ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಮಹಾರಾಷ್ಟ್ರದಲ್ಲಿ ಜಿಕಾ ವೈರಾಣು ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಆರೋಗ್ಯ ಸಚಿವಾಲಯವು ರಾಜ್ಯಗಳಿಗೆ ಸಲಹೆಯನ್ನು ನೀಡಿದೆ


ಜಿಕಾ ವೈರಾಣು ಸೋಂಕಿಗೆ ಸಂಬಂಧಿಸಿದಂತೆ ಗರ್ಭಿಣಿಯರನ್ನು ಪರೀಕ್ಷಿಸುವ ಮೂಲಕ ಮತ್ತು ಜಿಕಾ ವೈರಾಣು ಸೋಂಕಿತ ಗರ್ಭಿಣಿಯರಲ್ಲಿ ಭ್ರೂಣದ ಬೆಳವಣಿಗೆಯನ್ನು ಮೇಲ್ವಿಚಾರಣೆ ಮಾಡುವ ಮೂಲಕ ನಿರಂತರ ಜಾಗರೂಕತೆ ವಹಿಸುವಂತೆ ರಾಜ್ಯಗಳಿಗೆ ತಿಳಿಸಲಾಗಿದೆ

ಆರೋಗ್ಯ ಸೌಲಭ್ಯಗಳು/ಆಸ್ಪತ್ರೆಗಳನ್ನು ಈಡಿಸ್ ಸೊಳ್ಳೆ ಮುಕ್ತವಾಗಿರಿಸಲು ಮೇಲ್ವಿಚಾರಣೆ ಮತ್ತು ಕ್ರಮಕ್ಕಾಗಿ ನೋಡಲ್ ಅಧಿಕಾರಿಯನ್ನು ನೇಮಿಸಬೇಕು

ಕೀಟಶಾಸ್ತ್ರೀಯ ಕಣ್ಗಾವಲು ಬಲಪಡಿಸಲು ಮತ್ತು ವಸತಿ ಪ್ರದೇಶಗಳು, ಕೆಲಸದ ಸ್ಥಳಗಳು, ಶಾಲೆಗಳು, ನಿರ್ಮಾಣ ಸ್ಥಳಗಳು, ಸಂಸ್ಥೆಗಳು ಮತ್ತು ಆರೋಗ್ಯ ಸೌಲಭ್ಯಗಳಲ್ಲಿ ರೋಗ ಹರಡುವ ಕೀಟಗಳ ನಿಯಂತ್ರಣ ಚಟುವಟಿಕೆಗಳನ್ನು ರಾಜ್ಯಗಳು ತೀವ್ರಗೊಳಿಸಲಿವೆ

Posted On: 03 JUL 2024 3:07PM by PIB Bengaluru

ಮಹಾರಾಷ್ಟ್ರದಲ್ಲಿ ವರದಿಯಾದ ಜಿಕಾ ವೈರಾಣುವಿನ ಕೆಲವು ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಆರೋಗ್ಯ ಸೇವೆಗಳ ಮಹಾನಿರ್ದೇಶಕ (ಡಿ ಜಿ ಎಚ್‌ ಎಸ್) ಡಾ. ಅತುಲ್ ಗೋಯೆಲ್ ಅವರು ರಾಜ್ಯಗಳಿಗೆ ಸಲಹಾ ಸೂಚನೆ ಹೊರಡಿಸಿದ್ದಾರೆ. ದೇಶದಲ್ಲಿ ಜಿಕಾ ವೈರಾಣು ಪರಿಸ್ಥಿತಿಯ ವಿರುದ್ಧ ನಿರಂತರ ಜಾಗರೂಕತೆಯ ಅಗತ್ಯವನ್ನು ಅವರು ಒತ್ತಿ ಹೇಳಿದ್ದಾರೆ. 

ಗರ್ಭಿಣಿಯ ಭ್ರೂಣದಲ್ಲಿ ಮೈಕ್ರೊಸೆಫಾಲಿ (ಮಗುವಿನ ತಲೆಯ ಗಾತ್ರ ಕಡಿಮೆಯಿರುವುದು) ಮತ್ತು ನರವೈಜ್ಞಾನಿಕ ಪರಿಣಾಮಗಳೊಂದಿಗೆ ಜಿಕಾ ಸಂಬಂಧಿಸಿರುವುದರಿಂದ, ನಿಕಟ ಮೇಲ್ವಿಚಾರಣೆಗಾಗಿ ವೈದ್ಯರು ಎಚ್ಚರಿಕೆಯಿಂದಿರಲು ತಿಳಿಸುವಂತೆ ರಾಜ್ಯಗಳಿಗೆ ಸೂಚಿಸಲಾಗಿದೆ. ರೋಗ ಪೀಡಿತ ಪ್ರದೇಶಗಳಲ್ಲಿನ ಆರೋಗ್ಯ ಸೌಲಭ್ಯಗಳಿಗೆ ಅಥವಾ ಪೀಡಿತ ಪ್ರದೇಶಗಳಲ್ಲಿ ಜಿಕಾ ವೈರಾಣು ಸೋಂಕಿಗೆ ಸಂಬಂಧಿಸಿದಂತೆ ಗರ್ಭಿಣಿಯರನ್ನು ಪರೀಕ್ಷಿಸಲು, ಜಿಕಾ ವೈರಾಣು ಸೋಂಕಿತ ಗರ್ಭಿಣಿಯರ ಭ್ರೂಣದ ಬೆಳವಣಿಗೆಯನ್ನು ಮೇಲ್ವಿಚಾರಣೆ ಮಾಡಲು ಮತ್ತು ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಕ್ರಮವಹಿಸಲು ರಾಜ್ಯಗಳನ್ನು ಒತ್ತಾಯಿಸಲಾಗಿದೆ. ಈಡಿಸ್ ಸೊಳ್ಳೆಗಳಿಂದ ಮುಕ್ತವಾಗಿರಿಸಲು ಮೇಲ್ವಿಚಾರಣೆ ಮತ್ತು ಕ್ರಮಕ್ಕಾಗಿ ನೋಡಲ್ ಅಧಿಕಾರಿಯನ್ನು ನೇಮಿಸಲು ಆರೋಗ್ಯ ಸೌಲಭ್ಯಗಳು/ಆಸ್ಪತ್ರೆಗಳಿಗೆ ಸಲಹೆ ನೀಡುವಂತೆ ರಾಜ್ಯಗಳಿಗೆ ಸೂಚನೆ ನೀಡಲಾಗಿದೆ.

ಕೀಟಶಾಸ್ತ್ರೀಯ ಕಣ್ಗಾವಲು ಬಲಪಡಿಸುವ ಮತ್ತು ವಸತಿ ಪ್ರದೇಶಗಳು, ಕೆಲಸದ ಸ್ಥಳಗಳು, ಶಾಲೆಗಳು, ನಿರ್ಮಾಣ ಸ್ಥಳಗಳು, ಸಂಸ್ಥೆಗಳು ಮತ್ತು ಆರೋಗ್ಯ ಸೌಲಭ್ಯಗಳಲ್ಲಿ ರೋಗ ಹರಡುವ ಕೀಟಗಳ ನಿಯಂತ್ರಣ ಚಟುವಟಿಕೆಗಳನ್ನು ತೀವ್ರಗೊಳಿಸಲು ರಾಜ್ಯಗಳು ಪ್ರಾಮುಖ್ಯತೆ ನೀಡಬೇಕು. ಸಮುದಾಯದಲ್ಲಿ ಭೀತಿಯನ್ನು ಕಡಿಮೆ ಮಾಡಲು ಸಾಮಾಜಿಕ ಮಾಧ್ಯಮ ಮತ್ತು ಇತರ ವೇದಿಕೆಗಳಲ್ಲಿ ಮುನ್ನೆಚ್ಚರಿಕೆಯ ಐಇಸಿ(ಮಾಹಿತಿ, ಶಿಕ್ಷಣ, ಸಂವಹನ) ಸಂದೇಶಗಳ ಮೂಲಕ ಜಾಗೃತಿಯನ್ನು ಮೂಡಿಸುವಂತೆ ರಾಜ್ಯಗಳನ್ನು ಒತ್ತಾಯಿಸಲಾಗಿದೆ. ಏಕೆಂದರೆ ಜಿಕಾ ಇತರ ಯಾವುದೇ ವೈರಾಣು ಸೋಂಕಿನಂತೆ ಹೆಚ್ಚಿನ ಸಂದರ್ಭಗಳಲ್ಲಿ ಲಕ್ಷಣರಹಿತ ಮತ್ತು ಸೌಮ್ಯವಾಗಿರುತ್ತದೆ. ಆದಾಗ್ಯೂ, ಇದು ಮೈಕ್ರೊಸೆಫಾಲಿಯೊಂದಿಗೆ ಸಂಬಂಧಿಸಿದೆ ಎಂದು ವರದಿಯಾಗಿದೆ, 2016ರಿಂದ ದೇಶದಲ್ಲಿ ಯಾವುದೇ ಜಿಕಾ ಸಂಬಂಧಿತ ಮೈಕ್ರೋಸೆಫಾಲಿ ಪ್ರಕರಣ ವರದಿಯಾಗಿಲ್ಲ.

ಯಾವುದೇ ಸಂಭಾವ್ಯ ಉಲ್ಬಣ/ಸ್ಫೋಟವನ್ನು ತಡೆಯಲು ಸಮಯೋಚಿತ ಪತ್ತೆ ಮತ್ತು ನಿಯಂತ್ರಣಕ್ಕಾಗಿ, ಎಲ್ಲಾ ಹಂತಗಳಲ್ಲಿ ಸೂಕ್ತ ಜಾಗರೂಕರಾಗಿರಲು, ಲಾಜಿಸ್ಟಿಕ್ಸ್ ಲಭ್ಯತೆಯನ್ನು ಸಿದ್ಧಪಡಿಸಲು ಮತ್ತು ಖಚಿತಪಡಿಸಿಕೊಳ್ಳಲು ರಾಜ್ಯಗಳಿಗೆ ಸೂಚಿಸಲಾಗಿದೆ. ಯಾವುದೇ ಪತ್ತೆಯಾದ ಪ್ರಕರಣವನ್ನು ತಕ್ಷಣವೇ ಸಮಗ್ರ ರೋಗ ಕಣ್ಗಾವಲು ಕಾರ್ಯಕ್ರಮ (IDSP) ಮತ್ತು ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕೇಂದ್ರ (NCVBDC)ಗೆ ವರದಿ ಮಾಡುವಂತೆ ರಾಜ್ಯಗಳಿಗೆ ತಿಳಿಸಲಾಗಿದೆ.

ಪುಣೆಯ ರಾಷ್ಟ್ರೀಯ ವೈರಾಣು ಸಂಸ್ಥೆಯಲ್ಲಿ (ಎನ್‌ ಐ ವಿ), ದೆಹಲಿಯ ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ (ಎನ್‌ ಸಿ ಡಿ ಸಿ) ಮತ್ತು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್)ಯ ಕೆಲವು ಆಯ್ದ ವೈರಾಣು ಸಂಶೋಧನೆ ಮತ್ತು ರೋಗ ನಿರ್ಣಯ ಪ್ರಯೋಗಾಲಯಗಳಲ್ಲಿ ಜಿಕಾ ಪರೀಕ್ಷಾ ಸೌಲಭ್ಯ ಲಭ್ಯವಿದೆ. ಉನ್ನತ ಮಟ್ಟದಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ.

ಡಿ ಜಿ ಎಚ್‌ ಎಸ್ ಈ ವರ್ಷದ ಆರಂಭದಲ್ಲಿ ಏಪ್ರಿಲ್ 26 ರಂದು ಸಲಹೆಯನ್ನು ನೀಡಿತ್ತು ಮತ್ತು ಎನ್‌ ವಿ ಬಿ ಡಿ ಸಿ ನಿರ್ದೇಶಕರು ಫೆಬ್ರವರಿ ಮತ್ತು ಏಪ್ರಿಲ್ 2024ರಲ್ಲಿ ಅದೇ ಸೊಳ್ಳೆಯಿಂದ ಹರಡುವ ಜಿಕಾ, ಡೆಂಗ್ಯೂ ಮತ್ತು ಚಿಕೂನ್‌ಗುನ್ಯಾ ಕುರಿತು ರಾಜ್ಯಗಳಿಗೆ ಮುನ್ನೆಚ್ಚರಿಕೆ ನೀಡಲು ಎರಡು ಸಲಹೆಗಳನ್ನು ಹೊರಡಿಸಿದ್ದಾರೆ.

ಕೇಂದ್ರ ಆರೋಗ್ಯ ಸಚಿವಾಲಯವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ.

 

ಹಿನ್ನೆಲೆ:

ಜಿಕಾ ಎಂಬುದು ಡೆಂಗ್ಯೂ ಮತ್ತು ಚಿಕೂನ್ ಗುನ್ಯಾದಂತಹ ಈಡಿಸ್ ಸೊಳ್ಳೆಯಿಂದ ಹರಡುವ ವೈರಾಣು ಕಾಯಿಲೆಯಾಗಿದೆ. ಇದು ಮಾರಣಾಂತಿಕವಲ್ಲದ ರೋಗ. ಆದಾಗ್ಯೂ, ಜಿಕಾ ಪೀಡಿತ ಗರ್ಭಿಣಿ ಮಹಿಳೆಯರಿಗೆ ಜನಿಸಿದ ಶಿಶುಗಳ ಮೈಕ್ರೊಸೆಫಾಲಿ (ತಲೆಯ ಗಾತ್ರವನ್ನು ಕಡಿಮೆಯಾಗುವುದು) ರೋಗಕ್ಕೆ ಸಂಬಂಧಿಸಿದೆ, ಇದು ಪ್ರಮುಖ ಕಳವಳವಾಗಿದೆ.

ಭಾರತದಲ್ಲಿ ಮೊದಲ ಜಿಕಾ ಪ್ರಕರಣ 2016 ರಲ್ಲಿ ಗುಜರಾತ್ ರಾಜ್ಯದಲ್ಲಿ ವರದಿಯಾಯಿತು. ಅಲ್ಲಿಂದೀಚೆಗೆ, ತಮಿಳುನಾಡು, ಮಧ್ಯಪ್ರದೇಶ, ರಾಜಸ್ಥಾನ, ಕೇರಳ, ಮಹಾರಾಷ್ಟ್ರ, ಉತ್ತರ ಪ್ರದೇಶ, ದೆಹಲಿ ಮತ್ತು ಕರ್ನಾಟಕದಂತಹ ಹಲವು ರಾಜ್ಯಗಳಲ್ಲಿ ಜಿಕಾ ಪ್ರಕರಣಗಳ ವರದಿಯಾಗಿವೆ.

2024 ರಲ್ಲಿ (ಜುಲೈ 2 ರವರೆಗೆ), ಮಹಾರಾಷ್ಟ್ರದ ಪುಣೆ (6), ಕೊಲ್ಲಾಪುರ (1) ಮತ್ತು ಸಂಗಮ್ನೇರ್ (1) ನಿಂದ ಎಂಟು ಪ್ರಕರಣಗಳು ವರದಿಯಾಗಿವೆ.

*****



(Release ID: 2030552) Visitor Counter : 11