ಪ್ರಧಾನ ಮಂತ್ರಿಯವರ ಕಛೇರಿ

ಆಸ್ಟ್ರಿಯಾದ ಚಾನ್ಸೆಲರ್ ಜೊತೆಗಿನ ಜಂಟಿ ಮಾಧ್ಯಮಗೋಷ್ಠಿಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಮಾಧ್ಯಮ ಹೇಳಿಕೆಯ ಇಂಗ್ಲೀಷ್ ಅನುವಾದ

Posted On: 10 JUL 2024 5:27PM by PIB Bengaluru

ಘನತೆವೆತ್ತ ಚಾನ್ಸೆಲರ್‌ ಕಾರ್ಲ್ ನೆಹಮ್ಮರ್ ಅವರೇ,

ಎರಡೂ ದೇಶಗಳ ಪ್ರತಿನಿಧಿಗಳೇ, ಮಾಧ್ಯಮದ ಮಿತ್ರರೇ,

ಶುಭಾಶಯಗಳು.

ಮೊದಲನೆಯದಾಗಿ, ಆತ್ಮೀಯ ಸ್ವಾಗತ ಮತ್ತು ಆತಿಥ್ಯಕ್ಕಾಗಿ ಚಾನ್ಸೆಲರ್ ನೆಹಮ್ಮರ್ ಅವರಿಗೆ ನನ್ನ ಕೃತಜ್ಞತೆಗಳು. ನನ್ನ ಮೂರನೇ ಅವಧಿಯ ಪ್ರಾರಂಭದಲ್ಲಿಯೇ ಆಸ್ಟ್ರಿಯಾಕ್ಕೆ ಭೇಟಿ ನೀಡುವ ಅವಕಾಶ ಸಿಕ್ಕಿದ್ದು ನನಗೆ ಸಂತಸ ತಂದಿದೆ. ನನ್ನ ಈ ಭೇಟಿ ಐತಿಹಾಸಿಕವೂ ವಿಶೇಷವೂ ಆಗಿದೆ. ನಲವತ್ತೊಂದು ವರ್ಷಗಳ ನಂತರ ಭಾರತದ ಪ್ರಧಾನಿಯೊಬ್ಬರು ಆಸ್ಟ್ರಿಯಾಕ್ಕೆ ಭೇಟಿ ನೀಡಿದ್ದಾರೆ. ನಮ್ಮ ದ್ವಿಪಕ್ಷೀಯ ಸಂಬಂಧಗಳು 75 ವರ್ಷಗಳನ್ನು ಪೂರೈಸಿರುವ ಸಂದರ್ಭದಲ್ಲಿ ಈ ಭೇಟಿ ನಡೆಯುತ್ತಿರುವುದು ಸಹ ಸಂತಸದ ಕಾಕತಾಳೀಯವಾಗಿದೆ.

ಸ್ನೇಹಿತರೇ,

ಪ್ರಜಾಪ್ರಭುತ್ವ ಮತ್ತು ಕಾನೂನಿನ ಆಡಳಿತದಂತಹ ಮೌಲ್ಯಗಳಲ್ಲಿ ನಮಗಿರುವ ಹಂಚಿಕೆಯ ವಿಶ್ವಾಸವು ನಮ್ಮ ಸಂಬಂಧಕ್ಕೆ ಬಲವಾದ ಅಡಿಪಾಯವಾಗಿದೆ. ಪರಸ್ಪರ ನಂಬಿಕೆ ಮತ್ತು ಹಂಚಿಕೆಯ ಆಸಕ್ತಿಗಳು ನಮ್ಮ ಸಂಬಂಧಗಳನ್ನು ಬಲಪಡಿಸುತ್ತವೆ. ಇಂದು, ಚಾನ್ಸೆಲರ್ ನೆಹಮ್ಮರ್ ಮತ್ತು ನಾನು ಬಹಳ ಅರ್ಥಪೂರ್ಣ ಚರ್ಚೆ ನಡೆಸಿದೆವು. ನಮ್ಮ ಸಹಕಾರವನ್ನು ಮತ್ತಷ್ಟು ಬಲಪಡಿಸಲು ನಾವು ಹೊಸ ಅವಕಾಶಗಳನ್ನು ಗುರುತಿಸಿದ್ದೇವೆ. ನಮ್ಮ ಸಂಬಂಧಕ್ಕೆ ಕಾರ್ಯತಂತ್ರದ ದಿಕ್ಕು ನೀಡಲು ನಾವು ನಿರ್ಧರಿಸಿದ್ದೇವೆ. ಮುಂಬರುವ ದಶಕಗಳಲ್ಲಿ ಸಹಕಾರಕ್ಕಾಗಿ ನೀಲನಕ್ಷೆಯನ್ನು ಸಿದ್ಧಪಡಿಸಲಾಗಿದೆ. ಇದು ಕೇವಲ ಆರ್ಥಿಕ ಸಹಕಾರ ಮತ್ತು ಹೂಡಿಕೆಗೆ ಸೀಮಿತವಾಗಿಲ್ಲ. ಮೂಲಸೌಕರ್ಯ ಅಭಿವೃದ್ಧಿ, ನಾವೀನ್ಯತೆ, ನವೀಕರಿಸಬಹುದಾದ ಇಂಧನ, ಹೈಡ್ರೋಜನ್, ನೀರು ಮತ್ತು ತ್ಯಾಜ್ಯ ನಿರ್ವಹಣೆ, ಕೃತಕ ಬುದ್ಧಿಮತ್ತೆ ಮತ್ತು ಕ್ವಾಂಟಮ್ ತಂತ್ರಜ್ಞಾನದಂತಹ ಕ್ಷೇತ್ರಗಳಲ್ಲಿ ನಮ್ಮ ಸಾಮರ್ಥ್ಯವನ್ನು ಸಂಯೋಜಿಸಲು ನಾವು ಕೆಲಸ ಮಾಡುತ್ತೇವೆ. ಎರಡೂ ದೇಶಗಳ ಯುವಜನರು ಮತ್ತು ಆಲೋಚನೆಗಳನ್ನು ಸಂಪರ್ಕಿಸಲು, ಸ್ಟಾರ್ಟ್ ಅಪ್ ಬಂಧವನ್ನು ವೇಗಗೊಳಿಸಲಾಗುತ್ತದೆ. ಚಲನಶೀಲತೆ ಮತ್ತು ವಲಸೆ ಪಾಲುದಾರಿಕೆಯ ಒಪ್ಪಂದವನ್ನು ಈಗಾಗಲೇ ಮಾಡಿಕೊಳ್ಳಲಾಗಿದೆ. ಇದು ಕಾನೂನು ವಲಸೆ ಮತ್ತು ಕುಶಲ ಉದ್ಯೋಗಿಗಳ ಚಲನೆಯನ್ನು ಸುಗಮಗೊಳಿಸುತ್ತದೆ. ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಸಂಸ್ಥೆಗಳ ನಡುವಿನ ವಿನಿಮಯವನ್ನು ಉತ್ತೇಜಿಸಲಾಗುವುದು.

ಸ್ನೇಹಿತರೇ,

ನಾವು ನಿಂತಿರುವ ಈ ಸಭಾಂಗಣವು ಅತ್ಯಂತ ಐತಿಹಾಸಿಕವಾದುದು. 19 ನೇ ಶತಮಾನದಲ್ಲಿ, ಐತಿಹಾಸಿಕ ವಿಯೆನ್ನಾ ಕಾಂಗ್ರೆಸ್ ಅನ್ನು ಇಲ್ಲಿ ಆಯೋಜಿಸಲಾಗಿತ್ತು. ಆ ಸಮ್ಮೇಳನವು ಯುರೋಪಿನಲ್ಲಿ ಶಾಂತಿ ಮತ್ತು ಸ್ಥಿರತೆಗೆ ದಿಕ್ಕನ್ನು ತೋರಿತು. ಚಾನ್ಸೆಲರ್ ನೆಹಮ್ಮರ್ ಮತ್ತು ನಾನು ಉಕ್ರೇನ್‌ ನಲ್ಲಿನ ಸಂಘರ್ಷ ಅಥವಾ ಪಶ್ಚಿಮ ಏಷ್ಯಾದ ಪರಿಸ್ಥಿತಿಯಂತಹ ಪ್ರಪಂಚದಾದ್ಯಂತ ಸಂಘರ್ಷಗಳ ಬಗ್ಗೆ ವಿವರವಾಗಿ ಚರ್ಚಿಸಿದ್ದೇವೆ. ಇದು ಯುದ್ಧದ ಸಮಯವಲ್ಲ ಎಂದು ನಾನು ಮೊದಲೇ ಹೇಳಿದ್ದೇನೆ. ಯುದ್ಧಭೂಮಿಯಲ್ಲಿ ಸಮಸ್ಯೆಗಳನ್ನು ಪರಿಹರಿಸಲಾಗುವುದಿಲ್ಲ. ಎಲ್ಲಿಯಾದರೂ ಅಮಾಯಕರ ಜೀವಹಾನಿಯನ್ನು ಒಪ್ಪಲಾಗದು. ಭಾರತ ಮತ್ತು ಆಸ್ಟ್ರಿಯಾ ಶಾಂತಿ ಮತ್ತು ಸ್ಥಿರತೆಯ ಮರುಸ್ಥಾಪನೆಗಾಗಿ ಮಾತುಕತೆ ಮತ್ತು ರಾಜತಾಂತ್ರಿಕತೆಗೆ ಒತ್ತು ನೀಡುತ್ತವೆ. ಇದನ್ನು ಸಾಧಿಸಲು ಸಾಧ್ಯವಿರುವ ಎಲ್ಲ ಸಹಕಾರವನ್ನು ನೀಡಲು ನಾವಿಬ್ಬರೂ ಸಿದ್ಧರಿದ್ದೇವೆ.

ಮಿತ್ರರೇ,

ಇಂದು, ಮನುಕುಲವು ಎದುರಿಸುತ್ತಿರುವ ಹವಾಮಾನ ಬದಲಾವಣೆ ಮತ್ತು ಭಯೋತ್ಪಾದನೆಯಂತಹ ಸವಾಲುಗಳ ಕುರಿತು ನಾವು ನಮ್ಮ ಆಲೋಚನೆಗಳನ್ನು ಹಂಚಿಕೊಂಡಿದ್ದೇವೆ. ಹವಾಮಾನಕ್ಕೆ ಸಂಬಂಧಿಸಿದಂತೆ, ಅಂತಾರಾಷ್ಟ್ರೀಯ ಸೌರ ಒಕ್ಕೂಟ, ವಿಪತ್ತು ಸ್ಥಿತಿಸ್ಥಾಪಕ ಮೂಲಸೌಕರ್ಯ ಒಕ್ಕೂಟ ಮತ್ತು ಜೈವಿಕ ಇಂಧನ ಒಕ್ಕೂಟದಂತಹ ನಮ್ಮ ಉಪಕ್ರಮಗಳಿಗೆ ಸೇರಲು ನಾವು ಆಸ್ಟ್ರಿಯಾವನ್ನು ಆಹ್ವಾನಿಸುತ್ತೇವೆ. ನಾವಿಬ್ಬರೂ ಭಯೋತ್ಪಾದನೆಯನ್ನು ಬಲವಾಗಿ ಖಂಡಿಸುತ್ತೇವೆ. ಇದು ಯಾವುದೇ ರೂಪದಲ್ಲೂ ಸ್ವೀಕಾರಾರ್ಹವಲ್ಲ ಮತ್ತು ಅದನ್ನು ಯಾವುದೇ ರೀತಿಯಲ್ಲೂ ಸಮರ್ಥಿಸಲಾಗುವುದಿಲ್ಲ ಎಂದು ನಾವು ಒಪ್ಪುತ್ತೇವೆ. ವಿಶ್ವಸಂಸ್ಥೆ ಮತ್ತು ಇತರ ಅಂತಾರಾಷ್ಟ್ರೀಯ ಸಂಸ್ಥೆಗಳಲ್ಲಿ ಸುಧಾರಣೆಗಳು ಹೆಚ್ಚು ಸಮಕಾಲೀನ ಮತ್ತು ಪರಿಣಾಮಕಾರಿಯಾಗುವಂತೆ ಮಾಡುವ ಅಗತ್ಯವನ್ನು ನಾವು ಮನಗಂಡಿದ್ದೇವೆ.

ಸ್ನೇಹಿತರೇ,

ಮುಂಬರುವ ತಿಂಗಳುಗಳಲ್ಲಿ ಆಸ್ಟ್ರಿಯಾದಲ್ಲಿ ಚುನಾವಣೆ ನಡೆಯಲಿದೆ. ಪ್ರಜಾಪ್ರಭುತ್ವದ ತಾಯಿ ಮತ್ತು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವಾದ ಭಾರತದ ಜನರ ಪರವಾಗಿ, ನಾನು ಚಾನ್ಸೆಲರ್ ನೆಹಮ್ಮರ್ ಮತ್ತು ಆಸ್ಟ್ರಿಯಾದ ಜನರಿಗೆ ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ. ಇನ್ನು ಕೆಲವೇ ಸಮಯದಲ್ಲಿ, ನಾವು ಎರಡೂ ದೇಶಗಳ ಸಿಇಒಗಳನ್ನು ಭೇಟಿ ಮಾಡುತ್ತೇವೆ. ಆಸ್ಟ್ರಿಯಾದ ಗೌರವಾನ್ವಿತ ಅಧ್ಯಕ್ಷರನ್ನು ಭೇಟಿಯಾಗುವ ಗೌರವವೂ ನನಗೆ ಸಿಗುತ್ತದೆ. ಮತ್ತೊಮ್ಮೆ, ನಾನು ಚಾನ್ಸೆಲರ್ ನೆಹಮ್ಮರ್ ಅವರ ಸ್ನೇಹಕ್ಕಾಗಿ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ ಮತ್ತು ಭಾರತಕ್ಕೆ ಭೇಟಿ ನೀಡುವಂತೆ ಅವರನ್ನು ಆಹ್ವಾನಿಸುತ್ತೇನೆ. ತುಂಬು ಧನ್ಯವಾದಗಳು.

ಸೂಚನೆ - ಇದು ಪ್ರಧಾನಿಯವರ ಹೇಳಿಕೆಯ ಅಂದಾಜು ಅನುವಾದವಾಗಿದೆ. ಮೂಲ ಹೇಳಿಕೆಯನ್ನು ಹಿಂದಿಯಲ್ಲಿ ನೀಡಲಾಗಿದೆ.

 

*****



(Release ID: 2032271) Visitor Counter : 15