ಪ್ರಧಾನ ಮಂತ್ರಿಯವರ ಕಛೇರಿ
ʻಶಾಂಘೈ ಸಹಕಾರ ಒಕ್ಕೂಟʼದ (ಎಸ್‌ಸಿಒ) ರಾಷ್ಟ್ರಗಳ ಮುಖ್ಯಸ್ಥರ ಮಂಡಳಿಯ ಸಭೆಯಲ್ಲಿ ಪ್ರಧಾನಿ ಮೋದಿಯವರ ಹೇಳಿಕೆಗಳು
ಸಭೆಯ ವಿಷಯ: 'ಬಹುಪಕ್ಷೀಯ ಸಂವಾದವನ್ನು ಬಲಪಡಿಸುವುದು – ಸುಸ್ಥಿರ ಶಾಂತಿ ಮತ್ತು ಅಭಿವೃದ್ಧಿಗೆ ಶ್ರಮಿಸುವುದು'
Posted On:
04 JUL 2024 6:04PM by PIB Bengaluru
ಸಭೆಯಲ್ಲಿ ಉಪಸ್ಥಿತರಿದ್ದ ವಿದೇಶಾಂಗ ವ್ಯವಹಾರಗಳ ಸಚಿವರಾದ ಡಾ. ಜೈಶಂಕರ್ ಅವರು ಪ್ರಧಾನಮಂತ್ರಿಯವರ ಹೇಳಿಕೆಗಳ ಬಗ್ಗೆ ಮಾಹಿತಿ ನೀಡಿದರು.
ಪ್ರಸ್ತುತ ಜಗತ್ತು ಭೌಗೋಳಿಕ-ರಾಜಕೀಯ ಉದ್ವಿಗ್ನತೆಗಳು, ಭೌಗೋಳಿಕ-ಆರ್ಥಿಕ ಶಕ್ತಿಗಳು ಹಾಗೂ ಭೌಗೋಳಿಕ-ತಾಂತ್ರಿಕ ಪ್ರಗತಿಗಳಿಂದ ಪ್ರೇರಿತವಾದ ಆಳವಾದ ಬದಲಾವಣೆಗಳಿಗೆ ಸಾಕ್ಷಿಯಾಗುತ್ತಿದೆ. ಈ ಎಲ್ಲಾ ಬದಲಾವಣೆಗಳು ವ್ಯಾಪಕ ಪರಿಣಾಮಗಳನ್ನು ಹೊಂದಿವೆ. ನಾವು ದೃಷ್ಟಿ ಹಾಯಿಸಿದರೆ, ಅವುಗಳಿಂದ ತಕ್ಷಣದ ಮತ್ತು ವ್ಯವಸ್ಥಿತ ಸವಾಲುಗಳು ಜೊತೆಗೆ ಅವಕಾಶಗಳೂ ಉದ್ಭವಿಸುತ್ತವೆ. ನಾವು ಅವುಗಳನ್ನು ಪರಿಹರಿಸುವುದರ ಜೊತೆ ಜೊತೆಗೇ, ಜಗತ್ತು ಅನಿವಾರ್ಯವಾಗಿ ನೈಜ ಬಹುಧ್ರುವೀಯತೆಯತ್ತ ಸಾಗುತ್ತಿದೆ ಎಂಬುದನ್ನು ನಾವು ಸ್ಪಷ್ಟವಾಗಿ ತಿಳಿದುಕೊಳ್ಳಬೇಕಿದೆ. ಇಂತಹ ಸನ್ನಿವೇಶದಲ್ಲಿ, ಶಾಂಘೈ ಸಹಕಾರ ಒಕ್ಕೂಟವು (ಎಸ್‌ಸಿಒ) ಹೆಚ್ಚು ಮುಖ್ಯವಾಗುತ್ತದೆ. ಆದರೆ, ಅದರ ನಿಜವಾದ ಮೌಲ್ಯವು ನಾವೆಲ್ಲರೂ ನಮ್ಮ ನಡುವೆ ಪರಸ್ಪರ ಎಷ್ಟು ಚೆನ್ನಾಗಿ ಸಹಕರಿಸುತ್ತೇವೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ನಾವು ಈಗಾಗಲೇ ʻಎಸ್‌ಸಿಒʼ ಒಳಗೆ ಆ ಬಗ್ಗೆ ಚರ್ಚೆ ನಡೆಸಿದ್ದೇವೆ. ಇದು ವಿಸ್ತೃತ ಕುಟುಂಬಕ್ಕೂ ವಿಸ್ತರಿಸುತ್ತದೆ.
ಸವಾಲುಗಳ ಬಗ್ಗೆ ನಾವು ಮಾತನಾಡುವುದಾದರೆ, ಭಯೋತ್ಪಾದನೆ ವಿರುದ್ಧ ಹೋರಾಟವು ಖಂಡಿತವಾಗಿಯೂ ನಮ್ಮಲ್ಲಿ ಅನೇಕರಿಗೆ ಮೊದಲ ಆದ್ಯತೆಯಾಗಿದೆ. ಆದರೆ, ವಾಸ್ತವವೆಂದರೆ, ಇದನ್ನು ರಾಷ್ಟ್ರಗಳು ಅಸ್ಥಿರತೆಯ ಸಾಧನವಾಗಿ ಬಳಸುತ್ತಿವೆ. ಗಡಿಯಾಚೆಗಿನ ಭಯೋತ್ಪಾದನೆಯೊಂದಿಗೆ ನಾವು ನಮ್ಮದೇ ಆದ ಅನುಭವಗಳನ್ನು ಹೊಂದಿದ್ದೇವೆ. ಯಾವುದೇ ರೂಪದಲ್ಲಿ ಅಥವಾ ಅಭಿವ್ಯಕ್ತಿಯಲ್ಲಿ ಭಯೋತ್ಪಾದನೆಯನ್ನು ಸಮರ್ಥಿಸಲು ಅಥವಾ ಕ್ಷಮಿಸಲು ಸಾಧ್ಯವಿಲ್ಲ ಎಂಬುದನ್ನು ನಾವು ಸ್ಪಷ್ಟಪಡಿಸೋಣ. ಭಯೋತ್ಪಾದಕರಿಗೆ ಆಶ್ರಯ ನೀಡುವುದನ್ನು ಬಲವಾಗಿ ಖಂಡಿಸಬೇಕು. ಗಡಿಯಾಚೆಗಿನ ಭಯೋತ್ಪಾದನೆಗೆ ನಿರ್ಣಾಯಕ ಪ್ರತಿಕ್ರಿಯೆಯ ಅಗತ್ಯವಿದೆ. ಭಯೋತ್ಪಾದಕರಿಗೆ ಹಣಕಾಸು ಪೂರೈಕೆ ಮತ್ತು ಉಗ್ರರ ನೇಮಕಾತಿಯಯನ್ನು ಪರಿಣಾಮಕಾರಿಯಾಗಿ ಎದುರಿಸಬೇಕಾಗಿದೆ. ʻಎಸ್‌ಸಿಒʼ ತನ್ನ ಬದ್ಧತೆಯಲ್ಲಿ ಎಂದಿಗೂ ಚಂಚಲವಾಗಬಾರದು. ಈ ವಿಷಯದಲ್ಲಿ ನಾವು ದ್ವಂದ್ವ ನೀತಿ ಅನುಸರಿಸಲು ಸಾಧ್ಯವಿಲ್ಲ.
ಭೌಗೋಳಿಕ-ಆರ್ಥಿಕತೆ ವಿಚಾರಕ್ಕೆ ಬಂದಾಗ ಬಹುಮುಖಿ, ವಿಶ್ವಾಸಾರ್ಹ ಹಾಗೂ ಸ್ಥಿತಿಸ್ಥಾಪಕ ಪೂರೈಕೆ ಸರಪಳಿಗಳನ್ನು ರಚಿಸುವುದು ಇಂದಿನ ತುರ್ತು ಅಗತ್ಯವಾಗಿದೆ. ಇದು ಕೋವಿಡ್ ಅನುಭವದಿಂದ ಕಲಿತ ಪ್ರಮುಖ ಪಾಠವಾಗಿದೆ. ಜಾಗತಿಕ ಬೆಳವಣಿಗೆಯ ಎಂಜಿನ್‌ಗಳಿಗೆ 'ಮೇಕ್ ಇನ್ ಇಂಡಿಯಾ' ಸೇರ್ಪಡೆಗೊಳ್ಳಬಹುದು ಮತ್ತು ಜಾಗತಿಕ ಆರ್ಥಿಕತೆಯನ್ನು ಪ್ರಜಾಸತ್ಮಾತ್ಮಕಗೊಳಿಸಲು ಸಹಾಯ ಮಾಡುತ್ತದೆ. ಸಾಮರ್ಥ್ಯ ವರ್ಧನೆಯಲ್ಲಿ ಇತರರೊಂದಿಗೆ, ವಿಶೇಷವಾಗಿ ಜಾಗತಿಕ ದಕ್ಷಿಣದ ರಾಷ್ಟ್ರಗಳೊಂದಿಗೆ ಪಾಲುದಾನಾಗಲು ಭಾರತ ಸಿದ್ಧವಾಗಿದೆ. ತಂತ್ರಜ್ಞಾನವು ನಮ್ಮ ಕಾಲದಲ್ಲಿ ಉತ್ತಮ ಭರವಸೆಯನ್ನು ಹೊಂದಿರುವುದು ಮಾತ್ರವಲ್ಲದೆ, ಅಭಿವೃದ್ಧಿ ಮತ್ತು ಭದ್ರತೆ ಎರಡರಲ್ಲೂ ಹೆಚ್ಚು ಬದಲಾವಣೆ ತರುತ್ತಿದೆ. ಡಿಜಿಟಲ್ ಯುಗಕ್ಕೆ ಹೆಚ್ಚಿನ ವಿಶ್ವಾಸ ಮತ್ತು ಪಾರದರ್ಶಕತೆಯ ಅಗತ್ಯವಿದೆ. ಕೃತಕ ಬುದ್ಧಿಮತ್ತೆ ಮತ್ತು ಸೈಬರ್ ಭದ್ರತೆ ತಮ್ಮದೇ ಆದ ನಿರ್ಣಾಯಕ ಸಮಸ್ಯೆಗಳನ್ನು ಮುಂದಿಡುತ್ತವೆ. ಇದೇ ವೇಳೆ, ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಮತ್ತು ಡಿಜಿಟಲ್ ಹಣಕಾಸು ಸೇರ್ಪಡೆಯು ಎಂತಹ ದೊಡ್ಡ ವ್ಯತ್ಯಾಸವನ್ನುಂಟು ಮಾಡುತ್ತದೆ ಎಂಬುದನ್ನು ಭಾರತ ಈಗಾಗಲೇ ತೋರಿಸಿದೆ. ಇವೆರಡನ್ನೂ ನಮ್ಮ ʻಎಸ್‌ಸಿಒʼ ಅಧ್ಯಕ್ಷತೆಯ ಅವಧಿಯಲ್ಲಿ ಚರ್ಚಿಸಲಾಯಿತು. ಇವುಗಳು ʻಎಸ್‌ಸಿಒʼ ಸದಸ್ಯರು ಮತ್ತು ಪಾಲುದಾರರನ್ನು ಒಳಗೊಂಡ ಅಂತರರಾಷ್ಟ್ರೀಯ ಸಹಕಾರದ ವ್ಯಾಪ್ತಿಯನ್ನು ವಿಸ್ತರಿಸುತ್ತವೆ.
ಸವಾಲುಗಳ ವಿಚಾರವಾಗಿ ದೃಢ ನಿಲುವುಗಳ ಜೊತೆಗೆ, ಸಕ್ರಿಯವಾಗಿ ಮತ್ತು ಸಹಯೋಗ ವಿಧಾನದಲ್ಲಿ ಪ್ರಗತಿಯ ಮಾರ್ಗಗಳನ್ನು ಅನ್ವೇಷಿಸುವುದು ಸಹ ಅಷ್ಟೇ ಮುಖ್ಯ. ಮರುಸಮತೋಲನದ ಜಗತ್ತಿಗೆ ಉತ್ತಮವಾಗಿ ಕೊಡುಗೆ ನೀಡಬಲ್ಲ ಹೊಸ ಸಂಪರ್ಕಗಳನ್ನು ರಚಿಸುವತ್ತ ಪ್ರಸ್ತುತ ಜಾಗತಿಕ ಚರ್ಚೆಯು ಗಮನ ಕೇಂದ್ರೀಕರಿಸಿದೆ. ಇದು ಗಂಭೀರ ವೇಗವನ್ನು ಪಡೆಯಬೇಕಾದರೆ, ಇದಕ್ಕೆ ಅನೇಕರ ಜಂಟಿ ಪ್ರಯತ್ನಗಳು ಬೇಕಾಗುತ್ತವೆ. ದೇಶಗಳ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸಬೇಕು ಹಾಗೂ ನೆರೆಹೊರೆಯವರಿಗೆ ತಾರತಮ್ಯವಿಲ್ಲದ ವ್ಯಾಪಾರ ಮತ್ತು ಸಾರಿಗೆ ಹಕ್ಕುಗಳನ್ನು ನೀಡುವ ಅಡಿಪಾಯದ ಮೇಲೆ ಇದು ನಿರ್ಮಾಣಗೊಳ್ಳಬೇಕು. ʻಎಸ್‌ಸಿಒʼ ವಿಸ್ತೃತ ಕುಟುಂಬಕ್ಕೆ ನಿದರ್ಶನವಾಗಿ, ಭಾರತ ಮತ್ತು ಇರಾನ್ ನಡುವಿನ ದೀರ್ಘಕಾಲೀನ ಒಪ್ಪಂದದ ಮೂಲಕ ಇತ್ತೀಚೆಗೆ ಚಬಹಾರ್ ಬಂದರಿನಲ್ಲಿ ಆಗಿರುವ ಪ್ರಗತಿಯನ್ನು ನಾವು ಎತ್ತಿ ತೋರಬಹುದು. ಇದು ಭೂ-ಆವೃತ ಮಧ್ಯ ಏಷ್ಯಾದ ರಾಷ್ಟ್ರಗಳಿಗೆ ಮಾತ್ರವಲ್ಲದೆ ಭಾರತ ಮತ್ತು ಯುರೇಷಿಯಾ ನಡುವಿನ ವಾಣಿಜ್ಯ ವಹಿವಾಟಿನ ಅಪಾಯವನ್ನೂ ಕಡಿಮೆ ಮಾಡುತ್ತದೆ.
ಈ ಪ್ರದೇಶದಲ್ಲಿರುವಾಗ, ಅಫ್ಘಾನಿಸ್ತಾನದ ಬಗ್ಗೆಯೂ ನಾನು ಮಾತನಾಡಲು ಬಯಸುತ್ತೇನೆ. ನಮ್ಮ ಜನರ ನಡುವೆ ನಾವು ಹೊಂದಿರುವ ಸಂಬಂಧವು ಐತಿಹಾಸಿಕವಾದುದು. ಅದು ನಮ್ಮ ಸಂಬಂಧಗಳ ಅಡಿಪಾಯವೂ ಹೌದು. ನಮ್ಮ ಸಹಕಾರವು ಅಭಿವೃದ್ಧಿ ಯೋಜನೆಗಳು, ಮಾನವೀಯ ನೆರವು, ಸಾಮರ್ಥ್ಯ ವರ್ಧನೆ ಹಾಗೂ ಕ್ರೀಡೆಯನ್ನು ಒಳಗೊಂಡಿದೆ. ಅಫ್ಘಾನ್ ಜನರ ಅಗತ್ಯತೆಗಳು ಮತ್ತು ಆಕಾಂಕ್ಷೆಗಳ ವಿಚಾರದಲ್ಲಿ ಭಾರತ ಸಂವೇದನಾಶೀಲವಾಗಿದೆ.
ʻಎಸ್‌ಸಿಒʼ ವಿಸ್ತೃತ ಕುಟುಂಬವು ಪ್ರಸ್ತುತ ಅಂತರರಾಷ್ಟ್ರೀಯ ವ್ಯವಹಾರವನ್ನು ಸುಧಾರಿಸುವ ಬದ್ಧತೆಯನ್ನು ಸಹ ಒಳಗೊಂಡಿದೆ. ಆ ಪ್ರಯತ್ನಗಳು ವಿಶ್ವಸಂಸ್ಥೆ ಮತ್ತು ಅದರ ಭದ್ರತಾ ಮಂಡಳಿಗೆ ವಿಸ್ತರಿಸಿದಾಗ ಮಾತ್ರ ಇದು ಸಾಧ್ಯ. ಮುಂದಿನ ದಿನಗಳಲ್ಲಿ, ಮುಂದಿನ ಹಾದಿಯ ಬಗ್ಗೆ ನಮ್ಮ ನಡುವೆ ಬಲವಾದ ಒಮ್ಮತ ಮೂಡಲಿದೆ ಎಂದು ನಾವು ಭಾವಿಸುತ್ತೇವೆ. ʻಎಸ್‌ಸಿಒʼದ ಆರ್ಥಿಕ ಕಾರ್ಯಸೂಚಿಯನ್ನು ಹೆಚ್ಚಿಸಲು ಭಾರತ ಗಮನಾರ್ಹ ಕೊಡುಗೆ ನೀಡಿದೆ. ನಾವು ʻಎಸ್‌ಸಿಒ ನವೋದ್ಯಮ ವೇದಿಕೆʼ ಹಾಗೂ ʻನವೋದ್ಯಮ ಮತ್ತು ನಾವೀನ್ಯತೆ ಕುರಿತ ವಿಶೇಷ ಕಾರ್ಯಪಡೆʼಯಂತಹ ಸಾಂಸ್ಥಿಕ ಕಾರ್ಯವಿಧಾನಗಳನ್ನು ಹೊಂದಿದ್ದೇವೆ. 100 ಯುನಿಕಾರ್ನ್‌ಗಳು ಸೇರಿದಂತೆ ಭಾರತದಲ್ಲಿ 130,000 ನವೋದ್ಯಮಗಳಿದ್ದು, ನಮ್ಮ ಅನುಭವವು ಇತರರಿಗೆ ಉಪಯೋಗಕಾರಿಯಾಗಿದೆ.
ವೈದ್ಯಕೀಯ ಮತ್ತು ಸ್ವಾಸ್ಥ್ಯ ಪ್ರವಾಸೋದ್ಯಮದ ವಿಷಯಕ್ಕೆ ಬಂದಾಗ, ʻವಿಶ್ವ ಆರೋಗ್ಯ ಸಂಸ್ಥೆʼಯು ಗುಜರಾತ್‌ನಲ್ಲಿ ಸಾಂಪ್ರದಾಯಿಕ ಔಷಧಕ್ಕಾಗಿ ಜಾಗತಿಕ ಕೇಂದ್ರವನ್ನು ಸ್ಥಾಪಿಸಿದೆ ಎಂದು ನಿಮಗೆ ತಿಳಿದಿರಬಹುದು. ʻಎಸ್‌ಸಿಒʼದಲ್ಲಿ, ಸಾಂಪ್ರದಾಯಿಕ ಔಷಧ ಕುರಿತಾದ ಹೊಸ ʻಎಸ್‌ಸಿಒʼ ಕಾರ್ಯಪಡೆ ರಚಿಸುವ ಉಪಕ್ರಮವನ್ನು ಭಾರತ ಕೈಗೊಂಡಿದೆ.
ಶಿಕ್ಷಣ, ತರಬೇತಿ ಮತ್ತು ಸಾಮರ್ಥ್ಯವರ್ಧನೆಯು ಭಾರತದ ಅಂತಾರಾಷ್ಟ್ರೀಯ ಸಹಕಾರದ ಪ್ರಮುಖ ಆಧಾರಸ್ತಂಭಗಳಾಗಿವೆ. ʻಸಿ5ʼ ಪಾಲುದಾರರೊಂದಿಗೆ, ಅಥವಾ 'ನೆರೆಹೊರೆಯವರು ಮೊದಲು' ನೀತಿಯ ಆಧಾರದ ಮೇಲೆ ಅಥವಾ ವಿಸ್ತೃತ ನೆರೆಹೊರೆಯವರೊಂದಿಗೆ ಅವುಗಳನ್ನು ಮತ್ತಷ್ಟು ಬೆಳೆಸಲು ನಾವು ಬದ್ಧರಾಗಿದ್ದೇವೆ.
ಹೆಚ್ಚಿನ ದೇಶಗಳು ʻಎಸ್‌ಸಿಒʼ ಜೊತೆ ವೀಕ್ಷಕರು ಅಥವಾ ಸಂವಾದ ಪಾಲುದಾರರಾಗಿ ಸಹಯೋಗವನ್ನು ಬಯಸುತ್ತಿರುವುದರಿಂದ, ನಾವು ಉತ್ತಮವಾಗಿ ಸಂವಹನ ನಡೆಸಲು ಮತ್ತು ನಮ್ಮ ಒಮ್ಮತವನ್ನು ಆಳಗೊಳಿಸಲು ಪ್ರಯತ್ನಿಸಬೇಕು. ಇಂಗ್ಲಿಷ್‌ಗೆ ಮೂರನೇ ಅಧಿಕೃತ ಭಾಷೆಯ ಸ್ಥಾನಮಾನ ನೀಡುವುದು ನಿರ್ಣಾಯಕವಾಗಿದೆ.
ಯಶಸ್ವಿ ಶೃಂಗಸಭೆಯನ್ನು ಆಯೋಜಿಸಿದ್ದಕ್ಕಾಗಿ ನಾವು ಕಜಕ್‌ಸ್ತಾನವನ್ನು ಅಭಿನಂದಿಸುತ್ತೇವೆ. `ವಿಶ್ವ ಬಂಧು’ ಅಥವಾ ಜಗತ್ತಿನ ಸ್ನೇಹಿತನಾಗಿ, ಭಾರತವು ತನ್ನ ಎಲ್ಲಾ ಪಾಲುದಾರರೊಂದಿಗೆ ಸಹಕಾರವನ್ನು ಆಳಗೊಳಿಸಲು ಸದಾ ಪ್ರಯತ್ನಿಸುತ್ತದೆ. ಮುಂಬರುವ ಚೀನಾದ ʻಎಸ್‌ಸಿಒʼ ಅಧ್ಯಕ್ಷತೆಯ ಯಶಸ್ಸಿಗೆ ನಮ್ಮ ಶುಭ ಹಾರೈಕೆಗಳನ್ನು ತಿಳಿಸಲು ನಾವು ಬಯಸುತ್ತೇವೆ.
*****
(Release ID: 2030990)
Visitor Counter : 65
Read this release in:
Tamil
,
English
,
Urdu
,
Marathi
,
Hindi
,
Hindi_MP
,
Assamese
,
Manipuri
,
Punjabi
,
Gujarati
,
Odia
,
Telugu
,
Malayalam