ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
ಕೋವಿಡ್-19 ಲಾಕ್‌ಡೌನ್‌ನಿಂದ ತೊಂದರೆಗೊಳಗಾದ ಗ್ರಾಹಕರಿಗೆ ಬುಕಿಂಗ್ ಮೊತ್ತವನ್ನು ಮರುಪಾವತಿಸುವಂತೆ ಆನ್‌ಲೈನ್ ಟ್ರಾವೆಲ್ ವೇದಿಕೆ 'ಯಾತ್ರಾ'ಗೆ ನಿರ್ದೇಶನ ನೀಡಿದ ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ
ʻಯಾತ್ರಾʼ ಸುಮಾರು 23 ಕೋಟಿ ರೂ.ಗಳನ್ನು ಗ್ರಾಹಕರಿಗೆ ಮರುಪಾವತಿ ಮಾಡಿದ್ದು, ಇನ್ನೂ 2.5 ಕೋಟಿ ರೂ. ಮರುಪಾವತಿ ಬಾಕಿ ಇದೆ
ಗ್ರಾಹಕರ ಕುಂದುಕೊರತೆಗಳ ಸುಗಮ ಪರಿಹಾರಕ್ಕಾಗಿ, ಏಜೆನ್ಸಿಯ ಮೂಲಕ ಐದು ವೃತ್ತಿಪರರನ್ನು ನೇಮಿಸಿದ ʻರಾಷ್ಟ್ರೀಯ ಗ್ರಾಹಕ ಸಹಾಯವಾಣಿʼ
Posted On:
09 JUL 2024 12:04PM by PIB Bengaluru
ಕೋವಿಡ್-19 ಲಾಕ್‌ಡೌನ್ ಕಾರಣದಿಂದಾಗಿ ರದ್ದಾದ ವಿಮಾನಗಳ ಟಿಕೆಟ್‌ಗಳ ಹಣವನ್ನು ಮರುಪಾವತಿಸದಿರುವ ಬಗ್ಗೆ ಅನೇಕ ಕುಂದುಕೊರತೆಗಳನ್ನು ಸಲ್ಲಿಸಿರುವುದು ʻರಾಷ್ಟ್ರೀಯ ಗ್ರಾಹಕ ಸಹಾಯವಾಣಿʼ(1915-ಟೋಲ್ ಫ್ರೀ ಸಂಖ್ಯೆ) ಮೂಲಕ ʻಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರʼದ (ಸಿಸಿಪಿಎ) ಗಮನಕ್ಕೆ ಬಂದಿದೆ. ವಿಮಾನಯಾನ ಸಂಸ್ಥೆಗಳಿಂದ ಮರುಪಾವತಿ ಹಣವು ಇನ್ನೂ ಬಂದಿಲ್ಲ ಎಂದು ಟ್ರಾವೆಲ್ ಏಜೆನ್ಸಿಗಳು ಮಾಹಿತಿ ನೀಡಿರುವುದಾಗಿ ಪ್ರಯಾಣಿಕರು ದೂರಿದ್ದಾರೆ.
ದಿನಾಂಕ 01.10.2020ರ ʻಪ್ರವಾಸಿ ಲೀಗಲ್ ಸೆಲ್ʼ ಮತ್ತು ಯೂನಿಯನ್ ಆಫ್ ಇಂಡಿಯಾ(ಡಬ್ಲ್ಯೂಪಿ(ಸಿ) ಡಿ.ನಂ.10966 ಆಫ್ 2020) ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಹೀಗೆ ನಿರ್ದೇಶನ ನೀಡಿದೆ:
"ಲಾಕ್‌ಡೌನ್ ಅವಧಿಯಲ್ಲಿ ಪ್ರಯಾಣಕ್ಕಾಗಿ ಟ್ರಾವೆಲ್ ಏಜೆಂಟ್ ಮೂಲಕ ಟಿಕೆಟ್‌ಗಳನ್ನು ಕಾಯ್ದಿರಿಸಿದ್ದರೆ, ಅಂತಹ ಸಂದರ್ಭಗಳಲ್ಲಿ ವಿಮಾನಯಾನ ಸಂಸ್ಥೆಗಳು ತಕ್ಷಣವೇ ಸಂಪೂರ್ಣ ಟಿಕೆಟ್ ಹಣವನ್ನು ಮರುಪಾವತಿ ಮಾಡಬೇಕು. ಅಂತಹ ಮರುಪಾವತಿಯ ನಂತರ, ಆ ಮೊತ್ತವನ್ನು ಏಜೆಂಟ್ ತಕ್ಷಣವೇ ಪ್ರಯಾಣಿಕರಿಗೆ ವರ್ಗಾಯಿಸಬೇಕು."
ಈ ಹಿನ್ನೆಲೆಯಲ್ಲಿ, ಕೋವಿಡ್-19 ಲಾಕ್‌ಡೌನ್‌ನಿಂದಾಗಿ ರದ್ದಾದ ವಿಮಾನಯಾನ ಟಿಕೆಟ್‌ಗಳನ್ನು ಮರುಪಾವತಿಸದಿರುವ ಬಗ್ಗೆ ʻಯಾತ್ರಾʼ ವಿರುದ್ಧ ಸ್ವಯಂಪ್ರೇರಿತ ಕ್ರಮವನ್ನು ʻಸಿಸಿಪಿಎʼ ಪ್ರಾರಂಭಿಸಿತು.
ಕೋವಿಡ್-19 ಲಾಕ್‌ಡೌನ್‌ನಿಂದ ಬಾಧಿತವಾದ ಬುಕಿಂಗ್‌ಗಳ ಮರುಪಾವತಿ ಬಾಕಿ ಇರುವ ಬಗ್ಗೆ 09.03.2021ರಂದು ಈ ಟ್ರಾವೆಲ್ ಕಂಪನಿಗೆ ಶೋಕಾಸ್ ನೋಟಿಸ್ ಕಳುಹಿಸಲಾಗಿದೆ. ಇದರ ಬಳಿಕ ಕಂಪನಿಯನ್ನು ಹಲವಾರು ಬಾರಿ ವಿಚಾರಣೆಗೆ ಒಳಪಡಿಸಿದ ʻಸಿಸಿಪಿಎʼ, ಗ್ರಾಹಕರಿಗೆ ಟಿಕೆಟ್ ಹಣ ಮರುಪಾವತಿ ಪ್ರಕ್ರಿಯೆಯ ಪ್ರಗತಿಯನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡಿತು.
ಜುಲೈ 8, 2021ರಿಂದ ಜೂನ್ 25, 2024ರವರೆಗೆ, ಈ ಸಮಸ್ಯೆಗಳನ್ನು ಪರಿಹರಿಸಲು ʻಸಿಸಿಪಿಎʼ ಹಲವಾರು ವಿಚಾರಣೆಗಳನ್ನು ನಡೆಸಿತು. ಈ ಪ್ರಯತ್ನಗಳ ಪರಿಣಾಮವಾಗಿ, ʻಯಾತ್ರಾ ಆನ್ಲೈನ್ ಲಿಮಿಟೆಡ್ʼನಿಂದ ಬಾಕಿ ಇರುವ ಬುಕಿಂಗ್ ಮರುಪಾವತಿಗಳ ಒಟ್ಟು ಸಂಖ್ಯೆ ಗಮನಾರ್ಹವಾಗಿ ಕಡಿಮೆಯಾಗಿದೆ. 2021ರಲ್ಲಿ, 26,25,82,484 ರೂ. ಮೌಲ್ಯದ 36,276 ಬುಕಿಂಗ್‌ಗಳು ಬಾಕಿ ಉಳಿದಿದ್ದವು. ಜೂನ್ 21,2024ರ ಹೊತ್ತಿಗೆ, ಈ ಸಂಖ್ಯೆಯನ್ನು ಗಮನಾರ್ಹವಾಗಿ 4,837 ಬುಕಿಂಗ್‌ಗಳಿಗೆ ಇಳಿಸಲಾಗಿದ್ದು, ಮರು ಪಾವತಿ ಬಾಕಿ ಮೊತ್ತವೂ 2,52,87,098 ರೂ.ಗಳಿಗೆ ಇಳಿದಿದೆ. ʻಯಾತ್ರಾʼ ಸಂಸ್ಥೆಯು ಗ್ರಾಹಕರಿಗೆ ಸರಿಸುಮಾರು 87% ಮೊತ್ತವನ್ನು ಮರುಪಾವತಿ ಮಾಡಿದ್ದು, ಬಾಕಿ ಇರುವ ಸರಿಸುಮಾರು 13% ಮೊತ್ತವನ್ನು ಮರುಪಾವತಿಸಲು ಪ್ರಯತ್ನಿಸುತ್ತಿದೆ. ಎಲ್ಲಾ ಮರುಪಾವತಿಗಳನ್ನು ವಿಮಾನಯಾನ ಸಂಸ್ಥೆಗಳು ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ಪ್ರಕ್ರಿಯೆಗೊಳಿಸುತ್ತವೆ ಎಂದು ಖಚಿತಪಡಿಸಿಕೊಳ್ಳುತ್ತಿದೆ.
2021ರಲ್ಲಿ, ವಿಮಾನಯಾನ ಸಂಸ್ಥೆಗಳಿಗೆ ಸಂಬಂಧಿಸಿದ ಒಟ್ಟು 5,771 ಬುಕಿಂಗ್‌ಗಳ 9,60,14,463 ರೂ.ಗಳ ಮರುಪಾವತಿಗಾಗಿ ಬಾಕಿ ಉಳಿದಿತ್ತು. 2024ರ ವೇಳೆಗೆ ವಿಮಾನಯಾನ ಸಂಸ್ಥೆಗಳ ಮರುಪಾವತಿ ಬಾಕಿ ಇರುವ ಬುಕಿಂಗ್‌ಗಳ ಸಂಖ್ಯೆಯನ್ನು 98ಕ್ಕೆ ಮತ್ತು ಬಾಕಿ ಮೊತ್ತವನ್ನು 31,79,069 ರೂ.ಗಳಿಗೆ ʻಯಾತ್ರಾʼ ಇಳಿಸಿತು. ʻಸಿಸಿಪಿಎʼ, ತನ್ನ ದಿನಾಂಕ 27.06.2024ರ ಆದೇಶದ ಮೂಲಕ ಗ್ರಾಹಕರಿಗೆ 31,79,069 ರೂ.ಗಳನ್ನು ತ್ವರಿತವಾಗಿ ಮರುಪಾವತಿಸುವಂತೆ ʻಯಾತ್ರಾʼದ ಉಳಿದ 22 ವಿಮಾನಯಾನ ಸಂಸ್ಥೆಗಳಿಗೆ ನಿರ್ದೇಶಿಸಿದೆ.
ʻಸಿಸಿಪಿಎʼ ಮುಂದೆ ನಡೆದ ವಿಚಾರಣೆಯ ಸಮಯದಲ್ಲಿ ʻಮೇಕ್ ಮೈಟ್ರಿಪ್ʼ, ʻಈಸ್ ಮೈಟ್ರಿಪ್ʼ, ʻಕ್ಲಿಯರ್ ಟ್ರಿಪ್ʼ, ʻಇಕ್ಸಿಗೊʼ ಮತ್ತು ʻಥಾಮಸ್ ಕುಕ್ʼನಂತಹ ಹಲವಾರು ಟ್ರಾವೆಲ್ ವೇದಿಕೆಗಳು ಕೋವಿಡ್-19 ಲಾಕ್‌ಡೌನ್‌ನಿಂದಾಗಿ ರದ್ದಾದ ಪ್ರಯಾಣದ ಟಿಕೆಟ್‌ಗಳ ಸಂಪೂರ್ಣ ಮೊತ್ತವನ್ನು ಗ್ರಾಹಕರಿಗೆ ಮರುಪಾವತಿಸಿವೆ.
ಗ್ರಾಹಕರಿಗೆ ಸಮಯೋಚಿತ ಮರುಪಾವತಿ ಪ್ರಕ್ರಿಯೆಯನ್ನು ವೇಗಗೊಳಿಸಲು ಅನುಕೂಲವಾಗುವಂತೆ, ಸಿಸಿಪಿಎ 27.06.2024ರಂದು ಆದೇಶವನ್ನು ಹೊರಡಿಸಿದ್ದು, ʻರಾಷ್ಟ್ರೀಯ ಗ್ರಾಹಕ ಸಹಾಯವಾಣಿʼಯಲ್ಲಿ(ಎನ್‌ಸಿಎಚ್) ವಿಶೇಷ ವ್ಯವಸ್ಥೆಗಳನ್ನು ಮಾಡುವಂತೆ ʻಯಾತ್ರಾʼಗೆ ನಿರ್ದೇಶನ ನೀಡಿದೆ. ನಿರ್ದಿಷ್ಟವಾಗಿ, ಕೋವಿಡ್-19 ಲಾಕ್‌ಡೌನ್ ಸಂಬಂಧಿತ ವಿಮಾನ ರದ್ದತಿಯಿಂದಾಗಿ ಬಾಕಿ ಇರುವ ಮರುಪಾವತಿಯನ್ನು ಪ್ರಕ್ರಿಯೆಗೊಳಿಸುವ ಬಗ್ಗೆ ಉಳಿದ 4,837 ಪ್ರಯಾಣಿಕರಿಗೆ ಕರೆ ಮಾಡಿ ಮಾಹಿತಿ ನೀಡಲು ʻಎನ್‌ಸಿಎಚ್ʼನಲ್ಲಿ ಐದು ವಿಶೇಷ ಆಸನಗಳನ್ನು ʻಯಾತ್ರಾʼ ವ್ಯವಸ್ಥೆ ಮಾಡಬೇಕಿದೆ. ಈ ಐದು ವಿಶೇಷ ಸಿಬ್ಬಂದಿಯನ್ನು ತೊಡಗಿಸಿಕೊಳ್ಳಲು ತಗಲುವ ವೆಚ್ಚವನ್ನು ʻಎನ್‌ಸಿಎಚ್ʼ ನಿರ್ವಹಿಸುವ ಏಜೆನ್ಸಿಗೆ ನೇರವಾಗಿ ʻಯಾತ್ರಾʼ ಪಾವತಿಸುವ ಮೂಲಕ ಅದರ ಸಂಪೂರ್ಣವಾಗಿ ಭರಿಸುತ್ತದೆ.
ʻಸಿಸಿಪಿಎʼ ಆದೇಶವು ಸಮಯೋಚಿತ ಮರುಪಾವತಿಯ ಮಹತ್ವವನ್ನು ಬಲಪಡಿಸುತ್ತದೆ ಮತ್ತು ಬಾಕಿ ಇರುವ ಎಲ್ಲಾ ಬುಕಿಂಗ್‌ಗಳಿಗೆ ಸಂಪೂರ್ಣ ಮರುಪಾವತಿಯನ್ನು ಖಚಿತಪಡಿಸಿಕೊಳ್ಳಲು ಈ ನಿರ್ದೇಶನವನ್ನು ಅನುಸರಿಸಲು ʻಯಾತ್ರಾʼಗೆ ಸೂಚಿಸಲಾಗಿದೆ.
*****
(Release ID: 2031709)
Visitor Counter : 49