಣ ಮತ್ತು ʻಎನ್‌ಪಿಪಿʼ ಘಟಕಗಳ ಜಂಟಿ ಉತ್ಪಾದನೆ ಹಾಗೂ ಮೂರನೇ ರಾಷ್ಟ್ರಗಳಲ್ಲಿನ ಸಹಕಾರದ ಬಗ್ಗೆ ತಾಂತ್ರಿಕ ಚರ್ಚೆಗಳನ್ನು ಮುಂದುವರಿಸಲು ಎರಡೂ ಕಡೆಯವರು ಒಪ್ಪಿಕೊಂಡರು. ಇಂಧನ ಸರಪಳಿ, ʻಕೆಕೆಎನ್‌ಪಿಪಿʼಗಳ ಕಾರ್ಯನಿರ್ವಹಣೆಗೆ ನಿರಂತರ ಬೆಂಬಲ ಮತ್ತು ವಿದ್ಯುತ್ ಹೊರತಾದ ಅನ್ವಯಿಕೆಗಳು ಸೇರಿದಂತೆ ಪರಮಾಣು ಶಕ್ತಿಯಲ್ಲಿ ಸಹಕಾರವನ್ನು ವಿಸ್ತರಿಸುವ ಉದ್ದೇಶವನ್ನು ಎರಡೂ ಕಡೆಯವರು ಖಚಿತಪಡಿಸಿದರು.

34. ಬಾಹ್ಯಾಕಾಶದಲ್ಲಿ ಸಹಕಾರದ ಮಹತ್ವದ ಬಗ್ಗೆ ಉಭಯ ದೇಶಗಳವರು ಉಲ್ಲೇಖಿಸಿದರು. ಮಾನವ ಸಹಿತ ಬಾಹ್ಯಾಕಾಶ ಯಾನ ಕಾರ್ಯಕ್ರಮಗಳು, ಉಪಗ್ರಹ ಅಭಿವೃದ್ಧಿ ಮತ್ತು ಗ್ರಹಗಳ ಅನ್ವೇಷಣೆ ಸೇರಿದಂತೆ ಶಾಂತಿಯುತ ಉದ್ದೇಶಗಳಿಗಾಗಿ ಬಾಹ್ಯಾಕಾಶವನ್ನು ಬಳಸುವಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಮತ್ತು ರಷ್ಯಾದ ರಾಷ್ಟ್ರೀಯ ಬಾಹ್ಯಾಕಾಶ ನಿಗಮ "ರೋಸ್ ಕಾಸ್ಮೋಸ್" ನಡುವಿನ ಹೆಚ್ಚಿದ ಪಾಲುದಾರಿಕೆಯನ್ನು ಸ್ವಾಗತಿಸಿದರು. ಬಾಹ್ಯಾಕಾಶದ ಅನ್ವೇಷಣೆಯಲ್ಲಿ ದೀರ್ಘ ಹೆಜ್ಜೆಯಾಗಿ ʻಚಂದ್ರಯಾನ -3ʼ ಅನ್ನು ಯಶಸ್ವಿಯಾಗಿ ಪೂರೈಸಿದ್ದಕ್ಕಾಗಿ ಮತ್ತು ವಿಜ್ಞಾನ ಮತ್ತು ಎಂಜಿನಿಯರಿಂಗ್‌ನಲ್ಲಿ ಭಾರತ ಸಾಧಿಸಿದ ಪ್ರಭಾವಶಾಲಿ ಪ್ರಗತಿಗಾಗಿ ರಷ್ಯಾದ ಕಡೆಯವರು ಭಾರತವನ್ನು ಅಭಿನಂದಿಸಿದರು, ಇದು ಭವಿಷ್ಯದ ಸಹಕಾರಕ್ಕೆ ಪರಸ್ಪರ ಪ್ರಯೋಜನಕಾರಿಯಾಗಿದೆ ಎಂದು ಅಭಪ್ರಾಯಪಡಲಾಯಿತು. ರಾಕೆಟ್ ಎಂಜಿನ್ ಅಭಿವೃದ್ಧಿ, ಉತ್ಪಾದನೆ ಮತ್ತು ಬಳಕೆಯಲ್ಲಿ ಪರಸ್ಪರ ಲಾಭದಾಯಕ ಸಹಕಾರದ ಸಾಧ್ಯತೆಗಳನ್ನು ಅನ್ವೇಷಿಸಲು ಎರಡೂ ಕಡೆಯವರು ಸಹಮತಿಸಿದರು.

ರಕ್ಷಣಾ ಮತ್ತು ರಕ್ಷಣಾ ತಾಂತ್ರಿಕ ಸಹಕಾರ

35. ರಕ್ಷಣಾ ಮತ್ತು ರಕ್ಷಣಾ-ತಾಂತ್ರಿಕ ಸಹಕಾರವು ಸಾಂಪ್ರದಾಯಿಕವಾಗಿ ಭಾರತ ಮತ್ತು ರಷ್ಯಾ ನಡುವಿನ ವಿಶಿಷ್ಟ ಮತ್ತು ವಿಶೇಷ ವ್ಯೂಹಾತ್ಮಕ ಸಹಭಾಗಿತ್ವದ ಆಧಾರಸ್ತಂಭವಾಗಿದೆ. ʻರಕ್ಷಣೆ ಮತ್ತು ರಕ್ಷಣಾ ತಾಂತ್ರಿಕ ಸಹಕಾರದ ಅಂತರ ಸರ್ಕಾರಿ ಆಯೋಗʼದ(ಐಆರ್‌ಐಜಿಸಿ-ಎಂ&ಎಂಟಿಸಿ) ನೇತೃತ್ವದಲ್ಲಿ ಹಲವಾರು ದಶಕಗಳ ಜಂಟಿ ಪ್ರಯತ್ನಗಳು ಮತ್ತು ಫಲಪ್ರದ ಸಹಕಾರದಿಂದ  ಇದು ಈ ಮಟ್ಟಕ್ಕೆ ಬೆಳೆದಿದೆ. ʻಎಸ್‌ಸಿಒʼ ರಕ್ಷಣಾ ಸಚಿವರ ಸಭೆಯ ಜೊತೆಗೆ, 2023ರ ಏಪ್ರಿಲ್‌ನಲ್ಲಿ ನವದೆಹಲಿಯಲ್ಲಿ ನಡೆದ ರಕ್ಷಣಾ ಸಚಿವರ ಸಭೆ ಹಾಗೂ ಉಭಯ ದೇಶಗಳ ಸಶಸ್ತ್ರ ಪಡೆಗಳ ಜಂಟಿ ಅಭ್ಯಾಸಗಳು ಸೇರಿದಂತೆ ನಿಯಮಿತ ರಕ್ಷಣಾ ಮತ್ತು ಮಿಲಿಟರಿ ಸಂಪರ್ಕಗಳ ಬಗ್ಗೆ ಉಭಯ ದೇಶಗಳು ತೃಪ್ತಿ ವ್ಯಕ್ತಪಡಿಸಿವೆ. 2024ರ ದ್ವಿತೀಯಾರ್ಧದಲ್ಲಿ ಮಾಸ್ಕೋದಲ್ಲಿ ʻಐಆರ್ಐಜಿಸಿ-ಎಂ
&ಎಂಟಿಸಿʼಯ 21ನೇ ಸುತ್ತನ್ನು ನಡೆಸಲು ಉಭಯ ದೇಶಗಳು ಒಪ್ಪಿವೆ. ಸ್ವಾವಲಂಬನೆಗಾಗಿ ಭಾರತದ ಅನ್ವೇಷಣೆಗೆ ಪ್ರತಿಕ್ರಿಯೆಯಾಗಿ, ಈ ಪಾಲುದಾರಿಕೆಯು ಪ್ರಸ್ತುತ ಜಂಟಿ ಸಂಶೋಧನೆ ಮತ್ತು ಅಭಿವೃದ್ಧಿ, ಸಹ-ಅಭಿವೃದ್ಧಿ ಮತ್ತು ಸುಧಾರಿತ ರಕ್ಷಣಾ ತಂತ್ರಜ್ಞಾನ ಮತ್ತು ವ್ಯವಸ್ಥೆಗಳ ಜಂಟಿ ಉತ್ಪಾದನೆಗೆ ಮರುರೂಪಿಸುತ್ತಿದೆ. ಜಂಟಿ ಮಿಲಿಟರಿ ಸಹಕಾರ ಚಟುವಟಿಕೆಗಳ ವೇಗವನ್ನು ಕಾಯ್ದುಕೊಳ್ಳುವ ಮತ್ತು ಮಿಲಿಟರಿ ಉತ್ಪನ್ನಗಳ ವಿನಿಮಯವನ್ನು ವಿಸ್ತರಿಸುವ ಬದ್ಧತೆಯನ್ನು ಎರಡೂ ಕಡೆಯವರು ಖಚಿತಪಡಿಸಿದ್ದಾರೆ.

36. ತಂತ್ರಜ್ಞಾನದ ವರ್ಗಾವಣೆ ಮತ್ತು ಭಾರತೀಯ ಸಶಸ್ತ್ರ ಪಡೆಗಳ ಅಗತ್ಯಗಳನ್ನು ಪೂರೈಸುವ ನಿಟ್ಟಿನಲ್ಲಿ ಭಾರತದಲ್ಲಿ ಜಂಟಿ ಉದ್ಯಮಗಳನ್ನು ಸ್ಥಾಪಿಸುವ ಮೂಲಕ ʻಮೇಕ್ ಇನ್ ಇಂಡಿಯಾʼ ಉಪಕ್ರಮದಡಿ ರಷ್ಯಾ ಮೂಲದ ಶಸ್ತ್ರಾಸ್ತ್ರಗಳು ಮತ್ತು ರಕ್ಷಣಾ ಸಲಕರಣೆಗಳ ನಿರ್ವಹಣೆಗಾಗಿ ಬಿಡಿಭಾಗಗಳು, ಉಪಕರಣಗಳು ಮುಂತಾದ ಉತ್ಪನ್ನಗಳ ಉತ್ಪಾದನೆಯನ್ನು ಉತ್ತೇಜಿಸಲು ಎರಡೂ ಕಡೆಯವರು ಒಪ್ಪಿದರು. ಅಲ್ಲದೆ, ಹೀಗೆ ತಯಾರಿಸಲಾದ ಉತ್ಪನ್ನಗಳನ್ನು ಇತರೆ ತೃತೀಯ ರಾಷ್ಟ್ರಗಳಿಗೂ ರಫ್ತು ಮಾಡಲು ಸಹಮತಿಸಲಾಗಿದೆ. ಈ ನಿಟ್ಟಿನಲ್ಲಿ, ತಾಂತ್ರಿಕ ಸಹಕಾರಕ್ಕಾಗಿ ಹೊಸ ಕಾರ್ಯಪಡೆ ರಚಿಸಲು ಮತ್ತು ʻಐಆರ್‌ಐಜಿಸಿ-ಎಂ&ಎಂಟಿಸಿʼಯ ಮುಂದಿನ ಸಭೆಯಲ್ಲಿ ಅದರ ನಿಬಂಧನೆಗಳ ಬಗ್ಗೆ ಚರ್ಚಿಸಲು ಉಭಯ ದೇಶಗಳೂ ಒಪ್ಪಿವೆ.


ಶಿಕ್ಷಣ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನದಲ್ಲಿ ಸಹಕಾರ

37. ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆಯಲ್ಲಿ ದ್ವಿಪಕ್ಷೀಯ ಸಹಕಾರದ ಮಹತ್ವವನ್ನು ಉಭಯ ದೇಶಗಳು ಪ್ರಸ್ತಾಪಿಸಿವೆ. ವಿವಿಧ ಶೈಕ್ಷಣಿಕ ಚಲನಶೀಲತೆ ರೂಪಗಳು, ಶೈಕ್ಷಣಿಕ ಕಾರ್ಯಕ್ರಮಗಳು ಮತ್ತು ಸಂಶೋಧನಾ ಯೋಜನೆಗಳ ಅನುಷ್ಠಾನ ಸೇರಿದಂತೆ ಶೈಕ್ಷಣಿಕ ಮತ್ತು ವೈಜ್ಞಾನಿಕ ಸಂಸ್ಥೆಗಳ ನಡುವೆ ಸಹಭಾಗಿತ್ವವನ್ನು ಅಭಿವೃದ್ಧಿಪಡಿಸುವಲ್ಲಿ ಪರಸ್ಪರ ಆಸಕ್ತಿಯನ್ನು ಉಭಯ ದೇಶಗಳು ಖಚಿತಪಡಿಸಿವೆ. ಜೊತೆಗೆ, ಭಾರತದಲ್ಲಿ ರಷ್ಯಾದ ಶೈಕ್ಷಣಿಕ ಮತ್ತು ವೈಜ್ಞಾನಿಕ ಸಂಸ್ಥೆಗಳ ಶಾಖೆಗಳನ್ನು ತೆರೆಯುವಲ್ಲಿ ಸಹಕಾರವನ್ನು ದೃಢಪಡಿಸಿವೆ.

38. ರಷ್ಯಾ ಒಕ್ಕೂಟದ ವಿಜ್ಞಾನ ಮತ್ತು ಉನ್ನತ ಶಿಕ್ಷಣ ಸಚಿವಾಲಯ ಹಾಗೂ ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ನಡುವೆ 2021ರಲ್ಲಿ ರೂಪಿಸಲಾದ ʻಮಾರ್ಗಸೂಚಿʼಯ ಯಶಸ್ವಿ ಅನುಷ್ಠಾನವನ್ನು ಹಾಗೂ ಉಭಯ ದೇಶಗಳ ಸಚಿವಾಲಯಗಳು ಮತ್ತು ವೈಜ್ಞಾನಿಕ ಪ್ರತಿಷ್ಠಾನಗಳ ಮೂಲಕ ರಷ್ಯಾ-ಭಾರತ ಸಂಶೋಧನಾ ಯೋಜನೆಗಳ ಅನುಷ್ಠಾನವನ್ನು ಎರಡೂ ಕಡೆಯವರು ಉಲ್ಲೇಖಿಸಿದರು.

39. ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆಯಲ್ಲಿ ಜಂಟಿ ಸಂಶೋಧನೆಯ ಮಹತ್ವವನ್ನು ಒತ್ತಿಹೇಳಿದ ಉಭಯ  ನಾಯಕರು, ಎರಡೂ ದೇಶಗಳ ನಡುವೆ ನಾವೀನ್ಯತೆ ಸಂಬಂಧಿತ ಸಹಯೋಗವನ್ನು ಹೆಚ್ಚಿಸಲು 2021 ರ ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆ ಸಹಕಾರದ ಮಾರ್ಗಸೂಚಿಯ ಚೌಕಟ್ಟಿನಲ್ಲಿ ಒಟ್ಟಾಗಿ ಕೆಲಸ ಮಾಡಲು ಸಹಮತಿಸಿದರು. ಜೊತೆಗೆ ತಂತ್ರಜ್ಞಾನಗಳ ವಾಣಿಜ್ಯೀಕರಣ ಹಾಗೂ ಆರ್ಥಿಕ ಮತ್ತು ಸಾಮಾಜಿಕ ಪರಿಣಾಮಕ್ಕಾಗಿ ಜಂಟಿ ಯೋಜನೆಗಳಿಗೆ ಪೂರ್ಣ ಪ್ರಮಾಣದ ಬೆಂಬಲ ಒದಗಿಸಲು ಒಪ್ಪಿದರು. ತಂತ್ರಜ್ಞಾನ ಪಾಲುದಾರಿಕೆಯನ್ನು ಸುಧಾರಿಸಲು ನವೀನ ಉದ್ಯಮಶೀಲತೆ ಮತ್ತು ಅಂತರ-ಕ್ಲಸ್ಟರ್ ಸಂವಹನಕ್ಕಾಗಿ ಅಂತಾರಾಷ್ಟ್ರೀಯ ಕೇಂದ್ರಗಳ ರಚನೆಯನ್ನು ಅನ್ವೇಷಿಸಲು ಎರಡೂ ಕಡೆಯವರು ಒಪ್ಪಿದರು.

40. ಕೃಷಿ ಮತ್ತು ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನ, ಹಡಗು ನಿರ್ಮಾಣ ಮತ್ತು ದುರಸ್ತಿ, ನೀಲಿ ಆರ್ಥಿಕತೆ, ಸಾಗರ ಉದ್ಯಮ ಮತ್ತು ಸಾಗರ ಸಂಪನ್ಮೂಲಗಳು, ರಾಸಾಯನಿಕ ವಿಜ್ಞಾನ ಮತ್ತು ತಂತ್ರಜ್ಞಾನ, ಇಂಧನ, ನೀರು, ಹವಾಮಾನ ಮತ್ತು ನೈಸರ್ಗಿಕ ಸಂಪನ್ಮೂಲಗಳು, ಆರೋಗ್ಯ ಮತ್ತು ವೈದ್ಯಕೀಯ ತಂತ್ರಜ್ಞಾನ, ಜೀವ ವಿಜ್ಞಾನ ಮತ್ತು ಜೈವಿಕ ತಂತ್ರಜ್ಞಾನ, ಅನ್ವಯಿಕ ಗಣಿತ ಹಾಗೂ ದತ್ತಾಂಶ ವಿಜ್ಞಾನ ಮತ್ತು ತಂತ್ರಜ್ಞಾನ, ವಸ್ತು ವಿಜ್ಞಾನ ಮತ್ತು ತಂತ್ರಜ್ಞಾನ, ಭೌತಶಾಸ್ತ್ರ ಮತ್ತು ಖಗೋಳ ಭೌತಶಾಸ್ತ್ರ, ಧ್ರುವೀಯ ಸಂಶೋಧನೆ ಮತ್ತು ನ್ಯಾನೊ ತಂತ್ರಜ್ಞಾನದಂತಹ ಸಹಕಾರದ ಸಂಭಾವ್ಯ ಕ್ಷೇತ್ರಗಳನ್ನು ಎರಡೂ ಕಡೆಯವರು ಗುರುತಿಸಿದ್ದಾರೆ .

41. ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಮತ್ತು ರಷ್ಯಾ ಒಕ್ಕೂಟದ ವಿಜ್ಞಾನ ಮತ್ತು ಉನ್ನತ ಶಿಕ್ಷಣ ಸಚಿವಾಲಯ ಮತ್ತು ರಷ್ಯಾದ ವಿಜ್ಞಾನ ಪ್ರತಿಷ್ಠಾನವು ಪರಸ್ಪರ ಹಿತಾಸಕ್ತಿಯ ಕ್ಷೇತ್ರಗಳಲ್ಲಿ ಜಂಟಿ ಸಂಶೋಧನಾ ಯೋಜನೆಗಳಿಗೆ ಜಂಟಿ ಬಿಡ್‌ಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿರುವುದನ್ನು ಎರಡೂ ಕಡೆಯವರು ಗಮನಿಸಿದರು.

42. ʻಐಆರ್‌ಐಜಿಸಿ-ಟಿಇಸಿʼಯ ನೀತಿ ಚೌಕಟ್ಟಿನೊಳಗೆ ಉನ್ನತ ಶಿಕ್ಷಣದ ಕುರಿತ ಕಾರ್ಯಪಡೆಯನ್ನು ರಚಿಸುವ ತಮ್ಮ ಉದ್ದೇಶವನ್ನು ಎರಡೂ ಕಡೆಯವರು ಪುನರುಚ್ಚರಿಸಿದರು.  ಎರಡೂ ದೇಶಗಳ ಆಸಕ್ತ ಇಲಾಖೆಗಳು ಮತ್ತು ಸಂಸ್ಥೆಗಳ ಪ್ರತಿನಿಧಿಗಳು ಈ ಕ್ಷೇತ್ರದಲ್ಲಿನ ವಿಷಯಾಧಾರಿತ ಸಮಸ್ಯೆಗಳನ್ನು ಪರಿಹರಿಸುವ ಕುರಿತು ಸಮಾಲೋಚಿಸುವುದು ಇದರ ಉದ್ದೇಶ.

43. ಶಿಕ್ಷಣ ಮತ್ತು ಶೈಕ್ಷಣಿಕ ಪದವಿಗಳನ್ನು ಪರಸ್ಪರ ಗುರುತಿಸುವ ಕುರಿತು ತಮ್ಮ ಸಮಾಲೋಚನೆಗಳನ್ನು ಮುಂದುವರಿಸಲು ಎರಡೂ ದೇಶಗಳು ಒಪ್ಪಿವೆ.

 
44. ದ್ವಿಪಕ್ಷೀಯ ಶೈಕ್ಷಣಿಕ ಮತ್ತು ವೈಜ್ಞಾನಿಕ ಸಂಬಂಧಗಳನ್ನು ಹೆಚ್ಚಿಸುವ ಮತ್ತು ವಿಸ್ತರಿಸುವ ಉದ್ದೇಶದಿಂದ ರಷ್ಯಾ-ಭಾರತ ದುಂಡು ಮೇಜಿನ ಸಭೆಗಳು, ವಿಚಾರ ಸಂಕಿರಣಗಳು, ಸಮ್ಮೇಳನಗಳು ಮತ್ತು ಇತರ ಚಟುವಟಿಕೆಗಳನ್ನು ನಡೆಸಲು ಎರಡೂ ಕಡೆಯವರು ಬೆಂಬಲ ವ್ಯಕ್ತಪಡಿಸಿದರು.

45. ಶಿಕ್ಷಣ ಕ್ಷೇತ್ರದಲ್ಲಿ ಭಾರತ ಮತ್ತು ರಷ್ಯಾ ನಡುವೆ ಇರುವ ಸಾಂಪ್ರದಾಯಿಕವಾದ ಬಲಿಷ್ಠ ಸಹಕಾರವನ್ನು ಗುರುತಿಸಿದ ಉಭಯ ದೇಶಗಳು, ವಿಶ್ವವಿದ್ಯಾಲಯಗಳು ಮತ್ತು ಶಿಕ್ಷಣ ಸಂಸ್ಥೆಗಳ ನಡುವೆ ಸಂಪರ್ಕವನ್ನು ಉತ್ತೇಜಿಸುವಲ್ಲಿ ತಮ್ಮ ಪ್ರಯತ್ನಗಳನ್ನು ಮುಂದುವರಿಸಲು ಒಪ್ಪಿವೆ ಮತ್ತು ಈ ನಿಟ್ಟಿನಲ್ಲಿ 2024ರ ಏಪ್ರಿಲ್ ನಲ್ಲಿ ಸುಮಾರು ರಷ್ಯಾದ 60 ವಿಶ್ವವಿದ್ಯಾಲಯಗಳ ಭಾಗವಹಿಸುವಿಕೆಯೊಂದಿಗೆ ಭಾರತದಲ್ಲಿ ಆಯೋಜಿಸಲಾದ ಶಿಕ್ಷಣ ಶೃಂಗಸಭೆಯನ್ನು ಸ್ವಾಗತಿಸಿವೆ.

ಸಾಂಸ್ಕೃತಿಕ ಸಹಕಾರ, ಪ್ರವಾಸೋದ್ಯಮ ಮತ್ತು ಜನರ ನಡುವಿನ ವಿನಿಮಯ


46. ರಷ್ಯಾ-ಭಾರತ ವಿಶಿಷ್ಟ ಮತ್ತು ವಿಶೇಷ ವ್ಯೂಹಾತ್ಮಕ ಪಾಲುದಾರಿಕೆಯಲ್ಲಿ ಸಾಂಸ್ಕೃತಿಕ ಸಂವಾದವು ಪ್ರಮುಖ ಅಂಶವಾಗಿದೆ ಎಂದು ಎರಡೂ ಕಡೆಯವರು ಒಪ್ಪಿದ್ದಾರೆ. ಎರಡೂ ದೇಶಗಳ ಮೇಳಗಳು, ರಂಗಮಂದಿರಗಳು, ಗ್ರಂಥಾಲಯಗಳು, ವಸ್ತುಸಂಗ್ರಹಾಲಯಗಳು, ಸೃಜನಶೀಲ ವಿಶ್ವವಿದ್ಯಾಲಯಗಳು ಮತ್ತು ಇತರ ಸಾಂಸ್ಕೃತಿಕ ಸಂಸ್ಥೆಗಳ ನಡುವೆ ನೇರ ಸಂಪರ್ಕ ಮತ್ತು ಸಹಕಾರ ಹೆಚ್ಚಳವನ್ನು ಎರಡೂ ಕಡೆಯವರು ಬೆಂಬಲಿಸಲು ಮತ್ತು ಪ್ರೋತ್ಸಾಹಿಸಲು ಒಪ್ಪಿದ್ದಾರೆ.

47. ಸಾಂಪ್ರದಾಯಿಕವಾಗಿ ದೃಢವಾದ ಸಾಂಸ್ಕೃತಿಕ ಸಂಪರ್ಕಗಳನ್ನು ಒತ್ತಿಹೇಳುತ್ತಾ, 2021-2024ರವರೆಗೆ ರಷ್ಯಾ ಒಕ್ಕೂಟದ ಸಂಸ್ಕೃತಿ ಸಚಿವಾಲಯ ಮತ್ತು ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯದ ನಡುವೆ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮದ ಯಶಸ್ವಿ ಅನುಷ್ಠಾನವನ್ನು ಎರಡೂ ಕಡೆಯವರು ಶ್ಲಾಘಿಸಿದರು, ಇದು ಜನರ ನಡುವಿನ ಸಂಪರ್ಕವನ್ನು ಹೆಚ್ಚಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಸಾಂಸ್ಕೃತಿಕ ಮತ್ತು ಚಲನಚಿತ್ರೋತ್ಸವಗಳನ್ನು ಪರಸ್ಪರ ಲಾಭದಾಯಕವಾಗಿ ನಡೆಸುವ ಅಭ್ಯಾಸವನ್ನು ಮುಂದುವರಿಸಲು ಒಪ್ಪಲಾಯಿತು. ಸಾಂಸ್ಕೃತಿಕ ವಿನಿಮಯದ ಭೌಗೋಳಿಕ ವಿಸ್ತರಣೆ ಹಾಗೂ ಯುವಕರು ಮತ್ತು ಜಾನಪದ ಕಲಾ ಗುಂಪುಗಳ ಹೆಚ್ಚಿನ ಪಾಲ್ಗೊಳ್ಳುವಿಕೆಯ ಅಗತ್ಯವನ್ನು ಸಹ ಎತ್ತಿ ತೋರಲಾಯಿತು. ಈ ನಿಟ್ಟಿನಲ್ಲಿ, 2023ರ ಸೆಪ್ಟೆಂಬರ್‌ನಲ್ಲಿ ರಷ್ಯಾದ ಎಂಟು ನಗರಗಳಲ್ಲಿ ಭಾರತೀಯ ಸಂಸ್ಕೃತಿ ಉತ್ಸವವನ್ನು ಮತ್ತು 2024ರಲ್ಲಿ ಭಾರತದಲ್ಲಿ ರಷ್ಯನ್ ಸಂಸ್ಕೃತಿಯ ಉತ್ಸವವನ್ನು ಯಶಸ್ವಿಯಾಗಿ ನಡೆಸಿರುವುದನ್ನು ಎರಡೂ ಕಡೆಯವರು ತೃಪ್ತಿಯಿಂದ ಉಲ್ಲೇಖಿಸಿದರು.

48. ದ್ವಿಪಕ್ಷೀಯ ಸಂಬಂಧಗಳನ್ನು ಉತ್ತೇಜಿಸುವಲ್ಲಿ ಯುವಕರ ಪ್ರಮುಖ ಪಾತ್ರವನ್ನು ಉಲ್ಲೇಖಿಸಿದ ನಾಯಕರು, ಮಾರ್ಚ್ 2024ರಲ್ಲಿ ʻಸೋಚಿ ವಿಶ್ವ ಯುವ ಉತ್ಸವʼದಲ್ಲಿ ವಿದ್ಯಾರ್ಥಿಗಳು ಮತ್ತು ಯುವ ಉದ್ಯಮಿಗಳನ್ನು ಒಳಗೊಂಡ ಭಾರತೀಯ ನಿಯೋಗದ ಸಕ್ರಿಯ ಭಾಗವಹಿಸುವಿಕೆಯ ಮೂಲಕ ಯುವಕರ ವಿನಿಮಯವನ್ನು ಶ್ಲಾಘಿಸಿದರು. ಅಲ್ಲದೆ, ಕಜಾನ್‌ನಲ್ಲಿ ಕ್ರಮವಾಗಿ 2024ರ ಮಾರ್ಚ್ ಮತ್ತು ಜೂನ್‌ನಲ್ಲಿ ನಡೆದ "ಭವಿಷ್ಯದ ಕ್ರೀಡಾಕೂಟ" ಮತ್ತು ಬ್ರಿಕ್ಸ್ ಕ್ರೀಡಾಕೂಟದಲ್ಲಿ ಭಾರತೀಯ ಕ್ರೀಡಾಪಟುಗಳು ಹಾಗೂ ಯುವಕರ ಸಕ್ರಿಯ ಭಾಗವಹಿಸುವಿಕೆಯಿಂದ ಹೆಚ್ಚಿದ ಯುವ ವಿನಿಮಯದ ಬಗ್ಗೆಯೂ ತೃಪ್ತಿ ವ್ಯಕ್ತಪಡಿಸಿದರು.

49. ವಿಜ್ಞಾನ ಮತ್ತು ತಂತ್ರಜ್ಞಾನ, ಹಸಿರು ಇಂಧನ, ಬಾಹ್ಯಾಕಾಶ ಮುಂತಾದ ಕ್ಷೇತ್ರಗಳಲ್ಲಿ ದೊಡ್ಡ ಪ್ರಮಾಣದ ಪ್ರದರ್ಶನಗಳು ಹಾಗೂ ವಿನಿಮಯಗಳನ್ನು ಒಳಗೊಂಡಿರುವ ʻಸಾಂಸ್ಕೃತಿಕ ವಿನಿಮಯʼದ ಜೊತೆಗೆ ಎರಡೂ ದೇಶಗಳ ಬಗ್ಗೆ ಹೆಚ್ಚು ಸಮಕಾಲೀನ ತಿಳಿವಳಿಕೆಯನ್ನು ಉತ್ತೇಜಿಸುವ ಅಗತ್ಯವನ್ನು ಎರಡೂ ಕಡೆಯವರು ಒತ್ತಿ ಹೇಳಿದರು. ಈ ನಿಟ್ಟಿನಲ್ಲಿ, ಜನರ ನಡುವಿನ ವಿನಿಮಯವನ್ನು ಹೆಚ್ಚಿಸಲು ಮತ್ತು ಆರ್ಥಿಕ, ಶೈಕ್ಷಣಿಕ, ವೈಜ್ಞಾನಿಕ ಮತ್ತು ನಾಗರಿಕ ಸಮಾಜಗಳನ್ನು ಒಟ್ಟುಗೂಡಿಸಲು ಎರಡೂ ದೇಶಗಳಲ್ಲಿ "ಅಂತರ/ಬಹು-ವಲಯ ವಿನಿಮಯ" ನಡೆಸಲು ಉಭಯ ನಾಯಕರು ಸಹಮತ ಸೂಚಿಸಿರು.

50. ಸಂಬಂಧಿತ ಶಿಕ್ಷಣ ಸಂಸ್ಥೆಗಳ ನಡುವೆ ಸಂಪರ್ಕವನ್ನು ಬೆಳೆಸುವುದು ಸೇರಿದಂತೆ ಭಾರತದಲ್ಲಿ ರಷ್ಯನ್ ಭಾಷೆ ಮತ್ತು ರಷ್ಯಾದಲ್ಲಿ ಭಾರತೀಯ ಭಾಷೆಗಳನ್ನು ಸಮಗ್ರವಾಗಿ ಉತ್ತೇಜಿಸುವಲ್ಲಿ ತಮ್ಮ ಜಂಟಿ ಪ್ರಯತ್ನಗಳನ್ನು ಮುಂದುವರಿಸಲು ಎರಡೂ ಕಡೆಯವರು ಒಪ್ಪಿದರು.

51. ಭಾರತ ಮತ್ತು ರಷ್ಯಾದ ತಜ್ಞರು, ಚಿಂತಕರು ಮತ್ತು ಸಂಸ್ಥೆಗಳ ನಡುವೆ ಹೆಚ್ಚಿದ ವಿನಿಮಯ ಮತ್ತು ಸಂಪರ್ಕಗಳ ಬಗ್ಗೆ ಎರಡೂ ಕಡೆಯವರು ಮೆಚ್ಚುಗೆ ವ್ಯಕ್ತಪಡಿಸಿದರು. ಹಲವು ವರ್ಷಗಳಿಂದ, ಈ ಸಂವಾದದ ಹಾದಿಯು ಭಾರತ ಮತ್ತು ರಷ್ಯಾದ ವ್ಯೂಹಾತ್ಮಕ ಮತ್ತು ನೀತಿ ರೂಪಣೆ ವಲಯಗಳು ಹಾಗೂ ವ್ಯವಹಾರಗಳ ನಡುವೆ ಪರಸ್ಪರ ತಿಳಿವಳಿಕೆಯನ್ನು ಹೆಚ್ಚಿಸಿದೆ, ಇದರಿಂದಾಗಿ ವ್ಯೂಹಾತ್ಮಕ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ಉಭಯ ನಾಯಕರು ಉಲ್ಲೇಖಿಸಿದರು.

52. ರಷ್ಯಾ ಮತ್ತು ಭಾರತದ ನಡುವೆ ಪ್ರವಾಸಿಗರ ವಿನಿಮಯದಲ್ಲಿ ಸ್ಥಿರವಾದ ಹೆಚ್ಚಳವನ್ನು ಎರಡೂ ಕಡೆಯವರು ಶ್ಲಾಘಿಸಿದರು. ಪ್ರವಾಸೋದ್ಯಮದಲ್ಲಿ ಸಹಕಾರವನ್ನು ಮತ್ತಷ್ಟು ಆಳಗೊಳಿಸಲು, ಪ್ರವಾಸಿಗರ ಹರಿವನ್ನು ಹೆಚ್ಚಿಸುವ ಉದ್ದೇಶದಿಂದ ಸರ್ಕಾರಿ ಮತ್ತು ಖಾಸಗಿ ವಲಯದ ಮಟ್ಟದಲ್ಲಿ ಸಹಕರಿಸಲು ಎರಡೂ ಕಡೆಯವರು ಒಪ್ಪಿಕೊಂಡರು. ಈ ನಿಟ್ಟಿನಲ್ಲಿ, ʻಮಾಸ್ಕೋ ಅಂತಾರಾಷ್ಟ್ರೀಯ ಪ್ರವಾಸೋದ್ಯಮ ಮತ್ತು ಟ್ರಾವೆಲ್ ಎಕ್ಸ್ ಪೋ 2023 ಮತ್ತು 2024ʼ ಹಾಗೂ  ʻಒಟಿಡಿವೈಕೆಎಚ್ -2023ʼ ದಂತಹ ಜನಪ್ರಿಯ ರಷ್ಯಾದ ಪ್ರವಾಸ ಪ್ರದರ್ಶನಗಳಲ್ಲಿ ʻಇನ್ ಕ್ರೆಡಿಬಲ್ ಇಂಡಿಯಾʼ ತಂಡದ ನೇತೃತ್ವದಲ್ಲಿ ಭಾರತೀಯ ಪ್ರವಾಸ ನಿರ್ವಾಹಕರು, ಭಾರತೀಯ ರಾಜ್ಯಗಳ ಪ್ರವಾಸೋದ್ಯಮ ಇಲಾಖೆಗಳು ಭಾಗವಹಿಸುತ್ತಿರುವುದನ್ನು ಎರಡೂ ಕಡೆಯವರು ಉಲ್ಲೇಖಿಸಿದರು.

53 ಇ-ವೀಸಾ ಪರಿಚಯಿಸುವುದು ಸೇರಿದಂತೆ . ಎರಡೂ ದೇಶಗಳು ವೀಸಾ ನಿಯಮಗಳನ್ನು ಸರಳೀಕರಿಸುವುದನ್ನು ಎರಡೂ ಕಡೆಯವರು ಸ್ವಾಗತಿಸಿದರು. ಭವಿಷ್ಯದಲ್ಲಿ ವೀಸಾ ನಿರ್ವಹಣೆಯನ್ನು ಮತ್ತಷ್ಟು ಸರಳಗೊಳಿಸುವ ಕೆಲಸವನ್ನು ಮುಂದುವರಿಸಲು ಅವರು ಸಮ್ಮತಿಸಿದರು.

ವಿಶ್ವಸಂಸ್ಥೆ ಮತ್ತು ಬಹುಪಕ್ಷೀಯ ವೇದಿಕೆಗಳಲ್ಲಿ ಸಹಕಾರ

54. ವಿಶ್ವಸಂಸ್ಥೆಯಲ್ಲಿನ ವಿಷಯಗಳ ಬಗ್ಗೆ ಉಭಯ ದೇಶಗಳ ನಡುವಿನ ಉನ್ನತ ಮಟ್ಟದ ರಾಜಕೀಯ ಸಂವಾದ ಮತ್ತು ಸಹಕಾರವನ್ನು ಉಭಯ ದೇಶಗಳು ಉಲ್ಲೇಖಿಸಿದವು ಮತ್ತು ಅದನ್ನು ಇನ್ನಷ್ಟು ಆಳಗೊಳಿಸಲು ಒಪ್ಪಿದವು. ವಿಶ್ವ ವ್ಯವಹಾರಗಳಲ್ಲಿ ವಿಶ್ವಸಂಸ್ಥೆಯು ನಿರ್ವಹಿಸುವ ಸಮನ್ವಯ ಪಾತ್ರದೊಂದಿಗೆ ಬಹುಪಕ್ಷೀಯತೆಯನ್ನು ಪುನರುಜ್ಜೀವನಗೊಳಿಸುವ ಮಹತ್ವವನ್ನು ಎರಡೂ ಕಡೆಯವರು ಒತ್ತಿ ಹೇಳಿದರು. ಜೊತೆಗೆ ಅಂತಾರಾಷ್ಟ್ರೀಯ ಕಾನೂನಿಗೆ ಗೌರವ ನೀಡುವ ಮಹತ್ವವನ್ನು ಉಭಯ ನಾಯಕರು ಒತ್ತಿ ಹೇಳಿದರು. ಸದಸ್ಯ ರಾಷ್ಟ್ರಗಳ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡದಿರುವ ತತ್ವ ಸೇರಿದಂತೆ ʻವಿಶ್ವಸಂಸ್ಥೆಯ ಸಂವಿಧಾನʼದಲ್ಲಿ ತಿಳಿಸಲಾದ ಉದ್ದೇಶಗಳು ಮತ್ತು ತತ್ವಗಳಿಗೆ ತಮ್ಮ ಬದ್ಧತೆಯನ್ನು ಎತ್ತಿ ಹಿಡಿದರು.


55. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಅಲ್ಲದ ಸದಸ್ಯರಾಗಿ ಭಾರತದ 2021-22ರ ನಡುವಿನ ಅವಧಿಯನ್ನು ಹಾಗೂ ಬಹುಪಕ್ಷೀಯತೆ ಸುಧಾರಣೆ, ವಿಶ್ವಸಂಸ್ಥೆಯ ಶಾಂತಿಪಾಲನೆ ಮತ್ತು ಭಯೋತ್ಪಾದನೆ ನಿಗ್ರಹಕ್ಕಾಗಿ ಭಾರತ ವಿಶ್ವಸಂಸ್ಥೆ ಭದ್ರತಾ ಮಂಡಳಿಗೆ ನೀಡಿದ ಆದ್ಯತೆಗಳು ಮತ್ತು ಈ ನಿಟ್ಟಿನಲ್ಲಿ ಪ್ರಯತ್ನಗಳನ್ನು ರಷ್ಯಾ ಶ್ಲಾಘಿಸಿತು. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತದ ಉಪಸ್ಥಿತಿಯು ವಿಶ್ವಸಂಸ್ಥೆಯ ಅತ್ಯಂತ ಒತ್ತಡದ ವಿಷಯಗಳ ಬಗ್ಗೆ ಮತ್ತಷ್ಟು ಸಮನ್ವಯ ಸಾಧಿಸಲು ಅಮೂಲ್ಯವಾದ ಅವಕಾಶವನ್ನು ಒದಗಿಸುತ್ತದೆ ಎಂದು ಎರಡೂ ದೇಶಗಳು ಒತ್ತಿ ಹೇಳಿದವು.

56. ಸಮಕಾಲೀನ ಜಾಗತಿಕ ವಾಸ್ತವಗಳನ್ನು ಪ್ರತಿಬಿಂಬಿಸಲು ಮತ್ತು ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯ ಸಮಸ್ಯೆಗಳನ್ನು ನಿಭಾಯಿಸುವಲ್ಲಿ ಭದ್ರತಾ ಮಂಡಳಿಯನ್ನು ಹೆಚ್ಚು ಪ್ರಾತಿನಿಧಿಕ ಹಾಗೂ ಪರಿಣಾಮಕಾರಿಯನ್ನಾಗಿ ಮಾಡಲು ಸಮಗ್ರ ಸುಧಾರಣೆಗೆ ಉಭಯ ದೇಶಗಳ ನಾಯಕರು ಕರೆ ನೀಡಿದರು. ಸುಧಾರಿತ ಮತ್ತು ವಿಸ್ತೃತ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತದ ಖಾಯಂ ಸದಸ್ಯತ್ವಕ್ಕೆ ರಷ್ಯಾ ತನ್ನ ದೃಢವಾದ ಬೆಂಬಲವನ್ನು ಪುನರುಚ್ಚರಿಸಿತು.

57. "ವಸುದೈವ ಕುಟುಂಬಕಂ" ಅಥವಾ "ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ" ಎಂಬ ವಿಷಯದ ಅಡಿಯಲ್ಲಿ 2023ರಲ್ಲಿ ಭಾರತದ ಅಧ್ಯಕ್ಷತೆಯಲ್ಲಿ ನಡೆದ ಜಿ20ʼ ಶೃಂಗಸಭೆಯ ವೇಳೆ, ವಿಶೇಷವಾಗಿ ಜಿ20 ಸ್ವರೂಪದಲ್ಲಿ ಫಲಪ್ರದ ಸಹಕಾರವನ್ನು ಉಭಯ ನಾಯಕರು ಎತ್ತಿ ತೋರಿದರು. ಇದು ಹವಾಮಾನ ಬದಲಾವಣೆಯನ್ನು ಎದುರಿಸಲು ಸುಸ್ಥಿರ ಅಭಿವೃದ್ಧಿಗಾಗಿ ಜೀವನಶೈಲಿ (ಲೈಫ್‌) ಉಪಕ್ರಮವನ್ನು ಮುಂದಿಟ್ಟಿತು. ಘನತೆವೆತ್ತ ಅಧ್ಯಕ್ಷರಾದ ಶ್ರೀ ವ್ಲಾಡಿಮಿರ್‌ ಪುಟಿನ್ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತದ ಜಿ20 ಅಧ್ಯಕ್ಷತೆಯ ಯಶಸ್ಸಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಭಾರತದ ಜಿ20 ಅಧ್ಯಕ್ಷತೆಯಲ್ಲಿ ಸರ್ವರಿಗೂ ನ್ಯಾಯ ಮತ್ತು ಸಮಾನ ಬೆಳವಣಿಗೆ, ಮಾನವ ಕೇಂದ್ರಿತ ಕಾರ್ಯವಿಧಾನದ ಜೊತೆಗೆ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ (ಡಿಪಿಐ) ಸೇರಿದಂತೆ ಡಿಜಿಟಲ್‌ ತಂತ್ರಜ್ಞಾನ ಹಾಗೂ ನಾವಿನ್ಯತೆಗೆ ಬೆಂಬಲ ನೀಡುವುದನ್ನು ಒತ್ತು ನೀಡಲಾಯಿತು. ಇದರಿಂದ ಎಲ್ಲರನ್ನೂ ಒಳಗೊಂಡ ಅಭಿವೃದ್ಧಿಗೆ ಹಾಗೂ ಬಹುಪಕ್ಷೀಯತೆಯಲ್ಲಿ ಹೊಸ ನಂಬಿಕೆ ಸಾಧ್ಯವಾಗಲಿದೆ ಎಂದು ಭಾರತ ಪ್ರತಿಪಾದಿಸಿತು. ಭಾರತದ ಯಶಸ್ವಿ ʻಜಿ 20ʼ ಅಧ್ಯಕ್ಷತೆಗೆ ರಷ್ಯಾದ ನಿರಂತರ ಬೆಂಬಲವನ್ನು ಭಾರತದ ನಾಯಕರು ಶ್ಲಾಘಿಸಿದರು.

58. ಜಾಗತಿಕ ದಕ್ಷಿಣದ ರಾಷ್ಟ್ರಗಳ ಆದ್ಯತೆಗಳನ್ನು ಅಂತಾರಾಷ್ಟ್ರೀಯ ಆರ್ಥಿಕ ಮತ್ತು ಹಣಕಾಸು ಸಹಕಾರದ ಮುಖ್ಯ ವೇದಿಕೆಯ ಕಾರ್ಯಸೂಚಿಯಲ್ಲಿ ಕ್ರೋಢೀಕರಿಸುವುದು ಹಾಗೂ ವೇದಿಕೆಯ ಪೂರ್ಣ ಸದಸ್ಯರ ಶ್ರೇಣಿಗೆ ಆಫ್ರಿಕನ್ ಒಕ್ಕೂಟದ ಪ್ರವೇಶವು ಭಾರತದ ಜಿ 20 ಅಧ್ಯಕ್ಷತೆಯ ಪ್ರಮುಖ ಪ್ರಾಯೋಗಿಕ ಪರಂಪರೆ ಎಂಬುದನ್ನು ಎರಡೂ ಕಡೆಯವರು ಒತ್ತಿ ಹೇಳಿದರು. 2023ರಲ್ಲಿ ಭಾರತದ ಅಧ್ಯಕ್ಷತೆಯಲ್ಲಿ ʻವಾಯ್ಸ್ ಆಫ್ ಗ್ಲೋಬಲ್ ಸೌತ್ʼ ವರ್ಚುವಲ್ ಶೃಂಗಸಭೆಗಳನ್ನು ನಡೆಸಿದ್ದನ್ನು ಎರಡೂ ಕಡೆಯವರು ಸ್ವಾಗತಿಸಿದರು, ಇದು ಬಹುಧ್ರುವೀಯ ಜಾಗತಿಕ ವ್ಯವಸ್ಥೆಯನ್ನು ನಿರ್ಮಿಸುವ ಮತ್ತು ಜಾಗತಿಕ ವ್ಯವಹಾರಗಳಲ್ಲಿ ಅಭಿವೃದ್ಧಿಶೀಲ ರಾಷ್ಟ್ರಗಳ ಸ್ಥಾನವನ್ನು ಬಲಪಡಿಸುವ ನಿಟ್ಟಿನಲ್ಲಿ ಪ್ರಮುಖ ಸಂದೇಶವಾಗಿದೆ. ಜಾಗತಿಕ ಆರ್ಥಿಕ ಸವಾಲುಗಳಿಗೆ ಜಂಟಿ ಪರಿಹಾರಗಳನ್ನು ಅಭಿವೃದ್ಧಿಪಡಿಸಲು, ಜಿ 20 ನಾಯಕರ ʻನವದೆಹಲಿ ಘೋಷಣೆʼಯಲ್ಲಿ ಪ್ರತಿಪಾದಿಸಲಾದ ಹಸಿರು ಅಭಿವೃದ್ಧಿ ಒಪ್ಪಂದದಲ್ಲಿ ಪ್ರತಿಪಾದಿಸಿದಂತೆ ಹವಾಮಾನ ಹಣಕಾಸು ಮತ್ತು ತಂತ್ರಜ್ಞಾನಕ್ಕೆ ಹೆಚ್ಚಿನ ಪ್ರವೇಶವನ್ನು ಸಜ್ಜುಗೊಳಿಸಲು ಹಾಗೂ ಅಂತಾರಾಷ್ಟ್ರೀಯ ಆರ್ಥಿಕ ಆಡಳಿತ ಸಂಸ್ಥೆಗಳ, ವಿಶೇಷವಾಗಿ ಬಹುಪಕ್ಷೀಯ ಅಭಿವೃದ್ಧಿ ಬ್ಯಾಂಕುಗಳ ನ್ಯಾಯಯುತ ಸುಧಾರಣೆಯನ್ನು ಖಚಿತಪಡಿಸಿಕೊಳ್ಳಲು ʻಜಿ 20ʼ ಯೊಳಗೆ ಸಮನ್ವಯವನ್ನು ಬಲಪಡಿಸಲು ಉಭಯ ನಾಯಕರು ಸಹಮತಿಸಿದರು.


59. ʻಬ್ರಿಕ್ಸ್ʼ ಮೈತ್ರಿಕೂಟದಲ್ಲಿ ತಮ್ಮ ವ್ಯೂಹಾತ್ಮಕ ಪಾಲುದಾರಿಕೆ ಮತ್ತು ನಿಕಟ ಸಮನ್ವಯವನ್ನು ಬಲಪಡಿಸುವ ಮಹತ್ವವನ್ನು ಎರಡೂ ಕಡೆಯವರು ಒತ್ತಿ ಹೇಳಿದರು. ಜೋಹನ್ಸ್‌ಬರ್ಗ್ ನಲ್ಲಿ ನಡೆದ XV ಶೃಂಗಸಭೆಯಲ್ಲಿ ಕೈಗೊಂಡ ʻಬ್ರಿಕ್ಸ್ʼ ಸದಸ್ಯತ್ವ  ವಿಸ್ತರಣೆ ನಿರ್ಧಾರವನ್ನು ಸ್ವಾಗತಿಸಿದರು. ಪರಸ್ಪರ ಗೌರವ ಮತ್ತು ತಿಳಿವಳಿಕೆ, ಸಮಾನತೆ, ಒಗ್ಗಟ್ಟು, ಮುಕ್ತತೆ, ಅಂತರ್ಗತತೆ ಹಾಗೂ ಒಮ್ಮತವನ್ನು ಒಳಗೊಂಡ ʻಬ್ರಿಕ್ಸ್ʼ ಆಶಯಕ್ಕೆ ತಮ್ಮ ಬದ್ಧತೆಯನ್ನು ಅವರು ಪುನರುಚ್ಚರಿಸಿದರು. ʻಬ್ರಿಕ್ಸ್ʼ ಸಹಕಾರದ ನಿರಂತರತೆ ಮತ್ತು ಬಲವರ್ಧನೆ, ʻಬ್ರಿಕ್ಸ್ʼನಲ್ಲಿ ಹೊಸ ಸದಸ್ಯರ ಸೇರ್ಪಡೆ ಮತ್ತು ʻಬ್ರಿಕ್ಸ್ ಪಾಲುದಾರ ರಾಷ್ಟ್ರದ ಮಾದರಿಯನ್ನು ರೂಪಿಸಲು ಕಾರ್ಯವಿಧಾನಗಳನ್ನು ಅಭಿವೃದ್ಧಿಪಡಿಸುವ ಗುರಿಯೊಂದಿಗೆ ಜಂಟಿ ಪ್ರಯತ್ನಗಳನ್ನು ಮುಂದುವರಿಸಲು ರಷ್ಯಾ ಮತ್ತು ಭಾರತ ಒಪ್ಪಿದವು. 2024ರಲ್ಲಿ ರಷ್ಯಾದ ಅಧ್ಯಕ್ಷತೆಯ ಆದ್ಯತೆಗಳನ್ನು ಬೆಂಬಲಿಸಿದ್ದಕ್ಕಾಗಿ ರಷ್ಯಾದ ಕಡೆಯವರು ಭಾರತಕ್ಕೆ ಕೃತಜ್ಞತೆ ಸಲ್ಲಿಸಿದರು.

60. ವಿಸ್ತೃತ ʻಬ್ರಿಕ್ಸ್ʼ ಕುಟುಂಬಕ್ಕೆ ಹೊಸ ಸದಸ್ಯ ರಾಷ್ಟ್ರಗಳನ್ನು ಎರಡೂ ಕಡೆಯವರು ಸ್ವಾಗತಿಸಿದರು. "ನ್ಯಾಯಯುತ ಜಾಗತಿಕ ಅಭಿವೃದ್ಧಿ ಮತ್ತು ಭದ್ರತೆಗಾಗಿ ಬಹುಪಕ್ಷೀಯತೆಯನ್ನು ಬಲಪಡಿಸುವುದು" ಎಂಬ ವಿಷಯದ ಅಡಿಯಲ್ಲಿ 2024ರ ರಷ್ಯಾದ ʻಬ್ರಿಕ್ಸ್ʼ ಅಧ್ಯಕ್ಷತೆಗೆ ಭಾರತ ತನ್ನ ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿತು. 2024ರ ಅಕ್ಟೋಬರ್ ನಲ್ಲಿ ಕಜಾನ್‌ನಲ್ಲಿ ನಡೆಯಲಿರುವ XVI ಬ್ರಿಕ್ಸ್ ಶೃಂಗಸಭೆಯ ಯಶಸ್ಸಿಗಾಗಿ ಒಟ್ಟಾಗಿ ಕೆಲಸ ಮಾಡುವ ಬದ್ಧತೆಯನ್ನು ಎರಡೂ ಕಡೆಯವರು ವ್ಯಕ್ತಪಡಿಸಿದರು.

61. ರಷ್ಯಾ ಮತ್ತು ಭಾರತದ ನಡುವಿನ ವಿಶೇಷ ಮತ್ತು ವಿಶೇಷ ವ್ಯೂಹಾತ್ಮಕ ಪಾಲುದಾರಿಕೆಯ ಸಂಬಂಧಗಳನ್ನು ಆಳಗೊಳಿಸಲು ʻಶಾಂಘೈ ಸಹಕಾರ ಸಂಘಟನೆʼಯ ನೀತಿ ಚೌಕಟ್ಟಿನೊಳಗೆ ಜಂಟಿ ಕಾರ್ಯ ಮಹತ್ವದ್ದಾಗಿದೆ ಎಂದು ಉಭಯ ದೇಶಗಳು ಪರಿಗಣಿಸಿವೆ.


62. ಭಯೋತ್ಪಾದನೆ, ಉಗ್ರವಾದ, ಪ್ರತ್ಯೇಕತಾವಾದ, ಮಾದಕವಸ್ತು ಕಳ್ಳಸಾಗಣೆ, ಗಡಿಯಾಚೆಗಿನ ಸಂಘಟಿತ ಅಪರಾಧ ಮತ್ತು ಮಾಹಿತಿ ಭದ್ರತಾ ಅಪಾಯಗಳನ್ನು ಎದುರಿಸುವಂತಹ ಪ್ರಮುಖ ಕ್ಷೇತ್ರಗಳಲ್ಲಿ ʻಎಸ್‌ಸಿಒʼದೊಳಗೆ ತಮ್ಮ ಫಲಪ್ರದ ಸಹಕಾರವನ್ನು ಎರಡೂ ದೇಶಗಳು ತೃಪ್ತಿಯಿಂದ ಉಲ್ಲೇಖಿಸಿದವು. 2022-23ರ ಭಾರತದ ʻಎಸ್‌ಸಿಒʼ ಅಧ್ಯಕ್ಷತೆಯನ್ನು ರಷ್ಯಾ ಶ್ಲಾಘಿಸಿತು ಮತ್ತು ಇದು ʻಎಸ್‌ಸಿಒʼದಲ್ಲಿನ ಸಹಕಾರದ ವ್ಯಾಪಕ ಕ್ಷೇತ್ರಗಳಿಗೆ ಹೊಸ ವೇಗವನ್ನು ತಂದಿದೆ ಎಂದು ಒಪ್ಪಿಕೊಂಡಿತು. ಅಂತಾರಾಷ್ಟ್ರೀಯ ವ್ಯವಹಾರಗಳಲ್ಲಿ, ಸುಸ್ಥಿರ ಮತ್ತು ಬಹುಧ್ರುವೀಯ ವಿಶ್ವ ವ್ಯವಸ್ಥೆಯ ರಚನೆಯಲ್ಲಿ ಹೆಚ್ಚಿದ ʻಎಸ್‌ಸಿಒʼದ ಪಾತ್ರವನ್ನು ಅವರು ಸ್ವಾಗತಿಸಿದರು. ಇರಾನ್ ಮತ್ತು ಬೆಲಾರಸ್ ರಾಷ್ಟ್ರಗಳನ್ನು ʻಎಸ್‌ಸಿಒʼದ ಹೊಸ ಸದಸ್ಯರಾಗಿ ಅವರು ಸ್ವಾಗತಿಸಿದರು. ಅಂತಾರಾಷ್ಟ್ರೀಯ ರಂಗದಲ್ಲಿ ಎಸ್‌ಸಿಒ ಪಾತ್ರದ ಹೆಚ್ಚಳ, ವಿಶ್ವಸಂಸ್ಥೆ ಮತ್ತು ಅದರ ವಿಶೇಷ ಏಜೆನ್ಸಿಗಳು ಹಾಗೂ ಇತರ ಬಹುಪಕ್ಷೀಯ ಸಂಸ್ಥೆಗಳು ಮತ್ತು ಸಂಘಗಳೊಂದಿಗೆ ಸಂಘಟನೆಯ ಸಂಪರ್ಕಗಳ ಸಮಗ್ರ ಅಭಿವೃದ್ಧಿಯನ್ನು ಎರಡೂ ಕಡೆಯವರು ಬೆಂಬಲಿಸಿದ್ದಾರೆ.

ಭಯೋತ್ಪಾದನೆ ನಿಗ್ರಹ

63. ಭಯೋತ್ಪಾದಕರ ಗಡಿಯಾಚೆಗಿನ ಚಲನವಲನ ಮತ್ತು ಭಯೋತ್ಪಾದಕ ಹಣಕಾಸು ಜಾಲಗಳು ಹಾಗೂ ಉಗ್ರರ ಸುರಕ್ಷಿತ ತಾಣಗಳು ಸೇರಿದಂತೆ ಭಯೋತ್ಪಾದನೆಗೆ ಅನುಕೂಲಕರವಾದ ಉಗ್ರವಾದ ಮತ್ತು ಹಿಂಸಾತ್ಮಕ ವಿಧ್ವಂಸಕತೆಯನ್ನು ಉಭಯ ನಾಯಕರು ಬಲವಾಗಿ ಖಂಡಿಸಿದರು. 2024ರ ಜುಲೈ 8 ರಂದು ಜಮ್ಮು ಮತ್ತು ಕಾಶ್ಮೀರದ ಕಥುವಾ ಪ್ರದೇಶದಲ್ಲಿ, ಜೂನ್ 23 ರಂದು ದಗೆಸ್ತಾನದಲ್ಲಿ ಮತ್ತು ಮಾರ್ಚ್ 22 ರಂದು ಮಾಸ್ಕೋದ ಕ್ರೋಕಸ್ ಸಿಟಿ ಹಾಲ್‌ನಲ್ಲಿ, ಸೇನಾ ಬೆಂಗಾವಲು ಪಡೆಗಳ ಮೇಲೆ ಇತ್ತೀಚೆಗೆ ನಡೆದ ಭೀಕರ ಭಯೋತ್ಪಾದಕ ದಾಳಿಯನ್ನು ಅವರು ಬಲವಾಗಿ ಖಂಡಿಸಿದರು ಮತ್ತು ಈ ದಾಳಿಗಳು ಭಯೋತ್ಪಾದನೆಯನ್ನು ಎದುರಿಸಲು ಸಹಕಾರವನ್ನು ಮತ್ತಷ್ಟು ಬಲಪಡಿಸುವ ಅಗತ್ಯವನ್ನು ಮತ್ತಷ್ಟು ಒತ್ತಿ ಹೇಳುತ್ತವೆ ಎಂದು ಹೇಳಿದರು. ಎಲ್ಲಾ ರೂಪಗಳು ಮತ್ತು ವಿಧಗಳ ಅಂತಾರಾಷ್ಟ್ರೀಯ ಭಯೋತ್ಪಾದನೆ ಮತ್ತು ವಿಧ್ವಂಸಕತೆಯ ವಿರುದ್ಧ ರಾಜಿರಹಿತ ಹೋರಾಟಕ್ಕೆ ಎರಡೂ ಕಡೆಯವರು ಕರೆ ನೀಡಿದರು, ಅಂತಾರಾಷ್ಟ್ರೀಯ ಕಾನೂನು ಮತ್ತು ವಿಶ್ವಸಂಸ್ಥೆಯ ಸಂವಿಧಾನದ ಆಧಾರದ ಮೇಲೆ ಈ ಕ್ಷೇತ್ರದಲ್ಲಿ ಸಹಕಾರವನ್ನು ಹೆಚ್ಚಿಸುವ ಮಹತ್ವವನ್ನು ಗಮನಿಸಿದರು. ಈ ನಿಟ್ಟಿನಲ್ಲಿ ಗುಪ್ತ ಕಾರ್ಯಸೂಚಿಗಳು ಮತ್ತು ದ್ವಿಮುಖ ಮಾನದಂಡಳಿಗೆ ಅವಕಾಶ ಇರಬಾರದು ಎಂದರು. ಇದಲ್ಲದೆ, ವಿಶ್ವಸಂಸ್ಥೆಯ ಭದ್ರತಾ ಮಂಡಳಿ, ಯುಎನ್ ಜನರಲ್ ಅಸೆಂಬ್ಲಿಯ ಸಂಬಂಧಿತ ನಿರ್ಣಯಗಳನ್ನು ದೃಢವಾಗಿ ಅನುಷ್ಠಾನಗೊಳಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದರು.

64. ಭಯೋತ್ಪಾದನೆಯನ್ನು ಎದುರಿಸುವಲ್ಲಿ ದೇಶಗಳು ಮತ್ತು ಅವುಗಳ ಸಂಬಂಧಪಟ್ಟ ಪ್ರಾಧಿಕಾರಗಳ ಪ್ರಾಥಮಿಕ ಜವಾಬ್ದಾರಿಯನ್ನು ಎರಡೂ ಕಡೆಯವರು ಒತ್ತಿ ಹೇಳಿದರು. ಜೊತೆಗೆ ಭಯೋತ್ಪಾದಕ ಅಪಾಯಗಳನ್ನು ತಡೆಗಟ್ಟುವ ಮತ್ತು ಎದುರಿಸುವ ಜಾಗತಿಕ ಪ್ರಯತ್ನಗಳು ಅಂತಾರಾಷ್ಟ್ರೀಯ ಕಾನೂನನ್ನು ಸಂಪೂರ್ಣವಾಗಿ ಅನುಸರಿಸಬೇಕು ಎಂದು ಹೇಳಿದರು. ಭಯೋತ್ಪಾದನೆಗೆ ʻಶೂನ್ಯ ಸಹಿಷ್ಣುತೆʼ ತೋರಬೇಕು ಮತ್ತು ವಿಶ್ವಸಂಸ್ಥೆಯ ನೀತಿ ಚೌಕಟ್ಟಿನಲ್ಲಿ ಅಂತಾರಾಷ್ಟ್ರೀಯ ಭಯೋತ್ಪಾದನೆ ಕುರಿತ ಸಮಗ್ರ ಒಪ್ಪಂದವನ್ನು ತ್ವರಿತವಾಗಿ ಅಂತಿಮಗೊಳಿಸಬೇಕು ಮತ್ತು ಅಳವಡಿಸಿಕೊಳ್ಳಬೇಕು. ಅಲ್ಲದೆ, ಭಯೋತ್ಪಾದನೆಗೆ ಅನುಕೂಲಕರವಾದ ಹಿಂಸಾತ್ಮಕ ಉಗ್ರವಾದವನ್ನು ಎದುರಿಸಲು ʻಯುಎನ್‌ಜಿಎʼ ಮತ್ತು ಭದ್ರತಾಮಂಡಳಿ ನಿರ್ಣಯಗಳನ್ನು ಜಾರಿಗೆ ತರಬೇಕು ಎಂದು ಅವರು ಕರೆ ನೀಡಿದರು.

65. ಭಯೋತ್ಪಾದನೆಯನ್ನು ಯಾವುದೇ ಧರ್ಮ, ರಾಷ್ಟ್ರೀಯತೆ, ನಾಗರಿಕತೆ ಅಥವಾ ಜನಾಂಗೀಯ ಗುಂಪಿನೊಂದಿಗೆ ನಂಟು ಮಾಡಬಾರದು ಮತ್ತು ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿರುವವರನ್ನು ಹಾಗೂ ಅವರ ಬೆಂಬಲಿಗರನ್ನು ಹೊಣೆಗಾರರನ್ನಾಗಿ ಮಾಡಬೇಕು ಹಾಗೂ ಅಂತಾರಾಷ್ಟ್ರೀಯ ಕಾನೂನಿನ ಪ್ರಕಾರ ಶಿಕ್ಷೆಗೆ ಗುರಿಪಡಿಸಬೇಕು ಎಂದು ನಾಯಕರು ಪುನರುಚ್ಚರಿಸಿದರು.

66. ಭಾರತದ ʻಸಿಟಿಸಿʼ ಅಧ್ಯಕ್ಷತೆಯಲ್ಲಿ, 2022ರ ಅಕ್ಟೋಬರ್‌ನಲ್ಲಿ ಭಾರತದಲ್ಲಿ ನಡೆದ ವಿಶ್ವಸಂಸ್ಥೆಯ ʻಭದ್ರತಾ ಮಂಡಳಿ ಭಯೋತ್ಪಾದನಾ ನಿಗ್ರಹ ಸಮಿತಿʼಯ(ಸಿಟಿಸಿ) ವಿಶೇಷ ಸಭೆಯನ್ನು ಎರಡೂ ಕಡೆಯವರು ಶ್ಲಾಘಿಸಿದರು. ಜೊತೆಗೆ, ಭಯೋತ್ಪಾದಕ ಉದ್ದೇಶಗಳಿಗಾಗಿ ಹೊಸ ಮತ್ತು ಉದಯೋನ್ಮುಖ ತಂತ್ರಜ್ಞಾನಗಳ ಬಳಕೆಯನ್ನು ಎದುರಿಸುವ ನಿಟ್ಟಿನಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾದ ʻದೆಹಲಿ ಘೋಷಣೆʼಯನ್ನು ಸ್ವಾಗತಿಸಿದರು. ಭಯೋತ್ಪಾದಕರಿಂದ ಪಾವತಿ ತಂತ್ರಜ್ಞಾನಗಳು, ಸಾಮಾಜಿಕ ಮಾಧ್ಯಮ ವೇದಿಕೆಗಳು, ನಿಧಿಸಂಗ್ರಹ ವಿಧಾನಗಳಂತಹ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನಗಳ ದುರ್ಬಳಕೆ ಹಾಗೂ ಮಾನವರಹಿತ ವೈಮಾನಿಕ ವಾಹನಗಳ(ಯುಎವಿ ಅಥವಾ ಡ್ರೋನ್‌) ದುರ್ಬಳಕೆ ಬಗ್ಗೆ ಕಳವಳಗಳನ್ನು ಇದು ಒಳಗೊಂಡಿದೆ ಎಂದು ಅವರು ಗಮನ ಸೆಳೆದರು.

67. ಬಹುರಾಷ್ಟ್ರೀಯ ಸಂಘಟಿತ ಅಪರಾಧಗಳನ್ನು ಎದುರಿಸುವುದು, ಹಣ ಅಕ್ರಮ ವರ್ಗಾವಣೆ, ಭಯೋತ್ಪಾದಕರಿಗೆ ಹಣಕಾಸು ಮತ್ತು ಮಾದಕವಸ್ತು ಕಳ್ಳಸಾಗಣೆ ವಿರುದ್ಧ ಹೋರಾಡುವಲ್ಲಿ ಬಹುಪಕ್ಷೀಯ ಸಹಕಾರವನ್ನು ಬಲಪಡಿಸುವ ಬದ್ಧತೆಯನ್ನು ಎರಡೂ ಕಡೆಯವರು ಪುನರುಚ್ಚರಿಸಿದರು.

68. 2016 ಅಕ್ಟೋಬರ್ 15ರ ʻಅಂತಾರಾಷ್ಟ್ರೀಯ ಮಾಹಿತಿ ಭದ್ರತೆಯಲ್ಲಿ ಸಹಕಾರ ಕುರಿತ ಒಪ್ಪಂದʼದ ಆಧಾರದ ಮೇಲೆ ಭದ್ರತೆ ಕ್ಷೇತ್ರದಲ್ಲಿ ʻಐಸಿಟಿʼಗಳ ಬಳಕೆಯ ಕುರಿತ ಸಂವಾದವನ್ನು ಬಲಪಡಿಸಲು ಸಿದ್ಧವಿರುವುದಾಗಿ ಉಭಯ ನಾಯಕರು ಹೇಳಿದರು. ದೇಶಗಳ ಸಾರ್ವಭೌಮತೆಯ ಸಮಾನತೆಯ ತತ್ವಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮತ್ತು ತಮ್ಮ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡದಿರುವ ಮಹತ್ವವನ್ನು ಎರಡೂ ಕಡೆಯವರು ಒತ್ತಿ ಹೇಳಿದರು. ಈ ನಿಟ್ಟಿನಲ್ಲಿ ಎರಡೂ ಕಡೆಯವರು ಸಾರ್ವತ್ರಿಕ ಅಂತಾರಾಷ್ಟ್ರೀಯ ಕಾನೂನು ಸಾಧನಗಳನ್ನು ಅಳವಡಿಸಿಕೊಳ್ಳುವಂತೆ ಒತ್ತಾಯಿಸಿದರು ಮತ್ತು ʻಐಸಿಟಿʼ ಅಪರಾಧವನ್ನು ಎದುರಿಸುವ ನಿಟ್ಟಿನಲ್ಲಿ ಸಮಗ್ರ ಒಪ್ಪಂದ ಸೇರಿದಂತೆ ವಿಶ್ವಸಂಸ್ಥೆಯ ಆಶ್ರಯದಲ್ಲಿ ನಡೆಯುತ್ತಿರುವ ಪ್ರಯತ್ನಗಳನ್ನು ಸ್ವಾಗತಿಸಿದರು.

69. ಬಾಹ್ಯಾಕಾಶ ಚಟುವಟಿಕೆಗಳ ದೀರ್ಘಕಾಲೀನ ಸುಸ್ಥಿರತೆಯ ಸಮಸ್ಯೆಗಳು ಸೇರಿದಂತೆ, ʻಬಾಹ್ಯಾಕಾಶದ ಶಾಂತಿಯುತ ಬಳಕೆ ಕುರಿತ ವಿಶ್ವಸಂಸ್ಥೆಯ ಸಮಿತಿʼಯಲ್ಲಿ(ಯುಎನ್ ಸಿಒಪಿಯುಒಎಸ್) ಸಹಕಾರವನ್ನು ಬಲಪಡಿಸುವ ಇಂಗಿತವನ್ನು ಉಭಯ ನಾಯಕರು ವ್ಯಕ್ತಪಡಿಸಿದರು.


70. ಸಾಮೂಹಿಕ ವಿನಾಶದ ಶಸ್ತ್ರಾಸ್ತ್ರಗಳ ಪ್ರಸರಣ ತಡೆಗೆ ಜಾಗತಿಕ ಪ್ರಯತ್ನಗಳನ್ನು ಮತ್ತಷ್ಟು ಬಲಪಡಿಸುವ ಬದ್ಧತೆಯನ್ನು ಎರಡೂ ಕಡೆಯವರು ಪುನರುಚ್ಚರಿಸಿದರು. ಪರಮಾಣು ಪೂರೈಕೆದಾರರ ಗುಂಪಿನಲ್ಲಿ ಭಾರತದ ಸದಸ್ಯತ್ವಕ್ಕೆ ರಷ್ಯಾ ತನ್ನ ಬಲವಾದ ಬೆಂಬಲವನ್ನು ವ್ಯಕ್ತಪಡಿಸಿತು. ಜಾಗತಿಕ ಶಾಂತಿ ಮತ್ತು ಭದ್ರತೆಯನ್ನು ಉತ್ತೇಜಿಸುವ ಸಲುವಾಗಿ ಪರಸ್ಪರ ನಂಬಿಕೆಯ ಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೆಲಸ ಮಾಡುವಂತೆ ಎರಡೂ ಕಡೆಯವರು ಅಂತಾರಾಷ್ಟ್ರೀಯ ಸಮುದಾಯದ ಎಲ್ಲಾ ಸದಸ್ಯರನ್ನು ಒತ್ತಾಯಿಸಿದರು.

71. ʻಅಂತಾರಾಷ್ಟ್ರೀಯ ಸೌರ ಒಕ್ಕೂಟʼ(ಐಎಸ್ಎ), ʻವಿಪತ್ತು ಸ್ಥಿತಿಸ್ಥಾಪಕ ಮೂಲಸೌಕರ್ಯ ಒಕ್ಕೂಟʼ(ಸಿಡಿಆರ್‌ಐ) ಮತ್ತು ʻಅಂತಾರಾಷ್ಟ್ರೀಯ ಬಿಗ್ ಕ್ಯಾಟ್ ಅಲೈಯನ್ಸ್ʼಗೆ(ಐಬಿಸಿಎ) ರಷ್ಯಾದ ಸೇರ್ಪಡೆಯನ್ನು ಭಾರತ ಎದುರು ನೋಡುತ್ತಿದೆ.

72. ಎರಡೂ ದೇಶಗಳ ಭದ್ರತಾ ಮಂಡಳಿಗಳ ನಡುವಿನ ಸಂವಾದ ಕಾರ್ಯವಿಧಾನ ಸೇರಿದಂತೆ ಅಫ್ಘಾನಿಸ್ತಾನದ ಬಗ್ಗೆ ಭಾರತ ಮತ್ತು ರಷ್ಯಾ ನಡುವಿನ ನಿಕಟ ಸಮನ್ವಯವನ್ನು ಎರಡೂ ಕಡೆಯವರು ಮೆಚ್ಚುಗೆಯಿಂದ ಉಲ್ಲೇಖಿಸಿದರು. ಅಫ್ಘಾನಿಸ್ತಾನದ ಭದ್ರತಾ ಪರಿಸ್ಥಿತಿ ಮತ್ತು ಅದರ ಪರಿಣಾಮಗಳು, ಪ್ರಸ್ತುತ ರಾಜಕೀಯ ಪರಿಸ್ಥಿತಿ, ಭಯೋತ್ಪಾದನೆ, ಮೂಲಭೂತವಾದ ಮತ್ತು ಮಾದಕವಸ್ತು ಕಳ್ಳಸಾಗಣೆಗೆ ಸಂಬಂಧಿಸಿದ ವಿಷಯಗಳು ಸೇರಿದಂತೆ ಅಫ್ಘಾನಿಸ್ತಾನದ ಪರಿಸ್ಥಿತಿಯ ಬಗ್ಗೆ ಎರಡೂ ಕಡೆಯವರು ಚರ್ಚಿಸಿದರು. ಅಫ್ಘಾನಿಸ್ತಾನವು ಭಯೋತ್ಪಾದನೆ, ಯುದ್ಧ ಮತ್ತು ಮಾದಕವಸ್ತುಗಳಿಂದ ಮುಕ್ತವಾದ ಸ್ವತಂತ್ರ, ಏಕೀಕೃತ ಮತ್ತು ಶಾಂತಿಯುತ ರಾಷ್ಟ್ರವಾಗಬೇಕೆಂದು ಅವರು ಪ್ರತಿಪಾದಿಸಿದರು. ಅದರ ನೆರೆಹೊರೆಯವರೊಂದಿಗೆ ಶಾಂತಿಯಿಂದ ಬದುಕಬೇಕು ಮತ್ತು ಸಮಾಜದ ಅತ್ಯಂತ ದುರ್ಬಲ ವರ್ಗಗಳು ಸೇರಿದಂತೆ ಮೂಲಭೂತ ಮಾನವ ಹಕ್ಕುಗಳು ಮತ್ತು ಸ್ವಾತಂತ್ರ್ಯಗಳಿಗೆ ಗೌರವವನ್ನು ಅಫ್ಘಾನ್ ಖಚಿತಪಡಿಸಿಕೊಳ್ಳಬೇಕು ಎಂದು ಪ್ರತಿಪಾದಿಸಿದರು. ಅಫ್ಘಾನ್ ಒಪ್ಪಂದಕ್ಕೆ ಅನುವು ಮಾಡಿಕೊಡುವ ʻಮಾಸ್ಕೋ ಸ್ವರೂಪʼದ ಸಭೆಗಳ ಪ್ರಾಮುಖ್ಯತೆ ಬಗ್ಗೆ ಅವರು ಒತ್ತಿ ಹೇಳಿದರು.

73. ವಿಶೇಷವಾಗಿ ಐಸಿಸ್ ಸೇರಿದಂತೆ ಅಂತಾರಾಷ್ಟ್ರೀಯ ಭಯೋತ್ಪಾದಕ ಗುಂಪುಗಳು ಮತ್ತು ಇತರ ಗುಂಪುಗಳ ವಿರುದ್ಧ ಭಯೋತ್ಪಾದನಾ ನಿಗ್ರಹ ಕ್ರಮಗಳನ್ನು ನಾಯಕರು ಸ್ವಾಗತಿಸಿದರು. ಅಫ್ಘಾನಿಸ್ತಾನದಲ್ಲಿ ಭಯೋತ್ಪಾದನೆಯ ವಿರುದ್ಧದ ಹೋರಾಟವು ಸಮಗ್ರ ಮತ್ತು ಪರಿಣಾಮಕಾರಿಯಾಗಿರುತ್ತದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು. ಯಾವುದೇ ರಾಜಕೀಯ ಬೇಡಿಕೆಗಳಿಲ್ಲದೆ ಅಫ್ಘಾನ್ ಜನರಿಗೆ ತುರ್ತು ಮತ್ತು ತಡೆರಹಿತ ಮಾನವೀಯ ಸಹಾಯವನ್ನು ಖಚಿತಪಡಿಸಿಕೊಳ್ಳುವ ಅಗತ್ಯವನ್ನು ಅವರು ಒತ್ತಿ ಹೇಳಿದರು.

74. ಎರಡೂ ರಾಷ್ಟ್ರಗಳ ನಡುವಿನ ಮಾತುಕತೆ ಸೇರಿದಂತೆ ಸಂಧಾನ ಮತ್ತು ರಾಜತಾಂತ್ರಿಕತೆಯ ಮೂಲಕ ಉಕ್ರೇನ್ ಸುತ್ತಲಿನ ಸಂಘರ್ಷವನ್ನು ಶಾಂತಿಯುತವಾಗಿ ಪರಿಹರಿಸುವ ಅನಿವಾರ್ಯತೆಯನ್ನು ಎರಡೂ ಕಡೆಯವರು ಎತ್ತಿ ತೋರಿದರು. ಅಂತಾರಾಷ್ಟ್ರೀಯ ಕಾನೂನಿಗೆ ಅನುಗುಣವಾಗಿ ಮತ್ತು ವಿಶ್ವಸಂಸ್ಥೆಯ ಸಂವಿಧಾನದ ಆಧಾರದ ಮೇಲೆ ಸಂಘರ್ಷವನ್ನು ಶಾಂತಿಯುತವಾಗಿ ಪರಿಹರಿಸುವ ಗುರಿಯನ್ನು ಹೊಂದಿರುವ ಮಧ್ಯಸ್ಥಿಕೆ ಮತ್ತು ಪ್ರಸ್ತಾಪಗಳನ್ನು ಅವರು ಉಲ್ಲೇಖಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

75. ಗಾಝಾ ಮೇಲೆ ನಿರ್ದಿಷ್ಟವಾಗಿ ಗಮನ ಹರಿಸುವ ಮೂಲಕ ಮಧ್ಯಪ್ರಾಚ್ಯದಲ್ಲಿನ ಪರಿಸ್ಥಿತಿಯ ಬಗ್ಗೆ ಎರಡೂ ಕಡೆಯವರು ತೀವ್ರ ಕಳವಳ ವ್ಯಕ್ತಪಡಿಸಿದರು. ಈ ನಿಟ್ಟಿನಲ್ಲಿ, ಸಂಬಂಧಿತ ʻಯುಎನ್‌ಜಿಎʼ ನಿರ್ಣಯಗಳು ಮತ್ತು ʻಯುಎನ್ಎಸ್ಸಿ ನಿರ್ಣಯ 2720ʼ ಅನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಉಭಯ ನಾಯಕರು ಕರೆ ನೀಡಿದರು. ಆ ಮೂಲಕ ಗಾಝಾ ಪಟ್ಟಿಯಾದ್ಯಂತ ಪ್ಯಾಲೆಸ್ತೀನ್‌ ನಾಗರಿಕರಿಗೆ ತಕ್ಷಣ ನೇರವಾಗಿ ಮಾನವೀಯ ಸಹಾಯವನ್ನು ಸುರಕ್ಷಿತ ಮತ್ತು ಅಡೆತಡೆ ಇಲ್ಲದೆ ತಲುಪಿಸಲು ಅವರು ಕರೆ ನೀಡಿದರು. ಶಾಶ್ವತ ಕದನ ವಿರಾಮಕ್ಕಾಗಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯ 2728 ಅನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಅವರು ಕರೆ ನೀಡಿದರು. ಎಲ್ಲಾ ಒತ್ತೆಯಾಳುಗಳನ್ನು ತಕ್ಷಣ ಮತ್ತು ಬೇಷರತ್ತಾಗಿ ಬಿಡುಗಡೆ ಮಾಡಲು ಹಾಗೂ ಅವರ ವೈದ್ಯಕೀಯ ಮತ್ತು ಇತರ ಮಾನವೀಯ ಅಗತ್ಯಗಳನ್ನು ಪೂರೈಸಲು ಮಾನವೀಯ ಪ್ರವೇಶಕ್ಕೆ ಅವರು ಕರೆ ನೀಡಿದರು. ಅವರು ವಿಶ್ವಸಂಸ್ಥೆಯಲ್ಲಿ ಪ್ಯಾಲೆಸ್ತೀನ್‌ನ ಪೂರ್ಣ ಸದಸ್ಯತ್ವಕ್ಕೆ ತಮ್ಮ ಬೆಂಬಲವನ್ನು ಪುನರುಚ್ಚರಿಸಿದರು ಜೊತೆಗೆ, ಅಂತಾರಾಷ್ಟ್ರೀಯವಾಗಿ ಅಂಗೀಕರಿಸಲಾದ ದ್ವಿ-ರಾಷ್ಟ್ರ ಪರಿಹಾರದ ತತ್ವಕ್ಕೆ ತಮ್ಮ ಅಚಲ ಬದ್ಧತೆಯನ್ನು ಉಭಯ ನಾಯಕರು ಪುನರುಚ್ಚರಿಸಿದರು.

76. ಸಮಾನ ಮತ್ತು ಅವಿಭಾಜ್ಯ ಪ್ರಾದೇಶಿಕ ಭದ್ರತೆಯ ವ್ಯವಸ್ಥೆಯನ್ನು ನಿರ್ಮಿಸುವ ನಿಟ್ಟಿನಲ್ಲಿ ಜಂಟಿ ಪ್ರಯತ್ನಗಳನ್ನು ಬಲಪಡಿಸಲು; ಗ್ರೇಟರ್ ಯುರೇಷಿಯನ್ ಪ್ರದೇಶ ಹಾಗೂ ಹಿಂದೂ-ಪೆಸಿಫಿಕ್ ಸಾಗರಗಳ ಪ್ರದೇಶಗಳಲ್ಲಿ ಏಕೀಕರಣ ಮತ್ತು ಅಭಿವೃದ್ಧಿ ಉಪಕ್ರಮಗಳ ಬಗ್ಗೆ ಸಮಾಲೋಚನೆಗಳನ್ನು ತೀವ್ರಗೊಳಿಸಲು ಎರಡೂ ಕಡೆಯವರು ಸಹಮತ ವ್ಯಕ್ತಪಡಿಸಿದರು.

77. ʻಪೂರ್ವ ಏಷ್ಯಾ ಶೃಂಗಸಭೆʼ, ʻಭದ್ರತೆ ಕುರಿತ ಆಸಿಯಾನ್ ಪ್ರಾದೇಶಿಕ ವೇದಿಕೆʼ(ಎಆರ್‌ಎಫ್), ʻಆಸಿಯಾನ್ ರಕ್ಷಣಾ ಸಚಿವರ ಸಭೆ ಪ್ಲಸ್ʼ(ಎಡಿಎಂಎಂ-ಪ್ಲಸ್) ಸೇರಿದಂತೆ ಪ್ರಾದೇಶಿಕ ಶಾಂತಿ ಮತ್ತು ಭದ್ರತೆಯನ್ನು ಆಳಗೊಳಿಸುವ ಗುರಿಯನ್ನು ಹೊಂದಿರುವ ವಿವಿಧ ಪ್ರಾದೇಶಿಕ ವೇದಿಕೆಗಳಲ್ಲಿ ಸಹಕಾರವನ್ನು ಬಲಪಡಿಸುವ ಮಹತ್ವವನ್ನು ಎರಡೂ ಕಡೆಯವರು ಒತ್ತಿ ಹೇಳಿದರು.

78. ಹವಾಮಾನ ಬದಲಾವಣೆಯನ್ನು ಎದುರಿಸುವ ನಿಟ್ಟಿನಲ್ಲಿ ಪ್ರಯತ್ನಗಳನ್ನು ವಿಸ್ತರಿಸುವ ಮತ್ತು ʻಹವಾಮಾನ ಬದಲಾವಣೆ ಕುರಿತ ವಿಶ್ವಸಂಸ್ಥೆಯ ನೀತಿ ಸಮಾವೇಶʼ (ಯುಎನ್ಎಫ್‌ಸಿಸಿಸಿ) ಹಾಗೂ ʻಪ್ಯಾರಿಸ್ ಒಪ್ಪಂದʼದ ಗುರಿಗಳನ್ನು ಸಾಧಿಸುವ ಮಹತ್ವವನ್ನು ಎರಡೂ ಕಡೆಯವರು ಗಮನಿಸಿದರು. ಈ ನಿಟ್ಟಿನಲ್ಲಿ, ಹವಾಮಾನ ಬದಲಾವಣೆಯನ್ನು ತಡೆಗಟ್ಟುವ ಮತ್ತು ಅದಕ್ಕೆ ಹೊಂದಿಕೊಳ್ಳುವ ಕ್ಷೇತ್ರದಲ್ಲಿ ಸಹಕಾರವನ್ನು ಅಭಿವೃದ್ಧಿಪಡಿಸಲು ಎರಡೂ ಕಡೆಯವರು ಒಪ್ಪಿಕೊಂಡರು. ಹಸಿರುಮನೆ ಅನಿಲ ಹೊರಸೂಸುವಿಕೆ ಕೋಟಾ ವ್ಯವಸ್ಥೆಗಳ ಸಂಘಟನೆ ಮತ್ತು ಕಾರ್ಯಾಚರಣೆಯ ಬಗ್ಗೆ ಅನುಭವದ ವಿನಿಮಯ, ಕಡಿಮೆ ಇಂಗಾಲದ ಅಭಿವೃದ್ಧಿ ಕ್ಷೇತ್ರದಲ್ಲಿ ರಷ್ಯಾ-ಭಾರತ ಜಂಟಿ ಹೂಡಿಕೆ ಯೋಜನೆಗಳ ಅನುಷ್ಠಾನ ಹಾಗೂ ಸುಸ್ಥಿರ ಮತ್ತು "ಹಸಿರು" ಹಣಕಾಸು ಇವುಗಳಲ್ಲಿ ಸೇರಿವೆ.

79. ಸುಸ್ಥಿರತೆಯನ್ನು ಹೆಚ್ಚಿಸುವುದು ಮತ್ತು ಅಂತಾರಾಷ್ಟ್ರೀಯ ಪೂರೈಕೆ ಸರಪಳಿಗನ್ನು ಸದೃಢಗೊಳಿಸಲು, ಮುಕ್ತ ಮತ್ತು ನ್ಯಾಯಯುತ ವ್ಯಾಪಾರ ನಿಯಮಗಳ ಅನುಸರಣೆ ಮತ್ತು ಹವಾಮಾನ ಬದಲಾವಣೆಯಂತಹ ಪ್ರಮುಖ ವಿಷಯಗಳ ಬಗ್ಗೆ ಜಿ20, ಬ್ರಿಕ್ಸ್, ʻಎಸ್‌ಸಿಒʼ ವ್ಯಾಪ್ತಿಯೊಳಗೆ ಸಂವಾದವನ್ನು ಮುಂದುವರಿಸಲು ಎರಡೂ ಕಡೆಯವರು ಒಪ್ಪಿದರು. 2024ರಲ್ಲಿ ರಷ್ಯಾದ ʻಬ್ರಿಕ್ಸ್ʼ ಅಧ್ಯಕ್ಷತೆಯಲ್ಲಿ ʻಪರಿಸರ ಕಾರ್ಯಪಡೆʼಯ ಚೌಕಟ್ಟಿನೊಳಗೆ ʻಹವಾಮಾನ ಬದಲಾವಣೆ ಮತ್ತು ಸುಸ್ಥಿರ ಅಭಿವೃದ್ಧಿ ಕುರಿತ ಬ್ರಿಕ್ಸ್ ಸಂಪರ್ಕ ಪಡೆʼಯ ಆರಂಭವನ್ನು ಉಭಯ ನಾಯಕರು ಸ್ವಾಗತಿಸಿದರು.

80. ಭಾರತ-ರಷ್ಯಾ ನಡುವೆ ವಿಶಿಷ್ಟ ಮತ್ತು ವಿಶೇಷ ವ್ಯೂಹಾತ್ಮಕ ಪಾಲುದಾರಿಕೆಯ ಸದೃಢತೆ ಮತ್ತು ತಮ್ಮ ವಿದೇಶಾಂಗ ನೀತಿಯ ಆದ್ಯತೆಗಳ ಏಕೀಕೃತ ಮತ್ತು ಪೂರಕ ವಿಧಾನಗಳ ಬಗ್ಗೆ ಎರಡೂ ಕಡೆಯವರು ತೃಪ್ತಿ ವ್ಯಕ್ತಪಡಿಸಿದರು. ಅದನ್ನು ಮತ್ತಷ್ಟು ಬಲಪಡಿಸುವ ಬದ್ಧತೆಯನ್ನು ಪುನರುಚ್ಚರಿಸಿದರು. ಭಾರತ ಮತ್ತು ರಷ್ಯಾ ಪ್ರಮುಖ ಶಕ್ತಿಗಳಾಗಿ ಬಹುಧ್ರುವೀಯ ಜಗತ್ತಿನಲ್ಲಿ ಜಾಗತಿಕ ಶಾಂತಿ ಮತ್ತು ಸ್ಥಿರತೆಗಾಗಿ ಶ್ರಮಿಸುವುದನ್ನು ಮುಂದುವರಿಸುತ್ತವೆ ಎಂದು ಅವರು ಒತ್ತಿ ಹೇಳಿದರು.

81. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ತಮಗೆ ಮತ್ತು ತಮ್ಮ ನಿಯೋಗಕ್ಕೆ ಮಾಸ್ಕೋದಲ್ಲಿ ನೀಡಿದ ಆತ್ಮೀಯ ಆತಿಥ್ಯಕ್ಕಾಗಿ ಘನತೆವೆತ್ತ ಅಧ್ಯಕ್ಷರಾದ ಶ್ರೀ ವ್ಲಾಡಿಮಿರ್‌ ಪುಟಿನ್ ಅವರಿಗೆ ಧನ್ಯವಾದ ಅರ್ಪಿಸಿದರು ಮತ್ತು 23ನೇ ಭಾರತ-ರಷ್ಯಾ ವಾರ್ಷಿಕ ಶೃಂಗಸಭೆಗಾಗಿ 2025ರಲ್ಲಿ ಭಾರತಕ್ಕೆ ಭೇಟಿ ನೀಡುವಂತೆ ಆಹ್ವಾನಿಸಿದರು.

 

*****



(Release ID: 2032283) Visitor Counter : 19