ಕೃಷಿ ಸಚಿವಾಲಯ

ಪ್ರಧಾನಮಂತ್ರಿಯವರು ಜೂನ್ 18, 2024 ರಂದು ವಾರಾಣಸಿಯಲ್ಲಿ ಪಿಎಂ-ಕಿಸಾನ್ ಯೋಜನೆಯ 17 ನೇ ಕಂತಿನ ಸುಮಾರು 20,000 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಿದ್ದಾರೆ


ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು

ಪ್ರಧಾನಮಂತ್ರಿಯವರು 30,000 ಕ್ಕೂ ಹೆಚ್ಚು ಸ್ವ-ಸಹಾಯ ಗುಂಪುಗಳಿಗೆ ಕೃಷಿ ಸಖಿ ಪ್ರಮಾಣಪತ್ರಗಳನ್ನು ನೀಡಲಿದ್ದಾರೆ

Posted On: 15 JUN 2024 3:10PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪಿಎಂ-ಕಿಸಾನ್ ಅಡಿಯಲ್ಲಿ ಸುಮಾರು 20,000 ಕೋಟಿ ರೂ.ಗಳ 17 ನೇ ಕಂತಿನ ಹಣವನ್ನು ಬಿಡುಗಡೆ ಮಾಡಲಿದ್ದಾರೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜೂನ್ 18, 2024 ರಂದು ವಾರಾಣಸಿಗೆ ಭೇಟಿ ನೀಡಲಿದ್ದು, ರೈತರಿಗೆ ಪಿಎಂ ಕಿಸಾನ್ ಯೋಜನೆಯ 17 ನೇ ಕಂತಿನ ಬಿಡುಗಡೆ ಮಾಡಲಿದ್ದಾರೆ ಮತ್ತು 30,000 ಕ್ಕೂ ಹೆಚ್ಚು ಸ್ವ-ಸಹಾಯ ಗುಂಪುಗಳಿಗೆ ಕೃಷಿ ಸಖಿ ಪ್ರಮಾಣಪತ್ರಗಳನ್ನು ನೀಡಲಿದ್ದಾರೆ ಎಂದು ಅವರು ಹೇಳಿದರು. ಈ ಕಾರ್ಯಕ್ರಮವನ್ನು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯವು ಉತ್ತರ ಪ್ರದೇಶ ಸರ್ಕಾರದ ಸಹಯೋಗದಲ್ಲಿ  ಆಯೋಜಿಸುತ್ತದೆ. ಈ ಕಾರ್ಯಕ್ರಮವು ಉತ್ತರ ಪ್ರದೇಶದ ರಾಜ್ಯಪಾಲರು, ಕೇಂದ್ರ ಕೃಷಿ ಸಚಿವ ಶ್ರೀ ಶಿವರಾಜ್ ಸಿಂಗ್ ಚೌಹಾಣ್, ಉತ್ತರ ಪ್ರದೇಶದ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್ ಮತ್ತು ಉತ್ತರ ಪ್ರದೇಶ ಸರ್ಕಾರದ ವಿವಿಧ ಸಚಿವರು ಸೇರಿದಂತೆ ಗೌರವಾನ್ವಿತ ಗಣ್ಯರ ಉಪಸ್ಥಿತಿಗೆ ಸಾಕ್ಷಿಯಾಗಲಿದೆ.

 


 

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಕೃಷಿಯಂತಹ ಮಹತ್ವದ ಇಲಾಖೆಯ ಜವಾಬ್ದಾರಿಯನ್ನು ತಮಗೆ ವಹಿಸಿದ್ದಕ್ಕಾಗಿ ಪ್ರಧಾನ ಮಂತ್ರಿಯವರಿಗೆ ಧನ್ಯವಾದ ಅರ್ಪಿಸಿದರು. ಅಭಿವೃದ್ಧಿ ಹೊಂದಿದ ಭಾರತದ ಸಂಕಲ್ಪವನ್ನು ಈಡೇರಿಸಲು ಕೃಷಿಯು ಪ್ರಮುಖ ಆಧಾರವಾಗಿದೆ ಎಂದು ಅವರು ಹೇಳಿದರು. ಕೃಷಿಯು ಭಾರತದ ಆರ್ಥಿಕತೆಯ ಅಡಿಪಾಯವಾಗಿದೆ, ಇಂದಿಗೂ ಕೃಷಿಯ ಮೂಲಕವೇ ಹೆಚ್ಚಿನ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿವೆ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಹೇಳಿದರು.

ಇಂದು ರೈತರು ದೇಶದ ಕಣಜಗಳನ್ನು ತುಂಬುತ್ತಿದ್ದಾರೆ ಎಂದ ಸಚಿವರು, ಈ ಹಿಂದೆಯೂ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೃಷಿ ಮತ್ತು ರೈತರಿಗೆ ಹೆಚ್ಚಿನ ಆದ್ಯತೆ ನೀಡಿದ್ದರು, ಈ ಕಾರಣದಿಂದಾಗಿ ರೈತರ ಕಲ್ಯಾಣಕ್ಕಾಗಿ ಹಲವು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಮತ್ತು ಈಗಲೂ ಸಹ ಪ್ರಧಾನಿಯವರು ಅಧಿಕಾರ ಸ್ವೀಕರಿಸಿದ ನಂತರ ರೈತರಿಗೆ ಕಿಸಾನ್ ಸಮ್ಮಾನ್ ನಿಧಿಯ 17 ನೇ ಕಂತಿನ ಬಿಡುಗಡೆಗೆ ಮೊದಲ ಅಂಕಿತ ಹಾಕಿದರು ಎಂದು ಹೇಳಿದರು. ಮೂರನೇ ಬಾರಿಗೆ ಪ್ರಧಾನ ಮಂತ್ರಿಯಾದ ನಂತರ ತಮ್ಮ ಮೊದಲ ಕಾರ್ಯಕ್ರಮದಲ್ಲಿ, 20,000 ಕೋಟಿ ರೂ.ಗಿಂತ ಹೆಚ್ಚು ಮೊತ್ತದ ಪಿಎಂ ಕಿಸಾನ್ ನ 17 ನೇ ಕಂತನ್ನು ಪ್ರಧಾನ ಮಂತ್ರಿಯವರು 9.26 ಕೋಟಿ ಫಲಾನುಭವಿಗಳಿಗೆ ವಾರಾಣಸಿಯಿಂದ ಒಂದು ಬಟನ್ ಕ್ಲಿಕ್ ಮಾಡುವ ಮೂಲಕ ವಿತರಿಸಲಿದ್ದಾರೆ ಎಂದು ಸಚಿವರು ಹೇಳಿದರು. 

ಕಿಸಾನ್ ಸಮ್ಮಾನ್ ನಿಧಿಯು ಹೆಚ್ಚಿನ ಆದಾಯದ ಸ್ಥಿತಿಯ ಕೆಲವು ಮಾನದಂಡಗಳಿಗೆ ಒಳಪಟ್ಟು ಭೂಮಿ ಹೊಂದಿರುವ ಎಲ್ಲಾ ರೈತರ ಆರ್ಥಿಕ ಅಗತ್ಯಗಳನ್ನು ಪೂರೈಸಲು 24 ಫೆಬ್ರವರಿ 2019 ರಂದು ಪ್ರಾರಂಭಿಸಲಾದ ಕೇಂದ್ರ ವಲಯದ ಯೋಜನೆಯಾಗಿದೆ ಎಂದು ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಹೇಳಿದರು. ಫಲಾನುಭವಿಗಳ ನೋಂದಣಿ ಮತ್ತು ಪರಿಶೀಲನೆಯಲ್ಲಿ ಸಂಪೂರ್ಣ ಪಾರದರ್ಶಕತೆಯನ್ನು ಕಾಪಾಡಿಕೊಂಡು, ಭಾರತ ಸರ್ಕಾರವು ರಾಷ್ಟ್ರದಾದ್ಯಂತ 11 ಕೋಟಿಗೂ ಹೆಚ್ಚು ರೈತರಿಗೆ ಇದುವರೆಗೆ 3.04 ಲಕ್ಷ ಕೋಟಿ ರೂಪಾಯಿಗಳನ್ನು ವಿತರಿಸಿದೆ ಮತ್ತು ಈ ಬಿಡುಗಡೆಯೊಂದಿಗೆ, ಯೋಜನೆಯ ಪ್ರಾರಂಭದಿಂದ ಫಲಾನುಭವಿಗಳಿಗೆ ವರ್ಗಾಯಿಸಲಾದ ಒಟ್ಟು ಮೊತ್ತವು 3.24 ಲಕ್ಷ ಕೋಟಿ ರೂ.ಗಳನ್ನು ದಾಟುತ್ತದೆ ಎಂದು ಅವರು ಹೇಳಿದರು.

ಜೂನ್ 18 ರಂದು ರೈತರ ಏಳಿಗೆಯೊಂದಿಗೆ ಅಭಿವೃದ್ಧಿ ಹೊಂದಿದ ಭಾರತದ ಸಂಕಲ್ಪದ ಯಶಸ್ಸು ಪ್ರಾರಂಭವಾಗಲಿದೆ ಎಂದು ಕೇಂದ್ರ ಸಚಿವರು ಹೇಳಿದರು. ಏಕೆಂದರೆ ಈ ದಿನದಂದು ಹಲವಾರು ಕೇಂದ್ರ ಸಚಿವರು 50 ಕೃಷಿ ವಿಜ್ಞಾನ ಕೇಂದ್ರ (ಕೆವಿಕೆ) ಗಳಿಗೆ ಭೇಟಿ ನೀಡಿ ರೈತರೊಂದಿಗೆ ಸಂವಾದ ನಡೆಸಲಿದ್ದಾರೆ ಮತ್ತು ಇಲಾಖೆಯ ವಿವಿಧ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸಲಿದ್ದಾರೆ. ದೇಶದಾದ್ಯಂತ ಸುಮಾರು 2.5 ಕೋಟಿ ರೈತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅವರು ಹೇಳಿದರು. 732 ಕೃಷಿ ವಿಜ್ಞಾನ ಕೇಂದ್ರಗಳು, 1.0 ಲಕ್ಷಕ್ಕೂ ಹೆಚ್ಚು ಪ್ರಾಥಮಿಕ ಕೃಷಿ ಸಹಕಾರ ಸಂಘಗಳು ಮತ್ತು 5.0 ಲಕ್ಷ ಸಾಮಾನ್ಯ ಸೇವಾ ಕೇಂದ್ರಗಳು (ಸಿ ಎಸ್ ಸಿ) ದೇಶಾದ್ಯಂತ ರೈತರಲ್ಲಿ ಜಾಗೃತಿ ಮೂಡಿಸಲು ಕಾರ್ಯಕ್ರಮದಲ್ಲಿ ಭಾಗವಹಿಸಲಿವೆ ಎಂದು ಸಚಿವರು ತಿಳಿಸಿದರು.

ಮೂರು ಕೋಟಿ ಮಹಿಳೆಯರನ್ನು ಲಖಪತಿ ದೀದಿಗಳನ್ನಾಗಿ ಮಾಡಲು ಪ್ರಧಾನಮಂತ್ರಿ ಸಂಕಲ್ಪ ಮಾಡಿದ್ದಾರೆ, ಅದರಲ್ಲಿ ಸುಮಾರು ಒಂದು ಕೋಟಿ ಲಖಪತಿ ದೀದಿಗಳನ್ನು ಈಗಾಗಲೇ ಮಾಡಲಾಗಿದೆ, ಇನ್ನೂ 2 ಕೋಟಿ ಮಹಿಳೆಯರನ್ನು ಲಖಪತಿ ದೀದಿಗಳನ್ನಾಗಿ ಮಾಡಬೇಕಾಗಿದೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವರು ಹೇಳಿದರು. ಕೃಷಿ ಸಖಿ ಅದರ ಒಂದು ಆಯಾಮವಾಗಿದೆ ಎಂದ ಶ್ರೀ ಚೌಹಾಣ್, ರೈತರಿಗೆ ಸಹಾಯ ಮಾಡಲು, ಅನೇಕ ಸಹೋದರಿಯರಿಗೆ ತರಬೇತಿ ನೀಡಲಾಗಿದ್ದು, ಅವರು ಕೃಷಿಯಲ್ಲಿ ವಿವಿಧ ಕೆಲಸಗಳ ಮೂಲಕ ರೈತರಿಗೆ ಬೆಂಬಲ ನೀಡಬಹುದು ಮತ್ತು ವಾರ್ಷಿಕವಾಗಿ ಸುಮಾರು 60-80 ಸಾವಿರ ರೂಪಾಯಿಗಳ ಹೆಚ್ಚುವರಿ ಆದಾಯವನ್ನು ಗಳಿಸಬಹುದು ಎಂದರು. ಪ್ರಧಾನಮಂತ್ರಿ ಕಿಸಾನ್ ಕಂತು ಬಿಡುಗಡೆ ಕಾರ್ಯಕ್ರಮದ ಜೊತೆಗೆ 30,000 ಕ್ಕೂ ಹೆಚ್ಚು ಸ್ವ-ಸಹಾಯ ಗುಂಪುಗಳಿಗೆ (ಎಸ್ ಎಚ್ ಜಿ) ಕೃಷಿ ಸಖಿ ಪ್ರಮಾಣಪತ್ರವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ನೀಡಲಿದ್ದಾರೆ ಮತ್ತು ಕಾರ್ಯಕ್ರಮದಲ್ಲಿ ಗೌರವಾನ್ವಿತ ಪ್ರಧಾನಿಯವರು ಸಾಂಕೇತಿಕವಾಗಿ 5 ಜನರಿಗೆ ಕೃಷಿ ಸಖಿ ಪ್ರಮಾಣಪತ್ರಗಳನ್ನು ವಿತರಿಸಲಿದ್ದಾರೆ ಎಂದು ಕೇಂದ್ರ ಸಚಿವರು ಹೇಳಿದರು. ಕೃಷಿ ಸಖಿ ಕಾರ್ಯಕ್ರಮವನ್ನು ಹಂತ-1 ರಲ್ಲಿ 12 ರಾಜ್ಯಗಳಲ್ಲಿ - ಗುಜರಾತ್, ತಮಿಳು ನಾಡು, ಉತ್ತರ ಪ್ರದೇಶ, ಮಧ್ಯಪ್ರದೇಶ, ಛತ್ತೀಸಗಢ, ಕರ್ನಾಟಕ, ಮಹಾರಾಷ್ಟ್ರ, ರಾಜಸ್ಥಾನ, ಒಡಿಶಾ, ಜಾರ್ಖಂಡ್, ಆಂಧ್ರ ಪ್ರದೇಶ ಮತ್ತು ಮೇಘಾಲಯ- ಆರಂಭಿಸಲಾಗಿದೆ. ಇಲ್ಲಿಯವರೆಗೆ, 70,000 ದಲ್ಲಿ 34,000 ಕ್ಕೂ ಹೆಚ್ಚು ಕೃಷಿ ಸಖಿಗಳನ್ನು ಅರೆ-ವಿಸ್ತರಣಾ ಕಾರ್ಯಕರ್ತರು ಎಂದು ಪ್ರಮಾಣೀಕರಿಸಲಾಗಿದೆ ಎಂದು ಅವರು ಹೇಳಿದರು.

ಕೃಷಿ ಸಖಿಯರನ್ನು ಕೃಷಿ ಅರೆ-ವಿಸ್ತರಣಾ ಕಾರ್ಯಕರ್ತರಾಗಿ ಆಯ್ಕೆ ಮಾಡಲಾಗುತ್ತದೆ, ಏಕೆಂದರೆ ಅವರು ವಿಶ್ವಾಸಾರ್ಹ ಸಮುದಾಯ ಸಂಪನ್ಮೂಲ ವ್ಯಕ್ತಿಗಳು ಮತ್ತು ಅನುಭವಿ ರೈತರಾಗಿದ್ದಾರೆ. ಕೃಷಿ ಸಖಿಗಳು ಈಗಾಗಲೇ ವಿವಿಧ ಕೃಷಿ ಪದ್ಧತಿಗಳಲ್ಲಿ ವ್ಯಾಪಕವಾದ ತರಬೇತಿಯನ್ನು ಪಡೆದಿದ್ದಾರೆ, ಅವರು ಸಹ ರೈತರನ್ನು ಬೆಂಬಲಿಸಲು ಮತ್ತು ಪರಿಣಾಮಕಾರಿಯಾಗಿ ಮಾರ್ಗದರ್ಶನ ಮಾಡಲು ಸುಸಜ್ಜಿತರಾಗಿದ್ದಾರೆ ಎಂದು ಶ್ರೀ ಚೌಹಾಣ್ ಹೇಳಿದರು.

ಕೃಷಿಯಲ್ಲಿ ಮಹಿಳೆಯರ ಪ್ರಮುಖ ಪಾತ್ರವನ್ನು ಗಮನದಲ್ಲಿಟ್ಟುಕೊಂಡು, ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಸಚಿವಾಲಯವು ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ಸಚಿವರು ಹೇಳಿದರು. ಪಿಎಂ-ಕಿಸಾನ್ ಅಡಿಯಲ್ಲಿ, ಪ್ರತಿ ನಾಲ್ಕು ತಿಂಗಳಿಗೊಮ್ಮೆ ಮೂರು ಸಮಾನ ಕಂತುಗಳಲ್ಲಿ ವರ್ಷಕ್ಕೆ ರೂ 6,000/- ಆರ್ಥಿಕ ನೆರವವನ್ನು ನೇರ ಲಾಭ ವರ್ಗಾವಣೆ (ಡಿಬಿಟಿ) ಮೂಲಕ ದೇಶಾದ್ಯಂತ ರೈತರ ಕುಟುಂಬಗಳ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗುತ್ತದೆ ಎಂದು ಅವರು ಹೇಳಿದರು. ಮತ್ತೊಂದೆಡೆ, ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಅಡಿಯಲ್ಲಿ, 4 ಕೋಟಿಗೂ ಹೆಚ್ಚು ರೈತರಿಗೆ ಆರ್ಥಿಕ ಭದ್ರತೆಯನ್ನು ಖಾತರಿಪಡಿಸಲಾಗಿದೆ. ಜಾಗತಿಕ ಬೆಲೆ ಏರಿಕೆಯ ನಡುವೆಯೂ 11 ಸಾವಿರ ಕೋಟಿ ರೂ.ಗಳ ಸಬ್ಸಿಡಿ ನೀಡುವ ಮೂಲಕ ರೈತರಿಗೆ ಅಗ್ಗದ ದರದಲ್ಲಿ ರಸಗೊಬ್ಬರ ನೀಡುವ ಕಾರ್ಯ ಮುಂದುವರಿದಿದೆ ಎಂದು ಶ್ರೀ ಚೌಹಾಣ್ ಸಂತಸ ವ್ಯಕ್ತಪಡಿಸಿದರು.

ಈ ಕಾರ್ಯಕ್ರಮವನ್ನು ದೂರದರ್ಶನ, ಡಿಡಿ ಕಿಸಾನ್, My Gov, ಡೆವಲಪ್ಮೆಂಟ್ ಬ್ಲಾಕ್ ಆಫೀಸ್ನಿಂದ ಗ್ರಾಮ ಪಂಚಾಯಿತಿಗಳು, ಯೂಟ್ಯೂಬ್, ಫೇಸ್ಬುಕ್, ವಿವಿಧ ಕೃಷಿ ವಿಜ್ಞಾನ ಕೇಂದ್ರ ಮತ್ತು ದೇಶಾದ್ಯಂತದ ಐದು ಲಕ್ಷಕ್ಕೂ ಹೆಚ್ಚು ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ನೇರ ಪ್ರಸಾರ ಮಾಡಲಾಗುವುದು ಎಂದು ಸಚಿವರು ತಿಳಿಸಿದರು. ರೈತರು ಯಾವುದೇ ಮಾಧ್ಯಮದ ಮೂಲಕ ನೇರವಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮ ಹಾಗೂ ಪ್ರಧಾನಮಂತ್ರಿಯವರೊಂದಿಗೆ ಸಂಪರ್ಕ ಸಾಧಿಸುವಂತೆ ಸಚಿವರು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ, ಕೃಷಿ ಮತ್ತು ರೈತ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಶ್ರೀ ಮನೋಜ್ ಅಹುಜಾ ಮತ್ತು ಡಿ ಎ ಆರ್ ಇ ಕಾರ್ಯದರ್ಶಿ ಶ್ರೀ ಹಿಮಾಂಶು ಪಾಠಕ್ ಉಪಸ್ಥಿತರಿದ್ದರು.

*****



(Release ID: 2025545) Visitor Counter : 97